ಕಣ್ತೆರೆ

radhe

ಅವಳ ಕೈ ಹಿಡಿದು

ಕೃಷ್ಣ ಕೇಳುತ್ತಿದ್ದಾನೆ

’ನಿನ್ನ ಕನಸು ನನಗೇಕೆ ಬೀಳದು ಚೆನ್ನೆ?’

ಗಾಳಿ ತೀಡಿ ನಿದ್ರೆ ಹರಿದು

ಕೃಷ್ಣ ತೆರೆದ ಕಣ್ಣು

ರಾಧೆ ನೇವರಿಸುತ್ತಿದ್ದಾಳೆ ಅವನವೇ ಕೆನ್ನೆ !

(ಚಿತ್ರ ಕೃಪೆ: ಅಂತರ್ಜಾಲ)

 

ಒಂದು ಶಾಪಿಂಗ್ ಸಂಜೆ

A man sells bangles and other jewelry in a market, Haridwar, India

ರಸ್ತೆಯಂಚಿನಲ್ಲಿ ಸಣ್ಣ ಸಣ್ಣ
ಗುಪ್ಪೆಗಳಲ್ಲಿ ಎಷ್ಟೊಂದು ಬಳೆ
ಬೆಡಗ ಬಲೆ ಹೊಳೆವ ಶಿಲೆಯ
ಚೂರುಗಳ ಪೋಣಿಸಿ ಮಾರುವ
ಬಿಳಿ ಕುರುಚಲ ಕರಿ ಮೊಗದ ಹಿರಿಯ

ಅಮ್ಮನ ಕಿರು ಬೆರಳ ಹಿಡಿತ ಸರಿಸಿ
ಕಿಶೋರಿ ಪುಟಿದು ಓಡಿ
ಕಣ್ಣನಗಲಿಸಿ ಸಣ್ಣ ನಗುವಲ್ಲಿ
ಕೇಳುತ್ತಿದ್ದಾಳೆ,
” ಮಾಮ, ಅಮ್ಮ ಬರುತ್ತಾಳೆ
ಬೆರಳು ಕೈ ಕಾಲು ಕೊರಳ ತುಂಬಾ
ತೊಡಿಸುತ್ತಾಳೆ ಕುಸುರಿ ಮಾಡಿದ
ಬಣ್ಣ ಬಣ್ಣದ ಸರ ಉಂಗುರ
ಹಸುರು ಕೆಂಪಿನ ಬಳೆ
ಎಷ್ಟು ಇವೆಲ್ಲವುಗಳ ಬೆಲೆ?”

’ಮನಸೆಳೆವ ಕಣ್ಣ ತುಂಬುವ
ಮುಖದಗಲ ಮೋದ ಹರಡುವ
ಈ ಕುಸುರಿ ಕೆಲಸಗಳು
ನಕ್ಷತ್ರಗಳ ತುಂಡುಗಳೇನು
ಆಕಾಶದಿಂದ ಇಳಿಸಿಕೊಂಡದ್ದೇನು
ಗಿಳಿ ನವಿಲುಗಳು ಕೊಟ್ಟ ಬಣ್ಣ ಹಚ್ಚಿ
ಈ ಚಿಟ್ಟೆಗಳ ಸೃಷ್ಟಿಸಿದೆಯೇನು
ಇವು ಮೊನ್ನೆ ಗುಡುಗಿದ ಮೋಡ
ಮಧ್ಯದ ಮಿಂಚೇನು
ನಕ್ಕ ಕಾಮನಬಿಲ್ಲ ಉದುರುಗಳೇನು
ಅಜ್ಜಿ ಹೇಳುವ ಕತೆಯ ರಾಜ
ಕುಮಾರಿಯ ಒಡವೆಗಳೇನು!’
ಸಂಭಾಷಿಸುವ ತವಕಿ
ಆದರವಳಚ್ಚರಿಯ ಎತ್ತರ
ಮುಟ್ಟದ ಭಾಷೆ  ಗಿರಕಿ!

ಜಗದ ಸೋಜಿಗಕ್ಕೆ ಅರಳಿದ
ಅವಳ ಕಣ್ಣ ಹೊಳಪು
ಲಲ್ಲೆಗರೆದುಕೊಂಡ
ತುಸುವೆ ಉಬ್ಬಿದ ಕದಪು
ಪುಟ್ಟ ಚೀಲ ಗಟ್ಟಿ ಹಿಡಿದು
ಅಮ್ಮನರಸುವ ಹುರುಪು

ಬೆರಳ ಹೊರಳಿಗೆ ಜಾರಿ
ಹೋದ ಅರೆ ಘಳಿಗೆಯಲ್ಲೆ
ಕಣ್ಣ ಹನಿಸಿಕೊಂಡವಳು
ಅರಸು ಕಂಗಳ ಹರವಿ
ಹಿಡಿದು ಮಗಳ ಬರಸೆಳೆದಪ್ಪಿದಳು

ಕೋಲ್ಮಿಂಚಿನ ಸರ
ಕಾಮನಬಿಲ್ಲ ಬಳೆ
ತಲೆ ತುಂಬುವ ಚಿಟ್ಟೆಗಳಾರಿಸಿ
ಬೆಲೆಗೆ ಕೊಸರಿಸಿ ಚೀಲ ತುಂಬಿಸಿ …
ಆಯತಪ್ಪದೆ ನಡೆದವು
ದಾರಿಗುಂಟವು ಹೆಜ್ಜೆಯುಲಿದವು
ಹೊಸೆದವು ಕಿರುಬೆರಳುಗಳು
ಕರುಳ ಬಳ್ಳಿ ಮತ್ತೆ ಬೆಸೆದವು !

ಕುಣಿವ ಕಿಶೋರಿ ಅಮ್ಮನೊಡನಾಡಿ
ಇಬ್ಬರ ಕುರುಳ ಹಾರಿಸಿದವು ತೀಡಿ
ಸಂಜೆ ಬೀಸುವ ಆ ಸೊಂಪು ಗಾಳಿ

(‘ಸುರಹೊನ್ನೆ’ ಇ ಪತ್ರಿಕೆ: http://surahonne.com/?p=13064)

ಪ್ರಜ್ಞೆಯೆಂಬ ಶಾಪ

broken-heart

ನಿನ್ನ ಕಣ್ಣ ಎವೆಗಳಲ್ಲಿ
ಭಾರವೇತಕ್ಕೆಂದು ಚಿಂತಿಸಿದೆ

ಮ್ಲಾನ ಮುಖದಲ್ಲಿ
ಅಧೀರತೆಯ ಸುಳುಹು
ಕಾಣುವುದೇಕೆಂದು ಯೋಚಿಸಿದೆ

ಗಲಿಬಿಲಿಗಳ ನಿನ್ನ
ಹೆಜ್ಜೆಗಳಲ್ಲಿ ಆಯತಪ್ಪುವುದು
ಏಕೆಂದು ಪ್ರಶ್ನಿಸಿಕೊಂಡೆ

ನನ್ನ ಸಾಮೀಪ್ಯದ ಬಯಕೆ
ಬತ್ತಿಹೋಗುತ್ತಿರುವ ಕುರುಹು
ನಿನ್ನ ತುಟಿಗಳ ಬಾಗುವಿಕೆಯಲ್ಲರಿತೆ

ಮೌನ ಸಂಭಾಷಣೆಗಳಲ್ಲಿ
ಅಪಮೌಲ್ಯದ ನಿರ್ವಾಣ ಬೀಸಿ
ಒಡಲ ಸುಡುತ್ತಿರುವುದ
ಅನುಭವಿಸುತ್ತಿದ್ದೇನೆ

ಮುಗುದೆಯ ಮನಸ್ಸನ್ನರಿವ ಕಲೆ
ನನ್ನೊಳಗಿಟ್ಟವರಾರೆಂದು
ಕೊರಗುತ್ತಿದ್ದೇನೆ!

ಸಖಿ, ಅರಿವು ಎಚ್ಚರಿಸದಿದ್ದರೆ
ಎಷ್ಟೊಂದು ಸುಖವಿತ್ತು!
ಯಾಚಿಸುತ್ತಿದ್ದೇನೆ
ಪ್ರೇಮಕ್ಕೆ ಪ್ರಜ್ಞೆ
ಯ ಶಾಪ ಬೇಡವೆಂದು!!

(ಚಿತ್ರ ಕೃಪೆ:ಅಂತರ್ಜಾಲ)

(ಕನ್ನಡ ಪ್ರತಿಲಿಪಿಯಲ್ಲಿ ಪ್ರಕಟ:Link: http://kannada.pratilipi.com/anantha-ramesh/pragne-emba-shapa)

ತಪ್ಪುಗಳ ಬಾಲ್ಯ

playing-kids

ಕಾಲರಾಯನ ಕೈ ಹಿಡಿದು
ಬಾಲ್ಯ ಹೊರಟು ಹೋಯಿತು
ಕಳೆದದ್ದೆಲ್ಲ ಕಹಿ ದಿನಗಳು
ನೆನಪುಗಳೆಲ್ಲ ಸಿಹಿ ಗೊಂಚಲು

ತಪ್ಪು ತಂಟೆಗಳು
ಎಳಸು ಯೋಚನೆಗಳು
ಎಂಥವೊ ಪ್ರಮಾದಗಳು
ನಿಂದೆ ಬೈಗುಳಗಳು
ತಿಂದ ಏಟುಗಳು
ಅಪಮಾನದರಿವಿಲ್ಲ
ರಚ್ಚೆ ರಗಳೆಗಳೆಲ್ಲ
ಮೈದಡವಿದವರ
ಮುಕುರಿ ಮಾಡಿದ್ದೇನೆ
ಅಸಹನೀಯ
ಮಾಯವಾಗದ
ಗೋಲಿ ಲಗೋರಿ
ಹಾರಿದ ಬೇಲಿಗಳ ಗಾಯ

ಈಗ ನಾನು ಪ್ರಬುದ್ಧ!
ಮತ್ತೆ ಬಾರೆಯ ಕಾಲರಾಯ?
ಎಳೆಯವ ಮರುಕಳಿಸೆಯ?
ಕಂಡಿರುವೆನೀಗ ಖಂಡಿತ
ಜೀಕು ಜೀವನದ ಲಯ
ಒಮ್ಮೆ ನೀ ನನ್ನ ಬಾಲ್ಯ
ಹಿಂತಿರುಗಿಸಲಾರೆಯ?
ಆಣೆ ಮಾಡಿಯೇನು
ಪ್ರಮಾಣ ಇಟ್ಟೇನು
ಅಂದು ಮಾಡಿದೆಲ್ಲ
ತಪ್ಪುಗಳ ಮಾಡುವೆನು ಮತ್ತೆ
ಮಗದೊಮ್ಮೆ
ಮಾಡಿಯೇ ತೀರುವೆನು!

(ಕನ್ನಡ ಪ್ರತಿಲಿಪಿ ಪತ್ರಿಕೆಯಲ್ಲಿ: http://kannada.pratilipi.com/anantha-ramesh/tappugala-balya)