ಹೊಸತಿಗೆ ಗಮನ

Chittani

ನಗರ ವಾಸಿಯ ಮೈಮನ
ಹೊಸತಿನತ್ತಲೆ ಗಮನ
ಹನ್ನೆರಡು ತೇದಿಗಳ ತೇಯ್ದು
ಮುಗಿಸಿದ ಮರುದಿನ
ಉಗಾದಿ ದರ್ಶನ…

ಷೋಕೇಸುಗಳ
ಸುಂದರ ಸಾಲ ಸಿಹಿಗೆ
ಸಾಲಿನಲಿ ನಿಂತು
ಬೆವರಿಳಿಸಿ ತಂದು;
ಪ್ಲಾಸ್ಟಿಕ್ಕು ತೋರಣಗಳ
ಮುಂಬಾಗಿಲಿಗೆ ಬಿಗಿದು;
ನೊರೆ ಶಾಂಪುವಿನಲ್ಲಿ ಅಭ್ಯಂಗಿಸಿ
ಪರಿಮಳ ಪೌಡರು ಬಳಿದು
ಹೊಸ ಟೋರ್ನ್ ಜೀನ್ಸುಗಳೇರಿಸಿ
ಚಿತ್ರವಿಚಿತ್ರಾಂಗಿಗಳ ಧರಿಸಿ
ಅಂಗೋಪಾಂಗಳ ಅಲ್ಲಲ್ಲಿ ಇಣುಕಿಸಿ
ಖುಶಿಯ ಅನಾವರಣಕ್ಕೆ
ಡೈನಿಂಗ್ ಟೇಬಲಿನ ಸುತ್ತ
ವೈವಿಧ್ಯ ಅವಸರ ಚಪ್ಪರಿಸುವಾಗ
ಕೇಳುತ್ತಾರೆ ಮೊಮ್ಮಕ್ಕಳು
‘ಈ ಹಬ್ಬದ ಹೆಸರೇನು?
ಮರಳಿ ಬರುವುದೇನು?’

ಮೂಲೆಯಿಂದ ಅಜ್ಜಿ
ವಟವಟಿಸಿದ್ದಾಳೆ
‘ದೇವರಿಗೆ ದೀಪ
ಹಚ್ಚಿಟ್ಟೆಯೇನು?’

ನೆನಪಿಸಿದೊಡನೆ
ವಿದ್ಯುದ್ದೀಪಗಳ ಮಾಲೆ
ಹೊತ್ತಿ ಜಗಮಗಿಸಿತು
ದೇವರ ಕೋಣೆ !

ವಟಗುಟ್ಟುವವರ ಬಿಟ್ಟರೆ
ಮತ್ತೆಲ್ಲರ ಗಮನ ಹೊಸತಿನತ್ತ!
’ಮುಂದಿನ ಬಿಸು ಹಬ್ಬಕ್ಕೆ
ಹೊಟೇಲು ಕಾದಿರಿಸೋಣ
ಹಬ್ಬದಔಟಿಂಗ್ ಬಲು ಚೆನ್ನ’
ಅಜ್ಜಿಗೆ ಕೇಳಿಸದ ಪಿಸುಗುಟ್ಟುವಿಕೆ!

ಹನ್ನೆರಡು ತೇದಿಗಳ ತೇಯ್ದು
ಮತ್ತೆ ಬಿಸು ದರ್ಶನ
ಹೊಸತಿನತ್ತಲ ಗಮನ…!!

(pic from Internet)

‘ಸಂಪದ’ ವಿಶೇಷ ಬರಹ

bird

ಸಂಪದ ಆಯ್ಕೆ ಮಾಡಿದ ವಿಶೇಷ ಬರಹಗಳಲ್ಲೊಂದು – ವಸಂತನ ಹಕ್ಕಿಗಳು:

ಓದಲು ಲಿಂಕ್: https://www.sampada.net/blog/%E0%B2%B5%E0%B2%B8%E0%B2%82%E0%B2%A4%E0%B2%A8-%E0%B2%B9%E0%B2%95%E0%B3%8D%E0%B2%95%E0%B2%BF%E0%B2%97%E0%B2%B3%E0%B3%81/13-4-2018/48127

 

(pic courtesy : Pixabay)

ವಸಂತ – ಎರಡು ಹನಿಗವನ

birds

bird1

ಸಾಣೆ

 

ರಾತ್ರಿ ಅಚಾನಕ ಮಳೆ ಸುರಿದು

ಹೊಳೆವ ಬೆಳಗು

ವಸಂತನ ಸೊಂಪಿಗೆ

ಹಕ್ಕಿ ಹೊರಳಿಸಿ ಕೊರಳು

ಹಿಡಿದಿದೆ ಸಾಣೆ ಇಂಪಿಗೂ!

 

ಇನಿಯಳ ಸೆಳೆವ

ಹಕ್ಕಿಯ ಕಲೆ ಎಂಥ ಸೊಬಗು !!

 

sparrow2

ಯಾವ ಘರಾನ

 

ಎಷ್ಟು ತೆರನಾದ ನಾದಗಳಿವು

ತಾಲಮಾನಗಳ ಅರಿಯದವು

ಇಂಪನೆಂದಿಗೂ ತೊರೆಯದವು

ಯಾವ ಘರಾನದ ಹಕ್ಕಿಗಳಿವು!

 

(pics courtesy:Pixabay)

ವಸಂತನ ಹಕ್ಕಿಗಳು

swallow

ರೂಪಕಗಳು

 

 ಶಿಶಿರದಲ್ಲಿ ಅವಿತ

ಕೊರಳ ಬಿಸಿಯಾರದ ಮಾತು

ಹೊಸ್ತಿಲೇರಿದ ಹೊಸ ಋತು

ಒಡೆವ ಸಂತಸದ ಚಿಗುರು

ಚಿಲಿಪಿಲಿ ಕುಕು ಕಲರವ ಕೇಕೆಗಳು

ವಸಂತನಿಗಂಟಿದ ರೂಪಕಗಳು

 

rainbow-lorikeets

ಕಾಲರ್ ಟ್ಯೂನ್

 

ವಸಂತನಿಗೆ ವೈವಿಧ್ಯದ

ಕಾಲರ್ ಟ್ಯೂನ್

ಹರಿಬಿಡುವ

ಬಣ್ಣ ಬಣ್ಣದ

ವಿಧವಿಧ ಹಕ್ಕಿಗಳು

 

(pic courtersy – Pixabay)