ಅನುಶ್ರೀ

dprathnammaandmanjamma-1581328982

ಅನುಶ್ರೀ – ಕನ್ನಡ ವಾಹಿನಿ ಸಿರಿ

ಜಿ಼ೀ ಕನ್ನಡ ವಾಹಿನಿಯಲ್ಲಿ ʼಸರಿಗಮʼ ಸಂಗೀತ ಕಾರ್ಯಕ್ರಮ ಪ್ರತಿ ಶನಿವಾರ, ಭಾನುವಾರ ಕೆಲವು ವಾರಗಳಿಂದ ನಡೆಯತೊಡಗಿದೆ.

ಆಡಿಷನ್‌ ಪ್ರಕ್ರಿಯೆಯ ಸಂಚಿಕೆಗಳಂತೂ ನನಗೆ ಬಹಳವೇ ಇಷ್ಟವಾಗಿ ಎಲ್ಲ ಸಂಚಿಕೆಗಳನ್ನೂ ಬಿಡದೆ ನೋಡಿದ್ದಾಯ್ತು.  ಬಂದ ಎಲ್ಲ ಗಾಯಕ ಸ್ಪರ್ಧಿಗಳು ಮಂದಿಯ ಮನಸೆಳೆಯುವಂತೆಯೇ, ಮಾತುಗಳಲ್ಲಿ ಮನ ಸೆಳೆದವರು ವಿಜಯ ಪ್ರಕಾಶ್‌  ಹಾಗೆಯೇ ಹಂಸಲೇಖ.  ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಸರಿ ಗಮ ನಿರ್ವಾಹಕಿ ಅನುಶ್ರೀ.   ಕುಳಿತು ಕಾರ್ಯಕ್ರಮ ನೋಡುವ ಮನೆಮಂದಿಗೆ ಈಕೆ ಆ ಮನೆಯ ಮಗಳು, ಅಕ್ಕ ಅಥವಾ ತುಂಟ ತಂಗಿ ಅಥವಾ ಮೊಮ್ಮಗಳೂ ಅಗಿಬಿಟ್ಟರು!

ಅನುಶ್ರೀ ನಡೆಸಿಕೊಟ್ಟ ಅನೇಕ ಸಂಚಿಕೆಗಳನ್ನು ನೋಡಿದ ನನಗೆ ಒಂದನ್ನು ಮರೆಯಲೇ ಅಗುತ್ತಿಲ್ಲ. ಅದು ಮಧುಗಿರಿಯಿಂದ ಬಂದ ಇಬ್ಬರು ಅಂಧ ಸೋದರಿಯರು (ರತ್ನಮ್ಮ ಮತ್ತು ಮಂಜಮ್ಮ) ಆಡಿಷನ್‌ಗಾಗಿ ಹಾಡುವಾಗಿನ ದೃಶ್ಯಗಳು. ಆ ಸೋದರಿಯರು ಸಂಕೋಚ, ಭಯವಿದ್ದರೂ ಯಾವುದೋ ಬೆಳಕಿನ ಕಿರಣಗಳತ್ತ ಕೈಚಾಚುವಂತೆ ಹಾಡತೊಡಗಿದ್ದಾರೆ.   ಪಕ್ಕದ ಕೊಠಡಿಯಲ್ಲಿ ಅವರ ಅಜ್ಜಿ ಕುಳಿತಿದ್ದಾಳೆ. ಅಜ್ಜಿಯ ಮನಸ್ಸು ದುಗುಡಗೊಂಡಿದೆ.   ತನ್ನ ಮೊಮ್ಮಕ್ಕಳು ಹಾಡು ಚಂದದಲ್ಲಿ ಹಾಡಬಲ್ಲರೇ?  ಅಲ್ಲಿ ಕುಳಿತು ಕೇಳುವ ಜಡ್ಜ್‌ಗಳಿಗೆ, ಕೇಳುಗರಿಗೆ ಇಷ್ಟವಾಗಬಹುದೇ?  ಇವೆಲ್ಲ ಮುಗಿದ ನಂತರ ಮೊಮ್ಮಕ್ಕಳೊಂದಿಗೆ ತನ್ನೂರಿಗೆ ಹಿಂತಿರುಬೇಕಿದೆಯಲ್ಲ… ತನ್ನಲ್ಲಿ ಬಸ್ಸಿಗಾಗುವಷ್ಟು ಹಣ ಉಳಿದಿರಬಹುದಲ್ಲ?     ತನ್ನ ಮೊಮ್ಮಕ್ಕಳು ಏನು ಮಾಡಿಯಾರು?   ಇತ್ಯಾದಿ  ಚಿಂತೆಯಲ್ಲಿ ಮುಳುಗಿದಂತಿರುವ ಅಜ್ಜಿ ಎತ್ತಲೋ ನೋಡುತ್ತಾ ಆ ಮಕ್ಕಳ ಹಾಡನ್ನು ಕೇಳುವ ಅಥವಾ ಎದುರಿನ ಟಿವಿ ಪರದೆಯನ್ನು ನೋಡುವುದನ್ನು ಮರೆತುಬಿಟ್ಟದ್ದಾಳೆ!

ಆ ಕ್ಷಣ ಅನುಶ್ರೀ ಅಜ್ಜಿಯ ಗಲ್ಲ ಹಿಡಿದು ಅವಳ ಮುಖ ಟಿವಿ ಕಡೆಗೆ ತಿರುಗಿಸಿಟ್ಟು, ʼಅಜ್ಜೀ… ನಿಮ್ಮ ಮೊಮ್ಮಕ್ಕಳ ನೋಡಿ… ಅವರ ಹಾಡು ಕೇಳಿʼ ಅನ್ನುತ್ತಿದ್ದಾಳೆ!   ಅಜ್ಜಿ ಎಚ್ಚರಗೊಂಡಂತೆ ಅವರ ಹಾಡು ಕೇಳತೊಡಗಿದ್ದಾಳೆ.   ಕಣ್ತೆರುದು ನೋಡತೊಡಗಿದ್ದಾಳೆ. ಕೆಲವೇ ಕ್ಷಣಗಳು, ನಂತರ ಮತ್ತೊಂದು ದೃಶ್ಯ ಹಾದುಬರುತ್ತದೆ. ಅಲ್ಲಿ ಅನುಶ್ರೀ ಸಣ್ಣ ಬಾಲಕಿಯಾಗಿದ್ದಾಳೆ. ನೆಲದಮೇಲೆ ಕುಳಿತು ಆಸೆಗಣ್ಣಿನಿಂದ ಆ ಅಂಧಸೋದರಿಯರು ತನ್ನ ಅಕ್ಕಂದಿರೇ ಹಾಡುತ್ತಿರುವಂತೆ, ಅವರು ಖಂಡಿತಾ ಆಯ್ಕೆಗೊಳ್ಳುತ್ತಾರೆನ್ನುವ ಭರವಸೆಯ ಮುಖಹೊತ್ತು ಕುಳಿತಿದ್ದಾಳೆ!   ʼದೇವರೇ ಈ ಇಬ್ಬರೂ ಆಯ್ಕೆಯಾಗಲಿʼ ಅನ್ನುವ ಪ್ರಾರ್ಥನೆಯಲ್ಲಿ ಕುಳಿತಂತೆ, ಆಸೆಗೋಪುರದ ತುದಿಹಿಡಿದಿರುವ ಮುಗ್ಧ ಮಗುವಿನಂತೆ ಆ ‘ತಾರೆ’ ಕಾಣಿಸುತ್ತಾಳೆ. ಆ ದೃಶ್ಯ ನನಗೆ ಕಾವ್ಯಮಯವಾಗಿಬಿಟ್ಟಿದೆ. ಹಾಗೆಯೇ ನನ್ನ ಮಂತ್ರಮುಗ್ಧವಾಗಿಸಿಬಿಟ್ಟಿದೆ. ಎತ್ತಲಿಂದಲೋ ಬಂದ ಆ ಬಡ ಕುಟುಂಬದವರಿಗೆ ಅನುಶ್ರೀ ಅನ್ನುವ ತಾರೆ ಮನೆಯ ಮಗಳಾಗಿ ಕಾಣುತ್ತಿದ್ದಾಳೆ.   ಹೃದಯಸಂಪನ್ನೆಯಾಗಿದ್ದಾಳೆ.   ನೋಡುಗರ ಮನಹೊಕ್ಕು ಅಚಾನಕ ಅವರ ಕಣ್ಣಲ್ಲಿ ಹನಿ ಜಿನುಗುವಂತೆ ಮಾಡಿಬಿಟ್ಟಿದ್ದಾಳೆ!  ದೃಶ್ಯಲೋಕದ ಬಣ್ಣಬಣ್ಣಗಳಿಂದ ಹೊರಬಂದ ಗಟ್ಟಿನೆಲದ ವಾಸ್ತವ ರೂಪಿಯಾಗಿದ್ದಾಳೆ Anchor ಅನುಶ್ರೀ!    ಆ ಕಣ್ಣು ಕಾಣದ ಸೋದರಿಯರ ಕಣ್ಮಣಿಯಾಗಿಬಿಟ್ಟಿದ್ದಾಳೆ!

ಆ ದೃಶ್ಯ ಮತ್ತೆ ಮತ್ತೆ ನನ್ನೊಳಗೆ ರಿವೈಂಡ್‌(rewind) ಆಗಿ ಪ್ಲೇ (play) ಆಗುತ್ತಲೆ ಇದೆ!

ಈಗಾಗಲೇ ಸುದ್ದಿ ಹರಿದಾಡಿದೆ… ಅದರ ಶೀರ್ಷಿಕೆ ಇಂತಿದೆ – ʼಅನುಶ್ರೀಯ ನಿಜವಾದ ಮುಖ ಬಯಲು!ʼ

ಅರ್ಜುನ್‌ಜನ್ಯ, ಜಗ್ಗೇಶ್‌, ದರ್ಶನ್‌ಹೀಗೆ ರತ್ನಮ್ಮ ಸೋದರಿಯರ ಬಗೆಗೆ ಕರಗಿ, ತಮ್ಮ ಸಹಾಯ ಹಸ್ತ ಚಾಚಿದ್ದು ಈಗ ಮನೆ ಮಾತು ಕೂಡ.

(Pic courtesy:Google)

ಹಿಮಸೇತುಪರಿ

shiv

ಶಿವ ಕರುಣೆ
ಇತ್ತ ಭರತ ಭೂಮಿ
ಹರ ಸೈರಣೆ
ಹಿಮ ನಮ್ಮ ದನಿ!

ಶಿವ ತೋರಿದ್ದ
ಹರ ಸಾರಿದ್ದ
ಸಮಯದಲ್ಲಿ ಢಮರು
ತ್ರಿಶೂಲ; ತಾಂಡವ
ಅಪಮಾನಕ್ಕೆ ರೌದ್ರ
ಶತ್ರು ದಮನವೆ ಗುರಿ
ನಂತರವೇ ಶಾಂತಿ

ಅರಿಯನರಿವುದಿದೆ
ರಕ್ಕಸನ ಸಾವಿರ ರೂಪ
ಅನಾವರಿಣಿಸಿ
ತರಿದೊಗೆವುದಿದೆ!

ಅಳಿಯದು ಶಿವ ಮಂತ್ರ
ಉಳಿಯಲಿ ಹಿಮಸೇತುಪರಿ

(Pic : Google)

ಬಚ್ಚಿಟ್ಟ ಮಕ್ಕಳ ಪದ್ಯಗಳು

20200219_210352_2

ಹಳೆಯ ನೋಟ್ ಪುಸ್ತಕದಲ್ಲಿ ಬಚ್ಚಿಟ್ಟ ಎಳೆಯ ಪದ್ಯಗಳ ಕಥೆ.

ಸುಮಾರು ೪ ದಶಕಗಳಿಂದ ಹಳೆಯ ಮೂರು-ನಾಲ್ಕು ಸೂಟ್ಕೇಸುಗಳು ನನ್ನ ಅಂಟಿಕೊಂಡಿದ್ದುವು. ನಾನು ಹೋದ ಊರುಗಳಿಗೆಲ್ಲ ಅವುಗಳದೂ ಪ್ರಯಾಣ. ವಿಚಿತ್ರವೆಂದರೆ ಅವನ್ನು ಯಾವತ್ತೂ ತೆರೆದು ನೋಡದಿರುವುದು. ಮನೆಯಲ್ಲಿ ಯಾರಾದರೊಬ್ಬರು ಒಮ್ಮೊಮ್ಮೆ ಅವನ್ನು ತೆರೆದದ್ದಿದೆ. ಒಂದಷ್ಟು ಹಳೆಯ ನೋಟ್ ಪುಸ್ತಕಗಳು ಅವು. ಅದರಲ್ಲಿದ್ದುದೆಲ್ಲ ಯಾವುದೋ ಗತಕಾಲದ ಕುರುಹುಗಳಂತೆ ಕಾಣುತ್ತಿದ್ದ ಕಾರಣ ಅವನ್ನೆಲ್ಲ ತೆರೆದು ನೋಡುವ ಮನಸ್ಸು ಮನೆಯವರಾರೂ ಮಾಡಿರಲಿಲ್ಲ.

ಮೊನ್ನೆ ಹಳೆಯ ಕೊಳೆಯ ಸೂಟ್ಕೇಸುಗಳನ್ನು ಬಿಬಿಎಂಪಿಯವರ ಕಸ ಸಂಗ್ರಹಕ್ಕೆ ಹಾಕಿಬಿಡುವ ಆಲೋಚನೆ ಬಂದಿದ್ದೇ ಮೇಲಿದ್ದದ್ದನ್ನೆಲ್ಲ ತೆಗೆದೆ. ಧೂಳು ಝಾಡಿಸಿ ಸೂಟ್ಕೇಸ್ ತೆರೆದೆ. ನೋಟ್ ಪುಸ್ತಕಗಳು ವಿಚಿತ್ರ ಬಣ್ಣಗಳಲ್ಲಿ ಕಾಣಿಸದವು. ಪುಟಗಳನ್ನು ತೆರೆದಂತೆ ನನ್ನ ಬಾಲಿಶ ಬರಹಗಳು ಗೀಚು ರೂಪದಲ್ಲಿ ಅಣಕಿಸಿದವು. ಸಧ್ಯ, ಮನೆಯವರು ಯಾರೂ ಇವನ್ನು ನೋಡದೆ ಮರ್ಯಾದೆ ಉಳಿಯಿತು ಅಂದುಕೊಂಡೆ. ಆಗ ಸಿಕ್ಕಿದ್ದು ನಾಲ್ಕು ಪತ್ರಿಕೆಯ ತುಣುಕುಗಳು. ನನ್ನ ೬ ಮತ್ತು ೭ ನೇ ತರಗತಿಯ ದಿನಗಳಲ್ಲಿ ಧೈರ್ಯ ಮಾಡಿ ಬರೆದು, ಪ್ರಜಾವಾಣಿ, ಸಂಯುಕ್ತ ಕರ್ನಾಟಕಕ್ಕೆ ಕಳುಹಿಸಿದ್ದ ಎಳೆಯ(ರ) ಪದ್ಯಗಳು ಅವು! ೪೫ ವರ್ಷಗಳಿಗೂ ಮೊದಲು ಪತ್ರಿಕೆಗಳಲ್ಲಿ ಪ್ರಕಟವಾದ ಕೆಲ ಪದ್ಯ ಈ ಬ್ಲಾಗಲ್ಲಿ ಹಾಕುವ ಆಸೆಯಾಯಿತು. (ಮಕ್ಕಳ ದೇವರು ಪದ್ಯ ಈಗ ಸ್ವಲ್ಪ ತಿದ್ದಿದ್ದೇನೆ) ನನ್ನ ಹೆಸರಿನಡಿ ’ಗುಬ್ಬಿ’ ಅನ್ನುವುದನ್ನು ಓದಿ, ಗುಬ್ಬಿಯ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿದ್ದ ಸಾಹಿತಿ ದಿ.ಕಡೂರು ರಾಮಸ್ವಾಮಿ ಯಾರನ್ನೋ ವಿಚಾರಿಸಿ ಮಿಡಲ್ ಸ್ಕೂಲಿನಲ್ಲಿದ್ದ ನನ್ನನ್ನು ’ಯಾರಿವನು?’ ಅಂತ ಕುತೂಹಲದಿಂದ ನೋಡಲು ಬಯಸಿ ಯಾರಮೂಲಕವೊ ಕರೆಸಿದ್ದು ನೆನಪಾಯಿತು!

ಅವರು ಅಭಿಮಾನದಿಂದ ನನ್ನನ್ನು ನೋಡಿದ್ದು, ನಾನು ಸಂಕೋಚದ ಮುದ್ದೆಯಾಗಿ ಅವರಿಗೆ ನಮಸ್ಕಾರವನ್ನೂ ಮಾಡದಿದ್ದದ್ದ್ರು ನೆನಪಾಗುತ್ತಿದೆ!

ಅಚ್ಚರಿಯೆಂದರೆ, ಇತ್ತೀಚೆಗೆ ಮಕ್ಕಳ ಕವನ ಮತ್ತು ಕತೆಗಳನ್ನು ಬರೆಯುವ ಹಳೆ ಚಾಳಿ ಮರುಕಳಿಸಿದೆ!

ಹಳೆಯ ನೆನಪನ್ನು ಇಂದು ಬ್ಲಾಗಿನಲ್ಲಿ ಹಾಕಿ ಮತ್ತೆ ಎಳೆಯನಾಗುವ ತವಕ!

ಜೈ ಭಾರತಾಂಬೆ

ಪಡೆದಿಹೆವು ಸ್ವಾತಂತ್ರ್ಯ
ತೊಡೆದಿಹೆವು ಪರತಂತ್ರ
ನಾವಿಂದು ಸ್ವತಂತ್ರ
ಜೈ ಭಾರತಾಂಬೆ//

ನಾಡಿನಾ ಪ್ರಜೆಗಳು
ನಾವೆಲ್ಲ ಮುಂದೆ
ನಾಡಿನಾ ರಕ್ಷಕರು
ನಾವೆಲ್ಲ ಒಂದೆ
ಜೈ ಭಾರತಾಂಬೆ//

ಗಾಂಧಿ ಬುದ್ಧರ ನಾಡು
ಅತಿ ಪವಿತ್ರ
ದೇಶ ಸೇವೆಗೆ ನಾವು
ಪೂರ್ಣ ಸ್ವತಂತ್ರ
ಜೈ ಭಾರತಾಂಬೆ//

(ಪ್ರ.ವಾ)
ಭರತ ಕಲಿಗಳು

ಭಾರತ ಮಾತೆಯ ಪುತ್ರರು ನಾವು
ಎಂತಹ ಪುಣ್ಯ ಶಾಲಿಗಳು//

ಪವಿತ್ರ ಭೂಮಿಲಿ ಜನಿಸಿಹ ನಾವು
ದೇಹವ ದಣಿಸಿ ದುಡಿಯುವೆವು
ಹೆಮ್ಮೆಯ ನಾಡಲಿ ಪುಟ್ಟಿಹ ನಾವು
ಧನ್ಯತೆ ಪಡೆಯಲು ಶ್ರಮಿಸುವೆವು //೧//

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ
ಮರೆಯದೆ ಮನಸಲಿ ನಮಿಸುವೆವು
ಸ್ವಾತಂತ್ರ್ಯ ಕಲಿಗಳ ನೆನಪಿನ ಸ್ಪೂರ್ತಿಲಿ
ನವ ಭಾರತವನು ರಕ್ಷಿಪೆವು //೨//

ದೇಹದ ಹಂಗನು ದೂರ ತೊರೆದು
ದೇಶದುನ್ನತಿಗೆ ದುಡಿಯುವೆವು
ಸ್ವತಂತ್ರ ನಾಡಲಿ ಜೀವಿಸಿ ನಾವು
ಸ್ವಾರ್ಥ ವಂಚನೆಯ ತೊರೆಯುವೆವು //೩//

ಶಾಂತಿ ಅಹಿಂಸೆಯ ದೇಶವಿದೆನ್ನುವ
ಅರಿವನು ಜಗಕೆ ತೋರುವೆವು
ವೀರ ಹುತಾತ್ಮರು ನಡೆದ ದಾರಿಯಲಿ
ಹೆಜ್ಜೆಯನಿಕ್ಕುತ ನಡೆಯುವೆವು //೪//

(ಸಂ.ಕ)
ಮಕ್ಕಳ ಮನದಲಿ ನೆಹರೂ

ಚಾಚಾ ನೆಹರು ಎಲ್ಲಿಹರು?
ಮಕ್ಕಳ ಮನದಲಿ ನೆಲೆಸಿಹರು/

ಮಕ್ಕಳ ಮೆಚ್ಚಿನ ಚಾಚಾ ನೆಹರು
ಎಳೆಯರ ಬಳಗದ ಮುದ್ದಿನ ನೆಹರು
ಬಾಲರ ಗುಂಪಿನ ಪ್ರೀತಿಯ ನೆಹರು

ಮಕ್ಕಳ ಬಿಟ್ಟು ಅವರೆಲ್ಲಿಹರು
ಮಕ್ಕಳ ಮನದಲಿ ನೆಲೆಸಿಹರು//೧//

ಶಾಂತಿದೂತನೆನಿಸಿದ ನೆಹರು
ಭಾರತ ಮಾತೆಯ ಹೆಮ್ಮೆಯ ನೆಹರು
ಗಾಂಧೀಜಿ ಮೆಚ್ಚಿದ ಆ ನೆಹರು

ಮಕ್ಕಳಿಗೆಲ್ಲ ಅವರೆಲ್ಲಿಹರು
ಮಕ್ಕಳ ಮನದಲಿ ನೆಲೆಸಿಹರು//೨//

ಮಕ್ಕಳೆ ಮುಂದೆ ಪ್ರಭು ಎಂದವರು
ಮಕ್ಕಳೊಡನೆ ನಲಿದಾಡಿದ ನೆಹರು
ಮಕ್ಕಳ ಒಳಿತಿಗೆ ದುಡಿದಂಥವರು

ಮಕ್ಕಳ ಬಿಟ್ಟು ಅವರೆಲ್ಲಿಹರು
ಮಕ್ಕಳ ಮನದಲಿ ನೆಲೆಸಿಹರು//೩//

(ಪ್ರ.ವಾ)

 

ಉದಯ ರವಿ

ಮೂಡಣ ದಿಕ್ಕಲಿ
ಹೊಂಬಣ್ಣವ ಚೆಲ್ಲಿ
ಮೆಲ್ಲನೆ ಮೇಲೇರುತಿಹ
ಉದಯ ರವಿ//

ಹಕ್ಕಿಗಳ ನಾದದಲಿ
ಮೈಮರೆತು ನಿದ್ರೆಯಲಿ
ವಿಶ್ವವನು ನೋಡಲೆಂದು
ಮೆಲ್ಲನೆ ಮೇಲೇರುತಿಹ
ಉದಯ ರವಿ//೧//

ಪೂರ್ವ ಬೆಟ್ಟದ ಸಾಲಲಿ
ಕೆಂಪು ಕಿರಣ ಬೀರುತಲಿ
ಜಗದ ಕಾರ್ಯವ ನೋಡಲೆಂದು
ಮೆಲ್ಲನೆ ಮೇಲೇರುತಿಹ
ಉದಯ ರವಿ//೨//

ಬಾಳ ಬೆಳಗಿಸಲು
ಭುವಿಯ ಪ್ರಕಾಶಿಸಲು
ಕತ್ತಲೆಯು ಓಡುವುದ ನೋಡಲೆಂದು
ಮೆಲ್ಲನೆ ಮೇಲೇರುತಿಹ
ಉದಯ ರವಿ//೩//

(ಪ್ರ.ವಾ)

 

ಮಗುವಿನ ದೇವರು

“ಅಮ್ಮಾ… ಅಮ್ಮ…”

“ಏನು ಮಗು?”

“ಒಂದೇ ಪ್ರಶ್ನೆ”

“ಕೇಳು ಮಗು”

“ದೇವರು ಎಂದರೆ ಯಾರಮ್ಮ?”

“ದೇವರೆಂದರೆ ದೊಡ್ಡವನು
ಒಳ್ಳೆಯ ಬುದ್ಧಿಯ ಕೊಡುವವನು
ಎಲ್ಲರ ರಕ್ಷಣೆ ಮಾಡುವನು”

“ದೇವರೆಲ್ಲಿ ಇರುವನು ಅಮ್ಮ?”

“ಮಂದಿರ ಮನೆ ಶಾಲೆಗಳಲ್ಲಿ
ಸತ್ಯ ಕರುಣೆ ಉಪಕಾರಿಗಳಲ್ಲಿ
ಎಲ್ಲ ಒಳ್ಳೆ ಮನಸುಗಳಲ್ಲಿ”

“ಅಮ್ಮಾ…ಅಮ್ಮ…”

“ಹೇಳು ಮಗು”

“ನನ್ನ ದೇವರು ಬೇರೆಯದಮ್ಮ”

“ಯಾರು ಮಗು?”

“ಆ ದೇವರ ನಾನು ಕಂಡಿಹೆನಮ್ಮ”

“ಹೌದೆ ಮಗು? ಎಲ್ಲಿ ಮಗು?”

“ಒಳ್ಳೆ ದಾರಿಲಿ ನಡೆಸುವ
ಸಕ್ಕರೆ ಮಾತನ್ನಾಡುವ
ಅಕ್ಕರೆಯಿಂದ ನೋಡುವ
ತೆಕ್ಕೆಯಲೆನ್ನ ಸಲಹುವ
ದೇವರೆಂದರೆ ನೀನಮ್ಮ
ನನ್ನ ದೇವರು ನೀನಮ್ಮ!”

(ಪ್ರ.ವಾ) ತಿದ್ದಿದ್ದೇನೆ!
ಪತ್ರಿಕೆಯ ತುಣುಕುಗಳಂತೆ, ಚದುರಿಹೋಗದಂತೆ
ನೆನಪು ಆಗಾಗ ಮರುಕಳಿಸಲೆಂಬ ಆಸೆಯಿಂದೆ ಬ್ಲಾಗಿಸಿದ್ದೇನೆ.
ಎಳೆಯ ಪದ್ಯಗಳು ಬೆನ್ನ ಬಿಡದೆ ಬಾಲ್ಯ ಹೊಳೆಯಿಸುವಂಥವು.

ನಮ್ಮ ನಾವೇ ಮರೆತು…

pexels-photo-417826

ಅಂದು ಬೀಸಿತ್ತು ತಂಪು
ಹಿಮ ಕಾಶ್ಮೀರದಿಂದ ಮಹಾಸಾಗರದವರೆಗೆ
ಸೊಂಪುಗಾಳಿಯ ತುಂಬಾ ಭರವಸೆಯ ಬೀಜಗಳು
ಆಸೆ ನೀರಿನ ಜಾಡಿನಲ್ಲಿ ಮೊಳೆತು ಬೆಳೆದವು
ಮೊಗ್ಗೆ ಹೂವು ಹಣ್ಣು
ಕೈಗೆ ಕೆಲಸ ಬುದ್ಧಿಗೆ ಸಾಣೆ
ಸಾಕಾಗದಾಯ್ತು ಆಕಾಶ ವಿಶಾಲ ತೆರೆದ ಕನಸಿಗೆ !

ಬೆಳೆ ನಡುವೆಯೆ ಕಳೆ ಬೆಳೆದು ಬಲಿತವೇಕೋ
ಕೀಳಲೇಕಷ್ಟು ಕೀಳರಿಮೆಯೇಕೋ
ಈಗ ಮನೆಮನೆಯ ಛಾವಣಿಯಿಂದ
ಉರಿಯ ಸೋಗೆ ಕರಿಯ ಸ್ವಾರ್ಥ ಹೊಗೆ

ಮರೆತುಹೋಯಿತೇಕೋ ಬೀಡು
ಹಾಯಿಸಿದತ್ತ ಜನಸೇವಕರ ಕೋಡು
ಹಾಯ್ದು ತುಳಿದೇಳುವ ಗೀಳು
ಒಂದೆನಿಸುವುದ ದೂಡು ಸೇರು ಜಾತಿ ಗೂಡು
ಒಡೆದು ಆಳು ಬಡಿದು ಬಾಳು
ಹುನ್ನಾರಗಳ ಹುಡುಕು ಬೆನ್ನಾದವರ ಬಡಿ
ಹೊನ್ನಾದವರ ಸೀಳುನಾಲಗೆ ಚಾಚಿ ಹಿಡಿ
ಮೌನದ ಬಗೆಗೇ ದೀರ್ಘ ಭಾಷಣದ ಛಡಿ!

ಅಕ್ಕಪಕ್ಕದವರಿಗೆಲ್ಲ ದೇಶ ದೊಡ್ಡ ಛತ್ರ
ವಂದೇಮಾತರಂ ಕೂಡಾ ಬೇಡದಾ ಮಂತ್ರ
ಹಾಹಾಕಾರ ಹಾಕಿ ಉಳಿಸಿ ಉಳಿವ ತಂತ್ರ
ಕಣ್ಣು ಕಿವಿ ಹೃದಯ ಮತ್ತೆ ಚಿತ್ತ ಮುಚ್ಚಿ
ಬರೆಯತೊಡಗಿದ್ದೇವೆ ಭಾರ-ತ ಛಿದ್ರ ಚಿತ್ರ?

(Pic courtesy:Pexels)