ಸಮತೆಯ ರಥ

women's day                                                                             ೧

ಸುಲಭದ ಮಾತಲ್ಲ ಸಾಧಿಸುವುದು
ರಥವನ್ನೇರುವುದು
ಅಸಮಬಲರೊಂದಿಗೆ ಕಾದಾಡುವುದು
ಕಿರು ಬೆರಳಲ್ಲಿ ಚಕ್ರ ಬೀಳದಂತಿರಿಸುವುದು
(ರಾಮಾಯಣಕ್ಕೆ ನಾಂದಿ ಹಾಡುವುದು)
ಆಡುವುದು ಕಾದುವುದು
ಪುರುಷನ ಬಲದಿಂದ ಅಸಮತೆ
ಯ ಕೇಡ ನೋಡುವುದು


ಗಂಡುಗಳು – ಕೇಡಿಗರು ತಪಗೇಡಿ ವಿಶ್ವಾಮಿತ್ರರ ದಂಡು
ಕುಹಕದುದರದಲ್ಲೇ ಕ್ರೌರ್ಯ ಕಿಡಿ ಹಚ್ಚಬಲ್ಲವರು
ಸಿಗರೇಟು ಕುಡಿತ ಇಸ್ಪೀಟಿನೆಲೆಗಳ ಒಗೆತದಲ್ಲಿ
ಸೋಮಾರಿ ಸಿಟ್ಟು ಕೊಳಕು ನಾಲಿಗೆಯ ಪುಂಡರು

ಅಟ್ಟಹಾಸದ ಅಟ್ಟವನೇರಿ ಅಬಲೆಯ ಸೆಳೆವ ದುರುಳರು
ದ್ವಾಪರ ಕೃಷ್ಣನಿಗೇ ಕರೆ ಕಳುಹಿ ತರಲೆಗೆಳೆವವರು
ಸುಲಿಗೆ ಕೊಲೆ ಬಲಾತ್ಕಾರಗಳೊಂದೆ ಎರಡೆ
ಪತ್ರಿಕೆಗಳ ಪುಟಗಳಲ್ಲಿ ವಾಹಿನಿಗಳ ನಾಲಿಗೆಗಳಲ್ಲಿ
ಪುರುಷನ ಕೇಡ ಕತೆಗಳ ಸಾಲು ಸಾಲು
( ನ್ಯಾಯ ಒದಗಿಸುವ ಅಂಗಳಗಳಲ್ಲಿ
ಕುತರ್ಕ ಕ್ರೌರ್ಯ ಸೀಳು ನಾಲಿಗೆಗಳು )


ನಾರಿಯರು – ಸಬಲೆಯರಾಗುವ ಅಹೋ ಹೋರಾಟದ
ತಪ್ತ ಧ್ವನಿಗಳ ಸುಪ್ತವೂ ಬಯಸುವುದು
ಪುರುಷನೊಡನೆ ತಾನು ಸಮಾನ
ಪರುಷವಾಗುವುದೆ ಆಪ್ಯಾಯಮಾನ…
(ಆದರದು ಅಧಃಪತನದ ಪಯಣ
ಪತಂಗವಾಗುವ ಭ್ರಮಣವೆಂದು
ತಕರಾರಿಸುವರು ಯಾರು ?)

ಪ್ರತಿಭಟನೆಯ ಪ್ರಭೆ ಹರಡಲವಳು
ರಥವೇರುವುದಾಯ್ತು ಕೂಗಲು ಸರಿದೂಗಲು !
ಹಾವಭಾವಗಳಲ್ಲಿ ಉಡುವ ಬಟ್ಟೆಗಳಲ್ಲಿ
ತರ್ಕದಂಗಳದಲ್ಲಿ ಸಿಡಿಮಿಡಿಸಿ ಗುಡುಗುವುದಾಯ್ತು
ಗಂಡು ಪಾಷಾಣ ಬಾಹುಗಳಿಗೆ
ಸಮಬಲರಾಗುವತ್ತಲೆ ಕುರಿಗಮನ !
(ಸಾಧನೆಯ ಹುಸಿ ಸಮಾಧಾನ)


ಗೂಡಿನೊಳ ಹೊಕ್ಕರೆ ಆದರ್ಶಕ್ಕಿವೆ ರೆಕ್ಕೆ
ಹಿರಿ ಜೀವ ನುಡಿಯುತ್ತಾಳೆ ತೆರೆಯುತ್ತ ತೆಕ್ಕೆ:
“ಅಕ್ಕತಂಗಿಯರಾಗಿ ತಾಯಿ ಒಲುಮೆಯರಾಗಿ
ಸ್ನೇಹ ಸಲಹಿಗರಾಗಿ ಪ್ರೇಮ ಹಕ್ಕಿಗಳಾಗಿ
ತಿದ್ದಿ ತೀಡುವ ಲಲ್ಲೆಗರೆಯುವ ಮಾತುಗಳಲ್ಲಿ
ಗುರು ಪಥದ ಗಾರುಡಿಗರಾಗಿ
ಹಕ್ಕು ಹೋರಾಟದೊಡನೆ ಅಕ್ಕರೆಯ ಸವಿಯುಣಿಸೆ
ತಣಿಯದಿದ್ದೀತೆ ಅಸಮತೆಯ ಅಟ್ಟಹಾಸ

ಬೆಳೆಸುವ ಪುಟ್ಟ ಹೆಜ್ಜೆಗಳಿಗೆ
ಗೆಜ್ಜೆಗಳಾಗಿ ಹದಮನದ ರಾಗ ನುಡಿಸಿ
ಹಸನ್ಮುಖದ ಮುದ್ರೆ ಕಲಿಸಿ
ಮನಸು ಮನಸುಗಳ ಮುಸುಕು ಸರಿಸಿ
ಮುನ್ನುಡಿಗೆ ಜೀವ ಚೆಲುವ ಸುರಿಸಿ
ಪುಟವಿಟ್ಟ ಚಿನ್ನ ಅಳಿಸದಿದ್ದೀತೆ ಕಪ್ಪು ಚರಿತೆ
ಸಮತೆಯ ರಥ ಸರಾಗ ಹರಿಯದಿದ್ದೀತೆ”


ಅನಾವರಣವಾಗಲಿ ಅನಾಥ ಗಂಡೆದೆಗಳು
ಸಮತೆಗೆ ಹೋರಾಡಲಿ ಅವು ಹೆಣ್ಣೊಂದಿಗೆ ಇನ್ನಾದರು !

(ಹೆಣ್ಣಿನ ಹೋರಾಟ ಅನೇಕ ಸಲ ಗಂಡಿನ ಅಸಡ್ಡಾಳತನವನ್ನು ಮರೆತು ಆ ಮಟ್ಟಕ್ಕಿಳಿಯುವುದೇ ಸಮತೆ ಅಂದುಕೊಂಡಂತೆ ಇದೆ. ಆ ದಾರಿಯಾಚೆಗೂ ಅವಳು ಯೋಚಿಸಲೆನ್ನುವ ಆಶಯದೊಂದಿಗೆ ಈ ಸಾಲುಗಳು)
(ಚಿತ್ರ ಕೃಪೆ:ಅಂತರ್ಜಾಲ ಗ್ರ್ಯಾಟಿಟ್ಯೂಡ್ ಇಂಡಿಯಾ)