ಚಿಣ್ಣರ ಗಾಥೆ

kids2

ಕಂದನೊಮ್ಮೆ ನಕ್ಕರೆ
ಹಾಲು ಜೇನು ಸಕ್ಕರೆ
ಹೃದಯದಲ್ಲಿ ಅರಳಿದಂತೆ
ನಕ್ಷತ್ರಗಳ ಮಾಲೆ

ಎಳೆ ನಡಿಗೆಯ ಹೆಜ್ಜೆ
ಹೂವಿನೆಸಳ ಒಜ್ಜೆ
ಕಣ್ಣುಗಳಿಗೆ ಕಟ್ಟಿದಂತೆ
ನರ್ತಿಸುವ ನವಿಲೆ

ಚಿಕ್ಕ ಚಿಣ್ಣನ ನೆಗೆತ
ಎದೆಗಡರುವ ಚೇತನ
ಆಲಸ್ಯದ ಮುಸ್ಸಂಜೆಗೆ
ಆಹ್ಲಾದದ ಬಾಣ

ತಂಟೆಕೋರನ ತೊದಲು
ನಗೆ ಹನಿಯ ಲೇಪನ
ಬೇಗೆಯ ಆಯಾಸಕ್ಕೆ
ಪನ್ನೀರಿನ ಸಿಂಚನ

ಪುಟ್ಟ ಪೋರನ ಪ್ರಶ್ನೆ
ಸರಳ ನೇರ ಶುದ್ಧ
ಉತ್ತರಿಸಲು ನಮ್ಮೊಳಗೆ
ಅವತರಿಸಬೇಕು ಬುದ್ಧ !

ಚಿಣ್ಣನುಲಿವ ಮಾತು
ಇಂದು ನಾಳೆಗೂ ಹೊಸತೆ
ತೆರೆಯುವಂಥ ವಿಶ್ವಕ್ಕೆ
ಸವಾಲೆಸೆವ ಗಾಥೆ

ಬೆಳಕು

lights

ಎಲ್ಲಿ ಬೆಳಕು… ಬೆಳಕು ಎಲ್ಲಿ….

ಮೋಡ ಕವಿದ ಧರೆಯ ಮೇಲೆ
ಧಾರೆ ಮಳೆ ಆಗುವಲ್ಲಿ

ನದಿಯು ತುಂಬಿ ಹರಿದು ಕೂಡ
ದೋಣಿ ದಡಕೆ ಸಾಗುವಲ್ಲಿ

ಒಳಹೊರಗಿನ ಮಲಿನ ತೊಲಗಿ
ಶುದ್ಧ ಗಾಳಿ ಬೀಸುವಲ್ಲಿ

ವಿಕೃತಿ ಅಳಿದು ತೊಳೆದು
ಪ್ರಕೃತಿ ಹೊಸತ ತೋರುವಲ್ಲಿ

ತುಡಿವ ದುಡಿವ ಕಾಯಗಳಿಗೆ
ಸುಖ ಸಂಪದ ಹಾಸಿನಲ್ಲಿ

ಕೃದ್ಧತೆಯನು ಆಳ ಹುಗಿದು
ಪ್ರಭುದ್ಧತೆಯನು ಮೆರೆಯುವಲ್ಲಿ

ಅಸುರ ನೀತಿ ದೂರ ತೊಲಗಿ
ಸಾಮರಸ್ಯ ಸೇರುವಲ್ಲಿ

ಶೋಷಣೆಯ ಕಪ್ಪು ಕಳೆದು
ಸಮಾನತೆಯ ಹಾಡಿನಲ್ಲಿ

ಹಸಿರ ಉಸಿರ ಉಳಿಸಿ ಬೆಳೆಸಿ
ಜೀವ ಸಂಗತವಾಗುವಲ್ಲಿ

ಸತ್ಯ ನಿತ್ಯ ಹೊಳೆದು
ಮಿಥ್ಯೆ ಮಂಡಿ ಊರುವಲ್ಲಿ

ಜಡತೆ ಜೊಂಪು ಜರಿದು
ಅರಿವು ಜೀವ ತಳೆವಲ್ಲಿ

ಭೂಮಿ ಹೃದಯ ಅರಳಿ ಭವ್ಯ
ಭಾಗ್ಯದಾತೆಯಾಗುವಲ್ಲಿ

ಇಲ್ಲಿ ಬೆಳಕು…. ಬೆಳಕು ಇಲ್ಲಿ….