ಪ್ರೇಮಿಯೂ… ಪ್ರಾರ್ಥನೆಯೂ

img_4413

ಅವಳು ಆಗಮಿಸುವಾಗಲೆಲ್ಲ
ನನ್ನೊಳಗೆ ಉಸುರುತ್ತವೇಕೆ ಆಸೆ
ಕಂಡಾಗ ಇವಳ ನಡೆಯ ಹುರುಪು
ಹೃದಯದೊಳಗೇಕಿಷ್ಟು ಬಿಸುಪು

ಸ್ಪುರಿಸಿ ಅವಳಾಗಮನದ ಬೆಳಕು
ಒಳಗಿನಾಸೆ ದರ್ಶನವಾಗಬಹುದೆ!
ಯಾರವಳ ಮೆಚ್ಚು ತಿಳಿಯಬಹುದೆ
ಗಟ್ಟಿ ಗುಟ್ಟು ನಿಚ್ಚಳವಾಗಬಹುದೆ?

ಸುಡುವಯಸ್ಸು ಜಾರಿದ ನಡು
ವಯಸ್ಸಿನ ಜಾಣೆ ಈ ಮಂದಸ್ಮಿತೆ
ತುಟಿ ಪದಗಳನರಳಿಸುವ ಪ್ರಸನ್ನೆ
ಪ್ರಚ್ಛನ್ನ ಪ್ರೇಮಸೋಂಕಿನ ವದನೆ !

ಪದ ಪದಗಳ ಪೋಣಿಸಿ ಪಲುಕಿ
ಮಾಲೆ ಮಾಡುವ ಚೆಲುವೆ ಚಾಲಾಕಿ
ಅವಳುಸುರುವಾಗಿನ ನುಡಿ ಲಾಲಿತ್ಯ
ರಾಗ ಮಾಲಿಕೆಯ ಸುಸ್ವರ ಸಾಹಿತ್ಯ!

ನಿವೇದಿಸಿ ನಿರಾಳನಾಗುವೆನೆಂದ ಕ್ಷಣ
ಅವಳೊಳಗೆ ಹೊಳೆವ ಹುಸಿ ಜಾಣತನ
ಸುರಿಸಿ ಸುಳ್ಳು ಹರಿಸಿ ಹುಚ್ಚಿನ ಹೊಳೆ
ತೋಯಿಸಿ ಮಿಂಚುವ ಸಂಚಿನ ಎಳೆ !

ಎನಿತೋ ವರ್ಷ ಕಾಯ್ದಿಟ್ಟ ಸಲ್ಲಾಪ
ಅದುಮಿಟ್ಟ ಆಸೆ ಗೂಡ ಪಂಜರದ ಹಕ್ಕಿ
ಹಾರಿಸುವಳೆಂಬ ಭ್ರಮೆನಿರಸನಿಸಿ
ಹೊದೆಯುತ್ತಿದ್ದಾಳೆ ಗೂಢತೆಯ ಹೆಕ್ಕಿ

ಉತ್ಸುಕತೆಯಲ್ಲಿಅವಳ ಕಣ್ಣ ನೋಟ
ಅಷ್ಟೇ ಜಾಗರೂಕತೆಯ ಕಳ್ಳ ಆಟ
ಒಳಗಿನಾಸೆ ಉಳಿಸುವ ಕೆಂದುಟಿಯ
ತುದಿಯ ತುಂಟ ನಗುವಿನ ಪಾಠ!

ಸಮಯ ಜಾರುತ್ತ ಸಂಯಮದ ಕಟ್ಟೆ
ಒಡೆಯದಂತಿರಿಸುವ ಕವಾಯಿತು
ಈ ಗಟ್ಟಿಗಿತ್ತಿಯಲ್ಲಿ ಬತ್ತದ ಹೊಸತು
ಮತ್ತೂ ಒಸರುವ ಜೇನು ಮಾತು

ಕ್ಷಣ ನಿಮಿಷ ಘಂಟೆಗಳೆ ಸ್ತಬ್ಧಿಸಿರಿ
ದಿನಮಾನಗಳೆ ಉರುಳಿ ಹೋಗದಿರಿ
ವರ್ಷಗಳಿಗೆ ಇನಿತೂ ಎಡೆಗೊಡದಿರಿ
ಪರಿವೆ ಇಲ್ಲದ ಕಾಲವ ಮಲಗಿಸಿರಿ!

ವರ್ತಮಾನವೆ ನಿಲ್ಲು ನಿಲ್ಲು
ನಲ್ಲೆ ಮೇಲಿನ ನೆರೆ ದಾಳಿ ಕೊಲ್ಲು
ಇಂತಿದ್ದ ಪಾತರಗಿತ್ತಿ ಅಂತೆಯೆ ಇರಲಿ
ಮುಂದಿಗೂ ಎಂದಿಗೂ ಹಾರುತ್ತಲಿರಲಿ

ಹರೆಯದ ಪೊರೆ ಕಳಚುತ್ತಿರುವವಳಿಗೆ
ಕನಸ ಕೊಬ್ಬಿಸುವ ನಲ್ಲ ನಾನಾಗುವರೆಗೆ
ಅವಳ ಮಾತಿನ ಪರಿಗೆ ಸೋತವನಿಗೆ
ಗರಿಬಿಚ್ಚುವವರೆಗು ಕಾದೇನು ಗೆಲ್ಲುವರೆಗೆ

ಅಯ್ಯಾ, ದಿನವೆ ಉರುಳಬೇಡ
ವರ್ಷಗಳಿಗೆ ಎಡೆಗೊಡಬೇಡ !

(http://surahonne.com/?p=13548  ಪ್ರಕಟಿತ)

 

ಲಡ್ಡು ಮತ್ತು ಛೋಟ ಭೀಮ್

bheem-png

ಪುಟ್ಟ ನೋಡೋದು ಒಂದೆ ಕಾರ್ಟೂನು
ಛೋಟಾ ಭೀಮ್ ಗೆ ಇವ ದೊಡ್ಡ ಫ಼್ಯಾನು
ಟೀವಿ ಮುಂದೆ ಕುಳಿತು ರಿಮೋಟು ಹಿಡಿದ್ರೆ
ನಗು ಚಪ್ಪಾಳೆ ಮತ್ತೆ ಬರೋಲ್ಲ ನಿದ್ರೆ

ಕಣ್ಬಿಟ್ಟು ನೋಡ್ತಾನೆ ಭೀಮ್ ನ ಆಟ
ತುಂಬಾನೆ ಮೆಚ್ತಾನೆ ಅವನೋಡೊ ಓಟ
ಗೆಳೆಯರ ಜೊತೆಗೆ ಭೀಮ್ ನ ಒಡನಾಟ
ಶತ್ರು ಮೇಲೆ ಮಾತ್ರ ಭಾರಿ ಹೊಡೆದಾಟ

ಆದ್ರೂನು ಪುಟ್ಟಂಗೆ ಆಶ್ಚರ್ಯ ಒಂದೆ
ಭೀಮ್ ತುಂಬಾನೆ ಲಡ್ಡು ತಿಂತಾನೆ
ಲಡ್ಡುನಿಂದ ಹೇಗೆ ಶಕ್ತಿ ಬರ್ಬಹುದು
ಅನುಮಾನ ಅವ್ನಿಗೆ ಹೇಗೆ ನಂಬೋದು

ಹೊಟ್ಟೆಗೆ ಈ ಲಡ್ಡು ಅಪಾಯ ಗೊತ್ತ
ಹಲ್ಲು ಕೂಡ ಹಾಳು ತಿನ್ಬಾರ್ದು ನಿತ್ಯ
ಡಾಕ್ಟರ್ ಪುಟ್ಟಂಗೆ ಹೇಳಿದ್ದು ಸತ್ಯ
ತಿಳಿಸ್ಬೇಕು ಬೇಗನೆ ಭೀಮಂಗೆ ವಿಷ್ಯ

ಸಿಕ್ಕಿದ್ರೆ ಒಂದ್ಸಲ ಆ ಛೋಟ ಭೀಮು
ಡಾಕ್ಟರ್ ಹತ್ರ ಬುದ್ಧಿ ಹೇಳಿಸ್ಲೆ ಬೇಕು
ಲಡ್ಡು ಬಿಟ್ಟು ಬರಿ ಹಣ್ಣುತರಕಾರಿ
ತಿಂದ್ರೆ ಬೆಳೀತಿದ್ದ ಅವನು ಎತ್ರಕ್ಕೆ ಭಾರಿ

(ವಿಶ್ವವಾಣಿ-ವಿರಾಮ-ಲಾಲಿ ಪಾಪು ದಿ.೦೫.೦೨.೨೦೧೭)