ಮತ ಮತ್ತೊಂದು

edit

ಹಣಾಹಣಿಗೆ ಬಂತು ಚುನಾವಣೆ ತರತರದ ಚಿತಾವಣೆ
ಬಟ್ಟೆ ಕಟ್ಟಿ ಕಣ್ಣಿಗೆ ಚಿಟ್ಟೆ ತುಂಬಿ ತಲೆಯ ಒಳಗೆ
ಶಬ್ದಗಳ ಜಾದೂ ತೋರಿ ವಾಕ್ಯ ವಾಕ್ಯ ತರ್ಕಮಾಡಿ
ಮಸೆಯುತ್ತಾರೆ ಮೀಸೆ ಹೊಸೆಯುತ್ತಾರೆ ಆಸೆ

ಕೆಣಕು ಕುಟುಕು ಕೆಸರನೆರಚು ಅಣುಕು ಮಾಡಿ ಅಪಹಾಸ್ಯ ಮಾಡು
ಗುಂಪು ಕೂಡಿ ಸಂಪು ಮಾಡಿ ಹೊಡಿ ಬಡಿ ಶಾಂತಿ ಕದಡಿ
ಭರವಸೆಗಳ ಮೊಳಕೆ ಮಾಡಿ ಬೆನ್ನಿನಲ್ಲೇ ಅದರ ಹತ್ಯೆ ಮಾಡಿ
ಹಸಿ ಹಸಿ ಹಸಿವಿಗೆ ಹಾಸ್ಯ ಮಾಡಿ ಮೈಕಿಗೆ ಮುಖವಿಕ್ಕಿ
ತೆರೆದರು ಬಾಯ ಭೈರಿಗೆ ! ಬಂದರೆಲ್ಲ ಸವಾರಿಗೆ:

” ಕೂರಿ ನೀವು ಸುಮ್ಮನೆ, ಅರಮನೆಯಾಯ್ತು ನಿಮ್ಮನೆ
ನದಿಗಳೆಲ್ಲ ಸೇರಿಸಿ ಮನೆಬಾಗಿಲಲ್ಲೆ ತೋರಿಸಿ
ತೋಟ ಗದ್ದೆ ಹೊಲಗಳಲ್ಲಿ ಗಂಗೆತುಂಗೆ ಹರಿಯಿಸಿ
ಅಕ್ಕಿ ಗೋಧಿ ಬೇಳೆಕಾಳು ಬಿಟ್ಟಿಯಲ್ಲಿ ಹಂಚಿಸಿ
ಸಂಬಳ ಕುಳಿತೇ ತಿನ್ನಿರಿ ಉದ್ಯೋಗ ಖಾತ್ರಿ ತಿಳಿಯಿರಿ
ಎಲ್ಲರನ್ನೂ ಸೇರಿಸಿ ಹಿಂದುಳಿದ ಪಟ್ಟಿಗೆ ತೂರಿಸಿ
ಮೊದಲು ಮಣ್ಣ ಮಗನಿಗೆ ; ಅಗ್ರ ಪಟ್ಟ ಹೆಣ್ಣಿಗೆ
ಜಾತಿ ಅತೀತ ನಾವು; ಉಳಿದಪಕ್ಷ ಕೊಡಲಿಕಾವು
ಸಾಮಾನ್ಯರೆಲ್ಲ ಟೊಪ್ಪಿಗರು ಉಳಿದೆಲ್ಲರು ಭ್ರಷ್ಟರು ’’

“ಮತ್ತು ಇದೋ ಕಿವಿಕೊಟ್ಟು ಪಿಸು ಮಾತು ಕೇಳಿ
ನಮ್ಮ ನಿಮ್ಮೊಳಗಿನ ಬುದ್ಧಿಯೊಳಗಿನ ಚಾಳಿ
ಒಗೆಯಿರಿ ಅನುಮಾನ ನಾ ನಿಮ್ಮದೇ ಜಾತಿ
ತಲೆಲೆಕ್ಕ ಹೇಳಿದರೆ ತೀರಿಸುವೆ ಹಣದ ಋಣ
ಸಣ್ಣ ಒಡವೆ ಜೊತೆಗೆ ಒಗೆವೆ ಬಳೆ ಸೀರೆ ರವಿಕೆ ಕಣ
ಬಿಟ್ಟು ಬಿಡಿ ಟೀವಿ ಐಲು ತೆಗೆಯಿರಲ್ಲ ಸಣ್ಣ ಮೊಬೈಲು
ಒಳಗಿಟ್ಟುಕೊಳ್ಳಿ ಕಷ್ಟ ಕಳೆವ ಬಾಟ್ಳಿ ಕಳ್ಳು
ಮಾಡಿಸಲೆ ಬೇಕು ನಿಮಗೆ ಬಾಡೂಟ ಮ್ರುಷ್ಟಾನ್ನ
ಕುರಿ ಕೋಳಿ ಹಂದಿ ಮತ್ತೆ ಗುಟ್ಟಿನಲ್ಲಿ ಕಡಿಸಿ ದನ
ಎಸೆದೇವು ನೋಟು ಬೆಸೆದೇವು ನಂಟು
ನಿಂತುಬಿಡಿ ತೋರುತ್ತ ತೋರುಬೆರಳ ಗಂಟು
ಒತ್ತಿಬಿಡಿ ಒಂದೇ ದಿನ ನಮ್ಮ ಚಿನ್ಹೆಗೆ ನಿಮ್ಮ ಬಣ್ಣ”

ಚುನಾವಣೆ ಬಂತು ಹಣಾಹಣಿಗೆ ಮತ್ತೆ ಚಿತಾವಣೆಗೆ
ಒಂದು ದಿನಕ್ಕೆ ಮತ ಚಲಾವಣೆಗೆ

ಅರಳುವಂತವರು

jas4

ಅರಳಿ ತೇಲಿಸುವ ಸುಗಂಧಿಗಳೆ
ಸೌಮ್ಯ ರಾಜ್ಯ ಸಾಮ್ರಾಜ್ಞಿಗಳೆ
ಎಳೆಎಳೆಯ ದಳ ದಳದ
ನವಿರು ಬಂಣದ ಕಂಣುಗಳೆ
ಹಸಿರ ಬೆನ್ನೇರಿ ಹೊಳೆಯುವ ಮಣಿಗಳೆ
ಮಧುರ ಪದ ದಳವರಳಿಸೆ ಬನ್ನಿರೇ ಬನ್ನಿ

ಮುಗುಳಲ್ಲಿ ಹಿಡಿತುಂಬಿದ ಹಿಗ್ಗುಗಳೆ
ಹೆಣೆಹೆಣೆದು ಕೈ ಸೋಲದ
ಸರಳ ಬೆರಳುಗಳೊಡತಿಯರ
ಚಂದಮನ ಚುಂಬಕಿಯರೆ
ಮುದ್ದುಗಳ ತಲೆತುಂಬ ಕವನಗಳಾಗುವ ಸುಮಗಳೆ
ನಮ್ಮೊಳಗೆ ಹೊಡೆ ಒಡೆದಾವೆ ಹೇಳಿರೇ ಹೇಳಿ

ಪ್ರೇಮಗಾನದ ಮೇರು;
ಭಕ್ತಿ ವೈಭವದ ಸುಪ್ತಗಳೆ
ಮನ ಮನದ ಒಳಗೊಳಗೆ
ಶುಚಿ ಸಿಂಚನ ಬಿಂದುಗಳೆ
ಧಗೆಯ ಕಪ್ಪು ಹೊಯಿಗೆಗಳಲ್ಲಿ
ಇಂಪುರಾಗದ ಬೆಳಕ ಹಾಡಿರೇ ಹಾಡಿ

ಅಳುವ ನಿಷೆ ಇಳಿವಲ್ಲಿ
ನಕ್ಷತ್ರಗಳ ತಂಗಿಯರೆ
ಚಂದ್ರಮನ ಬಿಳಿನಗೆಗೆ
ಕಂಪು ಹಚ್ಚುವ ಕನಸುಗಳೆ
ಕಾಮನಬಿಲ್ಲ ಸಂಮೋಹಿಗಳೆ
ನನಸುಗಳ ಕೊಂಬೆಗಳಲ್ಲಿ ಬಾಡದಿರೇ ಬಾಡದಿರಿ

                                                                                       (ತುಷಾರ, ಮೇ ೧೯೮೫ ಸಂಚಿಕೆ)

ಬ್ಲಾಗ್ ಬಗೆಗೆ…

Anantharamesh

ಈ ಸೃಷ್ಟಿ ವಿಸ್ಮಯಗಳ ಸಂತೆ. ಯಾವುದಕ್ಕೆ ಅಚ್ಚರಿ ಪಡಬೇಕೆನ್ನುವುದು ಅವರವರ ಬುದ್ಧಿಮಟ್ಟಕ್ಕೆ ಬಿಟ್ಟದ್ದು.

ಒಬ್ಬನಿಗೆ ಹಾರುವ ವಿಮಾನ ವಿಸ್ಮಯತೆಯಾದರೆ, ಮತ್ತೊಬ್ಬನಿಗೆ ನೀರಿನಲ್ಲಿ ಈಜುವ ಮೀನು.
ನಕ್ಷತ್ರಗಳ ಪುಂಜಕ್ಕೆ ಗೋಣು ಮೇಲೆತ್ತಿದರೆ, ಇನ್ನೊಬ್ಬ ಮಿಣುಕು ಹುಳುಗಳ ಕುತೂಹಲಿ,
ಈ ಎಲ್ಲ ಅಚ್ಚರಿಗಳ ಗೋಪುರದ ಮೇಲೆ ಮನುಷ್ಯ ತನಗೆ ತಾನೇ ಅಚ್ಚರಿಯ ಒಂದು ಮಾಂಸ ದೇಹದೊಂದಿಗೆ ನಿಂತಿದ್ದಾನೆ.

ಅವನು ತನ್ನ ವಿಕಾಸ ವಾದವನ್ನು ತಾನೇ ಮಂಡಿಸಿಕೊಂಡಿದ್ದಾನೆ.
ಕಳೆದುಹೋದ ರಸ್ತೆಯಲ್ಲಿ ತಾನೆಷ್ಟು ಉಪಕ್ರಮಿಸಿದ್ದೇನೆ ಮತ್ತು ಉಳಿದ ದಾರಿ ಎಷ್ಟು ಇರಬಹುದೆನ್ನುವ ಲೆಕ್ಕವಿಟ್ಟಿದ್ದಾನೆ. ಅವಕ್ಕೆ ಪುರಾವೆಗಳನ್ನೂ ಕೊಡುತ್ತಾನೆ.

ಗೊಂದಲಿಗರಿಗೆ ಆಧ್ಯಾತ್ಮದ ಆವಿಷ್ಕಾರವನ್ನೂ ಮಾಡಿದ್ದಾನೆ.

ತನ್ನದೇ ಸೃಷ್ಟಿಯ ಭಾಷೆ, ಲಿಪಿಗಳನ್ನು ಬಳಸುತ್ತಾನೆ. ಶ್ರವಣದಿಂದ ಉಳಿಸಿಕೊಳ್ಳುವ ಸಾಹಸದಿಂದ. ಹೊರಬಂದು ಮುದ್ರಣದ ಮೊರೆಹೊಕ್ಕಿದ್ದಾನೆ. ಈಗ, ಅದರಾಚೆಗೂ ಬಂದು ಅಂತರ್ಜಾಲ ಜಾಲದಲ್ಲಿ ಈಜುತ್ತಾ ಬಲೆ ಹೆಣೆದು; ಬೆರಳುಗಳಲ್ಲಿ ಬುದ್ಧಿ ಕೀಲಿಸಿ ವಿಸ್ಮಯಗಳನ್ನು ಹೊರತೆಗೆಯುತ್ತಿದ್ದಾನೆ.

ಈ ಬ್ಲಾಗ್ ಕೂಡ ಅದರದ್ದೊಂದು ಅತಿ ಸಣ್ಣ ಅಂಗ. ಸಂವಹನಕ್ಕೆ ಮತ್ತೊಂದು ರಂಗ

ಮುಟ್ಟುವ ಹವಣಿಕೆ

Image

ಉದ್ದುದ್ದ ಕಾಲುಗಳು
ಹೂತುಹೋಗುವ ಮೊದಲೆ
ಪುಟಿಸಿ ನಡೆಯುತ್ತಾನೆ
ದ್ರವ ಆರಿದ ಗಂಟಲಲ್ಲಿ
ಬೆವರಿಲ್ಲದ ಬಿಸಿಯಲ್ಲಿ
ತಣಿಸಿ ನಡೆಯುತ್ತಾನೆ
ಕುಳಿತವರ ಮಂ(ಕುಂ)ಡೆ

ಅಯ್ಯೋ ನೋಡಲ್ಲಿ ಚೆಂಡು
ಕೊಂದೀತು ಬೆಂಕಿ
ಕಣ ಕಣದ ಒಳಗೆಲ್ಲ
ಕುಣಿಯುತ್ತಿವೆ ಕೆಂಡ
ಅಟ್ಟಹಾಸಕ್ಕಿಲ್ಲ ಇನಿತುಸಿರು
ಅರಿಯದೀ ಬಯಲು  ನಿಜದ ಹಸಿರು

ಹುಟ್ಟಿನ ಬಲೆಯ ಬಯಲಲ್ಲಿ
ಅನಂತ ಸ್ವಾರ್ಥದ ಅಡಿಯ
ನಾವೆ ಆಗಿದ್ದಾನೆ
ಬಾಗಿದ್ದಾನೆ ಮಾಗಿದ್ದಾನೆ
ಇವನಿಗೆಲ್ಲಿ ಮೇವು
ಆಯಾಸಕ್ಕಾಸರೆಯ ಓಯಸಿಸ್ಸಿನ ನೀರು
ಕಂಠ ಚೀಲಕ್ಕೆ ಭರ್ತಿ ಕಾಳು
ಮುಟ್ಟಲಿರುವನು ಏನು ಆ ದೂರ
ದಾಟಲಿದ್ದಾನೆಯೆ ಇಲ್ಲದುದರ ದ್ವಾರ !

ಝಳ ಮುಳುಗುವಾಗ
ಮರಳುವ ಮರುಳು ತಂಪು
ಛಳಿ ಧಾರೆಯದೇ ಘೋರ ನೆನಪು
ಬದಲಾಗದಿಲ್ಲಿ ಮರೆವಿನಾಸರೆಯುಂಟು
ಕಸುವು ಕಳೆಯದೆ ನಡೆಯೊಂಟೆ
ಹೂತು ಹೋಗುವ ಮೊದಲೆ
ಪುಟಿಸಿ ಹೆಜ್ಜೆ

ಯಾವುದೀ ಕರಾರು

ImageImage

ಬಿಸಿಲ ಬಾಯಿಗೆ ಮೈಯೊಡ್ಡಿ
ಮಲಗಿದ ಮೊಸಳೆ
ಕಣ್ಣು ಕಿರಿದು ಮಾಡಿ
ಬಾಯಾಕಾಶ ಮಾಡಿ
ಆಕಳಿಸುತ್ತಿದೆ
ಬಿಟ್ಟ ಬಾಯಿ ಬಿಟ್ಟಂತೆ
ಜಗತ್ತೇ ನಿಶ್ಚಲವಾದಂತೆ
ಪ್ರಕೃತಿ ಕೆತ್ತಿದ ವಿಗ್ರಹದಂತೆ !
ಯೋಗ ನಿದ್ರೆ
ಆನಂದ ಸ್ಥಿತಪ್ರಜ್ನತೆ
ಗಳೆಲ್ಲವೂ ಮೊಸಳೆಯಲ್ಲೆ
ಪ್ರತಿಮೆಯಾದಂತೆ!

ಪ್ರತಿಮಾ ಭಂಗಿಗೆ
ಭಂಗ ತರದೆಲೆ ಕುಪ್ಪಳಿಸಿ
ಹಕ್ಕಿ ಹೊಕ್ಕಿತು ಮೊಸಳೆ ಬಾಯಿ
ಕುಕ್ಕೆ ಕುಕ್ಕಿತು
ಹೆಕ್ಕಿ ತೆಗೆಯಿತು
ಹಳೆಯ ಬೇಟೆಯ ತುಣುಕು
ಕೊಳೆವ ಮುನ್ನವೇ ತಿಂದರೆ
ಜೀವ ಆಪ್ಯಾಯತೆ
ಜಗದಗಲ ಭಯದಲ್ಲಿ
ಅನಾವರಣವಾಗಿದೆ ವಿಸ್ಮಯತೆ!

ಗರಗಸಗಳ ಸ್ವಚ್ಚತೆ
ದವಡೆಗಳ ದೃಢತೆಗೆ
ಹಕ್ಕಿ ಅಣಿಗೊಳಿಸುತ್ತಿರುವಂತೆ
ಮತ್ತೊಂದು ಬೇಟೆಗೆ !?

ಯಾವ ಶೃಂಗ ಸಭೆಯಲ್ಲಾಯಿತೀ
ಮಾತುಕತೆ ಎಂದಿನಿಂದ
ಈ ಕರಾರು?
ಒಕ್ಕಣೆ ಏನು ?
ರುಜು ಮಾಡಿದವರು
ಮತ್ತು ಸಾಕ್ಷಿಗಳು ಯಾರು ?

ವರ್ಷಗಳಿಂದ ಮುರಿಯದ ಕರಾರಿಗೆ
ಉಳಿದುಕೊಂಡ ನಂಬಿಕೆಗೆ
ಮೊಸಳೆ ಬಾಯಿಯೆ ತಪಸೀಲು
ಮತ್ತು ಹಕ್ಕಿ ಕುಕ್ಕುತ್ತಿರುವುದೆ ಠಸ್ಸೆ !

ಮಂಡಗದ್ದೆಬದಿಯ ನೋಟ

Image

ಬಿದಿರು ಸಾವಿನ ಸಾಲುಸಾಲಿಗೆ
ಮುಳುಗಡೆಯ ಹಿನ್ನೀರ ತರ್ಪಣ
ದೀರ್ಘಬಾಳಿದ ಹಸಿರು ಹರಡಿದ
ನಿಮ್ಮ ನೆನಪಿಗೆ
ಬೇರು ಬತ್ತಿದ ಕಪ್ಪು ಕಾಂಡದ ನಮನ
ಇದೆ ಇಗೋ ಇಲ್ಲಿ ಚೈತನ್ಯ ಗಾಳಿ
ಕಮಲ ಬಂದಿವೆ ದಳಗಳೊಂದಿಗೆ ತೇಲಿ
ಕಳೆದು ಉಳಿಯುವ ಉಸಿರಿಗೆ
ಹೊಸಹಸಿರು ಒಡೆಯುವ ಆಸೆಗೆ ನಿಮಗಿದು ಅರ್ಪಣ

ತೆರೆ ಬಾಗಿಲ

Image

ಅಂಬೆಗಾಲ ಪೋರ
ಬೆಳಕಿನ ಚೋರ
ತರುತಿದ್ದಾನೆ ಮನೆಯೊಳಗೆ
ಹಿಡಿತುಂಬಾ ಪುಳಕ

ತೆರೆದಿಟ್ಟ ಬಾಗಿಲಿಂದ ಬರುತ್ತಾ
ಆವರಿಸುತ್ತಾನೆ ಒಳಗ
ಒಪ್ಪಿಸುತ್ತಾ ಸಣ್ಣ ಪದಗಳ
ಚಪ್ಪರಿಸುತ್ತಾ ಅಕ್ಷರಗಳ
ಮೂಡಿಸುತ್ತಾನೆ ಚಿತ್ತದಲ್ಲಿ ಚಿತ್ರಗಳ
ಮಾಡಿಸುತ್ತಾನೆ ಬೆಳಕ ಜಳಕ