ಲಯದ ಬಜೆಟ್ಟು

Vishwavani-BNG-BNG-06032020-01

ವಿಶ್ವವಾಣಿ ಪತ್ರಿಕೆಯ ಸುದ್ದಿಗಾರ
ಕವಿಯೂ ಕೂಡಾ
ಬೆಲೆ ಹೆಚ್ಚಿರುವ ಸುದ್ದಿಯೊಳಗೆ
ತುಂಬಿರವ ಹನಿಗವನ ಹಾಡ
ಆಯವ್ಯಯಕ್ಕಿಟ್ಟರೆ ಒಳ್ಳೆ ಲಯ
ಓದುಗನಿಗಿರದು ಬಜೆಟ್ಟು ಭಯ

(Courtesy:ViShwavani News Paper)

ವಸಂತ – ಎರಡು ಹನಿಗವನ

birds

bird1

ಸಾಣೆ

 

ರಾತ್ರಿ ಅಚಾನಕ ಮಳೆ ಸುರಿದು

ಹೊಳೆವ ಬೆಳಗು

ವಸಂತನ ಸೊಂಪಿಗೆ

ಹಕ್ಕಿ ಹೊರಳಿಸಿ ಕೊರಳು

ಹಿಡಿದಿದೆ ಸಾಣೆ ಇಂಪಿಗೂ!

 

ಇನಿಯಳ ಸೆಳೆವ

ಹಕ್ಕಿಯ ಕಲೆ ಎಂಥ ಸೊಬಗು !!

 

sparrow2

ಯಾವ ಘರಾನ

 

ಎಷ್ಟು ತೆರನಾದ ನಾದಗಳಿವು

ತಾಲಮಾನಗಳ ಅರಿಯದವು

ಇಂಪನೆಂದಿಗೂ ತೊರೆಯದವು

ಯಾವ ಘರಾನದ ಹಕ್ಕಿಗಳಿವು!

 

(pics courtesy:Pixabay)

ವಸಂತನ ಹಕ್ಕಿಗಳು

swallow

ರೂಪಕಗಳು

 

 ಶಿಶಿರದಲ್ಲಿ ಅವಿತ

ಕೊರಳ ಬಿಸಿಯಾರದ ಮಾತು

ಹೊಸ್ತಿಲೇರಿದ ಹೊಸ ಋತು

ಒಡೆವ ಸಂತಸದ ಚಿಗುರು

ಚಿಲಿಪಿಲಿ ಕುಕು ಕಲರವ ಕೇಕೆಗಳು

ವಸಂತನಿಗಂಟಿದ ರೂಪಕಗಳು

 

rainbow-lorikeets

ಕಾಲರ್ ಟ್ಯೂನ್

 

ವಸಂತನಿಗೆ ವೈವಿಧ್ಯದ

ಕಾಲರ್ ಟ್ಯೂನ್

ಹರಿಬಿಡುವ

ಬಣ್ಣ ಬಣ್ಣದ

ವಿಧವಿಧ ಹಕ್ಕಿಗಳು

 

(pic courtersy – Pixabay)

ಪ್ರೇಮಿಯೂ… ಪ್ರಾರ್ಥನೆಯೂ

img_4413

ಅವಳು ಆಗಮಿಸುವಾಗಲೆಲ್ಲ
ನನ್ನೊಳಗೆ ಉಸುರುತ್ತವೇಕೆ ಆಸೆ
ಕಂಡಾಗ ಇವಳ ನಡೆಯ ಹುರುಪು
ಹೃದಯದೊಳಗೇಕಿಷ್ಟು ಬಿಸುಪು

ಸ್ಪುರಿಸಿ ಅವಳಾಗಮನದ ಬೆಳಕು
ಒಳಗಿನಾಸೆ ದರ್ಶನವಾಗಬಹುದೆ!
ಯಾರವಳ ಮೆಚ್ಚು ತಿಳಿಯಬಹುದೆ
ಗಟ್ಟಿ ಗುಟ್ಟು ನಿಚ್ಚಳವಾಗಬಹುದೆ?

ಸುಡುವಯಸ್ಸು ಜಾರಿದ ನಡು
ವಯಸ್ಸಿನ ಜಾಣೆ ಈ ಮಂದಸ್ಮಿತೆ
ತುಟಿ ಪದಗಳನರಳಿಸುವ ಪ್ರಸನ್ನೆ
ಪ್ರಚ್ಛನ್ನ ಪ್ರೇಮಸೋಂಕಿನ ವದನೆ !

ಪದ ಪದಗಳ ಪೋಣಿಸಿ ಪಲುಕಿ
ಮಾಲೆ ಮಾಡುವ ಚೆಲುವೆ ಚಾಲಾಕಿ
ಅವಳುಸುರುವಾಗಿನ ನುಡಿ ಲಾಲಿತ್ಯ
ರಾಗ ಮಾಲಿಕೆಯ ಸುಸ್ವರ ಸಾಹಿತ್ಯ!

ನಿವೇದಿಸಿ ನಿರಾಳನಾಗುವೆನೆಂದ ಕ್ಷಣ
ಅವಳೊಳಗೆ ಹೊಳೆವ ಹುಸಿ ಜಾಣತನ
ಸುರಿಸಿ ಸುಳ್ಳು ಹರಿಸಿ ಹುಚ್ಚಿನ ಹೊಳೆ
ತೋಯಿಸಿ ಮಿಂಚುವ ಸಂಚಿನ ಎಳೆ !

ಎನಿತೋ ವರ್ಷ ಕಾಯ್ದಿಟ್ಟ ಸಲ್ಲಾಪ
ಅದುಮಿಟ್ಟ ಆಸೆ ಗೂಡ ಪಂಜರದ ಹಕ್ಕಿ
ಹಾರಿಸುವಳೆಂಬ ಭ್ರಮೆನಿರಸನಿಸಿ
ಹೊದೆಯುತ್ತಿದ್ದಾಳೆ ಗೂಢತೆಯ ಹೆಕ್ಕಿ

ಉತ್ಸುಕತೆಯಲ್ಲಿಅವಳ ಕಣ್ಣ ನೋಟ
ಅಷ್ಟೇ ಜಾಗರೂಕತೆಯ ಕಳ್ಳ ಆಟ
ಒಳಗಿನಾಸೆ ಉಳಿಸುವ ಕೆಂದುಟಿಯ
ತುದಿಯ ತುಂಟ ನಗುವಿನ ಪಾಠ!

ಸಮಯ ಜಾರುತ್ತ ಸಂಯಮದ ಕಟ್ಟೆ
ಒಡೆಯದಂತಿರಿಸುವ ಕವಾಯಿತು
ಈ ಗಟ್ಟಿಗಿತ್ತಿಯಲ್ಲಿ ಬತ್ತದ ಹೊಸತು
ಮತ್ತೂ ಒಸರುವ ಜೇನು ಮಾತು

ಕ್ಷಣ ನಿಮಿಷ ಘಂಟೆಗಳೆ ಸ್ತಬ್ಧಿಸಿರಿ
ದಿನಮಾನಗಳೆ ಉರುಳಿ ಹೋಗದಿರಿ
ವರ್ಷಗಳಿಗೆ ಇನಿತೂ ಎಡೆಗೊಡದಿರಿ
ಪರಿವೆ ಇಲ್ಲದ ಕಾಲವ ಮಲಗಿಸಿರಿ!

ವರ್ತಮಾನವೆ ನಿಲ್ಲು ನಿಲ್ಲು
ನಲ್ಲೆ ಮೇಲಿನ ನೆರೆ ದಾಳಿ ಕೊಲ್ಲು
ಇಂತಿದ್ದ ಪಾತರಗಿತ್ತಿ ಅಂತೆಯೆ ಇರಲಿ
ಮುಂದಿಗೂ ಎಂದಿಗೂ ಹಾರುತ್ತಲಿರಲಿ

ಹರೆಯದ ಪೊರೆ ಕಳಚುತ್ತಿರುವವಳಿಗೆ
ಕನಸ ಕೊಬ್ಬಿಸುವ ನಲ್ಲ ನಾನಾಗುವರೆಗೆ
ಅವಳ ಮಾತಿನ ಪರಿಗೆ ಸೋತವನಿಗೆ
ಗರಿಬಿಚ್ಚುವವರೆಗು ಕಾದೇನು ಗೆಲ್ಲುವರೆಗೆ

ಅಯ್ಯಾ, ದಿನವೆ ಉರುಳಬೇಡ
ವರ್ಷಗಳಿಗೆ ಎಡೆಗೊಡಬೇಡ !

(http://surahonne.com/?p=13548  ಪ್ರಕಟಿತ)

 

ಲಡ್ಡು ಮತ್ತು ಛೋಟ ಭೀಮ್

bheem-png

ಪುಟ್ಟ ನೋಡೋದು ಒಂದೆ ಕಾರ್ಟೂನು
ಛೋಟಾ ಭೀಮ್ ಗೆ ಇವ ದೊಡ್ಡ ಫ಼್ಯಾನು
ಟೀವಿ ಮುಂದೆ ಕುಳಿತು ರಿಮೋಟು ಹಿಡಿದ್ರೆ
ನಗು ಚಪ್ಪಾಳೆ ಮತ್ತೆ ಬರೋಲ್ಲ ನಿದ್ರೆ

ಕಣ್ಬಿಟ್ಟು ನೋಡ್ತಾನೆ ಭೀಮ್ ನ ಆಟ
ತುಂಬಾನೆ ಮೆಚ್ತಾನೆ ಅವನೋಡೊ ಓಟ
ಗೆಳೆಯರ ಜೊತೆಗೆ ಭೀಮ್ ನ ಒಡನಾಟ
ಶತ್ರು ಮೇಲೆ ಮಾತ್ರ ಭಾರಿ ಹೊಡೆದಾಟ

ಆದ್ರೂನು ಪುಟ್ಟಂಗೆ ಆಶ್ಚರ್ಯ ಒಂದೆ
ಭೀಮ್ ತುಂಬಾನೆ ಲಡ್ಡು ತಿಂತಾನೆ
ಲಡ್ಡುನಿಂದ ಹೇಗೆ ಶಕ್ತಿ ಬರ್ಬಹುದು
ಅನುಮಾನ ಅವ್ನಿಗೆ ಹೇಗೆ ನಂಬೋದು

ಹೊಟ್ಟೆಗೆ ಈ ಲಡ್ಡು ಅಪಾಯ ಗೊತ್ತ
ಹಲ್ಲು ಕೂಡ ಹಾಳು ತಿನ್ಬಾರ್ದು ನಿತ್ಯ
ಡಾಕ್ಟರ್ ಪುಟ್ಟಂಗೆ ಹೇಳಿದ್ದು ಸತ್ಯ
ತಿಳಿಸ್ಬೇಕು ಬೇಗನೆ ಭೀಮಂಗೆ ವಿಷ್ಯ

ಸಿಕ್ಕಿದ್ರೆ ಒಂದ್ಸಲ ಆ ಛೋಟ ಭೀಮು
ಡಾಕ್ಟರ್ ಹತ್ರ ಬುದ್ಧಿ ಹೇಳಿಸ್ಲೆ ಬೇಕು
ಲಡ್ಡು ಬಿಟ್ಟು ಬರಿ ಹಣ್ಣುತರಕಾರಿ
ತಿಂದ್ರೆ ಬೆಳೀತಿದ್ದ ಅವನು ಎತ್ರಕ್ಕೆ ಭಾರಿ

(ವಿಶ್ವವಾಣಿ-ವಿರಾಮ-ಲಾಲಿ ಪಾಪು ದಿ.೦೫.೦೨.೨೦೧೭)

ಅವನಾಗದ ನಾನು

oldman

ದಪ್ಪ ಹಾಸಿಗೆಯ ಮೇಲೆ
ಅಪ್ಪನ ಅಪ್ಪ
ಸವೆದ ದೇಹ ಉಳಿಸಿಕೊಂಡು
ಏನನ್ನೊ ಗೊಣಗುತ್ತ ಕುಳಿತಿದ್ದ

ನಾನು ಅವನ ಕಾಲಕೆಳಗೆ
“ಅಜ್ಜ” ಅಂದೆ
“ಯಾರು ?”
ಕಿರುಕಣ್ಣ ಕಿರಿದು ಮಾಡಿ
ನೋಡಿಯೇ ನೋಡಿದ

“ನಾನು ಅನಂತ”

“ಯಾವ ಅನಂತನೊ?
ಇದೇ ಹೆಸರಿನ
ನನ್ನ ಮೊಮ್ಮಗನಿದ್ದ
ಅವನ ತಂಟೆಯೂ
ದಡ್ಡ ಬುದ್ಧಿವಂತಿಕೆಯೂ
ನನ್ನ ಹೆಗಲ ಬಿಟ್ಟಿಳಿಯದ ತುಂಟಾಟವೂ

ಈಗ ಹೇಗಿದ್ದಾನೊ ಏನೊ?
ಜ್ಞಾನಕ್ಕೆ ದೇಶ ಬಿಟ್ಟ
ದಂಡಿ ದುಡಿಯಲು ಇಲ್ಲಿನ ಮೋಹ ಬಿಟ್ಟ
ಹಸಿವೆಂದು ಅಲ್ಲಿಯದನ್ನನುಭವಿಸಿದ
ಬೇರು ಇಳಿಯದಲ್ಲಿ ಬೆಳೆಯಬೇಕೆಂದ
ಆ ಪರಪುಟ್ಟನ ಈ ದೃಷ್ಟಿ ಮಂಜಾದವನು
ನೋಡಿಯಾನೇನು?”
ಅಜ್ಜ ವಟಗುಟ್ಟಿ ಒಳ ಆಸೆ ಬಿಚ್ಚಿಟ್ಟ

ಸಾವು ಸಮೀಪಿಸಿದಲ್ಲಿರಿಸಿಕೊಂಡು
ಯೌವನದ ನೆನಪುಗಳಲ್ಲಿ
ಕನಸುಗಳಷ್ಟನ್ನೆ ಉಳಿಸಿಕೊಂಡು
ಭೂತವ ರಮಿಸುತ್ತ
ವರ್ತಮಾನವ ಕಳೆದುಕೊಂಡ
ಭವಿಷ್ಯವಿಲ್ಲದ ಅಜ್ಜ!

ನಾನೆ ಅವನು
ನಿನ್ನ ಅವನಂತಾಗದವನು
ಕನಸ ಕೂಸಿನ ಗುರುತು
ಹೆಗಲ ಸವೆಸಿದವನೊಳ ಹೊಕ್ಕು
ಹೇಳುವುದು ಹೇಗೆ
ಅವನ ಭ್ರಮೆಯನ್ನು
ನನ್ನ ಭ್ರಮಣೆಯನ್ನು?!

(ಚಿತ್ರಕೃಪೆ: ಅಂತರ್ಜಾಲದಿಂದ)

(ಕನ್ನಡ ಪ್ರತಿಲಿಪಿಯಲ್ಲಿ ಪ್ರಕಟ: Link: http://kannada.pratilipi.com/anantha-ramesh/avanagada-nanu)

ಬಿಡು

light

ಅಸ್ತವ್ಯಸ್ತಗಳೆ
ಅಸಹನೀಯತೆಗಳೆ
ಅಲ್ಪ ಅಹಮುಗಳೆ
ಆಟಾಟೋಪಗಳೆ
ಅಗದೀ ಬಿಡಿ
ನನ್ನೊಳಗ ನರಳುವಿಕೆಗಳೆ
ಹೊರಟು ಬಿಡಿ

ಅಸಹಾಯಕತೆಗಳೆ
ಅಪ್ರಮಾಣಿಕತೆಗಳೆ
ಅಸೂಯೆ ಆಮಿಷಗಳೆ
ಅಸಹ್ಯ ಲೋಲುಪತೆಗಳೆ
ಒಡನೆ ಬಿಡಿ
ಕಾಮ ಕ್ರೋಧಗಳೆ ನನ್ನ ಬಿಡಿ
ಒಳ ನರಕಗಳೆ ತೊಲಗಿ ಬಿಡಿ

ಮೋಹ ಮಾಯೆಗಳೆ
ದರ್ಪ ದ್ರೋಹಗಳೆ
ಕಪ್ಪು ಕಪಟಗಳೆ
ವ್ಯಸನ ವೈಷಮ್ಯಗಳೆ
ಜರೂರು ಬಿಡಿ
ವ್ಯಂಗ್ಯ ವ್ಯಾಧಿಗಳೆ
ಸುಡು ಸಂಶಯಗಳೆ ಸರಿದುಬಿಡಿ

ಆರ್ದ್ರ ಭಾವಗಳೆ
ಸುಪ್ತ ಭರವಸೆಗಳೆ
ಧೈರ್ಯ ಧೀಮತೆಗಳೆ
ಪಥಕ್ಕೆ ಪಾದಗಳ ಊರಿಸಿಡಿ
ಹಚ್ಚಿರೊಮ್ಮೆಲೆ ಸೊಗದ ಸೂಡಿ
ನಲುಮೆ ಬೆಳಕ ಹರಡಿಬಿಡಿ
ನಲಿವಿನಲೆಗಳೆ ನಿರುತವಾಗಿಬಿಡಿ

ತಾಳ್ಮೆ ಸಹನೆಗಳೆ
ನಲ್ಮೆ ಬಲುಮೆಗಳೆ
ಭಾವ ಬಂಧುರಗಳೆ
ಹಸನು ಹೆಜ್ಜೆಗಳ ಪುಟಿಸಿಬಿಡಿ
ಜೀವ ಜಾಲಗಳ ನೆರಳಾಗಿಬಿಡಿ
ಆಗಮಕ್ಕೆ ಆಗರವೆನಿಸಿಬಿಡಿ
ಒಳ ತಳದ ತಮವ ಬೆಳಗಿಸಿಡಿ

(ಚಿತ್ರ:ಅಂತರ್ಜಾಲದಿಂದ)

(ಕನ್ನಡ ಪ್ರತಿಲಿಪಿಯಲ್ಲಿ ಪ್ರಕಟ: Link: http://kannada.pratilipi.com/read?id=6134947126444032&ret=/anantha-ramesh/bidu)

ಕಣ್ತೆರೆ

radhe

ಅವಳ ಕೈ ಹಿಡಿದು

ಕೃಷ್ಣ ಕೇಳುತ್ತಿದ್ದಾನೆ

’ನಿನ್ನ ಕನಸು ನನಗೇಕೆ ಬೀಳದು ಚೆನ್ನೆ?’

ಗಾಳಿ ತೀಡಿ ನಿದ್ರೆ ಹರಿದು

ಕೃಷ್ಣ ತೆರೆದ ಕಣ್ಣು

ರಾಧೆ ನೇವರಿಸುತ್ತಿದ್ದಾಳೆ ಅವನವೇ ಕೆನ್ನೆ !

(ಚಿತ್ರ ಕೃಪೆ: ಅಂತರ್ಜಾಲ)

 

ಒಂದು ಶಾಪಿಂಗ್ ಸಂಜೆ

A man sells bangles and other jewelry in a market, Haridwar, India

ರಸ್ತೆಯಂಚಿನಲ್ಲಿ ಸಣ್ಣ ಸಣ್ಣ
ಗುಪ್ಪೆಗಳಲ್ಲಿ ಎಷ್ಟೊಂದು ಬಳೆ
ಬೆಡಗ ಬಲೆ ಹೊಳೆವ ಶಿಲೆಯ
ಚೂರುಗಳ ಪೋಣಿಸಿ ಮಾರುವ
ಬಿಳಿ ಕುರುಚಲ ಕರಿ ಮೊಗದ ಹಿರಿಯ

ಅಮ್ಮನ ಕಿರು ಬೆರಳ ಹಿಡಿತ ಸರಿಸಿ
ಕಿಶೋರಿ ಪುಟಿದು ಓಡಿ
ಕಣ್ಣನಗಲಿಸಿ ಸಣ್ಣ ನಗುವಲ್ಲಿ
ಕೇಳುತ್ತಿದ್ದಾಳೆ,
” ಮಾಮ, ಅಮ್ಮ ಬರುತ್ತಾಳೆ
ಬೆರಳು ಕೈ ಕಾಲು ಕೊರಳ ತುಂಬಾ
ತೊಡಿಸುತ್ತಾಳೆ ಕುಸುರಿ ಮಾಡಿದ
ಬಣ್ಣ ಬಣ್ಣದ ಸರ ಉಂಗುರ
ಹಸುರು ಕೆಂಪಿನ ಬಳೆ
ಎಷ್ಟು ಇವೆಲ್ಲವುಗಳ ಬೆಲೆ?”

’ಮನಸೆಳೆವ ಕಣ್ಣ ತುಂಬುವ
ಮುಖದಗಲ ಮೋದ ಹರಡುವ
ಈ ಕುಸುರಿ ಕೆಲಸಗಳು
ನಕ್ಷತ್ರಗಳ ತುಂಡುಗಳೇನು
ಆಕಾಶದಿಂದ ಇಳಿಸಿಕೊಂಡದ್ದೇನು
ಗಿಳಿ ನವಿಲುಗಳು ಕೊಟ್ಟ ಬಣ್ಣ ಹಚ್ಚಿ
ಈ ಚಿಟ್ಟೆಗಳ ಸೃಷ್ಟಿಸಿದೆಯೇನು
ಇವು ಮೊನ್ನೆ ಗುಡುಗಿದ ಮೋಡ
ಮಧ್ಯದ ಮಿಂಚೇನು
ನಕ್ಕ ಕಾಮನಬಿಲ್ಲ ಉದುರುಗಳೇನು
ಅಜ್ಜಿ ಹೇಳುವ ಕತೆಯ ರಾಜ
ಕುಮಾರಿಯ ಒಡವೆಗಳೇನು!’
ಸಂಭಾಷಿಸುವ ತವಕಿ
ಆದರವಳಚ್ಚರಿಯ ಎತ್ತರ
ಮುಟ್ಟದ ಭಾಷೆ  ಗಿರಕಿ!

ಜಗದ ಸೋಜಿಗಕ್ಕೆ ಅರಳಿದ
ಅವಳ ಕಣ್ಣ ಹೊಳಪು
ಲಲ್ಲೆಗರೆದುಕೊಂಡ
ತುಸುವೆ ಉಬ್ಬಿದ ಕದಪು
ಪುಟ್ಟ ಚೀಲ ಗಟ್ಟಿ ಹಿಡಿದು
ಅಮ್ಮನರಸುವ ಹುರುಪು

ಬೆರಳ ಹೊರಳಿಗೆ ಜಾರಿ
ಹೋದ ಅರೆ ಘಳಿಗೆಯಲ್ಲೆ
ಕಣ್ಣ ಹನಿಸಿಕೊಂಡವಳು
ಅರಸು ಕಂಗಳ ಹರವಿ
ಹಿಡಿದು ಮಗಳ ಬರಸೆಳೆದಪ್ಪಿದಳು

ಕೋಲ್ಮಿಂಚಿನ ಸರ
ಕಾಮನಬಿಲ್ಲ ಬಳೆ
ತಲೆ ತುಂಬುವ ಚಿಟ್ಟೆಗಳಾರಿಸಿ
ಬೆಲೆಗೆ ಕೊಸರಿಸಿ ಚೀಲ ತುಂಬಿಸಿ …
ಆಯತಪ್ಪದೆ ನಡೆದವು
ದಾರಿಗುಂಟವು ಹೆಜ್ಜೆಯುಲಿದವು
ಹೊಸೆದವು ಕಿರುಬೆರಳುಗಳು
ಕರುಳ ಬಳ್ಳಿ ಮತ್ತೆ ಬೆಸೆದವು !

ಕುಣಿವ ಕಿಶೋರಿ ಅಮ್ಮನೊಡನಾಡಿ
ಇಬ್ಬರ ಕುರುಳ ಹಾರಿಸಿದವು ತೀಡಿ
ಸಂಜೆ ಬೀಸುವ ಆ ಸೊಂಪು ಗಾಳಿ

(‘ಸುರಹೊನ್ನೆ’ ಇ ಪತ್ರಿಕೆ: http://surahonne.com/?p=13064)

ಪ್ರಜ್ಞೆಯೆಂಬ ಶಾಪ

broken-heart

ನಿನ್ನ ಕಣ್ಣ ಎವೆಗಳಲ್ಲಿ
ಭಾರವೇತಕ್ಕೆಂದು ಚಿಂತಿಸಿದೆ

ಮ್ಲಾನ ಮುಖದಲ್ಲಿ
ಅಧೀರತೆಯ ಸುಳುಹು
ಕಾಣುವುದೇಕೆಂದು ಯೋಚಿಸಿದೆ

ಗಲಿಬಿಲಿಗಳ ನಿನ್ನ
ಹೆಜ್ಜೆಗಳಲ್ಲಿ ಆಯತಪ್ಪುವುದು
ಏಕೆಂದು ಪ್ರಶ್ನಿಸಿಕೊಂಡೆ

ನನ್ನ ಸಾಮೀಪ್ಯದ ಬಯಕೆ
ಬತ್ತಿಹೋಗುತ್ತಿರುವ ಕುರುಹು
ನಿನ್ನ ತುಟಿಗಳ ಬಾಗುವಿಕೆಯಲ್ಲರಿತೆ

ಮೌನ ಸಂಭಾಷಣೆಗಳಲ್ಲಿ
ಅಪಮೌಲ್ಯದ ನಿರ್ವಾಣ ಬೀಸಿ
ಒಡಲ ಸುಡುತ್ತಿರುವುದ
ಅನುಭವಿಸುತ್ತಿದ್ದೇನೆ

ಮುಗುದೆಯ ಮನಸ್ಸನ್ನರಿವ ಕಲೆ
ನನ್ನೊಳಗಿಟ್ಟವರಾರೆಂದು
ಕೊರಗುತ್ತಿದ್ದೇನೆ!

ಸಖಿ, ಅರಿವು ಎಚ್ಚರಿಸದಿದ್ದರೆ
ಎಷ್ಟೊಂದು ಸುಖವಿತ್ತು!
ಯಾಚಿಸುತ್ತಿದ್ದೇನೆ
ಪ್ರೇಮಕ್ಕೆ ಪ್ರಜ್ಞೆ
ಯ ಶಾಪ ಬೇಡವೆಂದು!!

(ಚಿತ್ರ ಕೃಪೆ:ಅಂತರ್ಜಾಲ)

(ಕನ್ನಡ ಪ್ರತಿಲಿಪಿಯಲ್ಲಿ ಪ್ರಕಟ:Link: http://kannada.pratilipi.com/anantha-ramesh/pragne-emba-shapa)