ವಿದಾಯ

AtalBihari7

ಅದು ಸೃಷ್ಟಿ
ಯ ಒಂದು ಕಣವೇ ಆಗಿದ್ದರೂ
ಬರಿಯ ಕಣವಾಗದೆ
ಬಾಹುಗಳ ತೆರೆದು
ಕಂಣು ಕಿವಿಗಳರಳಿಸಿ
ಜ್ಞಾನ ಬಾಂದಳದಲ್ಲಿ ತನ್ನ ತಾ
ತಿರುತಿರುವಿ ಪರೀಕ್ಷಿಸಿ
ಈ ಮಣ್ಣ ಹವಳ ಹೊನ್ನು
ಮುತ್ತು ರತ್ನ ವಜ್ರಗಳ
ಆಯ್ದು ಧೂಳೊರೆಸಿ
ಸ್ವಾಭಿಮಾನವ ಹೊತ್ತಿಸಿ
“ಇದೋ ಅಣ್ಣ
ಇದೇ ಭಾರತದ ಬಣ್ಣ!”
ಎಂದು ಕವಿಯಾಗಿ ಮೊಳಗಿ
ನೇತಾರನಾಗಿ ಬೆಳಗಿ
ಕಾರ್ಗಿಲ್ ಪೋಖ್ರಾನ್ ಗಳಲ್ಲಿ ಗುಡುಗಿ
ದ ಚೇತನ
ಹೇಳಿದೆ ವಿದಾಯ…
ಸಗ್ಗ ಬಾಗಿಲ ತೆರೆಸಿ
ಹೊಸ ಮಿತ್ರರ ಅರಸಿ
ಸಗ್ಗವನು ಸಗ್ಗವೇ ಆಗಿಸಲು
ಹೋದ ಹಾರಿ
ಅಟಲ ಬಿಹಾರಿ
ಭಾರತ ರತ್ನ ವಾಜಪೇಯಿ…

ಮಾತು ಬಿಟ್ಟೆವು

 

chris-barbalis-349279-unsplash

(ಗಜಲ್)

ಅಕಾರಣ ಇಬ್ಬರೂ ಮಾತುಬಿಟ್ಟೆವೆಷ್ಟೋ ಲೆಕ್ಕವಿಲ್ಲ
ಕೋಪ ಆವಾಹಿಸಿ ಹೂಡಿದ ಮೌನವೆಷ್ಟೋ ಲೆಕ್ಕವಿಲ್ಲ

ಅಕ್ಕರೆಯ ಮಾತುಗಳನೆಲ್ಲ ಸುಮ್ಮಗೆ ಧಿಕ್ಕರಿಸಿ
ಬಿಕ್ಕಿದೆವೇಕೋ ನಮ್ಮೊಳಗೆ, ಗುಟ್ಟುಗಳೆಷ್ಟೋ ಲೆಕ್ಕವಿಲ್ಲ

ಕಣ್ಣ ಮುಂದೆ ಮೆರೆದರೂ ಗೋಣು ತಿರುಗಿಸಿ
ದೃಷ್ಟಿ ಚೆಲ್ಲಿದೆವು ಗಾವುದ, ಆ ದೂರವೆಷ್ಟೋ ಲೆಕ್ಕವಿಲ್ಲ

ಗೋಡೆ ಪೇರಿಸುವುದರಲ್ಲಿ ಇಬ್ಬರೂ ನಿಷ್ಣಾತರು
ಕೆಡವದಂತಿರಿಸುವ ಅಸೂಯೆ ಮಂದಿಯೆಷ್ಟೋ ಲೆಕ್ಕವಿಲ್ಲ

ಮೊನ್ನೆಯಷ್ಟೇ ಇಬ್ಬನಿಗೆ ಸರಸದಲಿ ತಬ್ಬಿಸಾಗಿದೆವು
ಒಂದಾಗಿಸುವ ಅಧರ ಅದುರಿದವೆಷ್ಟೋ ಲೆಕ್ಕವಿಲ್ಲ

ಪ್ರೇಮ ಪರಿಮಳಕ್ಕೆ ಹಾರಿ ಬರುವ ದುಂಬಿ ನಾ
ಪ್ರಕೃತಿ ಚೆಲ್ಲುತ್ತಿರುವ ಸೊಗದ ಮಧುವೆಷ್ಟೋ ಲೆಕ್ಕವಿಲ್ಲ

ಸಿಹಿ ರುಚಿಗೆ ನಾಲಿಗೆಯ ಚಾಚಿ ಸುಖಿಸುವ ಘಳಿಗೆ
ಕಹಿ ಅಂಟಿಸುವ ವಿಧಿಗೆ ಆಟಗಳೆಷ್ಟೋ ಲೆಕ್ಕವಿಲ್ಲ

ಮಾತೊಂದು, ಕಿರಿದು ನಗೆಯೊಂದು, ಮೃದು ಸ್ಪರ್ಷ
ಮಂಜು ಕರಗುವ ಸಮಯ ಬಂದವೆಷ್ಟೋ ಲೆಕ್ಕವಿಲ್ಲ

 ಹೃದಯಗಳಲ್ಲಿ ನಿರುತ ಅಮೃತದ ನದಿ ಪಾತ್ರ
ಹರಿವು ’ಅನಂತ’,  ಹಂಚಿಕೊಳ್ಳೋಣವಷ್ಟು ಲೆಕ್ಕ ಸಲ್ಲ!

(Pic courtesy: unsplash)