ಬದಲಾವಣೆ

birds

ದಿಗ್ಬಂಧನದ ದಿನಗಳಿಂದು…

ವಿಮಾನವಾಹನಗಳು ದೂರಾಗಿವೆ
ಗಾಳಿಬೀಸಿನ ಜೊತೆಗೂಡಿ ಬಂದ
ಹಕ್ಕಿಗಳ ಕಲರವ ಕಿವಿತುಂಬಿದೆ
ಪರಿಸರದ ತುಂಬೆಲ್ಲ ಹರಡಿ ಪರಿಮಳ
ಸೊಗಸೆಂದರೇನೆಂದು ತಿಳಿಹೇಳಿದೆ

ಗಡಿಬಿಡಿ ದಿನಚರಿಯ ಭೂತ ಬಿಟ್ಟಿದೆ
ಸ್ವಚ್ಛ ಆಂದೋಲನದತ್ತ ಚಿತ್ತ ಮತ್ತೆ
ಅವಸರವಿಲ್ಲದ ಊಟತಿಂಡಿ ನಿದ್ರೆ
ಬಿಚ್ಚಿವೆ ಬಂಧ ರೆಕ್ಕೆಗಳ ಮೆಲ್ಲಗೆ
ಶಾಂತಿ ಹೊಕ್ಕಿದೆ ಮನಸಿನೊಳಗೆ

ಮಿತಬಳಕೆ ಬಗೆಗೆ ಹಿತನುಡಿ ಕೇಳಿದೆ
ತಿಳಿಯತೊಡಗಿದೆ ಜೀವ ಏನೆಂದು
ಸ್ಮಿತಮುಖಕೆ ಆರೋಗ್ಯವೇ ಚಿಂತೆ
ಆಯುರ್ವೇದ ಯೋಗ ಜೊತೆಗೆ
ಬೇಡವೇ ಬೇಡ ಸುದ್ದಿ ಅಂತೆಕಂತೆ

ಎಳೆಯರನೆಳೆದು ಕತೆ ಹೇಳುವ ತವಕ
ಮಕ್ಕಳಿಗೆ ಅಚ್ಚರಿ ಬಿಟ್ಟ ಕಣ್ಣೊಳಗೆ
ಮುದಕೊಡುವ ನಗೆ ಪ್ರೀತಿ ಸಲುಗೆ
ಗಾಂಭೀರ್ಯ ತೊರೆದ ಹಿರಿಯರಿಗೆ
ಕಿರಿ ಕೋಡು ಬಂದಂತೆ ತಲೆಗೆ!

ಲೋಕದೊಳಿತಿಗೆ ಹಾರೈಸಿ
ಪ್ರಾರ್ಥನೆಗಳು ಮೊರೆದವು
ಹಸ್ತಗಳು ಚಾಚಿದವು ಸಹಾಯದತ್ತ
ದಿಕ್ಕು ತೊರೆದವರಿಗೆ ನೋಯುತ್ತಿರುವರಿಗೆ
ಅಕ್ಷಯವಾಗಲಿ ಸುಖ; ಹರಿದು ಬೇಗೆ

29.03.2020

(Pic courtesy:Unsplash)

ಹೀಗೆ ಮಾಡಿ

unsplash

ಮೂರು ವಾರ
ಮೂಗು ದಾರ
ಹಾಕಿರೆಲ್ಲ ಮನಸುಗಳಿಗೆ
ಕೋಳ ಬಿಗಿಯಿರಿ
ಕಾಲುಗಳಿಗೆ

ಬಿಚ್ಚು ಮೂಗಿಗೆ
ಚಪಲ ನಾಲಿಗೆ
ಬಟ್ಟೆ ಕಟ್ಟಿರಿ ಬಾಯಿಗೆ
ಭದ್ರಪಡಿಸಿರಿ ಬಾಗಿಲು
ಚಿಲಕ ಅಗುಳಿಗೆ

ಸ್ವಚ್ಛ ಗೊಳಿಸಿರಿ
ಮೂಲೆಮೂಲೆ
ಧೂಳು ಝಾಡಿಸಿ ಒಳಗೆ
ಮರೆತ ಅಭ್ಯಾಸ ಮರಳಲಿ
ತೆರೆಯಿರಿ ಹೊತ್ತಗೆ ಓದಿಗೆ

(Pic courtesy:Unsplash)

ಈ ವಾರ

default-beauty-spas-58

ಈ ವಾರ ಮಕ್ಕಳು ಹೊರಬರುವುದಿಲ್ಲ
ಶಾಲೆ ಕಾಲೇಜುಗಳಿಲ್ಲ
ಅಪ್ಪ ಅಮ್ಮರಿಗೂ ಮನೆಯಲ್ಲೆ ಕೆಲಸವೆಲ್ಲ
ಯುವಕರೂ ಹೊರಗಿಲ್ಲ
ನಲ್ಲೆಯರು ಸಿಕ್ಕರಲ್ಲ
ಯುವತಿಯರಂತೂ ಮುಖ
ಹೊರಗಿಡುವುದೇ ಇಲ್ಲ
ಬ್ಯೂಟಿಪಾರ್ಲರುಗಳು ಮುಚ್ಚಿವೆಯಲ್ಲ!

(Pic:Google)

ಕಾಫಿಗಷ್ಟೇ ಅಲ್ಲ ಹೋಟೆಲ್

 

172A70B

ಮೈಯಾಸ್‌ ತಂದರು ನೆಗಡಿ ಒಣಕೆಮ್ಮಿಗೂ 

ರುಚಿ ರುಚಿಯ ಕಷಾಯ

ಇಲ್ಲ ಇನ್ನುಮುಂದೆ ಮನೆ ಔಷಧ

ಮಾಡುವ ತಾಪತ್ರಯ

ಮಕ್ಕಳೊಂದಿಗೆ ಅಜ್ಜಿ ಕೆಮ್ಮಿದರೂ

ಹೋಟೆಲಿಗೆ ಒಯ್ಯುವುದೆ ಉಪಾಯ

ಕಾಣದ ಸೂತ್ರ!

corona

ಮನುಷ್ಯರ ಮೇಲೆ ಮಾತ್ರ

ಕರೋನ ವೈರಾಣು ದಾಳಿ

ಅಂದುಕೊಂಡು ಮುಖಕ್ಕೆ

ಕಟ್ಟಿಕೊಂಡೆ ಬಟ್ಟೆ…

 

ಕಾಣದ ವೈರಾಣು

ಎಲ್ಲಕಡೆಗದರ ಗೋಣು

ಬಲಿಪಡೆಯಿತು ಬಲಿಷ್ಟ

ಷೇರು ಮಾರುಕಟ್ಟೆ

 

(Pic:Google)

ಬೇಕಾಗಿದೆ…

photo-1502444330042-d1a1ddf9bb5b

ನಮಗೀಗ ಬೇಕಾಗಿದೆ
ಒಬ್ಬ ಎಲೆಕ್ಟ್ರೀಷಿಯನ್‌
ಒಬ್ಬರನ್ನೊಬ್ಬರು ಭೇಟಿಸಿ
ಮಾತುಗಳಲ್ಲಿ ಬೆಳಗಿಸಿಕೊಳ್ಳಲು…

ಬೇಕಾಗಿದೆ…ಒಬ್ಬ ಆಪ್ಟೀಷಿಯನ್‌
ನಮ್ಮೆಲ್ಲರ ಧೋರಣೆಯ
ದೃಷ್ಟಿ ಬದಲಾಯಿಸಲು…

ಬೇಕಾಗಿದೆ…ಒಬ್ಬ ಎಂಜಿನಿಯರ್‌
ನೆರೆಹೊರೆಗಳ ಅಂತರಕ್ಕೆ
ಸೇತುವೆ ನಿರ್ಮಿಸಲು…

ಬೇಕಾಗಿದೆ…ಒಬ್ಬ ಪ್ಲಂಬರ್‌
ಉಸಿರುಗಟ್ಟಿದ ನಿರ್ಬಂಧಿತ
ಮನಸಡಿಲಿಸಿ ಸಲೀಸು ಹರಿಯಗೊಡಲು…

ಬೇಕಾಗಿದೆ…ಒಬ್ಬ ಚಿತ್ರಕಾರ
ನಮ್ಮೆಲ್ಲ ಮುಖಗಳಲ್ಲೂ
ಮಂದಹಾಸದ ಗೆರೆಯೆಳೆಯಲು…

ಬೇಕಾಗಿದೆ…ಒಬ್ಬ ತೋಟಗಾರ
ಸುವಿಚಾರ ಹೂಗಳ
ನಮ್ಮೆದೆಗಳಲ್ಲಿ ಬೆಳೆಯಲು…

ಬೇಕಾಗಿದೆ
ಒಬ್ಬ ವಿಜ್ಞಾನಿ
ಸಹಾನುಭೂತಿಯ ಅನುಭೂತಿ
ಮರುಹುಡುಕಿಕೊಡಲು…

ಬೇಕಾಗಿದೆ…ಒಬ್ಬ ಭಾಷಾ ಮಾಸ್ತರ
ನಮಗೆ ನಿಮಗೆ ಸಂವಹನ
ಕಲೆ ಕಲಿಸಲು…

ಬೇಕಾಗಿದೆ…ಒಬ್ಬ ಗಣಿತಜ್ಞ ಕೂಡಾ
ಪರಸ್ಪರ ನಮ್ಮೊಳಗಿನ ಎದೆಮಿಡಿತದ ಹದ
ಎಣಿಕೆಮಾಡಲು…

(ಕು.ಯಹಂಕ ನಾಯಕ್‌ ಅವರ ಆಂಗ್ಲ ಸಂದೇಶವೊಂದರ ಭಾವಾನುವಾದ)

(Pic courtesy:Pexel)