ದೇವತಾ ಮನುಷ್ಯ

ತಳುಕಿನ ವೆಂಕಣ್ಣಯ್ಯ
ತಳುಕಾದವರು
ಸಾಹಿತ್ಯಕ್ಕೆ ಸಂಸ್ಕೃತಿಗೆ
ಸರಳತೆಗೆ ಸಹೃದಯಕ್ಕೆ
ಸ್ನೇಹಕ್ಕೆ ಸುಸಾಂಗತ್ಯಕ್ಕೆ
ಸಹಿಷ್ಣುತೆಗೆ

ತಳುಕಿನ ವೆಂಕಣ್ಣಯ್ಯ
ತುಂಬಿದ ತುಳುಕದ
ಕೊಡದಂತೆ
ಬಳಿಬಂದವರ ತೃಷೆಗಾದವರು
ಬೆಳಕಾದವರು
ಬೆಳೆವ ಬರಹಗಾರರಿಗೆ
ಬದುಕಿದವರು
ಬದುಕ ಶ್ರೇಷ್ಠತೆಯ
ತೋರುವುದಕ್ಕೆ

ತಳುಕಿನ ವೆಂಕಣ್ಣಯ್ಯ
ತಳುಕಾದರು
ಕನ್ನಡ ನವೋದಯಕ್ಕೆ

ತುರುವಾದರು ಸೃಜನತೆಗೆ
ಗುರುವಾದರು
ಅರಿವನು ಅರಸಿದವರಿಗೆ

ಅವರು ತೋರಿದಾದರ್ಶ
ನಮಗಮೃತ ಮಥಿಸಿ ಇತ್ತಂತೆ
ತಲೆಮಾರಿಗೂ ಉಳಿವ
ದೇವತಾ ಮನುಷ್ಯ ಅವರು
ಈ ನೆಲದ ದೇದೀಪ್ಯ ದೀಪದಂತೆ

(ಟಿ.ಎಸ್.ವೆಂಕಣ್ಣಯ್ಯ ಜನಿಸಿದ್ದು ನವೆಂಬರ್ ತಿಂಗಳಲ್ಲಿ)

ನಾಡು-ನುಡಿ ಸೇವಕರು – ೪ ಕನ್ನಡದ ಮೊದಲ ರಾಷ್ಟ್ರಕವಿ

ಸ್ವನಿತ (ಸಾನೆಟ್)

ಮಂಜೇಶ್ವರದ  ಮಣ್ಣಿನಲ್ಲಿ ಕನ್ನಡದ  ಬೆಳ್ಳಿ    
ಮೂಡಿಸಿದ, ಕನ್ನಡ ತುಳು ಕೊಂಕಣಿ ಮಾತೆಯರಿಗೆ
ಕಣ್ಮಣಿ, ಗುಹೆಯ ಹೊಕ್ಕ ಸೂರ್ಯಪ್ರಖರ ದೃಷ್ಟಿನಿಚ್ಚಳ
ಇಪ್ಪತ್ತೆರಡು ಭಾಷೆಗಳತ್ತ  ಚಾರಣ,   ಶಿಖರ
ಮುಟ್ಟಿ ಪಂಡಿತ, ಇಪ್ಪತ್ತ್ನಾಲ್ಕು  ಕೃತಿಗಳ ಹೆತ್ತ
ರತ್ನಗರ್ಭ ಕವಿ ಕೋವಿದ, ನಿಖರತೆಯ ಸಂಶೋಧಕ  
ತನ್ನೊಳ ಶೋಧ, ಸ್ವಾರ್ಥ ತೊರೆದ, ಪುಟವಿಟ್ಟ ಕನಕ
ಹಾರ ಕರುನಾಡ ಕೊರಳಿಗಾದ,  ಸಂಸಾರ ‌ಸುಖ
ವಿಮುಖ, ಹಾರಿ ಗಿಳಿವಿಂಡಿನೊಡನೆ ವಿಹಾರಿ, ನಿಂತ
ನೀರದು ಕೊಳೆವ ಮುನ್ನವೇ ಹೊಸತನು ಹರಿಯಿಸಿದ
ಗೊಲ್ಗೋಥ, ವೈಶಾಖೀ, ಕೃಷ್ಣ ಚರಿತ, ಸಾನೆಟ್ ನಮಗೆ
ಸ್ವನಿತ ಮಾಡಿದ ಮೊದಲಿಗ, ಪ್ರಾಸ ತೊರೆದು ಸುಗ್ರಾಸ 
ಬಡಿಸಿ  ಸಂಕೋಲೆ  ಕಳಚಿ,  ಬರಹ ಬೆಳಕಲಿ ನಕ್ಕ
ತುಳುವ ಚರಿತ್ರೆ   ಕನ್ನಡ ವೈಭವಗಳ ಉತ್ಖನಿನಿಸಿ 
ತೇರಲಿಟ್ಟು ಎಳೆದ ಅಚಲ ಛಲ,  ಪುರುಷ ಸಾತ್ವಿಕ
ವಿನಯಕ್ಕೆ ಮೇರು ಸದೃಶ,  ಆಸ್ತಿಕ ಋಷಿ ಸ್ವರೂಪ
ಕಡೆವರೆಗೂ   ಕಡೆದು   ನವನೀತವಿತ್ತ  ಗವಳಿಗ
ಮಂಜೇಶ್ವರ ಗೋವಿಂದ,  ವರ, ಕನ್ನಡ ಪಾಲಕ

ವಿಷಯ ಸಂಕ್ಷಿಪ್ತ:

ಗೋವಿಂದ ಗೆಳೆಯನಿಗಿತ್ತ* ಊರುಗೋಲಿನ ಬೆತ್ತ
ಗಾಂಧಿ ಹಿಡದ, ಕೊನೆವರಗೂ ಅದನೇ ಊರಿ ನಡೆದ!
(“ಕಾಕಾ ಕಾಲೇಲ್ಕರ್ ಸ್ವಾತಂತ್ರ್ಯ ಹೋರಾಟಗಾರ ಸ್ನೇಹಿತ,
ಗೋವಿಂದ ಪೈ ಕೊಟ್ಟ ಕೋಲನ್ನು ಗಾಂಧಿಗೆ ಉಡುಗೊರೆ ಮಾಡಿದ್ದರು)

ಬೆಳ್ಳಿ ಮೀಸೆಯ, ಧೂಮಪ್ರಿಯ.
ತನ್ನ ಮನೆಯಲ್ಲೆ ದೊಡ್ಡ ಗ್ರಂಥಾಲಯ.
ಈಗ ಉಡುಪಿ ಎಂ.ಗೋವಿಂದ ಪೈ ಸಂಶೋಧನಾ ಸಂಸ್ಥೆಯಲ್ಲಿ ಸುರಕ್ಷಿತ.

೧೯೫೦ ಮುಂಬಯಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, ಆಗಿನ ಸರ್ಕಾರ ಕೊಟ್ಡ
ರಾಷ್ಟ್ರಕವಿ ಪದವಿ ಒಪ್ಪಲು ಆತ್ಮೀಯರ ಬಲವಂತದೊತ್ತಾಯ.

ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ವಿನಯಪೂರ್ವಕ ನಿರಾಕರಣೆ.
ಗೊಲ್ಗೋಥಾ,ವೈಶಾಖ, ಕೃಷ್ಣ ಚರಿತ, ಚಿತ್ರ ಭಾನು, ಗೊಮ್ಮಟ ಸ್ತುತಿ ಖಂಡ ಕಾವ್ಯ.
ಹೆಬ್ಬೆರಳು,  ತಾಯಿ, ನೋ, ನಾಟಕಗಳು. ಗಿಳಿವಿಂಡು, ನಂದಾದೀಪ, ಹೃದಯ ತರಂಗ,
ಇಂಗಡಲು ಕವನ ಸಂಗ್ರಹ, ೨೦ ಸಾನೆಟ್, ಗೀತಾಜಲಿ (ಅನುವಾದ)
ಅನೇಕ ಸಂಶೋಧನಾ ಕೃತಿಗಳು, ಪ್ರಬಂಧಗಳು.

ಮಂಜೇಶ್ವರ ಗೋವಿಂದ ಪೈ
ಜನನ: ೨೩.೩.೧೮೮೩
‌ನಿಧನ:  ೬.೯.೧೯೬೩

ನಾಡು ನುಡಿ ಸೇವಕರು – ೩ ಕನ್ನಡದ ಆಚಾರ್ಯ ಪುರುಷ

ಎಲ್ಲಿ ಕಡಲದು ಮೊರೆಯಿತೋ ಅದರ ತಡಿಯಲವರ್ ಮೆರೆದರೋ
ಎಲ್ಲಿ ಕನ್ನಡ ಬೆಳೆಯ ಬಯಸಿತೊ ಅಲ್ಲಿ ಭಾಷೆಯ ಪೊರೆದರೋ
ಎಲ್ಲಿ ಜನಮನ ಅರಿಯ ಬಯಸಿತೋ ಅಲ್ಲಿ ಅರುಹಿ ನಲಿದರೋ
ಎಲ್ಲಿ ಸೃಜನತೆ ಅರಳ ಬಯಸಿತೊ ಅಲ್ಲಿ ಹೃದಯ ತೆರೆದರೋ
ಅವರು ಜಯವನು ತಂದರು
ಅವರು ನಮ್ಮೊಡೆ ನಲಿದರು
ಅವರೆ ಕನ್ನಡ ಹಿರಿಯರು

‘ಸವಿದು ಮೆದ್ದರೊ’ ಸವಿಯ ಕನ್ನಡ ಕಾವ್ಯ ಕಂಪಿನ ಜೇನನು
ತೆರೆದು ತೋರಿದರವರು ಚಂದದ ಭಾಷೆಯಾ ಚಿರ ಚೆಲುವನು
ಮಾತೃ ನುಡಿಯಲಿ ಮಮತೆ ಮೆರೆದರು ಬರೆದು ಕುಕಿಲ ಕಬ್ಬನು
ಬೆಳೆದು ಬೆಳೆಯ ಬಯಸಿ ತಂದರು ನೆಲಕೆ ನೆಲೆಯ ನಲು ನುಡಿಯನು
ಅವರೆ ‘ಕವಿ ಶಿಷ್ಯ’ ನಾಮರು
ಅವರೆ  ನವಪಥ ಪುರಷರು
ಅವರೆ ಪಂಜೆ ಮಂಗೇಶರು

ನೀಳ ಕಾಯದ ದಟ್ಟಿ ಕೋಟಿನ ಶಿರಕೆ ಪೇಠದ ಹಸನ್ಮುಖ
ಮಾತು ಮಾತಲಿ ಜೇನು ಸುರಿದಾ ಸಹೃದಯ ಮೆರೆದಾ  ಶಿಕ್ಷಕ
ಮಾತೃ ಭಾಷೆಯ ಪ್ರೀತಿ ಬತ್ತದ, ನುಡಿ ಸಿರಿಯ  ಸಂಶೋಧಕ
ಕೊಂಕಣಿ, ತುಳು ನುಡಿಯ ಕೂಡೆ, ಕನ್ನಡ  ಸಮನ್ವಯ ಸಾಧಕ
ಅವರೆ ಆದರ್ಶ ರೂಪರು
ಗೋವಿಂದ ಪೈಯ ಗುರುಗಳು
ಮಾಸ್ತಿ ಮೆಚ್ಚಿದಾ ಕವಿಗಳು

ಸಣ್ಣ ಕತೆಗಳ ಜನಕರಾದಿರೊ, ಶಿಶು ಸಾಹಿತ್ಯಕೆ  ಪಿತಾಮಹ
ನವೋದಯಕೆ ನಾಂದಿ ಹಾಡಿ, ಬರೆದಿರೋ ಹೊಸತಿನ ನಾಟಕ
ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ, ಕನ್ನಡಕ್ಕೆ ಚೇತನ
ಮಿತ್ರ ಮಂಡಲಿ ಸ್ಥಾಪಿಸಿದಿರೊ, ಮಕ್ಕಳ ಸಾಹಿತ್ಯ ಮಂಡಲ
ಅವರೆ ‘ಹುತ್ತರಿ ಹಾಡು’ ಬರೆದ
‘ನಾಗರ ಹಾವು’ ಗೀತೆ ಒರೆದ
‘ತೆಂಕಣ ಗಾಳಿ’ ಕವಿ ಪುಂಗವ

ಕುಮಾರ ವ್ಯಾಸ ಭಾರತ ಪರಿಷ್ಕರಣ ಶಬ್ಧ ಮಣಿ ದರ್ಪಣ
ಕೃತಿಗಳೆನಿತೊ ಬರೆದಿರೊ, ಭಾಷೆ ಬಗೆಗಿನ ಸಂಶೋಧನ
ಮಕ್ಕಳಿಗಿತ್ತಿರಿ ಭೂಗೋಳ ಪುಸ್ತಕ, ಗಣಿತ, ವ್ಯಾಕರಣ
ತುಳುವಿನಲ್ಲಿ ‘ಕೋಟಿ ಚನ್ನಯ’  ಕನ್ನಡಕೆ ನೀಡಿ ‘ಶಾಲಿನಿ’
ನಮ್ಮ ಮತಿಯ ಬೆಳಗೆ ನೀವು
‘ದುರ್ಗಾವತಿ’ ಕೃತಿ ಇತ್ತಿರಿ
‘ವೀರ ಮತಿ’ಯನೂ ಬರೆದಿರಿ

ಕುವೆಂಪುಗೆ ‘ಆಚಾರ್ಯ ಪುರಷ’
ಬಿಎಂಶ್ರೀಗೆ ಆದರ್ಶಪ್ರಾಯ
ಕರುನಾಡಿಗರೆಂದೂ ಮರೆಯದ
ಪೂಜ್ಯ ಪಂಜೆ ಮಂಗೇಶರಾಯ

(೧೮೭೪ – ೧೯೩೭) ಬಂಟವಾಳ ಜನ್ಮಸ್ಥಳ.

(ಪಂಜೆಯವರ ಪ್ರಸಿದ್ಧ ಗೀತೆ “ಹುತ್ತರಿ ಹಾಡು’ ಛಾಯೆಯಲ್ಲಿ ಈ ಕಥನ ಕವನ ಬರೆದಿದ್ದೇನೆ.)

                                 – ಅನಂತ ರಮೇಶ್

ನಾಡು-ನುಡಿ ಸೇವಕರು – ೨ ಕನ್ನಡದ ಕಣ್ವ

ಸಂಪಿಗೆಯಲ್ಲಿ ಜನಿಸಿ ಕನ್ನಡ ಕಂಪ ಪಸರಿಸಿ
ಕನ್ನಡ ತನ್ನೆದೆಗೂಡಲ್ಲಿ ಬೆಳಗಿಸಿ
ನವೋದಯ ದೀಪ ಪ್ರಖರಗೊಳಿಸಿಯೂ
‘ತಾನು ನಾರೆಂದು’ ವಿನಯ ಮೆರೆದಿರಿ

ಆಂಗ್ಲ ಸ್ನಾತಕೋತ್ತರ ಓದಿ
ಕಾನೂನು ಮುಗಿಸಿ, ಮೈಸೂರು ಸೇರಿ
ಮಹಾರಾಜ ವಿದ್ಯಾಲಯದಲಂದು
ಬೋಧಕ ಬದುಕ ಸೇವೆಗಿಳಿದಿರಿ

ಪಶ್ಚಿಮದ ಸಾಹಿತ್ಯ ಸೊಂಪು ಕಂಪು
ಕನ್ನಡಕೆ ಹರಿಸಿ ಹೊಸದಿಸೆಯ ತೋರಿ
ನವ ಚಿಂತನೆಯ ವಿಪುಲ ಫಲ
ಬೆಳೆವ ಕೃಷಿಕರ ದಂಡು ಕಟ್ಟಿದಿರಿ

ಮಾಸ್ತಿ ಕುವೆಂಪು ರಾಜರತ್ನಂ
ತೀನಂಶ್ರೀ ಶಿಷ್ಯರತ್ನಗಳ ಮನ
ಮಾತೃಭಾಷೆಯೆಡೆ ಸೆಳೆದು ನೀವಾದಿರಿ
ಕನ್ನಡ ಮೆರೆಸುವ ಪಡೆಯ ಸ್ಪೂರ್ತಿ

“ಅಶ್ವತ್ಥಾಮನ್, ಗದಾಯುದ್ಧ, ಪಾರಸೀಕ ನಾಟಕ
ಹೊಂಗನುಸುಗಳು, ಇಂಗ್ಲೀಷ್ ಕವಿತೆಗಳು ಪುಸ್ತಕ
ಒಳ್ಳೆ ಸಾಹಿತ್ಯ, ಕನ್ನಡ ಕೈಪಿಡಿ, ಕನ್ನಡ ಬಾವುಟ”
ಬರೆಯದಿದ್ದರೂ ಬೆಟ್ಟದಷ್ಟು, ಕೊಟ್ಟುದೆಲ್ಲ ಸಾರ್ಥಕ
ಹೊಸ ಕನ್ನಡದತ್ತ ನೆಟ್ಟಿಬಿಟ್ಟಿರಿ ದಿಕ್ಸೂಚಿಯ ಫಲಕ

ಕನ್ನಡ ಸಾಹಿತ್ಯ ಪರಿಷತ್ತು ಕಂಡ ದಕ್ಷ ಉಪಾಧ್ಯಕ್ಷ
ಕನ್ನಡಕ್ಕೆ ಧ್ಯೇಯ ವಾಕ್ಯ, ಕನ್ನಡಕ್ಕೆ ಲಾಂಛನ
ಪರಿಷತ್ತಿನ ಮಹಿಳಾ ಘಟಕ, ಅಚ್ಚುಕೂಟ ಸ್ಥಾಪಕ
ಕನ್ನಡ ಕಾವ, ಕನ್ನಡ ಜಾಣ ಪರೀಕ್ಷಾ ವ್ಯವಸ್ಥಾಪಕ
ಕನ್ನಡಪ್ರಚಾರ,ಗೋಷ್ಠಿ,ಮೇಳ ನಿಮ್ಮಿಂದಕಂಡಿತು ಕರ್ನಾಟಕ

ಬಿಎಂಶ್ರೀ ಎಂಬ ಬೆಳಕೇ
ಮುಸುಕಿದಾ ಮಬ್ಬಿನಲಿ
ಕೈ ಹಿಡಿದು ನಡೆಸಿದಿರಿ ಕನ್ನಡಿಗರ
ತಾಯಿ ನುಡಿ ಮಡಿಲಿಗೆ

ಕನ್ನಡದ ಕಣ್ವರೇ
ಸಾಹಿತ್ಯ ಸೇವಾಸಕ್ತರೆ
ಪೊರೆದಿರಿ ಮಾತು ಕೃತಿ ಕಾಯಕದೆ
ನಮ್ಮ ಘನ ಭಾಷೆ

ಶ್ರೀ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ

ಜನನ: ೩.೧.೧೮೮೫
ಮರಣ: ೫.೧.೧೯೪೬

ನಾಡು-ನುಡಿ ಸೇವಕರು – ೧ ಕನ್ನಡ ಕುಲ ಪುರೋಹಿತ

ಕನ್ನಡ ಕುಲ ಪುರೋಹಿತ

ಸ್ವಾತಂತ್ರ್ಯ ಪೂರ್ವದ ಕರ್ನಾಟಕ ಚಿತ್ರ
ನೆಲ ನುಡಿ ಜನ ಗ್ರಹಣವಾಗಿದ್ದು ಸತ್ಯ!
ಹಂಚಿ ಹರಿದು ಆವರಿಸಿದ ಧೂಳು ನಿರಾಸೆ
ಬತ್ತಿತ್ತು ನಾಡಲ್ಲಿ ಸಮಗ್ರತೆಯ ಆಸೆ

ಮುಂಬಯಿಯಲ್ಲೋದಿ ಧಾರವಾಡಕೆ ಬಂದು
ವಕೀಲ ವೃತ್ತಿಗೆ ತೊಡಗಿದ ಕನ್ನಡದ ಬಂಧು
ವಿದ್ಯಾವರ್ಧಕ ಸಂಘ ಪ್ರವರ್ತಕನು ಅಂದು
ಜಯ ಕರ್ನಾಟಕ ಪತ್ರಿಕೆ ಸ್ಥಾಪಕನು ಮುಂದು

ಗೋಖಲೆ ಸಾವರ್ಕರರಿಗೆ ನಿಕಟವರ್ತಿ
ತಿಲಕರ ಗೀತಾ ಕನ್ನಡಕ್ಕನುವಾದಿಸಿ
ನಾಡ ಹಬ್ಬ ಕನಸ ಕನ್ನಡಿಗರಿಗೆ ಹಚ್ಚಿ
ಅಸ್ಮಿತೆಗೆ ನಾಂದಿಯ ಹಾಡಿದನಾ ಮುತ್ಸದ್ಧಿ

ಅಂದು ಮಂತ್ರಾಲಯದಿಂದ ಹೊರಟ ವೆಂಕಟ
ಹಂಪೆ ಭೂಮಿಯ ಗತ ವೈಭವವನು ಕಂಡ
ಹೃದಯ ಕಲಕಿತು ಕಣ್ಣೀರು ಹರಿಯಿತು
ಕನ್ನಡ ಏಕೀಕರಣ ಶಪಥ ಮೊಳಗಿತು

ಹೊಯ್ಸಳ ಗಂಗ ಕದಂಬ ಇತಿಹಾಸ ಬೆಳಕು
ವಿಜಯನಗರ ಬಾದಾಮಿ ವೈಭವ ಮೆಲುಕು
ಎಲ್ಲರೊಂದಾಗುವಾ ಕನಸನ್ನು ಸ್ಫುರಿಸಿ
ಮುನ್ನಡೆಸಿದ ತೇರ ಕನ್ನಡಾಂಬೆಯನಿರಿಸಿ

ಸಾಹಿತಿಗಳೊಗ್ಗೂಡಿಸಿದ ಶ್ರೀಮಂತ ಹೃದಯ
ಡಿವಿಜಿ ಬೇಂದ್ರೆ ಎಲ್ಲರಿಗೂ ದೊಡ್ಡ ಗೆಳೆಯ
ಪರಿಷತ್ತು ಸ್ಥಾಪನೆಗೆ ಮುಂಚೂಣಿಗೆ ನಿಂತ
ಕನ್ನಡಿಗರಭಿಮಾನ ಹೆಚ್ಚಿಸಿದ ಸಂತ

ನೀವಲ್ಲವೇ ಕರುನಾಡ ಕುಲ ಪುರೋಹಿತ
ನೆನೆದಾಗ ಸೊಗದ ಗಂಧ ತೀರ್ಥದ ಹಿತ!
ಕೃತಜ್ಞ ನಮನ ಆಲೂರು ವೆಂಕಟರಾಯ
ಅಮರರಾದಿರಿ ಕಟ್ಟಿ ಕನ್ನಡದ ಆಲಯ.