ಮೊದಲ ಸಾಲಿನ ಹುಡುಗಿ

Sitarist

 

 

 

 

 

 

 

 

ಸರಿಗಮಪದ ಹಿಡಿದು ತಂತಿಯ ಮೇಲೆ
ಹರಿಸಿ ಉಕ್ಕಿಸುವ ಆಲಾಪದಮಲು
ಎದೆಗೆ ಅಪ್ಪದ ಸಿತಾರಿನ ಮೇಲೆ
ಸರಿವ ಅವನ ಸಪೂರ ಬೆರಳುಗಳು

ಅವಸರದಲ್ಲಿ ತುಡಿವ ಸರಸದಂತೆ
ಏನೊ ಮುಚ್ಚಿಟ್ಟ ಗುಟ್ಟುಬಿಚ್ಚಿ ಕಿವಿಗೆ
ಪಿಸುಗುಟ್ಟುತ್ತಿರುವಂತೆ ಅವನ ತೆಳು
ತೆರೆದು ಮುಚ್ಚುವ ಎಸಳ ತುಟಿಗಳು

ಉದ್ದ ಕೂದಲ ಸರಿಸಿ ಹಿಂದಕ್ಕೊಗೆವ
ಠೀವಿಯ ಹೊಳಪಿನ ಭಾವ ಮುಖ
ಮುಚ್ಚಿಬಿಡುವ ದಟ್ಟ ಕಪ್ಪು ಕಣ್ಣುಗಳು
ಕಣ್ಣುಮುಚ್ಚಾಲೆಯಲ್ಲಿ ರಾಗದೆಳೆಗಳು

ಆಲಾಪಕ್ಕೆ ತಲೆದೂಗುವ ಒಳ ಆಸೆಗಳು
ತಾಳ ಲೆಕ್ಕಕ್ಕೆ ಪಕ್ಕಾಗದ ಹಸ್ತ ವ್ಯಸ್ತಗಳು
ಎಣಿಕೆ ತಪ್ಪುತ್ತಿರುವುದು ಅವನ ಹುಸಿನಗು
ವಿಗೆ ಕಾರಣವೆಂಬ ಸಣ್ಣ ಗುಮಾನಿಯೂ

ಕಣ್ಣರಳಿಸಿ ಮತ್ತವನ ಕಡೆಗೆ ತದೇಕ
ಶೆರ್ಲಾಕ್ ಹೋಮ್ಸನು ನಿಗೂಢದ
ಹಿಂದೆ ಬಿದ್ದಂತೆ ಸಂಶಯದ ಪಾತ್ರ
ಅವನ ಒರಟು ಬಾಹುಗಳ ನೋಟ

ತಬಲದೋಘ ಹಾರ್ಮೋನಿಯಮಿನಾರ್ತ್ರತೆ
ತಾನಪೂರದ ನಿರ್ಲಿಪ್ತತೆಯೊಳಗಣ ಆಪ್ತತೆ
ಕಾಪಿಟ್ಟ ಪ್ರೇಮ ತತ್ತಿಯಲ್ಲಿಣುಕಿದ ಜೀವ ಪರಿವೆ
ನೇವರಿಕೆಗೆ ಝೇಂಕರಿಸುವ ಸಿತಾರ ಸರಿಗೆ

ತಾರಕದಲ್ಲಿ ಕಛೇರಿ ಮುಗಿಸುವ ಕಾತರ
ಅವನೊಡನೆ ಸಾಥಿಗಳ ಉತ್ಕಟ ಪಾತ
ಸರಿದ ಸೀರೆಯ ಪಲ್ಲು ಒಪ್ಪವಿರಲೆಂಬ ಆಸೆ
ಲಾಸ್ಯ ಹಸ್ತಗಳಲ್ಲಿ ಪಲ್ಲವಿಸಿದ ಭರವಸೆ

ಮುಂಜಾವು ಕಿಟಕಿ ಬಳಿಯ ಗುಲಾಬಿ ಮೊಗ್ಗು
ಈಗ ಅರಳಿರಬಹುದೆನ್ನುವ ಅಚಾನಕ ಹಿಗ್ಗು
ಅವನ ಸಮೀಪ ನಿಲ್ಲುವ ತವಕ ಚಡಪಡಿಕೆ
ಓರಣಿಸುವ ಸೆರಗಲ್ಲು ಸಿತಾರ ರಾಗ ಬಯಕೆ

(http://www.panjumagazine.com/?p=12793)

(ಚಿತ್ರ ಕೃಪೆ: ಅಂತರ್ಜಾಲ)

2 thoughts on “ಮೊದಲ ಸಾಲಿನ ಹುಡುಗಿ

  1. “ಕಾಪಿಟ್ಟ ಪ್ರೇಮ ತತ್ತಿಯಲ್ಲಿಣುಕಿದ ಜೀವ ಪರಿವೆ
    ನೇವರಿಕೆಗೆ ಝೇಂಕರಿಸುವ ಸಿತಾರ ಸರಿಗೆ”

    !!!👍🙏😊

    ಓದುವವರನ್ನೇ ಮೊದಲ ಸಾಲಿನ ಹುಡುಗಿಯನ್ನಾಗಿಸಿ ಮಂತ್ರಮುಗ್ದರನ್ನಾಗಿಸಿ ಕೂರಿಸಿಬಿಟ್ಟ ಕವನ ಮಾಧುರ್ಯ. ಸಿತಾರದಂತೆ ಮನ ಮುಟ್ಟುವ ಆಲಾಪ 👏🏻👏🏻

ನಿಮ್ಮ ಟಿಪ್ಪಣಿ ಬರೆಯಿರಿ