Law ಓದು

ಮೂರು ಲಾ

ಪಂಜಾಬ್‌ ಕೇಸರಿ
ಲಾಲಾ ಲಜಪತ್‌ ರಾಯ್‌
ಹೆಸರಲ್ಲಿದ್ದರೂ ಎರಡು ಲಾ
ಓದಿದರೇಕೆ ಮತ್ತೆ ಲಾ?
ಆಂಗ್ಲರ ಹುಟ್ಟಡಗಿಸಲಾ
ದೇಶದಿಂದ ತೊಲಗಿಸಲಾ!

ಓದಿದ್ದು ಲಾ

ಗೆಳೆಯ ಶ್ಯಾಮ
ಓದಿ ಮುಗಿಸಿದ ಲಾ
ಈಗ ನಾನವನ
ಕರೆಯೋದು
ʼಶ್ಯಾಮ ಲಾ!ʼ

ಹುಟ್ಟುಹಬ್ಬ

(ಕಿರುಗತೆ)

ಬೆಳಿಗ್ಗೆ ಎದ್ದವನ ಸಂಭ್ರಮ ಹೇಳತೀರದು. ಅದಕ್ಕೆ ಕಾರಣ, ಈ ದಿನ ಪ್ರಿಯ ಪತ್ನಿಯ ಜನ್ಮದಿನ. ಅವನು ಮನಸ್ಸಿನಲ್ಲೇ ಅಂದಿನ ಕಾರ್ಯಕ್ರಮಗಳ ಪಟ್ಟಿ ಮಾಡಿಕೊಂಡ. ಮೊದಲು ಸುಂದರ ಹೂಗುಚ್ಛ, ನಂತರ ಸ್ವೀಟ್‌ ಅಂಗಡಿಯಿಂದ ಅವಳ ಮೆಚ್ಚಿನ ಮೈಸೂರು ಪಾಕ್‌, ನಂತರ ಗೆಳೆಯ, ಗೆಳತಿಯರನ್ನು ಸಂಜೆ ಮನೆಗೆ ಆಮಂತ್ರಿಸಲು ಕಾಲ್‌ ಮಾಡಬೇಕಿರುವುದು. ಅವರಿಗೆ ಬೇಕಾದ ತಿಂಡಿ, ತಂಪು ಪಾನೀಯ ಇತ್ಯಾದಿ.

ಬೇಗ ಬೇಗ ಸ್ನಾನ ಮುಗಿಸಿ, ತಲೆ ಬಾಚಿ, ಇಸ್ತ್ರಿ ಹಾಕಿದ ಬಟ್ಟೆ ಧರಿಸಿದ. ಅವಳ ಮೆಚ್ಚಿನ ಸೆಂಟ್‌ ಹಾಕಿಕೊಳ್ಳು ಮರೆಯಲಿಲ್ಲ.

ಮನೆಯಿಂದ ಹೊರಟವನು ಮೊದಲು ಕೊಂಡದ್ದು ಸಮೀಪದ ಅಂಗಡಿಯಲ್ಲಿ ಆ ಸುಂದರ ಹೂ ಗುಚ್ಛ. ಅಲ್ಲೇ ಬಂದ ಪರಿಚಯದ ಆಟೋ ಡ್ರೈವರ್‌ , “ನಮಸ್ತೆ ಸರ್‌, ಓ ಇವತ್ತು ಮೇಡಂ ಬರ್ತ್‌ ಡೇನಾ? ಸರಿ, ಬನ್ನಿ” ಎನ್ನುತ್ತಾ ತನ್ನ ಗಾಡಿಯಲ್ಲಿ ಕೂರಿಸಿಕೊಂಡ. ಮೈಸೂರು ರಸ್ತೆ ಮುಗಿಸಿ, ಕೆಂಗೇರಿ ದಾಟಿ ಆ ಆಟೋ ಒಂದು ತೋಟದ ಬಳಿ ನಿಂತಿತು. ಹೂ ಗುಚ್ಛದೊಂದಿಗೆ ಅವನು ಆ ತೋಟದ ಗೇಟು ತೆರೆದು ಒಳ ಹೋದ. ನೀರವ ಮೌನ. ಆಟೋ ಮತ್ತು ಡ್ರೈವರ್‌ ಅವನಿಗಾಗಿ ಕಾದರು.

ಸ್ವಲ್ಪ ಹೊತ್ತಾದ ಮೇಲೆ ಹಿಂತಿರುಗಿದವನು, ” ಹೊರಡೋಣವಾ?” ಅಂದ.

ಹಿಂತಿರುಗುತ್ತಾ ಆಟೋ ಡ್ರೈವರ್, ” ಸರ್‌, ಮೇಡಂ ಹೋಗಿ, ಐದು ವರ್ಷ ಆಯ್ತಲ್ಲವೆ?” ಅಂತ ಮಾತು ಪ್ರಾರಂಭಿಸಿದ.

ಮೆರೆ ಸ್ವಂತಿಕೆ

ನಾಚಿಕೆ ಎಲೆಗಳು

ಮಗ್ಗುಲ ಮುಳ್ಳು

ಎಲೆ-ಮುಳ್ಳ ನಡುವೆ ಬೆಳೆದ ಮೊಗ್ಗು

ಮೆಲ್ಲನೆ ಬಿರಿದು ಈಗ ಅರಳಿದ ಹೂ

ಮುದುರದೆ ಎಲೆಯಂತೆ

ಚುಚ್ಚದೆ ಮುಳ್ಳಿನಂತೆ

ಸ್ವರೂಪಿ ಎನಿಸಿದೆ ತನ್ನಿಚ್ಛೆಯಂತೆ

ಸ್ವಂತಿಕೆ ಮೆರೆವುದೆ ಶ್ರೇಷ್ಠತೆ.

ಸಂಶಯ ಸೃಷ್ಟಿ

ಒಬ್ಬ ಮಾಜಿಗೆ

ನೆನಪಾಗಿದ್ದು ನಾಜಿ

ಇನ್ನೊಬ್ಬ ಮಾಜಿಗೆ

ಇನ್ನೂ ವಿವಾದಗ್ರಸ್ತ

ರಾಮ ಜನ್ಮ ಭೂಮಿ!

ಸೃಷ್ಟಿಸುವುದು ಸುಲಭ

ಸಂಶಯಗಳ ಸುನಾಮಿ!

ಕಾಣದ ದಾಳಿ ಇನ್ನೂ

ನಿಲ್ಲಿಸಿಲ್ಲ ಘಜನಿ!

ಎರಡು ಹನಿಗವನ

  1. ಆಚರಣೆ

“ಇಂದು ನನ್ನ ವಿವಾಹ
ವಾರ್ಷಿಕೋತ್ಸವ”
ಸಂತಾ ಅಂದ ಬಂಟಾಗೆ

“ದು:ಖ ಆಚರಿಸಲು
ಬಾರೇ ಸೂಕ್ತ ಬಾ”
ಅಂದ ಬಂಟಾ ಸಂತಾಗೆ

  1. ಸಮಸ್ಯೆ

“ಈ ದಿನ ನನ್ನ ಮದುವೆಯ
ಹತ್ತನೇ ವರ್ಷ”
ವಾಟ್ಸ್ಯಾಪ್‌ ಗುಂಪಿಗೆ
ಸಂದೇಶ ಕಳಿಸಿದ ಸಂತಾ

“ನಿನ್ನ ವೈಯಕ್ತಿಕ ಸಮಸ್ಯೆ
ನಮಗೆ ಹೇಳಲೇ ಬೇಡ”
ಉತ್ತರಿಸಿದ ಬಂಟಾ

(ಓದಿದ್ದು)

ದುರ್ವಿಧಿ

(ಕಿರುಗತೆ)

ಅದೊಂದು ದೊಡ್ಡ ಮರ.  ಆ ಮರದ ಎದುರಲ್ಲೇ ಕವಿಯೊಬ್ಬನ ಮನೆ.  ಅವನು ದಿನವೂ ಮರದ ಮೇಲಿನ ಆಗುಹೋಗುಗಳನ್ನು ನೋಡುತ್ತಿದ್ದಾನೆ.

ಆ ಮರದ ಪೊಟರೆಯಲ್ಲಿ ಗಿಳಿಗಳೆರಡು ಸಂಸಾರ ಹೂಡಿವೆ.  ಕೆಲವು ತಿಂಗಳಲ್ಲಿ ಮೂರು ಮೊಟ್ಟೆ ಇಟ್ಟಿತು ಹೆಣ್ಣು ಗಿಳಿ.  ಮುದ್ದು ಮರಿಗಳ ಆಗಮನಕ್ಕಾಗಿ ಮೊಟ್ಟೆಗಳಿಗೆ ಕಾವು ಕೊಡತೊಡಗಿತು.  ದೊಂದು ದಿನ ಗಂಡು ಗಿಳಿ ಆಹಾರ ತರಲು ಹೊರ ಹೋಗಿದ್ದು ಬರಲೇ ಇಲ್ಲ.  ಆತಂಕಗೊಂಡ ಹೆಣ್ಣು ಪೊಟರೆಯಿಂದ ಹೊರಬಂದು ತನ್ನ ಇನಿಯನನ್ನು ಹುಡುಕತೊಡಗಿತು.

ಅದೋ ಅಲ್ಲಿಯೇ ಕಾದಿತ್ತು ದುರ್ವಿಧಿ!  ಆ ಸಮಯಕ್ಕೇ ಹೊಂಚುಹಾಕುತ್ತಿದ್ದ ಹಾವೊಂದು ಆ ಗೂಡು ಹೊಕ್ಕಿತು.  ಮೊಟ್ಟೆಗಳ ನುಂಗಿ ತೇಗಿ ಸರಸರ ಹೊರಟೇ ಹೋಯಿತು.

ಮರಳಿ ಬಂದ ಹಕ್ಕಿ ಹೌಹಾರಿತು.  ವಿಲಿವಿಲಿಸಿ ಬಿಕ್ಕಿ ಬಸವಳಿಯಿತು.

ಇದನ್ನೆಲ್ಲ ಆ ಕವಿ ಕಂಡ.  ದು:ಖ ವಶನಾದ.   ʼಹಾವುಗಳು ಎಂಥ ಕ್ರೂರ ಜಂತುಗಳು!  ಮೊಟ್ಟೆಗಳೇ ಬೇಕಿತ್ತೆ ಆ ಹಾವಿಗೆ ಆಹಾರ?ʼ ಎಂದು ಹೃದಯ ಹಿಂಡಿ ಹಲುಬಿದ.   “ಹಿಡಿ, ಇದೋ ಶಾಪ! ಆಗಲೀ ಸರ್ಪ ನಾಶ” ಅಂತ ಬಡಬಡಿಸಿದ.

ಅದೇ ಸಮಯಕ್ಕೆ ಅಡುಗೆ ಮನೆಯಿಂದ ಕವಿಯ ಮಡದಿ ಅಲ್ಲಿ ಬಂದಳು, ಮೆಲುನುಡಿಯಲ್ಲಿ, “ಕವಿವರ್ಯರೇ, ʼಆಮ್ಲೆಟ್‌ʼ ತಟ್ಟೆಮೇಲಿಟ್ಟದ್ದೇನೆ.  ಬಿಸಿ ಬಿಸಿಯಿದೆ, ಬೇಗನೆ ತಿನ್ನಿ.  ಊಟಕ್ಕೆ ʼನಾಟಿಸಾರುʼ ಬೇಕೆಂದಿದ್ದಿರಿ.  ಅದರ ತಯಾರಿಯೂ ಸಾಗಿದೆ” ಅಂದಳು!

( Published in Surhonne e-magazine – http://www.surahonne.com/?p=31262)