ಪೊರೆ

khalelogo

ಇವನು ನನ್ನ ಕೊರಳಿಗೆ ತಾಳಿ ಕಟ್ಟಿ ಆಗಲೆ ಮೂರು ತಿಂಗಳುಗಳಾದುವು. ಮೊದಲೆರಡು ವಾರ ಆ ಊರಿನಿಂದ ಈ ಊರಿಗೆ, ಈ ಊರಿನ ಈ ಮನೆಯೊಳಗೆ, ಮನೆಯೊಳಗಿನ ಅವನ ರೂಮಿಗೆ ಕಾಲೂರುವ ಸಂಭ್ರಮದಲ್ಲಿ ಕಳೆದುಬಿಟ್ಟೆ.

ಹನಿಮೂನಿಗೆಂದು ಒಂದು ವಾರ ಊಟಿಗೆ ಹೋದದ್ದಷ್ಟೆ. ನೆನಪಿಡುವ ಮಧುಚಂದ್ರ ಅಂತ ನನಗಂತೂ ಅನ್ನಿಸಲಿಲ್ಲ. ಮತ್ತಷ್ಟು ದಿನ ಅವನ ಪಿಸುಗುಡುವಿಕೆಯ ಮಾತುಗಳಷ್ಟೆ ಈ ತುಂಬಿದ ಮನೆಯೊಳಗೆ ನನ್ನ ಕಿವಿಯಲ್ಲಿ ಮಾತ್ರ ಗುಣುಗುಣಿಸುತ್ತಿದ್ದವು. ಮತ್ತೇನೂ ವಿಶೇಷಗಳಿಲ್ಲವ ಅನ್ನುವ ಕುತೂಹಲವಿದ್ದರೆ, ಅದು ಸಹಜ. ಆದರೆ ಅಸಹಜವೆನ್ನಿಸುವಷ್ಟು ನಮ್ಮಿಬ್ಬರ ಮಧ್ಯೆ ಒಂದು ಪೊರೆ ಇರುವುದು ನನಗೆ ಮಾತ್ರ ಗೊತ್ತಿದೆ.

ಮದುವೆಗೆ ಮೊದಲ ಒಂಟಿ ಜೀವನದಂತೆ ಇಬ್ಬರದೂ.   ಅಪರಿಚಿತರು ಪರಿಚಯಮಾಡಿಕೊಳ್ಳುವಂತೆ, ದಿನವೂ ಗುಡ್ ಮಾರ್ನಿಂಗ್ ನಿಂದ ಬೆಳಗು ಮಾಡಿಕೊಳ್ಳುತ್ತೇವೆ. ಸ್ನಾನ ಆದರೆ ತಿಂಡಿಗೆ ಬನ್ನಿ, ತಿಂಡಿಯಾದರೆ ಆಫ಼ೀಸಿಗೆ ಹೊರಡಿಸು ಇತ್ಯಾದಿ. ಅಬ್ಬಾ, ಮೂರು ತಿಂಗಳು ಕಳೆದೆ. ನನಗೆ ನಿಜಕ್ಕು ತಿಳಿದಿದೆ. ಮದುವೆಯ ಸಂಭ್ರಮ ಹೊಸತಿನಲ್ಲಿ ಇಬ್ಬರಲ್ಲು ಹೇಗಿರುತ್ತದೆಂದು. ಅದನ್ನು ಮದುವೆಗೆ ಮೊದಲೆ ಕಲ್ಪನೆ ಮಾಡಿ ಖುಷಿ ಪಟ್ಟಿದ್ದೆ. ಈಗ ಅನ್ನಿಸುತ್ತಿದೆ ಎಲ್ಲವೂ ಕಲ್ಪನೆಯಲ್ಲೆ ಚೆನ್ನ.

ಇವತ್ತು ಮದುವೆಯಾದ ತೊಂಭತ್ತೊಂದನೆ ದಿನ, ಬೆಳಿಗ್ಗೆ ಅವನು ಮೊದಲೆ ಎದ್ದುಬಿಟ್ಟಿದ್ದಾನೆ.   ನನ್ನ ಎಚ್ಚರವನ್ನು ಕಾಯುತ್ತಿದ್ದನೊ ಏನೊ. ಕಣ್ಣು ಬಿಟ್ಟಾಗ ಅವನ ನಗು ಮುಖ ಕಂಡೆ. ಗಂಡನ ನಗು ಮುಖ ಕಣ್ಣು ಬಿಡುತ್ತಲೆ ಕಂಡದ್ದರಿಂದ ಇರಬೇಕು ಒಳಗ ಸ್ವಲ್ಪ ಖುಷಿ ಆವರಿಸಿದೆ.

“ಗುಡ್ ಮಾರ್ನಿಂಗ್, ಇವತ್ತು ಸಂಜೆ ಹೊರಗೆ ಸುತ್ತಾಟಕ್ಕೆ ಹೋಗೋಣವ?’’

ಆಶ್ಚರ್ಯ ಸೂಚಕವಾಗಿ ಕಣ್ಣುಗಳನ್ನು ಅಗಲಿಸಿದೆ.

“ಸಂಜೆ ಐದಕ್ಕೆಲ್ಲ ರೆಡಿಯಾಗು’’

ಕಣ್ಣಿನಲ್ಲೆ ’ಎಲ್ಲಿಗೆ?’ ಕೇಳಿದೆ.

’ಅದು ಗುಟ್ಟು..’ ಪಿಸುಗುಟ್ಟಿದ.

ಏನೊ ಸಂಭ್ರಮ ಅವನಲ್ಲಿದ್ದಂತೆ ನನ್ನಲ್ಲೂ. ಹೊರಗೆ ಎಲ್ಲಿಗೆಂದು ತಿಳಿಯದು. ಸದ್ಯ, ದೇವಸ್ಥಾನಕ್ಕೆ ಕರೆದುಕೊಂಡು ಹೋಗದಿದ್ದರೆ ಸಾಕು ಅಂದಿತು ಮನಸ್ಸು! ತಕ್ಷಣ ಕೆನ್ನೆ ಬಡಿದುಕೊಂಡೆ!

ಕಾಯುತ್ತಿದ್ದ ಸಂಜೆ ತಡವಾಗಿಯೆ ಬಂತು ಅನ್ನಿಸಿತು. ಇಬ್ಬರೂ ಹೊರಟೆವು. ಆವನು “ಆಟೋ ” ಅಂದ. ಕುಳಿತಮೇಲೆ, ದೇವಸ್ಥಾನದ ಹೆಸರೊಂದು ಹೇಳಿದ.

“ದೇವಸ್ಥಾನ ಅಂತ ಮೊದಲೆ ಹೇಳುವುದಲ್ಲವ?” ಮೆಲ್ಲಗೆ ಕೇಳಿದೆ.

“ಅಲ್ಲ.. ಅಲ್ಲಿಗಲ್ಲ.. ಅದರ ಹಿಂದಿರುವ ದೊಡ್ಡ ಕೊಳಕ್ಕೆ.. ನಿನಗೆ ಅದನ್ನು ತೋರಿಸುತ್ತೇನೆ”

ಖುಷಿಯಾಯಿತು. ಆಟೋ ಕುಲುಕಾಟಕ್ಕೆ ಇಬ್ಬರೂ ಸ್ವಲ್ಪ ಹತ್ತಿರವೇ ಆದೆವು! ಗೆಳತಿಯರು ಛೇಡಿಸುತ್ತಿದ್ದದ್ದು ನೆನಪಾಯಿತು. ’ತಾಳಿ ಬಿಗಿಯುವುದೇ ತಡ. ನೀನವನಿಗೆ ಅಂಟಿಬಿಡುತ್ತೀಯ, ನೋಡುತ್ತಿರು.’

ಆದರೆ ಹಾಗೇನೂ ಆಗಲಿಲ್ಲ.   ಇಬ್ಬರೂ ಅಂದುಕೊಂಡಂತೆ ಅಂಟಿಕೊಳ್ಳಲಿಲ್ಲ.   ನನ್ನ ಅವನ ಬಗೆಗಿನ ಕುತೂಹಲ ಇನ್ನೂ ಉಳಿಸಿಕೊಂಡಿದ್ದಾನೆ. ಆಶ್ಚರ್ಯವೆಂದರೆ, ಅವನಿಗೇಕೆ ನನ್ನ ಬಗೆಗೆ ಕುತೂಹಲವಿಲ್ಲ!?

ಆಟೋ ಇದೀಗ ಆ ದೇವಸ್ಥಾನ ಬಳಸಿ ಮುಂದೆ ಹೋಗಿದೆ. ಐದು ನಿಮಿಷಗಳಾದಮೇಲೆ ಆಟೋದವನು ಹೇಳುತ್ತಿದ್ದಾನೆ. “ಇನ್ನು ಮುಂದೆ ಬರಲ್ಲ ಸಾರ್.. ರಸ್ತೆ ಸರಿ ಇಲ್ಲ. ನಡೆದುಕೊಂಡೆ ನೀವು ಆ ಕೊಳದ ಕಡೆ ಹೋಗಿ. ಸ್ವಲ್ಪ ಹುಷಾರು.”

ಇಬ್ಬರೂ ಇಳಿದೆವು. ಮೌನವಿದೆ. ಮಾತಾಡಿಸಲೆ. ಬೇಡ. ಅವನೇ ಮಾತಾಡಲಿ. ನಡೆಯುತ್ತ ನಡೆಯುತ್ತ ಕೊಳದ ಹತ್ತಿರ ಬಂದಿದ್ದೇವೆ. ಎದುರಲ್ಲಿ ದೊಡ್ಡ ಕೊಳ. ತಿಳಿ ಜಲ. ತಂಪಿನ ಗಾಳಿ. ಹಿಂದೆ ಹಿಂಡು ಹಿಂಡಾಗಿ ತಾಳೆ ಮರಗಳು. ಪಕ್ಕದಲ್ಲಿ ಸಪ್ತಪದಿ ತನ್ನೊಟ್ಟಿಗೆ ಮೆಟ್ಟಿದ ವರ! ಸುತ್ತೆಲ್ಲ ಪಸರಿಸಿದ ಪರಿಮಳ.

ಇಬ್ಬರೂ ಕುಳಿತೆವು. ಸ್ವಲ್ಪ ದೂರ….. ದೂರ. ನಾನು ಕುಳಿತಮೇಲೆ ಅವನು ಕುಳಿತ. ಹತ್ತಿರವೇ ಕೂರಬಹುದಿತ್ತಲ್ಲ!

ಸುತ್ತ ಮುತ್ತ ಕಣ್ಣಗಲಿಸಿ ನೋಡತೊಡಗಿದೆ. ಚಿಕ್ಕಂದಿನ ನೆನಪು ಮರುಕಳಿಸತೊಡಗಿದೆ. ನನ್ನೂರಿನ ತಾಳೆ ಹಿಂಡಿನ ಬದಿ ಅಮ್ಮನೊಡನೆ ಹೆಜ್ಜೆ ಊರುವಾಗ ಹೊರಳೆಗೆ ಅಡರುತ್ತಿದ್ದ ವಿಚಿತ್ರ ಘಾಟು. ಅಮ್ಮ ಅದು ಸಣ್ಣ ಅಕ್ಕಿಯ ಪರಿಮಳದಂತಿದೆ ಅನ್ನುತ್ತಿದ್ದಳು.   ನನಗೆ ಅನಿಸುತ್ತಿತ್ತು ಅದು  ಕಾಯಿಸಿದ ತುಪ್ಪದ ತೆರ. ಅಮ್ಮ ಅನ್ನುತ್ತಿದ್ದಳು,  ’ಹುಷಾರು ಹುಡುಗಿ, ಹಾವುಗಳ ಬೀಡು ಇಲ್ಲಿ. ಮುಳ್ಳು ಹಾದಿ.  ಉಡಗಳು ಓತಿ ಹಲ್ಲಿಗಳು, ಜಿಗಿವ ಕಪ್ಪೆಗಳೂ.’    ಆ ಪರಿಮಳದ ಆಸೆ ಎಷ್ಟೇ ಇದ್ದರೂ ಒಂಟಿಯಾಗಿ ನಾನಲ್ಲಿ ಎಂದೂ ಹೋಗಲೇ ಇಲ್ಲ. ಅಂಥ ಭಯ ಅಮ್ಮನ ಎಚ್ಚರಿಕೆಯಿಂದ ಮನಸ್ಸಿನಲ್ಲಿ ಬೇರೂರಿಬಿಟ್ಟಿತ್ತು.

ಈಗ  ನೆನಪಲ್ಲಷ್ಟೇ  ಅಂದಿನ  ಪುಟ್ಟ ಗೆಳತಿಯರೂ  ಬಂದು ಹೋಗುತ್ತಾರೆ.   ಆ ತಾಳೆ ಮರಗಳ ಬಳಿ ಗೆಳತಿಯರೊಡನೆ ಹೋಗುತ್ತಿದ್ದೆ.   ಪರಿಮಳದ ಸೆಳೆತ.     ಅವರು ಆಟವಾಡುವಾಗ  ಚಪ್ಪಾಳೆ ತಟ್ಟಿ ಕೂಗುತ್ತಿದ್ದರು, ’ಸಿರಿ…ಕೀಟ ಹಿಡಿವ ಕಪ್ಪೆ ನೋಡಿದ್ದೇವೆ. ಕಪ್ಪೆ ಹಿಡಿದ ಹಾವು ನೋಡಿದ್ದೇವೆ. ಹಾವು ಹಿಡಿದ ಗಿಡುಗ ನೋಡಿದ್ದೇವೆ’. ನಾನು ಕೇಳುತ್ತಿದ್ದುದು ಮಾತ್ರ, ’ನೋಡಿದ್ದೀರಾ ಪೊರೆ ಕಳಚುತ್ತಿರುವ ಹಾವು ?’. ಹಾಗೆ ಕೇಳಿದ್ದೇ , ಹೌಹಾರಿ ಓಡಿ ಹೋದ ಪೋರಿಯರು ನನ್ನ ಗೆಳತಿಯರು!

ನಿಜದ ಈ ನಿರ್ಜನ ಬಯಲಲ್ಲಿ ಭಯ ಊರತೊಡಗಿದೆ. ಕೈಹಿಡಿದವನ ಮಾರ್ಜಾಲದಾಟದ ಲಯ ಇದೀಗ ಶುರುವಾಗಬಹುದೆ?  ತಡೆರಹಿತ ವೇಗ ಅವನೊಳಹೊಕ್ಕ ಸಂಶಯ  ನನ್ನೊಳಗೆ  ನಿಬಿಡವಾಗುವ ಮುನ್ನ ಮತ್ತೇಕೊ ತೂಗುಯ್ಯಾಲೆಯಲ್ಲಿ ಮನಸ್ಸು. ಇಲ್ಲ…. ಸಂಶಯಗಳು ಮತ್ತು ನನ್ನೊಳಗೆ ಅವಿತಿರುವ ಸಣ್ಣ ಆಸೆಗಳು  ನಿಜವಾಗುತ್ತಿಲ್ಲ.   ಇಷ್ಟು  ದಿನಗಳಲ್ಲಿ  ಆಗದ  ಸಂಗತಿಗಳು  ಈಗ  ಆಗಲು ಪವಾಡವೆ ನಡೆಯಬೇಕೇನೊ!

ಅವನು ಹಾಗೆಯೆ ಅಲ್ಲಿಯೆ ಕುಳಿತಿದ್ದಾನೆ. ಏನೋ ಪ್ರಶ್ನೆಗಳ ಕೇಳಬೇಕೆಂಬ ಬಯಕೆ ಇರಬಹುದೆ?

ಬಹಳ ಸಮಯ ಹೀಗೇ ಮೌನದಲ್ಲಿ ಕಳೆದೆವು. ನನ್ನೊಳಗೆ ಮಡುಗಟ್ಟುತ್ತಿರುವ ಅವನ ಬಗೆಗಿನ ಅನುಮಾನಗಳನ್ನು ಮೆಲ್ಲಗೆ ದೂರ ಸರಿಸುವ ಪ್ರಯತ್ನ ಮಾಡಿದೆ.

“ಹೋಗೋಣವ?” ನನ್ನ ಪ್ರಶ್ನೆಗೆ ಬೆಚ್ಚಿದಂತೆ, ಮುಖ ನೋಡಿದ. ಮರುಮಾತಿಲ್ಲದೆ ಎದ್ದು ಹೊರಟ. ನಾನು ಅವನ ಹಿಂದೆ. ನಿರ್ಧಾರವೊಂದನ್ನು ಮನಸ್ಸಿನಲ್ಲಿ ಮಾಡಿಬಿಟ್ಟೆ. ನಾನಂದುಕೊಂಡದ್ದನ್ನು ಖಂಡಿತ ಮಾಡಲೆ ಬೇಕು. ಅವನ ಪ್ರತಿಕ್ರಿಯೆ ಹೇಗಿರಬಹುದು ಅಥವ ಅದು ಅನಾಹುತವೊಂದರ ಮುನ್ನುಡಿಯೂ ಆಗಬಹುದು. ಏನೇ ಆದರು ಸಂಯಮಕ್ಕೂ ಒಂದು ಮಿತಿ ಇದೆ. ಅಂದುಕೊಂಡದ್ದು ಆಗಿಬಿಡಲಿ!

ಹೋಗುತ್ತ ಅವನನ್ನು ಕೇಳಿದೆ. “ನಾಳೆ, ನಾನು ಡಾಕ್ಟರೊಬ್ಬರನ್ನು ನೋಡಬೇಕಿತ್ತು. ಹೋಗೋಣವ?”

“ಖಂಡಿತ ಹೋಗೋಣ. ಯಾವ ಡಾಕ್ಟರ್?”

“ಡಾ.ಪ್ರತೀಕ್ಷಾ”

“ಓ.. ಆಗಲಿ.. ಆಗಲಿ.. ನಾಳೆಗೆ ಅಪಾಯಿಂಟ್ಮೆಂಟ್ ತಗೊಳ್ತೀನಿ”

ನನಗೆ ಆಶ್ಚರ್ಯವೆನಿಸಿತು. ಅವನು ಸಲೀಸಾಗಿ ಒಪ್ಪಿಬಿಟ್ಟ, ಮತ್ತೇನೂ ಕೇಳದೆ! ಡಾ.ಪ್ರತೀಕ್ಷ ಎಲ್ಲರಿಗೂ ಪರಿಚಿತ ಮನೋವಿಜ್ಞಾನ ವೈದ್ಯೆ! ಅವನಿಗೆ ಕುತೂಹಲವಿರಬೇಕಿತ್ತು. ಈ ಡಾಕ್ಟರೆ ಏಕೆ ಎಂದು. ಇಲ್ಲ ಅವನೇನೂ ಕೇಳಲೇ ಇಲ್ಲ! ಪಾಪ ಅನ್ನಿಸಿತು!

ಮರುದಿನ ಡಾಕ್ಟರಲ್ಲಿ ಏನು ಮಾತಾಡಬೇಕೆಂದು ನಿರ್ಧರಿಸಿದೆ. ಆದರೆ, ಅವನ್ನೆಲ್ಲ ಇವನೆದುರಿಗೆ ಮಾತಾಡಬಾರದು.

ಬೆಳಿಗ್ಗೆ ಎದ್ದಾಗ ಪ್ರಫ಼ುಲ್ಲನಾಗಿದ್ದ. ಸ್ನಾನ, ಕಾಫ಼ಿ, ತಿಂಡಿ ಎಲ್ಲ ಆದಮೇಲೆ ಮನೆಯಲ್ಲಿ ಇಲ್ಲೇ ಷಾಪಿಂಗ್ ಎಂದು ಹೊರಟೆವು.

ಕ್ಲಿನಿಕ್ ಸರಿ ಸಮಯಕ್ಕೆ ತಲುಪಿದೆವು. ನಾನು ಹೇಳಿದೆ, “ಸ್ವಲ್ಪ ಡಾಕ್ಟರನ್ನ ಮಾತಾಡಿಸಿ ಬರುತ್ತೇನೆ. ಆಮೇಲೆ ಅವರು ನಿಮ್ಮನ್ನು ಕರೆಯುತ್ತಾರೆ. ಸಂಕೋಚ ಬೇಡ. ಅವರೊಟ್ಟಿಗೆ ಖುಲ್ಲ ಮಾತಾಡಿ”

ಡಾಕ್ಟರ್ ನಗು ಮುಖದಿಂದ ಮಾತಾಡಿಸಿದರು. ಅವರಿಗೆ ವಿವರಿಸತೊಡಗಿದೆ.

“ಡಾಕ್ಟರ್.. ನಮ್ಮ ದಾಂಪತ್ಯ ಸರಿ ಹೋಗಲು ನಿಮ್ಮ ಸಹಾಯ ಬೇಕಿದೆ. ನನ್ನ ಮದುವೆಯಾಗಿ ಮೂರು ತಿಂಗಳಾಯಿತು. ಮೊದಲ ದಿನದಿಂದಲೆ ಅವರನ್ನು ಅಬ್ಸರ್ವ್ ಮಾಡ್ತಾ ಇದ್ದೇನೆ. ಎಲ್ಲ ವಿಷಯಗಳಲ್ಲು ನಾರ್ಮಲ್ ಇದಾರೆ. ಆದರೆ, ನನ್ನೊಟ್ಟಿಗೆ ಗಂಡನ ಥರ ಬಿಹೇವ್ ಮಾಡ್ತಾ ಇಲ್ಲ. ಏಕಾಂತದಲ್ಲಿರುವಾಗ ಏನೋ ಗಹನ ಯೋಚನೆಯಲ್ಲಿರುವಂತೆ. ನನ್ನ ಮುಟ್ಟಲೂ ಸಂಕೋಚ ಪಡುತ್ತಾರೆ. ಈ ಬಗ್ಗೆ ಸ್ವಲ್ಪ ಸ್ಟಡಿ ಮಾಡಿದೆ. ಅವರಿಗೆ ಅಫೆನ್’ಫಾಸಂಫೋಬಿಯ ಸಿಂಪ್ಟಮ್ಸ್ ಇದ್ದಂತಿದೆ. ಇದರ ಬಗ್ಗೆ ನಿಮಗೆ ಚೆನ್ನಾಗೆ ಗೊತ್ತಿರುತ್ತೆ. ಇವರ ನಡವಳಿಕೆ ಹಾಗೆಯೇ ಕಾಣಿಸುತ್ತೆ. ನನ್ನ ಮುಟ್ಟಲೂ ಭಯ, ಮಾತಾಡಲೂ ಭಯ.. ಹತ್ತಿರ ಬಂದಾಗ ಅವರ ಕೈ ಸೂಕ್ಷ್ಮವಾಗಿ ನಡುಗುತ್ತಿರುತ್ತೆ. ಇವನ್ನೆಲ್ಲ ನಾನು ಅವರಿಗೆ ಹೇಳಿ ಮತ್ತಷ್ಟು ಮುಜುಗರ ಮಾಡಲು ಇಷ್ಟವಿಲ್ಲ. ಹಾಗೆ ಹೇಳುವುದರಿಂದ ಮತ್ತೇನಾದರೂ ತೊಂದರೆಗಳು ಎದುರಾದರೆ ಅಂತ ಸುಮ್ಮನಾಗಿದ್ದೇನೆ. ಈ ದಿನದಿಂದ ಅವರಿಗೆ ಕೌನ್ಸೆಲಿಂಗ್ ಪ್ರಾರಂಭಿಸಲು ಸಾಧ್ಯವಾ?”

ಹೊರಬಂದೆ, ಅವನಿಗೆ ಹೇಳಿದೆ, “ಡಾಕ್ಟರನ್ನು ಒಮ್ಮೆ ಮಾತಾಡಿಸು”

ಗೆಲುವಾಗಿಯೆ ಅವನು ಡಾಕ್ಟರ ರೂಮಿಗೆ ಹೋದ! ಸುಮಾರು ಅರ್ಧ ಗಂಟೆ ಕೌನ್ಸೆಲಿಂಗ್ ಆಗಿರಬೇಕು. ಹೊರಬಂದು “ಡಾಕ್ಟರ್ ಇಬ್ಬರನ್ನೂ ಒಟ್ಟಿಗೆ ಬರಲು ಹೇಳಿದರು” ಅಂದ. ನಾನು ಅವನೊಡನೆ ರೂಮಿನೊಳಹೊಕ್ಕೆ.

“ಬನ್ನಿ.. ಇಬ್ಬರೂ ಕುಳಿತುಕೊಳ್ಳಿ.. ಮೊದಲು ನಿಮಗೆ ಅಭಿನಂದನೆಗಳು. ಮದುವೆಯಾಗಿ ಇವತ್ತಿಗೆ ಮೂರು ತಿಂಗಳು ಪೂರಯಿಸಿದ್ದೀರ!”

ಇಬ್ಬರೂ ಧನ್ಯವಾದ ಹೇಳಿದೆವು.

“ನಿಮ್ಮಿಬ್ಬರದು ಹೇಳಿ ಮಾಡಿಸಿದ ಸುಂದರ ಜೋಡಿ. ಮದುವೆ ಮಾಡಿಸಿದ ನಿಮ್ಮಿಬ್ಬರ ಪೇರೆಂಟ್ಸ್ ಗೆ ಅಭಿನಂದನೆ ಹೇಳ ಬೇಕು. ನೀವು ಅವರಿಗೆ ಥ್ಯಾಂಕ್ಸ್ ಹೇಳ ಬೇಕು ಅಲ್ವ?” ಅಂತ ನಕ್ಕರು.

“ಯಾವುದೇ ವಿಷಯದ ಬಗೆಗೆ ಯೋಚಿಸುತ್ತಾ.. ಆ ವಿಷಯದ ಬಗೆಗೆ ಸಂಶಯ ಬೆಳೆಸಿಕೊಳ್ಳುತ್ತಾ.. ಮತ್ತೆ ನಮಗೆ ನಾವೆ ನಿರ್ಧಾರಕ್ಕೆ ಬರುವುದರಿಂದ ಇಂಥ ಎಡವಟ್ಟುಗಳು ಆಗುತ್ತವೆ”

ಡಾ.ಪ್ರತೀಕ್ಷಾ ನಗು ತಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ ಅನ್ನಿಸಿತು!

ಅವರು ಏನು ಹೇಳುತ್ತಿದ್ದಾರೆ ಇಬ್ಬರಿಗೂ ತಿಳಿಯಲಿಲ್ಲ. ಮತ್ತೆ ತಮ್ಮ ಮಾತು ಮುಂದುವರಿಸಿದರು,

“ಇನ್ನು ಫ಼ೋಬಿಯದ ಬಗೆಗೆ ನೀವು ತಿಳಿದುಕೊಳ್ಳುವುದು ಬಹಳ ಒಳ್ಳೆಯದು. ಯಾವುದೊ ವಸ್ತು ಅಥವ ವಿಷಯದ ಬಗೆಗೆ ವಿನಾಕಾರಣ ಅತಿಯಾದ ಭಯ ಕಾಣಿಸಿಕೊಂಡರೆ ಅದು ಫ಼ೋಬಿಯಾದ ಲಕ್ಷಣಗಳು. ದೇಹ, ಕೈಕಾಲುಗಳು ನಡುಗುವುದು, ಹೃದಯ ಬಡಿತ ಏರಿಬಿಡುವುದು, ಉಸಿರುಗಟ್ಟುವುದು, ತಲೆ ತಿರುಗುವುದು, ಮೂರ್ಛೆ ಹೋಗುವುದು, ಸಾಯುತ್ತಿದ್ದೇನೆ ಅಂತ ಆತಂಕ ಪಡುವುದು ಇವೆಲ್ಲ ಫ಼ೋಬಿಯದಿಂದ ಆಗುವ ಪರಿಣಾಮಗಳು”.

ಹೀಗೆ ವಿವರಿಸುತ್ತ ಡಾಕ್ಟರ್ ನನ್ನ ಕಡೆಗೆ ನೋಡಿ , “ನಿಮ್ಮ ಗಂಡ ನಿಮಗೆ ಈ ರೀತಿಯ ಮನೋ ದೌರ್ಬಲ್ಯಗಳಿರಬಹುದೆ ಅಂತ ಕೇಳುತ್ತಿದ್ದಾರೆ. ಹೇಳಲೆ ?” ಅಂದರು.

ಒಂದು ಕ್ಷಣ ಗಲಿಬಿಲಿಯಾಯಿತು. ಇವರೇನು ಹೇಳುತ್ತಿದ್ದಾರೆ?! ನನಗೆ ದೌರ್ಬಲ್ಯಗಳೆ?! ಸಾವರಿಸಿಕೊಂಡು ಕುತೂಹಲದಿಂದ, “ಖಂಡಿತ ಹೇಳಿ ಡಾಕ್ಟರ್” ಅಂದೆ.

“ಗ್ಯಾಮೊಫ಼ೋಬಿಯ ಅಂದರೆ ಮದುವೆಯ ಬಗೆಗಿನ ಭಯ ಅಥವ ಹೆಟ್ರೊಫ಼ೋಬಿಯ ಅಂದರೆ ಗಂಡಸಿನ ಭಯ ಅಥವ ಲಾಕಿಯೊಫ಼ೋಬಿಯ ಅಂದರೆ ಮಗು ಹೆರುವ ಭಯ ಇಷ್ಟರಲ್ಲಿ ಒಂದು ನಿಮ್ಮನ್ನು ಬಾಧಿಸುತ್ತಿರಬಹುದು ಅಂತ ಆತಂಕ ಪಡುತ್ತಿದ್ದಾರೆ” ಅಂದರು.

ನಾನು ತಡೆಯಲಾರದೆ ಜೋರಾಗಿ ನಗತೊಡಗಿದೆ. ಡಾಕ್ಟರ್ ಕೂಡ ಜೋರಾಗಿ ನಕ್ಕರು. ಇವನು ಇನ್ನೂ ಗಂಭೀರವಾಗೇ ಇದ್ದ. ಅದನ್ನು ನೋಡಿ ನನ್ನ ನಗು ಮತ್ತಷ್ಟು ಹೆಚ್ಚೇ ಆಯಿತು.

ಇವನನ್ನು ಉದ್ದೇಶಿಸಿ ಡಾಕ್ಟರ್, “ನಿಮ್ಮ ಬಗ್ಗೆ ನಿಮ್ಮ ಹೆಂಡತಿ ಪಡುತ್ತಿರುವ ಸಂಶಯ ಏನೆಂದು ಹೇಳಲೆ?” ಕೇಳಿದರು.

“ನನ್ನ ಬಗೆಗ…? ಹೇಳಿ.. ಹೇಳಿ” ಕುತೂಹಲದಿಂದ ಕೇಳಿದ.

“ಅಫೆನ್’ಫಾಸಂಫೋಬಿಯ ಅಂದರೆ ಯಾರಾದರು ಮುಟ್ಟುವ/ಪ್ರೀತಿಸುವ ಭಯ ಅಥವ ಗೆನೊಫ಼ೋಬಿಯ ಅಂದರೆ ಹೆಣ್ಣಿನ ಭಯದ ಲಕ್ಷಣಗಳು ನಿಮ್ಮಲ್ಲಿವೆಯಂತೆ!”

ಈಗ ಗಹಗಹಿಸಿ ನಗುವ ಸರದಿ ಇವನದಾಯಿತು. ನಾನಂದುಕೊಂಡ ಪ್ರತಿಕ್ರಿಯೆ ಇದಲ್ಲ! ಈಗ ಎಲ್ಲರೂ ನಗುತ್ತಿದ್ದೆವು.

“ಎಷ್ಟೋ ವಿಷಯಗಳಲ್ಲಿ ನಾವು ಮೈಕ್ರೋ ಸ್ಟಡಿ ಮಾಡಿ, ಸರಿಯಾದ ಗೈಡೆನ್ಸ್ ಇಲ್ಲದೆ ನಮಗೆ ನಾವೆ ನಿರ್ಧಾರಕ್ಕೆ ಬರುತ್ತೇವೆ. ಗೂಗಲ್ ಸರ್ಚ್ ಮಾಡಿ ವಿಷಯ ಸಂಗ್ರಹದ ಪರಿಣಾಮ ಇರಬೇಕು ಇದೆಲ್ಲ… ಅಲ್ಲವ?” ಕೇಳಿದರು ಡಾಕ್ಟರ್.

“ನೋಡಿ, ನಿಮ್ಮಲ್ಲಿ ಫ಼ೋಬಿಯದ ಯಾವ ಲಕ್ಷಣಗಳೂ ಇಲ್ಲ. ನಾರ್ಮಲ್ ಆಗೆ ಇದೀರ. ನಿಮ್ಮಬ್ಬರಲ್ಲೂ ಮಾತಿನ ಹಿಂಜರಿಕೆ ಇದೆ. ಏನು ಮಾತಾಡಿದರೆ ತಪ್ಪು ಅರ್ಥಗಳಾಗುತ್ತವೊ ಅನ್ನುವ ಭಯ. ಒಬ್ಬರಿಗೊಬ್ಬರು ಪರಿಚಯಿಸಿಕೊಳ್ಳುವುದರಲ್ಲಿ ನಿಮ್ಮಿಬ್ಬರಲ್ಲಿರುವ ಸಣ್ಣ ’ಇಗೊ’ ಅಡ್ಡ ಬಂದಿದೆ. ದಂಪತಿಗಳಲ್ಲಿ ಇವಕ್ಕೆಲ್ಲ ಅವಕಾಶವೆ ಇಲ್ಲ. ಪ್ರೇಮ ನಿವೇದನೆಯ ವಿಷಯದಲ್ಲಿ ಇಬ್ಬರೂ ಹಿಂಜರಿಯಬೇಡಿ. ಮೊದಲೆ ಹೇಳಿದ್ದೆ. ನಿಮ್ಮದು ಯರಾದರೂ ಮೆಚ್ಚುವ ಜೋಡಿ. ಈ ದಿನದಿಂದಲೆ ಒಬ್ಬರಿಗೊಬ್ಬರು ಮಾತಾಡಿ, ಹೆಚ್ಚೇ ಅನ್ನಿಸುವಷ್ಟು ಮಾತಾಡಿ. ನಾವಾಡುವ ಮಾತುಗಳು ನಮ್ಮ ಮನಸ್ಸಿನ ಕನ್ನಡಿ. ಒಬ್ಬರಿಗೊಬ್ಬರು ಕೇಳುವುದು, ಹೇಳುವುದು, ಚರ್ಚಿಸುವುದು ಅಥವ ಚಿಕ್ಕ ಜಗಳವಾಡುವುದು, ಇವೆಲ್ಲ ಕನ್ನಡಿಯನ್ನು ಸ್ವಚ್ಛವಿಟ್ಟಂತೆ. ಸ್ಪಷ್ಟವಾಗಿ ಒಬ್ಬರಿಗೊಬ್ಬರು ಕಾಣಿಸುತ್ತೀರ. ಹಾಗೆ ಕಾಣಿಸಿಕೊಳ್ಳಿ. ಹೃದಯ ತೆರೆದಿಡಿಟ್ಟರೆ ಬೆಳಕು ಹರಿಯುತ್ತದೆ. ಕತ್ತಲ ಮೂಲೆಗಳು ಮಾಯವಾಗುತ್ತವೆ. ಅಲ್ವ?”

ಇವನು, ನಾನು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಇಬ್ಬರ ಮುಖದಲ್ಲೂ ಮೌನದ ಮೊಟ್ಟೆ ಒಡೆಯುವ ಬಯಕೆ!

“ನಿಮ್ಮಿಬ್ಬರಿಗೂ ಈಗಲೆ ಒಂದು ಸಣ್ಣ ಪರೀಕ್ಷೆ ಕೊಡುತ್ತೇನೆ. ಎರಡೇ ನಿಮಿಷದ ಪೇಪರ್. ಓಕೆನ?” ಕೇಳಿದರು.

ಇಬ್ಬರಿಗೂ ಬಿಳಿ ಹಾಳೆಗಳನ್ನು ಕೊಟ್ಟರು. ಪೆನ್ನು ಕೊಡುತ್ತಾ, “ನಿಮಗನಿಸಿದ್ದನ್ನು ಈ ಕಾಗದದಲ್ಲಿ ಬರೆಯಿರಿ. ವಿಷಯ ಯಾವುದಾದರೂ ಆಗಬಹುದು. ಇಬ್ಬರೂ ಬೇರೆ ರೂಮಿಗೆ ಹೋಗಿ ಬರೆದುಕೊಂಡು ಬನ್ನಿ. ಏನೂ ಅಂದುಕೊಳ್ಳಬೇಡಿ. ಇದು ನನ್ನ ಮಾತುಗಳು ನಿಮಗೆ ಎಷ್ಟು ಮನದಟ್ಟಾಗಿದೆ ಅಂತ ತಿಳಿದುಕೊಳ್ಳಲು ಅಷ್ಟೆ!” ಅಂದರು.

ರೂಂನಲ್ಲಿ ಕುಳಿತಾಗ ನನ್ನ ತಲೆಯಲ್ಲಿ ಓಡುತ್ತಿದ್ದುದನ್ನು ತಕ್ಷಣ ಬರೆದೆ.

’ಐ ಲವ್ ಯು ಡಾರ್ಲಿಂಗ್. ನನ್ನ ತಪ್ಪು ಮನ್ನಿಸುತ್ತೀಯಲ್ಲ? – ನಿನ್ನ ಸಿರಿ’ ತಲೆಗೆ ಮತ್ತೇನು ಬರೆಯುವುದು ಗೊತ್ತಾಗಲಿಲ್ಲ.

ಡಾಕ್ಟರ್ ರೂಮಿನಲ್ಲಿ ಅವನು ಬಂದು ತನ್ನ ಟೆಸ್ಟ್ ಪೇಪರ್ ಕೊಟ್ಟಾಗಿತ್ತು! ಇಬ್ಬರ ಪೇಪರ್ ತೆಗೆದುಕೊಂಡವರು ಒಂದು ನಿಮಿಷ ಅವೆರಡನ್ನು ನೋಡಿ, “ಸಿರಿ, ಇದೊ ತಗೊಳ್ಳಿ. ನಿಮ್ಮ ಮನು ಬರೆದೆ ಟೆಸ್ಟ್ ಪೇಪರ್ ನೀವೇ ನೋಡಿ.

ಅ ಬಿಳಿಯ ಹಾಳೆಯ ಮಧ್ಯೆ ಮನು ಬರೆದಿದ್ದ, ” ಓ ಮುಗ್ಧ ಸಿರಿ… ನನ್ನ ಪ್ರೀತಿ! ಐ ಲವ್ ಯು !- ನಿನ್ನ ಮನು” ಕೆಳಗೆ ಒಂದು ಸುಂದರ ಹೂವಿನ ಸರಳ ಚಿತ್ರ ಬಿಡಿಸಿದ್ದ!

ಮನು ನನ್ನ ಟೆಸ್ಟ್ ಪೇಪರ್ ನೋಡುವುದರಲ್ಲಿ ಮುಳುಗಿ ಹೋಗಿದ್ದಾನೆ! ಏಕೊ ನನ್ನೊಳಗೆ ಸ್ವಲ್ಪ ನಾಚಿಕೆ ಆವರಿಸತೊಡಗಿದಂತಿದೆ!!

ಡಾ. ಪ್ರತೀಕ್ಶಾ ನಮ್ಮಿಬ್ಬರನ್ನು ಆಪ್ಯಾಯತೆಯಿಂದ ನೋಡುತ್ತ ಹೇಳಿದರು. “ನನ್ನ ವೃತ್ತಿ ಜೀವನದಲ್ಲಿ ಅತಿ ಶೀಘ್ರವಾಗಿ ಮುಗಿದ ಟ್ರೀಟ್ಮೆಂಟ್ ಇದೇ ಇರಬೇಕು!”

ಎಲ್ಲರೂ ಮನಸಾ ನಕ್ಕೆವು. ಡಾಕ್ಟರ್ ಇಬ್ಬರಿಗೂ ಹಸ್ತಲಾಘವ ಕೊಟ್ಟು ಕಳುಹಿಸಿದರು.

“ಸಂಜೆ ಮತ್ತೆ ಆ ಕೊಳದ ಬಳಿ ಹೋಗೋಣ” ದಾರಿಯಲ್ಲಿ ಹೇಳಿದ.

ಸಂಜೆ ಆಟೋ ಹಿಡಿದು ಮತ್ತೆ ನಡೆದು, ಕೊಳದ ಬಳಿ ಇಬ್ಬರೂ ಬಂದೆವು. ಕುಳಿತೆವು. ಅವನು ಮೊದಲು ಕುಳಿತ. ಪಕ್ಕದಲ್ಲಿ ಅಂಟಿ ನಾನು ಕುಳಿತೆ!

ಹೀಗೆ ಎಷ್ಟು ಹೊತ್ತು ಕುಳಿತಿದ್ದೆವೊ ಮಾತಿಲ್ಲದೆ! ಇದೀಗ ಕೆಂಪಡಿರಿದ್ದ ಸೂರ್ಯ ದಿಢೀರನೆ ಮುಳುಗಿದ್ದಾನೆ. ಇದ್ದಕ್ಕಿದ್ದಂತೆ ಗಾಬರಿ ಆವರಿಸುತ್ತಿದೆ ಒಳಗೆ! ನನ್ನವನು ಸರ್ಪವಾಗುವ ಸಮಯ ಇದೇನ? ತಾಳೆ ಮರಗಳು ಕೆದರಿ ಕೂದಲು, ಕತ್ತಲನ್ನು ಆವಾಹಿಸಲು ನಿಂತಿರುವಂತೆ,…ನನ್ನವನ ಪಿಸುಮಾತು ಬುಸುಗುಟ್ಟಿದಂತೆ…ಮತ್ತೆ ಅಡರುತ್ತಿದೆ ಹಳೆಯ ನೆನಪಿನ ಪರಿಮಳ! ನನ್ನ ಯೋಚನೆ ಹರಿಯುವ ರೀತಿ ನನ್ನೊಳಗೆ ಚಿಕ್ಕ ಗಾಬರಿ ಹುಟ್ಟಿಸಿತು. ಇಲ್ಲ.. ಇಲ್ಲ.. ನನ್ನಲ್ಲಿ ಯಾವ ಫ಼ೋಬಿಯಾದ ಲಕ್ಷಣಗಳಿಲ್ಲ. ಸಾವರಿಸಿಕೊಂಡೆ.

ಕುತೂಹಲದ ಪೊರೆ ಕಳಚಿ ಬೀಳುವ ಸಂ-ಭ್ರಮದ ಕ್ಷಣಗಳಲ್ಲೂ ಯಾವುದೀ ತಳಮಳ ಕಳೆಯಲಾದೀತೆ ತಿಳಿಸಲಾಗದೀ ಕಳವಳ. ಅವನ ತೋಳು ನನ್ನ ಬಳಸುತ್ತಿದೆ. ಉಸಿರು ಕೆನ್ನೆಗಳಿಗೆ ತಾಕುತ್ತಿದೆ. ವಿಲಕ್ಷಣ ಭಯ ಮಾಯವಾಗಿ, ಕುತೂಹಲದ ಮೊಗ್ಗೆ ಒಡೆಯುತ್ತಿದೆ. ಉಕ್ಕುವ ಈ ಖುಷಿಯ ಘಳಿಗೆಗಳಲ್ಲಿ ಪೊರೆಯೊಂದು ಕಳಚಿಕೊಳ್ಳುತ್ತಿದೆ!

ಒಬ್ಬರ ಕಿವಿಯಲ್ಲಿ ಮತ್ತೊಬ್ಬರು “ಸಾರಿ.. ಸಾರಿ” ಪಿಸುಗುಟ್ಟಿದ್ದೇವೆ.

ಒಟ್ಟಿಗೆ ” ಐ ಲವ್ ಯೂ ” ಗಾನ ರಾಗಿಸಿದ್ದೇವೆ! .

’ಛೆ… ಇಂಥ ಹುಡುಗ ಬಗೆಗೆ ಏನೆಲ್ಲ ಊಹಿಸಿಬಿಟ್ಟೆ!’ ಹಾಗೆಯೆ ಅವನೂ ಅಂದುಕೊಳ್ಳುತ್ತಿರಬಹುದೆ ’ ಈ ಹೆಣ್ಣಿನ ಮನಸ್ಸನ್ನು ಅರ್ಥಮಾಡಿಕೊಳ್ಳಲು ಇಷ್ಟು ಸಮಯ ವ್ಯರ್ಥ ಮಾಡಿದೆನೆ!’

ಎದುರಿನ ಆ ಕೊಳದ ತಿಳಿನೀರ ಮೇಲಿಂದ ತೇಲಿ ಬಂದ ತಂಗಾಳಿ ಹೊಸ ಕನಸುಗಳ ಲೋಕವನ್ನು ನನ್ನೆದೆಯೊಳಗೆ ಅರಳಿಸತೊಡದೆ. ಅವನ ಗಟ್ಟಿ ಬಾಹುಗಳಲ್ಲಿ ಆ ಕನಸ ಬಳ್ಳಿ ಹಬ್ಬತೊಡಗಿದೆ.

***

‘ಕಹಳೆ’ ಇತ್ತೀಚೆಗೆ ನಡೆಸಿದ ಕಥಾಸ್ಪರ್ಧೆಯಲ್ಲಿ ನನ್ನ ಸಣ್ಣಕತೆ ‘ಪೊರೆ’ ಎರಡನೆ ಸ್ಥಾನ ಗಳಿಸಿದೆ. https://kannadakahale.wordpress.com/2017/05/04/%E0%B2%95%E0%B2%B9%E0%B2%B3%E0%B3%86-%E0%B2%95%E0%B2%A5%E0%B2%BE-%E0%B2%B8%E0%B3%8D%E0%B2%AA%E0%B2%B0%E0%B3%8D%E0%B2%A7%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%8E%E0%B2%B0/

Advertisements

ಬೆಳಕು ಕಂಡ ಕಣ್ಣು

teacher

ಉಪಗ್ರಹದಿಂದ ಬರುವ ಛಾಯಾ ಚಿತ್ರಗಳು ವಿನೀತನ ಮನಸ್ಸನ್ನು ತುಂಬಾ ಸೆಳೆಯುತ್ತವೆ. ಆಗಾಗ ಅಂತರ್ಜಾಲದಲ್ಲಿ ಭೂಮಿಯ ವೈವಿಧ್ಯದ ಚಿತ್ರಗಳನ್ನು ಅವನು ಅಪ್ಪನ ಜೊತೆ ಕುಳಿತು ನೊಡುತ್ತಿರುತ್ತಾನೆ. ಬಣ್ಣದ ಓಕುಳಿಯಲ್ಲಿ ಈಜುವಂತೆ ಕಾಣುವ ಭೂಮಿಯನ್ನು ನೋಡಲು ಅವನಿಗೆ ತುಂಬಾ ಇಷ್ಟ.

“ಅಪ್ಪಾ.. ನಮ್ಮ ದೇಶದ ಕಡೆ ಜೂಮ್ ಮಾಡು. ಎಷ್ಟೊಂದು ಹಸಿರು ಕಾಣುತ್ತೆ ಅಲ್ವ ! ಈ ಥರ ಹಸಿರು ನಾನು ನೋಡೆ ಇಲ್ಲ ”

“ನಾಗರಹೊಳೆ ಅಥವ ಅಗುಂಬೆ ಕಡೆಗೆ ಈ ರಜಾದಲ್ಲಿ ಹೋಗೋಣ…. ಹಸಿರು ಕಾಡಿಗೆ”

“ಹೋದ ವರ್ಷ ಊಟಿಗೆ ಹೋಗಿದ್ದು ತುಂಬಾ ಮಜಾ ಇತ್ತು. ಅಲ್ಲಿನ ಥರವೇನಾ?”

“ಹೌದು.. ನಿನ್ನ ಪಾಠದ ಪುಸ್ತಕಗಳಲ್ಲಿ ಕಾಡು ನಾಶ ಆಗ್ತಾ ಇರೊ ಬಗ್ಗೆ.. ಬಹಳ ಕಾಡು ಪ್ರಾಣಿಗಳು ನಶಿಸಿ ಹೋಗ್ತಿರೋದ್ರ ಬಗ್ಗೆ ಏನಾದ್ರು ವಿಷಯ ಇದೆಯ ?”

“ಪಾಠದ ಪುಸ್ತಕಕ್ಕಿಂತ ಹೆಚ್ಚು ವಿಷಯ ನಮ್ಮ ಟೀಚರ್ ಹೇಳ್ತಾರೆ. ಪ್ರಪಂಚದ ಕಾಡು ಕಡಿಮೆ ಆಗ್ತಾ ಇರೋದು.. ಹಾಗೆಯೇ ಕಾಡಿನ ಮೃಗ ಪಕ್ಷಿಗಳು ಕಡಿಮೆ ಆಗ್ತಾ ಇರೋದು. ಭೂಮಿ ತಾಪಮಾನ ಜಾಸ್ತಿ ಆಗ್ತಾ ಇರೋದು. ಒರಾಂಗುಟನ್ ಗೊತ್ತ? ಆಫ಼್ರಿಕದಲ್ಲಿ ಅವು ಕೂಡ ಕಡಿಮೆ ಆಗ್ತಾ ಇವೆ ” ವಿನೀತ ಹೇಳಿದ.

“ಒರಾಂಗುಟಾನ್ ಕಾಡಿನ ಮನುಷ್ಯನೆ. ಅದು ನಮ್ಮ ಪೂರ್ವಜ. ನಾವು ಮನುಷ್ಯರೇ ಒಂದಾಗಿ ಸಹಜೀವನ ನಡೆಸೊಲ್ಲ. ಇನ್ನು, ನಮ್ಮ ಪೂರ್ವಜನ ಸಂತಾನದ ಬಗ್ಗೆ ತಲೆ ಕೆಡ್ಸಿಕೊಳ್ತೀವ.. ” ಅಪ್ಪ ಹೇಳ್ತಾನೆ ಇದ್ದರು.

ವಿನೀತ ಹೇಳಿದ, “ಹೀಗೇ ಆದ್ರೆ.. ಭೂಮಿ ಬೋರ್ ಅನ್ಸತ್ತೆ ಅಲ್ವ ? ”

ಅಮ್ಮ ಕರೆದದ್ದು ಕೇಳಿಸಿತು. ಇಬ್ಬರೂ ಕೋಣೆಯಿಂದ ಹೊರಗೆ ಬಂದರು. “ತಿಂಡಿ ತಿನ್ನೋದು ಮರ್ತೇ ಹೋಗಿತ್ತಾ ನಿಮಗೆ ” ಅಂತ ನಕ್ಕಳು. ” ನಾಡಿದ್ದು ದೀಪಾವಳಿ ಬಂತಲ್ಲ. ಪಟಾಕಿ ತರೊ ಪ್ಲಾನ್ ಮಾಡ್ತಿದ್ರಾ?” ಕೇಳಿದಳು.

ವಿನೀತನಿಗೆ ಗೊತ್ತು. ಅಮ್ಮನಿಗೆ ಪಟಾಕಿ ಶಬ್ಧ ಅದರ ಹೊಗೆ ಆಗಲ್ಲ. ಕಳೆದ ವರ್ಷ ಅಕ್ಕಪಕ್ಕದ ಮನೆಯವರು ಹೆಚ್ಚು ಪಟಾಕಿ ಸುಟ್ಟಿದ್ದರಿಂದ ಅಮ್ಮನಿಗೆ ಆರೋಗ್ಯ ಕೆಟ್ಟಿತ್ತು.

“ಅಮ್ಮ.. ನಿನಗೇ ಏಕೆ ಈ ಥರ..?   ಅಪ್ಪ, ನಾನು, ನಮ್ಮ ಪಕ್ಕದ ಮನೆಯವೆರೆಲ್ಲ ದೀಪಾವಳಿಯಲ್ಲಿ ಆರೋಗ್ಯವಾಗೆ ಇರ್ತೀವಲ್ಲ ? ”

ವಿನೀತನ ಈ ಪ್ರಶ್ನೆಗೆ ಅಮ್ಮ ಹೇಳಿದ್ದಳು. “ಕೆಲವರಿಗೆ ತಕ್ಷಣ ಏನಾಗದಿದ್ದರೂ, ಪಟಾಕಿಯಿಂದ ನಿಧಾನಕ್ಕಾದರು ಆರೋಗ್ಯದ ಮೇಲೆ ಪರಿಣಾಮ ಇರುತ್ತೆ.   ವಿನೂ, ನಿನಗೆ ಮರೆತುಹೋಯ್ತಾ, ಹೋದವರ್ಷದ ದೀಪಾವಳಿಯಲ್ಲಿ ನಮ್ಮ ಮನೆ ಬೀದಿಯ ಮೂರು ನಾಯಿಗಳು, ಬೆಕ್ಕುಗಳು ಹದಿನೈದು ದಿನ ಓಡಿಹೋಗಿದ್ದು? ”

ವಿನೀತನಿಗೆ ಎಲ್ಲ ನೆನಪಾಯಿತು. ಈ ಬಾರಿ ಪಟಾಕಿ ಹೊಡೆದು ಶಬ್ಧ ಮಾಡಬಾರದು. ಬರಿಯ ಭೂಚಕ್ರ, ನಕ್ಷತ್ರಕಡ್ಡಿ ಮಾತ್ರ ಹಚ್ಚಬೇಕು. ಅಮ್ಮನಿಗೆ ಇವುಗಳ ಹೊಗೆಯೂ ಆಗುವುದಿಲ್ಲ. ಆದಷ್ಟು ಕಡಿಮೆ ತಂದರಾಯಿತು ಅಂದುಕೊಡ.

ಅವನ ಕ್ಲಾಸ್ ಮೇಟ್ ಶ್ರವಣ್ ಕಳೆದ ವರ್ಷದ ದೀಪಾವಳಿ ಮುಗಿಸಿ ತರಗತಿಗೆ ಬಂದಾಗ ಕೈಗೆ ದೊಡ್ಡ ಬ್ಯಾಂಡೇಜ್ ಹಾಕಿಕೊಂಡಿದ್ದ. ಹೂಕುಂಡ ಹಚ್ಚುವಾಗ ಆಗಿದ್ದಂತೆ. ಎರಡು ಮೂರು ಸಲ ಬೆಂಕಿ ತಾಕಿಸಿದರೂ ಹೂಕುಂಡ ಹತ್ತಲಿಲ್ಲವಂತೆ. ಏಕಿರಬಹುದು ಅಂತ ಅದನ್ನು ಕೈಯಲ್ಲಿ ಹಿಡಿದು ಪರೀಕ್ಷಿಸುವಾಗ ಭರ್ರನೆ ಅದು ಹೊತ್ತಿಬಿಟ್ಟು ಅವನ ಬಲಗೈ ಸುಟ್ಟುಬಿಟ್ಟಿದೆ.  ಸದ್ಯ.. ಕಣ್ಣಿಗೆ ಕಿಡಿ ಹೋಗಿದ್ದರೆ ಏನು ಗತಿ ಅನ್ನುತ್ತಿದ್ದ.

ಮೊನ್ನೆ ವಿನೀತನ ಕ್ಲಾಸಲ್ಲಿ ದೀಪಾವಳಿ ಹೇಗೆ ಆಚರಿಸಬೇಕು ಅನ್ನುವುದರ ಬಗೆಗೆ ಕನ್ನಡ ಟೀಚರ್ ಒಂದು ಚರ್ಚೆ ಇಟ್ಟುಬಿಟ್ಟಿದ್ದರು. ಅವರು ಹೊಸ ಕನ್ನಡ ಟೀಚರ್. ಈ ವರ್ಷವಷ್ಟೇ ನಮ್ಮ ಶಾಲೆಗೆ ಸೇರಿದ್ದು. ಈ ಹೊಸ ಟೀಚರ್ ತಮ್ಮ ಕಣ್ಣುಗಳಲ್ಲಿ ಏನೋ ಹೊಳಪು ಇಟ್ಟುಕೊಂಡು ಮಾತಾಡುತ್ತಾರೆ. ಕ್ಲಾಸಲ್ಲಿ ಯಾರಾದರು ಹಾಡಿದರೆ, ಕತೆಗಳನ್ನು ಹೇಳಿದರೆ, ಕೇಳಿದ ಪ್ರಶ್ನೆಗಳಿಗೆ ಸರಿ ಉತ್ತರ ಕೊಟ್ಟರೆ, ಅವರ ಕಣ್ಣು ಮತ್ತಷ್ಟು ಹೊಳೆಯುತ್ತವೆ, ಹಾಗೆಯೆ ನಗುತ್ತವೆ ಅಂತ ವಿನೀತನಿಗೆ ಅನ್ನಿಸುತ್ತಿರುತ್ತೆ.

ಅವನ ಬಹಳ ಜನ ಗೆಳೆಯರು ಎರಡು ಮೂರು ವರ್ಷಗಳಿಂದ ಪಟಾಕಿ ಹಚ್ಚುತ್ತಿಲ್ಲವಂತೆ. ಮತ್ತೆ ಹಾಗಂತ ಪ್ರತಿಜ್ಞೆ ಮಾಡಿದ್ದೇವೆ ಅನ್ನುತ್ತಿದ್ದರು. ಇದನ್ನು ಕೇಳಿದಾಗ ಕನ್ನಡ ಟೀಚರಿನ ಕಣ್ಣುಗಳು ನಕ್ಷತ್ರಗಳಂತೆ ಹೊಳೆಯುತ್ತಿದ್ದವು. ಇನ್ನು ಮೂರು ನಾಲ್ಕು ಜನ ಸ್ನೇಹಿತರು ’ನಾವು ಕೂಡ ಪಟಾಕಿ ಹಚ್ಚಲ್ಲ, ಬರೀ ಚಿನಕುರುಳಿ ಹಚ್ತೀವಿ’ ಅಂದರು. ಅದಕ್ಕೆ ಎಲ್ಲರು ತುಂಬಾ ನಕ್ಕಿದ್ದರು.

ವಿನೀತ ಟೀಚರ್ ಗೆ ಹೇಳಿದ್ದ. ತಾನು ಬರೀ ನಕ್ಷತ್ರಕಡ್ಡಿ ಹಚ್ಚೋದು ಅಂತ. ಟೀಚರಿಗೆ ಏನೋ ಅಸಮಾಧಾನ. ಕೊನೆಯಲ್ಲಿ ಅವರು ಹೇಳಿದ್ದರು, ” ಹಬ್ಬದಲ್ಲಿ ಹೊಸ ಬಟ್ಟೆ ಹಾಕಿಕೊಳ್ಳಿ. ಹೋಳಿಗೆ ಊಟ ಮಾಡಿ. ರಾತ್ರಿ ಮನೆ ಮುಂದೆ, ಮನೆ ಒಳಗೆ ದೀಪ ಹಚ್ಚಿ ಅಥವ ಮೇಣದಬತ್ತಿಗಳನ್ನು ಹಚ್ಚಿ. ಪಟಾಕಿ ಶಬ್ಧ ಆದಷ್ಟು ಕಡಿಮೆ ಮಾಡಿ ದೀಪಾವಳಿ ಆಚರಿಸಿ. ಆವಾಗ ನೋಡಿ ಎಷ್ಟು ಖುಶಿಯಿರುತ್ತೆ” ಅಂತ.

ಎಲ್ಲರಿಗೂ ಬೇಜಾರು ಏನೆಂದರೆ ಈ ಕನ್ನಡ ಟೀಚರ್ ಮಕ್ಕಳಿಗೆ ಪಟಾಕಿ ಹಚ್ಚಬೇಡಿ ಅನ್ನೋದು.

ಮರುದಿನ ಬೆಳಿಗ್ಗೆ ವಿನೀತ ಬೇಗನೆ ಎದ್ದ. ತನ್ನ ಉಳಿತಾಯದ ಗೋಲಕವನ್ನು ಮೆಲ್ಲನೆ ತೆರೆದ. ಅದರಲ್ಲಿ ಸುಮಾರು ದಿನಗಳಿಂದ ಉಳಿಸಿಟ್ಟ ಹಣವನ್ನು ಎಣಿಸತೊಡಗಿದ. ಸುಮಾರು ಒಂಭತ್ತುನೂರು ರೂಪಾಯಿ! ಅವನಿಗೊಂದು ಹೊಸ ಯೋಚನೆ ಬಂತು. ಅಪ್ಪನ ಬಳಿ ಓಡಿದ.

“ನೂರು ರೂಪಾಯಿ ಇವತ್ತು ನನಗೆ ಕೊಡಬೇಕು ” ಕೇಳಿದ.
“ಬರಿಯ ನೂರು ರುಪಾಯಿ .. ಅಷ್ಟೇ ಪಟಾಕಿಯಾ ಈ ವರ್ಷ? ” ತಂದೆ ಕೇಳಿದರು.
“ಈ ವರ್ಷದಿಂದ ಪಟಾಕಿ ಬೇಡಪ್ಪ. ನೀವು ನೂರು ಕೊಟ್ಟರೆ, ನನ್ನ ಹಣವೂಸೇರಿಸಿದರೆ ಒಟ್ಟು ಒಂದು ಸಾವಿರ ಆಗುತ್ತೆ. ನಾವು ಬೆಳಕ ಹಬ್ಬ ಬೇರೆ ರೀತಿ ಆಚರಿಸೋಣ”
“ಏನು ವಿನೂ.. ಹೊಸ ಯೋಚನೆ..?”
“ನಾನು, ನೀವು, ಅಮ್ಮ ಎಲ್ಲ ನಾಡಿದ್ದು ಭಾನುವಾರ ಅನಾಥಶ್ರಮವಿದೆಯಲ್ಲ ಅಲ್ಲಿ ಹೋಗೋಣ, ಹಣ್ಣು, ಸಿಹಿ ಮತ್ತು ಮತ್ತೇನಾದರು ಉಪಯೋಗವಾಗುವ ಉಡುಗೊರೆ ಅಲ್ಲಿ ಕೊಡೋಣ”

ಅಪ್ಪನಿಗೆ ಖುಷಿ. “ಅಮ್ಮ ಮತ್ತು ನಾನು ಎರಡು ಸಾವಿರ ಕೊಡ್ತೀವಿ. ನೀನು ಹೇಳಿದ ಹಾಗೇ ಅಲ್ಲಿಗೆ ಹೋಗೋಣ” ಅಂದರು.

ವಿನೀತ ಶಾಲೆಗೆ ಎಂದಿನಂತೆ ಹೊರಟ. ಆ ದಿನ ಪ್ರಾರ್ಥನೆ ಸಮಯದಲ್ಲಿ ಹೆಡ್ ಮಿಸ್ ಹೇಳಿದರು, ” ಮಕ್ಕಳೇ, ಈ ದಿನ ನಮ್ಮ ಕನ್ನಡದ ಹೊಸ ಟೀಚರ್ ದೀಪಾವಳಿ ಬಗೆಗೆ ಒಂದು ಪುಟ್ಟ ಭಾಷಣ ಕೊಡುತ್ತಿದ್ದಾರೆ. ಅವರ ಮಾತನ್ನು ಈಗ ನಾವೆಲ್ಲ ಕೇಳೋಣವ? “.

ವಿನೀತ ಮನಸ್ಸಿನಲ್ಲೆ ಅಂದುಕೊಂಡ, ’ಮತ್ತೆ ಪಟಾಕಿ ಸುಡಬೇಡಿ ಅಂತ ಉಪದೇಶ ಕೊಡುತ್ತಾರೊ ಏನೊ..’

ಕನ್ನಡದ ಟೀಚರ್ ಮುಂದೆ ಬಂದರು. ನಗುತ್ತಾ ತಮ್ಮ ಮಾತು ಪ್ರಾರಂಬಿಸಿದರು.

“ಮಕ್ಕಳಿಗೆಲ್ಲ ದೀಪಾವಳಿಯ ಶುಭಾಶಯ ಇವತ್ತೇ ಹೇಳುತ್ತೀನಿ. ದೀಪಾವಳಿಯ ದಿನ ದೀಪ ಹಚ್ಚಿ, ಆದರೆ ಪಟಾಕಿ ಸುಡಬೇಡಿ ಅಂತ ನಾನು ಈಗಾಗಲೆ ಎಲ್ಲ ಕ್ಲಾಸಿನಲ್ಲಿ ನಿಮಗೆಲ್ಲ ಹೇಳಿದ್ದೀನಿ ಅಲ್ವ? ಆದರೂ ಬಹಳ ಮಕ್ಕಳಿಗೆ ನಾನು ಹೇಳಿದ್ದು ಇಷ್ಟ ಆಗಿಲ್ಲ ಅಂತ ಗೊತ್ತು. ಆದರೆ ಮಕ್ಕಳೆ.. ನಾನು ಹೀಗೆ ಹೇಳಲು ಕಾರಣವಿದೆ. ನೀವೆಲ್ಲ ನನ್ನ ಥರ ಪಟಾಕಿ ಹುಚ್ಚಿನಿಂದ ಮಾಡಿಕೊಂಡ ಅನಾಹುತ ನೀವು ಮಾಡಿಕೊಬಾರದು ಅನ್ನೋದು ನನ್ನ ಆಸೆ. ಅದಕ್ಕೆ ಕಾರಣ ಇದೆ. ಆ ವಿಷಯ ಈಗ ನಿಮಗೆಲ್ಲೆ ಹೇಳ್ತೀನಿ.

ಆರನೇ ಕ್ಲಾಸಿನಲ್ಲಿ ಓದುವಾಗ ನನಗೆ ತುಂಬಾ ಪಟಾಕಿ ಹುಚ್ಚಿತ್ತು. ಮೂರು ನಾಲ್ಕು ದಿನವೂ ಪಟಾಕಿಯ ಸಂಭ್ರಮದಲ್ಲಿ ಇರುತ್ತಿದ್ದೆ. ಹೆಚ್ಚು ಶಬ್ಧ ಮಾಡುವ ಪಟಾಕಿ ಅಂದ್ರೆ ನನಗೆ ತುಂಬಾ ಇಷ್ಟ. ಆದರೆ, ಮಕ್ಕಳೇ, ಆ ವರ್ಷದ ದೀಪಾವಳಿಯ ಒಂದು ದಿನ ಒಂದೇ ಒಂದು ದೊಡ್ಡ ಪಟಾಕಿ ನನ್ನ ಜೀವನ ಹಾಳು ಮಾಡಿತು. ಆ ಪಟಾಕಿ ಭಾರಿ ಶಬ್ಧಮಾಡುತ್ತ ನನ್ನ ಮುಖಕ್ಕೆ ಬಡಿದು ಬಿಟ್ಟಿತು. ನನ್ನ ಎರಡೂ ಕಣ್ಣುಗಳನ್ನು ಸುಟ್ಟುಬಿಟ್ಟಿತು! ”

ಇದ್ದಕ್ಕಿದ್ದಂತೆ ಎಲ್ಲ ಮಕ್ಕಳೂ ಒಂದು ನಿಮಿಷ ಗರಬಡಿದಂತೆ ಆ ಟೀಚರನ್ನೇ ನೋಡತೊಡಗಿದರು. ಕನ್ನಡ ಟೀಚರ್ ಮಾತು ಮುಂದುವರಿಸಿದರು. ” ನನಗೆ ಗೊತ್ತು.. ನೀವೆಲ್ಲ ಏನು ಯೋಚನೆ ಮಾಡ್ತಾ ಇದೀರ ಅಂತ. ನನಗೆ ಕಣ್ಣು ಇವೆಯಲ್ಲ. ಮತ್ತೆ ಸುಟ್ಟು ಹೋಗಿದ್ದು ಹೇಗೆ ಅಂತ ಅಲ್ವಾ..? ಅದು ಕೂಡ ಒಂದು ದೊಡ್ಡ ಕಥೆಯೆ. ನಾನು ಎರಡು ವರ್ಷ ಕಣ್ಣು ಕಳೆದುಕೊಂಡು ಕತ್ತಲಿನ ಪ್ರಪಂಚದಲ್ಲಿದ್ದೆ. ಕುರುಡಿಯಾಗಿದ್ದೆ. ನನ್ನ ಬಣ್ಣದ ಲೋಕ ಮರೆಯಾಗಿಹೋಗಿತ್ತು. ಎಲ್ಲ ಕೆಲಸಗಳಿಗೂ ಬೇರೆಯವರ ಸಹಾಯ ಪಡೆಯತೊಡಗಿದೆ. ನನ್ನ ಶಾಲೆ, ಸ್ನೇಹಿತರು, ಆಟಗಳು ಎಲ್ಲ ನನ್ನಿಂದ ದೂರವಾದುವು. ಕಣ್ಣುಗಳ ಮಹತ್ವ ಆಗಲಷ್ಟೆ ನನಗೆ ತಿಳಿಯಿತು.”

ಈಗ ಮಕ್ಕಳೆಲ್ಲ ಕನ್ನಡ ಟೀಚರಿನ ಕಣ್ಣುಗಳನ್ನೆ ಎವೆಯಿಕ್ಕದೆ ನೋಡತೊಡಗಿದರು. ಅವರ ಕುತೂಹಲ ಹೆಚ್ಚಾಗತೊಡಗಿತು.

ಟೀಚರ್ ತಮ್ಮ ಮುಗುಳ್ನಗೆಯ ಮುಖದಲ್ಲಿ ಮಾತು ಮುಂದುವರಿಸಿದರು.

“ಆದರೆ ಮಕ್ಕಳೇ, ನನ್ನ ಭಾಗ್ಯ ಚೆನ್ನಾಗಿತ್ತು. ದೇವರು ನನ್ನ ಪಶ್ಚಾತ್ತಾಪವನ್ನು ನೋಡಿದರು ಅನ್ನಿಸುತ್ತೆ. ಒಂದು ದಿನ ನನಗೆ ಒಳ್ಳೆಯ ಸುದ್ದಿ ಕಾದಿತ್ತು. ಒಬ್ಬ ಮಹಾನುಭಾವರು ತಾವು ನಿಧನರಾದಮೇಲೆ ತಮ್ಮ ಕಣ್ಣುಗಳನ್ನು ದಾನ ಮಾಡಬೇಕೆಂದು ಹೇಳಿದ್ದರು. ಡಾಕ್ಟರುಗಳು ಆ ದಾನದ ಕಣ್ಣುಗಳನ್ನು ನನಗೆ ಇಟ್ಟು ಆಪರೇಷನ್ ಮಾಡಿದರು. ನೇತ್ರ ದಾನ ಮಾಡಿದ ಆ ಮಹಾನುಭಾವರ ಕಣ್ಣುಗಳೇ ಈಗ ನೀವು ನೋಡುತ್ತಿರುವುದು. ಅವರು ಕಣ್ಣುಗಳನ್ನು ಕೊಟ್ಟು ನನ್ನ ಜೀವನದ ಬೆಳಕಾದರು. ಮತ್ತೆ ನಾನು ಬೆಳಕನ್ನು ಕಾಣುವಂತೆ ಮಾಡಿದರು..! ”

ಟೀಚರ್ ಭಾಷಣ ಮುಗಿಸುವಾಗ ಪಟಾಕಿ ಸುಡಬೇಡಿ ಎಂದು ಮತ್ತೆ ಹೇಳಲಿಲ್ಲ. ಹಾಗೆ ಹೇಳುವ ಅಗತ್ಯವೂ ಇರಲಿಲ್ಲ.

ಸ್ವಲ್ಪ ಹೊತ್ತು ಎಲ್ಲ ಕಡೆ ಮೌನ. ಎಲ್ಲ ಮಕ್ಕಳೂ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ವಿನೀತ ತಲೆ ಕೆಳಗಿಟ್ಟು ಯೋಚಿಸತೊಡಗಿದ.

ಮೌನ ಮುರಿಯುತ್ತಾ ಹೆಡ್ ಮಿಸ್ ಚಪ್ಪಾಳೆ ತಟ್ಟಿದರು. ಇದ್ದಕ್ಕಿದ್ದಂತೆ ಎಲ್ಲ ಕಡೆಯೂ ಚಪ್ಪಾಳೆಯ ಶಬ್ಧ ಮೊಳಗಿತು.

ಮಕ್ಕಳಲ್ಲಿ ಹೊಸ ನಿರ್ಧಾರಗಳು ಚಿಗುರೊಡೆದವು. ಕನ್ನಡ ಟೀಚರ್ ಕಣ್ಣುಗಳು ನಕ್ಷತ್ರಗಳಂತೆ ಬೆಳಗಿದವು.

ವಿನೀತ ಈ ದೀಪಾವಳಿಗೆ ದೀಪವಷ್ಟೇ ಹಚ್ಚಿ ಟೀಚರಿಗೆ ಈ ವಿಷಯ ಹೇಳಬೇಕು ಅಂದುಕೊಂಡ. ಹಾಗೆ ತಾನು ಹೇಳುವಾಗ ಅವರ ಕಣ್ಣುಗಳಲ್ಲಿ ಬೆಳಕು ಮಿಂಚುವ ಬಗೆಯನ್ನು ಊಹಿಸುತ್ತಾ ಖುಷಿಯಾದ.

***

ಚಿತ್ರ ಕೃಪೆ: ಅಂತರ್ಜಾಲ

(ಪಂಜು ಇ ಪತ್ರಿಕೆಯಲ್ಲಿ ಪ್ರಕಟ. ಲಿಂಕ್: http://www.panjumagazine.com/?p=13403)

ಹೊಟೇಲಿನ ಆ ಘಟನೆ

oldage

ಆ ಹೊಟೇಲಿನಲ್ಲಿ ಬಹಳ ಜನ.   ಅದು ಬಹಳ ಉತ್ತಮ ದರ್ಜೆಯ ಮತ್ತು ಸಮಾಜದ ಗಣ್ಯರು ಬಂದು ಊಟ ತಿಂಡಿ ಮಾಡುವ ಸ್ಥಳ.

ಅಲ್ಲಿ ಉತ್ತಮ ಪೋಷಾಕಿನ ಜನ ಸಂಭ್ರಮದಲ್ಲಿ ಭಕ್ಷ್ಯಗಳನ್ನು ಸವಿಯುತ್ತಿದ್ದರು. ಎಲ್ಲರ ಗಮನ ರುಚಿಯ ತಿನಿಸುಗಳ ಮೇಲೆ ಮತ್ತೆ ತಮ್ಮ ನಾಲಿಗೆಗಳಿಗೆ ಆ ರುಚಿಯನ್ನು ಅಂಟಿಸಿಕೊಳ್ಳುವ ಕಾಳಜಿ.

ಮಧ್ಯಾನ್ನದ ಆ ಸಮಯದಲ್ಲಿ ಒಳ್ಳೆಯ ಬಟ್ಟೆ ಧರಿಸಿದ್ದ ಒಬ್ಬ ಕಟ್ಟುಮಸ್ತಾದ ಸುಂದರ ಯುವಕ ತನ್ನ ವಯಸ್ಸಾದ ತಾಯಿಯನ್ನು ನಿಧಾನಕ್ಕೆ ನಡೆಸಿಕೊಂಡು ಹೊಟೇಲ್ಲಿಗೆ ಬಂದ. ಆ ತಾಯಿಯ ಕೈ, ಕಾಲು ಸ್ವಲ್ಪ ನಡುಗುತ್ತಿರುವಂತೆ ಮತ್ತೆ ನಡೆಯಲು ಕಷ್ಟಪಡುತ್ತಿರುವಂತೆ ಕಾಣಿಸುತ್ತಿತ್ತು. ಅಲ್ಲಿ ಹಾಲ್ ಮಧ್ಯದ ಒಂದು ಟೇಬಲ್ಲಿನಲ್ಲಿ ಅವಳನ್ನು ಯುವಕ ಕೂರಿಸಿದ.

ತಾಯಿಗೆ ತಟ್ಟೆಯೊಂದರಲ್ಲಿ ಸ್ವಲ್ಪ ಊಟ ತಂದು, ‘ಅಮ್ಮಾ.. ನೋಡು ಈ ಚಪಾತಿ ಮೆತ್ತಗಿದೆ ಮತ್ತು ಈ ಪಲ್ಯ ಬಹಳ ರುಚಿಯಿದೆ. ತಿನ್ನು’ ಅಂದ.

ತಾಯಿ ಆ ತಟ್ಟೆಯಿಂದ ಮೆಲ್ಲಗೆ ತನ್ನ ನಡುಗುವ ಕೈಗಳಿಂದ ಚಪಾತಿಯನ್ನು ಮುರಿದು ತಿನ್ನತೊಡಗಿದಳು.

ಯುವಕ ಕುಡಿಯುವ ನೀರು ತರಲು ಹೋದ. ಅಷ್ಜರಲ್ಲೆ ‘ಭಡ್’ ಶಬ್ಧ ಹೊಟೇಲಿನಲ್ಲಿ ಅನುರಣಿಸಿತು. ಹೊಟೇಲಿನಲ್ಲಿದ್ದವರ ಗಮನ ಈಗ ಆ ತಾಯಿ ಮತ್ತು ಮಗನ ಕಡೆಗೆ ಹರಿಯಿತು.

ಅವಳು ಊಟ ಮಾಡುವ ಭರದಲ್ಲಿ ಕೈತಪ್ಪಿತ್ತು ಮತ್ತು ಊಟದ ತಟ್ಟೆ ನೆಲಕ್ಕೆ ಉರುಳಿ ತಿನಿಸು ಚಿಲ್ಲಿ ಹೋಯಿತು.

ಅಲ್ಲಿದ್ದ ಕೆಲವರಿಗೆ ಮುಜುಗರ.  ಕಸಿವಿಸಿ.  ಊಟದ ಶಾಂತ ವಾತಾವರಣ ಸ್ವಲ್ಪ ಕದಡಿ ಹೋಯಿತು.

ನೀರು ತಂದ ಯುವಕ ತಾಯಿಯನ್ನು ನೋಡಿದ ಮತ್ತು ನಕ್ಕ. ‘ಓಹ್.. ತಟ್ಟೆ ಕೆಳಗೆ ಬಿತ್ತೆ? ನಿನ್ನ ಮೈಮೇಲೆ ಪಲ್ಯದ ಚೂರುಗಳು ಅಂಟಿಬಿಟ್ಟಿವೆ. ತಾಳು.. ನಾನು ಅವನ್ನೆಲ್ಲ ಒರೆಸಿಬಿಡುತ್ತೇನೆ. ಹಾಗೆಯೆ ಬೇರೆ ತಟ್ಟೆ ತರುತ್ತೇನೆ. ನೀನು ಆ ಕುರ್ಚಿಯಲ್ಲಿ ಕೂರಬೇಡ. ಇಲ್ಲಿ ಬಾ. ಹಾಂ.. ಇದೀಗ ಸರಿಯಾಯಿತು. ಸ್ವಲ್ಪ ನೀರು ಕುಡಿ.’

ಹೊಟೇಲಿನಲ್ಲಿದ್ದ ಎಲ್ಲ ಮಕ್ಕಳು, ಅವರ ಅಪ್ಪ ಅಮ್ಮಂದಿರು ಈ ದೃಶ್ಯ ನೋಡುತ್ತಿದ್ದರು. ತಿನ್ನುವುದನ್ನು ಸ್ವಲ್ಪ ಮರೆತಿದ್ದರು ಕೂಡ.

ಯುವಕ ತಾಯಿಯ ಬಟ್ಟೆಗಳನ್ನು ಸ್ವಚ್ಛ ಮಾಡಿದ. ಹಾಗೆಯೆ ಆ ಟೇಬಲನ್ನೂ. ಮತ್ತೆ ತನ್ನ ತಾಯಿಗೆ ಮತ್ತೊಂದು ತಟ್ಟೆಯಲ್ಲಿ ತಿನಿಸುಗಳನ್ನು ತಂದು ನಿಧಾನಕ್ಕೆ ತಿನ್ನಿಸತೊಡಗಿದ. ಹಾಗೆ ಮಾಡುವಾಗ ಅವನಿಗೆ ಹೊಳೆಯಿತು, ಹೊಟೇಲಿನ ಗ್ರಾಹಕರು ತಮ್ಮ ಕಡೆಗೆ ದೃಷ್ಟಿಸುತ್ತಿದ್ದಾರೆ ಎಂದು.

ಮುಗುಳ್ನಗುತ್ತಾ ಅವರ ಕಡೆ ಕೈಬೀಸಿ ‘ಕ್ಷಮೆ’ ಕೇಳಿದ.

ಅಲ್ಲಿಯ ಗ್ರಾಹಕರು ಮತ್ತೆ ತಮ್ಮ ಊಟದ ಕಡೆ ಗಮನ ಕೊಟ್ಟರು.

ಹದಿನೈದು ನಿಮಿಷಗಳ ನಂತರ ಯುವಕ ನಿಧಾನಕ್ಕೆ ತಾಯಿಯ ಜೊತೆ ಹೊರ ಹೊರಟ. ಬಿಲ್ಲನ್ನು ಪಾವತಿಸುತ್ತಾ ಹೇಳಿದ. ‘ನನ್ನನ್ನು ಕ್ಷಮಿಸಿ. ನಿಮ್ಮೆಲ್ಲ ಗ್ರಾಹಕರಿಗೆ ನನ್ನಿಂದ ಸ್ವಲ್ಪ ಮುಜುಗರವಾಗಿಬಿಟ್ಟಿತು. ಈ ಘಟನೆ ಇಲ್ಲಿಗೆ ಮರೆತುಬಿಡಿ’

ಬೆನ್ನ ಹಿಂದೆ ನಿಂತ ಹಿರಿಯರೊಬ್ಬರು ಯುವಕನ ಭುಜ ತಟ್ಟಿದರು. ಅವನಿಗೆ ಹಸ್ತ ಲಾಘವ ನೀಡುತ್ತಾ ಹೇಳಿದರು, ‘ಇದು ಮರೆಯುವಂಥ ಘಟನೆಯಲ್ಲ. ನೀನು ಈದಿನ ಹೊಟೇಲಿನ ಎಲ್ಲ ಜನರಿಗೆ ಸಿಹಿಯ ಅನುಭವವೊಂದನ್ನು ಹಂಚಿಬಿಟ್ಟೆ. ನಿನಗೆ ಶುಭವಾಗಲಿ’

ಯುವಕ ಮುಗುಳ್ನಕ್ಕು ಕೃತಜ್ಞತೆ ಸೂಚಿಸಿದ ಮತ್ತು ಹೊಟೇಲಿನಿಂದ ತಾಯಿಯನ್ನು ಕರೆದುಕೊಂದು ಹೊರಟ. ಹಾಗೆ ತೆರಳುವಾಗ ಹಬ್ಬುವ ಬಳ್ಳಿಯ ನರುಗಂಪ ಆದರ್ಶದ ಬೀಜಗಳನ್ನು ಹೊಟೇಲಿನಲ್ಲಿದ್ದ ಎಲ್ಲರ ಎದೆಯೊಳಗೆ ಅವನು ಚೆಲ್ಲಿಬಿಟ್ಟಿದ್ದ.

                             (ವಾಟ್ಸ್ಯಾಪಲ್ಲಿ ಬಂದ ಒಂದು ಆಂಗ್ಲ ಸಂದೇಶದ ಭಾವಾನುವಾದ)

(ಚಿತ್ರಕೃಪೆ:ಅಂತರ್ಜಾಲ)

(Published in Kannada.Pratilipi.com, Link:http://kannada.pratilipi.com/anantha-ramesh/hotelina-aa-ghatane)

ಹೊಸ ಸ್ನೇಹ

bb2

ಬೆಳಿಗ್ಗೆ ಬೆಡ್ ಕಾಫ಼ಿ ಕುಡಿಯುವ ಅಭ್ಯಾಸ ಅಪ್ಪನ ರಗಳೆಯ ಮಾತುಗಳಿಂದ ನೆನ್ನೆಯಿಂದಲೆ ವಿನೀತ ನಿಲ್ಲಿಸಿದ್ದಾನೆ. ಹಲ್ಲುಜ್ಜಿ, ಕೈಕಾಲು ಮುಖ ತೊಳೆದು ದೇವರ ಮನೆ ಎದುರು ನಿಂತು ಕೈ ಮುಗಿದ ನಂತರವೆ ಅಮ್ಮ ಅವನಿಗೆ ಹಾಲು ತರುತ್ತಾಳೆ. ಕೈಗೆ ಸಿಕ್ಕಿದ ಪುಸ್ತಕ ನೋಡುತ್ತ ಕುಳಿತ ಸ್ವಲ್ಪ ಹೊತ್ತಿಗೆ, ” ವಿನೂ, ಬೇಲಾನನ್ನು ಹೊರಗೆ ಕರೆದುಕೊಂಡು ಹೋಗು” ಅನ್ನುತ್ತಾಳೆ ಅಮ್ಮ.

ಬೇಲಾನ ಕೊರಳಿಗೆ ಸರಪಳಿ ಹಾಕಿ ಹವಾಯಿ ಮೆಟ್ಟಿ ವಿನೀತ ಬೆಳಗಿನ ಬಿಸಿಲಿಗೆ ಮೈಯೊಡ್ಡಿ ನಡೆಯುತ್ತಾ ಇವತ್ತು ಕ್ಲಾಸಲ್ಲಿ ಯಾವ ಪಾಠ ಪ್ರಾರಂಭ, ಹೋಮ್ ವರ್ಕ್ ಯಾವುದು ಪೂರ್ತಿಯಾಗಿಲ್ಲ ಇತ್ಯಾದಿ ಯೋಚಿಸುತ್ತಿದ್ದಾನೆ.

ಬೇಲಾನ ಎಳೆದಾಟ ರೈಲು ಹಳಿಗಳ ಪಕ್ಕದ ಕಾಲು ದಾರಿಯಲ್ಲೇ ಸಾಗುತ್ತಿದೆ. ಟ್ರೇನ್ ಶಬ್ಧ ಮೆಲ್ಲಗೆ ಕೇಳಿಸುತ್ತಿದೆ ಮತ್ತು ನಿಧಾನಕ್ಕೆ ಜೋರಾಗುತ್ತಾ ವಿನೀತನ ದಾಟಿ ಹೊರಟು ಹೋಗುತ್ತಿದೆ. ದಿನವೂ ಬರುವ ಪ್ಯಾಸೆಂಜರ್ ಟ್ರೇನ್ ಇರಬೇಕು.

ಕರ್ಕಶವಾಗಿ ಕೂಗುತ್ತಿದ್ದ ಟ್ರೇನ್ ಇದ್ದಕ್ಕಿದ್ದಂತೆ ತನ್ನ ಓಟವನ್ನು ಕಡಿಮೆ ಮಾಡುತ್ತಾ, ಸೈರನ್ ಶಬ್ಧ ಹೆಚ್ಚಿಸುತ್ತಾ ಮೆಲ್ಲಗೆ ನಿಂತು ಬಿಟ್ಟಿದೆ. ಅಲ್ಲಲ್ಲಿ ಓಡಾಡುತ್ತಿದ್ದ ಜನ ಈಗ ದುಗುಡದಲ್ಲೊ, ಗಡಿಬಿಡಿಯಲ್ಲೊ ಅಥವಾ ಕುತೂಹಲದಲ್ಲೊ ಟ್ರೇನಿನ ಕೊನೆಯ ಬೋಗಿಯತ್ತ ಹೋಗುತ್ತಿದ್ದಾರೆ ಅಥವಾ ಓಡತೊಡಗಿದ್ದಾರೆ. ಎಂಜಿನ್ನಿನ ಗಾರ್ಡ್ ಏನನ್ನೋ ತನ್ನ ಸಹಾಯಕನಿಗೆ ಹೇಳುತ್ತಾ ಇಳಿದು ಬರುತ್ತಿದ್ದಾನೆ. ಮತ್ತೊಬ್ಬ ಗಾರ್ಡ್ ಹಸಿರು, ಕೆಂಪು ಬಾವುಟಗಳನ್ನು ಬಗಲಿನಲ್ಲಿಟ್ಟು ಇತ್ತಲೇ ಹೆಜ್ಜೆ ಹಾಕಿದ್ದಾನೆ. ಏನೋ ಅನಾಹುತವಾಗಿದೆಯೆಂದು ವಿನೀತ ಅತ್ತ ಕಡೆಗೇ ಸಾಗುತ್ತಿದ್ದಾನೆ.

ಜನ ಘೇರಾಯಿಸಿದ್ದಾರೆ. ಗುಂಪಿನಲ್ಲಿ ವಿನೀತನಿಗೇನೂ ಕಾಣಿಸುತ್ತಿಲ್ಲ. ಹೆಚ್ಚು ಹತ್ತಿರ ಹೋಗಲು ಬೇಲಾ ಬಿಡುತ್ತಿಲ್ಲ. ಕೆಲವರು ಕಸಿವಿಸಿಯ ಮುಖದಿಂದ ಗುಂಪಿನಿಂದ ಹೊರಬರುತ್ತಿದ್ದಾರೆ. ಕೆಲವರು “ಛೆ ಛೆ”, “ಪಾಪ ಪಾಪ”, ಇತ್ಯಾದಿ ಗೊಣಗುತ್ತಾ ಹೊರಟುಹೋಗುತ್ತಿದ್ದಾರೆ. ಮತ್ತಷ್ಟು ಜನರ ಜಮಾವಣೆಯಾಗುತ್ತಿದೆ.

“ಏನಾಯ್ತು ? ಏನದು ?” ಕೇಳಿದ. ಕೆಲವರು ಏನೂ ಉತ್ತರಿಸದೆ ಹೋಗುತ್ತಿದ್ದಾರೆ. ಒಬ್ಬ ಹುಡುಗ ಆ ಗುಂಪಿನಿಂದ ಆಚೆಗೆ ಬಂದ. ವಿನೀತ ನೋಡುತ್ತಾನೆ, ’ ಅರೆ! ಅವನು ತನ್ನ ಕ್ಲಾಸ್ ಮೇಟ್ ಕಿಶು !’

“ಏನೋ ಅದು ಕಿಶು.. ಏನಾಗಿದೆಯೊ?” ಕೂಗಿದ. ಕಿಶು ದುಗುಡದಲ್ಲಿ
” ಯಾರೋ ಟ್ರೇನಿಗೆ ಸಿಕ್ಕಿ ಸತ್ತಿದ್ದಾರೊ. ಅಬ್ಬಾ.. ನೋಡಕ್ಕೆ ಆಗಲ್ಲಪ್ಪ”
“ಕಿಶು, ಬೇಲಾನ ಹಿಡ್ಕೊಳ್ಳೊ, ನಾನೂ ನೋಡ್ಕೊಂಡು ಬರ್ತೀನಿ”
“ಬೇಡ ವಿನು, ನೀನು ಹೆದರ್ಕೊಳ್ತೀಯ”
“ಇಲ್ವೊ, ಒಂದೇ ನಿಮಿಷ ನೋಡಿ ಬಂದುಬಿಡ್ತೀನಿ”
ಓಡಿದ. ಕರಗುವ ಜನಗಳಲ್ಲಿ, ವಿನೀತ ಕಷ್ಟವಿಲ್ಲದೆ ಗುಂಪನ್ನು ಭೇದಿಸಿ ಒಳಹೊಕ್ಕು ನೋಡತೊಡಗಿದ.

ಹಳಿಗಳ ಮಧ್ಯೆ ಏನೊ ಬಿದ್ದಿದೆ. ತಕ್ಷಣ ಅದೇನೆಂದು ಗೊತ್ತಾಗುತ್ತಿಲ್ಲ. ಕೆಂಪು ಕಪ್ಪು ಮಿಶ್ರಣದ ಒಂದು ಮಾಂಸದ ಮುದ್ದೆ. ಮುಂಡವಿರಬೇಕು. ಕಸಿವಿಸಿಯಾಗುತ್ತಿದೆ. ಕಾಲು ಅಥವ ಕೈ ಯಾವುದೊ ಕತ್ತರಿಸಿ ಬಿದ್ದಿದೆ. ಅರೆ! ತಲೆ ಕಾಣುತ್ತಿಲ್ಲವಲ್ಲ? ಯಾರಿರಬಹುದು? ಆಚೆ ಈಚೆ ಕಣ್ಣು ಹಾಯಿಸಿದ. ಹತ್ತು ಹೆಜ್ಜೆಗಳಾಚೆ ದುಂಡನೆ ವಸ್ತುವೊಂದು ಬಿದ್ದಿದೆ. ಓ.. ಅದು ತಲೆ. ಹುಡುಗನೊಬ್ಬನ ತಲೆಯಂತೆ ತೋರುತ್ತಿದೆ. ಬುಡದಲ್ಲಿ ಕಪ್ಪು ಮಿಶ್ರಿತ ರಕ್ತ ಹೆಪ್ಪುಗಟ್ಟತೊಡಗಿದೆ. ಮಣ್ಣಿನಲ್ಲಿ ಮಾಡಿರುವ ಗೊಂಬೆಯ ಥರ ಕಾಣುತ್ತಿದೆ. ಹಳಿಗಳ ಮಧ್ಯೆ ಉರುಳಿ ಬಿದ್ದದ್ದಕ್ಕಿರಬಹುದು, ಕಪ್ಪಾಗಿದೆ ಅಥವ ಕಪ್ಪಾಗುತ್ತಿದೆ. ಮುಖ ಮೇಲಾಗಿ ಬಿದ್ದು ಕಣ್ಣು ಮುಚ್ಚಿದಂತಿದೆ. ಅದು ಜೀವಿಸಿದ್ದ ಒಬ್ಬ ವ್ಯಕ್ತಿಯದು ಅಂತ ಅವನಿಗೆ ಅನಿಸುತ್ತಿಲ್ಲ.

ವಿನೀತ ಆ ತಲೆಯನ್ನು ಸ್ವಲ್ಪ ಸಮಯ ದಿಟ್ಟಿಸುತ್ತಲೇ ಇದ್ದ. ಸುತ್ತಲಿದ್ದವರ ಮಾತುಗಳು ಕಿವಿಗೆ ಬೀಳುತ್ತಿವೆ.
’ಇನ್ನೂ ಹುಡುಗ, ೨೦ – ೨೨ ವರ್ಷ ಇರಬೇಕು ಅಷ್ಟೆ’
’ಏನಾಯ್ತಪ್ಪ ಈ ಹುಡುಗನಿಗೆ, ಈ ವಯಸ್ಸಿಗೇ ರೈಲಿಗೆ ತಲೆ ಕೊಟ್ಟುಬಿಟ್ಟನಲ್ಲಪ್ಪ’
’ಟ್ರೇನಿಗೆ ತಲೆ ಕೊಡಬೇಕಾದರೆ ಎಷ್ಟು ಧೈರ್ಯ ಬೇಕಪ್ಪ’
’ಈ ವಯಸ್ಸಿಗೇ ಹುಡುಗರು ಮನಸ್ಸು ಹಾಳುಮಾಡಿಕೊಳ್ಳುತ್ತಿದ್ದಾರೆ’

ಯಾರೊ ತನ್ನನ್ನು ಕರೆದಂತಾಗಿ ವಿನೀತ ಗುಂಪಿನಿಂದ ಹೊರಗೆ ಬಂದ. ಕಿಶು ಅವನನ್ನು ಬಹಳ ಸರಿ ಕೂಗಿ ಕರೆದನಂತೆ. ” ಸ್ಸಾರಿ ಕಿಶು, ತುಂಬಾ ಹೊತ್ತು ಕಾಯ್ಸಿಬಿಟ್ಟೆ.” “ಸ್ಕೂಲಲ್ಲಿ ಸಿಕ್ಕೊಣ್ವ” ಅನ್ನುತ್ತಾ ಬೇಲಾನ ಸರಪಳಿ ಅವನಿಗೆ ಕೊಟ್ಟು ಕಿಶು ಓಡಿದ.

ಬೇಲಾನಿಗೆ ಬೇಸರವಾಗಿರಬೇಕು, ದರದರ ಸರಪಳಿ ಎಳೆಯುತ್ತಾ ಮನೆಗೆ ಹೊರಟ. ಅವನ ಎಳೆದಾಟಕ್ಕೆ ವಿನೀತ ಓಡುತ್ತಾ ಮನೆ ಸೇರಿದ.

” ಅಮ್ಮ, ಈಗ ತಾನೆ ಒಬ್ಬ ಟ್ರೇನಿಗೆ ಸಿಕ್ಕಿ ಸತ್ತುಹೋದ. ನಾನು ಅದನ್ನು ನೋಡಿದೆ”
“ಏನಾಯ್ತೋ?”
“ಗೊತ್ತಿಲ್ಲಮ್ಮ. ಟ್ರೇನ್ ಫ಼ಾಸ್ಟ್ ಆಗಿ ಬರುತ್ತಿತ್ತು. ಆ ಹುಡುಗ ಗೊತ್ತಿಲ್ಲದೆ ಸಿಕ್ಕಿಹಾಕಿಕೊಂಡ ಅನ್ಸುತ್ತೆ. ಆದ್ರೆ, ಜನ ಅವನೇ ಹೋಗಿ ತಲೆ ಕೊಟ್ಟ ಅಂತಾರೆ. ಅವನ ತಲೆ ದೂರ ಬಿದ್ದಿತ್ತು. ನಾನು ನೋಡಿದೆ”
“ಅಯ್ಯೋ… ವಿನಿ .. ನೀನ್ಯಾಕೆ ಅಲ್ಲೆಲ್ಲ ಹೋಗಿದ್ದೆ. ಅಂಥವೆಲ್ಲ ನೋಡಬಾರದು.. ಗೊತ್ತಾಯ್ತ..”
ವಿನೀತ ಏನೂ ಉತ್ತರ ಕೊಡಲಿಲ್ಲ. ಸ್ನಾನಕ್ಕೆ ಹೋದ.

“ಇವತ್ತು ಏನೂ ಓದಿಕೊಂಡಿಲ್ಲ ನೀನು.. ಈ ವರ್ಷದ ಪರೀಕ್ಷೆ ಹೋದ ವರ್ಷದಂತೆ ಅಲ್ಲ ಅಂತ ಎಷ್ಟು ಹೇಳಿದರು ನಿನಗೆ ಗೊತ್ತಾಗಲ್ಲ” ಎನ್ನುತ್ತಾ ಅಪ್ಪ ಆಫ಼ೀಸಿಗೆ ಹೊರಟರು. ವಿನೀತ ಏನೂ ಮಾತಾಡಲಿಲ್ಲ.

ತಿಂಡಿ ತಿಂದು ಸ್ಕೂಲಿಗೆ ಹೊರಟ. ಹೋಗುವಾಗಲೂ ಹಳಿಗಳ ಮಧ್ಯೆ ಬಿದ್ದಿದ್ದ ತಲೆ ನೆನಪಾಗುತ್ತಲೇ ಇತ್ತು. ಆತ್ಮಹತ್ಯೆ, ಸಾಯುವುದು, ಯಾಕೆ ಸಾಯಬೇಕು ..ಹೀಗೆ ಯೋಚಿಸುತ್ತ ಹೆಜ್ಜೆ ಹಾಕತೊಡಗಿದ.

ಆ ದಿನ ಸ್ಕೂಲಲ್ಲಿ ಅವನ ಚಟುವಟಿಕೆ ಕಡಿಮೆ ಇತ್ತು. ಯಾರೊಡನೆಯೂ ಹೆಚ್ಚು ಮಾತಾಡಲಿಲ್ಲ. ಕಿಶು ಹತ್ತಿರ ಹೋದರೂ ಇಬ್ಬರೂ ಬೆಳಿಗ್ಗೆ ತಾವು ನೋಡಿದ ಟ್ರೇನ್ ವಿಷಯ ಮತಾಡಲಿಲ್ಲ. ಮಧ್ಯಾಹ್ನ ಊಟದ ಬಾಕ್ಸ್ ತೆಗೆದ. ಆದರೆ ಪೂರ್ತಿ ತಿನ್ನದೆ ನೀರು ಕುಡಿದ. ಆ ದಿನದ ಪಾಠಗಳು ತಲೆಯಲ್ಲಿ ಕೂರಲೇ ಇಲ್ಲ. ಬೆಳಿಗ್ಗೆ ಅಂದುಕೊಂಡಿದ್ದ. ಕ್ಲಾಸಲ್ಲಿ ಎಲ್ಲ ಸ್ನೇಹಿತರಿಗೂ ತಾನು ನೋಡಿದ ಸಾವಿನ ವಿಷಯ ಕಿಶುಗಿಂತ ಮೊದಲೇ ಹೇಳಬೇಕು. ಆದರೆ ಯಾರಿಗು ಏನೂ ಹೇಳುವ ಮನಸ್ಸು ಆಗಲಿಲ್ಲ.

ನಾಳೆ ಬುದ್ಧನ ಪಾಠ ವಿದೆ. ವಿಜ್ಞಾನದಲ್ಲಿ ಏನೋ ಪ್ರಯೋಗವಂತೆ. ಚರಿತ್ರೆ ಎಷ್ಟು ಓದಿದಿದರೂ ಅರ್ಥವಾಗುತ್ತಿಲ್ಲ. ಚರಿತ್ರೆಕೂಡ ಕಥೆ ತರ ಬರೆದರೆ ಓದುವುದಕ್ಕೆ ಚೆನ್ನ ಅಂದುಕೊಂಡ.

ರಾತ್ರಿ ಬುದ್ಧನ ಪಾಠ ಓದತೊಡಗಿದ. ಅರಮನೆಯಲ್ಲಿ ಆಟವಾಡುತ್ತಿರುವ, ಕಿರೀಟ ಇಟ್ಟುಕೊಂಡಿರುವ ಹುಡುಗನ ಕಲ್ಪನೆಯಾಯಿತು. ಚಿನ್ನದಂತೆ ಬಣ್ಣವಿರುವ ಬಟ್ಟೆ, ಹೊಳೆಯುತ್ತಿರುವ ಸಿಂಹಾಸನದಲ್ಲಿ ಪಾಠ ಓದುವ ಸಿದ್ಧಾರ್ಥ ಮೆಲ್ಲಗೆ ತಲೆಯಲ್ಲಿ ಮೂಡಿದ. ನಮ್ಮ ವಿಧಾನ ಸೌಧಕ್ಕಿಂತ ಅರಮನೆ ಚೆನ್ನಾಗಿದ್ದಿರಬೇಕು ಅನ್ನಿಸಿತು. ಅಲ್ಲಿಯ ರಾಜಕುಮಾರ. ದಿನಾ ಬರೀ ಸಿಹಿ ತಿಂಡಿಯೆ ತಿನ್ನುತ್ತದ್ದನೇನೊ. ತುಂಬಾ ಸುಖವಾಗಿದ್ದನೊ ಏನೊ. ಓದುವುದು, ಬರಿಯುವುದು ಯಾವಾಗ ಮಾಡುತ್ತಿದ್ದ? ಆಗ ನಮ್ಮತರದ ಸ್ಕೂಲ್ ಇರಲಿಲ್ಲವಲ್ಲ. ಸ್ನೇಹಿತರು ಹೇಗೆ ಸಿಗುತ್ತಿದ್ದರೋ ಗೊತ್ತಾಗಲಿಲ್ಲ. ಹಾಗೇ ನಿದ್ರೆ ಹತ್ತಿತು.

ಕ್ಲಾಸಿನಲ್ಲಿ ಪಾಠದಲ್ಲಿ ಇರುವುದಕ್ಕಿಂತ ಟೀಚರ್ ಹೆಚ್ಚು ಸಿದ್ಧಾರ್ಥನ ಬಗೆಗೆ ತಿಳಿಸಿದರು. ಅವನು ಮುದುಕಿಯನ್ನು, ರೋಗಿಯನ್ನು, ಸತ್ತುಹೋದವನನ್ನು ನೋಡಿದ ವಿಷಯ. ಜನ ತುಂಬಾ ದುಃಖ ಪಡುವ ಬಗೆಗೆ ಇತ್ಯಾದಿ. ಆ ಕಾಲದಲ್ಲಿ ಜನ ತುಂಬಾ ಕಷ್ಟ ಮತ್ತು ದು:ಖಪಡುತ್ತಿರಬೇಕು ಎಂದು ಊಹಿಸಿದ. ಹೆಣ ನೋಡಿದ ಬಗೆಗೆ ಹೇಳುವಾಗ, ವಿನೀತ ತಾನು ನೆನ್ನೆ ಹಳಿಗಳ ಮಧ್ಯೆ ನೋಡಿದ ದೇಹ ನೆನಪಾಯಿತು. ಪಾಠವನ್ನು ಮತ್ತೆ ಮೊದಲಿನಿಂದ ಓದಬೇಕು ಅಂದುಕೊಂಡ.

ಸುಖವಾಗಿದ್ದವನು, ಆ ಅರಮನೆ ಬಿಟ್ಟು ಹೊರಟುಹೋಗುತ್ತಿದ್ದಾನೆ. ಹೆಂಡತಿ, ಮಗು ಇತ್ಯಾದಿ ಅವನ ಮನಸ್ಸಿನಲ್ಲಿ ಹೊಳೆಯಲಿಲ್ಲ. ಅರಮನೆ ಬಿಟ್ಟದ್ದು, ಬಹಳ ಜನ ಅವನಿಗಿದ್ದ ಸೇವಕರು, ಸೈನ್ಯದವರು ಬಿಟ್ಟು ಹೋದದ್ದು ಅವನಿಗೆ ಸರಿ ಬರಲಿಲ್ಲ. ಕಥೆ ಮಜವಾಗಿತ್ತು. ಏನೇನೊ ಆಯ್ತು ಅಂದುಕೊಂಡ. ರಾತ್ರಿ ಪುಸ್ತಕ ಹಿಡಿದ. ಮತ್ತೆ ಬುದ್ಧನ ಕತೆಗೆ ಬಂದ. ಓದುತ್ತಾ ನಿದ್ರೆ ಆವರಿಸಿತು.

ಈ ಮುಂಜಾನೆ ಎಂದಿನಂತಿಲ್ಲ. ಅಮ್ಮ ಅತ್ತಿರುವಂತೆ ಕಾಣುತ್ತಿದೆ. ಅಪ್ಪ ಕೋಪದಲ್ಲಿರುವಂತಿದೆ. ತನ್ನ ಕಡೆಗೆ ನೋಡಲೂ ಇಲ್ಲ. ಹಾಲು ಚೆನ್ನಾಗಿಲ್ಲ ಅನ್ನಿಸಿತು. ಅಪ್ಪ ಆಫ಼ೀಸಿಗೆ ಹೊರಟು ಹೋಗಿದ್ದಾರೆ ಬೇಗ. ಅಮ್ಮ ಹೇಳದಿದ್ದರೂ ಬೇಲಾನನ್ನು ಹೊರಗೆ ಕರೆದುಕೊಂಡು ಹೊರಟ.

ಕ್ಲಾಸಿನಲ್ಲಿ ಕಸಿವಿಸಿ. ಏಕೋ ಖುಶಿಯಲ್ಲಿರಲು ಆಗುತ್ತಿಲ್ಲ. ಸ್ನೇಹಿತರು ಕೇಳಿದ್ದಕ್ಕೆ ಮಾತ್ರ ಉತ್ತರ. ಈ ದಿನವೂ ಬುದ್ಧನ ಪಾಠ ಮುಂದುವರಿದಿದೆ. ಈ ಕಥೆ ಚೆನ್ನಾಗಿಲ್ಲ ಅನ್ನಿಸಿಬಿಟ್ಟಿತು.

ಆಟವಿಲ್ಲದೆ ವಿನೀತ ಸಂಜೆ ಬೇಗ ಮನೆ ಸೇರಿದ. ಅಪ್ಪ ಇನ್ನೂ ಬಂದಿಲ್ಲ. ಅಮ್ಮನ ಅತ್ತಂತ ಮುಖ ಬದಲಾಗಿಲ್ಲ. ಟಿ ವಿ ನೋಡಬೇಕು ಅನ್ನಿಸಲಿಲ್ಲ. ಬೇಲಾನೊಡನೆ ಸ್ವಲ್ಪ ಆಡಿದ. ಈ ಬೇಲಾ ಎಷ್ಟು ಖುಶಿಯಲ್ಲಿ ಆಡ್ತಾನೆ. ಆಟಕ್ಕೇ ಕಾಯುತ್ತಿರುತ್ತಾನೆ ಅನ್ನಿಸಿತು. ಬುದ್ಧ ನಾಯಿ ಸಾಕಿದ್ದನಾ ಪ್ರಶ್ನೆ ತಲೆಗೆ ಬಂದು ಹೋಯಿತು.

ಈ ಅಪ್ಪ ಅಮ್ಮ ಜಗಳವಾಡುವುದು ತನಗೆ ಗೊತ್ತಾಗಿಬಿಡುತ್ತೆ. ’ತಥ್.. ಇಬ್ಬರೂ ತನಗೆ ಬೇಜಾರು ಮಾಡುತ್ತಾರೆ’.

ಅಪ್ಪ ಮನೆಗೆ ತಡವಾಗಿ ಬಂದಿದ್ದಾರೆ. ಮಾತಿಲ್ಲ. ರೂಮಿಗೆ ಹೋದರು. ಅಮ್ಮನೂ ರೂಮಿಗೆ ಹೋಗಿ ಏನೋ ಗೊಣಗಿದಂತೆ ಕೇಳಿಸಿತು. ’ಫ಼ಟ್..’ ಕೆನ್ನೆಗೆ ಹೊಡೆದ ಶಬ್ದ. ಅಮ್ಮ ಸಣ್ಣದಾಗಿ ಅಳುತ್ತಿರಬಹುದು. ಮತ್ತೇನೋ ಮಾತು.
” ಉಸಿರೆತ್ತಿದರೆ.. ಕೊಂದುಬಿಟ್ಟೇನು..” ಘರ್ಜನೆ.
“ನಾನು ಸಾಯುವುದು ಖಂಡಿತ. ನನ್ನ ಹೆಣ ನೋಡಿ ಸಂತೋಷ ಪಡಿ” ಅಮ್ಮನ ಧ್ವನಿ.
“ಅಯ್ತು..ಅವನು ನಿನ್ನ ಜೊತೆಯೆ ಬೆಳೆಯಲಿ” ಅಪ್ಪನ ಹತಾಷೆಯ ಮಾತು.

ಜಗಳ ಏತಕ್ಕೆನ್ನುವುದು ವಿನೀತನಿಗೆ ಗೊತ್ತಾಗಲೇ ಇಲ್ಲ. ಆದರೆ ಮನಸ್ಸು ಬೇಸರದಲ್ಲಿ ಮುಳುಗುವುದನ್ನು ನಿಲ್ಲಿಸಲಾಗಲಿಲ್ಲ. ಅಪ್ಪನಿಗೆ ಮನಸ್ಸಿನಲ್ಲಿ ಬೈದುಕೊಳ್ಳುತ್ತಾ ಊಟ ಮಾಡದೆ ಮಲಗಿಕೊಂಡ. ಯಾರೂ ಊಟಕ್ಕೆ ಎಬ್ಬಿಸಲೂ ಇಲ್ಲ.

” ವಿನೂ..ನೆನ್ನೆ ಊಟ ಮಾಡದೆ ಮಲಗಿಬಿಟ್ಟಯಲ್ಲ. ಏಳು. ಮುಖ ತೊಳೆದುಕೊ. ತಿಂಡಿ ಮಾಡಿದ್ದೇನೆ. ” ಅಮ್ಮನ ಧ್ವನಿ ಬದಲಾಗಿಲ್ಲ. ಅತ್ತಂತ ಮುಖ ಬದಲಾಗಿಲ್ಲ. ಅವಳು ಗುಟ್ಟನ್ನು ಮುಚ್ಚಿಟ್ಟಿದ್ದಾಳೆ.

ಇವತ್ತೂ ಹಾಲು ಚೆನ್ನಾಗಿಲ್ಲ. ಉಪ್ಪಿಟ್ಟು ಸೇರುತ್ತಿಲ್ಲ. ಉರುಳಿ ಬಿದ್ದ ತಲೆ ಮತ್ತೆ ಅಮ್ಮ ನೆನಪಾಗಿ ಉಪ್ಪಿಟ್ಟು ತಿನ್ನಲೇ ಇಲ್ಲ. ಎಲ್ಲೊ ದುಃಖ ಒತ್ತುತ್ತಿದೆ. ಅಳಬೇಕು ಅನ್ನಿಸದಿದ್ದರೂ ಅಳುವಿನಂಥ ಒಳ ಒದ್ದಾಟ ವಿನೀತನಿಗೆ ಆಗುತ್ತಿದೆ.

ಓದಿಕೊಳ್ಳಲು ಕೂತ. ಅಚಾನಕ ಬುದ್ಧನ ಪಾಠವೆ ಸಿಕ್ಕಿದೆ. ಮಜ ಅನ್ನಿಸದಿದ್ಧ ಬುದ್ಧನ ಪಾಠದ ಕೊನೆಯ ಭಾಗ ಈ ದಿನ ಕುತೂಹಲದಿಂದ ಓದಲು ಶುರುಮಾಡಿದ. ಮತ್ತೆ ಮೊದಲಿನಿಂದ ಕೊನೆಯವರೆಗೆ ಓದಿದ. ಸಿದ್ಧಾರ್ಥ ಅನ್ನುವುದಕ್ಕಿಂತ ಬುದ್ಧ ಅನ್ನುವ ಹೆಸರು ಇಷ್ಟವಾಯ್ತು. ಬುದ್ಧ ಅನ್ನುವುದೇ ಸುಲಭ.

ಕನ್ನಡ ಕ್ಲಾಸಲ್ಲಿ ಬುದ್ಧನ ಪಾಠ ಮುಗಿಸುತ್ತಿದ್ದಾರೆ ಟೀಚರ್. ವಿನೀತ ಅಮ್ಮನ ಬಗ್ಗೆ ಯೋಚಿಸುತ್ತಿದ್ದ. ಅಪ್ಪನ ಗಟ್ಟಿ ಧ್ವನಿ, ಅಮ್ಮನ ಅತ್ತ ಮುಖ, ಹಳಿಗಳ ಮಧ್ಯದ ವಿಕಾರ ಮುಂಡ, ಮಣ್ಣು ಮೆತ್ತಿಕೊಂಡು ಉರುಳಿ ಹೋಗಿದ್ದ ಶಾಂತ ಮುಖ. ಈ ಟೀಚರ್ ಬುದ್ಧನ ಕಥೆ ಪೂರ್ತಿ ಹೇಳುತ್ತಲೆ ಇಲ್ಲ ಅನ್ನಿಸಿಬಿಟ್ಟಿತು. ಇವರು ಹೇಳಿದ್ದೆಲ್ಲ ಬೆಳಿಗ್ಗೆ ತಾನು ಓದಿಕೊಂಡಿದ್ದೇನೆ. ಮತ್ತೆ ಅದನ್ನೇ ಕೇಳಬೇಕಲ್ಲ.

ಬೋರಾಗಿ ಬೋರ್ಡ್ ಮೇಲೆ ನೇತು ಹಾಕಿದ ಗಾಂಧಿ, ಬುದ್ಧ, ಮಹಾವೀರರ ಚಿತ್ರಗಳನ್ನೇ ನೋಡತೊಡಗಿದ. ಬುದ್ಧ ಮಾತ್ರ ತಲೆಯಲ್ಲಿ ಕುಳಿತಿದ್ದಾನೆ. ಅವನಿಗೆ ಅದು ಹೊಸ ಚಿತ್ರದಂತೆ ಈ ದಿನ ಕಾಣುತ್ತಿದೆ. ಆ ಮುಖವನ್ನೇ ನೋಡತೊಡಗಿದ.

ಬುದ್ಧನ ಮುಖ ವಿಚಿತ್ರವಾಗಿದೆ. ನಗುವಂತೆ ಕಾಣಿಸುತ್ತಿಲ್ಲ. ಅಳು ಮುಖವೂ ಅಲ್ಲ. ಸ್ವಲ್ಪ ಗಂಡಿನಂತೆ ಸ್ವಲ್ಪ ಹೆಣ್ಣಿನಂತೆ ಇದೆ. ಕಿವಿ ಏಕೆ ಇಷ್ಟು ಅಗಲ ಮತ್ತು ದೊಡ್ಡದೊ ಗೊತ್ತಾಗಲಿಲ್ಲ. ಕಣ್ಣುಗಳು ಮೆಲ್ಲಗೆ ತೆರೆಯುತ್ತಿದ್ದಾನೆಯೆ ಅಥವ ಮುಚ್ಚುತ್ತಿದ್ದಾನೆಯೆ. ಪದ್ಮಾಸನದಲ್ಲಿ ಕೈಗಳನ್ನು ಒಂದರ ಮೇಲೆ ಒಂದು ಇಟ್ಟು ಯೋಚಿಸುತ್ತ ಕುಳಿತಿದ್ದಾನೆ ಅಥವಾ ಯೋಚನೆಯೆ ಇಲ್ಲದಂತೆ ಮಲಗಿ ಎದ್ದಂತೆ ಅಥವಾ ಇದೀಗ ಮಲಗುತ್ತಿರುವಂತೆ. ಅಂತೂ ಬುದ್ಧ ಚೆನ್ನಾಗಿದ್ದಾನೆ. ಮುದ್ದಾಗಿಯೂ ಇದ್ದಾನೆ ಅಂತ ಖುಶಿಯಾಯಿತು.

ಅರಮನೆಯಲ್ಲಿದ್ದಾಗೆ ಇನ್ನೂ ಚೆನ್ನಾಗಿದ್ದನೊ ಏನೊ. ಒಳ್ಳೊಳ್ಳೆಯ ಬಟ್ಟೆಗಳು, ರಥ, ಸೈನಿಕರು, ಊಟ, ಸಿಹಿ ತಿಂಡಿಗಳು ಇತ್ಯಾದಿ. ಅವನು ಸ್ನೇಹಿತರ ಜೊತೆ ಯಾವ ಯಾವ ಆಟಗಳನ್ನು ಆಡುತ್ತಿದ್ದ. ಈಗಿನಂತೆ ಕ್ರಿಕೆಟ್, ಫ಼ುಟ್ಬಾಲ್, ಕಬಡ್ಡಿ, ಕೊಕ್ಕೊ ಅಥವ ಬರಿ ಕತ್ತಿ ಫ಼ೈಟ್ ಆಡುತ್ತ ಇದ್ದ ಅನ್ನಿಸುತ್ತೆ. ಆ ಯೋಚನೆಗೆ ಅವನಿಗೇ ನಗು ಬಂತು. ಅಂದ ಹಾಗೆ ರಾಜಕುಮಾರಿ ಒಬ್ಬಳು ಅವನ ಹೆಂಡತಿ. ಮದುವೆ ಆಗಿ ಆಮೇಲೆ ಅವಳನ್ನು ಬಿಟ್ಟು ಹೊರಟು ಹೋದನಂತೆ. ಎಲ್ಲರನ್ನೂ ಬಿಟ್ಟು ’ಜನರೆಲ್ಲ ಏಕೆ ದುಃಖ ಪಡುತ್ತಾರೆ?’ ಅಂತ ತಿಳಿದುಕೊಳ್ಳಲು ಹೊರಟ. ಗಲಿಬಿಲಿಯಾಯಿತು. ಮನೆಬಿಟ್ಟು ಹೋದರೆ ಬಹಳ ವಿಷಯ ತಿಳಿದುಕೊಳ್ಳಬಹುದೊ ಏನೊ? ಮೆಚ್ಚುಗೆಯಾಯ್ತು. ಬುದ್ಧ ಬಹಳ ಸುಂದರನಾಗಿ ಕಂಡ. ಅಮ್ಮ ಯಾಕೆ ಗೊತ್ತಾಗದಂತೆ ಅಳುತ್ತಾಳೆ. ತಾನು ಅದನ್ನು ತಿಳಿದುಕೊಳ್ಳಬೇಕು.

ಮತ್ತೆ ವಿನೀತ ಬುದ್ಧನ ಕಡೆ ನೋಡಿದ. ಈಗ ಅವನು ಮರವೊಂದರ ಕೆಳಗೆ ಕುಳಿತು ಯೋಚಿಸುತ್ತಿರುವುದು ಹೊಳೆಯಿತು. ಅವನ ತಲೆಯ ಮೇಲೆ ವಿಶಾಲವಾಗಿ ಹರಡಿದ ಮರ ಕನಸು ಕಾಣುತ್ತಿರುವ ಒಬ್ಬ ಮನುಷ್ಯನಂತೆ ಕಂಡಿತು. ಅಪ್ಪನ ಗಾಂಭಿರ್ಯ, ಅಮ್ಮನ ಅತ್ತಂತ ಮುಖ ಎರಡೂ ಬುದ್ಧನ ಮುಖದಲ್ಲಿ ಇದ್ದಂತಿದೆ. ಹಾಗೆ ಯೊಚನೆ ಮಾಡುವುದು ತಪ್ಪಿರಬಹುದೆ ಅಂದುಕೊಂಡ.

ಸಂಜೆ ಮನೆಗೆ ಬಂದಾಗ ಅಪ್ಪ ಬಂದುಬಿಟ್ಟಿದ್ದರು. ಮಾಮೂಲಾಗಿದ್ದರು. ಅಮ್ಮ ನೆನ್ನೆ ಜಗಳವೇ ಆಗಿಲ್ಲವೇನೊ ಅನ್ನುವಂತೆ ಅಪ್ಪನ ಜೊತೆ ಮಾತು ನಡೆಯುತ್ತಿತ್ತು. ಅಮ್ಮನ ಮುಖ ಆದರೂ ಗೆಲುವಾಗಿಲ್ಲ. ಇಬ್ಬರೂ ವಾಕಿಂಗ್ ಹೊರಟರು. ನನ್ನನ್ನು ಕರೆಯಲಿಲ್ಲವಲ್ಲ ಅನ್ನಿಸಿತು.

ಪುಸ್ತಕದ ಮುಂದೆ ಕೂತು ಏನು ಓದಲಿ ಯೋಚಿಸಿದ. ಬುದ್ಧನ ಪಾಠ ಇನ್ನೊಮ್ಮೆ ಓದುವ ಮನಸ್ಸು. ಓದುವುದರ ಬದಲು ಊಹೆ ಮಾಡುತ್ತಾ ಕುಳಿತ. ಟೀಚರ್ ಹೇಳಿದ್ದಕ್ಕಿಂತ ಬುದ್ಧನ ಕಥೆ ಬಹಳ ದೊಡ್ಡದಿದೆ. ದೊಡ್ಡ ಪುಸ್ತಕ ಸಿಕ್ಕಿದರೆ ಪೂರ್ತಿ ಓದಬೇಕು ಅನ್ನುವ ಆಸೆಯಾಯ್ತು. ಅಪ್ಪನಿಗೆ ಹೇಳಿ ನನ್ನ ರೂಮಿನಲ್ಲಿ ಒಂದು ಬುದ್ಧನ ಫ಼ೋಟೊ ಹಾಕಬೇಕು. ಈ ಸೂಪರ್ ಮನ್, ಬ್ಯಾಟ್ ಮನ್ ಚಿತ್ರ ತೆಗೆದುಬಿಡಬೇಕು. ನಾನೇನು ಚಿಕ್ಕ ಹುಡುಗನಲ್ಲ.

ಸರಿ, ತನ್ನ ಕ್ಲಾಸಿನಲ್ಲಿರುವುದು ಬಹಳ ಹಳೆ ಫ಼ೋಟೊ. ಹೊಸದು ಹುಡುಕಿ ತರಬೇಕು. ಬುದ್ಧನ ತಲೆಯ ಮೇಲಿನ ಮರ ಇನ್ನೂ ವಿಶಾಲವಾಗಿ ಕಾಣಬೇಕು. ಆಗ ಇನ್ನೂ ಚೆನ್ನಾಗಿರುತ್ತೆ. ರೂಮಿನ ಗೋಡೆ ತುಂಬಾ ಬುದ್ಧನ ಚಿತ್ರ.. ಅಬ್ಬಾ.. ಎಷ್ಟೊಂದು ಚಂದ.

ಅಪ್ಪ, ಅಮ್ಮ ವಾಕ್ ಮುಗಿಸಿ ಒಳಗೆ ಬರುವ ಸದ್ದಾಯಿತು. ಎದ್ದು ಹೊರಗೆ ಬಂದ. ಅವರಿಬ್ಬರ ಮುಖ ಹೊಸದಾಗಿ ನೋಡತೊಡಗಿದ. ಅಮ್ಮ’ “ಏನು ವಿನು.. ಹಾಗೆ ನೋಡ್ತಾ ಇದೀಯ. ಏನು ಬೇಕು.. ಬಾ .. ತಿನ್ನೋದಿಕ್ಕೆ ಏನಾದರು ಕೊಡ್ಲ ? ”

ಇಬ್ಬರೂ ಶಾಂತವಾಗಿದ್ದಾರೆ. ಅದರೂ ಇಬ್ಬರಲ್ಲು ಬುದ್ಧ ಹೇಳಿದಂತ ದು:ಖ ಇದೆ ಅನ್ನುವ ಖಾತ್ರಿ. ಏಕೊ ಮೊದಲಿನಂತೆ ಅಮ್ಮನ ಹತ್ತಿರ ನಗುತ್ತಾ ಮಾತನಾಡಲು ಆಗಲ್ಲವೇನೊ. ಅಪ್ಪನಂತು ಬಹಳ ಮೂಡಿ.

ಅಪ್ಪ ತನ್ನನ್ನೆ ನೋಡುತ್ತಿದ್ದಾರೆ. ಹತ್ತಿರ ಬಂದು ತಲೆ ಸವರಿದರು. ಏನೊ ಯೋಚಿಸುತ್ತಿದ್ದಾರೆ. ಜೋರಾಗಿ ನಿಟ್ಟುಸಿರು ಬಿಟ್ಟು ರೂಮಿಗೆ ಹೋದರು.

ರಾತ್ರಿ ಊಟ ಮಾತಿಲ್ಲದೆ ಮುಗಿಸಿದ. ಎದ್ದು ಹೋಗಿ ಮಲಗುವ ಮುಂಚೆ ಅದೇ ಪಾಠದ ಪುಟಗಳನ್ನು ತೆರೆದ. ಸಿದ್ದಾರ್ಥ ಹೆಸರಿನ ಕೆಳಗೆ ಪೆನ್ನಿನಿಂದ ದಪ್ಪ ಗೆರೆ ಎಳೆದು, ಪರೀಕ್ಷೆಗೆ ಈ ಪಾಠದಿಂದ ಮೂರಾದರು ಪ್ರಶ್ನೆ ಬಂದೇಬರುತ್ತೆ. ಅಮ್ಮ ನಾಳೆ ಇನ್ನೂ ಗೆಲುವಾಗಿರಲಪ್ಪ ದೇವರೆ.. ಅಂತ ಮನಸ್ಸಿನಲ್ಲಿ ಕೋರಿದ.

’ವಿನೂ.. ನಿದ್ರೆ ಬಂತಾ’ ಅಮ್ಮ ರೂಮಿಗೆ ಬಂದಿದ್ದಾಳೆ. ತಲೆ ನೇವರಿಸುತ್ತಾ ಹೇಳುತ್ತಿದ್ದಾಳೆ, ’ವಿನೂ.. ನಾಳೆ ನಾನು ಮತ್ತು ನೀನು ನಮ್ಮ ಅಮ್ಮನ ಊರಿಗೆ ಹೋಗ್ತಾ ಇದೀವಿ. ನಿನಗೆ ಅಜ್ಜಿ ಅಂದರೆ ತುಂಬಾ ಇಷ್ಟ ಅಲ್ವ. ಅಲ್ಲೇ ನಿನ್ನ ಸ್ಕೂಲಿಗು ಸೇರಿಸ್ತೀನಿ. ಅದು ಬಹಳ ಒಳ್ಳೆಯ ಸ್ಕೂಲ್. ಅಪ್ಪ ಇದೇ ಊರಲ್ಲೇ ಇರ್ತಾರೆ ಆಯ್ತಾ. ನಿನ್ನ ನೋಡ್ಬೇಕು ಅಂದಾಗ ಅಜ್ಜಿ ಮನೆಗೆ ಬಂದು ಹೋಗ್ತಾರೆ. ಗೊತ್ತಾಯ್ತ? ಇನ್ಮೇಲೆ ನಾವಿಬ್ರೂ ಅಜ್ಜಿ ಊರಲ್ಲೇ ಇರೋಣ. ಅಪ್ಪನಿಗೆ ಆಫ಼ೀಸ್ ಕೆಲಸ ತುಂಬಾ. ನಾವು ಅವರಿಗೆ ಕಷ್ಟ ಕೊಡೋದು ಬೇಡ. ನಾನು ನಿನ್ನ ಬಟ್ಟೆ, ಪುಸ್ತಕಗಳನ್ನೆಲ್ಲ ಪ್ಯಾಕ್ ಮಾಡಿದ್ದೇನೆ. ’

ವಿನೀತನಿಗೆ ಏನೂ ಹೇಳಲು ಗೊತ್ತಾಗಲಿಲ್ಲ. ಅಪ್ಪ ಕೆಟ್ಟವರು ಅನ್ನುವ ಕಲ್ಪನೆಯಷ್ಟೇ ಬಂದು ಹೋಯ್ತು.

ಅಮ್ಮ ಅವನ ಮನಸ್ಸು ಓದಿದಂತೆ ಅನ್ನಿಸಿತು. ’ವಿನೂ.. ಅಪ್ಪ ಒಳ್ಳೆಯವರು. ಅವರ ಬಗ್ಗೆ ಬೇಜಾರು ಮಾಡ್ಕೊ ಬೇಡ. ಈಗ ಮಲಗು’

ಅಮ್ಮ ಎದ್ದು ಹೋದಳು. ’ವಿಚಿತ್ರ ಅಪ್ಪ ಹಾಗೆ ಈ ಅಮ್ಮ ಕೂಡ”ಅಂದುಕೊಂಡ. ಅಜ್ಜಿ ಊರು ನೆನಪಾಯಿತು. ಚಿಕ್ಕ ಊರು ಆದ್ದರಿಂದ ಚಿಕ್ಕ ಸ್ಕೂಲಿಗೇ ನನ್ನ ಸೇರಿಸ್ತಾರೆ. ತನ್ನ ಈಗಿನ ಗೆಳೆಯರು ಇನ್ನು ಮುಂದೆ ತನಗೆ ಸಿಕ್ಕುವುದಿಲ್ಲ. ಯಾಕೊ ತುಂಬಾ ಬೇಜಾರಾಯಿತು. ಈ ಬೇಜಾರು ದು:ಖವೇ ಇರಬೇಕು. ಈ ಅಪ್ಪನೂ ತನಗೆ ಸಿಕ್ಕುವುದಿಲ್ಲವೇನೊ. ಏನೋ ಕಳೆದುಕೊಳ್ಳುತ್ತಿದ್ದೇನೆ ಅನ್ನಿಸತೊಡಗಿತು. ಹಾಸಿಗೆಯಲ್ಲಿ ಅತ್ತ ಇತ್ತ ಉರುಳತೊಡಗಿದ.

ಕಣ್ಣು ನಿದ್ರೆಗೆಳೆಯತೊಡಗಿದೆ. ರೇಲು ಹಳಿಗಳು, ಉರುಳಿದ ತಲೆ, ಅಮ್ಮ ಹುಚ್ಚಿಯಾಗುತ್ತೇನೆ ಅಂತ ಅತ್ತದ್ದು, ಸಿದ್ಧಾರ್ಥ ಅರಮನೆ ಬಿಟ್ಟು ಹೊರಟುಹೋಗುತ್ತಿರುವುದು…. ಜಟೆ ಕಟ್ಟಿರುವ ಬುದ್ಧ ಕಾಣುತ್ತಿದ್ದಾನೆ. ತನ್ನ ನಿಮೀಲಿತ ಕಣ್ಣುಗಳನ್ನು ಪೂರ್ಣ ತೆರೆದಿದ್ದಾನೆ. ಇವನ ಕೈಹಿಡಿದು ಕೂರಿಸುತ್ತಿದ್ದಾನೆ. ಚಂದ್ರನ ಕಡೆ ಅಥವ ನಕ್ಷತ್ರಗಳ ಕಡೆ ಅಥವ ತಾನು ಇದುವರೆಗೆ ಕುಳಿತಿದ್ದ ವಿಶಾಲ ಮರದ ಕಡೆ ಕೈ ತೋರಿಸಿ, ಅವನು ನಗುತ್ತ ಏನೊ ಹೇಳುತ್ತಿದ್ದಾನೆ. ಅರ್ಥವಾಗುತ್ತಿಲ್ಲ ಅಥವ ಆಗುತ್ತಿದೆ. ಇನ್ನು ನೀನು ನನ್ನ ಸ್ನೇಹಿತ ಅನ್ನುತ್ತಿದ್ದಾನೆ…ಇದೀಗ ಈ ಹೊಸ ಸ್ನೇಹಿತ ಸಿದ್ಧಾರ್ಥನಿಗೆ ಅಲ್ಲ ಈ ಬುದ್ಧನಿಗೆ ಅಮ್ಮನ ಅತ್ತ ಮುಖಭಾವ ಬಂದಿದೆ ಅಥವ ಅಪ್ಪನ ಗಾಂಭೀರ್ಯ.

ಬೇಲಾ ಬೊಗಳಿದ ಶಬ್ಧ. ಎಚ್ಚರವಾಯಿತು. ತಾನು ಬೆಳಿಗ್ಗೆ ಅಜ್ಜಿ ಊರಿಗೆ ಹೋಗಬೇಕಲ್ಲ. ನಾಳೆ ಬೇಗ ಎದ್ದು ರೇಲುಹಳಿಗಳನ್ನು ನೋಡಬೇಕು. ಸತ್ತುಹೋದ ಹುಡುಗ ಯಾರಿರಬಹುದು? ಅವನ ತಲೆ ಅಲ್ಲೇ ಬಿದ್ದಿರಬಹುದಾ ಬಿದ್ದಿದ್ದರೆ ಸರಿಯಾಗಿ ನೋಡಬೇಕು. ಗುರುತು ಹಿಡಿಯಬೇಕು…

ವಿನೀತನಿಗೆ ನಿದ್ರೆ ಆವರಿಸಿದೆ. ಕನಸು… ಅಳುತ್ತಿರುವ ಅಮ್ಮ .. ಅಪ್ಪ ತನಗಾಗಿ ದೊಡ್ಡ ಬುದ್ಧನ ಚಿತ್ರ ಅಂಗಡಿಯಿಂದ ತರುತ್ತಿರುವ ಹಾಗೆ.. ಆ ಚಿತ್ರದ ಬುದ್ಧನನ್ನು ತಾನು ಎರಡೂ ಕೈ ಚಾಚಿ ಅಪ್ಪಿಕೊಂಡಹಾಗೆ.. ಮತ್ತೆ ಅಪ್ಪ ತನಗೆ ಬೆನ್ನು ಹಾಕಿ ಹೊರಟ ಹಾಗೆ.. ದೂರ.. ದೂರ. ಅಪ್ಪನ ಆಕೃತಿ ಚಿಕ್ಕದಾಗುತ್ತಾ..ಬುದ್ಧನ ಬೆನ್ನಿನಂತೆ ಕಾಣುತ್ತ.. ಅಪ್ಪನ ತಲೆಯಲ್ಲಿ ಜಟೆ ಇದ್ದಂತೆ… ಮತ್ತೆ ತಾನು ಮರವೊಂದರ ಕೆಳಗೆ ಕುಳಿತು ಹೊಸ ಸ್ನೇಹಿತನ ಕಾಯುತ್ತಿರುವ ಹಾಗೆ.

**********************

 (Published in “Panju” – Link address:http://www.panjumagazine.com/?p=13070)