ವಿಶ್ವ ಗೆಳೆತನ ದಿನ

ಹ್ಯಾಪಿ ಫ್ರೆಂಡ್ಶಿಪ್‌
ಹ್ಯಾಪಿ ಡೇ
ಇದೇ ಹವಾ ಎಲ್ಲಾ ಕಡೆ
ಹ್ಯಾಪ್ಮೋರೆ ಬಿಟ್ಟು
ಹಿಗ್ಗಲ್‌ ಒಂದಿಷ್ಟು
ಮಾತಾಡಿದ್ರಷ್ಟು
ಮನಸ್ಸು ನಿಬ್ಬಿಡೆ
ಅದಕ್ಕೇ ಸ್ನೇಹಿತ್ರನ್ನ
ನಾ ಎಂದೂ ಬಿಡೆ

(Image from Google)

ನೆನಪಿನ ದಿನ ೨೧.೦೭.೨೨

ಮೂರು ತಲೆಮಾರಿಗೆ
ಆಸ್ತಿ ಮಾಡಿ ಸುಖವುಂಡ
ಬಂಡು ಬೀದಿಗಿಳಿಯಿತು
ಗಳಿಸಿದ್ದು ಕೈ ತಪ್ಪೀತು
ಅದಕ್ಕೇ ಬಡಬಡಿಕೆ ಭಯ
ನಿರ್ಲಜ್ಜತೆಗೆ ಪ್ರಜ್ಞೆ ನಾಸ್ತಿ

ತಲೆಮಾರುಗಳಿಂದ
ಬಡತನದ ನೋವುಂಡ
ಕುಡಿಯೊಂದು ಸಾರಿತು
ಸತ್ಯ ನಡೆಯೇ ಒಳಿತು
ಗೌರವ ಜನರ ಅಭಯ
ಸಜ್ಜನತ್ವವೇ ಉಳಿವ ಆಸ್ತಿ

(Images from Vishwavani & Vijayakarnataka news papers)

ಪಕ್ಕಾ ಬೆಕ್ಕು

ಬೆಕ್ಕು ಬಹುಭಾಷಿ
ಬಹಳ ಮನೆಗಳ ಅತಿಥಿ
ನಮ್ಮಲ್ಲಿ ಹರಕು ಕನ್ನಡ
ಬಲ ಮನೆಯ ಬೆಂಗಾಲಿ
ಎಡದ ತಮಿಳು ಎದುರು ತೆಲುಗು
ಹಿಂದಿನ ಮನೆ ಹಿಂದಿ
ಮುಖ್ಯ ಮೇಲಿನ ಮನೆ
ಇಂಗ್ಲೀಷು ಕಲಿತು
ಎಲ್ಲರಿಗು ಉತ್ತರ ಆಯಾ
ಭಾಷೆಯಲ್ಲಿ “ಮಿಯಾಂವು”
ಬೆಕ್ಕು ಎಲ್ಲರ ಮನೆ ಹೊಕ್ಕು
ಗಳಿಸಿದೆ ಅವರ ವಿಶ್ವಾಸ ಗೆಳೆತನ
ಆಹಾ…ಪಕ್ಕಾ ಕನ್ನಡತನ!
ಈಗ ತಿರುಗುತ್ತಿದೆ ಹೊಟ್ಟೆ ಹೊತ್ತು
ಹೊರಿಸಿದೆ ತಲೆಬಿಸಿ ನಮಗೆ
ಎಲ್ಲಿ ಹೇಗೆ ಎಂದಿದರ ಬಾಣಂತನ!?

ʼಹೊಸ ಹಸಿರುಕ್ರಾಂತಿʼಯ ಕತ್ತುಹಿಸುಕುವ ಹುನ್ನಾರ

(ಚಿತ್ರ:ಉತ್ಥಾನ ಮಾಸ ಪತ್ರಿಕೆ)

ಮರೆಮಾಚಿದ ಸತ್ಯಗಳು

ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ನಡೆಯುವ ದ್ವಂದ್ವದಾಟಗಳಿಗೆ ಕೊನೆ ಮೊದಲಿಲ್ಲ. ಹಳೆಯದರಿಂದ ಪಾಠ ಕಲಿಯುವ ಪ್ರಬುದ್ಧತೆ ಕೆಲವೊಮ್ಮೆ ನಾವು ಬೆಳೆಸಿಕೊಳ್ಳುವುದಿಲ್ಲ. ಹಳೆಯ ಪದ್ಧತಿಯ ಬಗೆಗೆ ತಿರಸ್ಕಾರವಿದ್ದರೂ, ಹೊಸ ಬದಲಾವಣೆಗಳಿಗೂ ಸಿದ್ಧರಾಗುವುದೇ ಇಲ್ಲ. ಈ ತ್ರಿಶಂಕು ಮನಸ್ಥಿತಿಯಿಂದಾಗಿಯೇ 1991ರ ನಂತರ ಮೊದಲ ಬಾರಿಗೆ ಜಾರಿಗೆ ಬಂದ ರೈತಪರ ಕೃಷಿ ಕಾಯಿದೆಗೆ ವಿಘ್ನವೊಡ್ಡುವ ಶಕ್ತಿಗಳಿಗೆ ಹುರುಪು ಬಂದಿದೆ! ಮೊದ ಮೊದಲು ತೆರೆಮರೆಯಲ್ಲಿ ನಡೆದ ಈ ಪ್ರಯತ್ನಗಳು ಈಗ ಮುನ್ನಡೆಗೆ ಬಂದಿವೆ. ಹೊಸ ಹಸಿರು ಕ್ರಾಂತಿಯ ಆಸೆಯನ್ನು ಕೊಲ್ಲುವ ಶಕ್ತಿಗಳು ನಿರಂತರ ಕ್ರಿಯಾಶೀಲವಾಗಿದ್ದು ಅದರ ಗುರಿ ಆಡಳಿತದ ವಿರುದ್ಧ ಅನ್ನುವುದು ದಿನದಿಂದ ದಿನಕ್ಕೆ ನಿಚ್ಛಳವಾಗುತ್ತಿದೆ.

ನಮ್ಮಲ್ಲಿ ಒಂದು ಜನಜನಿತ ಗಾದೆ ಮಾತಿದೆ. “ಯಾರು ರಾಜ್ಯ ಆಳಿದ್ರೇನು, ಬಡವ ರಾಗಿ ಬೀಸೋದು ತಪ್ಪೀತೇನು?”. ಸ್ವಾತಂತ್ರ್ಯಾನಂತರದಲ್ಲಿ ಬರಿಯ ಬಡತನವನ್ನೇ ಅನುಭವಿಸುತ್ತಿರುವ ರೈತನಿಗೆ ಒಂದೇ ಅಭಿಪ್ರಾಯ, ಸರಕಾರ ತರುವ ಸುಧಾರಣೆಗಳು ಶ್ರೀಮಂತರನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಬಡವನನ್ನು ಇನ್ನಷ್ಟು ಆರ್ಥಿಕವಾಗಿ ಕುಸಿಯುವಂತೆ ಮಾಡುತ್ತದೆ ಎಂದು. ಈ ಹಿಂದಿನ ಆಡಳಿತಗಳಿಂದ ಈ ಅಭಿಪ್ರಾಯ ಜನರಲ್ಲಿ ಬೇರೂರಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ. ಇಂಥ ನಂಬಿಕೆಗಳು ಜನಸಾಮಾನ್ಯರಲ್ಲಿರುವುದರಿಂದಲೇ ವಿರೋಧಪಕ್ಷಗಳಿಗೆ ಹಾದಿ ತಪ್ಪಿಸುವ ಕೆಲಸ ಸುಲಭವಾಗಿರುವುದು. ಸುಳ್ಳುಗಳನ್ನು ಹರಡುವುದು, ಗಂಡಾಂತರಗಳ ಭಯ ಅಮಾಯಕರಲ್ಲಿ ಹುಟ್ಟಿಸುವುದು ಕುಟಿಲ ರಾಜಕೀಯ ನೀತಿಗಳು. ರಾಜಕೀಯ ಪಗಡೆಯಾಟ ಆಡುವವರಲ್ಲಿ ರೈತ ಪರ ಕಾಳಜಿಗಳು ಇರಲು ಸಾಧ್ಯವಾಗುವುದಾದರೂ ಹೇಗೆ?

ದೇಶದ ʼಕೃಷಿ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯಿದೆ 2020ʼ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅನುಮೋದನೆಗೊಂಡು, ಸೆಪ್ಟೆಂಬರ್‌2020 ರಾಷ್ಟ್ರಪತಿಗಳಿಂದ ಅಂಕಿತಗೊಂಡು ಜಾರಿಗೆಯಾಯ್ತು. ಇದರಲ್ಲಿ ಮೂರು ಭಾಗಗಳಿವೆ:

  1. ಕೃಷಿ ಉತ್ಪಾದನೆ ಮಾರುಕಟ್ಟೆ ವ್ಯಾಪಾರ ವಾಣಿಜ್ಯ (ಅಭಿವೃದ್ಧಿ ಮತ್ತು ಸೌಲಭ್ಯ)
  2. ಕೃಷಿ ಉತ್ಪಾದನೆ ಬೆಲೆ ಭರವಸೆ (ಸಬಲೀಕರಣ ಮತ್ತು ರಕ್ಷಣೆ)
  3. ಕೃಷಿ ಸೇವೆಗಳು ಮತ್ತು ಅಗತ್ಯ ಸರಕು ನೀತಿಗಳು (ತಿದ್ದುಪಡಿ) ಕಾನೂನು

ಪರಿಸರ ಪ್ರಜ್ಞೆಯ ಜೊತೆಗೆ ಕೊಡುಕೊಳ್ಳುವಿಕೆಯ ವ್ಯವಹಾರಗಳಲ್ಲಿ ರೈತರಿಗೆ ಪೂರ್ಣ ಸ್ವಾತಂತ್ರ್ಯ
ರಾಜ್ಯ ಮತ್ತು ಅಂತರಾಜ್ಯಗಳಲ್ಲಿ ರೈತನ ಮಾರುಕಟ್ಟೆಯ ವಿಸ್ತರಣೆ
ಅಗತ್ಯ ಬೆಳೆಗಳಾದ ಸಿರಿಧಾನ್ಯ, ದ್ವಿದಳ ಧಾನ್ಯ, ಎಣ್ಣೆ ಬೀಜಗಳು, ಈರುಳ್ಳಿ, ಆಲೂಗಡ್ಡೆಗಳನ್ನು ಅಗತ್ಯ ವಸ್ತುಗಳ ನಿಯಂತ್ರಣದಿಂದ ಹೊರಹೋಗುವುದು.
ಖಾಸಗಿ ಮತ್ತು ನೇರ ವಿದೇಶಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವುದು ಮತ್ತು ದಲ್ಲಾಳಿ ವ್ಯವಹಾರಗಳಿಂದ ಇದುವರೆಗೂ ಆಗುತ್ತಿದ್ದ ಶೋಷಣೆಯಿಂದ ಮುಕ್ತಗೊಳಿಸುವುದು.

ಈ ಕಾಯಿದೆ ಏಕಾಏಕಿ ತಂದು ಹೇರಿದ್ದಾರೆ ಅನ್ನುವ ವಾದವೂ ಸುಳ್ಳು. 2006ರಲ್ಲಿ ಪಿ.ಸಾಯಿನಾಥ್‌ ಸಮಿತಿ ಮಾಡಿದ ಶಿಫಾರಸುಗಳು/ಆವಿಷ್ಕಾರಗಳ ಸೂಚನೆಗಳು ಹೊಸ ಕಾಯಿದೆಯಲ್ಲಿ ಅನುಸರಿಸಲಾಗಿದೆ. (ದುರದೃಷ್ಟವೆಂದರೆ ಇತ್ತೀಚೆಗೆ ಪಿ.ಸಾಯಿನಾಥರೇ ಈ ಕಾಯಿದೆಯನ್ನು ವಿರೋಧಿಸಿ ಹೇಳಿಕೆ ಕೊಟ್ಟಿರುವುದು!)

ಚಳುವಳಿಗೆ ಕಾರಣಗಳು

ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇದುವರೆಗೆ ಅನೇಕ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ನೋಟು ಅಮಾನ್ಯೀಕರಣದಂಥ ನಿರ್ಧಾರಗಳೂ ಸಹ ದೇಶದ ಅಭಿವೃದ್ಧಿಗೆ, ಕಪ್ಪುಹಣದ ನಿಯಂತ್ರಣಕ್ಕೆ ಸಹಕಾರಿಯಾದದ್ದು ಜನಕ್ಕೆ ಮನವರಿಕೆಯಾಗಿದೆ. ಹಾಗೆಯೇ, ಕಾಶ್ಮೀರ ಸಮಸ್ಯೆ, ತ್ರಿವಳಿ ತಲಾಖ್‌, ರಾಮ ಜನ್ಮಭೂಮಿ ವಿವಾದಗಳು ಯಾವುದೇ ವಿರೋಧಗಳಿಲ್ಲದೆ ಬಗೆಹರಿದಿವೆ. ಸ್ವಾತಂತ್ರ್ಯಾನಂತರದಲ್ಲಿ ಕಬ್ಬಿಣದ ಕಡಲೆಯಂತಿದ್ದ ಸಮಸ್ಯೆಗಳು ಅಚ್ಚರಿಮೂಡಿಸುವ ರೀತಿಯಲ್ಲಿ ಬಗೆಹರಿದಿವೆ. ಹೀಗೆ ಸರ್ಕಾರ ಬಲಿಷ್ಠವಾಗುವುದನ್ನು ವಿರೋಧ ಪಕ್ಷಗಳಾಗಲೀ, ಎಡ ವಿಚಾರವಾದಿಗಳಿಗಾಗಲೀ ಸಹಿಸಲು ಸಾಧ್ಯವಾಗುವುದಾದರೂ ಹೇಗೆ? ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಅಬಾಧಿತ ಸಾಗುತ್ತಿರುವುದನ್ನೂ ಅವು ನೋಡಿ ಸುಮ್ಮನೆ ಕೂರಲಾದೀತೆ? ಇದಕ್ಕೆ ತಡೆಹಾಕುವ ಉಪಾಯಗಳನ್ನು ಅವು ಹುಡುಕುತ್ತಲೇ ಇವೆ. ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಲೇ ಇವೆ ಅನ್ನುವುದು ಗುಟ್ಟಲ್ಲ.

ದುರದೃಷ್ಟವೆಂದರೆ ರಾಜಕೀಯ ವಿರೋಧ ಪಕ್ಷಗಳಿಗೆ ಜನರ ಆದ್ಯತೆಗಳಿಗಿಂತ ತಮ್ಮ ಉಳಿವಿನ ಬಗೆಗೆ ಯೋಚಿಸುವುದೇ ಆಗಿದೆ. ಇದಕ್ಕೆ ಜನ ಸಾಮಾನ್ಯರ ಬಲಿಗೂ ಅವರು ಸಿದ್ಧ! ಹಾಗಾಗಿ ಜೂನ್‌ 2020ರಲ್ಲಿ ಮುನ್ನೆಲೆಗೆ ಬಂದ ಹೊಸ ಕೃಷಿ ಕಾಯಿದೆಯ ಬಗೆಗೆ ಅವರು ತೆರೆಮರೆಯಲ್ಲಿ ವಿರೋಧದ ಅಲೆಯೆಬ್ಬಿಸಲು ಪ್ರಯತ್ನ ಪ್ರಾರಂಭಿಸಿಬಿಟ್ಟಿದ್ದರು. ಲೋಕಸಭೆಯಲ್ಲಿ ಕಾಯಿದೆ ಅನುಮೋದನೆಗೊಂಡ ತರುವಾಯ, ʼವಿರೋಧ ಪಕ್ಷಗಳೊಡನೆ ಕಾಯಿದೆಯ ಬಗೆಗೆ ಸಮಾಲೋಚನೆ ಮಾಡಿಲ್ಲʼ ಅನ್ನುವ ತಗಾದೆ ತೆಗೆದರು. ಈ ಕಾರಣವನ್ನೇ ಆಯುಧವಾಗಿಸಿಕೊಂಡರು. ಎರಡನೆ ಹೆಜ್ಜೆಯಾಗಿ ದೇಶದಲ್ಲಿ ಅಸಂಘಟಿತ ರೈತರ ಪರವಾಗಿ ಮಾತನಾಡತೊಡಗಿದರು. ಅನೇಕ ರೈತ ಸಂಘಗಳ ಮುಖಂಡರೊಡನೆ ಸರ್ಕಾರ ಮಾತುಕತೆ ನಡೆಸಿ ಕೃಷಿ ಕಾಯಿದೆ ತರಬೇಕಿತ್ತು ಎನ್ನುವ ಹೇಳಿಕೆಗಳನ್ನು ಕೊಡತೊಡಗಿದರು. ಹೊಸ ಕಾಯಿದೆಯಲ್ಲಿ ಇದುವರೆವಿಗೂ ಇದ್ದ ಆಹಾರ ಕನಿಷ್ಠ ಬೆಲೆ (ಎಂಎಸ್‌ಪಿ) ಇನ್ನು ಮುಂದೆ ಇರುವುದಿಲ್ಲ ಅನ್ನುವ ಸುಳ್ಳನ್ನು ಹೇಳತೊಡಗಿದರು. ಅಷ್ಟೇ ಅಲ್ಲದೆ, ಈ ಹೊಸ ನೀತಿಯಿಂದಾಗಿ ಕಾರ್ಪೊರೇಟರುಗಳಿಗೆ, ವಿದೇಶಿ ನೇರ ಹೂಡಿಕೆದಾರರಿಗೆ (ಎಫ್‌ಡಿ ಐ) ಹೆಚ್ಚಿನ ಲಾಭಗಳಾಗುತ್ತವೆಂದು ರೈತ ಮುಖಂಡರ ದಾರಿ ತಪ್ಪಿಸಿದರು. ಇದರ ಫಲ ರೈತ ಚಳುವಳಿಯ ಬಿಸಿ. ಈ ಚಳುವಳಿಯ ದಿಕ್ಕನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಅನ್ನಿಸುತ್ತಿರುವುದು ಇದೊಂದು ನಕಲಿ ರೈತ ಚಳುವಳಿ.

72ನೇ ಗಣರಾಜ್ಯದಿನದಂದು ದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್‌ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರ, ಕೆಂಪುಕೋಟೆಯಲ್ಲಿ ಖಲಿಸ್ತಾನದ ಪರವೆನ್ನಿಸುವ ಬಾವುಟದ ಹಾರಾಟ, ಧರ್ಮ ಧ್ವಜ ಹಾರಿಸುವ ಉದ್ಧಟತನ ಮತ್ತು, ನಮ್ಮ ರಾಷ್ಟ್ರ ಧ್ವಜಕ್ಕೆ ಮಾಡಿದ ಅಪಮಾನಗಳು ಶಾಂತಿ ಪರ ರೈತರಿಂದ ಆಗಿದ್ದೆಂದು ಯಾವ ಭಾರತೀಯನೂ ನಂಬಲು ಸಾಧ್ಯವೇ ಇಲ್ಲ. ರೈತ ಚಳವಳಿಯ ನೆಪದಲ್ಲಿ ವಿದೇಶಗಳಿಂದ ಹರಿದು ಬರುತ್ತಿರುವ ಹಣ ಮತ್ತು ವಿದೇಶೀಯರ ಅನಗತ್ಯ ಮೂಗುತೂರಿಸುವಿಕೆ, ಭಾರತೀಯ ನಾಗರಿಕರೆಲ್ಲರೂ ಸಂಶಯಗ್ರಸ್ತರಾಗುವಂತೆ ಮಾಡಿರುವುದು ಸುಳ್ಳಲ್ಲ.

ಪ್ರಸಿದ್ಧ ಪತ್ರಕರ್ತ ಶ್ರೀ ಗುಚರಣ್‌ ದಾಸ್‌ ಹೀಗೆ ಹೇಳುತ್ತಾರೆ: ಈಗ ಪಂಜಾಬ್‌ ರೈತರಿಂದ ನಡೆಯುತ್ತಿರುವ ಚಳುವಳಿ ಒಂದು ಕ್ರಿಕೆಟ್‌ ಪಂದ್ಯದಂತೆ ಇದೆ. ಪಂಜಾಬ್‌ ರೈತರಿಂದ ಟಿ-20 ಆಟ ನಡೆಯುತ್ತಿದ್ದರೆ, ಕೇಂದ್ರ ಐದು ದಿನಗಳ ಟೆಸ್ಟ್‌ ಪಂದ್ಯ ಆಡುತ್ತಿದೆ. ಚಳುವಳಿಯ ಹಿನ್ನೆಲೆಯಲ್ಲಿ ರಾಜಕೀಯ ಪಿತೂರಿ ಸೇರಿರುವುದರಿಂದ ಪಂದ್ಯ ದೀರ್ಘಾವಧಿ ನಡೆಯದೆ 20 ಓವರುಗಳಲ್ಲಿ ಪಂದ್ಯ ಮುಗಿಯಲಿದೆ. ಸರ್ಕಾರ ರೈತರ ಆರ್ಥಿಕ ಸದೃಢತೆಗಾಗಿ ಶ್ರಮಿಸುತ್ತಿರುವುದರಿಂದ ಅದು ಟೆಸ್ಟ್‌ ಪಂದ್ಯ ಆಡುತ್ತಿದೆ!

ಇಲ್ಲಸಲ್ಲದ ಸಂದೇಹ, ಭಯ, ಆತಂಕಗಳನ್ನು ರೈತ ಸಮುದಾಯದಲ್ಲಿ ಹುಟ್ಟು ಹಾಕಿ ʼಹೊಸ ಹಸಿರು ಕ್ರಾಂತಿʼಯನ್ನು ಕೊಲ್ಲದಿರೋಣ ಅನ್ನುವುದು ಅವರ ಮನವಿಯಾಗಿದೆ.

ಪಂಜಾಬ್‌ ರಾಜ್ಯ ಉಳಿದ ರಾಜ್ಯಗಳಂತಲ್ಲ.

ಪಂಜಾಬಿನ ಕೆಲವು ರೈತರಿಂದ ಆರಂಭಗೊಂಡ ಚಳುವಳಿಯ ಹಿಂದೆ ಇರುವವರು ಯಾರು?

ಎಪಿಎಂಸಿಯ ಕಮಿಷನ್‌ ಏಜೆಂಟರುಗಳೆ?
ನಗರ ನಕ್ಸಲರೆ?
ಖಲಿಸ್ತಾನದ ಗುಪ್ತ ಬೆಂಬಲಿಗರೆ?
ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಶತಾಯ ಗತಾಯ ಹಿಡಿಯುವ ಉದ್ದೇಶ ಹೊಂದಿರುವ ಕಾಂಗ್ರೆಸ್‌ ಪಕ್ಷವೆ?
ಎಡಪಂಥೀಯ ಗುಂಪಿನವರೆ?

ದೇಶದ ಉಳಿದ ರಾಜ್ಯಗಳಲ್ಲಿ ಚಳುವಳಿಯ ಉತ್ಸಾಹ ಇಲ್ಲದಿದ್ದರೂ, ಪಂಜಾಬಿನ ಚಳುವಳಿಯನ್ನು ಭೂತಗನ್ನಡಿಯಿಟ್ಟು ತೋರಿಸುವ ಪ್ರಯತ್ನ ನಿರಂತರ ಸಾಗಿದೆ.

ಹೀಗೆ ನಿರಂತರ ಸುಳ್ಳುಗಳಿಂದ ದಾರಿ ತಪ್ಪಿರುವ ಪಂಜಾಬ್‌, ದೇಶದಲ್ಲೇ ಅತಿ ಹೆಚ್ಚು ಭತ್ತ ಮತ್ತು ಗೋಧಿ ಬೆಳೆಯುವ ರಾಜ್ಯವಾಗಿದೆ. ರೈತರಿಗಿಂತ ಹೆಚ್ಚು ತಳಮಳವಾಗಿದ್ದು ಪಂಜಾಬಿನ ಎಪಿಎಂಸಿ ಯಲ್ಲಿಯ ಲಾಭ ಬಡುಕ ಮಧ್ಯವರ್ತಿ ವರ್ತಕರುಗಳಿಗೆ ಮತ್ತು ಅತಿ ಹೆಚ್ಚು ಸಂಖ್ಯೆಯಲ್ಲಿರುವ ದಲ್ಲಾಳಿಗಳು/ಉಪ ದಲ್ಲಾಳಿಗಳಿಗೆ. ಎಪಿಎಂಸಿ ರದ್ದಾದರೆ 19971ರಿಂದ ನಿರಂತರವಾಗಿ ಸಾಗುತ್ತಿರುವ ಉದ್ಯೋಗಕ್ಕೆ ಭಾರೀ ಹೊಡೆತ ಬೀಳುವ ಭಯ ಅವರಿಗೆ ಕಾಡುತ್ತಿದೆ.

ಪಂಜಾಬಿನಲ್ಲಿ ಪರವಾನಗಿ ಇರುವ ಎಪಿಎಂಸಿ ಮಧ್ಯವರ್ತಿ ವರ್ತಕರು ಸುಮಾರು ಮೂವತ್ತು ಸಾವಿರವಿದ್ದಾರೆ. ಈ ಮಧ್ಯವರ್ತಿಗಳು ಸುಮಾರು ಮೂರು ಲಕ್ಷ ಉಪ ದಲ್ಲಾಳಿಗಳನ್ನು (ಸಬ್‌-ಏಜೆಂಟರುಗಳು)‌ ನೇಮಿಸಿಕೊಂಡಿದ್ದಾರೆ. ಅಂದರೆ ಪಂಜಾಬಿನ ಪ್ರತಿ ಹಳ್ಳಿಗಳಲ್ಲಿ ಇನ್ನೂರಕ್ಕು ಹೆಚ್ಚು ದಲ್ಲಾಳಿಗಳು ಕಾರ್ಯ ನಿರ್ವಹಿಸುತ್ತಿದ್ದು, ಪಡಿತರ ಪದ್ಧತಿ ನಿಂತರೆ ಅವರ ಇದುವರೆಗಿನ ಉದ್ಯೋಗಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ. ಈ ಭಯ ಅವರನ್ನು ಅಸಂಘಟಿತ ರೈತರನ್ನು ದಾರಿ ತಪ್ಪಿಸಿ ಚಳುವಳಿಯ ಕಡೆಗೆ ಗಮನಹರಿಸಲು ಸಾಧ್ಯವಾಗಿಸಿದೆ. ಆದರೂ ಅಲ್ಲಿಯ ರೈತರಿಂದ ಹೆಚ್ಚಿನ ಪ್ರತಿಕ್ರಿಯೆ ಬರದಿದ್ದಾಗ ಹಣ ಬಲದಿಂದ ಸಂಘಟಿತರಾದ ಕೆಲವು ಸಂಘಟನೆಗಳು ಮತ್ತು ಖಲಿಸ್ತಾನದ ಗುಪ್ತ ಬೆಂಬಲಿಗರು ರೈತ ಪ್ರತಿಭಟನೆಯ ಸೋಗಿನಲ್ಲಿ ದೆಹಲಿಯ ಬೀದಿಗಿಳಿದರು.

ಇದಕ್ಕೆ ಮುಖ್ಯ ಕಾರಣ ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿಯ (ಎಪಿ ಎಂ ಸಿ) ಮಧ್ಯವರ್ತಿ/ದಲ್ಲಾಳಿಗಳಿಂದ ತಪ್ಪಿಹೋಗಬಹುದಾದ ಕಮಿಷನ್. ಒಂದು ಸರ್ವೆ ಪ್ರಕಾರ ಈ ಕಮಿಷನ್‌ಮೊತ್ತ ವರ್ಷಕ್ಕೆ ಒಂದುಸಾವಿರದ ಐದುನೂರು ಕೋಟಿಯಷ್ಟು!

ದೇಶದಲ್ಲಿ ಎಲ್ಲೂ ಇಲ್ಲದಷ್ಟು ಮಧ್ಯವರ್ತಿ/ದಲ್ಲಾಳಿಗಳು ಪಂಜಾಬಿನಲ್ಲಿಯೇ ಏಕೆ? ಅನ್ನುವ ಪ್ರಶ್ನೆ ನಮಗೆ ಎದುರಾಗುತ್ತದಲ್ಲ? ಅದಕ್ಕೆ ಕಾರಣವಿದೆ. ಈ ಬಗೆಗೆ ಸ್ವಲ್ಪ ಚರಿತ್ರೆಯತ್ತ ಗಮನಿಸೋಣ.

1965ರಿಂದ ಭಾರತಕ್ಕೆ ಆಹಾರ ಕೊರತೆಯ ಬಿಸಿ ತಟ್ಟತೊಡಗಿತು. 1970ನೇ ವರ್ಷವಂತೂ ದೇಶ ಆಹಾರ ಕೊರತೆಯನ್ನು ಭಾರೀ ಪ್ರಮಾಣದಲ್ಲಿ ಎದುರಿಸಿತು. ಆ ಸಮಯದಲ್ಲಿ ಅಮೆರಿಕದ ಹಸಿರು ಕ್ರಾಂತಿಯ ಜನಕನೆಂದೇ ಪ್ರಸಿದ್ಧನಾಗಿದ್ದ ಕೃಷಿ ತಜ್ಞ ನಾರ್ಮನ್‌ ಬೋರ್ಲಾಗ್‌ ಹೆಚ್ಚು ಆಹಾರ ಬೆಳೆಯುವ ತಂತ್ರಜ್ಞಾನದ ಸಲಹೆ ಭಾರತಕ್ಕೆ ಕೊಟ್ಟನು. ಅವನ ಸಲಹೆಗಳ ಆವಿಷ್ಕಾರಕ್ಕೆ ಆಗಿನ ಕೇಂದ್ರ ಸರ್ಕಾರ ಪಂಜಾಬನ್ನು ಆರಿಸಿತು. ಬೋರ್ಲಾಗ್‌ ಮಾಡಿದ ಆವಿಷ್ಕಾರವೇನೆಂದರೆ ವೈವಿಧ್ಯಮಯ ಗೋಧಿ ತಳಿಗಳನ್ನು ಬಳಸಿ ಕೃಷಿಮಾಡುವುದು. ಅದು ಮೊದಲ ಕೃಷಿಯ ಇಳುವರಿಗಿಂತ ಹತ್ತು ಪಟ್ಟು ಇಳುವರಿ ಕೊಡತೊಡಗಿತು. ಆ ಹೆಚ್ಚು ಇಳುವರಿಗೆ ಕೇವಲ ಮೂರು ಪಟ್ಟು ಗೊಬ್ಬರ ಸಾಕಾಗಿತ್ತು. ಇಂಥ ಕ್ರಾಂತಿಕಾರಕ ಬದಲಾವಣೆ ಪಂಜಾಬಿನಲ್ಲಾಗಿ, ಹೆಚ್ಚಿನ ಗೋಧಿ ಪಡಿತರಕ್ಕಾಗಿ ಸಂಗ್ರಹವಾಗಿ ದೇಶದ ಉಳಿದ ಭಾಗಗಳಿಗೆ ಸರಬರಾಜಾಗತೊಡಗಿತು. ಆಗಿನ ದಿನಗಳ ಆಹಾರ ಕೊರತೆ ಸಮಸ್ಯೆ ನೀಗಿಸಲು ಅದು ಸಹಕಾರಿ ಎನಿಸಿತು.

ಆಹಾರಧಾನ್ಯಗಳ ಅಂದಿನ ಅಗತ್ಯತೆಗಳಿಂದ ದೇಶದಲ್ಲಿ ಬಂದದ್ದು ʼಅಗತ್ಯ ಆಹಾರವಸ್ತು ಮಸೂದೆʼ ಮತ್ತು ʼಕೋಟಾ ರಾಜ್‌ʼ . ಅಲ್ಲಿಂದ ಕನಿಷ್ಠ ಬೆಲೆ (ಎಂಎಸ್‌ಪಿ) ಪದ್ಧತಿಯೂ ಜಾರಿಗೆ ಬಂದಿತು. ಇದರಿಂದ ಮಧ್ಯವರ್ತಿಗಳು, ದಲ್ಲಾಳಿಗಳು ಹೆಚ್ಚಾದರು. ಇದು ಸರ್ಕಾರಿ ಅಧಿಕಾರಿಗಳ, ಅಧಿಕಾರ ಶಾಹಿಗಳ ಮೇಲಾಟಕ್ಕೂ ಇಂಬು ಕೊಡತೊಡಗಿ, ಸಂಗ್ರಹವಾಗುವ ಆಹಾರವಸ್ತುಗಳು ದೋಷಪೂರಿತವಾಗತೊಡಗಿದವು. ಒಂದು ಅಭಿಪ್ರಾಯದ ಪ್ರಕಾರ ಶೇಕಡಾ 40 ರಷ್ಟು ಸಂಗ್ರಹವಾದ ಆಹಾರಧಾನ್ಯ ಕಳಪೆ ಗುಣಮಟ್ಟದಾಗಿದ್ದು, ಸೇವಿಸಲು ಅಯೋಗ್ಯವೆನಿಸಿ ಇಲಿಗಳಿಗೆ ಆಹಾರವಾಗುತ್ತಿವೆ. ಎಂಎಸ್‌ಪಿ ಯಿಂದಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅವ್ಯವಹಾರಗಳು ನಡೆಯತೊಡಗಿದವು. ಈ ಬಗೆಗೆ ರೈತರ ದೂರುಗಳು ಸಾಕಷ್ಟಿವೆ.

  1. ಲಂಚಕೊಡುವುದರಿಂದ ಆಹಾರ ಧಾನ್ಯಗಳ ವರ್ಗೀಕರಣದಲ್ಲಿ ಮೋಸ ಮಾಡಬಹುದು. ʼಸಿʼ ಶ್ರೇಣಿಯ ಆಹಾರ ಧಾನ್ಯವನ್ನು ʼಬಿʼ ಎಂತಲೂ, ʼಬಿʼ ಶ್ರೇಣಿಯದನ್ನು ʼಸಿʼ ಎಂತಲೂ ಮಾಡಬಹುದು.
  2. ಕಳಪೆ ಧಾನ್ಯ ಸಂಗ್ರಹಣೆ ಹೀಗೆ ಪ್ರತಿ ವರ್ಷ ಅವ್ಯಾಹತವಾಗಿ ಹೆಚ್ಚತ್ತಿದೆ.
  3. ಬೆಲೆ ನಿಗದಿಯಲ್ಲಿ ತಾರತಮ್ಯ ಮಾಡಬಹುದು ಮತ್ತು ತೂಕದಲ್ಲಿ ಮೋಸ ಮಾಡಬಹುದಾಗಿದೆ.

ಈ ಕಾರಣಗಳಿಂದಾಗಿ ಕೃಷಿಕರಲ್ಲಿ ಒಳ್ಳೆಯ ಬೆಳೆ/ಪ್ರೊಟೀನ್‌ಯುಕ್ತ ಬೆಳೆ ತೆಗೆಯುವುದರ ಬಗೆಗೆ ನಿರಾಸಕ್ತಿ ಮೂಡಿದೆ. ಎಂಎಸ್‌ಪಿ ನೀತಿಯಿಂದಾಗಿ, ಅವರಿಗೆ ಕನಿಷ್ಠ ಬೆಲೆ ನಿಗದಿತವಾಗಿ ಸಿಗುತ್ತಿರುವುದೇ ಇದರ ಮೂಲ ಕಾರಣ.

ವಿರೋಧ ಪಕ್ಷಗಳ ಬೇಡಿಕೆ

ಕಾಂಗ್ರೆಸ್‌ ಮತ್ತು ಇತರ ಪಕ್ಷಗಳು ಕೆಲವು ಬೇಡಿಕೆಗಳನ್ನು ಮುಂದಿಟ್ಟಿವೆ. ಅದರಲ್ಲಿ ಮುಖ್ಯವಾದದ್ದು ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ರದ್ದು ಮಾಡಬಾರದು. ಎಂಎಸ್‌ಪಿಯನ್ನು ಕಾನೂನಾತ್ಮಕವಾಗಿಸಬೇಕು. ಮಾರುಕಟ್ಟೆಯಲ್ಲಿ ಎಂಎಸ್‌ಪಿಗಿಂತ ಕಡಿಮೆ ದರದಲ್ಲಿ ಯಾರಾದರೂ ಖರೀದಿಸಿದರೆ ಅದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಬೇಕು.

ಈ ರೀತಿಯ ಕಾನೂನಿನಿಂದ ಕೃಷಿಕನಿಗೆ ಹೊಡೆತವೇ ಹೊರತು ಉಪಯೋಗವಲ್ಲ. ಏಕೆಂದರೆ, ಎಂಎಸ್‌ಪಿ ಕಾನೂನಿನ ತೊಡಕಿನಿಂದ ಮಾರುಕಟ್ಟೆಯಲ್ಲಿ ಕೊಳ್ಳುವವರು ನಿಷ್ಕ್ರಿಯರಾಗಬಹುದು ಮತ್ತು ಇದರ ಪರಿಣಾಮ ಕೃಷಿಕನ ಮೇಲೆಯೇ. ಸರ್ಕಾರವೂ ಕೂಡ ಎಲ್ಲ ಆಹಾರ ಧಾನ್ಯಗಳನ್ನು ಖರೀದಿಸಲು ಶಕ್ಯವಾಗದೆ, ಕೃಷಿಕನಿಗೆ ಹೊಸ ಸಮಸ್ಯೆಗಳನ್ನು ತರಬಹುದು.

ಕೃಷಿ ಆರ್ಥಿಕ ತಜ್ಞರಾದ ಶ್ರೀ ಅಶೋಕ್‌ ಗುಲಾಟಿ ಕೇಂದ್ರದ ಹೊಸ ಕೃಷಿ ನೀತಿಯ ಉತ್ತಮಾಂಶಗಳನ್ನು ತಿಳಿಸಿದ್ದಾರೆ. ಹೊಸ ನೀತಿಯಿಂದಾಗಿ ರೈತರಿಗೆ ತಮ್ಮ ಬೆಳೆಯನ್ನು ಮಾರಲು ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿದಂತಾಗಿದೆ. ಕೃಷಿ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆ ಬರಲಿದ್ದು, ಖರೀದಿದಾರರಿಗೆ ಸಂಗ್ರಹಣೆಯ ಸ್ವಾತಂತ್ರ್ಯವೂ ಸಿಕ್ಕಿದೆ. ಬೆಲೆಯ ಸ್ಪರ್ಧೆ ಬೆಲೆಯ ಕುಸಿತದ ಅಪಾಯವನ್ನೂ ತಪ್ಪಿಸುತ್ತದೆ.

ಭಾರತದಲ್ಲಿ ಕೃಷಿಯ ಮೇಲಿನ ತೆರಿಗೆ ಶೇಕಡಾ 14 ರಷ್ಟಿದ್ದು, ಇದಕ್ಕೆ ಕಾರಣ ನಿರ್ಬಂಧಿತ ಕೃಷಿ ಕಾಯಿದೆ ಕಟ್ಟಳೆಗಳು, ಮಾರುಕಟ್ಟೆ ನೀತಿಗಳು, ರಫ್ತು ನಿಯಂತ್ರಣ ಮತ್ತು ಆಹಾರ ಸಂಗ್ರಹಣಾ ಮಿತಿ. ಈ ಕಾನೂನಿನ ಮಿತಿಗಳಿಂದ ಕೃಷಿ ಚಟುವಟಿಕೆಗಳು ಹೊರ ಬರಬೇಕೆನ್ನುವುದು ದೇಶ ಕಂಡ ಅತ್ಯುನ್ನತ ರೈತ ಮುಖಂಡ ದಿವಂಗತ ಶ್ರೀ ಶರದ್‌ ಜೋಷಿಯವರ ದೊಡ್ಡ ಬೇಡಿಕೆಯಾಗಿತ್ತು.

ಈಗ ಜಾರಿಯಾಗಿರುವ ಹೊಸ ಕೃಷಿ ಕಾಯಿದೆಯಲ್ಲಿ ಈ ಎಲ್ಲ ಅಂಶಗಳಿದ್ದರೂ ಅನಗತ್ಯ ಕಳವಳ, ಸಂಶಯಗಳನ್ನು ಹುಟ್ಟುಹಾಕುವವರ ತಂಡ ಕ್ರಿಯಾಶೀಲವಾಗಿದೆ!

ಹೊಸ ನೀತಿಯ ಪ್ರಯೋಜನಗಳು

  1. ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿಯ (ಎಪಿಎಂಸಿ) ಏಕಸ್ವಾಮ್ಯತೆ ಮೂಲೆಗುಂಪಾಗುತ್ತದೆ.
  2. ಲಾಭದಾಯಕವಾಗಿರುವ ಹೊರಗಿನ ಮಾರುಕಟ್ಟೆಯತ್ತ ರೈತ ಗಮನ ಹರಿಸಬಹುದು.
  3. ಹೊಸ ಮಾರುಕಟ್ಟೆಗೆ ಅಗತ್ಯವಿರುವ ಸಾರಯುಕ್ತ ಬೆಳೆ ಬೆಳೆಯಲು ರೈತ ಆಸ್ಥೆ ವಹಿಸುತ್ತಾನೆ.
  4. ಪ್ರತಿ ವರ್ಷವೂ ದೇಶದಲ್ಲಿ ಭತ್ತ, ಗೋಧಿ ಅತಿ ಹೆಚ್ಚು ಬೆಳೆಯಾಗುತ್ತಿದ್ದು, ಈ ಅನಗತ್ಯ ಬೆಳೆಗಳು ನಿಯಂತ್ರಣವಾಗುತ್ತದೆ.
  5. ಭತ್ತದ ಬೆಳೆ ಅತಿಹೆಚ್ಚಿನ ನೀರು ಹೀರುವುದರಿಂದ ಮಣ್ಣಿನ ಸಾರ ಕಡಿಮೆಯಾಗುತ್ತಿದ್ದು, ಭೂಮಿಯ ಫಲವತ್ತತೆಯ ಬಗೆಗೆ ಗಮನ ಹರಿಸಬಹುದಾಗಿದೆ.
  6. ಭೂಮಿಯ ನೀರಿನ ಕೊರತೆ ನೀಗುತ್ತದೆ.
  7. ಪ್ರತಿ ಭತ್ತದ ಬೆಳೆಯಾದ ಮೇಲೆ ಪಂಜಾಬಿನಲ್ಲಿ ಭತ್ತದ ಕೂಳೆ ಸುಡುತ್ತಾರೆ. ಇದರಿಂದ ಪಂಜಾಬ್‌, ದೆಹಲಿ ಮತ್ತಿತರ ಅಕ್ಕಪಕ್ಕದ ರಾಜ್ಯಗಳಲ್ಲಿ ವಾತಾವರಣ ಕಲುಷಿತಗೊಳ್ಳುತ್ತಿದ್ದು, ಮನುಷ್ಯನ
    ಆರೋಗ್ಯಕ್ಕೆ ಮಾರಕವಾಗುತ್ತಿದೆ. ಹೊಸ ನೀತಿಯಿಂದಾಗಿ ಸಮಸ್ಯೆ ನಿಯಂತ್ರಣಕ್ಕೆ ಬರಲಿದೆ.
  8. ಶೇಕಡಾ 80 ಭಾರತದ ರೈತ 2 ಹೆಕ್ಟೇರಿಗಿಂತ ಕಡಿಮೆ ಭೂಮಿ ಹೊಂದಿದ್ದು, ವೈಜ್ಞಾನಿಕವಾಗಿ ಮೌಲ್ಯಯುಕ್ತ ಬೆಳೆ ಬೆಳೆಯಲು ಹಣದ ಕೊರತೆ ಎದುರಿಸುತ್ತಿದ್ದಾನೆ. ವೃತ್ತಿಪರ ಕೃಷಿ ಸಂಸ್ಥೆಗಳಿಗೆ ತನ್ನ
    ಜಮೀನನ್ನು ಅವನು ಕಾಲಕಾಲಕ್ಕೆ ಗುತ್ತಿದೆ ಕೊಡುವುದರಿಂದ ಆರ್ಥಿಕ ಸ್ಥಿತಿ ಸುಧಾರಣೆಗೊಳ್ಳುತ್ತದೆ.
  9. ಅನೇಕ ಅಗತ್ಯವಸ್ತುಗಳ ಮೇಲಿನ ನಿಯಂತ್ರಣ ತಪ್ಪಲಿದೆ.
  10. ಖಾಸಗಿ ವಲಯ, ವಿದೇಶಿ ನೇರ ಬಂಡವಾಳದಾರರು ರೈತನ ಜೊತೆ ವ್ಯವಹಾರದಲ್ಲಿ ಆಸಕ್ತಿ ವಹಿಸುವುದರಿಂದ ದಲ್ಲಾಳಿಗಳ ಪಾರಮ್ಯತೆ ಕಡಿಮೆಯಾಗಲಿದೆ.

ಹೊಸ ನೀತಿಯಲ್ಲಿ ಹಣ ಸಂದಾಯದ ಅವಧಿ, ಒಪ್ಪಂದಗಳ ಕಾಲ ಮಿತಿ ಮುಂತಾದುವುಗಳು ರೈತನಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ರಚಿಲಾಗಿವೆ. ಉದಾಹರಣೆಗೆ: ಪ್ರಾಯೋಜಕ ಮತ್ತು ರೈತನ ನಡುವಿನ ಕೃಷಿ ಒಪ್ಪಂದಗಳು ರೈತ ಉತ್ಪಾದಿಸುವ ಬೆಳೆಯ ಬಗೆಗಷ್ಟೇ ಇರುತ್ತದೆ ಮತ್ತು ಜಮೀನಿನ ಮಾರಾಟ, ಗುತ್ತಿಗೆ ಅಥವಾ ಅಡಮಾನ ಮಾಡುವಂತಿಲ್ಲ. ಹಾಗೆಯೇ, ರೈತನ ಒಪ್ಪಿಗೆ ಪಡೆದು ಪ್ರಾಯೋಜಕ ಬೆಳೆಯ ಸಂಗ್ರಹಕ್ಕಾಗಿ ಕೃಷಿ ಭೂಮಿಯಲ್ಲಿ ಕಟ್ಟಡ ಕಟ್ಟಿದರೆ, ಒಪ್ಪಂದದ ಅವಧಿ ಮುಗಿದ ನಂತರ ಕಟ್ಟಡ ರೈತನ ಆಸ್ತಿಯೆಂದೇ ಪರಿಗಣಿಸಲ್ಪಡುತ್ತದೆ.

ಈಗ ಅಗತ್ಯವಾಗಿ ಆಗಬೇಕಿರುವ ಕಾರ್ಯವೆಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯ ಭಾಷೆಗಳಲ್ಲಿ ಹೊಸ ಕೃಷಿ ಕಾಯಿದೆ ನೀತಿಯನ್ನು (ಪ್ರಕಟಿಸಿಲ್ಲವಾದರೆ) ಪ್ರಕಟಿಸಿ ಜನರಿಗೆ ಮುಟ್ಟಿಸುವ ಕಾರ್ಯ ಶೀಘ್ರದಲ್ಲಿ ಮಾಡಬೇಕಿದೆ. ಅಂತೆಯೇ, ಕೃಷಿ ತಜ್ಞರಿಂದ ಟಿವಿ, ಅಂತರ್ಜಾಲಗಳ ಮೂಲಕ ಹೊಸ ಕಾಯಿದೆಯ ರೂಪುರೇಷೆಗಳನ್ನು ತಿಳಿಸುವ ಕಾರ್ಯ ನಡೆಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕಿದೆ.

ದೇಶದ ಕೃಷಿಕನಿಗೆ ಹೆಚ್ಚಿನ ಲಾಭ ಸಿಗುವ ಜೊತೆಗೇ ನಾವು ಗ್ರಾಹಕರ ಬಗೆಗೂ ಗಮನ ಹರಿಸಬೇಕು. ಆಹಾರ ಸಾಮಗ್ರಿಗಳ ಬೆಲೆಗಳು ನಿಯಂತ್ರಣ ತಪ್ಪಿದಲ್ಲಿ ಅದು ಎಲ್ಲ ಗ್ರಾಹಕರ ತಲೆಯಮೇಲಿನ ಹೊರೆಯಾಗಿಬಿಡುತ್ತದೆ. ಹಾಗಾಗದಿರಲಿ. 2020ರ ಹೊಸ ಕೃಷಿ ಕಾಯಿದೆ ʼಹೊಸ ಹಸಿರು ಕ್ರಾಂತಿಗೆʼ ನಾಂದಿ ಹಾಡಲಿ. ಅದೇ ರೀತಿಯಲ್ಲಿ ರೈತರ ಮತ್ತು ಗ್ರಾಹಕರ ನಡುವಿನ ಸ್ನೇಹ ಸೇತುವಾಗಲಿ ಎನ್ನುವದೇ ಸದಾಶಯ.

(ಉತ್ಥಾನ ಮಾಸ ಪತ್ರಿಕೆ- ಮಾರ್ಚ್‌ 2021 ಈ ಲೇಖನ ಪ್ರಕಟವಾಗಿದೆ)

ವ್ಯತ್ಯಾಸ

ಬಹಳ ದಿನಗಳಿಂದ
ಮಳೆ ಮೋಡ ದಟ್ಟ
ನನಗೋ ಕಟ್ಟಿದ ಕಂಠ
ಜ್ವರ ನರಳಾಟ
ಡಾಕ್ಟರ ಬಳಿಗೆ ಅಲೆದಾಟ
ಹೊರಗೆ ಅದು ಹೇಗೆ
ಸೂರಿಲ್ಲದ ಹಕ್ಕಿಗಳ
ನಿತ್ಯ ಸುಶ್ರಾವ್ಯ ಕಲರವ
ಚಿಲಿಪಿಲಿ ಆಟ
ಸ್ವಚ್ಛಂದ ಹಾರಾಟ!?

(Pic from Internet)