ಆಗಾಗ ಬಾ

ಮಕ್ಕಳಿಗೆ ಹುಟ್ಟುಹಬ್ಬ
ಪ್ರತಿ ತಿಂಗಳೂ ಮಾಡಿ
ಬೇಡವೆನ್ನರು
ತಿನ್ನಲೆಷ್ಟೇ ಕೊಡಿ
ಸಾಕೆನ್ನರು!
ಹಾಗೆಯೇ ಬಾಲಕೃಷ್ಣ
ಪಂಚಾಂಗ ಪಂಡಿತರ
ತರ್ಕಹೂಡಲು ಬಿಟ್ಟು
ಅಷ್ಟಮಿಗೆ ಇಷ್ಟದಲೊಮ್ಮೆ
ರೋಹಿಣಿಗೆ ಮಿನುಗಲೊಮ್ಮೆ
ನೆಪಹೂಡಿ ಬರುವ ಬಲುಮೆ!

ಜನ್ಮದಿನ ಆಗಾಗ ಬರಲಿ
ಉಂಡೆ ಚಕ್ಕುಲಿ ಬೆಣ್ಣೆ ಕಡುಬಲಿ
ಬೆಂದ ಪ್ರೀತಿ ಕೃಷ್ಣ ಕಾಣಲಿ
ಆಗಾಗ ಬಂದು ನಮ್ಮೊಳಗೆ ನಿಂದು
ಕಷ್ಟ ಪರಿಹರಿಸಲಿ
ಕ್ಲಿಷ್ಟದಿನ ಮರೆಯಿಸಿ
ಮನಸ ನಲಿಸಲಿ

ರಾಮ ಬರುವುದೇ ಹೀಗೆ

ಭರತ ವರ್ಷದ ತುಂಬು
ಹರ್ಷ ಭಾವ
ಕತ್ತಲೆ ಮುಗಿಯಿತು
ಈಗ ಬೆಳಕಿನ ವಿಭವ

ನಮ್ಮ ನಾವು ಮರೆತು
ನೆಲದ ಪ್ರಜ್ಞೆ ಸರಿದು
ಪೂರ್ವಜರ ನಗೆಯಾಡಿ
ವ್ಯಂಗ್ಯಿಸಿ ಹಗೆ ಹೂಡಿ
ದಾಸ್ಯದುರಿಯ ಸುಡು
ಸಹಿಸುವವರಲ್ಲಿ
ಮಂದಿರದ ನೆನಪ ಬಿಲ್ಲ
ಹೂಡಿ ಬಿಟ್ಟ ಬಾಣ, ರಾಮ
ಆಸೇತು ಹಿಮಾಚಲ
ನಿದ್ರೆ ಹರಿಸಿದ ಲಲಾಮ

ಅಪಸ್ವರಗಳು ಅಡಗಿ
ಏಕತೆಯ ಮಂತ್ರಕ್ಕೆ ಇಂದೇ
ಭರತ ಬಂದಿತು ಮೊಳಗೆ
ಶತ ಶತಮಾನಗಳ ಕಳಂಕ
ಸರಯೂ ತೊಳೆವ ಹಾಗೆ
ʼಯದಾಯದಾಹಿʼ
ಧರ್ಮ ಗ್ಲಾನಿಯೊ, ತಡೆಗೆ
ರಾಮ ಬರುವುದೇ ಹೀಗೆ !

ಹಸಿ – ಒಣ ಹಾಯ್ಕು

1

ಹಸಿ ಒಣ ವಿಂಗಡಣೆಗೆ
ಜನ ಮನ ಕಸಿಯಾಗಲಿ

2

ಒಳಗೆ ಹಸಿ ಒಣ ಕಸ ವಿಂಗಡಣೆ
ಹೊರಗೆ ಗುಡುಗುಡಿಸುವ ಗಾಡಿ
ಗೊಣಗದ ಒಣ ದೇಹಿಗಳ
ಹಸಿ ಕಸ ಸಂಗ್ರಹಣೆ

3

ಹಳ್ಳಿ – ಹಸಿ
ಹಸನಾದ ಬಾಳು
ಒಣ – ನಗರ
ಗೊಣಗು ಗೋಳು

4

ಹಸಿ-ವಿಗೆ
ಒಣ ರೊಟ್ಟಿಯೂ ಆದೀತು

5

ಹಸಿವು ವಿಜೃಂಭಿಸಿತು
ಒಣ ಜಂಭ
ಮೂಲೆ ಕಸ

6

ಹಸಿ ಕಸ
ಒಣ ಕಸ
ವಿಂಗಡಣೆ ಮನೆಯೊಳಗೆ
ಹಸಿ ಸುಳ್ಳರು
ಒಣ ವೇದಾಂತಿಗಳು
ಜನರೊಳಗೆ

7

ಹಸಿ-ದ ಹಸುವಿಗೆ
ಒಣ-ಹುಲ್ಲು
ಒಣ-ಗಿದ ಒಂಟೆಗೆ
ಹಸಿ-ಮಂಜು

8

ಹಸಿ-ದು ಹಸಿ-ದು
ಒಣ-ಗುವ ದೇಹ

9

ಹಸಿ ಒಣಗೀತು
ಒಣ ಹಸಿಯಾಗದು

10

ಹಸಿಗೆ ಒಣಗುವ ಭಯ
ಹಸಿವೆಗೆ ಒಣ ವೇದಾಂತದ ಭಯ

(Pic:Google)