ನವೆಂಬರದಾಚೆಗೂ

ಕನ್ನಡಮ್ಮನ ಸ್ಮರಣೆಗೆ

ಹೊತ್ತು ಗೊತ್ತುಂಟೆ?

ನಿರುತ ಮೊಳಗಲಿ

ಜಾಗೃತಿಯ ಗಂಟೆ

ನವೆಂಬರ್ ಮುಗಿದರೂ ಇರಲಿ

ನಮ್ಮ ಅಸ್ಮಿತೆ

ಮನ ಮನದೆ ಬೆಳಗಲಿ

ಸದಾ ಕನ್ನಡದ ಹಣತೆ

ಕನಕ ನಮನ

ತಿಮ್ಮಪ್ಪನಾಯಕ
ದಂಡನಾಯಕ ಪಟ್ಟ ವಿಮುಖ
ಅಧ್ಯಾತ್ಮ ಹುಟ್ಟ ಮೀಟಿ
ಆದೆ ದಾಸಪದ ರಚಕ
ಕಂಡೆ ಕಾವ್ಯದಲಿ ಸುಖ
ಸಸಮಾಜಕ್ಕೆ ಮಿಡಿದ
ಜನ ಹೃದಯ ಗೆಲಿದ
ಕನ್ನಡಲೋಕದ ಸಾರ್ಥಕ
ನಮನ ದಾಸಪಂಥ ಪಥಿಕ
ಕವಿ ದ್ರಷ್ಟಾರ ಕನಕ 

ಶಿಕ್ಷೆ

ಬರ್ತಾ ಇದಾರೆ ಹೆಡ್‌ ಮಿಸ್ಸು
ಕೇಳಿಸ್ತಾ ಇದೆ ಹೆಜ್ಜೆ ಸದ್ದು ‌
ಠಪ್‌ ಠಪ್‌ ಠಪ್‌ ಠಪ್‌

ಗಲಾಟೆ ಮಾಡ್ತಿದ್ದ ಮಕ್ಳೆಲ್ಲ
ಕೈಕಟ್ಟು ಬಾಯ್ಮುಚ್ಚು
ಗಪ್‌ ಚುಪ್ ಗಪ್‌ ಚುಪ್

ಮೂಗಿನ ತುದೀಲಿ ಕನ್ನಡಕ
ಕೈಲಿ ದೊಣ್ಣೆ ಅಬ್ಬಬ್ಬಾ!
ರಪ್‌ ರಪ್‌ ರಪ್‌ ರಪ್‌

ಕ್ಲಾಸಿನ ಒಳಗೆ ನುಗ್ಗಿಯೇ ಬಿಟ್ರು
ಮಕ್ಕಳಿಗಂದ್ರು ಜೋರು
ʼಗೆಟಪ್ ಗೆಟಪ್‌ ಗೆಟಪ್‌ʼ

ʼಸುಮ್ನೆ ಕೂತು, ಯಾಕೆ ಮಾತು?
ಫೀಲ್ಡಿಗ್ಹೋಗಿ ಆಟ ಆಡಿ ಸಾಕು !
ಪ್ಯಾಕಪ್‌ ಪ್ಯಾಕಪ್!!ʼ

ಪದ್ಮವಿಭೂಷಣ

ವಿಶೇಷದಲ್ಲಿ ವಿಶ್ವೇಶ ಪೇಜಾವರ ಪೀಠಾಧೀಶ
ಇದ್ದ ಗುರಿ ʼಗರಿಮೆ ಮುಟ್ಟಲೀ ನೆಲಶೇಷʼ

ದೇಹ ಕೃಶ, ವಾಮ ʼನʼ ಕಾರ, ಕೃಷಿ ವೈದಿಕ ವಿಚಾರ
ಉತ್ತು ಉಳಿಸಿದ ಉತ್ತುಂಗ, ವೈವಿಧ್ಯತೆಗತಿ ಸಹಮತ

ವೈಚಿತ್ರ್ಯಗಳ ಮನಗಳಿಗೂ ದನಿಯಾಗುವ ತವಕ
ಕುಹಕಕ್ಕೆ ನಗೆಯುತ್ತರ, ನಗೆಗೆ ನಲುಮೆ ಬಿತ್ತರ

ವಿಶ್ವಾಸ ಮುಗಿಲೆತ್ತರಕ್ಕೆ ಚಾಚಿ
ಎಲ್ಲರೊಟ್ಟಾಗಿಸಿ ʼಮುಡಿʼ ಕಟ್ಟಿದ ಹುಲ್ಲ ಹಗ್ಗ

ದೇಹತೊರೆದಾಚೆಗೂ ಗೋಚರ
ಪರಂಪರಾದೇಶ ಉಳಿಸುವ ಸಂಕಲ್ಪ

ಶ್ರೀ ವಿಶ್ವೇಶತೀರ್ಥರಿಗೆ ನಾಡ ನಮನ
ಇದು ಅರ್ಪಣ ‘ಪದ್ಮವಿಭೂಷಣ’ 

ಪದ್ಮಶ್ರೀ ಹಾಜಬ್ಬ


(ಮಕ್ಕಳ ಕವನ)

ಹರೆಕಳ ಒಂದು ಪುಟ್ಟ ಹಳ್ಳಿ
ಹಣ್ಣ ವ್ಯಾಪಾರಿ ಹಾಜಬ್ಬ ಅಲ್ಲಿ

ವಾಸಮಾಡೋದು ಪುಟ್ಟ ಮನೇಲಿ
ಕಿತ್ತಲೆ ಮಾರೋದು ರಸ್ತೇಲಿ

ಹರೆಕಳದಲ್ಲಿ ಶಾಲೆಯೇ ಇರದು
ಹಾಜಬ್ಬಗೆ ಓದು ಬರಹವು ಬರದು

ಹಳ್ಳಿಯ ಮಕ್ಕಳು ತನ್ನಂತೆ
ಆಗಬಾರದು ಅನ್ನುವ ಚಿಂತೆ

ಶಾಲೆಯೊಂದನು ಕಟ್ಟಲೆ ಬೇಕು
ಹಳ್ಳಿಯ ಮಕ್ಕಳು ಓದಲೆ ಬೇಕು

ಹಾಜಬ್ಬರವರು ತೊಟ್ಟರು ಪಣವ
ಹೆಚ್ಚು ದುಡಿದರು ಗಳಿಸಲು ಹಣವ

ಯಾರ ಕೃಪೆಗೂ ಅವರು ಕಾಯದೆ
ದುಡಿದರು ಕನಸಿನ ಸುಂದರ ಶಾಲೆಗೆ

ಕಿತ್ತಲೆ ಮಾರಲು ದಿನ ಹಗಲು
ಉಳಿತಾಯ ಕಂಡಿತು ಮೇಲು

ಹಣ್ಣು ಮಾರಿದ ಹಣವನ್ನೆಲ್ಲ
ಕಟ್ಟಡಕ್ಕೆಂದೇ ವ್ಯಯಿಸಿದರೆಲ್ಲ!

ಕಿರಿಯರು ಕಲಿಯೆ ಅಕ್ಷರ ಮಾಲೆ
ತೆರೆದೇಬಿಟ್ಟರು ಸುಂದರ ಶಾಲೆ!

ಹರೆಕಳ ಮಕ್ಕಳ ಹೆಜ್ಜೆಗಳು
ಹೊರಟವು ಶಾಲೆಗೆ ಓದು ಕಲಿಯಲು!

ಸ್ವಾರ್ಥ ಅರಿಯದ ಹಾಜಬ್ಬ
ಪದ್ಮಶ್ರೀ ಪಡೆದ ಸಾಧಕ!






(Pic:Google)

ಮತ್ತೆ ಬೆಳಗಲಿ

ಬಾಲ್ಯದಲ್ಲಿ ಹಚ್ಚಿಟ್ಟ

ಹಣತೆಗಳ ಹುಡುಕಿದೆ

ಕಾಣದ ಹಣತೆ – ಎಲ್ಲಿದೆ

ತೈಲ ಬತ್ತಿ-ತೆ !

ಕಟ್ಟಿದ್ದ ವಿಚಾರ ವಿಕರಾಳಗಳ

ಬಿಚ್ಚಿ ಹಾರಿಸಿ ಬಿಟ್ಟೆ

ಬೆಳಕು ಅದೋ ಅಲ್ಲೆ

ಅಂದಿನ ಹಾಗೇ

ಹಣತೆ ತೊರೆಯದೇ ಬೆಳಗಿದೆ!

ಅದೆ ದೀಪಾವಳಿ ಉಳಿದ ಬಾಳಿಗೆ

ರಾರಾಜಿಸು ಕನ್ನಡ

ಕನ್ನಡ ಭಾಷೆಯು ಸುಂದರ
ಕನ್ನಡ ನಾಡಿದು ಅಮರ
ಕನ್ನಡ ಜನತೆಗೆ
ಸನ್ನಡತೆಯ ಬಲವಿದೆ
ಮುನ್ನಡೆಯುವ ಛಲ ಅಪಾರ

ಕನ್ನಡ ನೆಲವಿದು ವಿಸ್ತಾರ
ಕನ್ನಡ ನದಿಗಳ ಧಾರಾ
ಕನ್ನಡ ನೀರಿಗೆ
ಅಮೃತದ ಸವಿಯಿದೆ
ಬೆಳೆಯುವುದೆಲ್ಲವು ಬಂಗಾರ

ಕನ್ನಡ ಗಿರಿವನ ಸಂಪದ
ಕಡಲ ತೀರ ವಿಶಾಲ
ಪರಿಮಳ ಬೀರುವ
ಸಿರಿಗಂಧದ ತವರಿದು
ರಾರಾಜಿಸಿ ಮೆರೆದಿವೆ ಕಲ್ಪತರು

ಕನ್ನಡ ಭಾಷೆಯ ಹಿರಿಮೆಗೆ
ಕನ್ನಡ ಜನರ ಬಲುಮೆಗೆ
ಕನ್ನಡ ಮೆರೆಯಲಿ
ಕಂಚಿನ ಕೊರಳಲಿ
ಮೊಳಗಲಿ ಏಕತೆ ಜಯಗೀತೆ