ಮತ್ತೊಮ್ಮೆ

ಅವನು ಸಾಮಾನ್ಯನೆಂದು
ಅವನಿಗಷ್ಟೇ ಅಲ್ಲ
ಎಲ್ಲರಿಗೂ ತಿಳಿದಿದೆ!
ಅಸಾಮಾನ್ಯತೆಯೆಂದರೆ
ಅವನಿಟ್ಟ ಹೆಜ್ಜೆಗಳಲ್ಲಿ ‌
ದೃಢತೆ ಸಡಿಲಗೊಳ್ಳದಿರುವುದೆ…
ದೃಷ್ಟಿ ಸ್ಪಷ್ಟತೆ ತೊರೆಯದಿರುವುದೆ…
ನಮ್ಮ ನಾವೇ ಜರಿವ
ರಂಧ್ರ ಬಿರುಕುಗಳ ಮುಚ್ಚಿ
ಶಿಥಿಲ ಮನ ತೊಲಗಿಸಿ
ಹೆಮ್ಮೆಯ ಆಲಯ ನಮ್ಮೊಳಗೆ
ನಿಲ್ಲಿಸುವುದರತ್ತ ಚಿತ್ತ ಹರಿಸಿರುವುದೆ…
ಮಣ್ಣ ಮರೆಯದಿರುವುದೆ…
ನಿಂತ ನೆಲ ಮೆರೆಸುತ್ತಿರುವುದೆ…

ಅವನ ನಡಿಗೆ ಸಾಗುತ್ತ
ಬಂದವರ ಬರದವರ
ನೊಂದವರ ಬೆಂದವರ
ಎಡದವರ ಬಲದವರ
ಬಳಿಸಾರಿ ಮೈದಡವಿ ಉಪಚರಿಸಿ
ಗಾಳಿನೀರುಬೆಳಕನಿಟ್ಟು
ಚೇತೋಹಾರವಿಟ್ಟು
ಉಣ್ಣುವವನ ತೃಪ್ತ ನಗೆಗೆ
ನಗೆ ಮೀಟುವುದೆ…
ಸರಳ ವಿರಳನವನೆನಿಸುವುದೆ…

ಇರಲಿ ಹೀಗೇ ಅವನ ನಡಿಗೆ
ತೊಟ್ಟ ಕೈಂಕರ್ಯ ಸಫಲವಾಗಲಿ
ಸಾಮಾನ್ಯತೆಯೆ ಫಲ ನೀಡಲಿ
ಅವನ ಎತ್ತರವೆಂದೂ ತಗ್ಗಿನವರತ್ತವಿರಲಿ
ಮೋಡಿ ಮಾಡಲವ
ಮೋಡಿಯಾಗಲಿ ಜನ!

(Pic from Internet)