ಕನಸಿಗೆ ರಜೆ

ಕುಳಿರ್ಗಾಳಿ ಕಿಟಕಿ ತೂರಿ ಬರದಂತೆ ಭದ್ರ ಅಗುಳಿ
ಯಿಕ್ಕಿ ಭಾನುವಾರಕ್ಕೆ ಚಾಚಿ ಕಾಲ ಹರಿದ ನಿದ್ರೆ
ಏಳುವಾಗ ಏಳು ಯಾವಾಗಲೋ ದಾಟಿ ದಿನದ ಕಾಲು
ಭಾಗ ತೂಬು ತೆರೆದ ಅಣೆ ಬೆಚ್ಚಗಿನ ಕನಸು ಉರಿದು

ಮೈಮುರಿದು ಕಂಡರೆ ಅಡುಗೆ ಮನೆ ಮೌನ, ಎಂಎಸ್‌ಹಾಡದ
ಅಲೆಕ್ಸಾ, ತದುಕಿಸಿಕೊಂಡಂತೆ ಟಿವಿ, ಹೊರಗೆ ಅಂಗಾತದ
ದಿನಪತ್ರಿಕೆ ಜಾಹೀರಾತು ಮೈಪೂರಾ ತುಂಬಿ ಕಾರು ಧೂಳು
ಗೇಟ ಮೂಲೆ ಹೆಗ್ಗಣದ ಹಿಕ್ಕೆ, ಕೆಲಸದಾಕೆ ರಜೆ ಹೆಂಡತಿ ರಗ್ಗು ಹೊದ್ದು
ಸಿಂಕಿನ ತುಂಬಾ ಪಾತ್ರೆತಾಪತ್ರಯ, ಕ್ಷಿಪಣಿ ಬಿದ್ದ ನೆಲ

ಯಾವ ಹೊಟೇಲಿಗೆ ದೌಡಾಯಿಸಿದರೆ ಏನು
ಸಿಕ್ಕೀತೆಂದು ರಾಮಾನುಜನ್‌ಮೀರಿ ಲೆಕ್ಕಾಚಾರ
ದುಂಬಾಲು ಬೀಳುತ್ತ ಮಕ್ಕಳು ಪಿಜ್ಜಾಬರ್ಗರಿಗೆ
ಎಲ್ಲವಕ್ಕೂ ಹಸಿವಿನಾಚೆಗೆ ಏನೋ ಬೇಕಿಲ್ಲದ್ದೆ
ಬೇಕಿದೆ ಮಸಾಲೆ ಮತ್ತೆಲ್ಲೋ ತಿರುಪತಿ ಸವಿ
ವಾಟ್ಸ್ಯಾಪಲ್ಲಿ ನೋಡಿದ್ದು ನೆನಪಾಗದೆ ಕೈಕೈ ಹಿಸುಕಿ

ಬಾಲ್ಯ ಕಳೆದ ಹಳ್ಳಿ ಧುತ್ತನೆ ಢೀಕೊಟ್ಟಂತೆ ಬಂದು
ಅಲ್ಲಿ ಅಪ್ಪನ ತಮ್ಮ ಗಡದ್ದು ಗದ್ದೆಯದೇ ಬೆಳೆ ಬೇಯಿಸಿ
ನಿರೋಗಿ ಯೋಗಿಯಾಗಿ ಊಹೆಗೆ ಹೊಟ್ಟೆಯೂದಿ ಈರ್ಷೆಮೊಟ್ಟೆ

ಇನ್ನಾದರೂ ಆಗಾಗ ಹೋಗಿ ಭವಿಸಬೇಕು ಚಾವಡಿಯ ಗಾಳಿ
ದಪ್ಪ ತುಪ್ಪದ ದೋಸೆ, ಸುಟ್ಟಬದನೆ ಗೊಜ್ಜು, ಕೊಟ್ಟಿಗೆಯ ದನ
ಹಾಲು ಕಾಫಿ ರುಚಿ, ಹಲಸ ಹಪ್ಪಳ, ಗಿಡದ ಹಸಿಮೆಣಸು
ಇಷ್ಟೂ ದಿನ ವೃಥಾ ಕಳೆದು ಮತ್ತೆ ತಪ್ಪಾಗದು ಮುಂದೆ ರಜೆಗೆ
ಅಲ್ಲೇ ಬಿಡಾರ; ದಾಯಾದಿಗಳಿಗಷ್ಟೇ ಸುಖ ಸೀಮಿತವಲ್ಲ!

ಮೊಬೈಲು ಕರೆ; ಅರೆ! ಚಿಕ್ಕಪ್ಪನೇ, ʼಇದೋ ಬರುತ್ತಿದ್ದೇನೆ
ನಾಲಿಗೆ ಸತ್ತು ಸಪ್ಪೆ, ಹೋಗೋಣ ಹೊಟೇಲಿಗೆʼ ಅಪ್ಪಣೆ!!
ಮನೆ ಮರ್ಯಾದೆ ಏಳಿ ಎದ್ದೇಳಿ ಎಲ್ಲರೂ ಒಟ್ಟಿಗೇ ಉಘೇ ಉಘೇ

ಸೀಳಿ ಟ್ರಾಫಿಕ್ಕು ಕಾರು ಇಪ್ಪತ್ತು ಸಿಗ್ನಲ್ಲು ದಾಟಿ ಮಧ್ಯಾನ್ನ
ಮೀರಿ ಹೊಟೇಲಲ್ಲಿ ಉಳಿದದ್ದು ಉಂಡು ಹೊರಡುತ್ತ ಚಿಕ್ಕಪ್ಪ
ಹಳ್ಳಿಮನೆಮಾರು ಒಳ್ಳೆ ರೇಟು ಜರೂರು ಮಾರುವ ಮಾತು ಬಾಂಬು

ಎಲ್ಲರಿಗೂ ಇಷ್ಟಿಷ್ಟೇ ಸಿಕ್ಕೀತು ಒಪ್ಪಿಸಿ ಮುಖ ಮುಖ ಪರೀಕ್ಷೆ
ಆಗವನು ಧರ್ಮದುಗ್ರನಂತೆ ಕಂಡು ಬೂದಿಮುಚ್ಚಿದ ಸಿಡಿಮಿಡಿ
ಸಾಲಾಗಿ ರಜೆ ಕಣ್ಮಿಟುಕಿ ನಕ್ಕಿದ್ದು; ನೇವರಿಕೆ ಅರಿಯದ ಎದೆ ಬಿಕ್ಕಿದ್ದು

(ಚಿತ್ರ ಕೃಪೆ: ಕರ್ಮವೀರ ವಾರಪತ್ರಿಕೆ)