ಹೊರಟ ‘ಸಪಬ’

ಪಿಬಿ ಎಸ್, ಎಸ್ ಪಿಬಿ
ಪಬಸ, ಸಪಬ
ಮೂರೇ ಅಕ್ಷರ 
ಮೂರು ಸ್ವರ
ಸಿಕ್ಕಿದರಿಬ್ಬರು ಕನ್ನಡಕೆ
ಹೊಕ್ಕರು ಎಲ್ಲರ ಮಾನಸಕೆ

ಗಾನದಿ ತಣಿಸಿದ
‘ಸಪಬ’ ಹೊರಟಿತೆ
ನಮ್ಮ ತೊರೆದು ಇಂದು
ಅವಸರವೇಕೋ
ಬಯಸಿತು ಏಕೋ
ನಮ್ಮೆಲ್ಲರ ಅಶ್ರು ಬಿಂದು

(Pic from Google)

ಕೊಳಲು ಸಿಕ್ಕಮೇಲೆ…

ಅಮ್ಮ ಬಾ ಅಪ್ಪ ಬಾ
ಅಜ್ಜ ಅಜ್ಜಿ ಬನ್ನಿರಿ
ಕೃಷ್ಣನಂತೆ ಕಾಣಲು ನಾ
ಗೆಜ್ಜೆಗಳ ಕಟ್ಟಿರಿ

ಹಣೆಗೆ ತಿಲಕ ಕೊರಳ ಹಾರ
ಉಡಿಸಿ  ಪೀತಾಂಬರ
ತಲೆಗೆ ಪುಟ್ಟ ನವಿಲುಗರಿ
ಕೈಗೆ ಇರಲಿ ಮುರಳಿ

ಬೆಟ್ಟ ಎತ್ತಲೇಕೆ ನಾನು
ನನ್ನೆ ಎತ್ತಿಕೊಳ್ಳಿರಿ
ಬೆಣ್ಣೆ ಕೊಡಿ ತಿನ್ನಲು
ಹೋಗೆ ಮಣ್ಣಲಾಡಲು

ತನ್ನಿ ಉಂಡೆ ಚಕ್ಕುಲಿ
ಕುಡಿಯ ಕೊಡಿ ಪಾಯಸ
ಹೊರಡಬೇಕು ಆಟಕೆ
ಬಹಳವಿದೆ ಸಾಹಸ

ಇಂದು ಕೃಷ್ಣನಾದೆನು
ತಂಟೆ ಇನ್ನು ಮಾಡೆನು
ಕೊಳಲು ಸಿಕ್ಕ ಮೇಲೆ
ಸಂಗೀತದಲ್ಲೆ ಉಲಿವೆನು

ಗುರು ನಮನ

ಕಗ್ಗಂಟು ಪಾಠಗಳ ಎಳೆಎಳೆಯ ಬಿಡಿಸಿ
ಮನಸಿಗೆ ಅಡರಿಸುವ ಸೊಬಗು

ಎಳೆಗರುವ ಸಂತಯಿಸುವಂತೆ
ಬೋಧನೆಯ ತಂಪಾದ ಹರಿವು

ತುಂಟಾಟಗಳ ವಯಸಿಗರು ನಾವು
ನಮ್ಮ ನಲಿವ ನೋಡಿ ನಕ್ಕ ನೀವು

ಅಗಾಧ ವಿಷಯ ಇನಿತಿನಿತೆ ಅರಿತು
ಹೆಮ್ಮರವಾಗುವ ಆಸೆ ಹೊತ್ತ ನಾವು

ಅರಿವಿನ ಮೊಳಕೆಗೆ ನೀರೆರೆವ ಗುರುವೆ
ಬರುವ ಬೆಳಕಿಗೆ ಇರಿ ನೀವು ಜೊತೆಗೆ

ಹರಿಸಿ ಚೇತನ ಇನಿತು ನಮ್ಮ ತೆವಳಿಕೆಗೆ
ಬಲಬರಲಿ ನಮಗೆ ಮುಗಿಯದಿರಲಿ ಕಲಿಕೆ

ನಮ್ಮ ನಡಿಗೆಯ ಭಾರ ಹೊತ್ತಿರುವಿರಿ
ನಲಿವ ದಿನಗಳ ಕೊಡುಗೆ ಕೊಟ್ಟಿರುವಿರಿ

ನೀವು ತೋರಿದ ದಾರಿ ನಮ್ಮ ಗಮನ
ತಮವ ದೂಡುವ ಗುರುವೆ ನಿಮಗೆ ನಮನ

(ತಾ.6.9.2020ರ ʼವಿಕ್ರಮʼ ಪತ್ರಿಕೆಯಲ್ಲಿ
ಪ್ರಕಟವಾದ ಕವನ)

ಶಿಕ್ಷಕನೆಂಬ ಕೃಷಿಕ

ಎಳೆ ಕರಗಳಿಗೆ ಅಕ್ಕರೆಯಲಿ
ಅಕ್ಷರ ಬರೆಸುವ ಹಂಬಲಿಗರೆ

ಬೆಳೆಯುವ ಬುದ್ಧಿಗೆ ಓದಿನ
ಓಂಕಾರ ನುಡಿಸುವ ಹಿರಿಮೆಗರೆ

ಕಾಣದ ತೋರದ ಸೋಜಿಗಗಳಿಗೆ
ಬೆಳಕನು ಚೆಲ್ಲುವ ಬಾಂಧವರೆ

ಕತ್ತಲ ಮಾರ್ಗದ ಇಕ್ಕೆಲವೂ
ಜ್ಯೋತಿ ಬೆಳಗುವ ತತ್ಪರರೆ

ಮಾನವೀಯತೆ ಮೌಲ್ಯದ ನಡೆ
ಹೃದಯಕ್ಕರುಹುವ ಸುಧಾರಕರೆ

ಸಕಲ ವೃತ್ತಿಗಳ ಪ್ರವೃತ್ತಗೊಳಿಸಿ
ಪಾಲನೆಮಾಡುವ ರಕ್ಷಕರೆ

ದುರ್ಗಮ ಆರೋಹಣ ನಡಿಗೆಗೆ
ಮೆಟ್ಟಿಲ ಕಟ್ಟುವ ಮಾಸ್ತರರೆ

ಜ್ಞಾನದ ಬೆಳಕ ಉಜ್ವಲಗೊಳಿಸುವ
ಶಿಷ್ಯಕೋಟಿಗಳ ಶಿಕ್ಷಕರೆ

ಬೌದ್ಧಿಕ ಬೀಜವ ಅನವರತ ಬಿತ್ತುವ
ದೇಶ ಬೆಳೆಸುವ ಕೃಷಿಕರೆ

ನೆನೆವೆವು ನಿಮ್ಮನು ಅನುದಿನ
ನಮಿಸುವೆವಿಂದೀ ಸುದಿನ

(ವಿಕ್ರಮ ವಾರ ಪತ್ರಿಕೆ ದಿ.೬.೯.೨೦೨೦)