ಬಿಟ್ಟರೂ ಬಿಡದವನು

ಪದೇ ಪದೇ ನೆನಪಾಗೋದು
ಅಪ್ಪ ಹೇಳುತ್ತಿದ್ದ ಮಾತು
ʼತಾಳ್ಮೆ ಬೆಳೆಸಿಕೋ ಮಗನೆʼ
ನನಗೋ ಅಸಹನೆ ಅಸಡ್ಡೆ ಮುನಿಸು

ಕೆಲವೊಮ್ಮೆ ಹೇಳುತ್ತಿದ್ದ ತನ್ನ ಸಾಹಸ ಗಾಥೆ
ಸರತಿಯಲ್ಲಿ ನಿಂತು ಪಡೆದ
ರೇಷನ್ಉ ಕಾರ್ಡಿನ ಕತೆ
ಆಧಾರಕ್ಕೂ ಹಳೇ ಕತೆ
ತಿಂಗಳು ತಿಂಗಳಾ ಕಾದು ತರುವ
ಸಬ್ಸಿಡಿಯ ದಿನಸಿ ಮುಗ್ಗುಲು
ಸರಕಾರದ ಬಡವರ ಸ್ಕೀಮುಗಳಿಗೂ
ಅವನ ಸರತಿ ಮಾಮೂಲು
ತಿಂಗಳ ಕೊನೆ ಹಣ ಹೊಂದಿಸಿ ಕಟ್ಟುತ್ತಿದ್ದ
ವಿದ್ಯುತ್‌ ಬಿಲ್ಲು; ಸರತಿ ಅಲ್ಲೂ

ನನ್ನ ಶಾಲೆಗೆ ಆಮೇಲೆ ಕಾಲೇಜಿಗೆ
ಸೇರಿಸುವಾಗ ಕ್ಯೂ ಮರೆಯದ ಮಹಿಮೆ
ಕೂಲಿಗೂ ಅವನ ಫ್ಯಾಕ್ಟರಿಯಲ್ಲಿತ್ತು ಕ್ಯೂ
ಅಬ್ಬಾ, ಯಾರಿಟ್ಟರೋ ಅವನಲ್ಲಿ ತಾಳ್ಮೆ!

ಚಿಕ್ಕವನಿದ್ದಾಗ ಅವನೊಡನೆ
ದೊಡ್ಡ ದೇವಸ್ಥಾನಗಳಲ್ಲಿ ಸರತಿ
ದೊಡ್ಡ ಸ್ವಾಮಿಗಳ ಕಾಲಿಗೆ
ಬೀಳುವಾಗಲೂ ಚಿಕ್ಕ ಸರದಿ
ಪ್ರಸಾದಕ್ಕಂತೂ ಬಿಡದ ಸರತಿ

ನಾನು ದುಡಿಯೋದು ಕಾದಿದ್ದನೇನೋ!?
ನಿವೃತ್ತಿ ಪಡೆದ ಮೊನ್ನೆ ಮೊನ್ನೆ
ಬಫೆಯ ಬೀಳ್ಕೊಡುಗೆ
ಸರತಿ ನಿಂತು ತಟ್ಟೆ ತುಂಬಿಸಿ
ಮನಸ್ಸು ಬಿಚ್ಚಿ ಮಾತು ಹರಿಸಿ
ತಿನ್ನುವಾಗ ಮಾಸ್ಕು ಬಿಚ್ಚಿ ಚಪ್ಪರಿಸಿ

ನಿನ್ನೆ ಜಡ್ಡಾದ
ಕೊಂಡೊಯ್ದಾಗ, ಆಸ್ಪತ್ರೆ ಕ್ಯೂ; ಖುಷಿಯಾದ!
ನನ್ನೊಂದಿಗೇ ಕಾದ ಬೆಡ್ಡಿಗಾಗಿ;
ಆಮೇಲೆ ಓಟೂ(O2)ಗಾಗಿ
ಈಗ ದೇಹ ನನಗೆ ಬಿಟ್ಟು ಹೊರಟುಹೋಗಿದ್ದಾನೆ
ಅಪ್ಪ ನನ್ನ ತಾಳ್ಮೆ ಪರೀಕ್ಷೆಗಿಟ್ಟಿದ್ದಾನೆ
ನಿಲ್ಲಿಸಿ ಚಿತಾಗಾರದ ಕ್ಯೂವಲ್ಲಿ

(Pic:Google)

ಇರುವರಿಲ್ಲಿ

ಕನ್ನಡ ಪದ ಪುಂಜಗಳ
ಕಗ್ಗಂಟು ಬಿಡಿಸಿ
ಅರ್ಥ ವಿವರಿಸಿ
ಈಗ ಹೊರಟೇಬಿಟ್ಟರೆ
ನಿಘಂಟು ಬ್ರಹ್ಮ?
ಇಲ್ಲ ಇಲ್ಲ ಇಲ್ಲ
ಅವರು ಚಿರಂʼಜೀವಿʼ
ಇದ್ದಾರೆ ಇಲ್ಲಿ
ʼಇಗೋ ಕನ್ನಡʼದಲ್ಲಿ

(Pic courtesy:Google)

ಪ್ರೊ.ಜಿ.ವೆಂಕಟ ಸುಬ್ಬಯ್ಯ – ನೆನಪು

ಶ್ರೀ ಜಿ. ವೆಂಕಟಸುಬ್ಬಯ್ಯ ಅವರಿಗೆ ಆಗ ೯೮ ವರ್ಷ. ಕೆನರಾ ಬ್ಯಾಂಕ್ ಕನ್ನಡ ಸಂಘ ಅವರನ್ನು ಸಮಾರಂಭವೊಂದಕ್ಕೆ ಕರೆಸಿ ಪ್ರಧಾನ ಭಾಷಣ ಮಾಡಿಸಿದರು. ಆ ಸಮಾರಂಭ ನಡೆದದ್ದು ಬ್ಯಾಂಕಿನ ಬೆಂಗಳೂರು ಪ್ರಧಾನ ಕಛೇರಿಯಲ್ಲಿ. ನಗುಮೊಗ, ಲವಲವಿಕೆ, ಮಧ್ಯ ವಯಸ್ಕರಂತೆ ಅವರ ನಡೆನುಡಿ. ಅವರ ಜೀವನೋತ್ಸಾಹ, ಯುವಕರನ್ನು ನಾಚಿಸುವ ಚಟುವಟಿಕೆಗಳ ಬಗೆಗೆ, ಸಭೆಯಲ್ಲಿ ಕೆಲವರು ಕೇಳಿದಾಗ ಅವರು ಹೇಳಿದ್ದು ಹೀಗೆ. “ನನ್ನ ದಿನಚರಿಯಲ್ಲಿ ಯಾವುದೇ ವಿಶೇಷವಿಲ್ಲ. ನಿತ್ಯ ಲಾಲ್ ಬಾಗಿಗೆ ಬೆಳಿಗ್ಗೆ ಹೋಗುತ್ತೇನೆ. ಒಂದು ಗಂಟೆ ಹವಾ ಸೇವನೆಗೆ ವಾಕಿಂಗ್ ಮಾಡುತ್ತೇನೆ. ಅಲ್ಲಿ ನನಗೆ ಅನೇಕ ಸ್ನೇಹಿತರ ಪರಿಚಯವಾಗಿದೆ. ಸ್ವಲ್ಪ ಅವರೊಡನೆ ಹರಟೆ ಹೊಡೆಯುತ್ತೇನೆ. ಆ ಎಲ್ಲ ಸ್ನೇಹಿತರೂ ವಯಸ್ಸಿನಲ್ಲಿ ನನಗಿಂತ ಚಿಕ್ಕವರೇ. ಅವರ ಉತ್ಸಾಹ ಕಂಡಾಗ ನನಗೂ ಖುಷಿ ಅನ್ನಿಸುತ್ತದೆ. ನಿತ್ಯ ನನ್ನೊಡನೆ ವಾಕ್ ಮಾಡಲು ಬಂದವರಲ್ಲಿ ಒಮ್ಮೊಮ್ಮೆ ಯಾರಾದರೊಬ್ಬರು ಕಾಣಿಸುವುದಿಲ್ಲ. ಕೆಲವುದಿನ ಕಳೆದಮೇಲೆ ಯಾರನ್ನಾದರೂ ವಿಚಾರಿಸುತ್ತೇನೆ. ‘ಯಾಕೆ ಇತ್ತೀಚೆ…….ಅವರು ಬರ್ತಾಯಿಲ್ಲ?’ ಎಂದು. ಆಗ ಆ ಗೆಳೆಯರು, “ಸರ್ ಅವರು ಮೊನ್ನೆ ತೀರಿಕೊಂಡರಲ್ಲ. ನಿಮಗೆ ಗೊತ್ತಿಲ್ಲವೆ?” ಅನ್ನುತ್ತಾರೆ.

ನನಗಿಂತ ಇಪ್ಪತ್ತು,-ಮೂವತ್ತು ವರ್ಷ ಕಿರಿಯರು ಇನ್ನಿಲ್ಲ ಅಂದಾಗ ವಿಷಾದ, ದುಃಖ ಆಗುತ್ತದೆ. ಜೊತೆಜೊತೆಗೆ ಎದೆಯೊಳಗೆ ಅವ್ಯಕ್ತ ಭಯ. ಅದುವರೆಗೆ ನಾನು ನನ್ನ ವಯಸ್ಸಿನ ಬಗ್ಗೆ ಯೋಚನೆಯನ್ನೇ ಮಾಡದವನು ಒಮ್ಮೆಗೇ ಕಳವಳಗೊಳ್ಳುತ್ತೇನೆ. ನನಗೀಗ ೯೮ ವರ್ಷ ಆಯಿತಲ್ಲ! ಆಗ ನಿಜಕ್ಕೂ ನನಗೆ ಸ್ವಲ್ಪ ಸಾವಿನ ಭಯ ಕಾಡುತ್ತದೆ!”

ಅಷ್ಟು ದೊಡ್ಡ ಸಭೆಯಲ್ಲಿ ಅತ್ಯಂತ ಸಹಜವಾಗಿ, ತನ್ನ ಆತ್ಮೀಯರೊಡನೆ ಸಂಭಾಷಿಸುವ ರೀತಿಯಲ್ಲಿ, ದೊಡ್ಡ ಅಧ್ಯಾತ್ಮದ ಮಾತುಗಳ ಬೂಟಾಟಿಕೆ ತೋರದೆ ಮನಸ್ಸು ಬಿಚ್ಚಿ ಮಾತನಾಡಿದ ಅವರ ಸರಳತೆ ಮರೆಯಲೇ ಸಾಧ್ಯವಿಲ್ಲ.

ಅವರ ನೆನಪೇ ನಿಧಿ.

ಅಂದು ಭಾಷಣ ಮಾಡಿದ ಅನೇಕರು ಹೇಳಿದ್ದನ್ನು ಇಲ್ಲಿ ಉಲ್ಲೇಖ ಮಾಡಲೇಬೇಕು. “ಜಿ.ವಿಯವರ ಮನೆಗೆ ಹೋದರೆ ನೆಂಟರ ಮನೆಗೆ ಹೋದಂತೆ. ಇಂಥ ವಯಸ್ಸಿನಲ್ಲಿಯೂ ಪತಿ-ಪತ್ನಿಯರಿಬ್ಬರೂ ಕಳಕಳಿಯ ಆದರೋಪಚಾರಮಾಡಿದರಷ್ಟೇ ಅವರಿಗೆ ಸಮಾಧಾನ. ಅವರ ಮನೆಯಿಂದ ಹೊರಟರೆ ಗೇಟಿನವರೆಗೆ ಬಂದು ಬೀಳ್ಕೊಡುವ ಅಪರೂಪದ ಸಜ್ಜನಿಕೆ”

ಈಗ ಅವರೇ ಹೊರಟರು. ಬೀಳ್ಗೊಡೋಣ.

ಶ್ರದ್ಧಾಂಜಲಿ.

ಓಡಿ ಹೋದವನು

(ಕಿರುಗತೆ)

ಆ ತಾಯಿಯ ಒಬ್ಬ ಮಗ ಹತ್ತು ವರ್ಷವಿದ್ದಾಗಲೇ ಮನೆ ಬಿಟ್ಟು ಓಡಿಹೋದ.  ತಾಯಿ ಹೃದಯ,  ಎಲ್ಲ ಕಡೆಗೂ ಹುಡುಕಿದಳು, ಹುಡುಕಿಸಿದಳು.  ಎಲ್ಲ ದೇವರಿಗೂ ಹರಕೆ ಹೊತ್ತಳು.  ಸಿಕ್ಕ ಸಿಕ್ಕವರಲ್ಲಿ ಭವಿಷ್ಯ ಕೇಳಿದಳು.  ಹೀಗೇ ಇಪ್ಪತ್ತು ವರ್ಷ ಮಗನ ಚಿಂತೆಯಲ್ಲೇ ಕಳೆಯಿತು.

ಆ ಊರಿನ ಭಕ್ತರು ಒಮ್ಮೆ ಹಿಮಾಲಯದಲ್ಲಿದ್ದ ಒಬ್ಬ ಯುವ ಸಾಧುಗಳನ್ನು ಕರೆಸಿದರು. ಒಳ್ಳೆಯ ಭವಿಷ್ಯ ಹೇಳುತ್ತಾರೆಂದೂ ಮತ್ತು ಜನರ ಕಷ್ಟಗಳನ್ನು ಪರಿಹರಿಸುತ್ತಾರೆಂದು ಅವರೆಲ್ಲರ ನಂಬಿಕೆಯಾಗಿತ್ತು.  ಈ ಸುದ್ದಿ ತಿಳಿದ ತಾಯಿ, ಸಾಧುಗಳನ್ನು ಕಾಣಲು ಹೋದಳು.  ಅಲ್ಲಿ ಬಂದ ಜನರು ಒಂದಲ್ಲ ಒಂದು ಕಷ್ಟ ಹೇಳಿಕೊಳ್ಳುತ್ತಾ ಅದರ ಪರಿಹಾರ ಕೇಳುತ್ತಿದ್ದರು.  ಆ ತಾಯಿ ಅಲ್ಲಿ ಕುಳಿತು ಎಲ್ಲವನ್ನೂ ನೋಡಿದಳು. 

ಸಾಧುವನ್ನು  ಅವಳು ತದೇಕ ಚಿತ್ತಳಾಗಿ ನೋಡುತ್ತಾ ಸ್ವಲ್ಪ ಸಮಯ ಕುಳಿತೇ ಇದ್ದಳು.  ಅವಳ ಕಣ್ಣುಗಳು ಮಿಂಚಿದವು.  ಏಕೋ ಧಾರಾಕಾರ ಕಣ್ಣೀರು ಹರಿಯಿತು.  ಅವಳಿಗೆ ಸಾಧುಗಳಲ್ಲಿ ಪ್ರಶ್ನೆ ಕೇಳುವ ಸರದಿ ಬಂತು.  ಅವಳು ಸಾಧುವಿನ ಬಳಿಸಾರಿ ಅವರಿಗೆ ಮಾತ್ರ ಕೇಳುವಂತೆ ಮೆಲ್ಲನೆ ಹೇಳಿದಳು, “ಭವಿಷ್ಯವೆಲ್ಲವನ್ನೂ ಬಲ್ಲ ನಿಮಗೆ ನಿಮ್ಮ ಭೂತಕಾಲದ ಅರಿವಿದೆಯೆ!?”

ಸಾಧು ಉತ್ತರಿಸಲಿಲ್ಲ.  ಎದ್ದು ಅವಳ ಕಾಲಿಗೆರಗಿ, “ಕ್ಷಮಿಸಮ್ಮಾ” ಅಂದರು! 

ಇಬ್ಬರ ಕಣ್ಣಲ್ಲೂ ನೀರು. 

ಅಲ್ಲಿ ಸೇರಿದ್ದ ಜನರು, ʼಸ್ವಾಮಿಗಳು ದಯಾ ಹೃದಯಿ.  ಜನರ ಕಷ್ಟಗಳಿಗೆ ಕರಗಿಬಿಡುತ್ತಾರೆʼ ಎಂದು ಮಾತಾಡಿಕೊಂಡರು.

ಆ ತಾಯಿ ಅಲ್ಲಿಂದ ಹಿಂತಿರುಗುತ್ತಾ, ʼನನ್ನ ಸಂಕಟ ಪರಿಹಾರವಾಗದಿದ್ದರೇನು?  ಅಂತೂ ಇತರರ ಕಷ್ಟಗಳಿಗೆ ಪರಿಹಾರ ಕೊಡುತ್ತಿದ್ದಾನಲ್ಲ ಅಷ್ಟೇ ಸಾಕು!ʼ   ಹೃದಯಪೂರ್ವಕ ಹರಸಿದಳು!

ವಿಶ್ವಾಸದ ವರುಷ

ವಿಪ್ಲವಗಳ ಅಲೆಯ ಮೇಲೆ
ಸಮರ ನೌಕೆ ತೆರದಿ
ಶಾರ್ವರಿಯ ಕಳಚಿ
ಪ್ಲವ ವರ್ಷ ಬರಲಿ ತೇಲಿ

ಹಳತ ಕಳಚಿ ಹೊಸತಿಗೆ
ವಿಲಾಪದಿಂ ಸುಲಾಪಕೆ
ವಿಶ್ವಾಸ ಮೂಡೆ ಜನಕೆ
ಪ್ಲವ ವಾಗಲಿ ಭೂಮಿಕೆ

(Pic courtesy: Unsplash)