ಅಷ್ಟಮಿಯ ದಿನ

ಶಿಶುವೆನಿಸಿದೆ
ಸೆರೆಮನೆಯ ಹರಿದು
ಭರವಸೆಯ ಆಸೆ ಬೆಳಗಿದೆ

ತಿಳಿಗೊಳದೆ
ವಿಷಸುರಿವ ಸರ್ಪದ
ಘನ ಶಿರವ ಮರ್ದಿಸಿದೆ

ಅರಸುತನದೆ
ದುರುಳತನ ಮೆರೆದ
ಮಾವನನೆ ಹರಣವಾಗಿಸಿದೆ

ಮುರಳಿ ಗಾನದೆ
ಪ್ರೇಮಸುಧೆ ಹರಿಸಿ
ತರಳೆಯರ ಮನ ಅಪಹರಿಸಿದೆ

ಗೋವುಗಳ ಹಿಂಡ
ನಡುವೆ ನಲಿದು
ಭೂಪಾಲರ ದಂಡ ಮಣಿಸಿದೆ

ಗೀತೆ ಅರುಹಿದೆ
ಕರ್ಮ ನೀತಿ ಸಾರಿದೆ
ಧರ್ಮದ ದಾರಿಯ ತೋರಿದೆ

ಅಷ್ಟಮಿಗೆ ಬರುವ
ಇಷ್ಟ ದೇವನೆ ಕೃಷ್ಣ
ಕೃಪಾಕರ ದೇವದೇವನೆ ವಂದನೆ

ಯಾವುದು ಸುಂದರ?

ಪವಿತ್ರ ಕೃತಿ ವಾಚನವಾಲಿಸುವ
ಆ ಕಿವಿಗಳೆಷ್ಟು ಅಂದ!
ಕಿವಿಯೋಲೆಯಿಂದಲ್ಲ
ಅಲ್ಲ ಕಿವಿ ಅಂದ

ಸದಾ ದಾನ ನೀಡುವ
ಆ ಕರಗಳೆನಿತು ಚೆಂದ!
ಕಡಗ ತೊಡುವುದರಿಂದಲ್ಲ
ಅಲ್ಲ ಕರ ಚೆಂದ

ನೀತಿ ಪಥ ಬಿಡದವನ
ಸರ್ವಾಂಗ ಸುಂದರ!
ಗಂಧ ಪೂಸುವುದರಿಂದಲ್ಲ
ಅಲ್ಲ ದೇಹ ಸುಂದರ

ಉದಾತ್ತ ಆಂತರ್ಯ,
ಸದ್ಗುಣದತ್ತ ಎಲ್ಲರೊಲುಮೆ
ಬಾಹ್ಯ ನೋಟಕ್ಕಲ್ಲ
ಅಲ್ಲ ಜನರ ಒಲುಮೆ

(ಸುಭಾಷಿತ ಭಾವ) 

ಶುಭಾಶಯಗಳು

ಡುಂಡಿರಾಜರಿಗೆ

ಡುಂಡಿರಾಜರ ದೇಹ ತೆಳು
ಮಾತು ಮೆಲು, ಆ ಕಾರಣ ತಿಳಿ
ಹಾಸ್ಯದ ‘ಲೇಖನಾಟಕವನಗಳು!’
ತಿಳಿವಿಂದ ಬರೆವ ಬಲ್ಲಿದರು,
ಬಡಾಯಿಗೆ ಬರೆದೇ ಬರೆಹಾಕುವವರು!
ಮೃದು ಸ್ವಭಾವಿ ಆದರೋ
ಪುಢಾರಿಗಳಿಗೆ ಈಟಿಯಾಗುವವರು!!
ಕವಿಯ ಹನಿಗಾರಿಕೆ ಅಪಾರ
ಐದುಸಾವಿರ ದಾಟಿ ಅದೀಗ ಸಾಗರ
ಎಲ್ಲರ ಹೃದಯ ಕದ್ದ ಡುಂಡಿರಾಜರು
ಬರೆವುದೆಲ್ಲ ಹೊಳೆಹೊಳೆವ ಬಂಗಾರ
ಅದಕ್ಕೇ ಕೃತಿಚೋರರುಪಟಳ!
”ಇರಲಿರಲಿ; ಬಿಡಿ ಹೋಗಲಿ”
ಅನ್ನುವ ಕವಿ ಮತ್ತಷ್ಟು ಬರೆಯಲಿ
ಕನ್ನಡದ ತೇರ ಮಗದಷ್ಟು ಮೆರೆಸಲಿ

ಜನ್ಮದಿನದ ಶುಭಾಶಯಗಳು

(18th August)

ರಂಗನಾಥ ಕಟ್ಟಾಯ

ಜನ್ಮದಿನದ ಶುಭಾಶಯ

ಕುಮಾರ ವ್ಯಾಸನ ಭಾರತವೆಂದರೆ…

ಚರಿತ್ರೆ ನಾಟಕ ಬರೆಯುವುದೆಂದರೆ…

ಅಲಂಪಿನಿಂಪಿನ ಕನ್ನಡವೆಂದರೆ…

ಸಹಜ ಸೊಗಸಿನ ವಿಮರ್ಶೆಯೆಂದರೆ…

ಥಟ್ಟನೆ ನೆನಪಲಿ ಬರುವವರೆಂದರೆ

ಕಟ್ಟಾ ಕನ್ನಡಿಗ

ರಂಗನಾಥ ಕಟ್ಟಾಯ

ನಿಮಗೆ ಹುಟ್ಟಿದ ಹಬ್ಬದ

ಹಾರ್ದಿಕ ಶುಭಾಶಯ —

(10th August)

ನಗುವರಳಲಿ

ಆತ್ಮವಿಶ್ವಾಸದ ಯೋಧನಲ್ಲಿ
ಉಳುಮೆ ನಿಷ್ಠೆಯ ರೈತನಲ್ಲಿ
ಬೆವರ ದುಡಿತದ ಕಾರ್ಮಿಕನಲ್ಲಿ
ಮುಕ್ತ ನಗುವರಳಿತೆ?
ಅದೋ ಹಾರಿತು ಬಾವುಟ
ರಿಂಗಣಿಸಿತು ಜನಗಣ ಗೀತ
ವಿಶಾಲ ಸ್ವಾತಂತ್ರ್ಯದ ಪಥ 

ವಿರಾಜಮಾನ ನೀರಜ

ಎಂಭತ್ತೇಳು ಬಿಂದು ಐವತ್ತೆಂಟು
ಮೀಟರು ದೂರಕ್ಕೂ ಹಾರಿತು
ಚಿನ್ನಕ್ಕೇ ಮುತ್ತಿಟ್ಟಿತು
ನೀರಜನ ಜಾವೆಲಿನ್ನು!
ವಿರಾಜಿಸಿತು ಭಾರತ
ಹಾರಿಸಿತು ತ್ರಿವರ್ಣ ಧ್ವಜವನ್ನು!!

ನನೆಯೊಳಗಣ ಪರಿಮಳ

ಡಾ. ನಾ ದಾಮೋದರ ಶೆಟ್ಟರಿಗೆ ಜನ್ಮದಿನದ ಶುಭಾಶಯ

ನಾಯ್ಕಾಪುವಿನ ʼನಾದಾʼ ಊರ್ಧ್ವಮುಖಿ
ಮಂಗಳೂರಲ್ಲಿ ನಲಿದು ಬೆಂಗಳೂರಿಗೂ ಹರಿದು
ವಿಸ್ತರದಿ ಹರಡಿದ್ದು ಸಾಹಿತ್ಯ ಮುಖಜ ಭೂಮಿ
ಹೀರಿದ ನೆಲದ ಸಾರ ಉಣಿಸಿ, ಪೋಷಿಸಿ
ಈಗ ಕನ್ನಡದ ಕಲಾ ವೃಕ್ಷಗಳಲ್ಲಿ ಪುಷ್ಪ ರಾಶಿ
ಕತೆ ಕಾದಂಬರಿ ನಾಟಕ ಪ್ರಬಂಧ ರಂಗವೇಷಿ
ಚಿತ್ರ ನಟನೆ, ಯಕ್ಷ ಕುಣಿತ, ಆಳದಲ್ಲಿ ಕಾವ್ಯಭಾಷಿ
ಮಲೆಯಾಳದಿಂದನುವಾದಿಸಿದ್ದೆಲ್ಲ ಅವಿನಾಶಿ

ಮುದ್ದಣನ ಸರಸವೂ ಮಾತುಗಳ ಹರಿತವೂ
ಪಂಪ ರನ್ನರೆಲ್ಲರ ಕಾವ್ಯರಸ ಮೇಳೈಸಿ
ಶಿಷ್ಯರೆಲ್ಲರ ಗೆಳೆಯ ಪ್ರೀತಿಯಲಿ ಸ್ಪಂದಿಸಿ
ಸಕಲ ಕಲೆಯತ್ತ ಮುಖವಿರಿಸಿ ಪಾತ್ರವಹಿಸಿ
ಪ್ರವಹಿಸುವುತ್ಸಾಹದ ಶೆಟ್ಟರ ವಯಸ್ಸೀಗ
ಕೇವಲ ಇಪ್ಪತ್ತು; ಲೆಕ್ಕ ತಪ್ಪಾಗಿ ಎಪ್ಪತ್ತು!

ಪ್ರೊಫೆಸರರ ಪಾಠ ಗಣಿತವಲ್ಲ ಅಂತೆ ತಪ್ಪಿದೆ ಲೆಕ್ಕ!
ಅವರ ಲೆಕ್ಕವಿಲ್ಲದಷ್ಟು ಬರಹಗಳ ಓದಿ
ಆಗ ತಿಳಿಯುವುದು ಅವರ ಇಪ್ಪತ್ತರ ಹದಿ ವಯಸ್ಸು
ಕಾರು ಚಾಲಿಸುವಾಗ ಜೆಟ್‌ ವೇಗದ ಆಸುಪಾಸು!
ಬೈಕು ಸಿಕ್ಕರೆ ಹೊರಟಾರು ವ್ಹೀಲಿಂಗಿಗೂ ಸಲೀಸು!
ಮಾತಿಗಿಳಿದರೆ ರುಚಿ ʼಮೇಲೋಗರʼ,
ಕೃತಿ, ವಿಚಾರ ವಿಸ್ತಾರ
ಎಲ್ಲರೊಳಗೆಲ್ಲ ನಾದಾ ನನೆಯೊಳಗಣ ಪರಿಮಳ
ಹೆಂಗರುಳ ಕಲಾವಂತರದು ತುಂಬು ಸಂಸಾರ

ಹಂಚುತ್ತಲಿರಿ ನಲಿವು, ನಲ್ಮೆ, ನಗೆ
ಸ್ನೇಹ, ಮೋದ ನಿರಂತರ ನಮಗೆ
ಜನ್ಮದಿನದ ಶುಭಾಶಯ ದಾಮೋದರರೆ ನಿಮಗೆ

‌ ತಾ,2.8.2021