ಬಣ್ಣದ ಡ್ರೆಸ್

(ಕಿರುಗತೆ)

ಅವಳಿನ್ನೂ ಪುಟ್ಟ ಹುಡುಗಿ.  ಅಪ್ಪ ಸೈನಿಕ.  ದೂರದ ಗಡಿಯಲ್ಲಿ ಕೆಲಸ. 

ಕಳೆದ ವಾರವಷ್ಟೇ ಸ್ಕೈಪಲ್ಲಿ ಬಂದು ಮಗಳೊಡನೆ ಬಹಳ ಹೊತ್ತು ಮಾತಾಡಿದ್ದ.  ʼಪುಟ್ಟಿ,  ಮುಂದಿನ ತಿಂಗಳು ನಾನು ಬರುತ್ತೇನೆ. ನೀನು ಶಾಲೆಗೆ ಚಕ್ಕರ್‌ ಹೊಡೆಯಬಾರದು.  ಕ್ಲಾಸಲ್ಲಿ ತಂಟೆ ಮಾಡಬಾರದು.  ಚೆನ್ನಾಗಿ ಓದಬೇಕು.    ಅಮ್ಮನಿಗೆ  ಹಠ ಮಾಡಿ ತೊಂದರೆ ಕೊಡಬಾರದು.  ನಾನು ಬರುವಾಗ  ನಿನಗೆ ಒಳ್ಳೆಯ ಮೂರು ಬಣ್ಣದ ಡ್ರೆಸ್‌ ತರುತ್ತೇನೆʼ ಎಂದಿದ್ದ.  ಮಗಳಿಗೆ ಖುಷಿಯೋ ಖುಷಿ.  ಅಪ್ಪ ತರುವ ಬಣ್ಣ ಬಣ್ಣಗಳ ಉಡುಗೆಯ ಕನಸು.

ತಿಂಗಳ ಕೊನೆಯಲ್ಲಿ ಅಪ್ಪನ ದೇಹವನ್ನು ಮನೆಗೆ ತಂದರು.   ನಂತರ ಮಿಲಿಟರಿ ಮರ್ಯಾದೆಯೊಡನೆ ಅಂತಿಮ ಕಾರ್ಯಕ್ಕೆ ಅಣಿಮಾಡಲು ಕೊಂಡೊಯ್ದರು. 

ಏನೂ ಅರಿಯದ ಪುಟ್ಟ ಮಗಳು ಅಂತಿಮ ಸಂಸ್ಕಾರದ ಸಮಯ, ಅಪ್ಪನ ದೇಹ ತಂದ ಸೈನಿಕನೊಬ್ಬನ ಬಳಿ ಮೆಲು ಧ್ವನಿಯಲ್ಲಿ ಕೇಳಿದಳು, ʼಅಪ್ಪ ಯಾಕೋ ಇನ್ನೂ ಮಲಗಿದ್ದಾರೆ.  ಅವರು ನನಗೆ ಮೂರು ಬಣ್ಣದ ಡ್ರೆಸ್‌  ತರ್ತೀನಿ ಅಂದಿದ್ದರು.  ತಂದಿದ್ದಾರಾ ಅಂಕಲ್?ʼ

ಸೈನಿಕ ಅವಳನ್ನು ಅಪ್ಪನ ದೇಹದ ಬಳಿ ಕೊಂಡೊಯ್ದ,  ಅದರ ಮೇಲೆ ಹೊದಿಸಿದ್ದ ಧ್ವಜ ತೆಗೆದು ಮಡಚಿ ಅವಳ ಕೈಯಲ್ಲಿಟ್ಟು ಹೇಳಿದ  ʼಮಗೂ. ಈ ಧ್ವಜವನ್ನು ಎತ್ತಿ ಹಿಡಿಯಲು ನಿನ್ನ ಅಪ್ಪ ಹೋರಾಡಿದ್ದಾರೆ ಗೊತ್ತಾ?   ಅದರ ನೆನಪಿಗೆ ಇದನ್ನು ನಿನ್ನ ಬಳಿ ಇಟ್ಟುಕೊ.  ಇದು ನಿನ್ನ ಬಳಿ ಇದ್ದರೆ ಅಪ್ಪನಿಗೆ ತುಂಬಾ ಖುಷಿಯಾಗುತ್ತದೆ.ʼ 

ಸೈನಿಕನ ಮಾತು ಅವಳಿಗೆ ಅಷ್ಟಾಗಿ ಅರ್ಥವಾಗಲಿಲ್ಲ.  ಧ್ವಜದ ಕೇಸರಿ, ಬಿಳಿ, ಹಸಿರಿನ ಮೂರು ಬಣ್ಣಗಳು  ಅವಳ ಮನಸ್ಸು ಹೊಕ್ಕಿತು. 

ತನ್ನ ಪುಟ್ಟ ಮಗಳ ಭವಿಷ್ಯವೂ ತ್ರಿವರ್ಣ ಧ್ವಜದ ರಕ್ಷಣೆಗೇ  ಮುಡಿಪು ಎಂದು ಅಲ್ಲಿ ಮೌನದಲ್ಲಿ ಕುಳಿತ ತಾಯಿ ಹೃದಯ ನಿರ್ಧರಿಸಿತು. 

(Pic : Google)

ಬುದ್ಧ – ನುಡಿ

ಹಳತನು ಸುಟ್ಟು
ಹೊಸತಿಗೆ ಹುಟ್ಟು 
ಹಾಕಿದ ಕ್ರಾಂತಿಕಾರ

ಹಾದಿಯ ಅರಸು
ನೀನೇ ಗಮಿಸು
ನುಡಿಗಳ ಹರಿಕಾರ

ಶಾಂತಿ ನೆಮ್ಮದಿ 
ಹೃದಯದ ಬೆಳೆ  
ಬಿತ್ತಿದ ಬೆಳೆಗಾರ

ಮೆಟ್ಟುವ ಸೋಲನು
ಮೆಟ್ಟಿಲಾಗಿಸು
ಅಂದ ಧೈರ್ಯದಾತ

ತಿಳಿವಿನ ಸುಧೆಯಲಿ
ತಮಂಧವ ದೂಡಿ
ದಾರಿ ತೋರಿದಾತ 

ಅವಲೋಹ

ವಾಟ್ಸ್ಆ್ಯಪ್ ಮೆಸೇಜು ನೂರು
ಫೇಸ್ಬುಕ್, ಇನ್ ಸ್ಟಾ,  ಕೂ
ಯುವರ್ ಕೋಟ್, ಟ್ವೀಟು
ಬಿಡದೇ ನೋಡು ನೂರಾರು
ಪ್ರೈಮ್ ಟೈಮ್‌,ನೆಟ್ ಫ್ಲಿಕ್ಸ್ 
ಯುಟ್ಯೂಬ್, ಶೇರ್‌ ಚಾಟು
ಪೇಪರ್ ಓದು ಹೆದರು
ಟಿವಿ ನ್ಯೂಸು ಬರೀ ದೂರು
ಧಾರಾವಾಹಿ ಎಳೆ ಐದಾರು
ಗೆಳೆಯರ ಫೋನು ಹತ್ತಾರು
ಸೂರ್ಯ ಎದ್ದು ಮುಳುಗಿ
ದ ಮೇಲೂ ಬೇಕು ತಾಸು ಆರು
ಚಿತ್ತ ಸುದ್ದಿ ಸಂಗ್ರಹ
ಭ್ರಮಣದ ರಣಹದ್ದು

ಇಲ್ಲಿ ವಿನಾ ನಿಂತು
ಸಮಯವಿಲ್ಲವೆನ್ನುವವನು
ಬೆಳಕ ಪುಸ್ತಕಗಳಿಗೆ
ಬೆನ್ನುಹಾಕಿದವನು
ಅವಲೋಕ ಮರೆತವನು
ಪರುಷ ಸ್ಪರ್ಷವಿಲ್ಲದೆ
ಅವಲೋಹವಾಗುಳಿದವನು

ಬಿಕರಿಯಾಗಲಿ ಹೂ

ಹಿಡಿ ಹೂಗಳ
ಹಿಡಿದ ಹುಡುಗಿಗೆ
ಕನಸು ಮಾರುವ ಕೆಲಸ

ಕೊಳ್ಳಲು ಬರುವ
ಜನ ಮನಗಳಲಿ
ವಿಧ ವಿಧಗಳ ಭಾವ

ಹುಡುಗನೊಬ್ಬನಿಗೆ
ಕೊಡಲೇ ಬೇಕಿದೆ ಹೂ
ನಲ್ಲೆ ಕೈಯ ಸೆಳೆದು

ಹುಡುಗಿಯು ನಿಂತು
ಕನಸಿದ್ದಾಳೆ ಇನಿಯ
ಮುಡಿಗೆ ಮುಡಿಸಲೆಂದು

ಗುಡಿಯೆಡೆಗೆ ನಡೆದವನು
ದೇವರಿಗರ್ಪಿಸನೇನು
ಧನ್ಯತೆ ತಾಳನೇನು

ವಿಧುರನೊಬ್ಬನು
ಕೊಂಡು ಹೂಗಳನು
ನೆನಪಲಿ ಮುಳುಗಿಯಾನು

ದಾರಿಹೋಕನು
ಮರುಗಬಹುದು ಬಿಸಿಲಲಿ
ಬಾಡುವ ಎಳೆತನವನು ಕಂಡು

ಬಿಕರಿಯಾದರೆ
ಬಾಲೆ ಕೈಗೆ ಕಾಸು
ನರಳುವ ಅಮ್ಮಅರಳಿದಂತೆ ಕನಸು

(Pic from Google)