ಆಟೋ ಆಟ

auto1
ಭಾಗ ಎರಡು

1

ಆಟೋ ಹಿಡಿದವನು
ಏನನ್ನಾದರೂ ಜಯಿಸಿಯಾನು

2
ಆಟೋ ಬೇಟೆಗೆ ಹೊರಟೆ
ʼಬರಲ್ಲʼ ಅನ್ನುವುದರೊಳಗೆ
ಛಾನ್ಸು ಸಿಕ್ಕಿದ್ದೇ
ಒಳಗೆ ಕುಳಿತದ್ದೇ
ಸೆಲ್ಫಿ ತೆಗೆದದ್ದೇ!

3
ಮೀಟರಿನ ಆಟೋ
ʼಮೀಟರುಬಡ್ಡಿʼ ದಂಧೆ
ಸಂಬಂಧ ಒಂದೆ!

4
ಎರಡು ಆಟೋ ಸೇರಿದಲ್ಲಿ
ಕಾಣು ಒಗ್ಗಟ್ಟು
ನಾಲ್ಕಾದರೆ ಹಿಡಿ ಬಾವುಟ
ಪ್ರತಿಭಟನೆಯ ಪಟ್ಟು

5
ʼಚರ್ಚೆ ಮಾಡದೆ
ಆಟೋ ಪ್ರಯಾಣಿಸದವನ
ತಂದು ತೋರುʼ
ಬುದ್ಧನ ನವ ಉವಾಚ

6
ಸ್ಟ್ಯಾಂಡಲ್ಲಿ ನಿಂತಿವೆ
ಒಂದರಹಿಂದೊಂದು ಆಟೊ
ದಿನಪತ್ರಿಕೆ, ಮೊಬೈಲು
ಚಾಲಕರ ಚಿಟ್‌ಚಾಟ್ಉ
ನಿದ್ರೆ ಮಾಡೊ ಅಡ್ಡಾ ಅದು
ಆಟೊ ಕರೆದರೆ ಕಿವಿಕೇಳದು

7
ಆಟೋದವನ ಅಭಿಮಾನ
ಕನ್ನಡ ಭಾಷೆ
ಅದು ಕನ್ನಡ ಮಂದಿ ಬಗೆಗಲ್ಲ
ತೊರೆಯಿರಾಸೆ!

8
ಕೋಪೋವಾಚ:
ಆಟೋ ಸಿಗದಿದ್ದರೆ ಕತ್ತೆ ಬಾಲ!
ಬದಲಾಗಿದೆ ಕಾಲ
ಇದೆಯಲ್ಲ ಓಲಾ

9
ಇನ್ಮುಂದೆ ಮಾಡಬಹುದಾ
ಆಟೊಗೆ ಟಾಟಾ?
ಕಣ್ಮುಂದೆ ಬಂದಿದೆ
ಉಬರ್‌ಉ ಓಲಾಗಳ ಓಟ
(ಕೆಲವೇ ಆಟೋಗಳ ದೊಂಬರಾಟ ಕಂಡಮೇಲೆ ಅನಿಸಿದ್ದು}

(Pic courtesty:The Hindu Cartoon)

ಆಟೋ ಆಟ

auto
ಭಾಗ ಒಂದು

1

ʼಮರಳಿ ಯತ್ನವ ಮಾಡು
ಜಯ ಕಟ್ಟಿಟ್ಟ ಬುತ್ತಿ ನೋಡುʼ
ಯಾರೋ ಆಟೋ ಹತ್ತದ ಪಂಡಿತ
ಮಾಡಿದ ಗಾದೆ ಇದು ಖಂಡಿತ

 

2
ಭಕ್ತನೆದುರು ದೇವರು
ಏನು ವರ ಬೇಕೆಂದ
ಭಕ್ತ ʼಅರ್ಜೆಂಟು ಆಟೋ
ತರಿಸುವೆಯಾ?ʼ ಅಂದ

 

3
ಬೆಂಗ್ಳೂರಲ್ಲಿ ಆಟೋ ಲೆಕ್ಕವಿಲ್ಲದಷ್ಟು
ಆಕಾಶದಲ್ಲೂ ನಕ್ಷತ್ರಗಳಷ್ಟು!
ಎಲ್ಲವೂ ಇರುವ ದೂರ
ನಮಗೆ ನಿಲುಕದಷ್ಟು

 

4
ʼʼಬರ್ತೀಯ?ʼʼ
“ಎಲ್ಲಿಗೆ?”
“…ಇಲ್ಲಿಗೆʼ
“ಮೀಟ್ರ ಮೇಲೆ ಇಷ್ಟು
ಕೊಟ್ರೆ ಮಾತ್ರ ಹತ್ತು”
ಇದೇ ಆಟೋದವನ
ನಿತ್ಯ ಮಾತು

 

5
ಆಟೋದವರು
ಒಬ್ಬರನ್ನೊಬ್ಬರು ಬಿಟ್ಟುಕೊಡರು
ಒಬ್ಬರು ಬರಲ್ಲ ಅಂದರೆ
ಇನ್ಯಾರೂ ನೀವು ಹೇಳಿದಲ್ಲಿಗೆ ಬರರು

 

6
ಮೆಟ್ರೋ ಹತ್ತಿರ
ಆಟೋ ಕಾಟ
ಒಂದಕ್ಕೆರಡು
ಕೇಳುವ ಆಟ

 

7
ʼಎಲ್ಲಿಗ್‌ ಕರೆದ್ರೂ ಬರಲ್ಲ
ಅಂತಾನಲ್ಲ ಗಂಡʼ
ದೂರಿದಳು ಸೊಸೆ ಅತ್ತೆ ಬಳಿ
ʼನೀ ಕಟ್ಕೊಂಡಿರೋದು
ಆಟೋ ಓನರ್‌ಉ’ ಅಂದಳು ಅತ್ತೆ ,
‘ಬಿಡ್ತಾನ ಅವ್ನು ಕಲ್ತ ಚಾಳಿ?ʼ

(ಒಂದು ವಾರ ಆಟೋ ಹಿಂದೆ ಅಲೆದ ಅನುಭವ ಸಾರ!)

(Pic from Google Net)

ಇನಿಯಳ ಸನಿಹ

pexels-photo-414656

ಅವಳು ಉಕ್ಕಿ ಹರಿಸಿದ ನಗುವಿಗೆ
ಅವನು ಬೊಗಸೆ

ಬೆಳಗಿನ ಬಿಸಿ ಕಾಫಿ
ನಿನಗೆ ಬಹಳವೇ ಇಷ್ಟ!
ಹಬೆಯಾಡುವುದ ಕೊಡುತ್ತಾ ಅಂದ
ನಿನ್ನ ಬಿಸಿಯುಸಿರಷ್ಟು ಅಲ್ಲ ಅಂದಳು

ಅವನು ಲಲ್ಲೆ ಮಾತು ಬಿಡಲೊಲ್ಲ
ಅವಳು ಪಲ್ಲಂಗ ತೊರೆಯಳು

ಏಕಿಷ್ಟು ಪಲ್ಲಂಗ ಮೋಹ ಅವಳಿಗೆ?
ಅವನ ಸರಸ ಅರಳುವುದು
ಘಮ ಘಮಿಸುವುದು
ಅಲ್ಲೆ ಅಲ್ಲವೆ!

ನಲ್ಲೆ ಬೆನ್ನ ತೋರಿದಳು
ಅವನೋ ಬೆನ್ನು ಬಿಡ

ನಲ್ಲನಿಗೆ ಬೆನ್ನಾದಳು
ಬಲ್ಲವಳು ಅವಳು
ಹೊನ್ನಾದಳು

ಹುಸಿ ಕೋಪದಲ್ಲಿ
ಒಲವು ಹಸಿರಾಗಿದೆ

ಹೊರಗೆ ಬಿಸಿಲು
ಹಗುರ ಮಳೆ
ನಲ್ಲೆಯ ಹುಸಿಕೋಪ
ನಸು ನಗೆ

girl-2642082_960_720

(Pic courtesy: Pixabay)

ಹುರಿದ ಕಡಲೆ

peanut

(ಗೆಳೆಯ ಕಳುಹಿದ ಕತೆ)

ನಾನು ನಿನ್ನೆ ಬೆಳಿಗ್ಗೆ ಜಾಲಹಳ್ಳಿಲಿ ಮೆಟ್ರೋ ಇಳಿದಾಗ, ಚುಟು ಚುಟು ಮಳೆ. ಸ್ವಲ್ಪ ಚಳಿ ಚಳಿ ಅನ್ನಿಸುತ್ತಿತು. ಫುಟ್ಪಾತ್‌ ಪಕ್ಕ ಕಟ್ಟೆಯಲ್ಲಿ ಮಧ್ಯವಯಸ್ಕ ತೆಳುದೇಹದ ಅವನು ತಳ್ಳುಗಾಡಿಯಲ್ಲಿ ಕಡಲೆಕಾಯಿ  ಬೀಜ ಬಿಸಿ ಬಿಸಿಯಾಗಿ ಹುರಿಯತ್ತಿದ್ದ. ಆ ಹವೆ ಬಿಸಿ ಬಿಸಿಯಾದ್ದು ತಿನ್ನಬೇಕು ಅನ್ನುವ ಚಪಲ ಹುಟ್ಟಿಸಿತು.  ಕಟ್ಟೆ ಮೇಲೆ ಹುರಿಯತ್ತ ಕುಳಿತ ಅವನ ಬಳಿ ಹೋದಾಗ ಗೊತ್ತಾಯಿತು, ಪಾಪ ಅವನಿಗೆ ಕಾಲಿರಲಿಲ್ಲ.

ನಾನು ಹತ್ತು ರುಪಾಯಿ ಚಾಚಿ ಕೈಮುಂದು ಮಾಡಿದೆ. ಅವನು ಆಗಲೇ ಹುರಿದಿಟ್ಟಿದ್ದನ್ನ ಚೂಪು ಪೊಟ್ಟಣಕ್ಕೆ ಹಾಕಿಕೂಟ್ಟ. ಬಿಸಿಯಾಗಿ ಹುರಿಯುತ್ತಿರುವುದನ್ನು ಕೊಡಲಿಲ್ಲ ಎಂದು ಮನಸ್ಸಿನಲ್ಲಿ ಇರಿಸುಮುರಿಸು. “ಇದು ಬೇಡಪ್ಪ, ಇದು ಆರಿದೆ,  ಈಗ ಬಾಣಲೆಯಲ್ಲಿ ತೆಗೆಯುತ್ತಿರುವ ಬಿಸೀದು ಕೊಡು” ಎಂದೆ.

ಅವನು ಯಾವ ಬೇಜಾರು ಇಲ್ಲದೆ, ಪೊಟ್ಟಣದಲ್ಲಿದ್ದ ಕಾಳು ಹಳೆಯಕಾಳಿನ ಡಬ್ಬಕ್ಕೆ ಸುರಿದು, ಬಾಣಲೆಯಿಂದ ಬಿಸಿಯ ಕಾಳನ್ನು ಪೊಟ್ಟಣದ ತುಂಬ ಹಾಕಿಕೊಟ್ಟ. ಹಾಗೇ ಜೊತೆಗೆ ಹತ್ತಿಪ್ಪತ್ತು ಹುರಿದು ಆರಿದ್ದ ಕಾಳುಗಳನ್ನು ಕೈಗೆ ಕೊಸರಿನಂತೆ ಕೊಟ್ಟ.  “ಏನಿದು?” ಎಂದು ಕೇಳುವಷ್ಟರಲ್ಲಿ ಆಟೋದಲ್ಲಿ ಕುಳಿತಿದ್ದೆ.

ಕೊಸರಾಗಿ ಬಂದಿದ್ದ ಆರಿದ ಕಾಳು ಬಾಯಾಡಿದೆ. ಅದು ಗರಿಗರಿಯಾಗಿದ್ದು ಬಾಯಲ್ಲಿ ಕರಗಿ ಹೋಯಿತು.

ನಂತರ ನಾನು ಬಿಸಿ ಬಿಸಿ ಕಾಳು ತಿನ್ನಲಾರಂಬಿಸಿದೆ.   ಕಚಕಚ  ಗರಿಗರಿ ಇಲ್ಲ. ತಿನ್ನುವ ಮಜಾ ಜಾರಿ ಹೋಯಿತು. ಹಾಗೇ ಬಿಟ್ಟೆ.

*ಮನದಲ್ಲಿ ಒಂದು ಸ್ವಗತ ಬಂದು ಹೋಯಿತು.*

ಮಾರುವವನು ಎಷ್ಟು ಬುದ್ಧಿವಂತ ಅನ್ನಿಸಿತು.  ಏನೂ ಹೇಳದೆ, ತನ್ನ ಮೌನದಿಂದಲೆ ಎಲ್ಲವನ್ನೂ ಹೇಳಿದ್ದ.  ಸಾರ್ ನಿಮ್ಮ ಬಿಸಿಯ ಬೇಡಿಕೆ ತರವಲ್ಲ, ನನ್ನನ್ನು ಬೈದುಕೊಳ್ಳಬೇಡಿ, ಎಂದುಕೊಂಡು, ಮಾತಿಲ್ಲದೆ ಕೊಸರು ನೀಡಿ ಆ ಗರಿಗರಿಯ ಕಾಳಿನ ರುಚಿಯನ್ನು ತೋರಿಸಿದ್ದ.  ಅಲ್ಲಿಯವರೆಗೂ ಬಿಸಿಯ ಬಯಕೆ ಹಾಗೂ ಆಯ್ಕೆಯ ಬಗೆಗೆ ಒಂದುರೀತಿಯ ಅಹಂಭಾವದಲ್ಲಿದ್ದ ನನ್ನನ್ನು, ಅವನ ಬುದ್ದಿಮತ್ತೆ  ಕೊಸರಸಿ ಕೆಡವಿತ್ತು !  ಆರಿದ ಮೇಲಷ್ಟೇ ಗರಿಗರಿಯಾಗುವುದು ಎನ್ನುವ ಸೂಕ್ಷ್ಮತೆ, ನನ್ನ ಅನನುಭವ ಮತ್ತು ಆಯ್ಕೆಯ ದಡ್ಡತನ ಎಲ್ಲವನ್ನು ಒಮ್ಮಗೇ ತೋರಿಸಿ ಭೂಮಿಗಿಳಿಸಿದ್ದ.

ಹುರಿವ ಕಡಲೆಯ ಆ ತೆಳು ಮನುಷ್ಯನೊಡನೆಯ ಈ ಪ್ರಸಂಗ ನನಗೆ ಕನ್ನಡಿಯಾಯಿತು. 😌

(ಗೆಳೆಯ ಸಿ.ವಿ. ಶ್ರೀನಿವಾಸ ಪ್ರಸಾದ್ ಕಳುಹಿಸಿದ ಸ್ವಾನುಭವದ ಕತೆ)

(Pic courtesy:Google)