ವಿಜಯದಶಮಿ

ನವ ದಿನಗಳು ಶ್ರೀ ದುರ್ಗೆಗೆ
ಪೂಜಾರ್ಚನೆ ಹೋಮ
ಜನರೆಲ್ಲರ ನಡೆ ನುಡಿಯಲಿ
ಪ್ರೇಮ, ಭಕ್ತಿಯ ನೇಮ

ನಡೆ ದಶಮಿಗೆ ನವಪಥಕೆ
ಕ್ಲೇಶ ದೂಡಿ ಹೊರಗೆ
ವಿಜಯ ಸೂಚಿಸೆ ಮೆರವಣಿಗೆ
ಇಂದು ನಾಡ ದೇವಿಗೆ

ಗೋವು

(ಹೈಕು)


ಅವಿನಾಭಾವ
ಗೋವುಗಳ ಸಂಬಂಧ
ಭಾರತ ಕಥೆ


ರಸ್ತೆ ನಡುವೆ
ಅಳವಡಿಸಿದ್ದೇನು?
ಸ್ಪೀಡ್ಬ್ರೇಕು ‘ಧೇನು!’


ಗೋವಿನ ಬಳಿ
ಮನೋದ್ವೇಗ ಶಮನ
ಸ್ಪರ್ಷ ಮಾತ್ರೇಣ


ಗೋವುಗಳಲ್ಲಿ
ನಲಿದು ಹೊಮ್ಮಿಸಿದ
ಗೋವಿಂದ ನಾದ


ಮಾತೆ ಅವಳು
ಕ್ಷೀರ ಧಾರೆಯಾದಳು
ಬೆಳೆದ ನಾವು


ಕುಹಕ ಬಿಡಿ
ಗೋವಿನ ಕಳಕಳಿ
ನಮ್ಮ ಸಂಸ್ಕೃತಿ


ಆಕಳ ಹಾಲು
ಸೇವಿಸದೆ ಹಸುಳೆ
ಬೆಳೆದೀತೇನು?


ತಟ್ಟಿ ಬೆರಣಿ
ಒಲೆ ಉರಿಸಿದೆವು
ಸಿರಿ ಮರೆವು


ಎಡ-ತಾಕಿಯೂ
ಬಲ-ವಾದ ಮಾಡುವೆ
ನಮಗೆ ಗೋವೇ!

೧೦
ತಪ್ಪು ಸಹಜ
ಕ್ಷಮಿಸು ಪುಣ್ಯಕೋಟಿ
ವ್ಯಾಘ್ರ ತಳಿಯ

(Pic courtesy:Google)

ಲಾಲ್ ಬಹದ್ದೂರ್ ಶಾಸ್ತ್ರಿ

ಮುಂದೆ ಯಾರೆಂದಾಗ
ಬಂದ ವಾಮನ ಮೂರ್ತಿ
ಭರತ ಖಂಡಕೆ ತಂದ
ಅಚ್ಚಳಿಯದ ಕೀರ್ತಿ – ಲಾಲ್ ಬಹದ್ದೂರ್ ಶಾಸ್ತ್ರಿ

ಸುಭಾಷರ ಬಳಿಕ
ಕ್ಷಾತ್ರ ತೇಜದ ಬೆಳಕ
ಭಾರತದ ಉದ್ದಗಲ
ಹಚ್ಚಿದ ಹರಿಕಾರ – ವೀರ ಲಾಲ್ ಬಹದ್ದೂರ

ಒಳಹೊರ ಶತ್ರುಗಳ
ಥರಗುಟ್ಟಿಸಿದ ಧೀರ
ಪಾಕ್ ಪಾತಕಿಗಳಿಗೆ
ಮಾಡಿದನು ಶಾಸ್ತಿ – ಲಾಲ್ ಬಹದ್ದೂರ ಶಾಸ್ತ್ರಿ

ಸೈನಿಕರಿಗೆ ರೈತರಿಗೆ
ಹೆಮ್ಮೆ ಉಕ್ಕಿಸಿದಾತ
ಎಲ್ಲರಲಿ ಸ್ಫುರಿಸಿದ
ಸ್ವಾಭಿಮಾನದ ಪಾಠ – ನಮ್ಮ ಲಾಲ್ ಬಹದ್ದೂರ 

ಗದ್ಯವೆ ಅಥವಾ ಪದ್ಯವೆ?

ಎರೆಡರ ನಡುವೆ ನಾ
ಎತ್ತ ಸರಿಯಲಿ?
ನಲ್ಲೆಯರಂತೆ ಇಬ್ಬರು
ನಾನು ವಿಚಲಿ!
ಗದ್ಯವೇ ಪದ್ಯವೇ
ಕತೆಯೇ ಕವಿತೆಯೇ
ಯಾರನ್ನು ನಾ ಅನುಸರಿಸಲಿ?

ಕತೆ
ಕರೆಯುತ್ತಿದೆ ಬಾ
ಇಬ್ಬರೂ ಸೇರಿ ಕಟ್ಟೋಣ
ದೀರ್ಘವೂ ಗಟ್ಟಿಯೂ
ಸ್ಮರಣೀಯ ತಾಣ

ಕವಿತೆ
ಮೆಲ್ಲನುಸುರಿದೆ ಬಾ
ಕೈಯಲ್ಲಿ ಕೈಹಿಡಿದು
ನಡೆಯೋಣ ದೂರ
ಕಳೆದುಹೋಗೋಣ
ವಿಸ್ಮಯದ
ರಮ್ಯ ಭಾವದಲ್ಲಿ
ಕೆಲವಾದರೂ ಕ್ಷಣ!

(ಕತೆಗಾರ್ತಿ, ಕವಯಿತ್ರಿ ಲ್ಯಾಂಗ್ ಲಿಯವ್
(Lang Leav) quote ಒಂದರ ಭಾವಾನುವಾದ)

(Pic courtesy-Pixabay)

ಜನ್ಮದಿನದ ಶುಭಾಶಯ

ಎಲ್ಲ ಹುಟ್ಟೂ ಸಾಮಾನ್ಯ
ಅಸಾಮಾನ್ಯತೆಯೆಂದರೆ
ಬೆಳೆದು ಮುಂದಿಡುವ ಹೆಜ್ಜೆಗಳಲ್ಲಿ ‌
ದೃಢತೆ ಸಡಿಲಗೊಳ್ಳದಿರುವುದರಲ್ಲಿ
ದೃಷ್ಟಿ ಸ್ಪಷ್ಟತೆ ತೊರೆಯದಿರುವುದರಲ್ಲಿ
ಜರಿವ ಬಿರುಕುಗಳ ಮುಚ್ಚಿ
ಶಿಥಿಲತೆಯಳಿಸಿ ಹೆಮ್ಮೆಯಾಲಯ
ನಮ್ಮೊಳಗೆ ನಿಲ್ಲಿಸುವುದರಲ್ಲಿ
ಮಣ್ಣ ಮರೆಯದಿರುವುದರಲ್ಲಿ
ನಿಂತ ನೆಲ ಮೆರೆಸುವುದರಲ್ಲಿ

ನಾಯಕ ಸಾಗಲಿ
ನೊಂದವರ ಬೆಂದವರ ಕಡೆಗೆ
ನಿಡುಗೈ ಇರಲಿ ಚೇತೋಹಾರಿಗೆ

ಇರಲಿ ಹೀಗೇ ಅವನ ನಡಿಗೆ
ಕಾರ್ಯ ಕಾಣಲಿ ಸಫಲತೆ
ಜನರ ಹರಕೆಯ ಮೋಡಿಗೆ
ಬೆಳಕು ಸುರಿಯಲಿ ಬಾಳಿಗೆ
ದೊರಕಲಿನ್ನೂ ಸೇವೆ ನಾಡಿಗೆ

(Pic from Google)

ಈ ನೆಲದ ಹಸಿರು

ಬುದ್ಧಿ ಜೀವಿಗಳು
ಬೊಬ್ಬೆ ಹೊಡೆದರೂ
ಹಬ್ಬಗಳಾಚರಣೆ ನಿಲ್ಲದು
“ಮರಳುಗಾಡಲ್ಲಿ ಹುಟ್ಟಿದ
ಒಣಹುಲ್ಲ ಬೋಧ (!?)”
ಸಮೃದ್ಧ ಹಸಿರಿಗೆ ಪಾಠ
ಹೇಳುವ ಪರಿಪಾಠ
ನಡೆದೇ ಇದೆ ತ್ರಿಶಂಕುಗಳದು!!

(Pic:Google)

ವ್ಯರ್ಥವಾಗೆನು

ಹಸಿರೆಲೆಗಳ ಹೊದಿಕೆಮಾಡಿ
ಉಸಿರ ಗಾಳಿ ಸಂಗ ಮಾಡಿ
ಸುಖದಿ ತೂಗಿ ಮೈಯ ಹರಡಿ
ಮಲೆತ ಸೆಳೆತಗಳೇನಾದವು?

ಹಕ್ಕಿ ಹುಳು ಹುಪ್ಪಟ
ಸಂಗ ಬಯಸಿ ಆಶ್ರಯ
ಪಡೆದ ಇಬ್ಬಗೆ ಸಾರ್ಥಕ
ಮೆರೆದ ದಿನಗಳೇನಾದವು?

ಬೇರು ತಪ್ಪಿ ಕಪ್ಪಾದೆನೆಂದು
ಸಾವು ರೆಂಬೆಗಳನಪ್ಪಿತೆಂದು
ಹಸಿರು ಹೆದರಿ ಹೋಯಿತೆಂದು
ತೊರೆದುಬಿಟ್ಟರೆ ಎಲ್ಲರಿಂದು?

ಆಗಬಾರದು ಹುಟ್ಟು ವ್ಯರ್ಥ
ಮನುಜನಿದ್ದಾನೆ ನೀಡೆ ಅರ್ಥ!
ತರಲಿ ಗರಗಸ ಕೊಡಲಿಯನ್ನು
ತರಿದು ಬುಡ ಛಿದ್ರಗೊಳ್ಳಲಿನ್ನು!

ನನ್ನ ಎಲ್ಲ ಅಂಗಾಂಗವೂ
ಮನುಜನ ಉಪಕರಣವಾಗಲಿ
ಉಳಿದವೆಲ್ಲವು ಉರುವಲಾಗಲಿ
ನನ್ನಿರುವು ಉಸಿರಜೊತೆಯಲಿ ಸಾಗಲಿ

(Pic courtesy:Pixabay)

ಸಂಕಟಹರ

ಗಜಾನನ ಶ್ರೀ ಗಜಾನನ
ಪಾರ್ವತಿ ತನಯ ಗಜಾನನ

ಅಂಟಿನ ಮಣ್ಣಿನ ಗಣಪನೆ
ಚೌತಿಗೆ ಬರುವಾ ಚೆಲುವನೆ
ಭಕ್ತರ ಮನೆ ಬೆಳಗುವನೆ
ಬಾಳ ಬೆಳಕ ಬಾಂಧವನೆ

ಸೊಂಟಕೆ ಸುತ್ತಿ ಸರ್ಪವನೆ
ಸಂಕಟ ಹರಿಸುವ ಮಹಿಮನೆ
ವ್ಯಾಸರು ನುಡಿದ ಭಾರತಕೆ
ಲೇಖನಿ ಹಿಡಿದು ಬರೆದವನೆ

ಮೂರು ಲೋಕದ ಮಹಿಮೆಯನೆ
ಮಾತಾಪಿತರಲಿ ಕಂಡವನೆ
ಮುರಿದ ದಂತ ಕತೆಯಾದವನೆ
ಮದಾಸುರನಾ ಕೊಂದವನೆ

ಅಮ್ಮನ ಪ್ರೀತಿಗೆ ಪಾತ್ರನೆ
ಸ್ಕಂದನೊಡನೆ ನಲಿದವನೆ
ಮುದ್ದು ಮುಖದ ಮೋಹನನೆ
ಮೋದಕ ಮೆಲ್ಲುವ ಮಹಿಮನೆ

ಶ್ರದ್ಧೆಯ ಓದಿಗೆ ಬೆಂಬಲನೆ
ಒಳ್ಳೆಯ ಬುದ್ಧಿಗೆ ಹರಸುವನೆ
ಶ್ರಮಕ್ಕೆ ವರವಾಗುವನೆ
ಬನ್ನ ಹರಿಸು ಹೇರಂಬನೆ

ಗಣೇಶ ವಂದನೆ

ನಿರ್ಮಲ ಕೊಳದಲ್ಲಿ
ತಾವರೆ ಚೆಲುವಂತೆ
ಮನೆಯೊಳಗೆ ಸುಂದರ ಗಣಪ

ನೀಲ ನಭದಲ್ಲಿ
ತಾರೆಯು ಹೊಳೆವಂತೆ
ನಗೆ ಚೆಲ್ಲಿ ಮಿನುಗುತ ಬೆನಕ

ವೀಣೆ ನಾದದಂತೆ
ಮುರಳಿ ಗಾನದಂತೆ
ಸುಸ್ವರದಂತಿರುವ ಗಣಪ

ಚವುತಿಯ ದಿನದಲ್ಲಿ
ಭಕ್ತರ ಮನೆಯೊಳು
ಮೋದಕ ಸಿಹಿಯಂತೆ ಬೆನಕ

ಕತ್ತಲೆ ಕಳೆಯಲು
ಬೆಳಕಿನ ರವಿಯಂತೆ
ಮಣ್ಣಿನಲಿ ಹೊಮ್ಮುವ ಗಣಪ

ಬೇಡಿದರೆ ನೀಡುವ
ಹಾಡಿದರೆ ಒಲಿಯುವ
ಕಾರುಣ್ಯ ದೇವ ಕರಿಮುಖ

ವಂದನೆ ಉದ್ದಂಡ
ವಂದನೆ ಹೇರಂಬ
ವಂದನೆ ವಿಘ್ನ ನಿವಾರಕ

ತಂದೆಯಂತೆ ಬಂದು
ಬಂಧನವ ಕಳೆಯೊ
ಮಂಗಳ ಮೂರುತಿ ಗಣಪ

ಅಷ್ಟಮಿಯ ದಿನ

ಶಿಶುವೆನಿಸಿದೆ
ಸೆರೆಮನೆಯ ಹರಿದು
ಭರವಸೆಯ ಆಸೆ ಬೆಳಗಿದೆ

ತಿಳಿಗೊಳದೆ
ವಿಷಸುರಿವ ಸರ್ಪದ
ಘನ ಶಿರವ ಮರ್ದಿಸಿದೆ

ಅರಸುತನದೆ
ದುರುಳತನ ಮೆರೆದ
ಮಾವನನೆ ಹರಣವಾಗಿಸಿದೆ

ಮುರಳಿ ಗಾನದೆ
ಪ್ರೇಮಸುಧೆ ಹರಿಸಿ
ತರಳೆಯರ ಮನ ಅಪಹರಿಸಿದೆ

ಗೋವುಗಳ ಹಿಂಡ
ನಡುವೆ ನಲಿದು
ಭೂಪಾಲರ ದಂಡ ಮಣಿಸಿದೆ

ಗೀತೆ ಅರುಹಿದೆ
ಕರ್ಮ ನೀತಿ ಸಾರಿದೆ
ಧರ್ಮದ ದಾರಿಯ ತೋರಿದೆ

ಅಷ್ಟಮಿಗೆ ಬರುವ
ಇಷ್ಟ ದೇವನೆ ಕೃಷ್ಣ
ಕೃಪಾಕರ ದೇವದೇವನೆ ವಂದನೆ