ಇಲಿ ಮತ್ತು ಅಳಿಲು

vv1

ನೆಲದ ಬಿಲವು
ಇಲಿಯ ಮನೆ
ಮರದ ಪೊಟರೆ
ಅಳಿಲ ಕೋಣೆ

ಇಲಿಯ ಓಟ
ನೆಲದ ಮೇಲೆ
ಅಳಿಲ ಆಟ
ಮರದ ಮೇಲೆ

ಇಲಿಯ ಬಾಲ
ಬಹಳ ಸಪೂರ
ಅಳಿಲ ಬಾಲ
ಸ್ವಲ್ಪ ತೋರ

ಇಲಿಯ ಬೆನ್ನು
ಬರಿದೆ ನುಣುಪು
ಅಳಿಲಿಗೆ ಮೂರು
ಗೆರೆಗಳ ಹೊಳಪು

ಇಲಿ ಹಲ್ಲಲ್ಲಿ
ಸಿಕ್ಕಿದ್ದು ಕಚ್ಚುವ
ಅಳಿಲು ಮರದ
ಹಣ್ಣು ಮೆಲ್ಲುವ

ಇಲಿಗು ಅಳಿಲಿಗು
ಹಲ್ಲುಗಳು ಚೂಪು
ಎರಡರ ಓಟವೂ
ಬಹಳವೆ ಚುರುಕು

(ವಿಶ್ವವಾಣಿ – ವಿರಾಮದ ಮಕ್ಕಳ ಪುಟದಲ್ಲಿ ಪ್ರಕಟ ತಾ.೧೩.೦೫.೨೦೧೮)

Advertisements

ಹಳೆ ನಾಯಕ

Voting

ಇದೀಗ ಮತ್ತು ನಿತ್ಯ ಪತ್ರಿಕೆಗಳಲ್ಲಿ
ಮಾಧ್ಯಮಗಳಲ್ಲಿ ಜಾತ್ಯಾತೀತರ
ಜಾತಿ ಸಭೆಗಳಲ್ಲಿ ದುಂಡು ಮೇಜಿನಲ್ಲಿ
ಗಾಜಿನ ಲೋಟಗಳಲ್ಲಿ ತುಂಬಿದ
ಬಣ್ಣ ದ್ರವಗಳಲ್ಲಿ ಕುಂತವರಿಗೆ
ಲೊಚಗುಟ್ಟಿದ ಇದೇ ಧ್ವನಿ
ನಾಲ್ಕು ದಶಕಗಳ ಹಿಂದೆ ಕೇಳಿದ್ದರೆ
ನೀವು ತಲೆ ಅಡ್ಡಡ್ಡ ಆಡಿಸುತ್ತಿರಲಿಲ್ಲ
ಅಂತ ಆಣೆ ಇಡಬಹುದು

ಸುಖಾಸುಮ್ಮನೆ ವ್ಯಂಗ್ಯ ಬಿಟ್ಟು
ಹಳೆ ಯುಗಕ್ಕೆ ಜಾರಿ
ಈ ಯುಗಪುರುಷನ
ಪರಾಕ್ರಮ ನೆನೆಯೋಣ ಒಂದಿಷ್ಟು…

ಸಿಂಹ ಘರ್ಜನೆ ಆನೆ ಘೀಳಿನ
ಕಂಚು ಕಂಠದ ಒಟ್ಟು ಮೊತ್ತ
ಇವನ ಮಣ್ಣ ಮಾತುಗಳಲ್ಲಿತ್ತು
ಹಾರಿ ಏರಿದ ಕುದುರೆಯಿಂದಲೆ
ಎದೆಗೊದೆದು ನ್ಯಾಯ ಕೇಳುವಂತಿತ್ತು

ಆ ಠೇಂಕಾರ
ಧೂಳು ತುಂಬಿದ ರಸ್ತೆಗಳಲ್ಲಿ
ಮಿಣುಕು ದೀಪದ ಗುಡಿಸಲುಗಳಲ್ಲಿ
ಕೈಚೆಲ್ಲಿ ಕುಳಿತ ನಿಸ್ಸಹಾಯರಲ್ಲಿ
ಆಶಯದ ಗಿಡಗಳ ಚಿಗುರೊಡೆಸುತ್ತಿತ್ತು
ಆ ಧ್ವನಿ ನ್ಯಾಯ ಒದಗಿಸುವಂತಿತ್ತು

ಅದೇನಾಯಿತೆಂದರೆ

ಪ್ರಜೆಗಳು ಬೆರಳತೋರಿ
ಮಸಿ ಮೆತ್ತಿದ ಬೆರಳ ಹೊತ್ತು ಒತ್ತಿದರು
ಮೇಲೆತ್ತಿ ಕೂರಿಸಿ ಬಿಟ್ಟರು
ಓಡುವ ಸಾರೋಟಿನಲ್ಲಿ

ಒರಟು ರಸ್ತೆ ಗುಡಿಸಲುಗಳೆಲ್ಲ
ಧೂಳಲ್ಲಿ ಮುಚ್ಚಿಹೊದುವು
ಮಾರ್ಗಗಳು ತೆರೆದುಕೊಂಡುವು
ಅರಮನೆ ದ್ವಾರಗಳು ಕೈಬೀಸಿದುವು
ಹೊಳೆವ ಕೈ ರಕ್ತ ತುಂಬಿದ ಮುಖ
ಸುತ್ತ ನೆರೆದುವು ಆಸೆಗಳಿಗೆ ಜೀವ ಬಂತೆಂದು
ಹೆಮ್ಮೆಪಟ್ಟುವು ಜೈಕರಿಸಿದುವು

ಓಲೈಸಿ ಅತ್ತ ಇತ್ತ ಹಾರಿಸಿ
ಆರಿಸಿಬಿಟ್ಟುವು ಕುರ್ಚಿಗಂಟಿಸಿದುವು
ಮಾಯಾ ಚಾಟಿ ಕೈಗಿಟ್ಟವು
ಕೈಗಳ ಹೊಸಕುತ್ತಾ ಹೊಸಕುತ್ತಾ
ಹತ್ತಿರವಾದುವು ತತ್ತಿ ಇಡುವ
ಕಾಳ ಗರ್ಭಗಳಾದುವು

ನಲವತ್ತು ವಸಂತಗಳ ಅನುಭವ
ರಸ ಹೀರಿ ಪಕ್ವವಾಗಿದೆ ಧ್ವನಿ
ಅದು ಒರಟು ಅನ್ನಿಸಿದರೆ
ಕೇಳುಗರ ಲೋಪ
ಅವನ ಸುತ್ತ ಅರಾಜಕತೆ ಸಿಡಿದಂತಿದ್ದರೆ
ಅಜಾಗ್ರತ ಮಂದಿಗಿರುವ ಶಾಪ!

ಕೋಶದೊಳಗಿಂದ ಹಾರಿಬಂದ
ಬಣ್ಣ ಚಿಟ್ಟೆ ಮಧು ಹೀರುವುದು
ಮತ್ತು ಮರೆಯುವುದು
ಕುರ್ಚಿಗಂಟುವ ಕಲೆಯ ಕರಗತ
ಮಾಡಿಕೊಳ್ಳುವ ಹಾಡನುಲಿಯುವುದು
ಕಪ್ಪಕಾಣಿಕೆಗಳಿಗೆ ಲೆಕ್ಕ
ಕೇಳಿದವರ ಅಗೆದೊಗೆದು
ಬಾಯ ಮುಚ್ಚಿಸುವುದು
ನಿದ್ರೆ ನಟಿಸುವುದು

ಕಳಕೊಳ್ಳುವ ಭೀತಿಗೆ
ಹುನ್ನಾರಗಳ ಧರಿಸಿ
ಛೂ ಬಿಟ್ಟು ಚೆಲ್ಲಾಪಿಲ್ಲಿಯಾಗಿಸಿ
ಒಡೆದೊಡೆದು ಮತ ಮತಗಳ
ಅಂತರಿಸಿ ಆಂತರ್ಯದಲ್ಲಿ
ಕಳೆದದ್ದ ಕೂಡಿ
ಮೊತ್ತಕ್ಕೆ ಮುಗುಳು ನಗುವುದು!

ವರ್ಷಗಳು ಗದ್ದಲಗಳಾಗಿ ಕಳೆದೀಗ
ಕೈಮುಗಿವ ಉದ್ಯೋಗ ಮರಳಿದೆ!
ವಿಭೂತಿ ಕುಂಕುಮ ಮತ್ತೆ ಆರತಿ ಎತ್ತುವ
ಮಾತಲ್ಲಿ ಮರುಳು ಮಾಡುವ ಸಮಯ
ಸಾರೋಟು ಇಳಿದು ಹೆಜ್ಜೆಗಳೂಡಬೇಕಿದೆ

ಬರುವ ಒಂದು ದಿನ
ಬರಗೆಟ್ಟು ಅಭ್ಯಾಸವಾದ ಜನ
ಬೆರಳಿಗೆ ಹಚ್ಚೆ ಹಚ್ಚಿಸಿಕೊಳ್ಳುತ್ತ
ಭರಪೂರ ಗುಂಡಿ ಒತ್ತಿ
ಯಾರನ್ನು ಗುಂಡಾಂತರ ಮಾಡಲಿದ್ದಾರೊ?
ಸ್ವಲ್ಪದಿನ ನನ್ನೊಂದಿಗೆ
ನಾಯಕನೂ ಕಾಯಬೇಕಿದೆ!

(ಚಿತ್ರಕೃಪೆ:ಅಂತರ್ಜಾಲ)

ಬುದ್ಧ ಕೃಷಿ

buddha

ಅರಮನೆಯ ಅಂಗಳದವನು
ಕೆಸರ ಹೊಲಕ್ಕೆ ಕಾಲಿಡುವನೆ!
ನಳನಳಿಸುವ ಕಳೆಯ ಕಿತ್ತು
ಪೈರುಗಳಾರೈಕೆ ಮಾಡುವನೆ!
ಬೆಳೆದ ಬೆಳೆಯ ಚೈತನ್ಯ ಹೀರುವನೆ!

ಆದರಿವನೋ…
ಅಮೃತ ಮಹಲಿನಿಂದ ನಿವೃತ್ತಿಗೊಂಡು
ತನ್ನೊಳಗ ಹೊಲದಲ್ಲೆ ಕೃಷಿಮಾಡಿದವನು?!

ಹೆಪ್ಪುಗಟ್ಟಿದ್ದ ನಂಬಿಕೆಗಳ
ದ್ರವಿಸಿ ದೂರಿಸಿ
ಮೌಢ್ಯ ಕಳೆಗಳ ಬೇರ ಕಳಚಿ
ಕಳೆತು ರೈತನಾದವನು!

ಚಿತ್ತಕ್ಕೆ ಚಿಂತನೆಯ ನೀರ
ನಿರಂತರ ಹನಿಸಿ
ಬಿಸಿಯುಣಿಸಿ ನಿಷ್ಠುರ ಸತ್ಯ
ಬೆಳೆವ ಕೃಷಿಕನಾದವನು

ಬೆಳೆದ ಚಿಂತನೆಯ ಬೆಳೆಯ
ಬಳಿ ಬಂದವರ ಹೊಲಗಳಿಗೆರಚಿ
ವಿಸ್ತರದ ಬಿತ್ತನೆಗೆ ತೊಡಗಿದವನು

ಬೆಳೆದವರು ಬೆಸೆದು
ದೆಸೆದೆಸೆಗೂ ಬುದ್ಧನುಡಿ
ಬೀಜಗಳ ಹರಡಿದರು

ಕಳೆ ಬೆಳೆಯುವುದು ನಿಂತಿಲ್ಲ
ಬುದ್ಧ ಕೃಷಿಯೂ ನಿಲ್ಲದು

buddh

(Pic courtesy: Pixabay)