ಇದೆ ಎಲ್ಲ

Krisna

ದುಂಬಿ,
ನಿನ್ನ ಮಧು ಬೇಡ
ನಲ್ಲೆಯ ಚುಂಬನವಿದೆ

ಗುಲಾಬಿ,
ನಿನ್ನ ಕೀಳುವುದಿಲ್ಲ
ನನ್ನವಳ ಕದಪುಗಳಿವೆ

ಮೀನೆ,
ನೀನೀಗ ಸ್ವತಂತ್ರ
ಅವಳ ಕಂಗಳ ಈಜಾಟವಿದೆ

ನವಿಲೆ,
ನಿನ್ನ ಹುಡುಕುವುದಿಲ್ಲ
ನಲ್ಲೆಯ ಬಿನ್ನಾಣ ನಡಿಗೆಯಿದೆ

ಶ್ರೀಗಂಧವೆ,
ತಬ್ಬಿ ಬೆವರುವವಳಿದ್ದಾಳೆ
ಪರಿಮಳಕ್ಕೆ ತೀಡುವುದಿಲ್ಲ

ಸಂಗೀತವೆ,
ಇನಿದನಿಯ ಇನಿಯಳಿದ್ದಾಳೆ
ನೀ ವಿಶ್ರಮಿಸಬಹುದಲ್ಲ

ಜಂಜಡವೆ,
ಬರಸೆಳೆವ ತೋಳುಗಳಿವೆ
ನಿನಗಿಲ್ಲಿ ಎಡೆಯಿಲ್ಲ

ಯೋಗಿಯೆ,
ನಲ್ಲೆಯ ಸಾಂತ್ವನವಿದೆ
ಧ್ಯಾನಸ್ತನಾಗಿರುವೆ-ನಲ್ಲ

***
(ಸಖಿ ೩೧.೧೨.೨೦೧೫ ಪ್ರಕಟಿತ )

( ಚಿತ್ರ ಕೃಪೆ:ಅಂತರ್ಜಾಲ )