ದ ರಾ ಬೇಂದ್ರೆಯವರ ʼಏಳು ಕನ್ನಿಕೆಯರುʼ

ದ ರಾ ಬೇಂದ್ರೆಯವರ ʼಏಳು ಕನ್ನಿಕೆಯರುʼ

(ಅರ್ಥೈಸುವ ಒಂದು ಪ್ರಯತ್ನ}

ಇಂದು ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮದಿನ (31 ಜನವರಿ 1896).

ಬೇಂದ್ರೆ ಕಾವ್ಯ ಶಕ್ತಿ ಅಸದಳ, ಅಗಾಧ. ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಮಹಾ ನದಿ ಅದು. ಅವರದೊಂದು ಕವನ ಓದಿ, ಅದರ ಒಳಗನ್ನು ತಿಳಿಯುವ ಸಣ್ಣ ಪ್ರಯತ್ನವಿದು.

ನಿದ್ದೆಗಡಲಲ್ಲಿ ನಾನು
ಎದ್ದೇಳುತಲಿದ್ದೆ ನಾಗ
ಏಳು ಕನ್ನಿಕೆಯರು ಬಂದು
ಏಳು ಎಂದು ಎಂದರೋ-ಏಳು ಎಂದು ಎಂದರು

…. ಹೀಗೆ ಪ್ರಾರಂಭವಾಗುವ ಈ ಕವಿತೆ ʼನಾದ ಲೀಲೆʼ ಕವನ ಸಂಕಲನದ “ಏಳು ಕನ್ನಿಕೆಯರು”- ಕವಿತೆಯ ಮೊದಲ ಚರಣ.

ಮಹಾ ಕವಿಯ ಲೀಲಾಜಾಲ ಕವಿತ್ವ ಈ ಕವಿತೆಯಲ್ಲೂ ಸ್ಪಷ್ಟವಾಗಿ ಲಾಸ್ಯವಾಡಿದೆ. ಹಾಗೆಯೇ ಬೇಂದ್ರೆಯವರ ಬಹಳಷ್ಟು ಕವಿತೆಗಳಂತೆ ಇದೂ ಸುಲಭಗ್ರಾಹ್ಯವಲ್ಲ ಅನ್ನಿಸಿದೆ.

ಯಾರೀ ಏಳು ಕನ್ನಿಕೆಯರು? ತಿಳಿಯಲು ಅಷ್ಟು ಸುಲಭವೇ?

ಸಪ್ತ ಸಾಗರ, ಸಪ್ತ ಸ್ವರ, ಸಪ್ತ ಋಷಿ ಹೀಗೆ ಪಟ್ಟಿಯೇ ಇದೆ. ಆದರೆ ಸಪ್ತ ಕನ್ನಿಕೆಯರು ಸಿಕ್ಕಲಿಲ್ಲ. ಸಪ್ತ ವ್ಯಸನಗಳನ್ನೇ ಏಳು ಕನ್ನಿಕೆಯರನ್ನಾಗಿ ಕವಿ ನೋಡಿದನೆ? ಸಾಧ್ಯವಿಲ್ಲ.

ಮನುಷ್ಯನ ಮೋಹಗಳ ಮತ್ತು ಕಾಮನೆಗಳ ಹುಟ್ಟನ್ನು ಸಪ್ತ ಸಮುದ್ರದಾಚೆಯಿಂದ ಅಥವಾ ಸುಪ್ತ ಮನಸಿನಾಳದಿಂದ ಕವಿ ಕಂಡು ಕಾವ್ಯ ರೂಪಿಸತೊಡಗಿದನೆ? ಇದರ ಸಾಧ್ಯತೆ ಇರಬಹುದೆನ್ನುವ ತರ್ಕದೊಂದಿಗೆ ಕವಿತೆಯ ಪ್ರತಿ ಚರಣಗಳ ಒಳ ಹೊಕ್ಕು ಓದುವ ಪ್ರಯತ್ನ ಮಾಡಿದೆ.

ನಿದ್ರೆಯ ಕಡಲಿನಿಂದ ಅದೀಗ ಕವಿ ಏಳುವ ತಯಾರಿಯಲ್ಲಿದ್ದಾನೆ. ಪೂರ್ಣ ಎಚ್ಚರಾಗಿಲ್ಲ. ಆ ಸಮಯಕ್ಕೆ ಏಳು ಕನ್ನಿಕೆಯರು ಆಗಮಿಸಿದ್ದಾರೆ. ” ಏಳು ” ಅನ್ನುತ್ತಿದ್ದಾರೆ. ಅರೆ ಎಚ್ಚರದಲ್ಲಿ ಏಳು ಸಾಗರದಾಚೆಯಿಂದ ಬಂದ ಏಳು ಕನ್ನಿಕೆಯರ ದರ್ಶನದಿಂದ ರೋಮಾಂಚನಗೊಂಡಿದ್ದಾನೆ. ಆ ಕನ್ನಿಕೆಯರೆಡೆಗೆ ಆಕರ್ಷಿತನಾಗಿದ್ದಾನೆ.

” ಏಳು ” ಅನ್ನುವ ಎಚ್ಚರದ ನುಡಿ, ಅವನ ಸುಪ್ತ ಮನಸ್ಸಿಗೆ ತಾಕುತ್ತಿದೆ. ಈಗವನು ಗೊಮ್ಮಟನಂತೆ ಎಲ್ಲ ಕಳಚಿ ಬೆತ್ತಲಾಗತೊಡಗಿದ್ದಾನೆ. ವೈರಾಗ್ಯ ಮೂರ್ತಿಯಾಗಲು ಅಥವಾ ಕಠಿಣ ಕಲ್ಲಾಗಿ ನಿಲ್ಲಲು ಅವನು ಪ್ರಯತ್ನಪಡತೊಡಗಿದ್ದಾನೆ.

ಅವನ ಆತ್ಮ ಸ್ಧೈರ್ಯಕ್ಕೆ ಮಾರು ಹೋದವರಂತೆ ಆ ಕನ್ನಿಕೆಯರು ಅವನನ್ನು ದೀಪ ಮಾಲೆಯಂತೆ ಸುತ್ತುವರಿದಿದ್ದಾರೆ. ದೀಪದ ಕುಡಿಗಳಂತೆ ಅವರು ಕಾಣತೊಡಗಿದ್ದಾರೆ.

ಅರೆ ಎಚ್ಚರದ ಕವಿ ಆ ಕನ್ನಿಕೆಯರ ದೇಹ ಸೌಂದರ್ಯಕ್ಕೆ ಮರುಳಾದನೆ? ಅವನ ಕರ್ಮ ಕುದಿಯ ಸ್ಥಿತಿಗೆ ಬರತೊಡಗಿದೆ. ಅವನು ವಿಷಯಾಸಕ್ತನಾಗಿದ್ದಾನೆ. ಪ್ರಾಪಂಚಿಕ ಆಸೆಗಳು, ಮೋಹ ಅವನ ಮಾಯೆಯಾಗಿ ಆವರಿಸಿ, ಕಾದ ಬೆಣ್ಣೆಯಂತೆ ಪ್ರಾಣ ಕರಗತೊಡಗಿದೆ.

ಕಲ್ಲು, ಗೊಂಬೆ, ಕೂಸುಗಳನು
ಎಲ್ಲ ನಂಬಿ, ನೆನೆದುಕೊಂಡೆ
ತಳವು ಕಾದ ಬೆಣ್ಣೆಯಂತೆ
ಒಳಗೆ ಪ್ರಾಣ ಕರಗಿತೋ-ಒಳಗೆ ಪ್ರಾಣ ಕರಗಿತು

ಕವಿಗೆ ಈ ಅವಸ್ಥೆಯ ಅರಿವಾಗತೊಡಗಿದೆ. ಮನಸ್ಸಿನ ತಾಕಲಾಟಗಳು, ತಳಮಳಗಳು ನಿಯಂತ್ರಿಸಲಾಗುತ್ತಿಲ್ಲ. ಎಲ್ಲವನ್ನೂ ಗೆದ್ದೆ ಅನ್ನುವ ಭ್ರಮೆ.

ಆದರೆ ವಾಸ್ತವದಲ್ಲಿ ಆ ಏಳು ಕನ್ನಿಕೆಯರಲೊಬ್ಬಳಲ್ಲಿ ಕವಿ ತನ್ನ ಮನಸ್ಸು ಜಾರಿಸಿಬಿಟ್ಟಿದ್ದಾನೆ. ಬೆವರೊಡೆದು ಮೈಯ ತುಂಬಾ ನವಿರು ಮುಳ್ಳು ನಿಂತಿದೆ. ಸ್ವರಕ್ಕೆ ಸ್ವರ ಕೂಡಿಸುವ ಪ್ರಯತ್ನ ಸಫಲವಾಗದೆ ಡೊಳ್ಳು ತಂತಿಯಿಂದ ಜೊಳ್ಳುನಾದವಷ್ಟೇ ಹೊಮ್ಮಿದೆ. ಈಗ ಅರಿವಾಗುತ್ತಿದೆ, ಬೆಳಕಿನ ಕಿಡಿ ಆರಿಹೋಗುವಂತೆ ಆ ಕನ್ನಿಕೆಯರು ತೊರೆದು ಹೊರಟುಹೋಗಿದ್ದಾರೆ. ಅವರ ನಿರ್ಗಮನದಿಂದ ಹತಾಶನಾಗಿ ಮಣ್ಣ ಕಂಬದಂತೆ ಕೆಳಗೆ ಬಿದ್ದಿದ್ದಾನೆ.

ನಿಜಕ್ಕೂ ಆ ಏಳು ಕನ್ನಿಕೆಯರು ಅವನನ್ನು ʼಏಳುʼ ಅಂದರು. ʼಬೀಳುʼ ಅನ್ನಲಿಲ್ಲ. ಅವರ ಸ್ಪರ್ಷ ಚೇತನ ಸ್ವರೂಪಿಯಾಗಿತ್ತು. ಹರುಷ ಕೊಡುವ ಸನ್ನಾಹದಲ್ಲಿತ್ತು. ಆದರೆ, ಆ ರಸಮಯತೆ ವಿಷಯಾಸಕ್ತಿಯ ದೆಸೆಯಿಂದ ವಿರಸವಾಗಿತ್ತು.

ಕವಿ ಭವದ ಮುಖಿಯಾಗಿ ಸೋತಿದ್ದಾನೆ. ಆ ಸೋಲಿನ ಪ್ರಜ್ಞೆ ಅವನನ್ನು ಕಾಡತೊಡಗಿದೆ. ತಪ್ಪುಗಳ ಅರಿವಾಗತೊಡಗಿದೆ. ತಾನು ಸೋತ ಭಾವದಿಂದ ಹೊರಬರುವ ಆಶಯ ಅದಮ್ಯವಾಗಿದೆ. ತನ್ನಿಂದ ದೂರವಾದ ಆ ಚೇತನ ರೂಪಿಗಳಾಗಿದ್ದ ಏಳು ಕನ್ನಿಕೆಯರಲ್ಲಿ ಅವನ ಬಿನ್ನಹವಿದೆ, ʼ ಸೋಲನ್ನು ಮೆಟ್ಟಿರುವ ತನ್ನ ಸ್ಥೈರ್ಯದ ಆಳ ಮತ್ತೊಮ್ಮೆ ಪರೀಕ್ಷಿಸಲು ಬನ್ನಿʼ ಅನ್ನುವ ಮನುಷ್ಯ ಪ್ರಯತ್ನದ ಮತ್ತೊಂದು ಮಹತ್ತರ ಮುಖವನ್ನು ಕವಿ ಆ ಕೊನೆಯ ಸಾಲಿನಲ್ಲಿ ತಿಳಿಸುತ್ತಿದ್ದಾನೆ.

ಹನ್ನೊಂದು ಚರಣಗಳ ಈ ಕವಿತೆಯ ಕೊನೆಯ ಚರಣ ಹೀಗಿದೆ:

ರಸವು ವಿರಸವಾಯಿತಂದು
ಹೊಸ ಸಮರಸ ಕೂಡಿದಾಗ
ಏಳು ಕನ್ನಿಕೆಯರೆ, ಬಂದು
ಆಳ ಮುಳುಗಿ ನೋಡಿರೇ-ಆಳ ಮುಳುಗಿ ನೋಡಿರಿ.

ಸೋತರೂ ಮನುಷ್ಯ ತನ್ನ ಮಹತ್ತಿನ ಆಶಯದಿಂದ ವಿಚಲಿತನಾಗಬಾರದು ಅನ್ನುವ ಸಂದೇಶ ಈ ಕವಿತೆಯಲ್ಲಡಗಿದೆ.

ಈ ಸಣ್ಣ ಕವನದೊಂದಿಗೆ ಬೇಂದ್ರೆಯವರಿಗೆ ನುಡುನಮನ:

ಬೇಂದ್ರೆ ಕಾವ್ಯ

ಕೊತ ಕೊತ ಕುದಿಯುವ ಕಬ್ಬಿನ ಹಾಲು
ಕಬ್ಬಿಗ ಬೇಂದ್ರೆ ಕಾವ್ಯದ ಸಾಲು
ತಣ್ಣಗಾದರೆ ಬೆಲ್ಲದ ಸಿಹಿಯೆಡೆ
ಸವಿದರೆ ಅವು ಪರಮಾರ್ಥದ ಕಡೆ


31.01.2021

ಗಾಂಧಿ ಮತ್ತು ರಾಮ

ಗಾಂಧೀ ಅಹಿಂಸೆಯನ್ನು
ಹಾಸಿ ಹೊದ್ದು ಉಸಿರಾಡಿದ್ದು
ರಾಮ ಮಂತ್ರ ಜಪ ಮಾಡಿದ್ದು
ರಾಮ ನಾಮಧೇಯನೊಬ್ಬ
ಗಾಂಧಿಯ ಹಿಂಬಾಲಿಸಿದ್ದು
ಎದೆಗೆ ಹಿಂಸೆ
ಯ ಗುಂಡು ಸುರಿಸಿದ್ದು
ಕೊನೆ ಉಸಿರಲ್ಲೂ
ಗಾಂಧಿ ಉಸುರಿದ್ದೂ ರಾಮ
ನಾಲಿಗೆಯಲ್ಲಿ ನಲಿದಾಡಿಸಿದ್ದೂ
ಅಜರಾಮರ ರಾಮ!
ಬಿಡದ ನಂಟು
ಹರಿಯದ ಗಂಟು

ಹರಟೆ ಕಟ್ಟೆ

ಸಂಜೆಯತ್ತಲ ತನು
ಲವಲವಿಕೆಯಲಿ ಮನ
ದೂರವೆನಿಸದ
ಆಯಾಸವೆನಿಸದ ನಡಿಗೆ
ಅಲ್ಲಲ್ಲಿ ಬಿರುಕು
ಸಿಮೆಂಟುದುರಿದ
ಕೆಂಬಣ್ಣದಿಟ್ಟಿಗೆಯ
ಕಾಲಿಳಿಬಿಟ್ಟು ಹರಟೆ
ಗೆ ಪಕ್ಕಾದ ಪಟ್ಟಾಂಗ ಕಟ್ಟೆ

ದಿವಸಗಳ ದವಸ
ಹೊತ್ತ ಬಂಡಿಯವರು
ಸುದ್ದಿಗಳ ಕೊಡಕೊಳ್ಳುವವರು
ಬದಲಾದ ಸಂತೆ ಬೀದಿಗೆ
ದೂರುತ್ತಾ ಆಗಾಗ ನಿಟ್ಟುಸಿರು
ಪುಕ್ಕಟೆ ಪುರಾಣದವರು

ಲಲನೆಯರ ನಗೆಯಿಂದ
ಅಜ್ಜಿಅಳುವರೆಗೆ
ಉಂಡೆಗಟ್ಟಿದ ನೂಲ
ಗೋಜಲಿಲ್ಲದ ಬ್ರಹ್ಮಗಂಟು
ಬಿಡಿಸಿ ನೋಡುವ ತರಲೆ
ರಹಸ್ಯ ಜಾಲ ಭೇದಿಸಿದ
ಗಟ್ಟಿ ಟೊಳ್ಳು ಡೊಳ್ಳು ಹೊಟ್ಟೆ
ಕಾಯದವರ ಲೀಲೆ!

ಮಡದಿ ಹಂಗಿಸಿದ ಮುಖ
ಮಕ್ಕಳಾಡಿದ ವ್ಯಂಗ್ಯ
ಎದುರು ಮನೆ ಮಾನವರ
ನಿರ್ಭಾವ‌ ಮುಖ ಮರೆತು
ಮಿಕ್ಕಿರುವ ಇವರಲ್ಲೆ ಮೆರೆವ
ಅಟ್ಟಹಾಸದ ತವಕ

ಆಗುಹೋಗುಗಳ ಗೊಡವೆ
ಹಾದುಹೋಗುವವರ ನಡುವೆ
ಕೆದಕು ಕುತೂಹಲ
ಅರ್ಧ ಲೋಟದ ಕಾಫಿ
ಸುರುಳಿ ಸಿಗರೇಟು ಹೊಗೆಗೆ
ಸಹಸ್ರಾರಕ್ಕೆ ಚಿಟಿಕೆ ನಶ್ಯ
ದ ಘಾಟು, ಕಟ್ಟೆ ಪಕ್ಕದ ಖುಲ್ಲ
ಹೋಟೆಲ್ಲು ಗಲ್ಲದ ಮೇಲೋಬ್ಬರು
ತಂಬಾಕು ಮೆಲ್ಲುತ್ತಾ
ನೋಟಿಗೆ ಚಿಲ್ಲರೆ ಕೊಡುವವರು

ನಿರಾಶೆ ಮಳೆಗೆ ಕೊಡೆಹಿಡಿದು
ಹೆಜ್ಜೆ ಹಗುರಾಗಿಸುವ
ರಾಡಿ ತಿಳಿಯಾಗಿಸುವ
ಮೆಟ್ಟಲಿರುವ ವೈರಾಗ್ಯ ಅಟ್ಟುವ
ರಾತ್ರಿ ನಿದ್ರೆಗೆ ಉಪಾಯಗಳ
ಆವಿಷ್ಕಾರದ ಮಗ್ಗುಲು ಬದಲಿಸುವ
ಕಳೆವ ಲೆಕ್ಕದವರು ಕಲೆವ
ಬೀಳ್ಕೊಡುಗೆಯಲಿ ನಾಳೆಯ
ಆಸೆ ಹೊತ್ತಿಸುವ ಸೋಮಾರಿ ಕಟ್ಟೆ

(Published in:https://panjumagazine.com/?p=17629}

ಜೀವೋತ್ಸವ

ಜೀವೋತ್ಸವ

1

‌ಆ ವಠಾರದಿಂದ ನಿತ್ಯ ಕೇಳುತ್ತದೆ
ಮಕ್ಕಳ ನಗು ಕೇಕೆ ಚಪ್ಪಾಳೆ…

ಅಲ್ಲಿ ಶಾಲೆಗಿನ್ನೂ ಸೇರದ ಮಕ್ಕಳು
ಪುರಾಣ ಪುಸ್ತಕ ಮುಟ್ಟದ ವೃದ್ಧರು
ಮೊಬೈಲು ಹಿಡಿಯದ ಹೆಂಗೆಳೆಯರು
ಇರುವ ಪುರಾವೆ ಇವು
ಜೀವೋತ್ಸವದ ತಾಣವೂ!

2

ಎಳೆಯ ಮುಖದಲ್ಲಿ ನಗು ಅರಳಿದೆ
ಎಲ್ಲರೊಂದಿಗೆ ಬೆರೆತು ಆಡಿದೆ
ಅಂದರೆ ತಿಳಿಯುತ್ತದೆ
ಟಿವಿ ಪರದೆ ದೂರ ಸರಿದಿದೆ
ಮೊಬೈಲು ಚಟ ಅಂಟದೆ
ಮಗು ಮಗುವಾಗಿದೆ