ಹನಿಗಳಲ್ಲಿ ಗಾಂಧಿ -1

mk2

1

ಮುತ್ಸದ್ದಿ ಗಾಂಧಿಗೆ
ಅವನ ಕನ್ನಡಕವೆ
ದುರ್ಬೀನಾಗಿತ್ತು
ಅದು ದೇಶದ ಭವಿಷ್ಯ ಕಾಣುವ
ಸಾಧನವೂ ಆಗಿತ್ತು

 2

ತನ್ನ ಊರುಗೋಲನ್ನು
ಕೊಳಲ ಧ್ವನಿಯಾಗಿಸಿ
ಮೋಹನನಾಗಿದ್ದ
ಆಸೆಗೊಂಚಲ ಜನರು
ಸುತ್ತಲೂ ನೆರೆದರು

ಕೊಳಲ ಧ್ವನಿಯಲ್ಲು
ಕಹಳೆ ಮೊಳಗು
ಕೇಳಿಸಿಕೊಂಡರು
ಮೇಧಾವಿ ಮ್ಲೇಚ್ಛರು !

mk6

3

ಉದ್ಧ ಮೂಗು
ಅಗಲ ಕಿವಿಗಳು
ಗ್ರಹಿಕೆಯಲ್ಲಿ ಸ್ಪರ್ಧಿಗಳು
ಆದರೂ ತಮ್ಮ ಗುಟ್ಟು
ಬಿಟ್ಟುಕೊಡದವರು
ಅವನದೇ ನಿಕಟವರ್ತಿಗಳು !

 4

ದೊಡ್ಡ ಗಡಿಯಾರ
ಕಟ್ಟಿಕೊಂಡು
ದೇಶದ ಸಮಯಕ್ಕೊದಗಿದನಲ್ಲ?
ಸರಿ ಸಮಯಕ್ಕೆ ಕಾದ
’ಸಾಧಕ ’ರೂ ಇದ್ದರಲ್ಲ!?

(ಚಿತ್ರ ಕೃಪೆ: ಅಂತರ್ಜಾಲ)

ಮೂವತ್ತರ ಸಂಭ್ರಮ

yaksha

ಯಕ್ಷಗಾನ ಕಲಾವಿದ ಶ್ರೀ ಬೆದ್ರಾಡಿ ನರಸಿಂಹ ನಾಯ್ಕ ಮಂದರ್ತಿ ಮೇಳದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಮೂವತ್ತು ವರ್ಷಗಳ ಕಲಾಜೀವನ ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದಾರೆ. ಈ ಕಲಾಕಾರನನ್ನು ಅಭಿನಂದಿಸುವ ಕಾರ್ಯಕ್ರಮ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ (೩೦.೦೯.೨೦೧೬) ರಾತ್ರಿ ೧೦:೦೦ ಕ್ಕೆ ಇಟ್ಟುಕೊಳ್ಳಲಾಗಿದೆ. ನಂತರದಲ್ಲಿ ಮೂರು ಪ್ರಸಿದ್ಧ ಯಕ್ಷಗಾನ ಪ್ರಸಂಗಗಳು ಅಹೋರಾತ್ರಿ ನಡೆಯುತ್ತಿವೆ.

ಗಂಟಲೊಣಗಿಸಿ

protestors-in-mandya

ಒಂದು ಕಡೆ:
ಒಳ ಹರಿವು
ಹೊರ ಹರಿವು
ಅರಿವಿರದ
‘ಅರಿ’ ತಂಡ

ಇನ್ನೊಂದು ಕಡೆ:
ಉಳಕೊಂಡ
ಬೊಗಸೆ ನೀರ
ಕಬಳಿಸುವ ವಾದ
ವಿತ್ತಂಡ

ನೀರಡಿಕೆಗಿಷ್ಟು
ಉಳಿಸಿರೆಂದು
ಹಕ್ಕೊತ್ತಾಯಿಸುವ
ಸುತ್ತಮುತ್ತಲ
ಕೂಗು ಕಂಠ

ಆಳುವವರದು ಜನರ
ಮೌನಗೊಳಿಸುವ ಮಂತ್ರ
ಪಕ್ಷಗಳು ಅರಸುತ್ತಿವೆ
ಮೇಕೆಬಾಯಿ ಒರೆಸುವ ತಂತ್ರ

ಅವೆಲ್ಲ ಬಿಡಿ
ಇದಕ್ಕೊಂದೆ ಪರಿಹಾರ:
ಎಲ್ಲರೂ ಸೇರಿ
ಹೊರ ಹರಿಸಿಬಿಡಿ
ಉಳಿದಿಷ್ಟು ಹನಿ ನೀರ
ಗಂಟಲೊಣಗಲಿ
ಉಸಿರುಗಟ್ಟಲಿ
ಧ್ವನಿ ಉಡುಗಲಿ
ಕನ್ನಡಿಗ ಮುಂದೆಂದೂ
ಕೂಗುವ ಕರ್ಮ ಮಾಡಲಾರ!

 

ಸ್ವರ್ಗಕ್ಕೆ ಸ್ಪರ್ಧೆ

krsdam

ಸ್ವರ್ಗದಲ್ಲಿ ಇಂದ್ರನಿಗೆ ಹೇಳಿದರು
ಮೋಕ್ಷಗುಂಡಂ ವಿಶ್ವೇಶ್ವರಯ್ಯ,
’ಕೃಷ್ಣರಾಜ ಸಾಗರ ಕಟ್ಟಿ
ನಾನೂ ಭೂಮಿಯಲ್ಲೊಂದು
ಸ್ವರ್ಗ ಸೃಷ್ಟಿಸಿದ್ದೇನೆ ಗೊತ್ತೇನಯ್ಯ”
ಇಂದ್ರ ನಕ್ಕ
’ಸ್ವಾಮಿ, ಅಕ್ಕಪಕ್ಕ
ಇರುವ ರಾಜ್ಯಗಳ ಮರೆತಿರೇನು
ಸ್ವರ್ಗಕ್ಕೆ ಸ್ಪರ್ಧೆ ತಡೆಯುವುದು
ನನಗೆ ತಿಳಿಯದೇನು!?’

 

ರಿಪೇರಿ

repair

ರಿಪೇರಿ ಬುಡಾನ್ ಬಾಗಿಲಿಗೇ ಕೂಗು,
’ಪ್ಲಾಸ್ಟಿಕ್ ಸಾಮಾನ್ರಿಪ್ಪೇ…ರಿ’
ಒಳಗೆ ದಂಡಿ ಬಿದ್ದಿದ್ದಾವೆ
ಸೊಟ್ಟ ಮಗ್ಗು ಬಿರುಕು ಬಿಂದಿಗೆ ಬಕೆಟ್ಟು

ಮಡದಿಗೆ ಮಾಮೂಲು ಗಂಡ
ನ ಮೇಲ್ಕೋಪ
ಒಂದು ವಾರದಿಂದ ಝಳ ಝಳ ತಾಪ
ಕಾಲ್ಚಾಚಿ ಸೋಫ಼ಾದಲ್ಲಿ ಗಂಡ ಉದ್ದಂಡ

ದಢಾರನೆ ಬಾಗಿಲಾಚೆಗೆ
ದಢ ದಢನೆ ಸೇರಿಸಿಟ್ಟಳು
ಒಡೆದು ಸೀಳಿದ ವಿಚಿತ್ರ ವಿಕಾರ
ಮುಗ್ಗು ತರಹೇವಾರಿ ಸರಂಜಾಮು
ಅವಳ ಹಾವ ಭಾವ ಮುಖ
ಧುಸುಮುಸು ಅಸಡ್ಡೆ
ಗಂಡನೊ ಪಡ್ಡೆ

ರಸ್ತೆ ಬದಿಯಲ್ಲೆ ಬುಡಾನ್ ಹೊತ್ತಿಸಿ
ಸಣ್ಣ ಗ್ಯಾಸ್ ಬುಸುಬುಸನೆ ಶಬ್ಧಿಸಿ
ಕಪ್ಪು ತೀಡಿದ ಕಣ್ಣಿಂದ
ತಿರು ತಿರುವಿ ಪರೀಕ್ಷಿಸಿದ
ಅವನ, ಅವಳ ಮತ್ತೆ ಪ್ಲಾಸ್ಟಿಕ್ಕುಗಳ
ಹರವಿ ಪಟ್ಟಿಗಳ ಅಂಟಿಸಿ ಗಂಟಿಸಿ
ಬಿರುಕಿ ತೂತಾದ ಒಸರುವ ಸೋರುವ
ಸಾರಾಸಗಟು ಅರೆತಾಸಲ್ಲೆ ರಿಪೇರಿಸಿ
ಬಾಗಿಲ ಮುಂದೆ ಪೇರಿಸಿದ

ಅವಳೆಣಿಸಿದಳು ಒಳಗಿದ್ದವನು
ಬರಬಹುದು ಅವುಗಳನೆಣಿಸಲು
ಅವನೊ ಬಾಗಿಲ ಬದಿ ಸೋಫ಼ಾದಲ್ಲೆ
ನಿರುಕಿಸುತ್ತ ನಿರಾಸಕ್ತ…

ಬಿಗಿದ ಮುಖದಲ್ಲೆ ಕೇಳಿದಳೆಷ್ಟಾಯ್ತು
ತಲೆ ಕೆರೆದ ಬುಡಾನ್ ಬೆರಳಲ್ಲೆ ಲೆಕ್ಕಿಸಿ,
’ಒಂದಕ್ಕೆ ನಲವತ್ತು ಒಟ್ಟ್ಗೆ ಸೇರಿಸಿ
ಆಯ್ತು ನಾನೂರ ಅರವತ್ತು’’

ಹೌ… ಹಾರಿದಳು
ಅವನೂ ಸೋಫ಼ಾದಿಂದ ಹಾರಿ
ಒಬ್ಬರಿಗೊಬ್ಬರು ಸೇರಿ ಉದುರಿಸಿದರು
ಕಂದ ಪದ್ಯ ಪುಂಖಾನು ಪುಂಖ
ರೋಷಾವೇಶ ಪದ ಪಲುಕು
ಯಕ್ಷಗಾನ ಚೆಂಡೆ ಝಾಡಿಸಿದ್ದೇ
ನಿರುಕಿಸಿದ ಬುಡಾನ್, ನಕ್ಕ
’ನಿಮ್ದು ಬೇಗಮ್ಗೆ ಜೊತೆ
ಮಾತಾಡಿ ಒಂದಿಷ್ಟು ಕೊಟ್ಟುಬಿಡಿ
ಬಿಲ್ಕುಲ್ ನಾ ಚೌಕಶಿ ಮಾಡಂಗಿಲ್ಲರಿ ’

ಇಬ್ಬರೂ ಒಳಸೇರಿ
ಅವಳು ಎಷ್ಟೆಂದು ಚಂದ ಮುಖಮಾಡಿ
ಅಗಲ ಕಂಗಳಲ್ಲಿ ಮೆಲ್ಲುಸಿರಲ್ಲಿ ಕೇಳಿದ್ದೆ,
ಪಡ್ಡೆ ಸಂಭ್ರಮಿಸಿ ’ಒಪ್ಪಿಸಿಬಿಟ್ಟೇನು
ನೂರರ ಮೇಲೆ ಹತ್ತು’
’ನಿಜಕ್ಕೂ..!’ ಮತ್ತಳರಳಿದವು ಕಣ್ಣು

ಬೀಗಿ ಬಂದವನು ಕೊಟ್ಟದ್ದೇ ನೋಟು
ಎಣಿಸದೆ ಜೇಬಿಗಿಟ್ಟು ಹೇಳಿದ ಬುಡಾನ್  ,
’ನಿಮ್ ಪಕ್ಕದ ಮನೇವ್ರುದ್ದು ಹಿಂಗೇ
ರಿಪೇರಿಗೆ ಮಾಡ್ಬಿಟ್ಟೆ ಭಾಯಿಜಾನ್ !’

ವಾತ್ಸಲ್ಯ ಝರಿ

ganesh

ಎಚ್ಚರಿಸಿ
ಲಲ್ಲೆಗರೆಸಿ
ಮುದ್ದಿಸಿ
ಸ್ನಾನಿಸಿ ಶುದ್ಧಿಸಿ
ಅಲಂಕರಿಸಿ
ತನ್ನ ಕಣ್ತುಂಬಿಸಿ
ಕೊಳ್ಳುವ ನಿರಂತರ
ಸಂಭ್ರಮದಲ್ಲಿ
ಅರೆಘಳಿಗೆ ವಿಶ್ರಾಂತಿ
ಅವಳಿಗೆ
ಪೂರ್ಣವಿರಾಮ ಚಿನ್ಹೆ
ಇಟ್ಟಾಗ ಕಂದನ
ಗಲ್ಲದಡಿಗೆ !

ಹಾಲ ಬಿಸಿ ಆರಿಸಿ
ಕೇಸರಿಯ ನವಿರು
ದಳವಿಳಿಸಿ
ಸಿಹಿ ಕರಗಿಸಿ
ಕೆನೆ ಗಟ್ಟಿಸಿ
ಮತ್ತೆ ಪೂಸಿ
ಮಾಡಿ ನಗಿಸಿ
ತನ್ನ ಕುಡಿಗೆ
ಕುಡಿಸಿದರಷ್ಟೆ
ಅವಳಿಗೆ
ಆ ದಿನದ ಬೆಳಗು
ನಿರಾಳದಿನಕ್ಕೆ ಮೆರಗು !

ಕಂಗಳ ಅರಳಿಸಿ
ನಕ್ಷತ್ರಗಳ ತೋರಿಸಿ
ಅವುಗಳ ಎಣಿಸಿ
ಕೂಡಿಸಿ ಗುಣಿಸಿದ
ಮೊತ್ತಕ್ಕೂ ಮೇಲಿನದು
ಅವಳು
ಕಂದನ ಕೈ ಹಿಡಿದು
ಸರಿ ದಾರಿ ಹಿಡಿಸಿದ್ದು

ಮುಗಿಯದ ಕಳಕಳಿ
ನಿರಂತರ ಹರಿವ
ವಾತ್ಸಲ್ಯ ಝರಿ
ತನ್ನ ದೇಹ ಕರಗಿಸಿ
ಕಂದನ ಗಟ್ಟಿಯಾಗಿಸಿ
ತಾನು
ಅಣುವಾಗುವ ಪರಿ
ಅಪರಿಮಿತ ಅಚ್ಚರಿ

ನಿತ್ಯ ಕನಸಿ
ಕಟ್ಟಿದ ಬಂಧಗಳ
ಅಲೆಯುರುಳಿಸಿ
ಪ್ರೇಮ ಪರಿಮಳದ
ಸುಗಂಧ ಆಗರದ ಹಡಗ
ಸಂಸಾರ ಸಾಗರದಲ್ಲಿ ತೇಲಿಸಿ
ಹರಸಿ ಹರಿಸುವ ಸಾಹಸಿ
ಅವಿನಾಶಿ
“ಅಮ್ಮ”
ಆಪ್ಯಾಯಿ
ಪ್ರತಿ ಮನೆ
ಮನದೊಳಗಿನ
ಅಮೃತ ಜೀವಿ

( ಗೌರಿ ಹಬ್ಬದ ನೆನಪಿಗೆ ಸ್ವಲ್ಪ ತಿದ್ದಿ ಮತ್ತೆ ಬ್ಲಾಗಲ್ಲಿ ಹಾಕಿದ್ದು)

(ಚಿತ್ರ ಕೃಪೆ: ಅಂತರ್ಜಾಲ)