ಕರೆ ಕಳುಹಿ

School Day

ನಿಮಿಷಗಳು ಘಳಿಗೆಗಳು
ಉರುಳುರುಳಿ ಉರುಳಿ
ಮುದ್ದು ಮೊಗ್ಗುಗಳ ಚಂದಮನ
ದಂಗಳಗಳ ತರತರದ ತೆರದ
ರಂಗು ರಂಗಿನ ಮುಖದ
ಹಾವ ಭಾವಗಳ ನಟನೆ
ನಾಟ್ಯಗಳ ತಾಲೀಮು ಮುಗಿದು;
ಎಲ್ಲ ಬಲ್ಲವರಂತೆ ಬಲ್ಲಿದರೆ ತಾವಂತೆ
ತೋರುವಾತುರ ಕಾತರ
ಧಾವಂತ.. ಸರದಿ ಬಂತೆ ?
ಸಮಯ ಸರಿಯುತ್ತಿದೆ
ಕರೆ ಬರಲಿ ಖರೆ ಸಮಯದಲ್ಲಿ

ಇವರ ಅಭಿನಯದಲ್ಲಿ
ಹೆಜ್ಜೆ ಒಜ್ಜೆಗಳಲ್ಲಿ
ಕುಣಿವ ಕುಸುಮತೆಯಲ್ಲಿ
ಉಸಿರು ಹುಟ್ಟಲಿದೆ
ಬೆಳಕು ಹರಿಯಲಿದೆ
ಹಸಿರು ಸಸಿಯಲಿದೆ
ಮನಸು ತಣಿಯಲಿದೆ

ಏಳಿ ಹಿರಿಯರೆ ಏಳಿ
ಕುಳಿತು ಕಾಯುವ ಕಿರಿಯರಿಗೆ
ಕರೆ ಕಳುಹಿ ಖರೆ ಸಮಯದಲ್ಲಿ

School Day2

ಹಾರೈಕೆ

vanaja2

“ನೀನೆಷ್ಟು ಅನಾಗರಿಕಳು
ಮೌಢ್ಯದ ಹೊದಿಕೆ ಹೊದೆದವಳು
ತಿಳುವಳಿಕೆ ಬೇಡವೆ? ಓದಿ ವಿದೇಶದಲ್ಲಿದ್ದು
ಬಂದ ನನಗೇ ನಿನ್ನ ಉಪದೇಶವೆ?
ಇಲ್ಲದ ದೇವರಿಗೆ ನಮಸ್ಕಾರವೆ ?”
ತಿರಸ್ಕಾರದಸಹನೆಯಲ್ಲಿ ಅವ್ವಳನ್ನು
ದೂರಿಸಿ ಮಗ ಕೂಗಿದ

ಅವ್ವ ತನ್ನ ಮಾತಿನಲ್ಲಿ ತಪ್ಪು ಹುಡುಕಿದ್ದಾನು
ಎಂದು ಸೆರಗಲ್ಲಿ ಮುಖ ಮರೆಯಿಸಿ
ಮಗನ ಓದಿನ ಹರಹು
ತೀಕ್ಷ್ಣ ದೃಷ್ಟಿ
ಸೂಕ್ಷ್ಮ ಮತಿ
ಕಂಚಿನ ಕಂಠ
ದ ಸೊಬಗಿಗೆ ಹೆಮ್ಮೆಯಿಂದ ಬೀಗಿದಳು
ಮರೆಯಲ್ಲಿ ನಿಟಿಕೆ ಮುರಿದು ದೃಷ್ಟಿ ತೆಗೆದಳು
ಆಕಾಶಕ್ಕೆ ಮುಖವಿಟ್ಟು ಬೇಡಿದಳು
’ನನ್ನ ಕ್ಷಮಿಸು ಕಂದನ ಸಲಹು’

ನಡುಗಡ್ಡೆ

w1 w2

ಕತ್ತಲು ಬೆಳಕುಗಳೆಷ್ಟೋ ಸರಿದು ಹೋದುವು
ಝರಿಯಂಚಿನ ಸೀರೆಗೆ ಬುಕುಟಬಳ್ಳಿ
ಅಲ್ಲಲ್ಲಿ ಹಚ್ಚಿ ಬೆಳ್ಳಂ ಬೆಳಗಿನಲ್ಲಿ ನಡೆಯುವ
ನನ್ನ ಕನಸುಗಳು ಬತ್ತಿ

ನಾಯಿಂದನೇಕೋ ಬರಲು ತಡಮಾಡಿ
ಕೇಶ ಶೇಷದ ತುರಿಕೆ ಸಂಕಟಕ್ಕಾಜ್ಯವಾಗಿ
ಎಳೆದುಕೊಳ್ಳುತ್ತಲೆ ಇರಬೇಕು ಆಗಾಗ ಸೆರಗ
ಪೊಡಮಾಡಿ ಮೂಲೆಯೊಂದರಲ್ಲಿ

ಅಂದು ಪ್ರೇತ ಹೊತ್ತು ಹೋದದ್ದೇ ತಡ
ನಾನು ಅಪರಜೀವಿ ಆದ ಹೊತ್ತು
ಸುತ್ತನೆರೆದ ನಂಟರು ನಟರಾಗಿ
ಶಾಸ್ತ್ರದ ವಿಸ್ತಾರ ಎದೆಗೆ ಸುರುವಿಟ್ಟರು

ಶುಭ್ರ ಬಿಳಿಗೆ ವಿಶಾಲ ಮುಂಡಕ್ಕೆ
ನಿರಾಕಾರ ಹಣೆಗೆ ಗಾಜುಗಳಿಲ್ಲದ ಕರಣ
ಕ್ಕೆ ಖಾಯಂ ಪ್ರೇಕ್ಷಕರಾಗಿ ಕೇಳಿಸಿದರು
ಹಾರಿದ ಪ್ರಾಣದ ಬಗೆಗೆ ಗರುಡ ಪುರಾಣ !

ಸವೆದ ಕಾಯ ಇದ್ದೂ ನಿರಾಭರಣ
ಆಗಿಸಬೇಕು ಒಳಗಿನಾಸೆಯ ಹರಣ
ಬಯಸದೆ ಬಂದ ವೈರಾಗ್ಯನ ಗೆಳೆತನ
ಕ್ಕೆ ಅಂಟಿಸಬೇಕು ಒಳ ಹೊರಳ ಧ್ಯಾನ

ಸಡಗರವಿದ್ದಲ್ಲಿ ದೇಹ ದೇಹಿಮಾಡಬೇಕಿಲ್ಲಿ
ಶುಭಕ್ಕೆ ಅ-ಕಾರವಾಗಿ ಇರಬೇಕು ಮರೆಯಲ್ಲಿ
ಹಳತನ್ನು ಪುನರಪಿಸಿ ಹೊಸತಿಗೆ ಹತ್ತಿರವಾಗದೆ
ಹೊತ್ತಿಕೊಳ್ಳಬೇಕು ಹೊತ್ತು ಕಳೆಯ ಬೇಕು

ಕುಸಿವ ಮನಸ್ಸಿಗೆ ಕಟ್ಟಿ ಗಟ್ಟಿಪಾಯವ ಸುತ್ತ
ಇಟ್ಟರು ವ್ರತ ನೇಮ ಸಂಯಮ ದೇಹವಾಯಿತು ಹುತ್ತ
ರಕ್ತ ಸಂಬಂಧಗಳ ನಡುವೆ ನಡುಗಡ್ಡೆಯಾಗಿ
ಉಸಿರು ಸಾಗಿಸಬೇಕು ಧರ್ಮಿಗಳ ಮಾನ ಉಳಿಸುತ್ತ

(ಕಳೆದ ದಿನಗಳಲ್ಲಿದ್ದವರ ನೆನಪಿಗೆ, ಇನ್ನೂ ಇರಬಹುದಾದ ಈ ಕೆಟ್ಟ ಪದ್ಧತಿ ಕೊನೆಯಾಗಲೆನ್ನುವ ಆಶಯದೊಂದಿಗೆ ಬಂದ ಸಾಲುಗಳು )

ಚಾಲಾಕಿತನ

ur

ಚಾರ್ವಾಕತನದಲ್ಲಿ ಬಹಳ ಚಾಲಾಕಿತನವಿದೆ.

ತಮ್ಮ ಮಾತಿನಲ್ಲಿ ಹಿಕಮತ್ತು ತುಂಬಿ ಒಬ್ಬರಿಗೊಬ್ಬರು ತಲೆ ತರಿದುಕೊಳ್ಳುವಂತೆಯೋ, ದೊಂಬಿಯಾಗುವಂತೆಯೋ ಮೂರ್ಖಾಸ್ತ್ರಗಳನ್ನು ಪತ್ರಿಕೆಗಳಲ್ಲಿ, ಟೀವಿ ಅಥವಾ ಸಭೆಗಳಲ್ಲಿ ಗುರಿಯಿಲ್ಲದೆ ಹರಿಯಬಿಡುವ ಈ ಮಂದಿ, ದೂರ ದಡದಿಂದ ಒಂದೇ ಕಣ್ಣಿನಿಂದ ಮುಖ ಪುಟಗಳಲ್ಲಿ, ಜನರ ತುಟಿಗಳಲ್ಲಿ ಹಾಗೇ ರದ್ದಿಯಲ್ಲಾದರೂ ಸರಿ, ತಮ್ಮ ಸುದ್ದಿಯಾಯಿತೇ ಎಂದು ಹಪಹಪಿಸುತ್ತಾರೆ.

ಇವರುಗಳ ಕೃತಿ ಕಡಿಮೆ ಇದ್ದರೂ, ನುಡಿದ ವಿಕೃತಿ ಮಾತುಗಳು ಉಳಿಯುವಂತೆ ನೋಡಿಕೊಳ್ಳುತ್ತಾರೆ. ಅಭಿನವ ಪ್ರಕಾಂಡ ಚಾರ್ವಾಕರುಗಳ ಮಹತ್ ಕೃತಿಗಳೆಲ್ಲವೂ ಧ್ವಂಸವಾಯಿತೆಂದು ಮತ್ತು ದೇವರ ಅಸ್ತಿತ್ವದ ಬಗೆಗೆ ಇವರು ಮಾಡಿದ ಅನೇಕಾನೇಕ ಪ್ರಯೋಗ, ಪರೀಕ್ಷೆಗಳೆಲ್ಲವೂ ಮೂಲಭೂತವಾದಿಗಳಿಂದ ಹತವಾಯಿತೆಂದೊ / ಮುಚ್ಚಿಡಲಾಗಿದೆಯೆಂದೊ ಮುಂದೊಂದು ದಿನಗಳಲ್ಲಿ ಎದೆ ಬಡಿದುಕೊಳ್ಳುತ್ತಾರೆ.

ಹಾಗೆಯೇ ಕಲಬುರ್ಗಿಯವರ ’ಮೂರ್ತಿ ಮೂತ್ರೋಪಖ್ಯಾನ” ವೊಂದೇ ಉಪದೇಶವಾಗಿ ಉಳಿದುಕೊಂಡಿದೆಯೆಂದು ಸಾರುತ್ತಾರೆ. ಇದರಿಂದ ಜನರ ಉದ್ಧರಿಸಬೇಕೆನ್ನುವ ಮಹತ್ ಯೋಚನೆ ಇತ್ತೀಚಿನ ಚಾಲಾಕಿ ಚಾರ್ವಾಕ ಮಂದಿ ಎದೆಯೊಳಗೆ ಹೊಗಿಸಿಕೊಂಡಿದ್ದಾರೆ.

ಮೇಲಿನ ಉಪಖ್ಯಾನದಿಂದ ಮೌಢ್ಯರು ಸನ್ಮಾರ್ಗ ಹಿಡಿಯುವ ದಿನ ದೂರವಿಲ್ಲ. ಏಕೆಂದರೆ, ಕರ್ನಾಟಕದ ಮು.ಮಂ.ಳು ಪ್ರಯೋಗಾಲಯಗಳನ್ನು ಈ ಮಂದಿಗೆ ರಾಜ್ಯದ ತುಂಬಾ ಕಟ್ಟಿಕೊಡಬಹುದು ಮತ್ತು ’ಮೂರ್ತಿಭಾಗ್ಯ’ ಅಥವಾ ’ಮೂತ್ರಿಭಾಗ್ಯ’ ಎನ್ನುವ ಯೋಜನೆ ಸದ್ಯದಲ್ಲೇ ಚಾಲು ಆಗಬಹುದು.

(ಶ್ರೀಯುತ ಎಂ.ಎಂ.ಕಲ್ಬುರ್ಗಿಯವರ ಕನ್ನಡ ಪ್ರಭದಲ್ಲಿ ತಾ.೧೦.೦೬.೧೪ರ ಹೇಳಿಕೆಯ ಪ್ರತಿಕ್ರಿಯೆ)

ಸಮುದ್ರ

 

s10

 1

ಕುಡಿಯಲಾಗದು ವಾರಿಧಿಯ ನೀರು
ಏಕೆಂದರೆ ಇದು ಸೂರ್ಯ ಝಳಕ್ಕೆ
ಆಕಾಶರಾಯ ಸುರಿಸಿದ್ದು ಬೆವರು

s2

  2

ನೆಲ ನಾಲಿಗೆ ತೆರೆ ಗರಗಸವಾಗಿಸಿ
ಬಾಯಿ ತೆಗೆದುಗ್ಗುಳಿಸಿ
ಆವಾಹಿಸುವ ರಕ್ಕಸ ರೂಪಿ ಸಾಗರ
ಮರು ಘಳಿಗೆ ನಾಚಿ ಹಿಂದೋಡಿ
ತೀರದಲ್ಲಿ ಅಲೆದು ಆಡುವವರಲ್ಲಿ
ನಗುವಿನಲೆ ತೇಲಿಸುವ ಸರಸಗಾರ !