ದೇದೀಪ್ಯ

photo-1438763470126-9839d421ad68

ಹಬ್ಬ ಸಬೂಬಿಗೆ
ಏಳಬೇಕಿದೆ ನಿದ್ರೆಗೋರಿ
ಇಳಿಯಬಲ್ಲೆನೆ ಮೃಗಸವಾರಿ?

ಆಲಸ್ಯ ಮೈಮುರಿಯೆ ಅದುಮಿ
ಅಸಹನೆ ಬಾಯ್ಬಿಡೆ ಮುಚ್ಚಿ
ಕ್ರೋಧ ಕಾಲುಝಾಡಿಸೆ ಒತ್ತಿ
ಈರ್ಷೆ ಎಚ್ಚರಗೊಳ್ಳೆ ಮೆಟ್ಟಿ
ಆಸೆ ಕೊರಳಿಗೆ ಹಗ್ಗಕಟ್ಟಿ
ಅಹಮಿನ ಕೋಡ ಕತ್ತರಿಸಿ
ದ್ವೇಷ ದಳ್ಳುರಿ ದೂರಿಸಿ
ಇಟ್ಟು ವಿ಼ಷಯಕ್ಕಡಕತ್ತರಿ
ಎದ್ದೆನೇನು? ಒಳಸುದ್ದಿಯೇನು!

ಎಲ್ಲ ಸುಟ್ಟು
ಕಣ್ಣ ಬಿಟ್ಟರೆ
ವಿನಯ ಹಸುಳೆ
ಮೆಲ್ಲ ನುಸುಳಿ ಹೆಗಲೇರಿದೆ
ಸೊಗದ ನಗೆಯಾಡಿದೆ
ಹಗಲು ದಿನಕರ ರಾತ್ರಿ ಚಂದಿರ
ತಮಕೆ ದೀಪ ಸಾಮೀಪ್ಯ
ಎಲ್ಲ ದೇದೀಪ್ಯ
ಹಸುಳೆ ಬೆಳೆಯಿತಬ್ಬಾ!
ಇದೇ ಹಬ್ಬ

 

(ಚಿತ್ರ:ಪಿಕ್ಸಾಬೆ)

ಹಳೆವಿದ್ಯಾರ್ಥಿ ಸಮಾಗಮ

people

ಶಾಲೆ ಮುಗಿಯಿತು ದಶಕ ಸರಿದವು
ಹಳೆ ಗೆಳೆಯರೀಗ ಕಲೆತೆವು
ಗುರುತು ಹಿಡಿದೆವು ನಗೆಯ ಬಿರಿದೆವು
ಅರಿತು ಹೊಸತುಗಳ ಕಲಿತೆವು

ತರಗತಿಯಲ್ಲವನಂದು ಮೊದಲಿಗ
ಈಗ ಖುಷಿಯ ಬಾಣಸಿಗ
ಅಂದಿನ ಹಿಂದಿನ ಬೆಂಚ ಹುಡುಗ
ಕಾರ್ಖಾನೆಯೊಂದರ ಮಾಲೀಕ

ಸುಂದರಾಂಗ ಶೋಕೀವಾಲ
ಹೆಸರುಮಾಡಿದ ದೊಡ್ಡ ವಕೀಲ
ಯಾರ ಗಮನಕು ಬೀಳದ ಪೋರ
ಎಲ್ಲರ ಮೆಚ್ಚಿನ ಕಥೆಗಾರ

ಗಣಿತದಲ್ಲಿ ಗೋತಾ ಹೊಡೆದವ
ಬೇಡಿಕೆಯಿರುವ ವಿನ್ಯಾಸಕಾರ
ತರಗತಿಯಿಂದ ಹೊರನಡೆದವ
ಸೇನೆಯ ದೊಡ್ಡ ಕಮಾಂಡರ

ಜೀವನದ ಆಗುಹೋಗುಗಳು
ಯಾರಿಗೂ ಕಾಣದ ಗೂಢಗಳು
ಪುಸ್ತಕ ಹೊದಿಕೆ ಎಂದೂ ತಿಳಿಸದು
ಹೂರಣ ಮತ್ತೊಳಗಿನ ತಿರುಳು

ಶಾಲೆ ಮುಗಿಯಿತು ದಶಕ ಸರಿದವು
ಹಳೆ ಗೆಳೆಯರೀಗ ಕಲೆತೆವು
ಗುರುತು ಹಿಡಿದೆವು ನಗೆಯ ಬಿರಿದೆವು
ಅರಿತು ಹೊಸತುಗಳ ಕಲಿತೆವು

reunion

(ಮೂಲ ಕವಿ: ತಿಳಿಯದು)
(ಇಂಗ್ಲೀ಼ಷಿನಿಂದ ಭಾವಾನುವಾದ)
(Pic courtesy:Pixabay)

“ತೆನೆ” ಪುಸ್ತಕ ಬಿಡುಗಡೆ

thene pic 5

ದಿನಾಂಕ 21.10.2019 ಸೋಮವಾರ ನನಗೆ ವಿಶೇಷ ದಿನ. ಕಾರಣ ನನ್ನ ಕಿರುಗವಿತೆಗಳ ಪುಸ್ತಕ “ತೆನೆ” ಲೋಕಾರ್ಪಣೆಗೊಂಡಿತು.

“ತಿಂಮಸೇನೆ” ಯ ತಿಂಗಳ ಕಲೆಯುವಿಕೆ ನಮ್ಮ ಮನೆಯಲ್ಲಿದ್ದು, ಅನೇಕ ಸಾಹಿತ್ಯಿಕ ಚಟುವಟಿಕೆಗಳ ನಡುವೆ ಪುಸ್ತಕ ಬಿಡುಗಡೆಯೂ ಸಾಕ್ಷಿಯಾಯಿತು.

ಮುಖ್ಯ ಅತಿಥಿತಿಗಳಾಗಿ ಶ್ರೀ ವೈ ವಿ ಗುಂಡೂರಾವ್ ಆಗಮಿಸಿದ್ದರು. ಶ್ರೀ ಗುಂಡೂರಾಯರು, ಶ್ರೀ ಶ್ರೀಪತಿ ಮಂಜನಬೈಲ್‌ ಮತ್ತು ಶ್ರೀ ಆರ್‌ ರಾಮನಾಥ್‌ ಅವರುಗಳಿಂದ ಪುಸ್ತಕ ಬಿಡುಗಡೆಯಾಯಿತು. ಪುಸ್ತಕದ ಕೆಲ ಕಿರುಗವಿತೆಗಳನ್ನು ಉದಾಹರಿಸುತ್ತ ಶ್ರೀ ಗುಂಡೂರಾಯರು ಬಹಳ ಒಳ್ಳೆಯ ನುಡಿಗಳನ್ನಾಡಿದ್ದು ನನ್ನ ಬರೆಯುವ ಉತ್ಸಾಹಕ್ಕೆ ನೀರೆರೆದರು.

ಶ್ರೀಯುತರುಗಳಾದ
ಡಾ.ನಾ.ದಾಮೋದರ ಶೆಟ್ಟಿ
ಡುಂಡಿರಾಜ್
ಶ್ರೀಪತಿ ಮಂಜನಬೈಲ್
ಆರ್. ರಾಮನಾಥ್
ಕಟ್ಟಾಯ ರಂಗನಾಥ್
ಟಿಕೆವಿ ಭಾರತಿ
ರಾಜೇಂದ್ರ ಬಿ ಶೆಟ್ಟಿ
ಕೆ.ವಿಶ್ವನಾಥ್
ದೀಪಕ್ ಜಿ ಕೆ
ದಿನೇಶ್ ಮುದ್ರಿ
ವರದರಾಜನ್
ಎನ್ ಎಚ್ ಗೋಪಾಲಕೃಷ್ಣ ಭಟ್
ಸೀತಾರಾಮ್ ಪಿ ಎನ್
ಸಿ ವಿ ಎಸ್ ಪ್ರಸಾದ್
ರವೀಂದ್ರ ಮಂಜ
ಎನ್.ಶಬರಾಯ ಮತ್ತೆಲ್ಲರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ವಿಗೊಳಿಸಿದ ಮಹನೀಯರುಗಳಿಗೆ ಧನ್ಯವಾದಗಳು.

ಕೆಲ ನೆನಪಿನ ಚಿತ್ರಗಳ ಕೃಪೆ: ರಾಜೇಂದ್ರ ಬಿ ಶೆಟ್ಟಿ, ದೀಪಕ್ ಜಿ.ಕೆ

ತೆನೆ ಪುಸ್ತಕದಿಂದ ಆಯ್ದ ಒಂದು ಕಿರುಗವಿತೆ:

pexels-photo-2122171

ತೆರೆ ಬಾಗಿಲ

ಬಾಗಿಲ ಬಡಿದಾ ಸದ್ದು
ಹೊರಗಡೆ ಕಾಯುತಲಿರುವರು
ಸ್ನೇಹ, ಸಂತಸ, ಸಹನೆ,
ಶಾಂತಿ ಸರಳ ಮಮತೆ
ಮನೆಯೊಳಗೀಗಾಲೆ ನೆಲೆಸಿದ್ದಾರೆ
ದ್ವೇಶ-ಈರ್ಷೆ
ಜಾಗವೆ ಇಲ್ಲ ಒಳ ಬರುವವರಿಗೆ!

ದ್ವೇಶ-ಈರ್ಷೆ ಈ ಇಬ್ಬರಾ
ಹೊರದಬ್ಬಿದರೆ
ಬಾಗಿಲ ಬಡಿದವರಷ್ಟೂ
ಬಂದೇ ಬರುವರು ಒಳಗೆ
ನಿಂದೇ ನಿಲುವರು ಬೆಳಗೆ

(Pic from Pexels)

ಕದ್ರಿಯ ಗಂಧರ್ವ

Kadri-Gopalnath

ಅನ್ನಲಾಗದು ಅದು
ಆಯಿತು ಹಾರಿತು ಆರಿತು…

ಅವ ಲೋಹದ ಕೇಡ ಕಳಚಿ
ಇಹಲೋಕದ ಲೋಭಮರೆಸಿ
ಸಂಗೀತರಾಗತರಂಗ ಹರಿಸಿ
ಹೃದಯ ಹೃದಯಗಳಲ್ಲಿ
ರಿಂಗುಣಿಸಿದ ಕದ್ರಿಯ ಗಂಧರ್ವನಿಗೆ
ಮರೆಯಿಲ್ಲ ಮರೆವಿಲ್ಲ ಅಳಿವಿಲ್ಲ

ರುಚಿರ ನಾದ ಹೊಮ್ಮಿಸಿದ ತಿಲಕ
ಧಾರಕ ಚಿರ … ಚಿರ…

 

(Pic:Google Pics)

ಅವನಿಂದಿಗೂ ನಮ್ಮೊಂದಿಗೆ

depositphotos_3881136-stock-photo-indian-rupee-notes

ಬಾಡಿದ ಬಡ ಕಪ್ಪು ದೇಹ
ಬಾಗಿದ ಉದ್ದ ನಾಸಿಕ
ಬೊಚ್ಚು ಬಾಯಿ ಶುದ್ಧ ನಗೆ
ಉದ್ದ ಕೋಲು ಗಿಡ್ಡ ಪಂಚೆ
ಕನ್ನಡಕದ ಚಾಣಾಕ್ಷ ಕಣ್ಣ
ಇಳಿಬಿದ್ದ ಗಡಿಯಾರದ
ಮೋಡಿಗಾರನ ನಡಿಗೆ
ಇಂದಿಗೂ ಎಲ್ಲರೊಂದಿಗೆ…

ಜೀವನ ಚಲಾವಣೆಗೆ
ನಾಣ್ಯನೋಟಿನ ಛಾಪಿನೊಂದಿಗೆ
ನಮ್ಮ ಜೇಬು-ಖಾತೆಯೊಳಗೆ
ಇಂಗದೇಕೋ ಈ ಬಾಯಾರಿಕೆ!

ಗಾಂಧಿಯೆಂದರೆ ಹಾರಿಕೆ
ಸಣ್ಣಗೆ ತಣ್ಣನೆ ನಗೆ
ಎಲ್ಲರ ಬತ್ತಳಿಕೆ ತುಂಬಾ
ಅವನವೇ ನುಡಿ ಬಾಣ
ಹೂಡುವ ಚಳುವಳಿ
ಯಾತ್ರೆ ದಂಡಿ ದಂಡಿ
ಸ್ವಾರ್ಥ ಸರಪಳಿ

ಅವನಿಂದಿಗೂ ನಮ್ಮೊಂದಿಗೆ
ಮತ್ತಿವನ ಕೈಯೂ ಹೆಗಲಿಗೆ
ಬಿಡನು ಬಡಪೆಟ್ಟಿಗೆ!?
ನಾ ಥೂ ರಾ ಮನ ಹಳಿ
ಮಾರ್ಜಾಲ ಹಾಲ ಕುಡಿವರೀತಿ
ಗೋಡ್ಸೆ ಹೆಜ್ಜೆಗಳ ಗೌಪ್ಯ ತುಳಿ!

(pic from Google images)