ಮೂರು ಅವಸ್ಥೆ

 

axe


ಬಾಗಿಲಿಂದೊಳಗೆ ಕಕ್ಕುಲಾತೆ
ಉಕ್ಕಿ ತಣ್ಣಗಾಗಲಿಟ್ಟ ಹಾಲಿಗೆ
ಸಕ್ಕರೆ ಬೆರೆಸಿಟ್ಟು ತುಟಿಗೆ ತಾಗಿಸುವ
ಹಣಿಗೆಯಲ್ಲಿ ಸಿಕ್ಕು ಬಿಡಿಸಿಟ್ಟು
ಹಣೆಯ ಬೊಟ್ಟಿನಷ್ಟಗಲದ ಕಪ್ಪು
ಗಲ್ಲಕ್ಕಿಟ್ಟು ಮುತ್ತಿಟ್ಟು ಮತ್ತೆ ನೆಟಿಕೆ
ಮುರಿದು ಸಪೂರ ಹೂಗಳನ್ನೆತ್ತಿ
ಪೋಣಿಸಿ ತಲೆಗೊಂಚಲಿಗೆ ಹಚ್ಚುವ
ಉಪಮೆ ಇಲ್ಲದ ಅಮ್ಮ
ಅಪರೂಪಿ ಗಾಂಭೀರ್ಯದ ಅಪ್ಪ
ಗಾಳಿ ಮಳೆ ಬೆಳಕು ಬೀಸು ಸುರಿದು ಹರಿವು
ಅನುಭವಕ್ಕೆ ದಕ್ಕುತ್ತಿದೆ ಮನೆಯೊಳಗೆ


ಬಾಗಿಲಿಂದಾಚೆ ಬಾಯಿ ಹೆಬ್ಬಾವಿನಗಲ
ಸೆಳೆದುಕೊಳ್ಳುತ್ತೆ ಆಮಿಷದ ರಸ್ತೆ
ಮಗ್ಗುಲ ಬಣ್ಣದಂಗಡಿ ಗಿಲಿಕೆ
ಮಾತು ಸುಲಿಗೆ ವಿದ್ಯೆಗಳು
ಕಣ್ಣಳತೆಗೆ ಮೀರಿ ಬುದ್ಧಿಗೆ
ನಿಲುಕದೆ ಗೊಂದಲಿಸುವಾಗಲೇ
ಸುತ್ತಲಿಂದೊತ್ತಾಯಗಳ ಧ್ವನಿ
“ಹೋರಾಡು ಏರು
ಮೇಲೇರು ಆಗು ಕೌಮಾರ್ಯದಾಚೆ
ಜಗಜ್ಜಾಹೀರು ಬಿನ್ನಾಣಿಯಾಗು
ಐಷಾರಾಮಕ್ಕೆ ಮೈ ಕೊಡು
ಕೀರ್ತಿ ಕಾಂಚಣಗಳ ತುರುಬನ್ನಿಡು
ಸಮನಾಗು ಭಿನ್ನ ಲಿಂಗಿಗಳಿಗೆ
ಸಮಾನಾಂತರವಾಗು ” ಇತ್ಯಾದಿ…


ತಂಪು ಗಾಳಿಯೂ ಕೂಡ
ಅಂಟು ಜಾಡ್ಯದ ಒಡನಾಡಿಯೆ !
ನಂಜು ಊರಿದೆ ಊರ ನಾಲಿಗೆ
ಇದೀಗ ಅಪ್ಪ ಅಮ್ಮರ ಖಿನ್ನತೆ

ಚರ್ಚೆಗಳು ಅವರೊಳಗೆ
ಅಲಂಕಾರಗಳಲ್ಲಿ ಮಗಳು
ಬೇಗ ಬರಬೇಕು ಹಸೆಮಣೆಗೆ
ಇಡುವ ಹೆಜ್ಜೆಗಳ ಗತಿ
ನುಡಿವ ಮಾತುಗಳ ಪರಿ
ನಗು ಮರೆಸುವ ಕಿರಿಕಿರಿ
ಉಣ್ಣುವ ಉಡುವ ನೋಡುವ ನೋಟಗಳಿಗೆ
ಬೇಡದ ಸಂಕೋಲೆ ಹೇರಿ
ಮುಡಿದು ಮೂಲೆಗಿಟ್ಟ ಹೂಮಾಲೆ ಮಾಡಿ
ಹೌಹಾರಿ ಅವಸರಿಸಿ ಅಡಗಿಸಿ
ಅರಳುವ ಮನದ ಸಿರಿ ಬಸಿದು
ನಿಭಾಯಿಸಿಬಿಡುವ ಹಪಾಹಪಿ

ತನ್ನ ತಾ ಪೊರೆವ ಪ್ರಕೃತಿಗೆ
ಕೊನೆಗೂ ಕುಡುಗೋಲ ಘಾಸಿ

 

(ಚಿತ್ರ ಕೃಪೆ: ಅಂತರ್ಜಾಲ)