ರಸ್ತೆ

bad roads

ರಸ್ತೆಯೆಂದರೆ
ಡಾಂಬರು ಸವೆದ ಕಣ್ಣಿಗೆ ರಾಚುವ ಕಲ್ಲುಮಣ್ಣು
ಕೆಕ್ಕರಿಸಿ ಬಾಯ್ಬಿಡುವ ಸಣ್ಣ ಹಳ್ಳಗಳ ಹುಣ್ಣು
ಕೆನ್ನೆ ಊದಿಸಿಕೊಂಡ ಯಾಮಾರಿ ಉಬ್ಬು
ಕಾಣದಂತೆ ಗೌನು ಹೊದ್ದು ಮಲಗಿದ ಹೆಬ್ಬಾವು

ರಸ್ತೆಯೆಂದರೆ
ಇಕ್ಕೆಲವು ನುಂಗಿರುವ ಪಾದಚಾರಿಗಳ ಮಾರ್ಗ
ಕಾಲೂರೆ ಬೇಕು ಸಕಲಕಲಾ ವಲ್ಲಭರ ವರ್ಗ
ಅಡಿಗಡಿಗೆ ಧ್ವಜವಿಟ್ಟಂತೆ ಫಲಕಗಳೆ ತುಂಬ
ಅಡ್ಡ ಮೂಳೆಯ ಮಧ್ಯೆ ತಲೆಬುರುಡೆ ಬಿಂಬ

ರಸ್ತೆಯೆಂದರೆ
ಅಚಾನಕ ಬರುವ ಚಾಲಾಕು ಬರಸಿಡಿಲ ತಿರುವು
ಚಾಣಾಕ್ಷತೆಗೆ ಸವಾಲಾಗುವ ತಿರುವು ಮುರುವು
ಜನರ ಬೆನ್ನೆಲುಬುಗಳ ಪುಡಿಗುಡುವ ಸರದಾರ
ಜೀವಗಳ ಜೊತೆಯಲ್ಲಾಡುವ ಅತಿ ಮೋಜುಗಾರ

ರಸ್ತೆಯೆಂದರೆ
ಸರ್ಕಾರ ಮಂಡಿಸುವ ಸಕಲ ವೆಚ್ಚದ ವರದಿ
ಕಮಾಯಿಸುವವರಿಗೆ ಹರಣವಾಗದ ಹಣದ ಹಾದಿ
ವಿರೋಧ ಪಕ್ಷಕ್ಕೊದಗುವ ಹೋರಾಟದ ಕೊಂಡಿ
ಸುಲಭ ಹೆರಿಗೆಗೆ ಸಹಾಯ ಇಲ್ಲಿ ಏರಿದರೆ ಬಂಡಿ

road work

ರಸ್ತೆಯೆಂದರೆ
ಮಳೆಗಾಲದಲ್ಲಿ ಉಪನದಿಯಾಗಿಬಿಡುವ ಮಾಯಾವಿ
ಬೇಸಿಗೆ ಬಿರುಬಿಸಿಲಿಗೆ ಕುದಿದು ಕಾಡುವ ಕಡುಕೋಪಿ
ಗುಳೆ ಬಂದ ಜನಗಳಿಗೆ ದಿನಗೂಲಿ ಕೊಡುವ ಕರುಣಿ
ವ್ಯವಸ್ಥೆಯೊಡನೆ ಕಪ್ಪಾಗಿ ಉಳಿವ ನಿಷ್ಕಪಟ ರೂಪಿ