ಕಲಾ ವಿವಿಧರು

anantharamesh paint

ಕವಿ ಕಿಚಾಯಿಸಿದ ಚಿತ್ರಿಕನಿಗೆ
’ ಬಿಳಿಯ ಕ್ಯಾನ್ವಾಸಿನ ಮೇಲೆ
ಚೆಲ್ಲಿದಂತಿದೆ ಬಣ್ಣ
ತಲೆಗರ್ಥ ಹೋಗುತ್ತಿಲ್ಲ ’
ಚಿತ್ರಿಕ ನಕ್ಕ ’ ಆ ನಿನ್ನ ಕವಿತೆಯಂತೆ ! ’

ಕವಿ ನಖಶಿಖಾಂತ ಕವಿತೆಯ ಅರ್ಥ
ಬಿಚ್ಚಿಟ್ಟ ಹಾರುವ ಚಿಟ್ಟೆಯಂತೆ
ರೆಕ್ಕೆ ಪಟಪಟಿಸಿದ ಹಕ್ಕಿಯಂತೆ
ಗಾಢಕ್ಕೆ ಹಾರಿದ…

’ ನಿನ್ನ ಕವಿತೆ ಎಷ್ಟೊಂದು ಆಳ !
ಹಾಗೆಯೇ ನನ್ನ ಬಣ್ಣದ ಚಿತ್ರ ಕೂಡ ’
ಬಣ್ಣಿಸಿ ಬಿಡಿಸಿಟ್ಟ ಎಳೆ ಎಳೆಯ
ತೆರೆದಿಟ್ಟ ಚಿತ್ರಿಕ ತನ್ನ ಕಲೆಯ ಸೆಲೆಯ

ಕವಿ ತಲೆ ಕೊಡವಿ ವಿಸ್ಮಿತ !
’ ಬರೆಯಲೆ ಕವಿತೆ ನಿನ್ನ ಚಿತ್ರಕ್ಕೆ
ಅರ್ಥ ಬಿಡಿಸಿಡಲೆ ಬಣ್ಣ ಬಣ್ಣಕ್ಕೆ? ’

ನಕ್ಕ ಚಿತ್ರಿಗ ’ ಬೇಡ ಕವಿ ಬೇಡ ಕವಿತೆ
ಪೂರ್ಣಾರ್ಥದ ಗೊಡವೆ ತೊರೆ
ಚಿತ್ರ ಅರ್ಥವಾಗದಂತಿರಿಸಿದರೆ
ಪ್ರತಿ ನೋಡುಗನೂ ಚಿಂತಕ
ಬಣ್ಣಗಳಲ್ಲಿ ಮುಳುಗಿ ಹುಡುಕುತ್ತಾ
ಚಿಂತನೆಯ ಬಿತ್ತಿ ಬೆಳೆಯುತ್ತಾನೆ
ಮೂರ್ತವಾಗಿಸುತ್ತಾನೆ

ನಿನ್ನ ಕವಿತೆಯೂ ಹಾಗೆಯೆ
ಓದುವ ಮನಸ್ಸೊಂದೊಂದು ಕವಿಯೆ
ಅವನ ಪಾಡಿಗೆ ಬಿಟ್ಟುಬಿಟ್ಟರೆ
ಯೋಚನೆಗಳಲ್ಲಿ ಹರಿಯುತ್ತಾನೆ
ಕವಿತೆಗೆ ಅರ್ಥ ಕಟ್ಟುತ್ತಾನೆ ’

ಹಳದಿ ಎಲೆ

yellow leaves

ಗಭೀರ ಮೌನ ಮತ್ತೆಲ್ಲೊ ಮೂಲೆಯಿಂದ
ಮೆಲ್ಲನುಪಕ್ರಮಿಸುವ ಅಳುವಿನಣುಕು
ಚಿಗರೆಯಂಥ ಚಿಗುರು ಹುಡುಗಿ
ಫ಼ಕ್ಕನೆ ಮಿಂಚಿ ಅಚ್ಚರಿ ಮುಖದಲ್ಲಿ
ಮೂಡಿಸಿದ್ದಾಳೆ ಪ್ರಶ್ನೆ
’ ಏನಾಯ್ತು ಏನಾಯ್ತಜ್ಜನಿಗೆ ?’

ಮರಗಟ್ಟಿದ ಹಳೆ ದೇಹದ ಅಕ್ಕ ಪಕ್ಕ
ಕುಳಿತ ಜೀವಗಳ ಕಣ್ಣುಗಳು
ಜಿಗಿದ ಪ್ರಶ್ನೆಗೆ ರವಷ್ಟೂ ಮಿಸುಕದೆಲೆ
ನೋಡುತ್ತಾವೆ ಮಗುವಿನ ಹೆಜ್ಜೆಗಳ
ಕೇಳಿಲ್ಲದಂತೆ ಅವಳ ಪ್ರಶ್ನೆಗಳ
ತಾವತ್ತರೆ ಅದೂ ಅತ್ತುಬಿಡುತ್ತೊ
ಆತಂಕಿಸಿ ಕೈ ಮರೆಮಾಡಿ
ಬಾಯಿಗೆ ಬಟ್ಟೆ ಇಟ್ಟು ಕರೆಯುತ್ತಾರೆ
ಜಿಗಿವ ಚಕಿತ ಕಂದನ

’ ಬಾ ಕಂದ ಬಾ ಇಲ್ಲಿ
ಅಜ್ಜ ಮಲಗಿದ್ದು ತಲೆ ಶೂಲೆಯಲ್ಲಿ
ಇನ್ನವನು ಅಲ್ಲಾಡಕೊಲ್ಲ
ಮಾತಾಡಲೊಲ್ಲ ಕಣ್ಣುಗಳ ಬಿಡಲೊಲ್ಲ
ನಿನ್ನೊಡನೆ ಆಡೋಕು ಬಾರನಲ್ಲ
ಆಡು ನೀ ನಿಸೂರ ಅಂಗಳದ ತುಂಬೆಲ್ಲ ’

ಚಿಗರೆ ಚಿಣ್ಣನೆ ನೆಗೆದೋಡಿ
ಸರೀಕರ ಆಟಕ್ಕೆ ಅಣಿಮಾಡಿ
ಪುಟಿಸುತ್ತಾಳೆ ಮಾತ ಮೆಲ್ಲಗೆ
’ ಅಜ್ಜನ ಸುತ್ತ ಎಲ್ಲ ಕುಂತು
ಆಟ ಆಡುತ್ತಲಿದ್ದಾರೆ ಒಳಗೆ
ನಾ ಆಡಬೇಕೇಕೆ ಹೊರಗೆ ? ’

ಪುಟಿವ ಮಾತು ಕೇಳಿಸಿತ್ತು
ಕೊರಡ ದೇಹದ ಸುತ್ತ
ಕುಂತು ಕಂತುವವರಿಗೆ..

’ಹೋಗೋರ ಹಿಡಿಯಲಾಗದು
ಇರುವಕ್ಕೆ ಎತ್ತರವಾಗುವಕ್ಕೆ
ಹಚ್ಚು ಬೆಚ್ಚಗಾಗಲಿ ಒಲೆ
ಕುದಿಸು ಗಂಜಿ ಹಾಕು ಎಲೆ ..’

’ ಪಟ್ಟಿ ಮಾಡೋಣ ಏಳಿ
ಚಟ್ಟಕ್ಕೆ ಒಂದಷ್ಟು ಅಲಂಕಾರದ ಪಾಳಿ
ಸಮಯ ಜಾರುವ ಮುನ್ನ
ವಾಸನೆ ಹರಡುವ ಮುನ್ನ
ಇಡಬೇಕು ಕೊಳ್ಳಿ ಒಳಗಾಗೆ
ಸುಟ್ಟು ಶುದ್ಧವಾಗುವ ಬೇಗೆ ’
ಹಾಗೆಯೆ ಚಿತ್ತ ಚಿಂತೆ
ಪೋರಿಗೆ ಹಸಿವಾಗದಂತಿರಿಸುವುದು ಹೇಗೆ
ಮತ್ತೆ ಆಮಂತ್ರಣ ಹದಿಮೂರಕ್ಕೆ ಎಲ್ಲರಿಗೆ

ಹೊಸ ಚಿಗುರು ಒಡೆಯಲಿವೆ
ಮನೆ ಮುಂದಿನ ಮರಗಿಡಗಳಲ್ಲಿ
ಚಪ್ಪರ ಹಾಕುವ ಮುನ್ನ
ಬಿದ್ದು ಹರಡಿದ ಹಳದಿ ಎಲೆಗಳನ್ನ
ಹೊರಗೆಸೆಯೆ ಬಾಚಬೇಕು ಸ್ವಚ್ಛವಾಗಿಸಬೇಕು

ಎದ್ದ ದೇಹಗಳ ನಿಧಾನ ಗತಿ ಹೆಜ್ಜೆಗಳ
ಆಟ ನೆಪದ ಬಾಲೆ ಕಣ್ಣು ಮಿಟುಕಿಸದೆಲೆ
ಇದೆ ನೋಡುತ್ತಲೆ ಇದೆ ಕಾಣುತ್ತಲೆ