ಮಗು ಮಲಗದು

ಮಗು ಮಲಗದೇ…
ಮನಸು ಬಯಸಿದೆ
ಹಾಡಲೇ ಜೋಗುಳ

ಮನಸನಾವರಿಸಿ
ಮನೆತುಂಬ ನಗೆಹರಿಸಿ
ಮಮತೆಯಲಿ ಮಿಂದು
ಮಿದುವನ್ನ ಉಂಡು
ದಣಿದ ಕಂಗಳ ಮಗು ಮಲಗದೇ
ಮನಸು ಬಯಸಿದೆ
ಹಾಡಲೇ ಜೋಗುಳ

ತಾರೆ ಉದಯಿಸಿ
ಆಗಸದಲಿ ಚಂದ್ರನಾವರಿಸಿ
ಶೀತಲದ ಮರುತ
ಜೋಲಿ ತಾಕುವ ಮೊದಲೆ
ನಗುಮುಗಿಸದ ಮಗು ಮಲಗದೇ
ಮನಸು ಬಯಸಿದೆ
ಹಾಡಲೇ ಜೋಗುಳ

ಸಂಕೋಲೆ ಮರೆಸಿ
ಜೀವ ಪಾಲಿಸುವ ಸುಖ
ದಿನವೆಲ್ಲ ಸುರಿಸಿ ಆಕಳಿಸಿ
ಬೆಳಗಿಗೆ ಹೊರಳಿ ಹೊಸತ
ಅರಳಿಸಬೇಕಿದೆ, ಮಗು ಮಲಗದೇ
ಮನಸು ಬಯಸಿದೆ
ಹಾಡಲೇ ಜೋಗುಳ

ಹವಳ ಹೊಳೆವಂತೆ
ಮುಂಜಾನೆ ನಗೆ ಬಿರಿಸಬೇಕಿದೆ
ಹೊಯಿಗೆ ದಾರಿಗೆ ಸಿಹಿ
ತೊರೆ ಹರಿಸಬೇಕಿದೆ
ನಾಳೆ ಒಪ್ಪದ ಮಗು ಮಲಗದೇ
ಮನಸು ಬಯಸಿದೆ
ಹಾಡಲೇ ಜೋಗುಳ

  • ಅನಂತ ರಮೇಶ್

(Pic : Unsplash & Google)

ನೆನಪು

ಅವರು ಕೊಂಡೊಯ್ದುಬಿಟ್ಟರು
ಅವಳ ಪ್ರೀತಿಯ ಅಪ್ಪನನ್ನು
ಮತ್ತು ಹಿಂತಿರುಗಿಸಿದರು
ರಾಷ್ಟ್ರಧ್ವಜವನ್ನು….

(ಅನಾಮಿಕ ಆಂಗ್ಲ ಅನುವಾದ)

ಕಿರು ಕತೆ – ಗೆರೆ

ಆಕೆ ಪ್ರಸಿದ್ಧ ತಾರೆ, ಶಿಸ್ತಿನ ತಾಯಿ.
ಪುಟ್ಟ ಮಗ ಆರು ವರ್ಷ.
ನೋಟ್‌ ಪುಸ್ತಕದ ಮೇಲೆ ಅವನೆಂದೂ ಎಳೆಯುತ್ತಿರಲಿಲ್ಲ ನೇರ ಗೆರೆ
ತಾಯಿಗೆ ಬೇಸರ, ಗದರುತ್ತಿದ್ದಳು,
ʼನೇರ ಗೆರೆ ಎಳೆಯುವುದನ್ನು ಬೇಗ ಕಲಿ.ʼ

ಇಂದು ಪುಟ್ಟ ಮಗ ಆಸ್ಪತ್ರೆ ಬೆಡ್ಡಿನ ವೆಂಟಿಲೇಟರಿನಲ್ಲಿ.
ಕ್ಷೀಣ ಉಸಿರಾಟ, ತಾಯಿಯ ಪರಿಪರಿ ಪ್ರಾರ್ಥನೆ,
ʼಇಸಿಜಿಯಲ್ಲಿ ನೇರ ಗೆರೆ ಮಗನ ಹೃದಯ ಬರೆಯದಿರಲಿ ದೇವರೆ!ʼ

(ಅನಾಮಿಕ ಇಂಗ್ಲೀಷ್ ಬರಹವೊಂದರ ಭಾವಾನುವಾದ)

ಸ್ಪರ್ಧೆ

ಮಹಿಳಾಮಣಿಗಳು ಆಯೋಜಿಸಿದರು
ಆದರ್ಶದಂಪತಿ ಫೋಟೋ ಸ್ಪರ್ಧೆ

ಪತಿಪತ್ನಿಯರ ಸುಂದರ ಚಿತ್ರ
ಸ್ಪರ್ಧೆಗೆ ಬಂದವು ತೀರ್ಪಿಗೆ

ನನ್ನ ಹೆಂಡತಿಯೂ ತೀರ್ಪುಗಾರ್ತಿ
ದಂಪತಿ ಫೋಟೋ ಸ್ಪರ್ಧೆಗೆ

ಗಂಡಹೆಂಡಿರ ನಗುಮುಖ ಫೋಟೋ
ತಿರಸ್ಕೃತವಾದವು ಸಾರಾಸಗಟೆ !

ಆಯ್ಕೆಯಾಯಿತು ಕೊನೆಗೂ ಚಿತ್ರ
ಕೊಟ್ಟರು ಮೊದಲ ಸ್ಥಾನದ ಕಿರೀಟ

“ಕೆಟ್ಟ ಚಿತ್ರ ಅದು, ತಪ್ಪಾಗಿದೆ ತೀರ್ಪು”
ಹೆಂಡತಿಗೆ ಹೇಳೆ ಹುಚ್ಚೇ ನನಗೆ !?

ಗೆದ್ದವರ ಫೋಟೋ ಹಾಕಿದ್ದೇನೆ
ನೋಡಲು ನಿಮಗೆ ಕುತೂಹಲವೆ?

ʼನಡುಗಿದ ಪತಿ ಗುಡುಗಿದ ಪತ್ನಿʼ
ಇದೇ ಮಹಿಳಾಸಂಘದ ಆಯ್ಕೆ!

(Pic from Google)

ಮೋದಿ ಹೇಳಲಿ

ನಲ್ಲೆಯ ತುಟಿ ಮುತ್ತಿನ ಆಸೆಯಲ್ಲಿ
ನಲ್ಲ ಕರೆದ ʼಸಿಕ್ಕೋಣ ಬಾ ಪಾರ್ಕಿನಲ್ಲಿʼ
ಬಂದಳವಳು ಮಾಸ್ಕ್‌ ಮುಖದಲ್ಲಿ
ತುಟಿದರ್ಶನವೇ ಖೋತಾ, ಮುತ್ತಿನ್ನೆಲ್ಲಿ!
ಕೋರಿದ ʼಮಾಸ್ಕ್ ತೆಗೆಯೆ ಮೋಹನಾಂಗಿʼ
ʼಮೋದಿ ಹೇಳೋವರೆಗೆ ತೆಗೆಯೋಲ್ಲಾರಿ!ʼ

(Pic from Google)

ಬೇಜಾರು ಬೇಡ

ಯಾತ್ರೆಯಿಲ್ಲ ಜಾತ್ರೆಯಿಲ್ಲ
ಮದುವೆಮುಂಜಿ ಮಾಡೋರಿಲ್ಲ
ಹೋಟೆಲ್ ಮಾಲ್‌ ತೆರೀಲಿಲ್ಲ
ಅಡ್ಡ ಬೀಳೋಕ್ ಗುಡಿಯಿಲ್ಲ
ಅನ್ನೋ ಬೇಜಾರ್ಗೆಲ್ಲ ಅಡ್ಡಾ ಇದ್ಯಲ್ಲ
ಅಡ್ಡಾದಿಡ್ಡಿ ಅಡ್ಡಾಡಕ್ಕೆ
ವೈನ್‌ ಶಾಪು ಲೈನಾಗೇ
ಬಾಗ್ಲು ಬಾಯಿ ವೈನಾಗೇ ತೆಕ್ಕೊಂಡಿದ್ಯಲ್ಲ!

(Pic:Google)

ಮರೆವಿನ ಮೆರವಣಿಗೆ

ಅಂತರ ಮರೆತರು ಆರೋಗ್ಯ ಸಚಿವರು
ಜನ ಜೈಕಾರಕೆ ಸೇಬಿನ ಹಾರಕೆ
ಜೆಸಿಬಿ ಹಾಕಿದ ಪುಷ್ಪವೃಷ್ಟಿಗೆ
ಉಸಿರಾಟದ ತೊಂದರೆಯಾಗಿ
ಕಿತ್ತೆಸೆದರಾ ಮುಖದಾ ಮಾಸ್ಕು!
ಬಿಟ್ಟರಾ ಬಾಗಿನ ಕೊಡುವಾ ರಿಸ್ಕು!
ಕೊಟ್ಟರಾ ಕೋವಿಡ್ಗೆ ಹ್ಯಾಂಡ್‌ಶೇಕ್‌ಉ?

(VijayKarnataka News Column)