ಬೆಳಕು ಕಂಡ ಕಣ್ಣು

teacher

ಉಪಗ್ರಹದಿಂದ ಬರುವ ಛಾಯಾ ಚಿತ್ರಗಳು ವಿನೀತನ ಮನಸ್ಸನ್ನು ತುಂಬಾ ಸೆಳೆಯುತ್ತವೆ. ಆಗಾಗ ಅಂತರ್ಜಾಲದಲ್ಲಿ ಭೂಮಿಯ ವೈವಿಧ್ಯದ ಚಿತ್ರಗಳನ್ನು ಅವನು ಅಪ್ಪನ ಜೊತೆ ಕುಳಿತು ನೊಡುತ್ತಿರುತ್ತಾನೆ. ಬಣ್ಣದ ಓಕುಳಿಯಲ್ಲಿ ಈಜುವಂತೆ ಕಾಣುವ ಭೂಮಿಯನ್ನು ನೋಡಲು ಅವನಿಗೆ ತುಂಬಾ ಇಷ್ಟ.

“ಅಪ್ಪಾ.. ನಮ್ಮ ದೇಶದ ಕಡೆ ಜೂಮ್ ಮಾಡು. ಎಷ್ಟೊಂದು ಹಸಿರು ಕಾಣುತ್ತೆ ಅಲ್ವ ! ಈ ಥರ ಹಸಿರು ನಾನು ನೋಡೆ ಇಲ್ಲ ”

“ನಾಗರಹೊಳೆ ಅಥವ ಅಗುಂಬೆ ಕಡೆಗೆ ಈ ರಜಾದಲ್ಲಿ ಹೋಗೋಣ…. ಹಸಿರು ಕಾಡಿಗೆ”

“ಹೋದ ವರ್ಷ ಊಟಿಗೆ ಹೋಗಿದ್ದು ತುಂಬಾ ಮಜಾ ಇತ್ತು. ಅಲ್ಲಿನ ಥರವೇನಾ?”

“ಹೌದು.. ನಿನ್ನ ಪಾಠದ ಪುಸ್ತಕಗಳಲ್ಲಿ ಕಾಡು ನಾಶ ಆಗ್ತಾ ಇರೊ ಬಗ್ಗೆ.. ಬಹಳ ಕಾಡು ಪ್ರಾಣಿಗಳು ನಶಿಸಿ ಹೋಗ್ತಿರೋದ್ರ ಬಗ್ಗೆ ಏನಾದ್ರು ವಿಷಯ ಇದೆಯ ?”

“ಪಾಠದ ಪುಸ್ತಕಕ್ಕಿಂತ ಹೆಚ್ಚು ವಿಷಯ ನಮ್ಮ ಟೀಚರ್ ಹೇಳ್ತಾರೆ. ಪ್ರಪಂಚದ ಕಾಡು ಕಡಿಮೆ ಆಗ್ತಾ ಇರೋದು.. ಹಾಗೆಯೇ ಕಾಡಿನ ಮೃಗ ಪಕ್ಷಿಗಳು ಕಡಿಮೆ ಆಗ್ತಾ ಇರೋದು. ಭೂಮಿ ತಾಪಮಾನ ಜಾಸ್ತಿ ಆಗ್ತಾ ಇರೋದು. ಒರಾಂಗುಟನ್ ಗೊತ್ತ? ಆಫ಼್ರಿಕದಲ್ಲಿ ಅವು ಕೂಡ ಕಡಿಮೆ ಆಗ್ತಾ ಇವೆ ” ವಿನೀತ ಹೇಳಿದ.

“ಒರಾಂಗುಟಾನ್ ಕಾಡಿನ ಮನುಷ್ಯನೆ. ಅದು ನಮ್ಮ ಪೂರ್ವಜ. ನಾವು ಮನುಷ್ಯರೇ ಒಂದಾಗಿ ಸಹಜೀವನ ನಡೆಸೊಲ್ಲ. ಇನ್ನು, ನಮ್ಮ ಪೂರ್ವಜನ ಸಂತಾನದ ಬಗ್ಗೆ ತಲೆ ಕೆಡ್ಸಿಕೊಳ್ತೀವ.. ” ಅಪ್ಪ ಹೇಳ್ತಾನೆ ಇದ್ದರು.

ವಿನೀತ ಹೇಳಿದ, “ಹೀಗೇ ಆದ್ರೆ.. ಭೂಮಿ ಬೋರ್ ಅನ್ಸತ್ತೆ ಅಲ್ವ ? ”

ಅಮ್ಮ ಕರೆದದ್ದು ಕೇಳಿಸಿತು. ಇಬ್ಬರೂ ಕೋಣೆಯಿಂದ ಹೊರಗೆ ಬಂದರು. “ತಿಂಡಿ ತಿನ್ನೋದು ಮರ್ತೇ ಹೋಗಿತ್ತಾ ನಿಮಗೆ ” ಅಂತ ನಕ್ಕಳು. ” ನಾಡಿದ್ದು ದೀಪಾವಳಿ ಬಂತಲ್ಲ. ಪಟಾಕಿ ತರೊ ಪ್ಲಾನ್ ಮಾಡ್ತಿದ್ರಾ?” ಕೇಳಿದಳು.

ವಿನೀತನಿಗೆ ಗೊತ್ತು. ಅಮ್ಮನಿಗೆ ಪಟಾಕಿ ಶಬ್ಧ ಅದರ ಹೊಗೆ ಆಗಲ್ಲ. ಕಳೆದ ವರ್ಷ ಅಕ್ಕಪಕ್ಕದ ಮನೆಯವರು ಹೆಚ್ಚು ಪಟಾಕಿ ಸುಟ್ಟಿದ್ದರಿಂದ ಅಮ್ಮನಿಗೆ ಆರೋಗ್ಯ ಕೆಟ್ಟಿತ್ತು.

“ಅಮ್ಮ.. ನಿನಗೇ ಏಕೆ ಈ ಥರ..?   ಅಪ್ಪ, ನಾನು, ನಮ್ಮ ಪಕ್ಕದ ಮನೆಯವೆರೆಲ್ಲ ದೀಪಾವಳಿಯಲ್ಲಿ ಆರೋಗ್ಯವಾಗೆ ಇರ್ತೀವಲ್ಲ ? ”

ವಿನೀತನ ಈ ಪ್ರಶ್ನೆಗೆ ಅಮ್ಮ ಹೇಳಿದ್ದಳು. “ಕೆಲವರಿಗೆ ತಕ್ಷಣ ಏನಾಗದಿದ್ದರೂ, ಪಟಾಕಿಯಿಂದ ನಿಧಾನಕ್ಕಾದರು ಆರೋಗ್ಯದ ಮೇಲೆ ಪರಿಣಾಮ ಇರುತ್ತೆ.   ವಿನೂ, ನಿನಗೆ ಮರೆತುಹೋಯ್ತಾ, ಹೋದವರ್ಷದ ದೀಪಾವಳಿಯಲ್ಲಿ ನಮ್ಮ ಮನೆ ಬೀದಿಯ ಮೂರು ನಾಯಿಗಳು, ಬೆಕ್ಕುಗಳು ಹದಿನೈದು ದಿನ ಓಡಿಹೋಗಿದ್ದು? ”

ವಿನೀತನಿಗೆ ಎಲ್ಲ ನೆನಪಾಯಿತು. ಈ ಬಾರಿ ಪಟಾಕಿ ಹೊಡೆದು ಶಬ್ಧ ಮಾಡಬಾರದು. ಬರಿಯ ಭೂಚಕ್ರ, ನಕ್ಷತ್ರಕಡ್ಡಿ ಮಾತ್ರ ಹಚ್ಚಬೇಕು. ಅಮ್ಮನಿಗೆ ಇವುಗಳ ಹೊಗೆಯೂ ಆಗುವುದಿಲ್ಲ. ಆದಷ್ಟು ಕಡಿಮೆ ತಂದರಾಯಿತು ಅಂದುಕೊಡ.

ಅವನ ಕ್ಲಾಸ್ ಮೇಟ್ ಶ್ರವಣ್ ಕಳೆದ ವರ್ಷದ ದೀಪಾವಳಿ ಮುಗಿಸಿ ತರಗತಿಗೆ ಬಂದಾಗ ಕೈಗೆ ದೊಡ್ಡ ಬ್ಯಾಂಡೇಜ್ ಹಾಕಿಕೊಂಡಿದ್ದ. ಹೂಕುಂಡ ಹಚ್ಚುವಾಗ ಆಗಿದ್ದಂತೆ. ಎರಡು ಮೂರು ಸಲ ಬೆಂಕಿ ತಾಕಿಸಿದರೂ ಹೂಕುಂಡ ಹತ್ತಲಿಲ್ಲವಂತೆ. ಏಕಿರಬಹುದು ಅಂತ ಅದನ್ನು ಕೈಯಲ್ಲಿ ಹಿಡಿದು ಪರೀಕ್ಷಿಸುವಾಗ ಭರ್ರನೆ ಅದು ಹೊತ್ತಿಬಿಟ್ಟು ಅವನ ಬಲಗೈ ಸುಟ್ಟುಬಿಟ್ಟಿದೆ.  ಸದ್ಯ.. ಕಣ್ಣಿಗೆ ಕಿಡಿ ಹೋಗಿದ್ದರೆ ಏನು ಗತಿ ಅನ್ನುತ್ತಿದ್ದ.

ಮೊನ್ನೆ ವಿನೀತನ ಕ್ಲಾಸಲ್ಲಿ ದೀಪಾವಳಿ ಹೇಗೆ ಆಚರಿಸಬೇಕು ಅನ್ನುವುದರ ಬಗೆಗೆ ಕನ್ನಡ ಟೀಚರ್ ಒಂದು ಚರ್ಚೆ ಇಟ್ಟುಬಿಟ್ಟಿದ್ದರು. ಅವರು ಹೊಸ ಕನ್ನಡ ಟೀಚರ್. ಈ ವರ್ಷವಷ್ಟೇ ನಮ್ಮ ಶಾಲೆಗೆ ಸೇರಿದ್ದು. ಈ ಹೊಸ ಟೀಚರ್ ತಮ್ಮ ಕಣ್ಣುಗಳಲ್ಲಿ ಏನೋ ಹೊಳಪು ಇಟ್ಟುಕೊಂಡು ಮಾತಾಡುತ್ತಾರೆ. ಕ್ಲಾಸಲ್ಲಿ ಯಾರಾದರು ಹಾಡಿದರೆ, ಕತೆಗಳನ್ನು ಹೇಳಿದರೆ, ಕೇಳಿದ ಪ್ರಶ್ನೆಗಳಿಗೆ ಸರಿ ಉತ್ತರ ಕೊಟ್ಟರೆ, ಅವರ ಕಣ್ಣು ಮತ್ತಷ್ಟು ಹೊಳೆಯುತ್ತವೆ, ಹಾಗೆಯೆ ನಗುತ್ತವೆ ಅಂತ ವಿನೀತನಿಗೆ ಅನ್ನಿಸುತ್ತಿರುತ್ತೆ.

ಅವನ ಬಹಳ ಜನ ಗೆಳೆಯರು ಎರಡು ಮೂರು ವರ್ಷಗಳಿಂದ ಪಟಾಕಿ ಹಚ್ಚುತ್ತಿಲ್ಲವಂತೆ. ಮತ್ತೆ ಹಾಗಂತ ಪ್ರತಿಜ್ಞೆ ಮಾಡಿದ್ದೇವೆ ಅನ್ನುತ್ತಿದ್ದರು. ಇದನ್ನು ಕೇಳಿದಾಗ ಕನ್ನಡ ಟೀಚರಿನ ಕಣ್ಣುಗಳು ನಕ್ಷತ್ರಗಳಂತೆ ಹೊಳೆಯುತ್ತಿದ್ದವು. ಇನ್ನು ಮೂರು ನಾಲ್ಕು ಜನ ಸ್ನೇಹಿತರು ’ನಾವು ಕೂಡ ಪಟಾಕಿ ಹಚ್ಚಲ್ಲ, ಬರೀ ಚಿನಕುರುಳಿ ಹಚ್ತೀವಿ’ ಅಂದರು. ಅದಕ್ಕೆ ಎಲ್ಲರು ತುಂಬಾ ನಕ್ಕಿದ್ದರು.

ವಿನೀತ ಟೀಚರ್ ಗೆ ಹೇಳಿದ್ದ. ತಾನು ಬರೀ ನಕ್ಷತ್ರಕಡ್ಡಿ ಹಚ್ಚೋದು ಅಂತ. ಟೀಚರಿಗೆ ಏನೋ ಅಸಮಾಧಾನ. ಕೊನೆಯಲ್ಲಿ ಅವರು ಹೇಳಿದ್ದರು, ” ಹಬ್ಬದಲ್ಲಿ ಹೊಸ ಬಟ್ಟೆ ಹಾಕಿಕೊಳ್ಳಿ. ಹೋಳಿಗೆ ಊಟ ಮಾಡಿ. ರಾತ್ರಿ ಮನೆ ಮುಂದೆ, ಮನೆ ಒಳಗೆ ದೀಪ ಹಚ್ಚಿ ಅಥವ ಮೇಣದಬತ್ತಿಗಳನ್ನು ಹಚ್ಚಿ. ಪಟಾಕಿ ಶಬ್ಧ ಆದಷ್ಟು ಕಡಿಮೆ ಮಾಡಿ ದೀಪಾವಳಿ ಆಚರಿಸಿ. ಆವಾಗ ನೋಡಿ ಎಷ್ಟು ಖುಶಿಯಿರುತ್ತೆ” ಅಂತ.

ಎಲ್ಲರಿಗೂ ಬೇಜಾರು ಏನೆಂದರೆ ಈ ಕನ್ನಡ ಟೀಚರ್ ಮಕ್ಕಳಿಗೆ ಪಟಾಕಿ ಹಚ್ಚಬೇಡಿ ಅನ್ನೋದು.

ಮರುದಿನ ಬೆಳಿಗ್ಗೆ ವಿನೀತ ಬೇಗನೆ ಎದ್ದ. ತನ್ನ ಉಳಿತಾಯದ ಗೋಲಕವನ್ನು ಮೆಲ್ಲನೆ ತೆರೆದ. ಅದರಲ್ಲಿ ಸುಮಾರು ದಿನಗಳಿಂದ ಉಳಿಸಿಟ್ಟ ಹಣವನ್ನು ಎಣಿಸತೊಡಗಿದ. ಸುಮಾರು ಒಂಭತ್ತುನೂರು ರೂಪಾಯಿ! ಅವನಿಗೊಂದು ಹೊಸ ಯೋಚನೆ ಬಂತು. ಅಪ್ಪನ ಬಳಿ ಓಡಿದ.

“ನೂರು ರೂಪಾಯಿ ಇವತ್ತು ನನಗೆ ಕೊಡಬೇಕು ” ಕೇಳಿದ.
“ಬರಿಯ ನೂರು ರುಪಾಯಿ .. ಅಷ್ಟೇ ಪಟಾಕಿಯಾ ಈ ವರ್ಷ? ” ತಂದೆ ಕೇಳಿದರು.
“ಈ ವರ್ಷದಿಂದ ಪಟಾಕಿ ಬೇಡಪ್ಪ. ನೀವು ನೂರು ಕೊಟ್ಟರೆ, ನನ್ನ ಹಣವೂಸೇರಿಸಿದರೆ ಒಟ್ಟು ಒಂದು ಸಾವಿರ ಆಗುತ್ತೆ. ನಾವು ಬೆಳಕ ಹಬ್ಬ ಬೇರೆ ರೀತಿ ಆಚರಿಸೋಣ”
“ಏನು ವಿನೂ.. ಹೊಸ ಯೋಚನೆ..?”
“ನಾನು, ನೀವು, ಅಮ್ಮ ಎಲ್ಲ ನಾಡಿದ್ದು ಭಾನುವಾರ ಅನಾಥಶ್ರಮವಿದೆಯಲ್ಲ ಅಲ್ಲಿ ಹೋಗೋಣ, ಹಣ್ಣು, ಸಿಹಿ ಮತ್ತು ಮತ್ತೇನಾದರು ಉಪಯೋಗವಾಗುವ ಉಡುಗೊರೆ ಅಲ್ಲಿ ಕೊಡೋಣ”

ಅಪ್ಪನಿಗೆ ಖುಷಿ. “ಅಮ್ಮ ಮತ್ತು ನಾನು ಎರಡು ಸಾವಿರ ಕೊಡ್ತೀವಿ. ನೀನು ಹೇಳಿದ ಹಾಗೇ ಅಲ್ಲಿಗೆ ಹೋಗೋಣ” ಅಂದರು.

ವಿನೀತ ಶಾಲೆಗೆ ಎಂದಿನಂತೆ ಹೊರಟ. ಆ ದಿನ ಪ್ರಾರ್ಥನೆ ಸಮಯದಲ್ಲಿ ಹೆಡ್ ಮಿಸ್ ಹೇಳಿದರು, ” ಮಕ್ಕಳೇ, ಈ ದಿನ ನಮ್ಮ ಕನ್ನಡದ ಹೊಸ ಟೀಚರ್ ದೀಪಾವಳಿ ಬಗೆಗೆ ಒಂದು ಪುಟ್ಟ ಭಾಷಣ ಕೊಡುತ್ತಿದ್ದಾರೆ. ಅವರ ಮಾತನ್ನು ಈಗ ನಾವೆಲ್ಲ ಕೇಳೋಣವ? “.

ವಿನೀತ ಮನಸ್ಸಿನಲ್ಲೆ ಅಂದುಕೊಂಡ, ’ಮತ್ತೆ ಪಟಾಕಿ ಸುಡಬೇಡಿ ಅಂತ ಉಪದೇಶ ಕೊಡುತ್ತಾರೊ ಏನೊ..’

ಕನ್ನಡದ ಟೀಚರ್ ಮುಂದೆ ಬಂದರು. ನಗುತ್ತಾ ತಮ್ಮ ಮಾತು ಪ್ರಾರಂಬಿಸಿದರು.

“ಮಕ್ಕಳಿಗೆಲ್ಲ ದೀಪಾವಳಿಯ ಶುಭಾಶಯ ಇವತ್ತೇ ಹೇಳುತ್ತೀನಿ. ದೀಪಾವಳಿಯ ದಿನ ದೀಪ ಹಚ್ಚಿ, ಆದರೆ ಪಟಾಕಿ ಸುಡಬೇಡಿ ಅಂತ ನಾನು ಈಗಾಗಲೆ ಎಲ್ಲ ಕ್ಲಾಸಿನಲ್ಲಿ ನಿಮಗೆಲ್ಲ ಹೇಳಿದ್ದೀನಿ ಅಲ್ವ? ಆದರೂ ಬಹಳ ಮಕ್ಕಳಿಗೆ ನಾನು ಹೇಳಿದ್ದು ಇಷ್ಟ ಆಗಿಲ್ಲ ಅಂತ ಗೊತ್ತು. ಆದರೆ ಮಕ್ಕಳೆ.. ನಾನು ಹೀಗೆ ಹೇಳಲು ಕಾರಣವಿದೆ. ನೀವೆಲ್ಲ ನನ್ನ ಥರ ಪಟಾಕಿ ಹುಚ್ಚಿನಿಂದ ಮಾಡಿಕೊಂಡ ಅನಾಹುತ ನೀವು ಮಾಡಿಕೊಬಾರದು ಅನ್ನೋದು ನನ್ನ ಆಸೆ. ಅದಕ್ಕೆ ಕಾರಣ ಇದೆ. ಆ ವಿಷಯ ಈಗ ನಿಮಗೆಲ್ಲೆ ಹೇಳ್ತೀನಿ.

ಆರನೇ ಕ್ಲಾಸಿನಲ್ಲಿ ಓದುವಾಗ ನನಗೆ ತುಂಬಾ ಪಟಾಕಿ ಹುಚ್ಚಿತ್ತು. ಮೂರು ನಾಲ್ಕು ದಿನವೂ ಪಟಾಕಿಯ ಸಂಭ್ರಮದಲ್ಲಿ ಇರುತ್ತಿದ್ದೆ. ಹೆಚ್ಚು ಶಬ್ಧ ಮಾಡುವ ಪಟಾಕಿ ಅಂದ್ರೆ ನನಗೆ ತುಂಬಾ ಇಷ್ಟ. ಆದರೆ, ಮಕ್ಕಳೇ, ಆ ವರ್ಷದ ದೀಪಾವಳಿಯ ಒಂದು ದಿನ ಒಂದೇ ಒಂದು ದೊಡ್ಡ ಪಟಾಕಿ ನನ್ನ ಜೀವನ ಹಾಳು ಮಾಡಿತು. ಆ ಪಟಾಕಿ ಭಾರಿ ಶಬ್ಧಮಾಡುತ್ತ ನನ್ನ ಮುಖಕ್ಕೆ ಬಡಿದು ಬಿಟ್ಟಿತು. ನನ್ನ ಎರಡೂ ಕಣ್ಣುಗಳನ್ನು ಸುಟ್ಟುಬಿಟ್ಟಿತು! ”

ಇದ್ದಕ್ಕಿದ್ದಂತೆ ಎಲ್ಲ ಮಕ್ಕಳೂ ಒಂದು ನಿಮಿಷ ಗರಬಡಿದಂತೆ ಆ ಟೀಚರನ್ನೇ ನೋಡತೊಡಗಿದರು. ಕನ್ನಡ ಟೀಚರ್ ಮಾತು ಮುಂದುವರಿಸಿದರು. ” ನನಗೆ ಗೊತ್ತು.. ನೀವೆಲ್ಲ ಏನು ಯೋಚನೆ ಮಾಡ್ತಾ ಇದೀರ ಅಂತ. ನನಗೆ ಕಣ್ಣು ಇವೆಯಲ್ಲ. ಮತ್ತೆ ಸುಟ್ಟು ಹೋಗಿದ್ದು ಹೇಗೆ ಅಂತ ಅಲ್ವಾ..? ಅದು ಕೂಡ ಒಂದು ದೊಡ್ಡ ಕಥೆಯೆ. ನಾನು ಎರಡು ವರ್ಷ ಕಣ್ಣು ಕಳೆದುಕೊಂಡು ಕತ್ತಲಿನ ಪ್ರಪಂಚದಲ್ಲಿದ್ದೆ. ಕುರುಡಿಯಾಗಿದ್ದೆ. ನನ್ನ ಬಣ್ಣದ ಲೋಕ ಮರೆಯಾಗಿಹೋಗಿತ್ತು. ಎಲ್ಲ ಕೆಲಸಗಳಿಗೂ ಬೇರೆಯವರ ಸಹಾಯ ಪಡೆಯತೊಡಗಿದೆ. ನನ್ನ ಶಾಲೆ, ಸ್ನೇಹಿತರು, ಆಟಗಳು ಎಲ್ಲ ನನ್ನಿಂದ ದೂರವಾದುವು. ಕಣ್ಣುಗಳ ಮಹತ್ವ ಆಗಲಷ್ಟೆ ನನಗೆ ತಿಳಿಯಿತು.”

ಈಗ ಮಕ್ಕಳೆಲ್ಲ ಕನ್ನಡ ಟೀಚರಿನ ಕಣ್ಣುಗಳನ್ನೆ ಎವೆಯಿಕ್ಕದೆ ನೋಡತೊಡಗಿದರು. ಅವರ ಕುತೂಹಲ ಹೆಚ್ಚಾಗತೊಡಗಿತು.

ಟೀಚರ್ ತಮ್ಮ ಮುಗುಳ್ನಗೆಯ ಮುಖದಲ್ಲಿ ಮಾತು ಮುಂದುವರಿಸಿದರು.

“ಆದರೆ ಮಕ್ಕಳೇ, ನನ್ನ ಭಾಗ್ಯ ಚೆನ್ನಾಗಿತ್ತು. ದೇವರು ನನ್ನ ಪಶ್ಚಾತ್ತಾಪವನ್ನು ನೋಡಿದರು ಅನ್ನಿಸುತ್ತೆ. ಒಂದು ದಿನ ನನಗೆ ಒಳ್ಳೆಯ ಸುದ್ದಿ ಕಾದಿತ್ತು. ಒಬ್ಬ ಮಹಾನುಭಾವರು ತಾವು ನಿಧನರಾದಮೇಲೆ ತಮ್ಮ ಕಣ್ಣುಗಳನ್ನು ದಾನ ಮಾಡಬೇಕೆಂದು ಹೇಳಿದ್ದರು. ಡಾಕ್ಟರುಗಳು ಆ ದಾನದ ಕಣ್ಣುಗಳನ್ನು ನನಗೆ ಇಟ್ಟು ಆಪರೇಷನ್ ಮಾಡಿದರು. ನೇತ್ರ ದಾನ ಮಾಡಿದ ಆ ಮಹಾನುಭಾವರ ಕಣ್ಣುಗಳೇ ಈಗ ನೀವು ನೋಡುತ್ತಿರುವುದು. ಅವರು ಕಣ್ಣುಗಳನ್ನು ಕೊಟ್ಟು ನನ್ನ ಜೀವನದ ಬೆಳಕಾದರು. ಮತ್ತೆ ನಾನು ಬೆಳಕನ್ನು ಕಾಣುವಂತೆ ಮಾಡಿದರು..! ”

ಟೀಚರ್ ಭಾಷಣ ಮುಗಿಸುವಾಗ ಪಟಾಕಿ ಸುಡಬೇಡಿ ಎಂದು ಮತ್ತೆ ಹೇಳಲಿಲ್ಲ. ಹಾಗೆ ಹೇಳುವ ಅಗತ್ಯವೂ ಇರಲಿಲ್ಲ.

ಸ್ವಲ್ಪ ಹೊತ್ತು ಎಲ್ಲ ಕಡೆ ಮೌನ. ಎಲ್ಲ ಮಕ್ಕಳೂ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ವಿನೀತ ತಲೆ ಕೆಳಗಿಟ್ಟು ಯೋಚಿಸತೊಡಗಿದ.

ಮೌನ ಮುರಿಯುತ್ತಾ ಹೆಡ್ ಮಿಸ್ ಚಪ್ಪಾಳೆ ತಟ್ಟಿದರು. ಇದ್ದಕ್ಕಿದ್ದಂತೆ ಎಲ್ಲ ಕಡೆಯೂ ಚಪ್ಪಾಳೆಯ ಶಬ್ಧ ಮೊಳಗಿತು.

ಮಕ್ಕಳಲ್ಲಿ ಹೊಸ ನಿರ್ಧಾರಗಳು ಚಿಗುರೊಡೆದವು. ಕನ್ನಡ ಟೀಚರ್ ಕಣ್ಣುಗಳು ನಕ್ಷತ್ರಗಳಂತೆ ಬೆಳಗಿದವು.

ವಿನೀತ ಈ ದೀಪಾವಳಿಗೆ ದೀಪವಷ್ಟೇ ಹಚ್ಚಿ ಟೀಚರಿಗೆ ಈ ವಿಷಯ ಹೇಳಬೇಕು ಅಂದುಕೊಂಡ. ಹಾಗೆ ತಾನು ಹೇಳುವಾಗ ಅವರ ಕಣ್ಣುಗಳಲ್ಲಿ ಬೆಳಕು ಮಿಂಚುವ ಬಗೆಯನ್ನು ಊಹಿಸುತ್ತಾ ಖುಷಿಯಾದ.

***

ಚಿತ್ರ ಕೃಪೆ: ಅಂತರ್ಜಾಲ

(ಪಂಜು ಇ ಪತ್ರಿಕೆಯಲ್ಲಿ ಪ್ರಕಟ. ಲಿಂಕ್: http://www.panjumagazine.com/?p=13403)

ಬಡಕಲ ಸಿದ್ದನ ದೆವ್ವ ವೃತ್ತಾಂತ

devil

ಆಗತಾನೆ ಹೈಸ್ಕೂಲು ಮೆಟ್ಟಿಲು ಹತ್ತಿದ ದಿನಗಳವು. ಕೆಲವು ಸಬ್ಜೆಕ್ಟುಗಳು ಕಷ್ಟವಾಗುತ್ತಿದ್ದುವು. ಅವಕ್ಕೆಲ್ಲ ನಮ್ಮ ಮೇಷ್ಟ್ರು ಕೆಜಿಜಿ ಪಾಠದ ಮನೆ ಧೈರ್ಯ ತುಂಬಿಸಿ ಓದನ್ನು ಸುಲಭವಾಗಿಸುತ್ತಿದ್ದ ಸ್ಥಳವಾಗಿತ್ತು. ಒಂದಲ್ಲ ಒಂದು ಸಬ್ಜೆಕ್ಟ್ ಗೆ ನನ್ನ ಎಲ್ಲ ಕ್ಲಾಸ್ಮೇಟ್ಸ್ ಬರುವ ಮನೆ ಅದಾಗಿತ್ತು. ಹಾಗಾಗಿ, ಕ್ಲಾಸಿನ ಎಲ್ಲಾ ಹುಡುಗ, ಹುಡುಗಿಯರು ಕೆಜಿಜಿ ಮನೆಯಲ್ಲಿ ಸಂಜೆ 6:30 ರ ನಂತರ ತುಂಬಿರುತ್ತಿದ್ದೆವು.

ನಮಗೆಲ್ಲ ಆಗಾಗ ತಮಾಷೆ ಮಾಡಲು ಒಬ್ಬ ಮಾಡೆಲ್ಲು ಅಂದರೆ ಬಡಕ್ಲ ಸಿದ್ದ. ನಾವು ಅವನ ಕರೆಯುತ್ತಿದ್ದದ್ದೇ ಬಡಕ್ಲ. ಯಾಕೆಂದರೆ ನಮ್ಮ ಕ್ಲಾಸಲ್ಲಿ ಸುಮಾರು ನಾಲ್ಕು ಜನ ಸಿದ್ದಣ್ಣರಿದ್ದರು. ’ಯಾವ ಸಿದ್ದ?’ ಅನ್ನೋದನ್ನ ತಿಳಿಯೊ ಸುಲಭ ಉಪಾಯ ಅಂತ ಎಲ್ಲ ಸಿದ್ದರಿಗೂ ಒಂದೊಂದು ಅಡ್ಡ ಹೆಸರಿಟ್ಟಿದ್ದೆವು.

’ಹಾಗೆಲ್ಲ ಕರೆಯಬಾರದು’ ಅಂತ ಒಮ್ಮೆ ನಮ್ಮ ಪಿಟಿ ಟೀಚರ್ ಹೇಳಿದ್ದಕ್ಕೆ, ನಮ್ಮ ಸಹಪಾಠಿ ಕೇಳಿದ್ದ, ’ಸಾ.. ನಾಲ್ಕ್ ಜನ ಸಿದ್ರು ಒಂದೇ ಕ್ಲಾಸಲ್ಲಿದ್ದಾರೆ. ಹೆಂಗ್ ಸಾ ಗುರುತು ಹೇಳೋದು. ಬಡ್ಕ್ಲನ್ನ ನೋಡಿ ಸಾ.. ಅವನ ಮಕ, ಕೈ ಕಾಲು ಎಲ್ಲ ಎಂಗಿದ್ದಾವೆ.. ಕಡ್ಡಿಥರ.. ಕಡ್ಡಿ ಪೈಲ್ವಾನ್ ಅಂತ್ಲೂ ಕರಿಬೋದು ಸಾ..’ ಪಿಟಿ ಟೀಚರ್ ತುಟಿ ಪಿಟಿಪಿಟಿಸಿ ನಕ್ಕು ಸುಮ್ಮನಾದ್ರು.

ಸಿದ್ದನಿಗೆ ಬಡಕ್ಲ ಅಂದ್ರೆ ಬೇಜಾರಿಲ್ಲ. ಆದ್ರೆ ಹಾಗೆ ಕರೀವಾಗ ನಗಬಾರ್ದು. ನಕ್ಕರೆ ತನ್ನ ನಕ್ರಾ ಮಾಡ್ತಿದ್ದಾರೆ ಅಂತ ಕೋಪ ಬರ್ತಿತ್ತು. ಸಿದ್ದ ಮಾತಾಡಕ್ಕೆ ಶುರು ಮಾಡಿದ್ರೆ ತುಂಬಾ ಮಾತು. ಎಲ್ಲವನ್ನೂ ತುಂಬಾ ಇಂಟರೆಸ್ಟಿಂಗ್ ಆಗಿ ಹೇಳ್ತ ಇದ್ದ. ಒಂದು ವಿಷ್ಯ ಅಂತೂ ನಮಗೆ ಯಾವಾಗ್ಲೂ ಹೇಳೋನು, ತಾನು ದೆವ್ವ ನೋಡಿದ್ದೀನಿ ಅಂತ. ಆಗೆಲ್ಲ ನಮ್ಮ ಪ್ರಶ್ನೆಗಳು ಹೀಗಿರುತ್ತಿದ್ದುವು.

’ಅದು ಹೆಂಗೆ ಇರುತ್ತೋ’
’ನೋಡಿದ್ದು ಹಗಲಾ ರಾತ್ರೀನ?’
’ಎಲ್ಲಿ ನೋಡಿದ್ಯೋ?’
’ಕಪ್ಪಗಾ ಬೆಳ್ಳಗಾ?’
’ಕಣ್ಣು ಹೆಂಗಿದ್ವು?’
’ಕಾಲು ನೋಡಿದ್ಯಾ.. ತಿರುಗಾಮುರುಗಾ ಇದ್ವಾ?’
’ನಿಂಗೆ ಹೆದ್ರಿಕೆ ಆಗ್ಲಿಲ್ವಾ?’

ಸಿದ್ದ ಎಲ್ಲರ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನಿಗೂಢ ಮನುಷ್ಯನ ಥರ ಪೋಸ್ ಕೊಡ್ತಿದ್ದ. ತಾನು ತುಂಬ ಧೈರ್ಯವಂತ ಅನ್ನೋದನ್ನ ತನ್ನ ಕಡ್ಡಿ ದೇಹ ಸೆಟಿಸಿ ತೋರುತ್ತಿದ್ದ. ಆಗೆಲ್ಲ ನಾವು ಅವನನ್ನ”ಸಿದ್ದು” ಅಂತಲೆ ಕರೆಯುತ್ತಿದ್ವಿ. ಬಡಕ್ಲ ಅಂದ್ರೆ ಸಿಟ್ಟು ಬಂದ್ರೆ ಅಂತ ಸ್ವಲ್ಪ ಹೆದ್ರಿಕೆ!

ಒಂದು ದಿನ ಕೆಜಿಜಿ, ಮನೆ ಪಾಠ ಮಾಡ್ತ ಹೇಳಿದ್ರು. ‘ನಾಳೆಯಿಂದ ಎರಡು ದಿನ ಪಾಠ ಇರಲ್ರಯ್ಯ. ನಾನು ಸಂಸಾರ ಸಮೇತ ಬೆಂಗ್ಳೂರಿಗೆ ಹೋಗ್ತಾ ಇದೀನಿ.’

ನಾವೆಲ್ಲ ಒಕ್ಕೊರಲಿಂದ ಕೂಗಿದ್ವಿ, ‘ಹೌದಾ..ಸಾ..?!’

‘ಹೌದ್ರಯ್ಯ.. ನೀವೀಗ ಒಂದು ಕೆಲ್ಸ ಮಾಡ್ಬೇಕಲ್ಲ? ನಿಮ್ಮಲ್ಲಿ ಇಬ್ರು ಎರಡು ರಾತ್ರಿ ನಮ್ಮ ಮನೇಲಿ ಮಲಕ್ಕೊ ಬೇಕು.. ಆಗತ್ತಾ?’

ಯಾರೂ ಮಾತಾಡಲಿಲ್ಲ. ಕೆಜಿಜಿ ಹೇಳಿದ್ರು, ‘ಲಕ್ಕಣ್ಣ.. ನೀನು ಯಾರ್ನಾದ್ರು ಜೊತೆ ಮಾಡ್ಕೊಂಡು ಎರಡು ದಿನ ನಮ್ಮ ಮನೇಲಿರು.. ನಾನು ನಿಮ್ಮ ಅಪ್ಪನ ಹತ್ರ ನಿನ್ನ ಕಳ್ಸಕ್ಕೆ ಹೇಳ್ತೀನಿ’

ಲಕ್ಕಣ್ಣ ಸ್ವಲ್ಪ ಎತ್ರ ಮತ್ತು ದಪ್ಪಕ್ಕೆ ಕಾಲೇಜ್ ಹುಡುಗನ ಥರ ಕಾಣಿಸ್ತಿದ್ದ. ಅದಕ್ಕೆ ಮೇಷ್ಟ್ರು ಅವನ್ನ ಸೆಲೆಕ್ಟ್ ಮಾಡಿದ್ದು.

ಲಕ್ಕಣ್ಣ ’ಸರಿ” ಅಂತ ತಲೆಯಾಡಿಸಿ, ‘ನಂ ಜೊತೆ ಯಾರ್ ಸಾ..?’ ಕೇಳಿದ.

ಯಾರೂ ಮಾತಾಡ್ಲಿಲ್ಲ. ಸರಿ, ಲಕ್ಕಣ್ಣನೇ ಹೇಳಿದ, ‘ಸಾ.. ಈ ಸಿದ್ದ ನಂ ಜೊತೆ ಇರ್ಲಿ’

‘ಯಾರು…ಈ ಕಡ್ಡಿ ಪೈಲ್ವಾನ?’ ಅಂದ್ರು ಮೇಷ್ಟ್ರು.

ಎಲ್ಲ ಮುಸಿ ಮುಸಿ ನಕ್ಕರು. ಸಿದ್ದ ಯಾಕೊ ಸ್ವಲ್ಪ ಗರಂ ಆಗಿದ್ದಂತೆ ಕಾಣಿಸ್ತು. ಆದ್ರೆ ಏನೂ ಮಾತಡಲಿಲ್ಲ. ಅವನಿಗೆ ಲಕ್ಕಣ್ಣ ತನ್ನ ಹೆಸರು ಹೇಳಿದ್ದು ಕೋಪ. ಕೆಜಿಜಿ ಬೆಂಗಳೂರಿಗೆ ಹೊರಟು ಬಿಟ್ರು. ಆದಿನ ರಾತ್ರಿಗೆ ಲಕ್ಕಣ್ಣ ಸಿದ್ದನ ಜೊತೆಯಾಗಿ ಮೇಷ್ಟ್ರ ಮನೆಗೆ ಬಂದ. ಸಿದ್ದ ಹೆಚ್ಚು ಮಾತಾಡ್ಲಿಲ್ಲ. ಮಾತೆಲ್ಲ ಲಕ್ಕನದೇ. ಇಬ್ರೂ ಊಟ ಮಾಡಿಯೆ ಬಂದಿದ್ರು.

‘ಬಡಕ್ಲ… ಮಲಗೋಣ್ವ… ಗಂಟೆ ಹತ್ತಾಯ್ತು’ ಅಂದ.
‘ಹುಂ… ಎಲ್ಲಿ ಈ ಹಾಲಲ್ಲೇ ಮಲ್ಗೋಣ’ ಸಿದ್ದ ಹೇಳಿದ.
ಇಬ್ರೂ ಎರಡು ಹಾಸಿಗೆಗಳನ್ನು ರೂಂನಿಂದ ತಂದು ಹಾಲಿನ ಮಧ್ಯೆ ಹಾಕ್ಕೊಂಡ್ರು.

‘ಲೈಟ್ ಆಫ್ ಮಾಡೊ’ ಅಂದ ಲಕ್ಕ. ಹೋಗಿ ಲೈಟ್ ಆರಿಸಿ ಬಂದ ಸಿದ್ದ.

ಒಂದು ಐದು ನಿಮಿಷ ಕಳೆದಿರಬೇಕು. ಮೆಲ್ಲಗೆ ಸಿದ್ದ ಕೇಳಿದ.
’ನಿನಗೆ ರಾತ್ರೀಲಿ ಭಯ ಆಗೋದಿಲ್ವ?’
’ಇಲ್ಲಪ್ಪ.. ನಂಗ್ಯಾವ ಭಯನೂ ಇಲ್ಲ’
’ಅಂಗಾದ್ರೆ, ದೆವ್ವಕ್ಕೂ ನೀ ಹೆದ್ರಲ್ವ?’
’ಲೋ ಸಿದ್ದ, ದೆಯ್ಯ, ಭೂತ ಎಲ್ಲ ಸುಳ್ಳು.. ನಿಂಗ್ಯಾವನು ಅವೆಲ್ಲ ಹೇಳಿದ್ದು. ನಂಬೇಡ’
’ನಾನೇ ನೋಡಿದ್ದೀನೊ.. ನಂ ತೋಟದ್ ತಾವ.. ಅದ್ಕೇ ಹೇಳ್ದೆ’
’ಮಂಗಾ.. ನೀ ನೋಡಿದ್ದೇನೊ.. ಅನ್ಕೊಂಡಿದ್ದೇನೊ.. ’
’ಇಲ್ಲಕಣೋ ಲಕ್ಕ.. ನಂಗೆ ನಿಜವಾಗ್ಲು ಗೊತ್ತು.. ದೆವ್ವ ಇದೆ ಅಂತ’
’ನಾ ನಂಬಲ್ಲ.. ’

ಸ್ವಲ್ಪ ಹೊತ್ತು ಕಳೆಯಿತು. ಇಬ್ಬರೂ ನಿದ್ರೆಗೆ ಜಾರಿದರು. ರಾತ್ರಿ ಹನ್ನೆರಡಾಗಿರಬೇಕು. ಲಕ್ಕನಿಗೆ ಪಕ್ಕನೆ ಎಚ್ಚರ. ಅವನ ಎದೆ ಮೇಲೆ ಎಂಥದೊ ಭಾರ ಕೂತಿದೆ. ಕಣ್ಣು ಬಿಡಬೇಕು ಅನ್ನೋದ್ರಲ್ಲಿ, ಕುತ್ತಿಗೆ ಹಿಸುಕಿದಂತೆ ಅನ್ನಿಸಿತು. ಮತ್ತೆ ಅವನ ಕೆನ್ನೆಗೆ ’ಛಟೀರ್’ ಎಂದು ಎರಡೇಟು ಬಾರಿಸಿದ ಶಬ್ಧ. ’ಹೋ.. ’ಅಂತ ಲಕ್ಕ ಚೀರಿ ಎದ್ದ.

’ಸಿದ್ದ.. ಲೈಟ್ ಹಾಕು.. ಲೈಟ್ ಹಾಕು’ ಅಂತ ಕೂಗಿದ. ಸಿದ್ದ ಘಾಬರಿಬಿದ್ದು ಎದ್ದು ತಡಕಾಡುತ್ತಾ ಲೈಟ್ ಹಾಕಿ ನೋಡುತ್ತಾನೆ, ಲಕ್ಕ ಹೆದರಿಬಿಟ್ಟಿದ್ದಾನೆ. ಉಸಿರು ಜೋರಾಗಿ ಬಿಡುತ್ತಾ, ’ನೀರು ಕೊಡೊ’ ಅಂದ.

ಸಿದ್ದ ಮತ್ತೆ ಓಡಿ, ಅಡುಗೆ ಮನೆಯಿಂದ ಒಂದು ಲೋಟ ನೀರು ತಂದು ಕುಡಿಸಿ, ‘ಏನಾಯ್ತು ಲಕ್ಕ?’ ಕೇಳಿದ.

ಸುಧಾರಿಸಿಕೊಳ್ಳುತ್ತ ಲಕ್ಕ, ‘ಗೊತ್ತಿಲ್ಲ ನನ್ ಮೇಲೆ ಯಾರೊ ಕೂತಾಗಾಯ್ತು. ಕುತ್ತಿಗೆ ಹಿಚಿಕ್ದಾಗಾಯ್ತು.. ಮತ್ತೆ ಕೆನ್ನೆಗೆ ಹೊಡೆದಾಗಾಯ್ತುಕಣೊ’ ಅಂದ.

ಸಿದ್ದನಂತೂ ಗಾಬರಿಬಿದ್ದು ಹೇಳಿದ, ‘ಇವೆಲ್ಲ ದೆವ್ವದ ಆಟ ಕಣೊ.. ನಾ ಹೇಳಿಲ್ವ ದೆವ್ವ ಇದೆ ಅಂತ.. ಈವಾಗ ಗೊತ್ತಾಯ್ತ? ಅದಕ್ಕೆ ಹೇಳಿದ್ದು.. ದೆವ್ವ ಇಲ್ಲ ಅನ್ಬಾರ್ದು.. ಹಂಗಂದ್ರೆ ಅದು ಹೆಂಗಾದ್ರು ಬಂದು ನಮ್ಗೆ ತೊಂದ್ರೆ ಕೊಟ್ಟು ನಂಬಂಗೇ ಮಾಡತ್ತೆ, ಹಿಂಗೆ ಆಟ ಆಡ್ಸತ್ತೆ’

ಲಕ್ಕ ಸುಧಾರಿಸಿಕೊಂಡಿದ್ದ. ಮತ್ತೆ ತನ್ನ ಧೈರ್ಯಾನ ಸಿದ್ದ ಪ್ರಶ್ನೆ ಮಾಡ್ತಿದ್ದಾನೆ ಅನ್ನಿಸ್ತು. ‘ಇಲ್ಲ…ಇಲ್ಲ.. ದೆವ್ವ ಎಲ್ಲ ಸುಳ್ಳು.. ನನಗೆ ಕನಸಾಗಿರ್ಬೇಕು. ತಿಂದಿದ್ದು ಸ್ವಲ್ಪ ಜಾಸ್ತಿ ಆಗಿತ್ತು. ಮೈಭಾರಕ್ಕೆ ಹಂಗೆಲ್ಲ ಆಗಿದೆ ಅಷ್ಟೆ.. ನೀ ಮಲಕ್ಕೊ.. ನಾನೆ ಲೈಟ್ ಆರಿಸ್ತೀನಿ’ ಅಂತ ಲೈಟ್ ಆರಿಸಿಬಿಟ್ಟ.

ಸುಮಾರು ಅರ್ಧ ಮುಕ್ಕಾಲು ಗಂಟೆ ಇಬ್ರಿಗು ನಿದ್ರೆ ಇಲ್ಲ. ಯಾವಾಗ ನಿದ್ರೆಗೆ ಜಾರಿದ್ರೊ ಗೊತ್ತಾಗಲೇ ಇಲ್ಲ. ರಾತ್ರಿ ಎರಡು ಗಂಟೆ ಆಗಿರಬಹುದು. ಮತ್ತೆ ‘ಛಟೀರ್.. ಛಟೀರ್ ..’ ಶಬ್ಧ, ‘ಅಯ್ಯೊ.. ಅಯ್ಯೊ.. ‘ ಕೂಗು. ‘ಬಿಡು.. ಬಿಡು ನನ್ನ’ ಈಗ ಕೂಗುತ್ತಿದ್ದದ್ದು ಸಿದ್ದ!

ಧಡ ಧಡ ಎದ್ದು ಲಕ್ಕ ತಡಕಾಡಿ ಲೈಟ್ ಹಾಕಿದ. ನೋಡ್ತಾನೆ, ಸಿದ್ದ ಹಾಸಿಗೆ ಮೇಲೆ ಕಾಲು ಮಡಚಿ ನಡುಗ್ತಾ ಕೂತಿದಾನೆ. ತನ್ನೆರಡು ಕೆನ್ನೆ ಸವರಿಕೊಳ್ತಾ ‘ನೋವು’ ಅಂತ ಕಣ್ಣು ಮುಚ್ಚಿಕೊಂಡಿದಾನೆ.

ಲಕ್ಕ ಈಗ ಹೆದರಿಬಿಟ್ಟಿದ್ದ.

‘ಸಿದ್ದ.. ಏನಾಯ್ತು.. ಅದೇನು ಶಬ್ಧ.. ನಿನ್ ಕೆನ್ನೆಗೆ ಹೊಡ್ದದ್ದು ನಂಗೂ ಕೇಳಿಸ್ತು..! ಏನು ನಿಂಗು ಕುತ್ಗೆ ಹಿಚುಕಿದ್ದಾಗಾಯ್ತ?’ ಅಂತ ಹತ್ರ ಕುಳಿತು ಕೇಳಿದ.

ಸಿದ್ದ ಹಾಂ.. ಹೂಂ.. ಅನ್ನದೆ ತನ್ನ ತಲೆಯನ್ನು ತನ್ನ ಬಡಕಲ ಕಾಲಿನ ನಡುವೆ ಹುದುಗಿಸಿ ಕೂತೇ ಇದ್ದ.

ಸಮಾಧಾನ ಮಾಡುವ ಸರದಿ ಈಗ ಲಕ್ಕನದು. ‘ನೀ ಹೇಳಿದ್ದು ನಿಜ ಕಣೋ… ದೆವ್ವ ಭೂತಗಳು ಇವೆ. ನಾನು ಅವೆಲ್ಲ ಇಲ್ಲ ಅಂತ ಧಿಮಾಕು ಮಾಡಿದ್ದು ತಪ್ಪಾಯ್ತು. ನಮ್ಮವ್ವ ಕೂಡ ನಂಗೆ ನೆಟ್ಕೆ ತೆಗ್ದು ಹೇಳ್ತಿರ್ತಾಳೆ.. ದೆಯ್ಯದ ಕಣ್ಣ್ ಬೀಳ್ದಿರಲ್ಲಪ್ಪ’

ರಾತ್ರಿಯೆಲ್ಲ ಹೀಗೆ ಇಬ್ಬರೂ ಮಾತಾಡ್ತಾನೆ ಜಾಗರಣೆ ಮಾಡಿದ್ರು. ಬೆಳಿಗ್ಗೆ ಹೊರಡುವಾಗ ಸಿದ್ದ ಹೇಳಿದ. ‘ಹೋಗ್ಲಿ ಬಿಡು ಲಕ್ಕ… ನಿಂಗೆ ದೆವ್ವದ ಮೇಲೆ ನಂಬಿಕೆ ಬಂತಲ್ಲ… ಇನ್ಮೇಲೆ ಅವೆಲ್ಲ ಇಲ್ಲ.. ಎಲ್ಲ ಮೂಢ ನಂಬಿಕೆ ಅಂತ ಯಾರಿಗೂ ಹೇಳ್ಬೇಡ’

ಲಕ್ಕ ತಲೆಯಾಡಿಸಿದ. ಸಿದ್ದನಿಗೆ ಈಗ ಒಂಥರ ಜಂಭ. ಲಕ್ಕನಿಗೆ ಸಿದ್ದನ ಮೇಲೆ ಒಂಥರ ಗೌರವ!

ಸ್ಕೂಲಿನಲ್ಲಿ ಈ ಎಲ್ಲ ಅನುಭವ ನಮ್ಮೊಂದಿಗೆ ಪಿಸಿಪಿಸಿ ಧ್ವನಿಯಲ್ಲಿ ಸಿದ್ದ ಲಕ್ಕರು ಹಂಚಿಕೊಂಡರು. ಆದ್ರೆ ಪುಣ್ಯಕ್ಕೆ ಕೆಜಿಜಿ ಕಿವಿಗೆ ಇವೆಲ್ಲ ಬೀಳಲಿಲ್ಲ ಅಷ್ಟೆ.
2

ಇವೆಲ್ಲ ಆಗಿ ಆಗ್ಲೆ ಹದಿನೈದು ವರ್ಷ ಆಗಿಹೋಗಿದೆ. ಸಿದ್ದ ಈವಾಗ ಸರ್ಕಾರಿ ಹುದ್ದೆಯೊಂದರಲ್ಲಿದ್ದಾನೆ. ಲಕ್ಕ ತನ್ನ ಹತ್ತು ಎಕರೆ ಜಮೀನು ನೋಡ್ಕೊಳ್ತಾ ಊರಲ್ಲೇ ಆರಾಮ ಇದ್ದಾನೆ.

ಇತ್ತೀಚೆಗೆ ವಿರಾಮವಾಗೆ ನನಗೆ ಸಿದ್ದ ಸಿಕ್ಕಿದ್ದ. ಹೋಟೆಲ್ನಲ್ಲಿ ಕಾಫಿ ಕುಡಿಯುತ್ತ ಅದೂ ಇದೂ ಮಾತಾಡ್ತಾ ಅಚಾನಕ ಈ ದೆವ್ವದ ವಿಷ್ಯ ನೆನಪಿಗೆ ಬಂತು. ಸಿದ್ದನಿಗೆ ಆದಿನ ಆದದ್ದೇನು ಅಂತ ಕೇಳಿದೆ. ಸಿದ್ದ ಭಯಂಕರ ನಕ್ಕ.

‘ಆ ಲಕ್ಕ ಒಬ್ಬ ಫೂಲ್’ ಅಂದ.
‘ಹಾಗಾದ್ರೆ ಅವನ ಕುತ್ತಿಗೆ ಹಿಡ್ದು ಹೊಡೆದಿದ್ದು?’
‘ನಾನೆ ಕಣೊ!’
‘ಅದ್ಸರಿ… ಆಮೇಲೆ ನಿನ್ನ ಎರಡೂ ಕೆನ್ನೆಗೆ ಹೊಡ್ದಿದ್ದು?!’
‘ಏನ್ ಮಾಡೋದೋ… ಲಕ್ಕನ್ನ ನಂಬಿಸ್ಬೇಕಲ್ಲ… ಅದ್ಕೇ ನನ್ನ ಕೆನ್ನೆಗೆ ನಾನೆ ಸರಿಯಾಗಿ ಹೊಡ್ಕೊಂಡೆ’ ಅಂದ!!

ಒಂದು ದಿನ ಲಕ್ಕನೂ ಸಿಕ್ಕಿದ್ದ ಅನ್ನಿ. ಭರ್ಜರಿ ದೇಹಿ. ಮಾತಾಡಿಸಿದೆ. ಕುತ್ತಿಗೆಗೆ, ತೋಳಿಗೆ ಕರಿದಾರದಲ್ಲಿ ಬೆಳ್ಳಿಯ ಭಾರೀ ತಾಯಿತ ಕಟ್ಟಿಸಿಕೊಂಡಿದ್ದ. ಹಣೆ ಮೇಲೆ ದೊಡ್ಡದಾಗೆ ಕುಂಕುಮ ಮತ್ತು ಅದರ ಮೇಲೆ ಚಿಕ್ಕದಾಗಿ ನಾಮ ಇಟ್ಟುಕೊಂಡಿದ್ದ.

ಯಾಕೊ ಆ ಚಿಕ್ಕ ಕೆಂಪು ನಾಮ ನನಗೆ ದೊಡ್ಡದಾಗೆ ಕಾಣಿಸ್ತಿತ್ತು!
*******

(ಚಿತ್ರಕೃಪೆ: ಅಂತರ್ಜಾಲ)

(Published in Kannada.Pratilipi E magazine, Link address:http://kannada.pratilipi.com/anantha-ramesh/badakala-siddhana-devva-vruttanta)

ಹೊಟೇಲಿನ ಆ ಘಟನೆ

oldage

ಆ ಹೊಟೇಲಿನಲ್ಲಿ ಬಹಳ ಜನ.   ಅದು ಬಹಳ ಉತ್ತಮ ದರ್ಜೆಯ ಮತ್ತು ಸಮಾಜದ ಗಣ್ಯರು ಬಂದು ಊಟ ತಿಂಡಿ ಮಾಡುವ ಸ್ಥಳ.

ಅಲ್ಲಿ ಉತ್ತಮ ಪೋಷಾಕಿನ ಜನ ಸಂಭ್ರಮದಲ್ಲಿ ಭಕ್ಷ್ಯಗಳನ್ನು ಸವಿಯುತ್ತಿದ್ದರು. ಎಲ್ಲರ ಗಮನ ರುಚಿಯ ತಿನಿಸುಗಳ ಮೇಲೆ ಮತ್ತೆ ತಮ್ಮ ನಾಲಿಗೆಗಳಿಗೆ ಆ ರುಚಿಯನ್ನು ಅಂಟಿಸಿಕೊಳ್ಳುವ ಕಾಳಜಿ.

ಮಧ್ಯಾನ್ನದ ಆ ಸಮಯದಲ್ಲಿ ಒಳ್ಳೆಯ ಬಟ್ಟೆ ಧರಿಸಿದ್ದ ಒಬ್ಬ ಕಟ್ಟುಮಸ್ತಾದ ಸುಂದರ ಯುವಕ ತನ್ನ ವಯಸ್ಸಾದ ತಾಯಿಯನ್ನು ನಿಧಾನಕ್ಕೆ ನಡೆಸಿಕೊಂಡು ಹೊಟೇಲ್ಲಿಗೆ ಬಂದ. ಆ ತಾಯಿಯ ಕೈ, ಕಾಲು ಸ್ವಲ್ಪ ನಡುಗುತ್ತಿರುವಂತೆ ಮತ್ತೆ ನಡೆಯಲು ಕಷ್ಟಪಡುತ್ತಿರುವಂತೆ ಕಾಣಿಸುತ್ತಿತ್ತು. ಅಲ್ಲಿ ಹಾಲ್ ಮಧ್ಯದ ಒಂದು ಟೇಬಲ್ಲಿನಲ್ಲಿ ಅವಳನ್ನು ಯುವಕ ಕೂರಿಸಿದ.

ತಾಯಿಗೆ ತಟ್ಟೆಯೊಂದರಲ್ಲಿ ಸ್ವಲ್ಪ ಊಟ ತಂದು, ‘ಅಮ್ಮಾ.. ನೋಡು ಈ ಚಪಾತಿ ಮೆತ್ತಗಿದೆ ಮತ್ತು ಈ ಪಲ್ಯ ಬಹಳ ರುಚಿಯಿದೆ. ತಿನ್ನು’ ಅಂದ.

ತಾಯಿ ಆ ತಟ್ಟೆಯಿಂದ ಮೆಲ್ಲಗೆ ತನ್ನ ನಡುಗುವ ಕೈಗಳಿಂದ ಚಪಾತಿಯನ್ನು ಮುರಿದು ತಿನ್ನತೊಡಗಿದಳು.

ಯುವಕ ಕುಡಿಯುವ ನೀರು ತರಲು ಹೋದ. ಅಷ್ಜರಲ್ಲೆ ‘ಭಡ್’ ಶಬ್ಧ ಹೊಟೇಲಿನಲ್ಲಿ ಅನುರಣಿಸಿತು. ಹೊಟೇಲಿನಲ್ಲಿದ್ದವರ ಗಮನ ಈಗ ಆ ತಾಯಿ ಮತ್ತು ಮಗನ ಕಡೆಗೆ ಹರಿಯಿತು.

ಅವಳು ಊಟ ಮಾಡುವ ಭರದಲ್ಲಿ ಕೈತಪ್ಪಿತ್ತು ಮತ್ತು ಊಟದ ತಟ್ಟೆ ನೆಲಕ್ಕೆ ಉರುಳಿ ತಿನಿಸು ಚಿಲ್ಲಿ ಹೋಯಿತು.

ಅಲ್ಲಿದ್ದ ಕೆಲವರಿಗೆ ಮುಜುಗರ.  ಕಸಿವಿಸಿ.  ಊಟದ ಶಾಂತ ವಾತಾವರಣ ಸ್ವಲ್ಪ ಕದಡಿ ಹೋಯಿತು.

ನೀರು ತಂದ ಯುವಕ ತಾಯಿಯನ್ನು ನೋಡಿದ ಮತ್ತು ನಕ್ಕ. ‘ಓಹ್.. ತಟ್ಟೆ ಕೆಳಗೆ ಬಿತ್ತೆ? ನಿನ್ನ ಮೈಮೇಲೆ ಪಲ್ಯದ ಚೂರುಗಳು ಅಂಟಿಬಿಟ್ಟಿವೆ. ತಾಳು.. ನಾನು ಅವನ್ನೆಲ್ಲ ಒರೆಸಿಬಿಡುತ್ತೇನೆ. ಹಾಗೆಯೆ ಬೇರೆ ತಟ್ಟೆ ತರುತ್ತೇನೆ. ನೀನು ಆ ಕುರ್ಚಿಯಲ್ಲಿ ಕೂರಬೇಡ. ಇಲ್ಲಿ ಬಾ. ಹಾಂ.. ಇದೀಗ ಸರಿಯಾಯಿತು. ಸ್ವಲ್ಪ ನೀರು ಕುಡಿ.’

ಹೊಟೇಲಿನಲ್ಲಿದ್ದ ಎಲ್ಲ ಮಕ್ಕಳು, ಅವರ ಅಪ್ಪ ಅಮ್ಮಂದಿರು ಈ ದೃಶ್ಯ ನೋಡುತ್ತಿದ್ದರು. ತಿನ್ನುವುದನ್ನು ಸ್ವಲ್ಪ ಮರೆತಿದ್ದರು ಕೂಡ.

ಯುವಕ ತಾಯಿಯ ಬಟ್ಟೆಗಳನ್ನು ಸ್ವಚ್ಛ ಮಾಡಿದ. ಹಾಗೆಯೆ ಆ ಟೇಬಲನ್ನೂ. ಮತ್ತೆ ತನ್ನ ತಾಯಿಗೆ ಮತ್ತೊಂದು ತಟ್ಟೆಯಲ್ಲಿ ತಿನಿಸುಗಳನ್ನು ತಂದು ನಿಧಾನಕ್ಕೆ ತಿನ್ನಿಸತೊಡಗಿದ. ಹಾಗೆ ಮಾಡುವಾಗ ಅವನಿಗೆ ಹೊಳೆಯಿತು, ಹೊಟೇಲಿನ ಗ್ರಾಹಕರು ತಮ್ಮ ಕಡೆಗೆ ದೃಷ್ಟಿಸುತ್ತಿದ್ದಾರೆ ಎಂದು.

ಮುಗುಳ್ನಗುತ್ತಾ ಅವರ ಕಡೆ ಕೈಬೀಸಿ ‘ಕ್ಷಮೆ’ ಕೇಳಿದ.

ಅಲ್ಲಿಯ ಗ್ರಾಹಕರು ಮತ್ತೆ ತಮ್ಮ ಊಟದ ಕಡೆ ಗಮನ ಕೊಟ್ಟರು.

ಹದಿನೈದು ನಿಮಿಷಗಳ ನಂತರ ಯುವಕ ನಿಧಾನಕ್ಕೆ ತಾಯಿಯ ಜೊತೆ ಹೊರ ಹೊರಟ. ಬಿಲ್ಲನ್ನು ಪಾವತಿಸುತ್ತಾ ಹೇಳಿದ. ‘ನನ್ನನ್ನು ಕ್ಷಮಿಸಿ. ನಿಮ್ಮೆಲ್ಲ ಗ್ರಾಹಕರಿಗೆ ನನ್ನಿಂದ ಸ್ವಲ್ಪ ಮುಜುಗರವಾಗಿಬಿಟ್ಟಿತು. ಈ ಘಟನೆ ಇಲ್ಲಿಗೆ ಮರೆತುಬಿಡಿ’

ಬೆನ್ನ ಹಿಂದೆ ನಿಂತ ಹಿರಿಯರೊಬ್ಬರು ಯುವಕನ ಭುಜ ತಟ್ಟಿದರು. ಅವನಿಗೆ ಹಸ್ತ ಲಾಘವ ನೀಡುತ್ತಾ ಹೇಳಿದರು, ‘ಇದು ಮರೆಯುವಂಥ ಘಟನೆಯಲ್ಲ. ನೀನು ಈದಿನ ಹೊಟೇಲಿನ ಎಲ್ಲ ಜನರಿಗೆ ಸಿಹಿಯ ಅನುಭವವೊಂದನ್ನು ಹಂಚಿಬಿಟ್ಟೆ. ನಿನಗೆ ಶುಭವಾಗಲಿ’

ಯುವಕ ಮುಗುಳ್ನಕ್ಕು ಕೃತಜ್ಞತೆ ಸೂಚಿಸಿದ ಮತ್ತು ಹೊಟೇಲಿನಿಂದ ತಾಯಿಯನ್ನು ಕರೆದುಕೊಂದು ಹೊರಟ. ಹಾಗೆ ತೆರಳುವಾಗ ಹಬ್ಬುವ ಬಳ್ಳಿಯ ನರುಗಂಪ ಆದರ್ಶದ ಬೀಜಗಳನ್ನು ಹೊಟೇಲಿನಲ್ಲಿದ್ದ ಎಲ್ಲರ ಎದೆಯೊಳಗೆ ಅವನು ಚೆಲ್ಲಿಬಿಟ್ಟಿದ್ದ.

                             (ವಾಟ್ಸ್ಯಾಪಲ್ಲಿ ಬಂದ ಒಂದು ಆಂಗ್ಲ ಸಂದೇಶದ ಭಾವಾನುವಾದ)

(ಚಿತ್ರಕೃಪೆ:ಅಂತರ್ಜಾಲ)

(Published in Kannada.Pratilipi.com, Link:http://kannada.pratilipi.com/anantha-ramesh/hotelina-aa-ghatane)

ನರಕ ಮತ್ತು ಕರ್ನಾಟಕ ಸ್ಪರ್ಧೆ

narak

 

 

 

 

 

 

ಚಿತ್ರಗುಪ್ತ:
“ಯಮಧರ್ಮ,
ಈ ವರ್ಷದ ಸ್ಪರ್ಧೆಯಲ್ಲಿ
ನರಕ ನಿಲ್ಲಲಿದೆ ಮೊದಲ ಸ್ಥಾನದಲ್ಲಿ
ಕಠಿಣ ಶಿಕ್ಷೆ ಕೊಡುವ ನಿನ್ನ ಕಿಂಕರರನ್ನು
ಯಾತನೆ ಪಡುತ್ತಿರುವ ಈ ಮಾನವರನ್ನು
ಭೂಮಿಯಲ್ಲಿ ಯಾರೂ ಸರಿಗಟ್ಟರಿನ್ನು!”

ಯಮ:
“ಸಾವಧಾನ ಚಿತ್ರಗುಪ್ತ ಸಾವಧಾನ,
ಈ ವರ್ಷ ಮಳೆಯಿಲ್ಲ
ಅಣೆಕಟ್ಟೆಗಳಲ್ಲಿ ನೀರಿಲ್ಲ
ನ್ಯಾಯಾಲಯದ ಅಪ್ಪಣೆ
ಉಳಿಕೆ ನೀರು ಸರ್ವಾರ್ಪಣೆ
ಜೊತೆಗೆ ಮಹದಾಯಿ ಘರ್ಷಣೆ
ಹೆಚ್ಚುವರಿ ಪೊಲೀಸರು
ಜನರಿಗೆ ದಕ್ಕಿದೆ ಕ್ರೂರ ಯಾತನೆ
ನೇಣು ತಡೆಯುವ ನಿಟ್ಟಿನಲ್ಲಿ
ಮರಗಳೆಲ್ಲ ಆಪೋಶನೆ…..”

ಚಿತ್ರಗುಪ್ತ:
“ತಿಳಿಯಿತು ಯಮಧರ್ಮ ತಿಳಿಯಿತು
ನನ್ನ ಲೆಕ್ಕ ತಪ್ಪಿತು
ಕರ್ನಾಟಕ ಪ್ರಥಮಸ್ಥಾನಕ್ಕೇರಿತು
ನರಕ ಮೂಲೆಗುಂಪಾಯಿತು!”

 

ಹನಿಗಳಲ್ಲಿ ಗಾಂಧಿ – 2

mkg

1

ಉದ್ದ ಕೈಗಳಿಂದ
ಅಹಿಂಸೆಯನ್ನು
ಚೆನ್ನಾಗಿ ನಾದಿ
ರುಚಿಗೊದಗಿಸಿದ …
……………………….
ಚಪ್ಪರಿಸಿದ ಮಂದಿ
ಘರ್ಜಿಸಿದರು ಕೊಬ್ಬಿ!

fast

2

ರಾಮರಹೀಮರ ಭಜಿಸಿ
ದೇಶ ಕಟ್ಟುವಾಗ
ಹಿಂಸೆಯ ಗೋಡೆ
ಉಚಾಯಿಸಿತ್ತು….
ನೊಂದ ಗಾಂಧಿ
ಉಪವಾಸ ಕೂತರೂ
ಸೇವಿಸಿದರು….
ಅಖಂಡ ನೋವು
3

’ರಾಮ’ ನಾಮಧೇಯ
ಬಂಡೆದ್ದು ಗುಂಡಿಟ್ಟ
ಕೊನೆಯುಸಿರಲ್ಲು
’ರಾಮ’ ಮಂತ್ರವೆ
ಅವನ ಬಾಯಲ್ಲಿ ದಟ್ಟ

 4

ಅಹಿಂಸೆಯ ಪ್ರತಿಪಾದಕನ
ಹತ್ಯೆ ಮಾಡಿದವನ ಕೊನೆ
ನೇಣು ಬಿಗಿಸಿದ ಮೋಹನ
ದಾಸನ ’ಶಿಷ್ಯಗಣ’ ಸಾಧನೆ!

mk5

5

ಕಟು ’ಸತ್ಯ’ಗಳನ್ನು
ಅವನು ಹುಟ್ಟಿದ ದಿನ
ಮುಚ್ಚಿಡಬೇಕು
…………………
ಮಾಂಸ ಮದಿರೆ ಒಂದಕ್ಕೆರಡು
ಮುನ್ನಾ ದಿನವೆ ಖರ್ಚಾಗಿವೆ
ಚಪ್ಪರಿಸಿದ ನಾಲಿಗೆಗಳು
ಭಾಷಣಗಳಿಗೆ ಸಜ್ಜಾಗಿವೆ!

(ಚಿತ್ರ ಕೃಪೆ: ಅಂತರ್ಜಾಲ)