ಕೋವಿಡ್‌ ಮತ್ತು ನಿಷೇಧ!

ತುಟಿ ಮೂಗು ಕಣ್ಣು
ಕಿವಿ ಕಾಲು ಮುಟ್ಟುವುದು
ಆಚಮನ ಪೂಜೆ
ಸಂಧ್ಯಾವಂದನೆಯಲ್ಲಿ
ಸರಕಾರ ನಿಷೇಧಿಸಬಹುದು
ಎನ್ನುವದು ಕುಹಕ ಮತ್ತು ಅಸಾಧು!

ಕಪ್ಪೆ ಚಿಪ್ಪು

ಈ ಕೆಲವು ತಿಂಗಳು ಏನನ್ನೂ ಮಾಡಲಾಗದ, ಹೊರ ಹೋಗದ, ಯಾರನ್ನೂ ಭೇಟಿಸಲಾಗದ, ಕೇವಲ ಟಿವಿಗಳ ಬೆದರಿಕೆ, ಸರ್ಕಾರದ ನಿತ್ಯಾದೇಶಗಳ ಕಸಿವಿಸಿ, ಹೆದರುವ, ಖಿನ್ನತೆಗೊಳ್ಳುವ ವಿಚಿತ್ರ ಸಮಯದಲ್ಲಿ ನಾನು ಸುಮ್ಮನಿರಲಾಗದೆ, ಒಂದಷ್ಟು ಕವಿತೆಗಳ ಬರೆದೆ. ಎಂದಿನಂತೆ ʼಬಾಲಿಶʼ ಕವಿತೆಗಳ ಬರವಣಿಗೆಗೆ ತೊಡಗದೆ, ʼಬಾಲ-ಬಾಲೆಯರಿಗೆʼ ಪದ್ಯಗಳ ಹೊಸೆದೆ! 

ಪ್ರಕಟಣೆಗೂ ಕೊಟ್ಟಾಗ ಸಮಾಧಾನ.

“ಕಪ್ಪೆ ಚಿಪ್ಪು” ಪುಸ್ತಕದ ಹೆಸರು.

ಸದ್ಯದಲ್ಲಿ ಬರುವ ಈ ಪುಸ್ತಕ ಮಕ್ಕಳ ಕೈ ಸೇರಿಸುವ ಜವಾಬ್ದಾರಿ ನಿಭಾಯಿಸಿದರಷ್ಟೇ ತೃಪ್ತಿ. 

ವಿಷಯ ಇಲ್ಲಿ ಹಂಚಿಕೊಳ್ಳುವ ಖುಷಿ. ಪುಸ್ತಕ ಬಿಡುಗಡೆಯ ಬಗೆಗೆ ಯೋಚಿಸುತ್ತಾ, ಇಲ್ಲಿ ಪುಸ್ತಕದ ಮುಖಪುಟ ಹಾಕಿದ್ದೇನೆ.

ನನಗೆ ಈ ಪುಸ್ತಕ ವಿಶೇಷ.  ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ಮುನ್ನುಡಿ ಬರೆದಿದ್ದಾರೆ. ಹನಿಗವಿ ಎಚ್. ಡುಂಡಿರಾಜ್ ಹಿನ್ನುಡಿ. ಕತೆಗಾರ ರಾಜೇಂದ್ರ ಬಿ ಶೆಟ್ಟಿಯವರ ನುಡಿಪುಟ ಬರೆದ ಪ್ರೇರಕರು.

ಮಹಾಬಲರ ಕನಸು

ಮಹಾಬಲರಿಗೆ ಏನಾದರೂ ಸಾಧಿಸೋ ಹಠ

ಅದು ಪತ್ರಿಕೆಗಳಲ್ಲಿ ಬರಬೇಕೆಂಬ ತುಡಿತ

ಆ ಕನಸು ಇಂದು ನನಸಾಯಿತು

ಅವರ ಸಾಧನೆ ಪತ್ರಿಕೆ ಗುರುತಿಸಿತು!

ಮುಖಪುಟದಲ್ಲೇ ಪ್ರಕಟಿಸಿತು

ʼಮನೋಬಲವೇ ಮಹಾಬಲʼ

ಸಾಧಕಿ

ಪಿಯು ಪರೀಕ್ಷೆಯಲ್ಲಿ
ದಾವಣಗೆರೆ ಸಿದ್ಧಗಂಗಾ ಕಾಲೇಜಿನ
ಎಳೆಯ ಅನುಷಾ
ಗಣಿತದ ಗೋಜಲು ಲೆಕ್ಕ ಬಿಡಿಸಿ ಪಡೆದಳು
ನೂರಕ್ಕೆ ನೂರು ಅಂಕ
ಪೂರ್ಣ ಅಂಕ ಪಡೆದೂ
ಪೂರ್ಣವಾಗಲಿಲ್ಲ ಜೀವ
ಗೆಲ್ಲಲಾಗಲಿಲ್ಲ ವಿಧಿಯ ವಿಕಟ ಲೆಕ್ಕ

😓😓😓 

ಅಕ್ಕ ಕೇಳವ್ವಾ…

ಅಕ್ಕನ ವಚನ ʼಅಕ್ಕ ಕೇಳವ್ವಾ..ʼ ಮಲ್ಲಿಕಾರ್ಜುನ ಮನಸೂರರು ಹಾಡಿ ಅನಿರ್ವಚನೀಯ ಅನುಭೂತಿ ಕೇಳುಗರಿಗೆ ಮುಟ್ಟಿಸಿದವರು. ಅದರೊಂದಿಗೆ ಅನೇಕ ಶಿಶುನಾಳರ ʼತೇರನೆಳೆದವರುʼ ಅವರು.

ಹಾಗೆಯೇ, ಪಂ. ವೆಂಕಟೇಶ್‌ ಕುಮಾರ್‌ ಅವರ ಮೊದಲ ವಚನದ ಕ್ಯಾಸೆಟ್‌ (ವಚನ ಸಂಗಮ) ಎಂದಿಗೂ ನೆನಪಿನಿಂದ ಅಳಿಸಿಹೋಗದು.

ಡಾ. ಮುದ್ದು ಮೋಹನ್‌ ಅವರ ವಚನಗಳ ಮೊದಲ ಕ್ಯಾಸೆಟ್‌ ಇಂಥ ಅನುಭೂತಿ ಕೊಟ್ಟಂತಹವು. ಅದಾದ ಮೇಲೆ ಡಾ.ಶ್ಯಾಮಲಾ ಜಿ. ಭಾವೆ ಸಂಗೀತದಲ್ಲಿ ಬಂದ ʼವಚನ ವಾರಿಧಿʼ ಮುದ್ದುಮೋಹನರ ಅತ್ಯುತ್ತಮ ವಚನಗಾಯನದ ಕ್ಯಾಸೆಟ್.‌ ಇವೆಲ್ಲ ಹಾಡಿ ದಶಕಗಳು ಕಳೆದುಹೋಗಿವೆ.

ಕೆಲ ವರ್ಷಗಳಿಂದ ಅಂಬಯ್ಯನುಲಿ ಅವರ ಕಂಠ ಮನೆಮನೆಗಳ ಮುಟ್ಟಿದೆ.

ಈಗ ಸಿಡಿ ಯುಗ. ಯೂಟ್ಯೂಬ್‌ ಕಾಲ. ಈಗ ಅವುಗಳೆಲ್ಲ ಯುಟ್ಯೂಬ್‌ನಲ್ಲಿ ಇಂದಿಗೂ ಹುಡುಕಿ, ಕೇಳಬಹುದು.

ಕಳೆದೊಂದು ವಾರದಿಂದ ನಿತ್ಯ ವಚನಗಳ ಕೇಳು. ಹಾಗೆ ಹುಡುಕುವಾಗ ಸಿಕ್ಕಿದ್ದು ಇಷ್ಟೂ ದಿನ ನನ್ನ ಕಿವಿ ತಪ್ಪಿಸಿಕೊಂಡಿದ್ದ ಡಾ. ನಂದಾ ಎಂ ಪಾಟೀಲ್‌ ವಚನ ಗಾಯನ.‌

ʼಎರೆಯಂತೆ ಕರಕರಗಿ…ʼ ಕೇಳಿದ್ದೇ ಬೆರಗುವೊಡೆದದ್ದು … ಕರಗಿ ಮಾಧುರ್ಯದೊಡನೆ ಹರಿದು ಹೋದ ನನಗೆ ಎಚ್ಚರಾಗುವ ಗೊಡವೆ ಬೇಡ ಅನ್ನಿಸಿದ್ದು ಸತ್ಯ! ನಂದಾ ಅವರು ಹಾಡಿದ ಪ್ರತಿ ವಚನ ಅಮೂಲ್ಯ. ಅವರ ದಿವ್ಯ ಭಾವದೊಂದಿಗಿನ ಸಿರಿ ಕಂಠದ ಓತಪ್ರೋತ ಕಿವಿ ಮುಟ್ಟುವ ʼಶಬುದʼ ಹೃದಯದಾಳ ಶರಣಾಗತಿಗೊಲಿವ ಪರಿ ನನ್ನ ಬರವಣಿಗೆಗೆ ಸಿಕ್ಕದು!

ʼಆರಂಭ ಮಾಡುವೆʼ ಪ್ರಾರಂಭ, ʼಯೋಗಿ ಬಂದ ನೋಡʼ ಕೇಳುವಾಗ, ʼಹೂವಿಲ್ಲದಾ ಕಂಪುʼ ಆಲಿಸುವಾಗ ʼ ʼತನ್ನಿಂದ ತಾನರಿದ ಬಳಿಕʼ ಅರಿಯುವಾಗ ನಂದಾ ಅವರು ಹರಿಸುವ ರಾಗ ಹಾಲ್ಜೇನ ಹೊಳೆ.

ಅನುಭಾವದ ಮೆಟ್ಟಿಲಿಗೊಯ್ಯುವ ಅವರ ಗಾಯನ ʼನರವಿಂಧ್ಯದೊಳಗೆʼ ನಮ್ಮ ಮನಸ ಬಿಡದು!

(ಡಾ.ನಂದಾರ ಅನೇಕ ವಚನಗಳನ್ನು ಕೇಳಿದ ಕೃತಜ್ಞತೆಗೆ ಈ ಸಣ್ಣ ಟಿಪ್ಪಣಿ)

ಇದೆಂಥ ಅಣಕ!

ಇದೆಂಥ ಅಣಕ!
ಯಾರು ಈ ಕಂಡರಿಯದ ಕಟುಕ?

ಉಸಿರಾಡುವ ಗಾಳಿ ಈಗ ಪರಿಶುದ್ಧ
ಆದರೆ ಮಾಸ್ಕ್‌ ಧರಿಸದಿರುವುದು ನಿಶಿದ್ಧ

ಎಲ್ಲ ಜನರೂ ಆಗಿದ್ದಾರೆ ಶುದ್ಧಹಸ್ತರು
ಆದರೆ ಕೈ ಕುಲುಕುವುದನ್ನು ತೊರೆದರು

ಸೋಮವಾರ ಕಾಲು ಎಳೆಯುತ್ತದೆ ಕಛೇರಿಗೆ
ಆದರೆ ವಾರವೇ ಕೊನೆಗೊಳ್ಳದಾಗಿದೆ

ದೇವರ ಮುಂದೆ ಎಲ್ಲರದೂ ಪ್ರಾರ್ಥನೆ
ನೆಂಟರಾರೂ ಬರದಿರಲಿ ಮನೆಗೆ

ಹಣವಿದೆ, ಖರ್ಚುಮಾಡಲಾಗುತ್ತಿಲ್ಲ
ಹಣವಿಲ್ಲ, ಸಂಪಾದಿಸುವ ಮಾರ್ಗವಿಲ್ಲ

ಸಾವಿರಾರು ರೋಗ ನೇಪಥ್ಯಕ್ಕೆ ಸರಿಯಿತು
ಒಂದು ವೈರಾಣು ಜಗತ್ತನ್ನೆ ಬೆದರಿಸಿತು

ನಮ್ಮ ನಡುವೆ ಕ್ರೂರಿಯೊಬ್ಬನಿದ್ದರೂ
ಕಣ್ತಪ್ಪಿಸಿ ಕಾಡುತ್ತಿದ್ದಾನೆ ಪ್ರತಿ ನಿತ್ಯವೂ

ಹೌದು, ಇರಬೇಕು ನಮ್ಮ ಯೊಚನೆ ‌ʼಪಾಸಿಟೀವ್‌ʼ
ಬೇಕಿರುವುದು ಮಾತ್ರ ವೈದ್ಯರ ಪತ್ರ ʼನೆಗೆಟೀವ್ʼ!

(ವಾಟ್ಸ್ಯಾಪ್‌ ಸಂದೇಶಗಳ ಸಂಗ್ರಹ)

(Pic:Google)