ಮೊದಲ ಸಾಲಿನ ಹುಡುಗಿ

Sitarist

 

 

 

 

 

 

 

 

ಸರಿಗಮಪದ ಹಿಡಿದು ತಂತಿಯ ಮೇಲೆ
ಹರಿಸಿ ಉಕ್ಕಿಸುವ ಆಲಾಪದಮಲು
ಎದೆಗೆ ಅಪ್ಪದ ಸಿತಾರಿನ ಮೇಲೆ
ಸರಿವ ಅವನ ಸಪೂರ ಬೆರಳುಗಳು

ಅವಸರದಲ್ಲಿ ತುಡಿವ ಸರಸದಂತೆ
ಏನೊ ಮುಚ್ಚಿಟ್ಟ ಗುಟ್ಟುಬಿಚ್ಚಿ ಕಿವಿಗೆ
ಪಿಸುಗುಟ್ಟುತ್ತಿರುವಂತೆ ಅವನ ತೆಳು
ತೆರೆದು ಮುಚ್ಚುವ ಎಸಳ ತುಟಿಗಳು

ಉದ್ದ ಕೂದಲ ಸರಿಸಿ ಹಿಂದಕ್ಕೊಗೆವ
ಠೀವಿಯ ಹೊಳಪಿನ ಭಾವ ಮುಖ
ಮುಚ್ಚಿಬಿಡುವ ದಟ್ಟ ಕಪ್ಪು ಕಣ್ಣುಗಳು
ಕಣ್ಣುಮುಚ್ಚಾಲೆಯಲ್ಲಿ ರಾಗದೆಳೆಗಳು

ಆಲಾಪಕ್ಕೆ ತಲೆದೂಗುವ ಒಳ ಆಸೆಗಳು
ತಾಳ ಲೆಕ್ಕಕ್ಕೆ ಪಕ್ಕಾಗದ ಹಸ್ತ ವ್ಯಸ್ತಗಳು
ಎಣಿಕೆ ತಪ್ಪುತ್ತಿರುವುದು ಅವನ ಹುಸಿನಗು
ವಿಗೆ ಕಾರಣವೆಂಬ ಸಣ್ಣ ಗುಮಾನಿಯೂ

ಕಣ್ಣರಳಿಸಿ ಮತ್ತವನ ಕಡೆಗೆ ತದೇಕ
ಶೆರ್ಲಾಕ್ ಹೋಮ್ಸನು ನಿಗೂಢದ
ಹಿಂದೆ ಬಿದ್ದಂತೆ ಸಂಶಯದ ಪಾತ್ರ
ಅವನ ಒರಟು ಬಾಹುಗಳ ನೋಟ

ತಬಲದೋಘ ಹಾರ್ಮೋನಿಯಮಿನಾರ್ತ್ರತೆ
ತಾನಪೂರದ ನಿರ್ಲಿಪ್ತತೆಯೊಳಗಣ ಆಪ್ತತೆ
ಕಾಪಿಟ್ಟ ಪ್ರೇಮ ತತ್ತಿಯಲ್ಲಿಣುಕಿದ ಜೀವ ಪರಿವೆ
ನೇವರಿಕೆಗೆ ಝೇಂಕರಿಸುವ ಸಿತಾರ ಸರಿಗೆ

ತಾರಕದಲ್ಲಿ ಕಛೇರಿ ಮುಗಿಸುವ ಕಾತರ
ಅವನೊಡನೆ ಸಾಥಿಗಳ ಉತ್ಕಟ ಪಾತ
ಸರಿದ ಸೀರೆಯ ಪಲ್ಲು ಒಪ್ಪವಿರಲೆಂಬ ಆಸೆ
ಲಾಸ್ಯ ಹಸ್ತಗಳಲ್ಲಿ ಪಲ್ಲವಿಸಿದ ಭರವಸೆ

ಮುಂಜಾವು ಕಿಟಕಿ ಬಳಿಯ ಗುಲಾಬಿ ಮೊಗ್ಗು
ಈಗ ಅರಳಿರಬಹುದೆನ್ನುವ ಅಚಾನಕ ಹಿಗ್ಗು
ಅವನ ಸಮೀಪ ನಿಲ್ಲುವ ತವಕ ಚಡಪಡಿಕೆ
ಓರಣಿಸುವ ಸೆರಗಲ್ಲು ಸಿತಾರ ರಾಗ ಬಯಕೆ

(http://www.panjumagazine.com/?p=12793)

(ಚಿತ್ರ ಕೃಪೆ: ಅಂತರ್ಜಾಲ)

ಕುದುರೆಯೋಟದ ಕಣ

racing-horse


ಇರುವೆಗಳಂತೆ
ಕಾಗೆಗಳಂತೆ
ಹದ್ದುಗಳಂತೆ
ಹರಿದಾಡುತ್ತಾ ಕುಪ್ಪಳಿಸುತ್ತಾ
ಗುರಿಯಿಡುತ್ತ
ಅಲ್ಲಲ್ಲಿ ದ್ವಾರಗಳಲ್ಲಿ
ಒಂದೇ ದಿಕ್ಕಿನ ಕಡೆಗೆ
ಹರಿಯುತ್ತಿದ್ದಾರೆ

ತದೇಕ ಮಗ್ನರಿಗೆ ಕೇಳಿಸಿತು
ಕುದುರೆಗಳ ಹೇರವ
ಕಾಣಿಸಿತು ಹೊರಬಂದ
ಹೊಳಪು ಗೆರಸುಗಳು
ಜಾಕಿಯ ಚಾಲಾಕು ಕಾಲುಗಳು

ಈಗ ಜೂಜಿನಡ್ಡದ ತುಂಬಾ
ಜೀವ ಸಂಚರ
ಭ್ರಮಾವೇಶ ಉದ್ವೇಗ
ಚಪ್ಪಾಳೆ ಕೂಗು
ಉಸಿರಾಟಗಳಲ್ಲಿ
ಏರಿಳಿತಗಳ ಪಾಳಿ
ಕುದುರೆಗಷ್ಟೇ ಅಲ್ಲ
ಕೆನೆಯುವಾತುರದ ಚಾಳಿ
ಎಡಕ್ಕೆ ಕೀಲಿಸಿದ ಕಣ್ಣುಗಳು
ಒಂದರ ಪಕ್ಕ ಒಂದು
ಅಶ್ವ ವೇಗಿಗಳು ನಡೆಸಿದ್ದಾರೆ
ಆಸೆಗಳ ಪೆರೇಡು

ಹೊಡೆದ ಗುಂಡು
ನೆರೆದವರೆಲ್ಲರ
ಹೃದಯ ಸಪ್ಪಳವಾಗಿ
ಬಿಗಿ ಹಿಡಿದು ಎಲ್ಲರೂ ನೆಟ್ಟರು
ನೋಟ ವಾಲಿಸುತ್ತ
ತಲೆ ಬಲಕ್ಕೆ ಯಾ ಬಾಲಕ್ಕೆ

ಶುರು ಉದ್ವೇಗದೋಟದ ಆಟ
ಕಡೆದಂತೆ ಕಲ್ಲಿನಲ್ಲಿ
ಅರೆಕ್ಷಣ ಸ್ತಬ್ಧ
ರಣಹದ್ದು ಇಲಿಹಿಡಿದ ಕ್ಷಣ
ಕಪ್ಪೆ ನಾಲಿಗೆಯ ಹರಡಿ
ರಪ್ಪನೆ ಕೀಟ
ಒಳಸೆಳೆದ ಘಳಿಗೆ
ಮೇಣ ಮೂರ್ತಿಗಳಾಗುವ
ಹೊತ್ತಲ್ಲೆ ಬಿಸಿ
ಗಾಳಿ ಬೀಸಿ ರೊಯ್ಯನೆ
ಕಿಕ್ಕಿರಿದಲ್ಲಿ
ಗಾಳಿಗದೇನು ಗೂಳಿ ಶಬ್ಧ


ದೊಡ್ಡ ಬಲೂನು ಪಟ್ಟನೆ
ಒಡೆದುಹೋದಂತೆ
ಭುಗಿಲೆದ್ದದ್ದೆಲ್ಲ ಥಟ್ಟನೆ
ತಣ್ಣಗಾದಂತೆ
ಉಸಿರು ನಿಧಾನಕ್ಕೆ
ಪುಪ್ಪುಸದ ಸಂದಿಗಳಲ್ಲಿ
ಹರಿದು ತಿದಿಯೊತ್ತಿದೆ
ಕುತೂಹಲದ ಕ್ಷಣಮುಗಿದು
ಕಲರವ ಕೇಕೆ ಮತ್ತು
ನಿಟ್ಟುಸಿರ ಬೇಗೆ

ಕಳೆದುಕೊಂಡದ್ದು
ಗುಟ್ಟಲ್ಲಿ ಎಣಿಸಬಯಸುವ ಮಂದಿ
ಕೌಂಟರಿನಲ್ಲಿ ಸ್ವಲ್ಪವೇ
ಕೈಗಳಿವೆ ಹಣದತ್ತ ಚಾಚಿ
ಜಾಕ್ಪಾಟಿನ ಅದೃಷ್ಟ ಮುಖ
ಹುಡುಕುವ ಮಂದಿಗೆ
ನಿಟ್ಟುಸಿರ ಗೆಳೆತನದ ರುಚಿ


ಆಸೆ ಕಾರ್ಖಾನೆಯಿಂದ
ಮಂದಿ ಹೊಸಕುತ್ತ ಹೊರಕ್ಕೆ
ಮುಗಿಸಿಲ್ಲ ಹುಡುಕಾಟ
ಕುದುರೆ ಜಾಕಿಗಳ
ಜಾತಕದ ಹೊತ್ತಿಗೆ
ಅದೃಷ್ಟ ತೋರುವ
ಸಂಖ್ಯೆ ನಕ್ಷತ್ರಗಳ ಎಣಿಕೆ
ಛಲದ ವಿಕ್ರಮನಿಗೆ
ಬಿಡದ ಬೇತಾಳದಂತೆ
ಒಂದಕ್ಕೊಂದು ಕುಣಿಕೆ
ಹಳೆ ಕಥೆಯ ಕೇಳಿ
ಹೊಸ ತಂತ್ರದ ಹೂಡಿಕೆ

ಹಣ ತಿಗರಿ
ಮಾಡಿದೆ ತಲೆಯಲ್ಲಿ ತಾಣ
ಅಟ್ಟುವಾತುರ ವಾಸ್ತವ ಭಯ
ವೇದಿಕೆಯನ್ನೇರಿ
ಭವಿಷ್ಯ ಹುಡುಕುವ ನಟನೆ
ಬಾಯ್ತೆರೆದ ವರ್ತಮಾನಕ್ಕೆ
ಸಬೂಬು ಹುಡುಕುವ ಪಠಣೆ


ಮರುದಿನದ ವರ್ತಮಾನ
ಪತ್ರಿಕೆಯ ಕ್ರೀಡೆ ಪುಟದಲ್ಲಿ
ಪ್ರಕಟವಾಗಿದೆ ವರ್ಣಚಿತ್ರ
ಕುದುರೆಯೊಡನೆ ಜಾಕಿ
ಎತ್ತಿ ಹಿಡಿದಿದ್ದಾನೆ ಟ್ರೋಫ಼ಿ
ಕೊಡಮಾಡಿ ನಿಂತಿದ್ದಾನೆ
ಗಾಢನೀಲಿಕನ್ನಡಕ
ಧರಿಸಿದವನು ಪಕ್ಕ
ಈಗ ಆಟವಾಡಿದ ಸಮಾಧಾನ
ಜೂಜಿಗರ ಬಾಜಿಗ ಮನ…