ಸಖನಾಗುವ ಹೊತ್ತು

click-kavite-shilabalike

avadhi-click-kavite1-shilabalike

ಗಂಡು ಕ್ರಾಪಿಗೆ
ತುಂಡು ಉಡುಗೆಗೆ
ಮಾಲ್ಗಳಲ್ಲಿಯ ಮೊಬೈಲ್ ನಡಿಗೆಗೆ
ಕ್ಲಿಕ್ಕಿಸುವ ಪ್ರವಾಹಿಗರಲ್ಲಿ
ಪಳೆಯುಳಿಕೆಯ ಕಡೆಗೆ ಕ್ಯಾಮರ
ಕಣ್ಣನಿಟ್ಟ ಪಂಟಗೆ!
ಕ್ಷಮೆ ಕೇಳಿ…

 

ತರಳೆ
ನೀಳ ಜಡೆ ಬಿಲ್ಲೆ
ತ್ರಿಭಂಗಿ ಬಿಂಕವಿಲ್ಲದೆ ಬೆನ್ನು
ತೋರಿ ನಿರ್ಲಜ್ಜ ಕಣ್ಣುಗಳಿಗೆ
ಭರ್ಜರಿ ಆಹಾ..ರ ವಾದವಳಿಗೆ…

ಯಾವ ಸಮೀಕರಣದಲ್ಲಿ
ಉಳಿ ಹಿಡಿದವನ ಬೆರಳ
ಲೆಕ್ಕಕ್ಕೆ ಸಿಕ್ಕಿ ಅರಳಿದ
ಅಳೆಯಲಾಗದ
ಕಲೆಗೆ ಉಳಿದೆ

ಲೇಖನಿಯ ಮೋಹಿಗರ
ಘನ ಸೆರೆಯಲ್ಲಿ ದ್ರವಿಸಿ
ಕಾವ್ಯ ಹರಿತ್ತಿಗೆ ಹರಿದೆ
ನೋಡುಗರ ಕನಸ ಪುಚ್ಚಗಳಿಗೆ
ಬಣ್ಣಗಳ ಹಚ್ಚಿ
ಕಲೆಯ ಆಲಯದೊಳಗೆ
ನಿಂತ ನೀ ಶಿಲಾಗೀತೆ

ತಿರುಗದಿರು ಇತ್ತ!
ನಿನ್ನ ಮುಖದ ಮಂದಹಾಸದ
ಕಲ್ಪನೆಯಲ್ಲಿ ಚಿತ್ತಾಗಲಿ ಚಿತ್ತ
ಇದು ಉಳಿಗೆ ಲೇಖನಿ ಸೋತು
ಜಡವಲ್ಲದ ಜಡೆಗೆ ಕವಿತೆ ಸೋತು
ಕವಿ ನಿನಗೆ ಸಖನಾಗುವ ಹೊತ್ತು!

ec93b546c5103667b488e3e2c099714e

(‘ಅವಧಿ’ ಇ ಪತ್ರಿಕೆಯಲ್ಲಿ ಪ್ರಕಟಿತ: Link address :http://avadhimag.com/2016/08/30/%E0%B2%B8%E0%B2%96%E0%B2%A8%E0%B2%BE%E0%B2%97%E0%B3%81%E0%B2%B5-%E0%B2%B9%E0%B3%8A%E0%B2%A4%E0%B3%8D%E0%B2%A4%E0%B3%81/#more-165385)

ಶುಭ್ರವಾಗು ನನ್ನ ತೀರ

AR1

 

 

 

 

 

ನಾನು ಬಿದ್ದೆನೆಂದು ಆಲಾಪಿಸುತ್ತೇನೆ
ನೀನೇಕೆ ನನ್ನನ್ನು ಎತ್ತಿಕೊಳ್ಳಲಿಲ್ಲ ?
ಎಂದು ದೂರುವುದಿಲ್ಲ

ನಾನು ಜಾರಿದ್ದು ಕೆಸರಿನ ಮೇಲೇ ಹೌದು
ಕೆಸರು ರಾಚಿದ್ದು ನೀನೆಂದು
ಹೇಳುವ ಮನಸ್ಸಿಲ್ಲ

ಸ್ಪಷ್ಟತೆ ಇಲ್ಲದೆ ತೊದಲುತ್ತಿದ್ದೇನೆ
ನಾಲಿಗೆಗೆ ಭಯದ ಬರೆ ಎಳೆದದ್ದು ಯಾರೆಂದು
ಕೂಗುವ ಪ್ರಮೇಯ ನನಗಿಲ್ಲ

ಅಯ್ಯಾ ಎಂದು ಅರವುತ್ತಲಿದ್ದೇನೆ
ಅದು ನಮ್ಮ ಸಮ್ಮಾನಕ್ಕೆ ಕೋರಿದ್ದೆಂದು
ನಿನ್ನೊಳಗೆ ಅರಿವಾಗಬೇಕು

ಹಿಂಡುವ ಹಸಿವೆನೆಡೆ ಎಗ್ಗಿಲ್ಲದ ನನಗೆ
ವರ್ಣ ಹೀನತೆಯ ನಿಕೃಷ್ಟತೆ ಹೇರಿದ ನೆನಪು
ನಿನ್ನಲ್ಲಿ ಮರುಕಳಿಸಬೇಕು

ನನ್ನ ನಾಲಿಗೆಯ ಭಾಷೆ ನಿನ್ನ ನೆರಳಿನ ಸನಿಹ
ಇಲ್ಲವೆಂದರೂ ಪರಿಹಾಸ ಮಾಡದಿದ್ದರದೇ
ನಮಗೆ ಪರಾಕು

ಎತ್ತದಿರಿ ಏರಿಸದಿರಿ ಮುಟ್ಟಿ ಮಣೆ ಹಾಕದಿರಿ
ಸಕಲ ಸವಲತ್ತುಗಳಿಂದ ನನ್ನ ಉದ್ಧಾರದ
ಕತೆ ಕಟ್ಟದಿದ್ದರೆ ಸಾಕು

ಬಂಧುವಾಗೆಂದು ಕೋರುವ ಕಾಮನೆಗಳಿಲ್ಲ
ಬರಿಯ ಗೆಳೆಯನೆಂದು ನನ್ನ ಸಾವರಿಸು;
ಬಿಟ್ಟು ಧಿಮಾಕು

ಕುಹಕತೆ ಬಿಟ್ಟರೆ ನಮ್ಮಗಾಯಕ್ಕೆ ಮುಲಾಮು
ಅಸಡ್ಡೆಗಳ ತೊರೆದೊಗೆದರೆ
ಇದೊ ನಿನಗೆ ಸಲಾಮು

ನಿನ್ನ ಹೃದಯ ವೈಶಾಲ್ಯತೆಯ ಕಟ್ಟುಕತೆಗಳ
ಬಗೆದು ಒಗೆಯುತ್ತೀಯ
ಶುಭ್ರವಾಗುತ್ತೀಯ ನನ್ನ ತೀರ ?

(“ಪಂಜು” ಇ-ಪತ್ರಿಕೆಯಲ್ಲಿ ಪ್ರಕಟಿತ – Link address:

(http://www.panjumagazine.com/?p=13240)

ಚಿತ್ರ ಕೃಪೆ: ಅಂತರ್ಜಾಲ