ಮಳೆ ಹಾಯ್ಕು

ಮಳೆ

ಆರಂಬ ವೇಳೆ

ಏಕಿಂಥ ರಂಪ ಮಳೆ!

ಕನಸೇ ಬೆಳೆ?

ರಟ್ಟೆಗೆ ಬಲ

ಕೂಡೆ ಉಳುವೆ ನೆಲ

ಮಳೆ ದೈವೇಚ್ಛೆ

ರಾಗಿ ಬೆಳೆಗೆ

ಹದ ಮಳೆಯ ಆಸೆ

ಭವಿಷ್ಯ ಬೇರೆ

ಬೀಜ ಬಿತ್ತಾಯ್ತು

ಪ್ರವಾಹಮುಖೀ ಮಳೆ

ಆಸೆ ಬತ್ತಾಯ್ತು

ಇತ್ತ ರಾಗಿಗೂ

ಅತ್ತ ಭತ್ತಕೂ ಇಲ್ಲ

ಚಾಲಾಕಿ ಮಳೆ!

ಆದ ವಿರಾಗಿ

ನಮ್ಮ ನೇಗಿಲ ಯೋಗಿ

ನಿಂತೀತೆ ಧಾರೆ?

{Pic:Google}

ಪೇಪರೋದು

ನಲ್ವತ್ತರಲ್ಲಿ ಬಂದ ಚಾಳೀಸು
ಅರವತ್ತು ಮುಗಿದರೂ ತೊರೆಯದು
ಮುವ್ವತ್ತರಲ್ಲಿ ಬಂದ ಮಡದಿ
ಮುಖ ಮುರಿದು ಕಾಲವಾಯಿತು!

ಹೊಸದರಲ್ಲಿ ದಿನಕ್ಕೆ ಹತ್ತು
ಬಾರಿ ನವಿರು ಬಟ್ಟೆ ಹಿಡಿದು
ಕನ್ನಡಕದ ಗಾಜು ಒರೆಸಿ
ಓರೆ ಹಿಡಿದು; ಜಿಡ್ಡು ಅಳಿಸಿ
ಫಳಫಳ ಹೊಳೆಸಿ
ಎರಡೂ ಕಿವಿಗಂಟಿಸಿ
ಬೆಳಗಿನೋದಿಗೆ ಪತ್ರಿಕೆಯರಳಿಸಿ
ಕಣ್ಣು ಕಿರಿದಾಗಿ; ದೃಷ್ಟಿ ಮಂಜಾಗಿ;
ಪಕ್ಕದಲ್ಲವಳು ತಂದಿಟ್ಟ ಬಿಸಿ
ಕಾಫಿ ತಣ್ಣಗಾಗುವುದು

ಬರ
ಬರುತ್ತಾ ಪೇಪರಿಂದ ಅಕ್ಷ
ರಗಳೇ ಮಾಯ!
ಭಯ; ಕಾಣುತ್ತಿಲ್ಲ ಮತ್ತೆ
ಒರೆಸೊರೆಸಿ ಕನ್ನಡಕ
ದ ತುಂಬಾ ಗಾಯ ಸಣ್ಣಗೆ
ಚೀರಿದೆ ʼಏನೂ ಕಾಣದೆ!?ʼ

ಕಿವಿ ಚುರುಕು
ಮಡದಿ ಗೊಣಗಿದ್ದು ಕೇಳಿಸಿತು
ʼಪವರ್ ಬದಲಾಗಿದೆ
ಬದಲಾಯಿಸಬೇಕಿದೆ!ʼ

ಕನ್ನಡಕವೋ, ನಾನೋ!?
ʼಕಾಫಿಗಿಷ್ಟು ಬಿಸಿ ಬೇಕಾಗಿದೆʼ
ಕೇಳದಂತೆ ಗುಡುಗಿದೆ!

ಪಾರಿಜಾತ

ಪಾರಿಜಾತ

ಶಿಲೆ ದೇವರ
ತಲೆಯ ಮೇಲೆ
ಪುಟ್ಟ ಪಾರಿಜಾತ
ಮಾಡುತ್ತಿದೆ ತಪ!

ಅಭಿಷೇಕಗೊಂಡ
ವಿಗ್ರಹ ತಂಪಾಗಿದೆ
ಶಿರವೇರಿದ ಪಾರಿಜಾತ
ಬಾಡದು ಬೇಗದೆ

ವಿಗ್ರಹ ಕಲ್ಲಿನದು
ಎಂದು ಹೇಳುವಾಗ ಅರ್ಚಕ,
ತನ್ನ ಎಸಳ ಮೃದುವಿಗೆ
ಬೇಸರಿಸಿತಾ ಪಾರಿಜಾತ!

ಭಕ್ತನುಡಿದ
“ಸಾವಿರ ವರ್ಷದ ವಿಗ್ರಹ
ಇಂದಿಗೂ ಹೊಳೆಯುತ್ತಿದೆ, ಆಹಾ!”
ಪಾರಿಜಾತ ನಿರ್ಮಾಲ್ಯವಾಗುವ
ಸಮಯವಾಗಿತ್ತು ಆಗ

ಭಕ್ತನ ಕೈಗೆ
ಜಾರುವಾಗ ಪಾರಿಜಾತ
ನೆಲದ ಮೇಲೆ
ಒಣಗುವ ಸುಖಕ್ಕೇ ಆಸೆಪಟ್ಟಿತ!?

ಹಕ್ಕಿ ಕೊರಳು
ಪಾರಿಜಾತದ ಅರಳು
ಸುಸ್ವರಕ್ಕೆ ಪರಿಮಳ
ದ ಮೆರುಗು
ಶುಭ್ರ ಬೆಳಗು

ಮುಂಜಾನೆ ಫಳಫಳಿಸಿದ
ಮಂಜು ಹನಿಗೆ ಅವಸರ,
ಪಾರಿಜಾತಕ್ಕೆ
ನಶ್ವರದ ಪಾಠ
ಹೇಳುವ ತವಕ

ತೂಗು ಮನೆ

ಶಾಲೆ ಮೆಟ್ಟಿಲು ಹತ್ತದೆ
ಟೀಚರ್‌ ಪಾಠ ಕೇಳದೆ
ಇಂಜಿನೀರಿಂಗ್ ಕಲಿಯದೆ
ಪುಟ್ಟ ಹಕ್ಕಿ ಕಟ್ಟಿತಲ್ಲ
ಅಡಿಪಾಯದ ಗೊಡವೆ ತೊರೆದು
ಮರಗಳ ಕೊಂಬೆಯ ಹಿಡಿದು
ಅಪೂರ್ವ ವಿನ್ಯಾಸ ಹೆಣೆದು
ಬೆಚ್ಚನೆ ಬೆರಗಿನ ಮನೆ!
ಖರ್ಚೇ ಇಲ್ಲದ ನೆಲೆ
ಮರಿಗಳು ನಿದ್ರಿಸಿ ಹಾಯೆನೆ
ತೂಗಿತು ತೊಟ್ಟಿಲ ಬಾನಲೆ!

(Pic courtesy:Google)

ಕಷ್ಟ ನಾಮರು

ನಮ್ಮ ರಾಜ್ಯಪಾಲ ವಾಲಾ

ಅವಧಿ ಮುಗಿಸಿಯೂ ಇದ್ದರು ಬಹಳ ಕಾಲ

ಮುಂದೆ ಗೆಹ್ಲೋಟ್ ಅಂತೆ ಹೊಸ ರಾಜ್ಯಪಾಲ

ವಾಲಾರ ಪೂರ್ಣ ಹೆಸರು ಬಾಯಿಗೆ ಬರದು

ಗೆಹ್ಲೋಟ್ ನುಡಿಯಲು ನಾಲಿಗೆ ಹೊರಳದು

ರಾಜ್ಯಪಾಲರೇಕೋ ಅಲ್ಲ ಸರಳ!

ಮತ್ತೆ ಶಾಲೆಗೆ?ಶಾಲೆ ನಮಗೆ ಬೇಕಮ್ಮ? ಶಾಲೆ ಮುಚ್ಚಿದ್ದೇಕೆ?
ಆಟ ಪಾಠ ಬೇಕಮ್ಮ, ಸೂರ್ಯನ ಬೆಳಕಿನ ಜೊತೆಗೆ


ದೊಡ್ಡ ಕಟ್ಟಡವಂತೆ, ಅಲ್ಲಿ ಸಣ್ಣ ತರಗತಿಯಂತೆ
ಗೆಳೆಯ ಗೆಳತಿಯರೆಲ್ಲ ಸೇರಿ ಒಟ್ಟಿಗೆ ಕೂಡುವುದಂತೆ


ಶಾಲೆ ನಮಗೆ ಬೇಕಮ್ಮ…


ಯೂನಿಫಾರಂ ಜೊತೆಗೆ ಬೆನ್ನಿಗೆ ಬ್ಯಾಗು ಜೀಕಿ
ಹೊಳೆಯೊ ಶೂ ಹಾಕಿ,ಟಪ್ಟಪ್ ನಡೆಯೋಶೋಕಿ


ಶಾಲೆ ನಮಗೆ ಬೇಕಮ್ಮ…


ಕಪ್ಪು ಬೋರ್ಡಿನ ಮುಂದೆ ,ಪಾಠ ಮಾಡ್ತಾರಂತೆ
ತಪ್ಪು ಮಾಡೊ ಮಕ್ಕಳ ತಿದ್ದಿ ಬುದ್ಧಿ ಹೇಳ್ತಾರಂತೆ


ಶಾಲೆ ನಮಗೆ ಬೇಕಮ್ಮ…


ಶಾಲೆಯ ಎದುರಿನಲ್ಲಿ, ದೊಡ್ಡ ಆಟದ ಬಯಲು
ಪ್ರಾರ್ಥನೆ ಮಾಡು ಮೊದಲು, ಸಂಜೆ
ಆಟ ಆಡು

ಶಾಲೆ ನಮಗೆ ಬೇಕಮ್ಮ…


ಹೆಡ್ ಮಿಸ್ಸು ಜೊತೆಗೆ, ಟೀಚರು ಬೇಕು ನಮಗೆ
ಆಟ ಪಾಠ ಸ್ನೇಹದಲ್ಲಿ ಸ್ವರ್ಗ ಸಿಕ್ಕ ಹಾಗೆ


ಶಾಲೆ ನಮಗೆ ಬೇಕಮ್ಮ…


ಈಗಿನ ಆನ್ಲೈನ್ ಕ್ಲಾಸು, ಬೇಗ ಮುಗಿಯಲ್ವೇನು?
ಲ್ಯಾಪ್ ಟಾಪ್ ಪಾಠ ಸಾಕು, ಪುಸ್ತಕ ಬ್ಯಾಗು ಬೇಕು


ಶಾಲೆ ನಮಗೆ ಬೇಕಮ್ಮ…

ವೈದ್ಯರ ದಿನ – ಜನ ನಮನ

ಜೀವ ಕುಲಕ್ಕೆ ವರವಾಗಿ
ಆರೋಗ್ಯ ಸೂತ್ರದ ಸಾರಥಿಯಾಗಿ
ಮಗುವಿನಿಂದ ಹಿರಿಯರವರೆಗೂ
ಭರವಸೆ ತುಂಬುವ ಬಂಧುವಾಗಿ
ವೈದ್ಯರು ನಿಂತರು ರಕ್ಷಕರಾಗಿ
ವೈದ್ಯರಿಗಿದೋ ನಮಸ್ಕಾರ
ಮರೆಯಲಾರೆವು ಮಹದುಪಕಾರ

ವಿಶ್ವವೆ ಕೋವಿಡ್‌ ಮಯವಾಗಿ
ವೈರಾಣು ಹೊಡೆತಕೆ ಜನ ನಡುಗಿ
ಎಲ್ಲ ವಿಶ್ವಾಸವು ಕೊನೆಯಾಗಿ
ಬದುಕೇ ಮುಗಿಯಿತು ಎನುವಾಗ
ವೈದ್ಯರು ಬಂದರು ಯೋಧರಾಗಿ
ವೈದ್ಯರಿಗಿದೋ ನಮಸ್ಕಾರ
ಮರೆಯಲಾರೆವು ಮಹದುಪಕಾರ

ತ್ಯಾಗವೆನ್ನುವುದು ಉಸಿರಾಗಿ
ಆದರ್ಶ ಕಾಯಕ ನಿಮದಾಗಿ
ತಾಳ್ಮೆ ಸಹನೆ ಸಾಕಾರವಾಗಿ
ಎಲ್ಲ ರೋಗಗಳ ನಿವಾರಣೆಗಾಗಿ
ವೈದ್ಯರೆ ನಿಂತಿರಿ ಬೆಳಕಾಗಿ
ಡಾಕ್ಟರೆ ನಿಮಗಿದೋ ನಮಸ್ಕಾರ
ಮರೆಯಲಾರೆವು ಮಹದುಪಕಾರ