Modi – ಮೋಡಿ

modi1

ಲಕ್ಷ ಲಕ್ಷ ಕೈಗಳು ತಮ್ಮ ಬೀಸುವಿಕೆಯನ್ನು
ಬಿರುಗಾಳಿಯಾಗಿಸಿ ಹಾರಿಸಿದರು
ಏರ ಬಯಸಿದವರನ್ನು ತೇರನೇರುವವರನ್ನು.

ತೀರದಲ್ಲಿರುವವರು ಕೂಗಿದರು, ’ನಡೆಸಿರೀಗ ಹಡಗ’

ಕುತೂಹಲಗಳಲ್ಲೂ ಆಸೆ ಆರಿರಲಿಲ್ಲ
ಮೋಡಿ ಮಾಡಿದವನ ಹೆಜ್ಜೆ
ದುರ್ಬೀನಿನಲ್ಲಿ ಕಾಣುತ್ತ
ಎಡವಿ ಎಡವಟ್ಟು ಮಾಡಿಬಿಟ್ಟಾನೇನೋ
ಎಂದು ಎದೆಗಳಲ್ಲಿ ಡವಡವಿಸಿದರು

ಎಡವಿ ಕೆಡವಿದನೇನೋ ಅನುಮಾನ… ಅರೆಕ್ಷಣ
ಸಾಷ್ಟಾಂಗ ನಮಸ್ಕಾರಕ್ಕೆ ತಂದುಬಿಟ್ಟ ಸಮ್ಮಾನ
ಪ್ರಜೆಗೆ ಹಚ್ಚಿದ ಪ್ರಭುತ್ವದ ತಿಲಕ !

ಅಪಾತ್ರವಾಗುವ ಪದವಿಯ ಬಗೆಗಿನ ಭಯದವರು
ಸ್ತಂಭಿತರಾಗಿ ಕುಸಿಯುತ್ತಾ ಕುಣಿವ ಆಸೆಗಳಾದರು

ಅದೋ ಅದು ಯಾವ ಗದ್ಗದಿತ ಧ್ವನಿ
ಬೇರುಗಳ ಸ್ಮರಿಸಿದ ದಣಿವಿರದ ಬನಿ
ಹಸಿದವರ ಹಕ್ಕು ಪ್ರತಿಪಾದಿಸಿದ ಖನಿ

ಕೃಪೆಯೆಂಬ ಪದ ಎದೆಯಾಳದಿಂದ
ಸೇವಕ ಕಂಠದಿಂದ ಕೊನರಿಸಿದ್ದೇ ತಡ
ಮತ ಮಥನಿಸಿ ಕಾದವರ ಕಣ್ಣಾಲಿಗಳಲ್ಲಿ
ಸಂಚಯಿಸಿತು ಅಮೃತದ ಹನಿ

ಸಭ್ಯವಾಗೇ ಸಾಗಲಿನ್ನೂ ಸಭೆ
ತೀರದಲ್ಲಿನ್ನೂ ಇದ್ದಾರೆ ಶೋಷಿತರು ಪೀಡಿತರು
ಹಡಗ ನಡೆಯಿಸಿ ಬೇಗ ಸೇರಲದು ಹೊಸಲೋಕ

( ೨೦.೦೫.೨೦೧೪ ರ ಭಾಜಪ ಸಂಸದೀಯ ಸಭೆಯ ಚಿತ್ರಣದ ಸಾಲುಗಳು)

ಆ – ಕೃತಿ

art1” ಏನು ಬರೆಯುತ್ತೀಯೊ ಮಹರಾಯ
ಪೈಜಾಮ ಜುಬ್ಬವಿಲ್ಲ ಜೋಳಿಗೆ ಇಲ್ಲ
ಗಡ್ಡವಿಲ್ಲ ಕಣ್ಣಗುಡ್ಡೆಗೆ ಕನ್ನಡಕವಿಲ್ಲ
ಕಾಲಿಗೆ ಹವಾಯಿ ಹವಾ ಬಿಟ್ಟ ಸೈಕಲಿಲ್ಲ
ಒಟ್ಟಾರೆ ನಿನ್ನ ನೋಟವೇ ಸರಿಯಿಲ್ಲ ”
ಕಟು ವಿಮರ್ಶೆ ನನ್ನ ಆ –
ಕೃತಿಯ ಬಗೆಗೆ ಗೆಳೆಯನಿಂದ.

ಲಾಭ

12

ಏನನ್ನೋ ಹೊತ್ತು ಖುಷಿಯಲ್ಲಿ ಹೋದ

ರದ್ದಿ ಹುಡುಗನ ಸುದ್ದಿ ಏನೆಂದೆ

ಗೂಡಿನೊಳಗೆ ಗಿಡುಗಿದ್ದ ನಿಮ್ಮ ರಾಶಿ

ಕವಿತೆಗಳ ಕಟ್ಟು ಕೊಟ್ಟು ಎಷ್ಟು ಕೊಡುತ್ತೀಯ

ಕೇಳಿದ್ದಕ್ಕೆ ಕೊಟ್ಟ ಇದೋ

ನೂರಹತ್ತರಮೇಲೊಂದು ಅಂದಳು

ನಷ್ಟವಾಗದಂತಿರಿಸುವುದು ಮಡದಿಗಷ್ಟೇ ಗೊತ್ತು

ತೂರಿಬಿಡು

ಮಧ್ಯಾನ್ಹ ಮನೆಗೆ ಬಂದೆ
ಹೊರ ಅಂಗಳದಲ್ಲಿ ಬಿಸಿಲಿಗೆ ಒಣ ಹಾಕಿದ್ದರು
ಅಮ್ಮ ಏನದು? ಕೇಳಿದೆ
ನಿನ್ನ ಕವಿತೆಗಳು
ಮುಗ್ಗಲಾಗಿಬಿಟ್ಟಿವೆ ಅಂದಳು
ಅವಳು ಬೆಳೆಸಿದ್ದನ್ನು ಮುಗ್ಗಲಾಗುವುದ ಸಹಿಸಳು
ಅಂದೆ: ಜೊಳ್ಳಿದ್ದರೆ ತೂರಿಬಿಡು

ವಿರಮಿಸುವ ಹೃದಯಕ್ಕೆ

krishna

ಯಾವ ಹೃದಯಗಳಲ್ಲಿ ಪ್ರೀತಿ ಅರಳದಿರದು
ಪ್ರೇಮಾ ವರ್ಷಗಳು ಸುರಿಯದಿರದು ಹೇಳು
ನನ್ನ ಮನಸ್ಸಿನ ತಹತಹಿಕೆ ನೀನಾಗಿರುವಾಗ
ನೀನಾವ ಬಯಕೆಯ ಬಲೆಗೆ ಬಿದ್ದವಳು ?

ಪ್ರೇಮಾಧಾರೆಗೆ ಬಿರಿದ ನೆಲದಂತೆ ಬಾಯ್ತೆರೆವ ನಿನಗೆ
ಹರಿಸಿಬಿಟ್ಟಿದ್ದೇನೆ ಒಲವಿನ ಝರಿಯ ತೊರೆ
ಆದರೆ ತೃಪ್ತಿಯ ನೆಲದಿಂದ ಅರಳಿಸುತ್ತಿಲ್ಲವೇಕೆ
ನೀ ಹಸಿರು ಹಾಗೇ ಮುಖದ ತುಂಬಾ ಹೂ ನಗೆ ?

ನಾನು ಸುರಿಸುವ ಮುತ್ತುಗಳ ಪೋಣಿಸುತ್ತಿಲ್ಲವೇಕೆ
ಧ್ವನಿಸುತ್ತಿರುವ ರಾಗಕ್ಕೆ ಶೃತಿ ಹಿಡಿಯುತ್ತಿಲ್ಲವೇಕೆ
ನನ್ನ ಮಾತುಗಳ ಪ್ರತಿಕ್ರಿಯೆ ವಿರಾಗದತ್ತಲೆಯೇಕೆ
ಆಲಾಪಗಳು ಅಪಾತ್ರ ವಿಲಾಪಗಳಾಗಿವೆ ಹೇಗೆ ?

ಗಾಳಿ ಬೀಸುವಲ್ಲಿ ಛಳಿಯ ತೀಡುವಿಕೆಯಲ್ಲಿ
ಬಿಸಿಯ ಉಸಿರಿನ ಆಪ್ಯಾಯತೆ ತಿಳಿದಿಲ್ಲವೇಕೆ
ನಸು ಕೋಪ ತಣಿಸುವ ನನ್ನ ಬಿಗಿ ಬಂಧನದೊಳಗೆ
ನುಸುಳುವ ನಿನ್ನ ಬೆರಳುಗಳಲ್ಲಿ ಆಯಾಸವೇಕೆ ?

ಸ್ವಾರ್ಥಕ್ಕಿರಬಹುದು ಗೆಳತಿ ಈ ಪ್ರೀತಿಯ ಪ್ರಣತಿ
ನಿನ್ನಾಳಕ್ಕಿಳಿವ ಪ್ರಯತ್ನಗಳ ತಾಲೀಮಿನಲ್ಲಿ
ನಿನ್ನ ಅಸ್ಪಷ್ಟ ಕೊಡಕೊಳ್ಳುವ ಯತ್ನಗಳೇ ಸ್ಫೂರ್ತಿ
ಹಾಗೆಯೇ ಅವು ಎರಡೊಂದೆನ್ನುವ ಸೂಕ್ತಿ

ಪುಟಿವ ಚೇತನವಿದ್ದಲ್ಲಿ ಚೆಂಡು ಎಸೆವ ಉತ್ಸುಕತೆ
ಕುಣಿವ ಜಾಣ್ಮೆ ಇರುವಲ್ಲಿ ನೃತ್ಯಗಾರಿಕೆ ತೊಡುಗೆ
ಸೂಕ್ಷ್ಮತೆಗಷ್ಟೇ ಸ್ಪಂದನದ ಎಳೆ, ಈಗ ವಿರಮಿಸುವ
ನಿನ್ನ ಹೃದಯಕ್ಕೆ ಅನಂತ ವ್ಯಥೆವಾಕ್ಯಗಳೇ ಕೊಡುಗೆ

ಸಹನೆ ಹಾಡು

Budh

ಸಹನೆಯೆಂಬುವ ದಾರಿ ಹಿಡಿಯುವ

ಸಹನೆ ಹಾದಿಲಿ ನಡೆಯುವ

ನಡೆವ ಪಾದಕೆ ತೊಡರುವ
ಒರಟು ಕಲ್ಲಿಗೆ ಶಪಿಸದೆ
ಓಡುವಾತನ ವೇಗಕೆ
ತಡೆಹಿಡಿವ ತಂಟೆಗೆ ತೊಡಗದೆ
ಆಮೆ ವೇಗಿಗೆ ಗೆಲುವು ಕೂಗಿ
ಜಿಂಕೆ ಓಟಕೆ ಜಯಕಾರ ಹಾಕಿ
ಆರಾಮದವರಿಗೆ ಹಾರೈಸುವ
ಸಹನೆ ಮೆರೆಯುವ

ಎಡೆಬಿಡದ ಗಡಿಬಿಡಿ ದೂಡಿಸಿ
ಶಾಂತಿ ಮಂತ್ರ ಹನಿಯಾಗಿಸಿ
ಹಾಡುವವರಿಗೆ ಕಿವಿಯಾಗಿಸಿ
ಆಡುವವರಿಗೆ ಗೆಜ್ಜೆ ಹಾಕಿಸಿ
ಮನಸುಗಳ ಕೊನರಿಸಿ
ಆಸೆ ಆಮಿಷ ತಳ್ಳಿ ಬಿಡುವ
ಸಹನೆ ನಮ್ಮೊಳೆ ತುಂಬುವ

ಒರಟು ಮಾತಿಗೆ ಕಿವಿಯಾಗದೆ
ಒಲವ ಧ್ವನಿಗೆ ಒರಟನಾಗದೆ
ಒಡನಾಡುವರ ತುಂಬಾ
ಸಡಗರ ಸಂಭ್ರಮ ಹರಿಯಿಸಿ
ಹಾಳು ಮಾತಿಗೆ ದೂರ ಸರಿದು
ಹಸನ ಹದಕ್ಕೆ ಹೃದಯ ತೆರೆದು
ಸಹನೆ ಬೆಳೆಸುವ

ರೋಧನದ ರುದ್ರತೆಯಲ್ಲಿ
ಸ್ಮಿತದ ಸ್ಥಿರತೆಗೆ ಅಣಿಯಾಗುವ
ಸೋಲೆಂಬ ಸಾಲಿನಲ್ಲಿ
ಜಯದ ತಾಲೀಮು ನಡೆಸುವ
ಅಸಹಾಯ ನೆನ್ನದೆ
ಸಹಿಷ್ಣು ನನ್ನೆದೆ ಎನ್ನುವ
ಕೃದ್ಧನಾಗದೆ ಕೃಷ್ಣನಾಗುವ
ಸಹಜತೆಯ ಬುದ್ಧನಾಗುವ
ನಿಜದ ನಡೆನುಡಿ ಮೆರೆಯುವ