ಬಿಡು ಮೌನ

Bidumouna

ನೀ ಸನಿಹವಿರದಿರೆ ನಲ್ಲೆ
ವಿರಹ ಹೆಣೆಯದಿರದೇ ಬಲೆ ?

ನಿನ್ನ ಮಾತುಗಳಿಲ್ಲ
ನಗೆಯ ನೇಯ್ಗೆಗಳಿಲ್ಲ
ನೋಟದೊಸಗೆಗಳಿಲ್ಲ
ನಲಿವ ನಡಿಗೆಗಳಿಲ್ಲ!

ಹೃದಯ ಬಡಿತಗಳಲ್ಲಿ
ಜೀವ ಸಂಚರವಿಲ್ಲ
ಚೇತನದ ರೂಪಿನೀ
ಮುನಿಸು ಮೌನವು ಸಲ್ಲ

ನಿನ್ನುಸಿರ ಬಿಸಿಯಿತ್ತ
ಗಾಯ ಮಾಯುತಲಿಲ್ಲ!
ಹರಿಸಿ ತಂಪಿನ ಸಲಿಲ
ಸುಳಿಯಾದೆ ಮನದಾಳ !

ಹಸಿ ನೆನಪುಗಳ ಒಟ್ಟಿ
ಸುಡುವ ಕಠುರತೆಯಲ್ಲಿ
ನಿನ್ನ ಕಾಯದ ಮಳೆಗೆ
ನಿರುತ ಆಸೆಯಾದೆನಲ್ಲ

ಎಲ್ಲಿ ಹುಡುಕಲಿ ತನುವ
ಎಂದು ಕೇಳಲಿ ವಚನ?
ಕಾಣಬಲ್ಲೆನೆ ಚಂದಿರೆಯ
ಮಧು ನಗೆಯ ಸಿಂಚನ?

ಎಂಥ ನೆಲವೆ ನೀನು ಹಸಿರ
ಮೂಲದ ತಂಪು ಝರಿಯೆ!
ಮಧುರ ಫ಼ಲವೇ ಮೆಲ್ಲೆ
ಸಿಹಿ ಭಾವ ಭರಿತ ತೆನೆಯೆ!

ಕೋಪ ಶೀತಲ ಶಿಲೆಯ
ಮಾತಿನುಳಿಯಲಿ ತೀಡು!
ಪ್ರೇಮ ಮೂರುತಿ ಕಡೆದು
ಎದೆಯ ಮಂದಿರ ಮಾಡು!

ನೀ ಸನಿಹವಾದರೆ ನಲ್ಲೆ
ವಿರಹ ನೆನೆ ಸಿಹಿ ಕಬ್ಬ ಜಲ್ಲೆ!

– ಅನಂತ ರಮೇಶ್

(ಚಿತ್ರ: Pixabay)

(Published in kannada.pratiipi. Link address: https://kannada.pratilipi.com/story/%E0%B2%AC%E0%B2%BF%E0%B2%A1%E0%B3%81-%E0%B2%AE%E0%B3%8C%E0%B2%A8-ZxEPzymoF6IA)

Advertisements

ನರನ ನೆರಳು

 

Naraneralu

ರಸ್ತೆ ಬದಿ ಬಣ್ಣ ಕಳಕೊಂಡ ಸೀರೆಯಲ್ಲಿ
ಬೇಡುವ ಮ್ಲಾನ ಹೆಂಗಸ ಮಡಿಲ ಸುಖ
ನಿದ್ರೆಯ ಮಗು – ಹಾಯ್ವ ಶಂಕೆಯ ನೆರಳು

ರಾತ್ರಿ ಅಲ್ಲಲ್ಲಿ ಪೊಲೀಸರ ಕಳ್ಳ ನಗು
ಕಾಣಿಸದು – ಮನೆ ದಾರಿ ಬಲುದೂರ
ರಸ್ತೆಯುದ್ದ ಬೆಚ್ಚಿಸುವ ನಗೆಯ ನೆರಳು!

ಅಕ್ರಮದಲ್ಲೆದ್ದ ಬಡಾವಣೆಗಳಲ್ಲಿ ಬೀದಿ
ನಾಯಿಗಳಗಟ್ಟಿನೂಳು – ಸಾತ್ವಿಕನ ನಡೆಗೆ
ಸಾಕಿದ ದಂಡು ತಳಿನಾಯಿಗಳ ಬೊಗಳು!

ಮಗು ಕೈಗೆ ಮೊಬೈಲು ಯೌವನದ ವಿರತಿ
ಮುದಿಯಲ್ಲಿ ನಿರ್ಲಜ್ಜೋತ್ಸಾಹ
ವಿದ್ಯಾಲಯಗಳ ಗೋಡೆ – ವಿಕೃತ ನೆರಳು

ಚಿಕ್ಕ ಕಾಹಿಲೆಗೆ ದೊಡ್ಡ ವೈದ್ಯರುಗಳ
ಮೃದು ಶಸ್ತ್ರಚಿಕಿತ್ಸೆ – ಹೊಲಿಗೆ ಹಾಕುವಾಗ
ನಂಬಿಕೆಗಳ ಮೇಲೆ ಬರೆಯ ನೆರಳು

ವೀಣೆಯ ತಂತಿ ಮೃದಂಗ ಚರ್ಮ
ಪಿಟೀಲಿನ ಕಡ್ಡಿ ಚಲಿಸುವ ಕೈಗಳು
ಕಂಪಿತ ಸ್ವರ ತಪ್ಪಿ ಸಾಧನೆಗೆ ಜಡ್ಡು ನೆರಳು

ಭಕ್ತಿ ಜಗಜಗಿಸಿ ಕಣ್ಣು ಶಿರಕ್ಕೆ ತಾಕಿಸಿದಾರತಿ
ಕಾಣಿಕೆ ಭಂಡಾರಕ್ಕೆ ಸೆಳೆವ ಸಣ್ಣ ರಂಧ್ರ
ದೇವರೆದುರು ಸಾಷ್ಟಾಂಗ ಸ್ವಾರ್ಥ ನೆರಳು!

ಅಳಿದ ರಾಜರ ಛಾಯೆಯಲಿ ಮನುವ ಹಳಿವ
ಮೇಧಾವಿ ದಂಡು – ಆಳುವ ಹಳಿ ಹಿಡಿದು
ನಿರಂತರದ ಜಿದ್ದಿನ ತುಳಿತದ ನೆರಳು!

ಅರ್ಧ ಬಿತ್ತಿದ ಹೊಲ ಕಳೆದುಹೋದ ಕಾಲ
ಸೂರ್ಯ ಕಾದ ಉರುವಲು – ಪ್ರಕೃತಿಗೆ
ಕಾಡುವ ನರನ ಅಪ್ರಬುದ್ಧತೆಯ ನೆರಳು

(ಚಿತ್ರ: Pixabay)

Neralu

(ಕನ್ನಡ ಪ್ರತಿಲಿಪಿಯಲ್ಲಿ ಪ್ರಕಟಿತ: https://kannada.pratilipi.com/story/%E0%B2%A8%E0%B2%B0%E0%B2%A8-%E0%B2%A8%E0%B3%86%E0%B2%B0%E0%B2%B3%E0%B3%81-tKNIfh81rtKB)