ಕಾಫಿಯ ಸುಳಿಯಲ್ಲಿ…

ಸುತ್ತೀ ಬಳಸಿ ದುನಿಯಾ ಗೋಲ್- ಇದು ಬಹಳ ಪ್ರಸ್ತುತ ಹಾಗೂ ಬಳಕೆಯಲ್ಲಿರುವ ನಾಣ್ಣುಡಿ – ನಾವು ಎಲ್ಲಿಂದಲೋ, ಎತ್ತಲೋ ಪಯಣ ಆರಂಭಿಸಿದರೂ ಎಲ್ಲಿಂದ ಪ್ರಾರಂಭಿಸಿರುತ್ತೇವೋ ಅಲ್ಲಿಗೇ ತಲುಪುತ್ತೇವೆ ಎಂಬ ಹಿನ್ನೆಲೆಯಲ್ಲಿ ಇದು ಬಳಸಲ್ಪಡುತ್ತದೆ.

ಅದು ಹಾಗೇ ಪಕ್ಕಕ್ಕೆ ಇರಲಿ-ಈಗ ನಾನು ಇಲ್ಲಿ ಇದರ ಬಳಕೆ ಮಾಡಲಿಚ್ಛಿಸಿದ ಪ್ರಸ್ತುತತೆ ಏನೆಂಬ ಕುತೂಹಲ ಬಂದಿರಬಹುದಲ್ಲವೇ?

ನನ್ನ ಮತ್ತು ಕಾಫಿ ಸೇವನೆಯ ನಂಟು – ಅವಿನಾಭಾವ ಸಂಬಂಧ ಇರುವುದನ್ನು ಪ್ರತ್ಯೇಕ ಹೇಳಬೇಕಿಲ್ಲ. ವಿಧ-ವಿಧವಾದ ಕಾಫಿ ಸವಿಯುವ ಆನಂದವನ್ನು ಗಟ್ಟಿ ಮನಸ್ಸಿಂದ ಬಿಡಬೇಕಾದ ಅನಿವಾರ್ಯತೆ ಬಂದು 3 ತಿಂಗಳಿಗೂ ಜಾಸ್ತಿಯಾಯಿತು.  ನನಗೆ ಆರೋಗ್ಯನಿರ್ವಹಣೆ ದೃಷ್ಠಿಯಿಂದ ನನ್ನ ಗುಂಪಿನ ನಿರ್ವಾಹಕರು ಹಾಕಿರುವ ವಿಧಿ-ನಿಷೇಧಗಳಲ್ಲಿ ಮೊದಲನೆಯದು ಹಾಗೂ ಅತ್ಯಂತ ಪ್ರಮುಖವಾದುದರಲ್ಲಿ “ಕಾಫಿ, ಚಹಾ, ಹಾಲು, ಹಾಲಿನ ಉತ್ಪನ್ನಗಳನ್ನು ( ಮಿತವಾದ ಪ್ರಮಾಣದಲ್ಲಿ ತುಪ್ಪ ಹಾಗೂ ಪನ್ನೀರ್ ಗಳನ್ನು ಹೊರತುಪಡಿಸಿ) ಮುಟ್ಟುವಂತಿಲ್ಲ”.   ಎಷ್ಟು ದಿನ ಎಂಬ ನನ್ನ ಕುತೂಹಲವೋ/ ಬುದ್ದಿವಂತಿಕೆಯ ಪ್ರಶ್ನೆಗೆ ಗುಂಪಿನ ಪ್ರಮುಖರಿಂದ ದೊರೆತ ಖಡಕ್ ಉತ್ತರದ ಗಡುಸಿನಿಂದ  ನಾನಿನ್ನೂ ಸುಧಾರಿಸಿಲ್ಲ- ಅವರ ಉತ್ತರ ಏನಿದ್ದಿರಬಹುದೆಂದು ಊಹಿಸಬಲ್ಲಿರಾ?

ನೆನೆಸಿಕೊಳ್ಳಲು ನನಗೀಗಲೂ ಸುತರಾಂ ಇಷ್ಟವಿಲ್ಲ.

“ನೀವೆಷ್ಟು ದಿನ ಬದುಕಲಿಚ್ಛಿಸುತ್ತೀರೋ-ಅಲ್ಲಿಯತನಕ!”.

ಅವರ ಈ ಉತ್ತರವನ್ನು ಜೀರ್ಣಿಸಿಕೊಳ್ಳಲಾಗದ ನನ್ನ ಅಸಹಾಯಕತೆಯನ್ನು ಕಂಡೋ ಅಥವಾ ನನ್ನ ಮೇಲೆ ಮರುಕದಿಂದಲೋ ಅಥವಾ ಇನ್ಯಾವುದೋ ಅಗೋಚರ ಶಕ್ತಿಯ ಪರಿಣಾಮವೋ ಒಂದು ವಿನಾಯಿತಿ ಸಿಕ್ಕೇಬಿಡ್ತು ಈ ನಿಯಮದ ಉಲ್ಲಂಘನೆಗೆ – ಅದೂ ಆಗಲೋ ಈಗಲೋ ವಿಶೇಷ ಸಂದರ್ಭಗಳಲ್ಲಿ ಅಂದರೆ ಯಾರೋ ನೆಂಟರಿಷ್ಟರ ಮನೆಗೆ ಹೋದಾಗಲೋ,  ಅವರೇ ನಮ್ಮ ಮನೆಗೆ ಬಂದಾಗಲೋ ಅಥವಾ ಯಾವುದೇ ಗಣ್ಯಮಾನ್ಯರ ಭೇಟಿಯ ಸಂದರ್ಭದಲ್ಲೋ ಕಾಫಿ ಚಹಾ ಸ್ವೀಕರಿಸಬಹುದೆಂದು – ಇಷ್ಟು ಸಾಕಾಯಿತು ನನ್ನ ವ್ರತಭಂಗಕ್ಕೆ ಮತ್ತು ಕಾಫಿ-ಚಹಾ ಕುಡಿದು ಅದುಮಿಟ್ಟುಕೊಂಡಿರುವ ಚಟ ತೀರಿಸಿಕೊಳ್ಳಲು – ಹಾಗೆಂದ ಮಾತ್ರಕ್ಕೆ ನಾನೇನೂ ಆ ಚಟಕ್ಕೆ ಮತ್ತೆ ಅಂಟಿಕೊಂಡುಬಿಟ್ಟೆನೆಂದೇನೂ ತೀರ್ಮಾನಿಸಲಾಗದು.

ಈ ನಿಯಮ ಮನೆಯಲ್ಲಿ ಜಾರಿಗೆ ಬಂದಾಗಿನಿಂದಲೂ ಸ್ವತ: ಕಾಫಿ ಪ್ರಿಯನಾಗಿದ್ದ ನನಗಿಂತ ಜಾಸ್ತಿ ದು:ಖ ಆಗಿದ್ದು ನನ್ನ ಸಹಧರ್ಮಿಣಿ ರಾಜೇಶ್ವರಿಗೆ ಎಂದರೆ ಉಳಿದವರಿಗೆ ಅಚ್ಚರಿ ಆಗಬಹುದು -ಕಾರಣ ಹೊರಗಿನ ಒತ್ತಡದಿಂದಲೋ, ಕೊರೆಯುವ ಛಳಿ ಇದ್ದಾಗಲೋ,  ಗಹನವಾದ  ಯೋಚನೆ ಬಂದಾಗಲೋ – ನನ್ನ ಮನದ ಇಂಗಿತವನ್ನರಿತು ಬಿಸಿ ಬಿಸಿ ಕಾಫಿ ತಯಾರಿಸಿ ಕೈಗಿಡುತ್ತಿದ್ದ ಕೈಗಳ ಹಿದಿನ ಹೃದಯದ ಮಮತೆ, ಪ್ರೀತಿ ಎಂದಿಗೂ ಮರೆಯುವಂತಿಲ್ಲ.  ಅದೇ ಪರಂಪರೆ ಮುಂದುವರೆದು ಅಂತಹ ಗಹನವಾದ ಪರಿಸ್ಥಿತಿ ಬಂದಾಗ ಸಹಜತೆಯಿಂದ ಹೊರಬರುತ್ತಿದ್ದ ಮಡದಿಯ ಧ್ವನಿ – ʼಒಂದ್ ಲೋಟ ಕಾಫಿ ಕೊಡಲೇ?ʼ ಎಂಬ ಪ್ರಶ್ನೆಗೆ ಮೈಮೇಲೆ ಚೇಳುಬಿದ್ದ ಧ್ವನಿಯಿಂದ ನನ್ನ ಗದರಿಕೆಗೆ “ ನಿಂಗೊತ್ತಿಲ್ವಾ? ನಾನು ಕಾಫಿ ಬಿಟ್ಟಿರೋದು”  

ಹೆದರಿ ಸುಮ್ಮನಾಗಬೇಕಾದ ಅವಳ ಅಸಹಾಯಕತೆಯನ್ನೂ, ನನ್ನ ಕೋಪವನ್ನೂ ನಾನು ಮರೆತಿಲ್ಲ.

ಪ್ರಾಯಶ: ಸಂಸ್ಕಾರ ಕಾದಂಬರಿಯಲ್ಲಿ ಬರುವ ನಾರಾಯಣಪ್ಪನ ಪಾತ್ರದ ಬಗ್ಗೆ ಹೇಳುವುದುಚಿತ-“ ನಾರಾಯಣಪ್ಪ ಬ್ರಾಹ್ಮಣಿಕೆ ಬಿಟ್ಟರೂ, ಬ್ರಾಹ್ಮಣಿಕೆ ನಾರಾಯಣಪ್ಪನನ್ನು ಬಿಟ್ಟಿಲ್ಲ” ಎಂಬಂತೆ ಒಂದಲ್ಲ ಇನ್ನೊಂದು ಪರಿಸ್ಥಿತಿ ನನ್ನನ್ನು ಕಾಫಿ ಗೀಳಿಗೆಳೆಯಲ್ಪಡುತ್ತದೆ.

ನನ್ನ ಹಿಂದಿನ ಬರಹದಲ್ಲೊಮ್ಮೆ ಕಾಫಿ ಪ್ರಿಯರ ಉಲ್ಲೇಖನೀಯ ಪ್ರಸಂಗಗಳನ್ನು ನೆನಪಿಸಿದ್ದನ್ನು ( ಪುನರಾವರ್ತನೆಯಾದರೂ) ಮತ್ತೊಮ್ಮೆ ನೆನಪಿಸುತ್ತಿದ್ದೇನೆ.

ಪ್ರಸಂಗ 1.

ಕೋಲ್ಕತ್ತಾದ ಕಾಲೇಜ್ ರೋಡ್ ನಲ್ಲಿರುವ ( ಸ್ವಾತಂತ್ರ್ಯಪೂರ್ವದಿಂದಲೂ ಈಗಲೂ ಇರುವ ) ಇಂಡಿಯಾ ಕಾಫಿ ಹೌಸ್ ನಲ್ಲಿ ಖ್ಯಾತ ಕವಿಗಳೂ, ಬುದ್ಧಿಜೀವಿಗಳೂ ಆಗಿದ್ದ ಸುನಿಲ್ ಕುಮಾರ್ ಗಂಗೋಪಾಧ್ಯಾಯರು ತಾವು ಕುಡಿದ ಕಾಫಿಗೆ ಹಣ ಇಲ್ಲದೇ ತಮ್ಮ ಛತ್ರಿಯನ್ನು ಆ ದಿನದ ಮಟ್ಟಿಗೆ ಹೋಟೆಲ್ ಯಜಮಾನರಿಗೆ ಒತ್ತೆಯಾಗಿಟ್ಟು, ಮರುದಿನ ಹಣ ಕೊಟ್ಟು ಛತ್ರಿ ಬಿಡಿಸಿಕೊಂಡಿದ್ದೂ, ಹಾಗೆ ಛತ್ರಿಯನ್ನು ಒತ್ತೆ ಇಡಿಸಿಕೊಂಡಿದ್ದ ಇಂಡಿಯಾ ಕಾಫಿ ಹೌಸಿನ ತೀರ್ಮಾನವೂ ಇಂದಿಗೂ ಇತಿಹಾಸ.

ಪ್ರಸಂಗ 2.

ಜಗತ್ತಿನ ಅಂದಿನ ಕಾಲದ ಸಮರ್ಥ ಸೇನಾದಂಡನಾಯಕರೊಲ್ಲಬ್ರಾಗಿದ್ಗ ನೆಪೋಲಿಯನ್ ಬೋನಪಾರ್ಟ್ ತನ್ನ ಕೆಳಗಿನ ಅಧಿಕಾರಿಗೆ ಕಾಫಿ ಕೊಡಲು ಆಜ್ಞಾಪಿಸಿದಾಗ, ಕೆಳಗಿನ ಅಧಿಕಾರಿ ಕೊಟ್ಟ ಉತ್ತರ “ coffee is not a healthy habit” ಎಂಬ ಉತ್ತರಕ್ಕೆ ರೋಸಿಹೋದ ನೆಪೋಲಿಯನ್ ಅಬ್ಬರಿಸಿದ ಗಡಸುತನಕ್ಕೆ- “ I would rather suffer coffee than being senseless “ .  ಬೆದರಿ ಮರುಮಾತಿಲ್ದೇ ಕಾಫಿ ತಂದಿಟ್ಟ ಪ್ರಸಂಗ.

ಇವೆರಡು ಉದಾಹರಣೆಗಳು ಸಾಲದೇ ಕಾಫಿಪ್ರಿಯರು ತಮ್ಮ ಕಾಫಿ ಚಟ ಸಮರ್ಥಿಸಿಕೊಳ್ಳಲು?

ಇಷ್ಟು ಹೇಳಿದ ಮೇಲೆ ಈಗ ನಿಮಗೆಲ್ಲಾ ಒಂದು ಅಂದಾಜಾಗಿರಲೇಬೇಕು ನಾನು ಏನನ್ನು ಹೇಳಹೊರಟಿದ್ದೇನೆಂಬುದು.   ಇಂದು ನನ್ನ ರಾಯಪುರ ಪ್ರವಾಸದಲ್ಲಿ ನಮ್ಮ ಸ್ನೇಹಿತರು ಯೋಗಾಯೋಗದಿಂದ ಊಟಕ್ಕೆ ನಮ್ಮನ್ನು ರಾಯಪುರದ ಇಂಡಿಯಾ ಕಾಫಿ ಹೌಸಿಗೆ ಕರೆದೊಯ್ದು ಊಟ ಕೊಡಿಸಿದ ನಂತರ ದೇಶೀಯ ಪರಿಶುದ್ದ ( ಚಿಕೋರಿ ರಹಿತ) “ ಫಿಲ್ಟರ್ ಕಾಫಿ” ಆರ್ಡರ್ ಮಾಡಿದಾಗ ನನ್ನ ಇಂದಿನ ವ್ರತಭಂಗ ಮಾಡಲೇಬೇಕಾದ ಅಸಹಾಯಕತೆಗೆ ನನ್ನನ್ನು ಎಳೆದೊಯ್ದಿದ್ದೂ ಸಹ ಸತ್ಯ.  ಹಾಗೆ ಚಪ್ಪರಿಸಿ ಕಾಫಿ ಗುಟರಿಸುವಾಗ ಮಮತೆಯಿಂದ ಕೇಳಿದ ಮಡದಿಯ ಮನವಿಗೆ ತಿರಸ್ಕರಿಸಿದ್ದಕ್ಕಾಗಿ ಮನದಲ್ಲಿ ಅಪರಾಧಿ ಭಾವನೆ ಬಂದದ್ದೂ ಸಹ ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳುತ್ತಾ ಇಂದಿನ ಕಾಫಿ ಪುರಾಣಕ್ಕೊಣದು ವಿರಾಮ ಹೇಳುತ್ತಿದ್ದೇನೆ.

“ಅವಿವೇಕಿ”

ರಾಯಪುರ

15/12/2022

(ಮಿತ್ರ ಎಚ್‌ ವಿ ಚಂದ್ರಶೇಖರ್‌ ಅವರ ಲಹರಿ)

ಮೋಡಿಗಾರ

ನೋಡಿವನಾಟವ
ಮೋಡಿ ಮಾಡೊ ನೋಟವ
ಪುಟಿಪುಟಿದಾಡೊ ಚೆಂದವ

ಬಾಯ ತುಂಬಾ ನಗುವನು
ಇಟ್ಟು ಬೆಟ್ಟು ಕಚ್ಚುವ
ಪಿಳಿಪಿಳಿ ಕಣ್ಣ ಪುಟಾಣಿ ಪುಟ್ಟು
ಸಿಟ್ಟು ಮಾಡುವ
ಮರುಕ್ಷಣ ಕಟ್ಟು ಮಾಡುವ

ಹತ್ತಿರ ಹೋದರೆ ಎತ್ತಿಕೋ ಎನ್ನುವ
ಮುಟ್ಟಹೋದರೆ ಜಪ್ಪಿಸಿ ಹೊರಳುವ
ಬಿಟ್ಟರೆ ರಂಪ ಮಾಡುವ
ಬಿಡದಿರೆ ಸಂಪು ಹೂಡುವ

ಒಗಟಿನ ಮಗುವಿಗೆ ಸೊಗಸಿನ ಮೂಗು
ಮುಟ್ಟುವ ಹಾಗಿಲ್ಲ ಕೆನ್ನೆ ಹಿಂಡುವ ಹಾಗಿಲ್ಲ
ಪಟಪಟ ಕೈಗಳ ತಟತಟ ಕಾಲ್ಗಳ
ಕುಣಿಸುತ ದೂಡುವ
ಕಣ್ಣಲೆ ಕಲ್ಲ ಕರಗಿಸುವ

ಕಪಟವರಿಯದವ ಅನಿಸಿದ್ದೆಲ್ಲ
ಮಾಡೇಮಾಡುವ
ಉಪಟಳವಿಲ್ಲದ ತೊಟ್ಟಿಲ ಕಂದ
ಮೋಡಿಗಾರ ಚೆಲುವ
ಮೋಹಕೆ ಮರುಹುಟ್ಟನಿತ್ತು ಮೆರೆವ

(Grandson with Krupa & Suryanshu)