ಗಡ್ಡ

ಕಿರುಗತೆ

ಸ್ವಾಮೀಜಿಗಳು ಎಲ್ಲ ಮೋಹಗಳನ್ನೂ ಬಿಟ್ಟವರು. ಎಲ್ಲ ಆಡಂಬರಗಳನ್ನೂ ತೊರೆದವರು. ಸುಖ ವರ್ಜಿಸಿದವರು. ಅವರು ತಮ್ಮ ಶಿಷ್ಯರುಗಳಲ್ಲಿಯೂ ಈ ಗುಣವಿರಬೇಕೆಂದು ಬಯಸುತ್ತಿದ್ದವರು.

ಒಂದು ಸಲ ಅವರ ನೀಳ ಗಡ್ಡದ ಬುಡದಲ್ಲಿ ಸಣ್ಣ ಗಡ್ಡೆಯಂಥದು ಕಾಣಿಸಿಕೊಂಡಿತು. ಗಡ್ಡ ನೀವುವಾಗ ಅದು ಅವರ ಕೈಗೆ ತಾಕುತ್ತಿತ್ತು. ಅದು ದೊಡ್ಡದಾದರೆ ಸಮಸ್ಯೆಯಾದೀತು ಎಂದೆನಿಸಿತು. ವೈದ್ಯರೊಬ್ಬರನ್ನು ಭೇಟಿಮಾಡಿದರು. ವೈದ್ಯರು ʼಸಣ್ಣ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಬಹುದು. ಶಸ್ತ್ರಚಿಕಿತ್ಸೆಗೆ ಗಡ್ಡ ತೆಗೆಯಬೇಕು. ಅದನ್ನು ತೆಗೆದು ಮುಂದಿನ ವಾರ ಬನ್ನಿʼ ಅಂದರು.

ಆಶ್ರಮಕ್ಕೆ ಹಿಂತಿರುಗಿದ ಸ್ವಾಮೀಜಿ ತಮ್ಮ ನವಿರು ಗಡ್ಡ ನೀವುತ್ತಾ ಚಿಂತಿಸಿದರು. ʼಈ ಗಡ್ಡದಿಂದ ತಾನು ಗಂಭೀರನೂ ಮತ್ತು ತೇಜಸ್ವಿಯಾಗಿಯೂ ಕಾಣುತ್ತಿದ್ದೇನೆ ಅಲ್ಲವೆ?ʼ

ಎರಡು ದಿನ ಅವರಿಗೆ ನಿದ್ರೆಯೇ ಬರದು. ʼಅಯ್ಯೋ! ಇಷ್ಟು ಚೆಂದದ ಗಡ್ಡ ತೆಗೆಯಬೇಕೆ? ಗಡ್ಡೆ ಇದ್ದರೆ ಇರಲಿ. ಗಡ್ಡದ ಮರೆಯಲ್ಲಿ ಗಡ್ಡೆ ಇರತ್ತೆ. ಯಾರಿಗೂ ಕಾಣಿಸಲ್ಲವಲ್ಲ! ಗಡ್ಡ ತೆಗೆಯೋದು ಬೇಡʼ.

ಹೀಗೆ ಗಟ್ಟಿ ನಿರ್ಧಾರ ಮಾಡಿದಮೇಲೆ ಅವರಿಗೆ ಒಳ್ಳೆಯ ನಿದ್ರೆ ಬಂತು.

ಗೋವಿಂದ ಪೈ – ಜನ್ಮದಿನ

ಮಂಜೇಶ್ವರ ಮಣ್ಣಲ್ಲಿ ಮೂಡಿತಂದು ಹೊಳೆವ ಬೆಳ್ಳಿ    
ಕನ್ನಡ ತುಳು ಕೊಂಕಣಿ ಮಾತೆಯರಿಗವನು ಕಣ್ಮಣಿ

ಸಾರಸ್ವತ ಲೋಕ ಸೂರ್ಯ; ದೃಷ್ಟಿ ಇತ್ತು ಪ್ರಖರ
ಭಾಷೆಗಳೆಡೆ ಚಾರಣ;  ಪಾಂಡಿತ್ಯದಲ್ಲೇರಿ ಶಿಖರ

ಕವಿ ಕೋವಿದನ ಕೃತಿಗಳನೇಕ; ನಿಖರ ಸಂಶೋಧಕ  
ತನ್ನೊಳಗಿನ ಶೋಧಕ; ಪುಟವಿಟ್ಟ ಕನಕ, ಆಸ್ತಿಕ

ಕೃಷ್ಣಚರಿತ ಗೊಲ್ಗೋಥ ʼಸ್ವನಿತʼ ಬರೆದ ಮೊದಲಿಗ,
ಪ್ರಾಸ ಸಂಕೋಲೆ ಕಳಚಿ ಹೊಸತು ಬೆಳಕು ಚೆಲ್ಲಿದ

ತುಳುವ ಚರಿತೆ, ಕನ್ನಡ ವೈಭವ, ಉತ್ಖನಿನಿಸಿದ ಸೇವಕ  
ವಿನಯ ಸದೃಶ ರಾಷ್ಟ್ರ ಕವಿ;  ಋಷಿ ಸ್ವರೂಪ ಸ್ವಾತಿಕ

ಅಕ್ಷರ ಸಾಗರ  ಕಡೆದು ನವನೀತವಿತ್ತ ಗವಳಿಗನೇ ಸೈ
ಅಮರನೀತ ಕನ್ನಾಡಿನ ಮಂಜೇಶ್ವರ ಗೋವಿಂದ ಪೈ

ಕವನ ದಿನ

ಭಾನುವಾರವೆಂದು
ಕವನ
ಬಾರದಿರುವಳೆ!
ಬಿಡುವಾಗುವೆನೆಂದು
ಕವಿತೆ
ಹೊಸತು ಹೊಳೆಯಳೆ!
ಲಾಸ್ಯ ಮೆರೆದು
ಲಹರಿಯಾಗಿ
ಕಾವ್ಯ ಎನಿಸಳೆ!
ದಿನಪನೊಡನೆ ಬಂದು
ಕಿರು ಬೆಳಕ ಬೀರಳೆ!
ಕವಿಯ ಚಿತ್ತ
ಅರಳಿಸುತ್ತ
ಅನುಭಾವವಾಗಳೆ!

(Pic courtesy: Unsplash)

ಹೂ ನಗೆ

ಮರಮರಗಳ ಶಿರಗಳಲ್ಲಿ
ವರ್ಣ ಒಡೆವ ಬಯಕೆ
ಋತು ಬದಲಿಸಿ ಬರುವಲ್ಲಿ
ಹೊಸತಾಗುವ ಆಸೆ

ಚಿಗುರಿದ ಎಲೆ ನಡುವಿಗೆ
ಮೊಗ್ಗುಗಳು ಇಣುಕಿವೆ 
ಅರಳುವ ಸಂಭ್ರಮಕೆ
ಕದಪುಗಳಲಿದೆ ನಾಚಿಕೆ

ಆಕಾಶದ ನೀಲ ನೋಡಿ
ಸುಮಗಳು ಕೈ ಚಾಚಿರೆ
ಗಾಳಿ ತೂರೆ ನೆಲಸೋಕಿ
ಧರೆಗುಡಿಸಿವೆ ಸೀರೆ

ರಾಶಿ ರಾಶಿ ಅರುಣ ವರ್ಣ
ಬಿರಿದು ಪುಷ್ಪ ಕಾಶಿ
ತೆರೆದಂತಿದೆ ತನ್ನ ಕಣ್ಣ
ನಗುತಲಿದೆ ಪ್ರಕೃತಿ

ಮರಗಳೆಲ್ಲವು ಆಡುತ್ತಿವೆ
ಓಕುಳಿಯಲಿ ಹೋಳಿ
ಎರಚುತ್ತಲಿದೆ ಸುತ್ತಲಿಗೆ
ಕೆಂಪು ಪಕಳೆ ಧೂಳಿ

ಬದಲಾಗುವ ಸೃಷ್ಟಿಯಲ್ಲು 
ವಿಕಸನದ ಗುರಿ ಇರುವುದು
ಬಾಡಿ ಒಣಗು ಅರಿವಿನಲ್ಲು
ಹೂಗಳು ನಗೆ ತೊರೆಯದು!

ತಾಪದ ದಿನಗಳು

ನೀರ ನೀಡಿ

ಬರಲಿದೆ ಬೇಸಗೆ
ಅತಿ ಬೇಗೆಗೆ
ದಾಹ ದ್ವಿಗುಣಿಸಲಿದೆ
ಪಕ್ಷಿ ಸಂಕುಲಕೆ
ನೀರ ತುಂಬಿಸಿ ಬೋಗುಣಿಗಳಿಗೆ
ಇಡಲಾರಿರಾ ಮನೆಯ ತಾರಸಿಗೆ?

ನೀರಡಿಕೆ ನೀಗಿಸುವವರು

ಕೊಳ ಕೆರೆಗಳ ಬತ್ತಿಸಿ
ಕಟ್ಟಡಗಳನೇರಿಸಿ
ಒಳಗೆ ಒಲೆ ಉರಿಸಿ
ಏರಿ ತಾರಸಿ
ಹಕ್ಕಿಪಿಕ್ಕಿಗಳನೋಡಿಸಿ
ಸ್ವಚ್ಛವಾದೆವೆಂಬ ಹುಸಿ
ಯ ನಡುವೆ
ಸಣ್ಣ ಮಣ್ಣ ಪಾತ್ರೆಗಳಲ್ಲಿ
ದಾಹ ತೀರಲಿ
ಎಂದಿಟ್ಟ ಜಲದಲ್ಲಿ
ಕಾಣುವರು ನವ ಭಗೀರಥರು
ಹಾರುಹಕ್ಕಿಗೆ ಸಿಕ್ಕ
ಜೀವ ಹಕ್ಕು ಪುನಃಸ್ಥಾಪಕರು

ಕೋಗಿಲೆ

ಸಂಜಯನಿಗೆ ಈಗ ನಲವತ್ತು ವರ್ಷ. ತನ್ನ ಹತ್ತನೇ ವಯಸ್ಸಿನಲ್ಲಿ ಅವನು ಕೋಗಿಲೆ ಪಕ್ಷಿ ಹಾಡುತ್ತೆ ಅಂತ ಪಠ್ಯ ಪುಸ್ತಕದಲ್ಲಿ ಓದಿದ್ದ. ಅದು ಹೇಗೆ ಹಾಡುತ್ತೆ ಅಂತ ಅವನಿಗೆ ಕುತೂಹಲ. ಮನೆಯವರಿಗೆಲ್ಲ ಕೋಗಿಲೆಯನ್ನ ತೋರಿಸಿ. ಅದು ಹಾಡೋದನ್ನ ಕೇಳಬೇಕು ಅನ್ನುತ್ತಿದ್ದ.

ಒಂದು ದಿನ ಅಮ್ಮ, ʼಕುಹೂ ಕುಹೂʼ ಎಂದು ಕೋಗಿಲೆ ಕೂಗಿದ್ದನ್ನು ಕೇಳಿ, “ನೋಡು, ಅದೇ ಕೋಗಿಲೆ ಹಾಡು” ಅಂದಿದ್ದಳು. ಅವನಿಗೆ ನಿರಾಶೆಯಾಗಿತ್ತು. ಅವನಂದುಕೊಂಡಂತೆ ಅದು ಹಾಡೆನಿಸಲಿಲ್ಲ. ಹಕ್ಕಿಯ ಕೂಗೆನಿಸಿತ್ತು!‌ ಹಾಗೆ ಕೂಗುವುದನ್ನು ಅವನು ಬಹಳ ಸಲ ಮೊದಲೇ ಕೇಳಿದ್ದ.

ಈಗ ಸಂಜಯ ದೊಡ್ಡ ಹಾಡುಗಾರ. ಶಾಸ್ತ್ರೀಯ ಸಂಗೀತದಲ್ಲಿ ಒಳ್ಳೆಯ ಹೆಸರು ಮಾಡಿದವನು. ಅವನಿಗೀಗ ಒಂದೇ ಕೊರಗು. ಕೋಗಿಲೆಯ ಕಂಠ ತನಗಿನ್ನೂ ಒಲಿದಿಲ್ಲವಲ್ಲಾ ಎಂದು.

ಪೂಜೆಯೊಳಗೊಂದು ಧ್ಯಾನ

ಸೂರ್ಯ ಮುಖ ತೋರುವ ಮುನ್ನ
ತೋಟ ನುಗ್ಗಿ ಸೊಳ್ಳೆ ನುಸಿಗಳಿಗೆ
ಚಪ್ಪಾಳೆ ಇಕ್ಕುತ್ತಲೆ ಹೂ ಬಿಡಿಸಿ
ಎಳೆ ತುಳಸಿದಳಕ್ಕೆ
ಉಗುರ ತಾಗಿಸದೆ
ಚಿವುಟಿ ಬುಟ್ಟಿ ತುಂಬಿ
ಮನೆಯೊಳಗೆ ತಲೆ
ಹುಗಿಸುವಾಗ ಕಾಫಿ ಗಮ
ಜಳಕಕ್ಕೆ ಮುನ್ನ ಕುಡಿವ
ಕೆಫೀನಿಗಿನ್ನಾವುದು ಸಮ!

ರಾತ್ರಿ ಮೂಲೆ ಮೂಲೆಗಳಿಗೆ
ಹೊಡೆದ ʼಹಿಟ್‌ʼ ಫಲ
ಅಂಗಾತ ಬಿದ್ದ ಜಿರಲೆಗಳು
ಒಂದಷ್ಟು ಕೆಂಪು ಇರುವೆಗಳು
ಹಲ್ಲಿ ಬಿದ್ದಿರಬಹುದಾ? ಸೂಕ್ಷ್ಮಗಣ್ಣು
ಕಾಣಿಸದ ಕೋಟಿ ಸೂಕ್ಷ್ಮಾಣು
ಸದ್ಯಕ್ಕೆ ಸಮಯಕ್ಕೇ ಪೂಜೆ ಧ್ಯಾನ

ಪುಷ್ಪಾರ್ಚನೆಯಲ್ಲಿ
ಹುಳುವಿನಂಥದು
ಬೆರಳಲ್ಲಿ ಬುಳುಬುಳು!
ಒತ್ತಿದೆ; ಸತ್ತಿರಬಹುದು
ಕೈ ಮಾರ್ಜನ; ಶುದ್ಧಿ ಮತ್ತೆ
ಗಂಧ ತೀಡುವಾಗ ಧೂಪ ಹರಡುವಾಗ
ಎಣ್ಣೆ ನೆಂದ ಬತ್ತಿಯಿಂದ ಬೆಳಗುವಾಗ
ಅಂಗಾತದ ಜಿರಲೆಗಳು;
ಚಲಿಸುವ ಕಾಲುಗಳು
ನೆನಪಾಗಿ ಗಂಟೆ ಜಾಗಟೆ ಶಂಖ
ತಾರಕದ ಮಂತ್ರ ಸದ್ದಿಗೆ
ನಿಶ್ಚೇಷ್ಟವಾಗಬಹುದೆನ್ನುವ ಭರವಸೆ!

ದೇವರ ಮನೆಬಾಗಿಲ ಬುಡಕ್ಕೆ
ಗೆದ್ದಲು ಹತ್ತಿದಂತಿದೆ
ಇಲ್ಲದಿದ್ದರೆ ಈ ಹಸಿಮಣ್ಣು ಹೇಗೆ!?
ತೀರ್ಥ ತೆಗೆದುಕೊಂಡೆನೆ? ಮರೆತೆ
ಮತಿಗೆ ಬಂದದ್ದು ಆ ಕ್ಷಣಕ್ಕೆ
ʼಇವಕ್ಕೆ ಗತಿ ಕಾಣಿಸಬೇಕಿದೆ
ಹುತ್ತವೇ ತಲೆಯೆತ್ತೀತು ಬಿಟ್ಟರೆʼ

(Published in https://panjumagazine.com/?p=17901 )