ಹಳೆ ಬಾಸು ಭೇಟಿ

pexels-photo-1300527

ಅಂದಿನಾಫ಼ೀಸಿನ ತರಲೆ
ಬಾಸು ತನ್ನ ಛೇಂಬರಿನಲ್ಲಿ
ಗಹನವಾಗಿ ಯೋಚಿಸುತ್ತಾ
ಒಂದರಮೇಲೊಂದು ಸಿಗರೇಟು
ದಹಿಸುತ್ತಾ ಹೊಗೆ ಮೋಡ ಸೃಷ್ಟಿಸಿ
ತಿರುಗುವ ಕುರ್ಚಿ ಗರಗರ
ತಲೆಯೊಳಗೂ ತಿರುಗಿಸಿ
ಸ್ಟೆನೋಳ ಕರೆದು ಏನೇನೋ ಬಯ್ದು
ಶೀಘ್ರಲಿಪಿಸಿ…
ಹೊರ ಹೋಗುವಾಗ ಅವಳ ಸೀರೆ
ನೆರಿಗೆ ತುಂಬಾ ತಂಬಾಕು
ಸುಟ್ಟ ಘಾಟು
ಅವಳಿಗದು ಇಷ್ಟವೋ
ಅವನು ಅನಿಷ್ಟವೋ
ತಿಳಿಯದೆ ಹರಿದದ್ದು ಮಾತ್ರ
ಅವಳ ಕಣ್ಣಂಚಲ್ಲಿ
ತುಂಬಿದ್ದ ನೀರು…

ಇಂದಿನಾಫ಼ೀಸು ಅದೇ
ಅವಳೇ ಈಗ ಅಲ್ಲೆ ಬಾಸು!
ಇನ್ನು ನಾಲ್ಕೇ ವರ್ಷ
ಅವಳಿಗುಳಿದ ಸರ್ವೀಸು
ಕುಳಿತಿದ್ದಾಳೆ ಅದೇ ಛೇಂಬರು

ಕಾಯುತ್ತಿದ್ದಾರೆ ಹಳಬರೊಬ್ಬರು
ಬಾಸಿಣಿಯನ್ನು ಭೇಟಿಸಲು
ಅವರದು ಪಿಂಚಣಿಯದು
ಮುಗಿಯದೇ ಉಳಿದ
ತಕರಾರು ಇರಿಸುಮುರಿಸು

ಚೀಟಿ ನೋಡಿ ಬಾಸಿಣಿ ಲಗುಬಗೆ
ಗಡಿಬಿಡಿ ಹೊರಬಂದು ನಮಸ್ಕರಿಸಿ
’ಒಳಬನ್ನಿ ಸರ್’
ಕರೆದು ಕೂರಿಸಿ ತಾನು ನಿಂತು…
ಅದೇ ಭಂಗಿ … ʼಹೇಳಿ ಸರ್‌ʼ
ಹಳೆಬಾಸಿನಹವಾಲು
ಸ್ವೀಕರಿಸುತ್ತಾ ’ಅಂದಿನಂತೆಯೇ’
’ಸರ್.. ಸರ್..’
ಬರೆದುಕೊಳ್ಳುತ್ತಾ ತಲೆಯಾಡಿಸುತ್ತಾ…

ಹಳೆ ಬಾಸ್‌ಗೆ
ಇದೀಗ ನಿರಾಳ ಜೊತೆಗೆ ನಿಟ್ಟುಸಿರು
ತಿರುಗುವ ತಂಪು ಫ಼್ಯಾನು ಅಲ್ಲೀಗ ಗಂಧ
ಪರಿಮಳ ಹಳೆಬಾಸ ಕೋಟು ತುಂಬಾ!
ಹಳಬರು ಅವಳೆದುರು ಕಣ್ಣರಳಿಸಿ
ಅಳೆದಳೆದರು ಮತ್ತು
ಹರಿಸಿದರು ಯಾಕೋ ಕಣ್ಣೀರು….

ಹರಿದುಬಿಡು

pic2

(ಗಜಲ್)

  ಬರಿಯ ಒಣಹಾಳೆಯ ಗೀಚುಗಳವು ಹರಿದುಬಿಡು

ಮೈಸೊಕ್ಕಿಗೆ ಬಂದ ಒಡ್ಡುಗಳ ದಾಟಿ ಹರಿದುಬಿಡು

 

ಶುಷ್ಕ ಪದ ಪಂಕ್ತಿಗಳವು ಓದದೆಯೆ ಹರಿದುಬಿಡು

ನಿನ್ನ ಹೃದಯಭಾರ ಇಳಿಸಲೊಮ್ಮೆಲೆ ಹರಿದುಬಿಡು

 

ಅಸತ್ಯಗಳಾಗರದ ಆಶ್ವಾಸನೆಗಳವು ಹರಿದುಬಿಡು

ನೋವ ನುಂಗುವ ಘನತೆಯೊಂದಿಗೆ ಹರಿದುಬಿಡು

 

ಮೃಗತ್ವ ಮರೆಮಾಚಿ ಬರೆದವುಗಳ ಹರಿದುಬಿಡು

ಮಾನವತ್ವದ ಹದದಲ್ಲಿ ಹನಿಯಾಗಿ ಹರಿದುಬಿಡು

 

ಅಪಾತ್ರನ ಪತ್ರ ದೃಢ ಕೈಗಳಿಂದಲೆ ಹರಿದುಬಿಡು

ನಿನ್ನ ಪಾತ್ರವ ಬಿಡದೆ ‘ಅನಂತ’ ಗಮ್ಯಕೆ ಹರಿದುಬಿಡು

 

Pic courtesy : Internet

(Published in Surahonne: Link: http://surahonne.com/?p=21026)

ಸ್ನೇಹ ರೂವಾರಿ

e7d6eef5e0ef29d9b963bd4340960991--krishna-photos-krishna-images

ತನ್ನರಮನೆಯ ಬಾಗಿಲಲ್ಲಿ
ಸುದಾಮನ ಅಪ್ಪಿ
’ಹೊರಟೆಯೇನು ಗೆಳೆಯ
ಭೇಟಿ ಮತ್ತಿನ್ನಾವ ಸಮಯ?’
ಕೇಳುತ್ತಿದೆ
ಕೃಷ್ಣ
ಕೃಪಾ ಹೃದಯ

ಇಬ್ಬರಕ್ಷಿಗಳಲ್ಲೂ
ತುಳುಕಲಿರುವ ಕಣ್ಣೀರು
ಕಾಣಿಸರು ಒಬ್ಬರಿಗೊಬ್ಬರು
ಕಾಣರು ಯಾರೂ
ಅವರ ಸಾವರಿಸುವವರು!

ಗೋಪಾಲನ
ಹೃದಯದರಮನೆಯ
ಹೆಬ್ಬಾಗಿಲಲ್ಲಿ
ಬೀಳ್ಕೊಡುಗೆಯ
ಆ ಕ್ಷಣ
ತಲೆ ಬಾಗುತ್ತಾ ಕೃಷ್ಣ
ಒರೆಸಿಕೊಂಡ ಥಟ್ಟನೆ
ತುಂಬಿದ ತನ್ನ ಕಣ್ಣ!

ಅಸಹಾಯ ಗಿರಿಧಾರಿ
ಯ ಕಂಡ ರುಕ್ಮಿಣಿ
ಅರೆ ಘಳಿಗೆ ವಿಸ್ಮಯಿ!

ಅಂದು ಮತ್ತಿಂದಿಗೂ
ಗೆಳೆತನದ ಅಸೀಮತೆಗೆ
ರೂವಾರಿ
ಕೃಷ್ಣ ಮುರಾರಿ

(Pic courtesy:Google)