ಮೂರ್ಖ

depressed

ಸಾಗರದಿಂದ ಬಂದ ಆ ಪತ್ರ ಓದಿದೆ. ಕೊನೆಯ ವಾಕ್ಯ ಹೀಗಿತ್ತು. ’ನಿಮ್ಮ ಸ್ನೇಹಿತ ಒಬ್ಬ ಈಡಿಯಟ್. ಇದಕ್ಕಿಂತ ಹೆಚ್ಚೇನೂ ಹೇಳಲಾರೆ. ನೀವು ಮತ್ತು ನಿಮ್ಮ ಸ್ನೇಹಿತರು ಮಾಡಿದ ಉಪಕಾರಕ್ಕೆ ಆಭಾರಿ. ನಿಮಗೆಲ್ಲ ಶುಭ ಕೋರುವ… ’

ಆ ಪತ್ರ ಹಿಡಿದು ಹಾಗೇ ಸೋಫ಼ಾದಲ್ಲಿ ಕುಳಿತೆ…. ಯೋಚನೆಗಳು ಹಿಂದಿನ ದಿನಗಳೆಡೆಗೆ ಸರಿದವು.

ಗೆಳೆಯ ಮನೋಜ್ ಈ ಊರಿಗೆ ಎರಡು ವರ್ಷಗಳ ಹಿಂದೆ ವರ್ಗವಾಗಿ ಬಂದವನು. ತಾಲೂಕು ಕಛೇರಿಯಲ್ಲಿ ಮೊದಲ ದರ್ಜೆ ಗುಮಾಸ್ತನಾಗಿ ಎಂಟು ವರ್ಷಗಳ ಸರ್ವೀಸ್ ಮಾಡಿದ್ದವನು. ನೋಡಲು ಸ್ಫುರದ್ರೂಪಿ, ಹೆಚ್ಚು ಎತ್ತರವಿಲ್ಲಆದರೆ ಒಳ್ಳೆ ಮೈಕಟ್ಟು. ಸ್ನೇಹ ಜೀವಿ. ಗೆಳೆಯರ ಬಳಗವನ್ನೆ ಹೊಂದಿದ್ದ. ಎಲ್ಲರೊಂದಿಗೆ ನಗೆ, ಮಾತುಕತೆ. ಯಾರಿಗೂ ಕಿರಿಕಿರಿಯೆನಿಸದ ಒಡನಾಟದವನು.

ಮದುವೆಯಾಗಿ ಮೂರು ವರ್ಷಗಳಾಗಿದ್ದವು. ಸುಂದರ ಹೆಂಡತಿ. ಮಕ್ಕಳಿನ್ನೂ ಇಲ್ಲ. ಅಪರೂಪಕ್ಕೆ ಮನೋಜ್ ಹೆಂಡತಿಯೊಂದಿಗೆ ಪೇಟೆ ಬೀದಿಯಲ್ಲಿ ಮುಖ ತೋರಿಸುತ್ತಿದ್ದ. ಹೆಚ್ಚು ಅವನು ಓಡಾಡುಡುತ್ತಿದ್ದುದು ಗೆಳೆಯರೊಟ್ಟಿಗೆ. ಅದರಲ್ಲೂ ಮದುವೆ ಇನ್ನೂ ಆಗದ ಬ್ರಹ್ಮಚಾರಿಗಳೊಟ್ಟಿಗೆ!

ಆಗಾಗ ಮನೋಜ್ ತನ್ನ ವಿಷಯ ಹೇಳುತ್ತಿದ್ದ. ನಾವೆಲ್ಲ ಗುಂಪು ಕುಳಿತು ತಮ್ಮ ತಮ್ಮ ಊರು, ಅಪ್ಪ ಅಮ್ಮ, ನೆಂಟರು, ಮನೆ ವಿಷಯ ಬಂದಾಗ ಅವನು ಹೇಳುತ್ತಿದ್ದ, ‘ನೀವೆಲ್ಲ ಅದೃಷ್ಟವಂತರು. ನನಗೆ ಬುದ್ಧಿ ಬರುವುದಕ್ಕೆ ಮುಂಚೆಯೆ ಅಪ್ಪನನ್ನು ಕಳೆದುಕೊಂಡವನು.. ನನ್ನ ಅಮ್ಮ ಅವರ ಅಣ್ಣನ ಮನೆಯಲ್ಲಿ ಅಂದರೆ ನನ್ನ ಸೋದರ ಮಾವನ ಮನೆಯಲ್ಲಿ ಉಳಿದುಕೊಂಡಳು. ಸೋದರ ಮಾವ ನನ್ನ ಜೀವನ ರೂಪಿಸಿದವರು. ನಾನು ಇಷ್ಟು ಓದಿ, ಕೆಲಸ ಅಂತ ಸಿಕ್ಕಬೇಕಾದರೆ ಆ ಮಾವನೆ ಕಾರಣ.’ ಅವನ ಮಾತಿನಲ್ಲಿ ಬಹಳ ಕೃತಜ್ಞ ಭಾವ ತುಂಬಿ ತುಳುಕುತ್ತಿತ್ತು.

‘ನಾನು ಎಂದೂ ಮಾವನ ಮಾತು ಮೀರಿದವನಲ್ಲ. ಅವರು ಹಾಕಿದೆ ಗೆರೆ ದಾಟಿದವನಲ್ಲ. ನನ್ನ ಜೀವನದಲ್ಲಿ ಅವರಿಗೊಂದು ವಿಶೇಷ ಸ್ಥಾನ ಕೊಟ್ಟಿದ್ದೇನೆ.’

ನಾವೆಲ್ಲ ಅವನ ಆ ಕೃತಜ್ಞ ಮನಸ್ಸಿಗೆ ಖುಷಿಯಾಗಿದ್ದೆವು. ಯಾರ ಬಗೆಗೂ ಒಳ್ಳೆಯ ಅಭಿಪ್ರಾಯ ಹೊಂದಿರದ ಇಂದಿನ ಯುವಕರ ನಡುವೆ ಹೀಗೆ ಉಪಕರಿಸಿದ ಸೋದರ ಮಾವನ ಬಗೆಗೆ ಹೊಗಳುವುದು ಅಪರೂಪ.

ಮನೋಜ್ ಮನೋಜ್ಞವಾಗಿ ಹಾಡಬಲ್ಲ ಗಾಯಕ ಕೂಡ. ಹೆಚ್ಚು ಹೆಚ್ಚು ಮುಖೇಶ್ ಹಾಡುಗಳನ್ನು, ಅದರಲ್ಲೂ ದು:ಖ ಭರಿತ ವಿರಹ ಗೀತೆಗಳನ್ನು ನಾವೆಲ್ಲ ಕುಳಿತು ವಿರಾಮದಲ್ಲಿರುವಾಗ ಹಾಡುತ್ತಿದ್ದ.

’ಸುಂದರ ಹೆಂಡತಿ ಜೊತೆಗಿರುವಾಗ, ಕಿಶೋರನ ಹಾಡು ಬಿಟ್ಟು, ಇದೇನು ವಿರಹ ಗೀತೆ?’ ಅಂತ ನಾವು ತಮಾಷೆ ಮಾಡುತ್ತಿದ್ದೆವು. ಅವನು ಆಗೆಲ್ಲ ವಿಷಾದದ ನಗೆ ಅವನ ಮುಖದಲ್ಲಿ!

ನನಗೆ ಇವನ ಈ ರೀತಿಗೆ ಸ್ವಲ್ಪ ಕುತೂಹಲವಿತ್ತು. ಏನೋ ಅನುಮಾನ. ಒಮ್ಮೆ ಕೇಳಿಬಿಟ್ಟೆ. ’ಮನೋಜ್, ಏನೂ ಅಂದುಕೊಳ್ಳದಿದ್ದರೆ ಒಂದು ಪ್ರಶ್ನೆ. ನಿನ್ನ ಮದುವೆ ಯಾರು ಮಾಡಿದ್ದು?’

’ನನ್ನ ಸೋದರ ಮಾವ’

’ವಾವ್… ಎಂಥ ಒಳ್ಳೆಯ ಜನ! ಹುಡುಗಿಯನ್ನು ಹುಡುಕಿ ಮದುವೆವರೆಗೂ ಜವಾಬ್ದಾರಿ ತೆಗೆದುಕೊಂಡಿದ್ದಾರೆ!’

ಮನೋಜ್ ವಿಷಣ್ಣ ನಗೆ ನಕ್ಕ. ’ಹೌದು, ಅವರ ಮಗಳನ್ನೆ ಅಲ್ಲವೆ ನನಗೆ ಕಟ್ಟಿದ್ದು…’

ನಾನು ಅವಾಕ್ಕಾಗಿ ಕೇಳಿದೆ. ’ಓ, ಈ ವಿಷಯ ಹೇಳಿರಲೆ ಇಲ್ಲ. ಒಂಥರ ಲವ್ ಕಮ್ ಅರೇಂಜ್ಡ್ ಮದುವೆ!’

’ಅಲ್ಲ.. ಬರೀ ಅರೇಂಜ್ಡ್ ಮದುವೆ!’

’ಆಗ್ಲಿ… ಈಗ ಲವ್ ಜೀವನ ನಡೀತಿದೆಯಲ್ಲ. ನೀನು ಲಕ್ಕಿ!’

ಅವನ ಬಾಯಿಂದ ಕಟು ವಾಕ್ಯ ಬಂತು. ’ ನಾನು ಲವ್ ಮಾಡಿದವಳು ಬೇರೆ…. ಆಗಿದ್ದೇ ಬೇರೆ. ಈಗ ಯಾಕೆ ಈ ವಿಷಯ, ಬಿಡು’. ಅವನು ಅಷ್ಟು ಒರಟಾಗಿ ಮೊದಲ ಬಾರಿ ಮಾತಾಡಿದ್ದ.

ಇದಾದ ನಂತರ ನನ್ನ ಕುತೂಹಲ ಹೆಚ್ಚಾಯಿತು. ಸೂಕ್ಷ್ಮವಾಗಿ ಅವನನ್ನು ಗಮನಿಸತೊಡಗಿದೆ. ಅವನು ಹೆಚ್ಚು ನಮ್ಮ ಒಡನಾಟದಲ್ಲಿರುವುದು, ಮನೆಗೆ ರಾತ್ರಿ ತಡವಾಗಿ ಹೋಗುವುದು, ಹೆಂಡತಿಯನ್ನು ಎಲ್ಲಿಗೂ ಹೆಚ್ಚು ಕರೆದುಕೊಂಡು ಹೋಗದಿರುವುದು ಮತ್ತು ತವರು ಮನೆಗೆ ಈ ಊರಿಗೆ ಬಂದ ದಿನದಿಂದ ಕಳುಹಿಸದಿರುವುದು.

ಮನೋಜ್ ಅಂತರ್ಮುಖಿಯಾಗುತ್ತಿದ್ದಾನೆ ಅನ್ನಿಸಿತು. ಅವನಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಿದೆ. ಅವನಿಗೆ ಹೆಚ್ಚು ಸಿಕ್ಕದ ಹಾಗೆ ನಾವು ತಪ್ಪಿಸಿಕೊಳ್ಳತೊಡಗಿದೆವು. ಅವನಿಗೆ ಅದರ ಅರಿವಾಗಿರಬೇಕು. ಆಫ಼ೀಸ್ ಮುಗಿದ ಮೇಲೆ ಅವನು ಒಂಟಿಯಾಗಿ ಬಹಳ ದೂರ ನಡೆದುಹೋಗಿ ಬಿಡುತ್ತಿದ್ದ. ಒಂದು ದಿನ ಊರಾಚೆಯ ಕೆರೆಯ ಏರಿ ಹತ್ತಿ ಪಕ್ಕದ ಹಳ್ಳಿಯವರೆಗೆ; ಇನ್ನೊಮ್ಮೆ ದೂರದ ರೇಲ್ವೆ ಸ್ಟೇಷನ್ ಕಡೆಗೆ; ಮತ್ತೊಮ್ಮೆ ರೈಲ್ವೆ ಹಳಿಗಳ ಮೇಲೆ ನಡೆಯುತ್ತಾ ಬಹಳ ದೂರ ಸಾಗಿ, ತಡ ರಾತ್ರಿ ಮನೆ ಸೇರುತ್ತಿದ್ದ.

ಒಮ್ಮೆ ನನ್ನ ಬಳಿ ಎರಡು ಸಾವಿರ ಸಾಲ ಕೇಳಿದ. ಕೊಟ್ಟೆ. ಸಂಕೋಚ ಮಾಡಿಕೊಳ್ಳುತ್ತ ತೆಗೆದುಕೊಂಡ.

’ಏನೂ ಅಂದ್ಕೊಬೇಡ ಮಾರಾಯ. ಕೆಲವು ತಿಂಗಳ ಹಿಂದೆ ಒಂದು ಲೈಫ಼್ ಇನ್ಷೂರೆನ್ಸ್ ಪಾಲಿಸಿ ತೆಗೆದೆ. ಸ್ವಲ್ಪ ದೊಡ್ಡ ಪ್ರೀಮಿಯಮ್. ಅದೇ ಹೊರೆ. ಇನ್ನು ಸ್ವಲ್ಪ ತಿಂಗಳು ಮಾತ್ರ ಈ ತಾಪತ್ರಯ’ ಅಂದ. ನಾನೇನು ಆ ಬಗೆಗೆ ಕೇಳಲಿಲ್ಲ.

ಇದಾಗಿ ಎರಡು ತಿಂಗಳಲ್ಲಿ ಮತ್ತೆ ಮೂರು ಸಾವಿರ ಕೇಳಿದ. ಸಂಕೋಚಿಸುತ್ತ ಹೇಳಿದ. ’ನಿನ್ನ ಲೆಕ್ಕ ಮನೆಯಲ್ಲಿ ಬರೆದಿಟ್ಟಿದ್ದೇನೆ. ನಾನು ಅಥವ ನನ್ನ ಹೆಂಡತಿ ಖಂಡಿತ ವಾಪಸ್ ಕೊಡುತ್ತೇವೆ. ನನಗೆ ವಿಚಿತ್ರ ಅನ್ನಿಸಿತು ಅವನ ಮಾತು.

’ಪರವಾಯಿಲ್ಲ ಮನೋಜ್. ನನಗೇನೂ ತೊಂದರೆಯಿಲ್ಲ. ಆದಾಗ ಕೊಡು.’ ಅಂದೆ.

ಮತ್ತೆ ಒಂದು ವಾರದಲ್ಲೆ ’ಮೂರು ಸಾವಿರ ಬೇಕು’ ಅಂದ.

ಆ ಹಣ ತೆಗೆದುಕೊಂಡವನಿಗೆ ಏನನ್ನಿಸಿತೋ ಏನೊ, ’ನಿನ್ನ ಜೊತೆ ಅರ್ಧಗಂಟೆ ಮಾತಾಡೋದಿದೆ. ಬಾ’ ಎನ್ನುತ್ತ ದೂರದ ಜನರಿಲ್ಲದ ರಸ್ತೆಗೆ ಕರೆದುಕೊಂಡು ಹೊರಟ.

ನಾನು ಕೇಳದಿದ್ದರೂ ನಿಧಾನಕ್ಕೆ ಮಾತಾಡತೊಡಗಿದ.

’ನಿನಗೆ ಗೊತ್ತಿದೆಯಲ್ಲ ನನ್ನ ಮಾವನ ಹೊರೆ ನನ್ನ ಮೇಲೆ ಎಷ್ಟಿದೆ ಎಂದು. ಅವರಿಗೆ ನಾನು ಎಂದಿಗೂ ಋಣಿ. ಆದರೆ ಅವರು ಒಂದು ತಪ್ಪು ಮಾಡಿಬಿಟ್ಟರು. ಮಗಳನ್ನು ನನಗೆ ಗಂಟುಹಾಕಿ. ಸಣ್ಣ ವಯಸ್ಸಿನಿಂದ ಅವಳನ್ನು ನೋಡಿರುವ ಕಾರಣಕ್ಕೊ ಏನೊ ಮದುವೆಯಾಗುವ ಯೋಚನೆ ಅವಳ ಬಗೆಗೆ ಬಂದಿರಲಿಲ್ಲ. ಈ ಋಣದ ಕಾರಣದಿಂದ ಮದುವೆ ಬೇಡ ಅಂತಲೂ ಅನ್ನಲಿಲ್ಲ. ಈಗ ಮತ್ತೊಂದು ಋಣಭಾರ ಮಾವ ಹೊರಿಸಿದ್ದಾರೆ. ಅವಳಿಗೆ ಯಾವ ಕಷ್ಟವೂ ಬರದ ಹಾಗೆ ನೋಡಿಕೊಳ್ಳುವುದು. ಅದು ನನ್ನ ಜವಾಬ್ದಾರಿ ಕೂಡ. ಅದಕ್ಕೇ, ಹತ್ತು ಲಕ್ಷದ ವಿಮೆ ಮಾಡಿದ್ದೇನೆ. ಅದು ಅವಳಿಗೆ. ಮತ್ತೆ, ನನ್ನ ಇಷ್ಟು ವರ್ಷಗಳ ಸರ್ವೀಸಿನಿಂದ ಏಳೆಂಟು ಲಕ್ಷ ಖಂಡಿತ ಬರುತ್ತೆ. ಸಾಕಲ್ಲವ. ಜೀವನ ಸಾಗಿಸಲು. ಮಕ್ಕಳೂ ಇಲ್ಲವಲ್ಲ. ಅವಳು ಬೇಕಿದ್ದರೆ ಮತ್ತೊಂದು ಮದುವೆ ಮಾಡಿಕೊಳ್ಳಲಿ.’

ಮನೋಜನ ಮಾತಿನ ಧಾಟಿ ನನಗೆ ಗಲಿಬಿಲಿ ಹುಟ್ಟಿಸಿತು. ’ಅಲ್ಲ ಮನು, ಕೆಲಸ ಬಿಟ್ಟು, ಊರೂ ಬಿಡುವ ಆಲೋಚನೆಯ?’ ಅಂದೆ. ಅವನು ಮೌನ ವಹಿಸಿದ. ’ಈಗ ಬೇಜಾರಲ್ಲಿದೀಯ. ನಿಧಾನ ಯೋಚಿಸು. ಎಲ್ಲಕ್ಕೂ ಪರಿಹಾರವಿರುತ್ತೆ. ಹೆಂಡತಿಗೆ ಅನ್ಯಾಯ ಮಾಡಬೇಡ. ಇಷ್ಟೆ ನಾನು ಹೇಳೋದು’. ಆ ಮಾತಿಗೆ ಅವನು ಏನೂ ಮಾತಾಡಲಿಲ್ಲ.

ಒಮ್ಮೆ ಯಾರದೊ ಆತ್ಮಹತ್ಯೆ ವಿಷಯ ನಾವೆಲ್ಲ ಮಾತಾಡತೊಡಗಿದಾಗ, ಮನೋಜ್ ಬಹಳ ಆಸಕ್ತಿ ವಹಿಸಿದ. ’ಆತ್ಮಹತ್ಯೆ ಸುಲಭವಾಗಿ ಮಾಡಿಕೊಳ್ಳುವುದು ಹೇಗೆ?’ ಅಂತ ಕೇಳಿ ನಕ್ಕ. ’ಸುಲಭ ಯಾವುದೂ ಅಲ್ಲ. ಅದಕ್ಕೂ ಎಂಟೆದೆ ಬೇಕು’ ಅಂದೆ.

ಇದಾಗಿ ಒಂದು ತಿಂಗಳು ಕಳೆದಿರಬೇಕು.       ಒಂದು  ಬೆಳಿಗ್ಗೆ  ಕೆಟ್ಟ  ಸುದ್ದಿ  ಕಾದಿತ್ತು.     ಮನೋಜ್ ತನ್ನ ಕಛೇರಿಯ ಕಡತಗಳ ಕೋಣೆಯಲ್ಲಿ ನೇಣಿಗೆ ಶರಣಾಗಿಹೋದ! ನಾನು ನನ್ನ ಸ್ನೇಹಿತರು ದಿಗ್ಭ್ರಮೆಯಲ್ಲಿ ಮುಳುಗಿಬಿಟ್ಟೆವು.

ಕಛೇರಿಯಲ್ಲಿ ಅವನು ಕುಳಿತುಕೊಳ್ಳುವ ಟೇಬಲ್ ತಪಾಸಣೆ ಮಾಡಲಾಯಿತು. ಅದರಲ್ಲಿ ಮನೋಜನ ಹೆಸರಿಗೆ ಒಂದು ಪತ್ರವಿತ್ತು. ’ಮೀನಾ’ ಅನ್ನುವ ಹೆಣ್ಣಿನದು. ಅಲ್ಲಿ ಆ ದಿನದ ಪತ್ರಿಕೆ ಇತ್ತು. ಪೊಲೀಸರ ಕ್ಷಮಕ್ಷಮ ತಪಾಸಣೆ ಮಾಡಿದಾಗ ಐದನೆ ಪುಟದ ಮೂಲೆಯಲ್ಲಿ ಸಾಗರದ ಹೆಣ್ಣುಮಗಳೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಇತ್ತು. ಆ ಹೆಣ್ಣಿನ ಹೆಸರು ’ಮೀನಾ’.

ಮೀನಾಳ ಪತ್ರದಲ್ಲಿ ಇಷ್ಟೇ ಇತ್ತು. ’ ಮನೋಜ್, ನಿನ್ನಂಥ ಹೇಡಿಯನ್ನು ಪ್ರೀತಿಸಿದ್ದು ನನ್ನ ವಿಧಿ ಅಂದುಕೊಳ್ಳುತ್ತೇನೆ. ನನ್ನ ಮದುವೆಯಾದ ಮೇಲೆ ಅಂದುಕೊಂಡಂತೆ ಜೀವನ ಸಾಗಲಿಲ್ಲ. ಯಾರಿಗೋ ಮೋಸ ಮಾಡುತ್ತ ಜೀವನ ಸಾಗಿಸುವ ದುರ್ಭರತೆ ಸಹಿಸಿಕೊಳ್ಳುವಷ್ಟು ನಾನು ಗಟ್ಟಿಯಿಲ್ಲ. ಹಾಗಾಗಿ ಹೋಗುತ್ತಿದ್ದೇನೆ. ಮುಂದಿನ ಜನ್ಮದಲ್ಲಿ ಸಿಕ್ಕು. ಆದರೆ ಮೂರ್ಖನಾಗಿ ಸಿಕ್ಕಬೇಡ.’

ತಡರಾತ್ರಿ ಮನೋಜನ ತಾಯಿ ಮತ್ತು ಸೋದರ ಮಾವ ಬಂದರು. ಪೋಸ್ಟ್ ಮಾರ್ಟಂ, ಇತ್ಯಾದಿಗಳಿಗೆ ನಾವೆಲ್ಲ ಓಡಾಡಿದೆವು.    ಅವನ ದೇಹ ಇದೇ ಊರಲ್ಲಿ ಸುಡಲಾಯಿತು.    ಮುಂದಿನ   ಕಾರ್ಯಗಳನ್ನು  ಊರಲ್ಲಿ ಮಾಡುತ್ತೇವೆಂದು ಮನೋಜನ ಮಾವ ಹೇಳಿದರು.    ಮಗಳನ್ನು ಕರೆದುಕೊಂಡು ತನ್ನೂರಿಗೆ ಮರುದಿನ ಹೊರಟೂ ಬಿಟ್ಟರು. ಇದ್ದಷ್ಟೂ ಸಮಯ ಅವರು ಗಂಭೀರವಾಗೇ ಇದ್ದರು. ಅವರು ಮಗಳಿಗಾದ ಆಘಾತದ ಭಾಗವಾಗಿ ಕಂಡರು. ಮನೋಜನ ತಾಯಿಯ ದು:ಖ ಹೇಳತೀರದಾಗಿತ್ತು.

ಅವರು ಹೋಗುವಾಗ ನನ್ನ ವಿಳಾಸ, ಮೊಬೈಲ್ ನಂಬರು ಕೊಟ್ಟಿದ್ದೆ. ಏನೇ ವಿಷಯವಿದ್ದರೂ ಫ಼ೋನಿನಲ್ಲಿ ಮಾತಾಡಲು ಹೇಳಿದೆ. ಇಲ್ಲಿ ಆಗಬೇಕಾದ ಕೆಲಸ ಗೆಳೆಯರೆಲ್ಲ ನೋಡಿಕೊಳ್ಳುತ್ತೇವೆ ಅಂದಿದ್ದೆ.

ಆ ಪತ್ರದಲ್ಲಿ ಮನೋಜ್ ಈಡಿಯಟ್ ಅಂತ ಆ ಮಾವ ಬರೆದದ್ದು ದು:ಖವೆನಿಸಿತು. ನಾನೆ ಅವರಿಗೆ ಕಾಲ್ ಮಾಡಿದೆ.

’ಸರ್.. ನಿಮ್ಮ ಪತ್ರ ಬಂದಿದೆ. ಮನೆ ಅಡ್ವಾನ್ಸ್ ಹಣಕ್ಕೆ ಚೆಕ್ ಕೊಡುತ್ತಿದ್ದಾರೆ. ಅದನ್ನು ನಿಮ್ಮ ಮಗಳ ಖಾತೆಗೆ ಹಾಕುತ್ತೇನೆ. ಅಂದಹಾಗೆ, ಸರ್..ಎಲ್ಲಾ ತಪ್ಪು ಮನೋಜನದೇ ಅನ್ನುತ್ತೀರ. ಅವನ ಮದುವೆ ಕೇಳಿ ಮಾಡಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ ಅನ್ನಿಸುತ್ತೆ. ಹೋಗಲಿ ಬಿಡಿ, ಈಗ ಅವೆಲ್ಲ ಮುಗಿದ ವಿಷಯ. ನೀವು ಅವನಿಗೆ ಈಡಿಯಟ್ ಅಂತ ಅಂದಿರಲ್ಲ ಅದಕ್ಕೆ ಹೇಳಿದೆ’

ಅತ್ತ ಕಡೆಯಿಂದ ಅವರ ಧ್ವನಿ,   ‘ನೋಡಿ, ಅವನನ್ನು ಮಗನ ಥರ ನೋಡಿಕೊಂಡೆ.     ಅನಾಥ  ಪ್ರಜ್ಞೆ ಅವನನ್ನು ಕಾಡಬಾರದೆಂದು ಕಷ್ಟಗಳಿಲ್ಲದ ಹಾಗೆ ಬೆಳೆಸಿದೆ. ಅವನಿಗೆ ಸ್ವಾತಂತ್ರ್ಯ ಕೇಳದೆಯೆ ಕೊಟ್ಟೆ. ಮದುವೆ ನಿಶ್ಚಯಿಸಿದಾಗ ಅವನಿಗದು ಒಪ್ಪಿಗೆಯಿಲ್ಲ ಅಂತ ಹೇಳ ಬಹುದಿತ್ತು.     ಮುಖಹೇಡಿಯಾದ. ಇವತ್ತು ನಾನು ಮಾಡಿದ ಒಳ್ಳೆಯತನ ನನ್ನ ಮಗಳಿಗೆ ಮುಳುವಾಯಿತು, ಅಷ್ಟೆ.’ ನಿಡುಸುಯ್ದರು.

‘ಸರ್… ಅವನ ನಿಮ್ಮ ಬಗೆಗಿನ ಕೃತಜ್ಞತೆ ಏನನ್ನೂ ಹೇಳದಂತೆ ಮಾಡಿದೆ’

‘ಅದಕ್ಕೇ ಅವನನ್ನು ಈಡಿಯಟ್ ಅಂದದ್ದು. ಗೆಳೆಯನ ರೀತಿ ಬೆಳೆಸಿದರೂ.. ಅರ್ಥ ಮಾಡಿಕೊಳ್ಳದೆ ಹೋದ. ಅದು ಕೃತಜ್ಞತೆಯಲ್ಲ. ಅವನಲ್ಲಿದ್ದ ಹೇಡಿತನ. ಅವನು ಕೀಳರಿಮೆಯಲ್ಲಿ ತೊಳಲುತ್ತಿದ್ದ ಅನ್ನುವುದು ನನಗೆ ತಿಳಿಯಲೆ ಇಲ್ಲ. ನನ್ನ ಮಗಳಿಗೆ ಮತ್ತೆ ಇನ್ನೊಂದು ಹೆಣ್ಣಿಗೂ ಅನ್ಯಾಯ ಮಾಡಿದವನು. ಕೃತಜ್ಞ ಪದ ಅವನಿಗೆ ಒಪ್ಪುವುದಿಲ್ಲ.’ ಅಂದರು.

‘ಆಯ್ತು ಬಿಡಿ ಸರ್. ನಿಮಗೆ ಬೇಸರ ಮಾಡಲು ಇಷ್ಟವಿಲ್ಲ. ಅಂದಹಾಗೆ, ಇನ್ನೆರಡು ತಿಂಗಳಲ್ಲಿ, ಡಿಪಾರ್ಟ್ಮೆಂಟಿನಿಂದ ಹಣ ಬರುತ್ತೆ ಸರ್. ನಿಮಗೆ ಮತ್ತೊಂದು ವಿಷಯ ಗೊತ್ತಿರಲಿ ಸರ್.. ಅವನು ಹತ್ತು ಲಕ್ಷ ವಿಮೆ ಮಾಡಿಸಿದ್ದ. ಸದ್ಯಕ್ಕೆ ಅದೂ ಬರುತ್ತೆ’ ಅಂದೆ.

ಅತ್ತಕಡೆಯಿಂದ ವಿಷಾದದ ನಗು ಕೇಳಿಸಿತು. ‘ನೋಡಿ, ಅವನು ಈ ವಿಷಯದಲ್ಲೂ ಈಡಿಯಟ್. ತಾನು ಮಾಡಿದ ವಿಮೆಯ ಹಣ ಬರುವುದಿಲ್ಲ ಅನ್ನುವುದೂ ಅವನಿಗೆ ಗೊತ್ತಿರಲಿಲ್ಲ’

ನಾನು ಹತಾಷೆಯಲ್ಲಿ ಮಾತು ಮರೆತೆ. ಮನೋಜನ ಮಾವ ಮತ್ತೇನನ್ನೋ ಹೇಳುತ್ತಲೇ ಇದ್ದರು. ನಾನು ಗರಬಡಿದಂತೆ ಮೌನವಾದೆ.

ವಿಮಾ ಕಛೇರಿಯ ನನ್ನೊಬ್ಬ ಗೆಳೆಯನನ್ನು ಆ ದಿನವೆ ಸಂಪರ್ಕಿಸಿದೆ. ಮನೋಜ್ ಮಾಡಿರುವ ವಿಮಾ ಪಾಲಿಸಿಯ ಹಣ ಸಿಕ್ಕದಿರುವ ಬಗೆಗೆ ಕಾರಣ ಕೇಳಿದೆ. ವಿಚಾರಿಸಿ ಹೇಳುತ್ತೇನೆ ಅಂದ. ಮರುದಿನ ಕಾಲ್ ಮಾಡಿದ.

’ಮನೋಜ್, ಹತ್ತು ಲಕ್ಷದ ವಿಮೆ ತೆಗೆದುಕೊಂಡದ್ದು ಸರಿ. ವಿಮೆ ಒಂದು ನಿರ್ದಿಷ್ಟ ಅವಧಿಯವರೆಗೆ ಸರಿ ಕಂತುಗಳಲ್ಲಿ ಕಟ್ಟಿದ್ದರೆ ಮಾತ್ರ ಹಣ ದೊರಕುತ್ತೆ. ಇಲ್ಲಿ ಬಹಳ ಬೇಜಾರಿನ ವಿಷಯವೆಂದರೆ ಆ ನಿರ್ದಿಷ್ಟ ಅವಧಿ ಪೂರ್ಣವಾಗುವ ಎರಡು ದಿನ ಮೊದಲೆ ಮನೋಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ವಿಮೆ ಹಣ ಸಿಕ್ಕಿಲ್ಲ!!’

ಎಷ್ಟು ಸರಳನಿದ್ದ ಮನೋಜ್! ಕೃತಜ್ಞ ಮನಸ್ಸಿನವನು. ಹೀಗೇಕೆ ದುರಂತಗಳ ರೂವಾರಿಯಾದ? ವಿಮೆಯ ಹಣವೂ ಅವನ ಆಸೆಯಂತೆ ಹೆಂಡತಿಗೆ ಸಿಕ್ಕಲಿಲ್ಲ. ಇಲ್ಲಿ ಕೂಡ ಅವನು ಮೂರ್ಖನೇ ಆಗಿಬಿಟ್ಟ! ಆ ದಿನ ಮನೋಜನಿಗೆ ದಿನಪತ್ರಿಕೆ ಸಿಕ್ಕದಿರುತ್ತಿದ್ದರೆ…. ಅಥವ ’ಮೀನಾ’ ಸುದ್ದಿ ಅವನ ಕಣ್ಣಿಗೆ ಬೀಳದಿರುತ್ತಿದ್ದರೆ…., ಹೀಗೆ ಆಗಿಹೋದ ದುರಂತಕ್ಕೆ ’ರೆ…’ಗಳ ಊಹೆ ಭಾರವಾದ ತಲೆಯಲ್ಲಿ ಓಡತೊಡಗಿತು. ಅವನು ಎಲ್ಲರನ್ನೂ ತೊರೆದು ಆತ್ಮಹತ್ಯೆಯ ಸನ್ನಾಹದಲ್ಲಿದ್ದನೆಂಬುದು ನನಗೆ ಮತ್ತು ಗೆಳೆಯರಿಗೆ ಹೊಳೆಯಲೇ ಇಲ್ಲ. ಸ್ನೇಹಿತನ ಮನಸ್ಸು ಅರಿಯಲಾಗದ ನಾನೂ ಒಬ್ಬ ಮೂರ್ಖನೇ ಅಲ್ಲವೆ…? ಮನಸ್ಸು ಹೀಯಾಳಿಸುತ್ತಿತ್ತು.

******

(ಪ್ರತಿಲಿಪಿ ಕನ್ನಡದಲ್ಲಿ ಪ್ರಕಟ: ಓದುವ ಕೊಂಡಿ: http://kannada.pratilipi.com/anantha-ramesh/moorkha)

(ಚಿತ್ರ ಕೃಪೆ : ಅಂತರ್ಜಾಲ)

Advertisements

ಬಡಕಲ ಸಿದ್ದನ ದೆವ್ವ ವೃತ್ತಾಂತ

devil

ಆಗತಾನೆ ಹೈಸ್ಕೂಲು ಮೆಟ್ಟಿಲು ಹತ್ತಿದ ದಿನಗಳವು. ಕೆಲವು ಸಬ್ಜೆಕ್ಟುಗಳು ಕಷ್ಟವಾಗುತ್ತಿದ್ದುವು. ಅವಕ್ಕೆಲ್ಲ ನಮ್ಮ ಮೇಷ್ಟ್ರು ಕೆಜಿಜಿ ಪಾಠದ ಮನೆ ಧೈರ್ಯ ತುಂಬಿಸಿ ಓದನ್ನು ಸುಲಭವಾಗಿಸುತ್ತಿದ್ದ ಸ್ಥಳವಾಗಿತ್ತು. ಒಂದಲ್ಲ ಒಂದು ಸಬ್ಜೆಕ್ಟ್ ಗೆ ನನ್ನ ಎಲ್ಲ ಕ್ಲಾಸ್ಮೇಟ್ಸ್ ಬರುವ ಮನೆ ಅದಾಗಿತ್ತು. ಹಾಗಾಗಿ, ಕ್ಲಾಸಿನ ಎಲ್ಲಾ ಹುಡುಗ, ಹುಡುಗಿಯರು ಕೆಜಿಜಿ ಮನೆಯಲ್ಲಿ ಸಂಜೆ 6:30 ರ ನಂತರ ತುಂಬಿರುತ್ತಿದ್ದೆವು.

ನಮಗೆಲ್ಲ ಆಗಾಗ ತಮಾಷೆ ಮಾಡಲು ಒಬ್ಬ ಮಾಡೆಲ್ಲು ಅಂದರೆ ಬಡಕ್ಲ ಸಿದ್ದ. ನಾವು ಅವನ ಕರೆಯುತ್ತಿದ್ದದ್ದೇ ಬಡಕ್ಲ. ಯಾಕೆಂದರೆ ನಮ್ಮ ಕ್ಲಾಸಲ್ಲಿ ಸುಮಾರು ನಾಲ್ಕು ಜನ ಸಿದ್ದಣ್ಣರಿದ್ದರು. ’ಯಾವ ಸಿದ್ದ?’ ಅನ್ನೋದನ್ನ ತಿಳಿಯೊ ಸುಲಭ ಉಪಾಯ ಅಂತ ಎಲ್ಲ ಸಿದ್ದರಿಗೂ ಒಂದೊಂದು ಅಡ್ಡ ಹೆಸರಿಟ್ಟಿದ್ದೆವು.

’ಹಾಗೆಲ್ಲ ಕರೆಯಬಾರದು’ ಅಂತ ಒಮ್ಮೆ ನಮ್ಮ ಪಿಟಿ ಟೀಚರ್ ಹೇಳಿದ್ದಕ್ಕೆ, ನಮ್ಮ ಸಹಪಾಠಿ ಕೇಳಿದ್ದ, ’ಸಾ.. ನಾಲ್ಕ್ ಜನ ಸಿದ್ರು ಒಂದೇ ಕ್ಲಾಸಲ್ಲಿದ್ದಾರೆ. ಹೆಂಗ್ ಸಾ ಗುರುತು ಹೇಳೋದು. ಬಡ್ಕ್ಲನ್ನ ನೋಡಿ ಸಾ.. ಅವನ ಮಕ, ಕೈ ಕಾಲು ಎಲ್ಲ ಎಂಗಿದ್ದಾವೆ.. ಕಡ್ಡಿಥರ.. ಕಡ್ಡಿ ಪೈಲ್ವಾನ್ ಅಂತ್ಲೂ ಕರಿಬೋದು ಸಾ..’ ಪಿಟಿ ಟೀಚರ್ ತುಟಿ ಪಿಟಿಪಿಟಿಸಿ ನಕ್ಕು ಸುಮ್ಮನಾದ್ರು.

ಸಿದ್ದನಿಗೆ ಬಡಕ್ಲ ಅಂದ್ರೆ ಬೇಜಾರಿಲ್ಲ. ಆದ್ರೆ ಹಾಗೆ ಕರೀವಾಗ ನಗಬಾರ್ದು. ನಕ್ಕರೆ ತನ್ನ ನಕ್ರಾ ಮಾಡ್ತಿದ್ದಾರೆ ಅಂತ ಕೋಪ ಬರ್ತಿತ್ತು. ಸಿದ್ದ ಮಾತಾಡಕ್ಕೆ ಶುರು ಮಾಡಿದ್ರೆ ತುಂಬಾ ಮಾತು. ಎಲ್ಲವನ್ನೂ ತುಂಬಾ ಇಂಟರೆಸ್ಟಿಂಗ್ ಆಗಿ ಹೇಳ್ತ ಇದ್ದ. ಒಂದು ವಿಷ್ಯ ಅಂತೂ ನಮಗೆ ಯಾವಾಗ್ಲೂ ಹೇಳೋನು, ತಾನು ದೆವ್ವ ನೋಡಿದ್ದೀನಿ ಅಂತ. ಆಗೆಲ್ಲ ನಮ್ಮ ಪ್ರಶ್ನೆಗಳು ಹೀಗಿರುತ್ತಿದ್ದುವು.

’ಅದು ಹೆಂಗೆ ಇರುತ್ತೋ’
’ನೋಡಿದ್ದು ಹಗಲಾ ರಾತ್ರೀನ?’
’ಎಲ್ಲಿ ನೋಡಿದ್ಯೋ?’
’ಕಪ್ಪಗಾ ಬೆಳ್ಳಗಾ?’
’ಕಣ್ಣು ಹೆಂಗಿದ್ವು?’
’ಕಾಲು ನೋಡಿದ್ಯಾ.. ತಿರುಗಾಮುರುಗಾ ಇದ್ವಾ?’
’ನಿಂಗೆ ಹೆದ್ರಿಕೆ ಆಗ್ಲಿಲ್ವಾ?’

ಸಿದ್ದ ಎಲ್ಲರ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನಿಗೂಢ ಮನುಷ್ಯನ ಥರ ಪೋಸ್ ಕೊಡ್ತಿದ್ದ. ತಾನು ತುಂಬ ಧೈರ್ಯವಂತ ಅನ್ನೋದನ್ನ ತನ್ನ ಕಡ್ಡಿ ದೇಹ ಸೆಟಿಸಿ ತೋರುತ್ತಿದ್ದ. ಆಗೆಲ್ಲ ನಾವು ಅವನನ್ನ”ಸಿದ್ದು” ಅಂತಲೆ ಕರೆಯುತ್ತಿದ್ವಿ. ಬಡಕ್ಲ ಅಂದ್ರೆ ಸಿಟ್ಟು ಬಂದ್ರೆ ಅಂತ ಸ್ವಲ್ಪ ಹೆದ್ರಿಕೆ!

ಒಂದು ದಿನ ಕೆಜಿಜಿ, ಮನೆ ಪಾಠ ಮಾಡ್ತ ಹೇಳಿದ್ರು. ‘ನಾಳೆಯಿಂದ ಎರಡು ದಿನ ಪಾಠ ಇರಲ್ರಯ್ಯ. ನಾನು ಸಂಸಾರ ಸಮೇತ ಬೆಂಗ್ಳೂರಿಗೆ ಹೋಗ್ತಾ ಇದೀನಿ.’

ನಾವೆಲ್ಲ ಒಕ್ಕೊರಲಿಂದ ಕೂಗಿದ್ವಿ, ‘ಹೌದಾ..ಸಾ..?!’

‘ಹೌದ್ರಯ್ಯ.. ನೀವೀಗ ಒಂದು ಕೆಲ್ಸ ಮಾಡ್ಬೇಕಲ್ಲ? ನಿಮ್ಮಲ್ಲಿ ಇಬ್ರು ಎರಡು ರಾತ್ರಿ ನಮ್ಮ ಮನೇಲಿ ಮಲಕ್ಕೊ ಬೇಕು.. ಆಗತ್ತಾ?’

ಯಾರೂ ಮಾತಾಡಲಿಲ್ಲ. ಕೆಜಿಜಿ ಹೇಳಿದ್ರು, ‘ಲಕ್ಕಣ್ಣ.. ನೀನು ಯಾರ್ನಾದ್ರು ಜೊತೆ ಮಾಡ್ಕೊಂಡು ಎರಡು ದಿನ ನಮ್ಮ ಮನೇಲಿರು.. ನಾನು ನಿಮ್ಮ ಅಪ್ಪನ ಹತ್ರ ನಿನ್ನ ಕಳ್ಸಕ್ಕೆ ಹೇಳ್ತೀನಿ’

ಲಕ್ಕಣ್ಣ ಸ್ವಲ್ಪ ಎತ್ರ ಮತ್ತು ದಪ್ಪಕ್ಕೆ ಕಾಲೇಜ್ ಹುಡುಗನ ಥರ ಕಾಣಿಸ್ತಿದ್ದ. ಅದಕ್ಕೆ ಮೇಷ್ಟ್ರು ಅವನ್ನ ಸೆಲೆಕ್ಟ್ ಮಾಡಿದ್ದು.

ಲಕ್ಕಣ್ಣ ’ಸರಿ” ಅಂತ ತಲೆಯಾಡಿಸಿ, ‘ನಂ ಜೊತೆ ಯಾರ್ ಸಾ..?’ ಕೇಳಿದ.

ಯಾರೂ ಮಾತಾಡ್ಲಿಲ್ಲ. ಸರಿ, ಲಕ್ಕಣ್ಣನೇ ಹೇಳಿದ, ‘ಸಾ.. ಈ ಸಿದ್ದ ನಂ ಜೊತೆ ಇರ್ಲಿ’

‘ಯಾರು…ಈ ಕಡ್ಡಿ ಪೈಲ್ವಾನ?’ ಅಂದ್ರು ಮೇಷ್ಟ್ರು.

ಎಲ್ಲ ಮುಸಿ ಮುಸಿ ನಕ್ಕರು. ಸಿದ್ದ ಯಾಕೊ ಸ್ವಲ್ಪ ಗರಂ ಆಗಿದ್ದಂತೆ ಕಾಣಿಸ್ತು. ಆದ್ರೆ ಏನೂ ಮಾತಡಲಿಲ್ಲ. ಅವನಿಗೆ ಲಕ್ಕಣ್ಣ ತನ್ನ ಹೆಸರು ಹೇಳಿದ್ದು ಕೋಪ. ಕೆಜಿಜಿ ಬೆಂಗಳೂರಿಗೆ ಹೊರಟು ಬಿಟ್ರು. ಆದಿನ ರಾತ್ರಿಗೆ ಲಕ್ಕಣ್ಣ ಸಿದ್ದನ ಜೊತೆಯಾಗಿ ಮೇಷ್ಟ್ರ ಮನೆಗೆ ಬಂದ. ಸಿದ್ದ ಹೆಚ್ಚು ಮಾತಾಡ್ಲಿಲ್ಲ. ಮಾತೆಲ್ಲ ಲಕ್ಕನದೇ. ಇಬ್ರೂ ಊಟ ಮಾಡಿಯೆ ಬಂದಿದ್ರು.

‘ಬಡಕ್ಲ… ಮಲಗೋಣ್ವ… ಗಂಟೆ ಹತ್ತಾಯ್ತು’ ಅಂದ.
‘ಹುಂ… ಎಲ್ಲಿ ಈ ಹಾಲಲ್ಲೇ ಮಲ್ಗೋಣ’ ಸಿದ್ದ ಹೇಳಿದ.
ಇಬ್ರೂ ಎರಡು ಹಾಸಿಗೆಗಳನ್ನು ರೂಂನಿಂದ ತಂದು ಹಾಲಿನ ಮಧ್ಯೆ ಹಾಕ್ಕೊಂಡ್ರು.

‘ಲೈಟ್ ಆಫ್ ಮಾಡೊ’ ಅಂದ ಲಕ್ಕ. ಹೋಗಿ ಲೈಟ್ ಆರಿಸಿ ಬಂದ ಸಿದ್ದ.

ಒಂದು ಐದು ನಿಮಿಷ ಕಳೆದಿರಬೇಕು. ಮೆಲ್ಲಗೆ ಸಿದ್ದ ಕೇಳಿದ.
’ನಿನಗೆ ರಾತ್ರೀಲಿ ಭಯ ಆಗೋದಿಲ್ವ?’
’ಇಲ್ಲಪ್ಪ.. ನಂಗ್ಯಾವ ಭಯನೂ ಇಲ್ಲ’
’ಅಂಗಾದ್ರೆ, ದೆವ್ವಕ್ಕೂ ನೀ ಹೆದ್ರಲ್ವ?’
’ಲೋ ಸಿದ್ದ, ದೆಯ್ಯ, ಭೂತ ಎಲ್ಲ ಸುಳ್ಳು.. ನಿಂಗ್ಯಾವನು ಅವೆಲ್ಲ ಹೇಳಿದ್ದು. ನಂಬೇಡ’
’ನಾನೇ ನೋಡಿದ್ದೀನೊ.. ನಂ ತೋಟದ್ ತಾವ.. ಅದ್ಕೇ ಹೇಳ್ದೆ’
’ಮಂಗಾ.. ನೀ ನೋಡಿದ್ದೇನೊ.. ಅನ್ಕೊಂಡಿದ್ದೇನೊ.. ’
’ಇಲ್ಲಕಣೋ ಲಕ್ಕ.. ನಂಗೆ ನಿಜವಾಗ್ಲು ಗೊತ್ತು.. ದೆವ್ವ ಇದೆ ಅಂತ’
’ನಾ ನಂಬಲ್ಲ.. ’

ಸ್ವಲ್ಪ ಹೊತ್ತು ಕಳೆಯಿತು. ಇಬ್ಬರೂ ನಿದ್ರೆಗೆ ಜಾರಿದರು. ರಾತ್ರಿ ಹನ್ನೆರಡಾಗಿರಬೇಕು. ಲಕ್ಕನಿಗೆ ಪಕ್ಕನೆ ಎಚ್ಚರ. ಅವನ ಎದೆ ಮೇಲೆ ಎಂಥದೊ ಭಾರ ಕೂತಿದೆ. ಕಣ್ಣು ಬಿಡಬೇಕು ಅನ್ನೋದ್ರಲ್ಲಿ, ಕುತ್ತಿಗೆ ಹಿಸುಕಿದಂತೆ ಅನ್ನಿಸಿತು. ಮತ್ತೆ ಅವನ ಕೆನ್ನೆಗೆ ’ಛಟೀರ್’ ಎಂದು ಎರಡೇಟು ಬಾರಿಸಿದ ಶಬ್ಧ. ’ಹೋ.. ’ಅಂತ ಲಕ್ಕ ಚೀರಿ ಎದ್ದ.

’ಸಿದ್ದ.. ಲೈಟ್ ಹಾಕು.. ಲೈಟ್ ಹಾಕು’ ಅಂತ ಕೂಗಿದ. ಸಿದ್ದ ಘಾಬರಿಬಿದ್ದು ಎದ್ದು ತಡಕಾಡುತ್ತಾ ಲೈಟ್ ಹಾಕಿ ನೋಡುತ್ತಾನೆ, ಲಕ್ಕ ಹೆದರಿಬಿಟ್ಟಿದ್ದಾನೆ. ಉಸಿರು ಜೋರಾಗಿ ಬಿಡುತ್ತಾ, ’ನೀರು ಕೊಡೊ’ ಅಂದ.

ಸಿದ್ದ ಮತ್ತೆ ಓಡಿ, ಅಡುಗೆ ಮನೆಯಿಂದ ಒಂದು ಲೋಟ ನೀರು ತಂದು ಕುಡಿಸಿ, ‘ಏನಾಯ್ತು ಲಕ್ಕ?’ ಕೇಳಿದ.

ಸುಧಾರಿಸಿಕೊಳ್ಳುತ್ತ ಲಕ್ಕ, ‘ಗೊತ್ತಿಲ್ಲ ನನ್ ಮೇಲೆ ಯಾರೊ ಕೂತಾಗಾಯ್ತು. ಕುತ್ತಿಗೆ ಹಿಚಿಕ್ದಾಗಾಯ್ತು.. ಮತ್ತೆ ಕೆನ್ನೆಗೆ ಹೊಡೆದಾಗಾಯ್ತುಕಣೊ’ ಅಂದ.

ಸಿದ್ದನಂತೂ ಗಾಬರಿಬಿದ್ದು ಹೇಳಿದ, ‘ಇವೆಲ್ಲ ದೆವ್ವದ ಆಟ ಕಣೊ.. ನಾ ಹೇಳಿಲ್ವ ದೆವ್ವ ಇದೆ ಅಂತ.. ಈವಾಗ ಗೊತ್ತಾಯ್ತ? ಅದಕ್ಕೆ ಹೇಳಿದ್ದು.. ದೆವ್ವ ಇಲ್ಲ ಅನ್ಬಾರ್ದು.. ಹಂಗಂದ್ರೆ ಅದು ಹೆಂಗಾದ್ರು ಬಂದು ನಮ್ಗೆ ತೊಂದ್ರೆ ಕೊಟ್ಟು ನಂಬಂಗೇ ಮಾಡತ್ತೆ, ಹಿಂಗೆ ಆಟ ಆಡ್ಸತ್ತೆ’

ಲಕ್ಕ ಸುಧಾರಿಸಿಕೊಂಡಿದ್ದ. ಮತ್ತೆ ತನ್ನ ಧೈರ್ಯಾನ ಸಿದ್ದ ಪ್ರಶ್ನೆ ಮಾಡ್ತಿದ್ದಾನೆ ಅನ್ನಿಸ್ತು. ‘ಇಲ್ಲ…ಇಲ್ಲ.. ದೆವ್ವ ಎಲ್ಲ ಸುಳ್ಳು.. ನನಗೆ ಕನಸಾಗಿರ್ಬೇಕು. ತಿಂದಿದ್ದು ಸ್ವಲ್ಪ ಜಾಸ್ತಿ ಆಗಿತ್ತು. ಮೈಭಾರಕ್ಕೆ ಹಂಗೆಲ್ಲ ಆಗಿದೆ ಅಷ್ಟೆ.. ನೀ ಮಲಕ್ಕೊ.. ನಾನೆ ಲೈಟ್ ಆರಿಸ್ತೀನಿ’ ಅಂತ ಲೈಟ್ ಆರಿಸಿಬಿಟ್ಟ.

ಸುಮಾರು ಅರ್ಧ ಮುಕ್ಕಾಲು ಗಂಟೆ ಇಬ್ರಿಗು ನಿದ್ರೆ ಇಲ್ಲ. ಯಾವಾಗ ನಿದ್ರೆಗೆ ಜಾರಿದ್ರೊ ಗೊತ್ತಾಗಲೇ ಇಲ್ಲ. ರಾತ್ರಿ ಎರಡು ಗಂಟೆ ಆಗಿರಬಹುದು. ಮತ್ತೆ ‘ಛಟೀರ್.. ಛಟೀರ್ ..’ ಶಬ್ಧ, ‘ಅಯ್ಯೊ.. ಅಯ್ಯೊ.. ‘ ಕೂಗು. ‘ಬಿಡು.. ಬಿಡು ನನ್ನ’ ಈಗ ಕೂಗುತ್ತಿದ್ದದ್ದು ಸಿದ್ದ!

ಧಡ ಧಡ ಎದ್ದು ಲಕ್ಕ ತಡಕಾಡಿ ಲೈಟ್ ಹಾಕಿದ. ನೋಡ್ತಾನೆ, ಸಿದ್ದ ಹಾಸಿಗೆ ಮೇಲೆ ಕಾಲು ಮಡಚಿ ನಡುಗ್ತಾ ಕೂತಿದಾನೆ. ತನ್ನೆರಡು ಕೆನ್ನೆ ಸವರಿಕೊಳ್ತಾ ‘ನೋವು’ ಅಂತ ಕಣ್ಣು ಮುಚ್ಚಿಕೊಂಡಿದಾನೆ.

ಲಕ್ಕ ಈಗ ಹೆದರಿಬಿಟ್ಟಿದ್ದ.

‘ಸಿದ್ದ.. ಏನಾಯ್ತು.. ಅದೇನು ಶಬ್ಧ.. ನಿನ್ ಕೆನ್ನೆಗೆ ಹೊಡ್ದದ್ದು ನಂಗೂ ಕೇಳಿಸ್ತು..! ಏನು ನಿಂಗು ಕುತ್ಗೆ ಹಿಚುಕಿದ್ದಾಗಾಯ್ತ?’ ಅಂತ ಹತ್ರ ಕುಳಿತು ಕೇಳಿದ.

ಸಿದ್ದ ಹಾಂ.. ಹೂಂ.. ಅನ್ನದೆ ತನ್ನ ತಲೆಯನ್ನು ತನ್ನ ಬಡಕಲ ಕಾಲಿನ ನಡುವೆ ಹುದುಗಿಸಿ ಕೂತೇ ಇದ್ದ.

ಸಮಾಧಾನ ಮಾಡುವ ಸರದಿ ಈಗ ಲಕ್ಕನದು. ‘ನೀ ಹೇಳಿದ್ದು ನಿಜ ಕಣೋ… ದೆವ್ವ ಭೂತಗಳು ಇವೆ. ನಾನು ಅವೆಲ್ಲ ಇಲ್ಲ ಅಂತ ಧಿಮಾಕು ಮಾಡಿದ್ದು ತಪ್ಪಾಯ್ತು. ನಮ್ಮವ್ವ ಕೂಡ ನಂಗೆ ನೆಟ್ಕೆ ತೆಗ್ದು ಹೇಳ್ತಿರ್ತಾಳೆ.. ದೆಯ್ಯದ ಕಣ್ಣ್ ಬೀಳ್ದಿರಲ್ಲಪ್ಪ’

ರಾತ್ರಿಯೆಲ್ಲ ಹೀಗೆ ಇಬ್ಬರೂ ಮಾತಾಡ್ತಾನೆ ಜಾಗರಣೆ ಮಾಡಿದ್ರು. ಬೆಳಿಗ್ಗೆ ಹೊರಡುವಾಗ ಸಿದ್ದ ಹೇಳಿದ. ‘ಹೋಗ್ಲಿ ಬಿಡು ಲಕ್ಕ… ನಿಂಗೆ ದೆವ್ವದ ಮೇಲೆ ನಂಬಿಕೆ ಬಂತಲ್ಲ… ಇನ್ಮೇಲೆ ಅವೆಲ್ಲ ಇಲ್ಲ.. ಎಲ್ಲ ಮೂಢ ನಂಬಿಕೆ ಅಂತ ಯಾರಿಗೂ ಹೇಳ್ಬೇಡ’

ಲಕ್ಕ ತಲೆಯಾಡಿಸಿದ. ಸಿದ್ದನಿಗೆ ಈಗ ಒಂಥರ ಜಂಭ. ಲಕ್ಕನಿಗೆ ಸಿದ್ದನ ಮೇಲೆ ಒಂಥರ ಗೌರವ!

ಸ್ಕೂಲಿನಲ್ಲಿ ಈ ಎಲ್ಲ ಅನುಭವ ನಮ್ಮೊಂದಿಗೆ ಪಿಸಿಪಿಸಿ ಧ್ವನಿಯಲ್ಲಿ ಸಿದ್ದ ಲಕ್ಕರು ಹಂಚಿಕೊಂಡರು. ಆದ್ರೆ ಪುಣ್ಯಕ್ಕೆ ಕೆಜಿಜಿ ಕಿವಿಗೆ ಇವೆಲ್ಲ ಬೀಳಲಿಲ್ಲ ಅಷ್ಟೆ.
2

ಇವೆಲ್ಲ ಆಗಿ ಆಗ್ಲೆ ಹದಿನೈದು ವರ್ಷ ಆಗಿಹೋಗಿದೆ. ಸಿದ್ದ ಈವಾಗ ಸರ್ಕಾರಿ ಹುದ್ದೆಯೊಂದರಲ್ಲಿದ್ದಾನೆ. ಲಕ್ಕ ತನ್ನ ಹತ್ತು ಎಕರೆ ಜಮೀನು ನೋಡ್ಕೊಳ್ತಾ ಊರಲ್ಲೇ ಆರಾಮ ಇದ್ದಾನೆ.

ಇತ್ತೀಚೆಗೆ ವಿರಾಮವಾಗೆ ನನಗೆ ಸಿದ್ದ ಸಿಕ್ಕಿದ್ದ. ಹೋಟೆಲ್ನಲ್ಲಿ ಕಾಫಿ ಕುಡಿಯುತ್ತ ಅದೂ ಇದೂ ಮಾತಾಡ್ತಾ ಅಚಾನಕ ಈ ದೆವ್ವದ ವಿಷ್ಯ ನೆನಪಿಗೆ ಬಂತು. ಸಿದ್ದನಿಗೆ ಆದಿನ ಆದದ್ದೇನು ಅಂತ ಕೇಳಿದೆ. ಸಿದ್ದ ಭಯಂಕರ ನಕ್ಕ.

‘ಆ ಲಕ್ಕ ಒಬ್ಬ ಫೂಲ್’ ಅಂದ.
‘ಹಾಗಾದ್ರೆ ಅವನ ಕುತ್ತಿಗೆ ಹಿಡ್ದು ಹೊಡೆದಿದ್ದು?’
‘ನಾನೆ ಕಣೊ!’
‘ಅದ್ಸರಿ… ಆಮೇಲೆ ನಿನ್ನ ಎರಡೂ ಕೆನ್ನೆಗೆ ಹೊಡ್ದಿದ್ದು?!’
‘ಏನ್ ಮಾಡೋದೋ… ಲಕ್ಕನ್ನ ನಂಬಿಸ್ಬೇಕಲ್ಲ… ಅದ್ಕೇ ನನ್ನ ಕೆನ್ನೆಗೆ ನಾನೆ ಸರಿಯಾಗಿ ಹೊಡ್ಕೊಂಡೆ’ ಅಂದ!!

ಒಂದು ದಿನ ಲಕ್ಕನೂ ಸಿಕ್ಕಿದ್ದ ಅನ್ನಿ. ಭರ್ಜರಿ ದೇಹಿ. ಮಾತಾಡಿಸಿದೆ. ಕುತ್ತಿಗೆಗೆ, ತೋಳಿಗೆ ಕರಿದಾರದಲ್ಲಿ ಬೆಳ್ಳಿಯ ಭಾರೀ ತಾಯಿತ ಕಟ್ಟಿಸಿಕೊಂಡಿದ್ದ. ಹಣೆ ಮೇಲೆ ದೊಡ್ಡದಾಗೆ ಕುಂಕುಮ ಮತ್ತು ಅದರ ಮೇಲೆ ಚಿಕ್ಕದಾಗಿ ನಾಮ ಇಟ್ಟುಕೊಂಡಿದ್ದ.

ಯಾಕೊ ಆ ಚಿಕ್ಕ ಕೆಂಪು ನಾಮ ನನಗೆ ದೊಡ್ಡದಾಗೆ ಕಾಣಿಸ್ತಿತ್ತು!
*******

(ಚಿತ್ರಕೃಪೆ: ಅಂತರ್ಜಾಲ)

(Published in Kannada.Pratilipi E magazine, Link address:http://kannada.pratilipi.com/anantha-ramesh/badakala-siddhana-devva-vruttanta)

ಅಜ್ಜಿಯ ದೋಸೆ ಘಮ ಘಮ

VV Pic

ಅದು ಪುಟ್ಟ ಹಳ್ಳಿ. ಎಷ್ಟು ಪುಟ್ಟದು ಅಂದರೆ, ಒಂದು ಎರಡು ಅಂತ ಲೆಕ್ಕ ಹಾಕಿದರೆ ನಲ್ವತ್ತು ಅನ್ನುವುದರಲ್ಲಿ ಎಲ್ಲ ಮನೆ ಲೆಕ್ಕ ಆಗಿ ಹೋಗುತ್ತೆ. ಆ ಹಳ್ಳೀಲಿ ಒಟ್ಟು ಜನ ಅಂದರೆ ಬರೆ ತೊಂಭತ್ತು. ಅಲ್ಲಿ ಒಂದೇ ರಸ್ತೆ. ಒಂದೇ ಶಾಲೆ. ಒಬ್ಬರೇ ಪುಟ್ಟ ಟೀಚರ್. ಶಾಲೆಗೆ ಹೊಗುವ ಮಕ್ಕಳು ಹದಿನೈದು ಮಾತ್ರ. ಉಳಿದವರೆಲ್ಲ ಆ ಮಕ್ಕಳ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಮಾವ ಹೀಗೆ.

ಹಳ್ಳಿ ಪಕ್ಕ ಒಂದು ಕಾಡು. ಸಣ್ಣದಲ್ಲ ದೊಡ್ಡ ಕಾಡು. ಅಲ್ಲಿ ಎರಡು ಕರಡಿ ಮರಿಗಳು. ಅಣ್ಣ ಕರಡಿ ಮತ್ತು ತಮ್ಮ ಕರಡಿ. ಆಟ ಆಡ್ತಾ ಸುಖವಾಗಿದ್ದುವು. ಓಡೋದು, ಒಬ್ಬರನ್ನೊಬ್ಬರು ಹಿಡಿಯೋದು, ನೂಕೋದು, ಹುಲ್ಲು ಹಾಸಿನ ಮೇಲೆ ಉರುಳುರುಳಿ ಬೀಳೋದು. ಮರಗಳ ಮೇಲೆ ಹಣ್ಣುಗಳಿದ್ದರೆ, ಮರ ಸರಸರ ಹತ್ತೋದು, ಎರಡೂ ಕರಡಿ ಕರಕರ ತಿನ್ನೋದು. ಮರದ ಮೇಲೆ ಕುಳಿತು ಈ ಹಳ್ಳಿಕಡೆಗೆ ನೋಡ್ತ ಮನೆಗಳನ್ನ, ಮಕ್ಕಳು ಆಡೋದನ್ನ, ಜನ ಓಡಾಡ್ತ ಇರೋದನ್ನ ನೋಡೋದು.

ಒಂದು ದಿನ ಆ ಹಳ್ಳಿಗೆ ಒಬ್ಬಳು ಅಜ್ಜಿ ಬಂದಳು. ದೂರದ ಊರಿಂದ ಬಂದಿದ್ದಳು. ಅವಳಿಗೆ ತುಂಬಾ ಕಷ್ಟ. ಕಷ್ಟ ಏನೆಂದರೆ ಅವಳು ಒಂಟಿ. ಹಳ್ಳಿಯವರು ಪಾಪ ಅಜ್ಜಿಗೆ ಕಷ್ಟ ಆಗಬಾರದು ಅಂತ ಒಂದು ಸಣ್ಣ ಮನೆ ಕೊಟ್ಟರು ಅಜ್ಜಿ ಖುಷಿಯಾಗಿ ಆ ಮನೆಯಲ್ಲಿ ಇದ್ದುಬಿಟ್ಟಳು.

ಅಜ್ಜಿಗೆ ಸುಮ್ಮನೆ ಕೂಡಲು ಆಗಲಿಲ್ಲ. ಹಳ್ಳಿಯವರಿಗೆಲ್ಲ ಹೇಳಿದಳು, ’ ನೋಡಿ, ನೀವೆಲ್ಲ ನನಗೆ ತುಂಬ ಉಪಕಾರ ಮಾಡಿದ್ದೀರ. ನಾನೂ ನಿಮಗೆ ಏನಾದರು ಸಹಾಯ ಮಾಡಬೇಕು. ನನಗೆ ನೀವು ಸ್ವಲ್ಪ ಅಕ್ಕಿ, ಬೇಳೆ ಕೊಟ್ಟರೆ, ನಿಮಗೆಲ್ಲ ದೋಸೆ ಮಾಡಿ ಕೊಡುತ್ತೇನೆ’

ಪಾಪ ಅಜ್ಜಿ ಆಸೆ. ಆಯಿತು ಅಂದರು ಹಳ್ಳಿಯವರು. ಅಜ್ಜಿ ದಿನಾ ದೋಸೆ ಮಾಡೋದು. ರುಚಿ ರುಚಿ, ಘಮ ಘಮ. ಹಳ್ಳಿಗೆಲ್ಲ ಅದರ ಪರಿಮಳ. ಜನ ಅದನ್ನು ಖುಷಿಯಲ್ಲಿ ತಿನ್ನೋದು. ಮಕ್ಕಳಿಗೆ ತುಪ್ಪ ಹಾಕಿ ಕೊಟ್ಟರೆ ನಗ್ತಾ ನಗ್ತಾ ತಿನ್ನುತ್ತಿದ್ದರು. ಹೀಗೆ ಅಜ್ಜಿ ಮನೆ ದೋಸೆ ಮನೆ ಆಯ್ತು.

ಪಕ್ಕದ ಕಾಡಿನ ಎರಡು ಕರಡಿ ಮರಿಗಳಿದ್ದುವಲ್ಲ, ಅವಕ್ಕೆ ಮೂಗು ತುಂಬಾ ಸೂಕ್ಷ್ಮ. ಹಳ್ಳಿಕಡೆಯಿಂದ ಏನೋ ಪರಿಮಳ ಬರುತ್ತಿದೆ ಅಂತ ಗೊತ್ತಾಯ್ತು. ಬೆಳಿಗ್ಗೆ ಎದ್ದು ಒಂದು ಮರ ಹತ್ತಿ ಹಳ್ಳಿ ಕಡೆ ನೋಡ್ತ ಕೂತವು. ಸ್ವಲ್ಪ ಜನ ಅಜ್ಜಿ ಮನೆಗೆ ಹೋಗೋದು, ಅಲ್ಲಿ ಏನೋ ತಿಂದು, ಡರ್ ಅಂತ ತೇಗ್ತಾ ಹೋಗೋದು ಕಾಣಿಸ್ತು. ಈ ಹೊಸ ಅಜ್ಜಿ ರುಚಿಯಾದ ತಿಂಡಿ ಮಾಡಿ ಕೊಡ್ತಾಇರೋದು ಕರಡಿಗಳಿಗೆ ಗೊತ್ತಾಗಿಹೋಯ್ತು. ಒಂದರ ಮುಖ ಒಂದು ನೋಡೊಕೊಂಡವು. ’ಕೀಚ್, ಕೀಚ್’ ಅಂದವು. ಅಂದರೆ, ’ನಾವೂ ಅಲ್ಲಿಗೆ ಹೋಗಿ, ಅದೇನು ತಿಂಡಿ ನೋಡೋಣ’ ಅಂತ.

ಸರಿ, ಕರಡಿಮರಿಗಳು ಮರದಿಂದ ಸರಸರ ಇಳಿದು, ಮೆಲ್ಲಗೆ ಅಜ್ಜಿ ಮನೆಕಡೆಗೆ ಹೆಜ್ಜೆ ಹಾಕಿದವು. ಜನರು ನೋಡಬಾರದಲ್ಲ, ಅದಕ್ಕೆ ಅಲ್ಲಲ್ಲಿ ಮರಗಳ ಮರೆಯಲ್ಲಿ ನಿಲ್ಲೋದು, ನಾಲ್ಕು ಹೆಜ್ಜೆ ಹಾಕೋದು. ಹೀಗೆ, ಹಾಗೂ ಹೀಗೂ ಅಜ್ಜಿಮನೆ ಹಿತ್ತಿಲು ಬಂತು. ಘಮ ಘಮ ಪರಿಮಳ. ಚುಂಯ್ ಚುಂಯ್ ದೋಸೆ ಹಾಕ್ತಿರೊ ಶಬ್ಧ. ತುಪ್ಪ ದೋಸೆಗೆ ಸುರಿಯುವಾಗ ಇನ್ನೂ ಚೆನ್ನ. ಕರಡಿ ಮರಿಗಳ ಮೂಗು ಅರಳಿಹೋಯ್ತು!

ಅಜ್ಜಿ ಮನೆ ಹಿತ್ತಿಲ ಬಾಗಿಲು ಮುಚ್ಚಿತ್ತು. ಆದರೆ ಅಲ್ಲಿ ಒಂದು ಕಿಟಕಿ. ಮೇಲೆ ಇತ್ತು. ಸರಿ, ಅಣ್ಣ ಕರಡಿ ಕಿಟಕಿ ಕೆಳಗೆ ನಿಂತು, ತಮ್ಮ ಕರಡಿಯನ್ನು ಬೆನ್ನ ಮೇಲೆ ಹತ್ತಿಸಿಕೊಂಡಿತು. ಮೇಲಿದ್ದ ಕಿಟಕಿ ಈಗ ಸಿಕ್ಕಿತು. ಇಣುಕಿ ನೋಡಿದರೆ, ವಾಹ್.. ಅಲ್ಲಿ ಅಜ್ಜಿ ದೋಸೆ ಹೊಯ್ಯುತ್ತಿದ್ದಾಳೆ. ಬಿಸಿ ಬಿಸಿ ದೋಸೆ, ತುಪ್ಪದ ದೋಸೆ. ಜನ ಬರೋದು, ದೋಸೆ ತಿನ್ನೋದು.

“ಕೀಚ್.. ಕೀಚ್” ಅಂತು ತಮ್ಮ ಕರಡಿ. ’ಇಲ್ಲಿ ದೋಸೆ ಹೊಯ್ಯುತ್ತಿದ್ದಾರೆ ಅಣ್ಣ. ನನಗೆ ಅದು ಬೇಕು’ ಅಂತ ಕೇಳಿತು. ಅದಕ್ಕೆ ಅಣ್ಣ ಕರಡಿ ಹೇಳಿತು, ’ಸ್ವಲ್ಪ ತಡಿ, ಸೀದಾ ಒಳಗೆ ಹೋದರೆ ಅಜ್ಜಿ ಭಯಪಡುತ್ತಾಳೆ. ಕೂಗುತ್ತಾಳೆ. ಜನ ಎಲ್ಲ ಬಂದರೆ, ನಾವು ಓಡಬೇಕಾಗುತ್ತೆ. ದೋಸೆ ಸಿಕ್ಕಲ್ಲ ದೊಣ್ಣೆ ಏಟು ಸಿಕ್ಕುತ್ತೆ’.
’ಏನು ಮಾಡೋದು’ ಅಂತ ಸ್ವಲ್ಪ ಯೋಚಿಸಿ ಹೇಳಿತು, ’ ಈ ಬಾಗಿಲು ಸ್ವಲ್ಪ ನೂಕು ನೋಡೋಣ’.
ಹಿಂಬಾಗಿಲಿಗೆ ಚಿಲಕ ಹಾಕಿಲ್ಲ. ಬಾಗಿಲು ತೆರೆಯಿತು. ಎರಡೂ ಮರಿಗಳು ಮೆಲ್ಲಗೆ ಒಳಗೆ ಹೋದುವು. ಅಡಿಗೆ ಮನೆ ಇಣುಕಿದುವು. ಅಜ್ಜಿ ದೊಡ್ಡ ದೋಸೆ ರಾಶಿ ಹಾಕಿದ್ದಳು. ಶಬ್ಧ ಮಾಡದೆ ನೋಡ್ತ, ಅಜ್ಜಿ ಆಚೆಗೆ ಹೋಗ್ಲಪ್ಪ ಅಂತ ಚಡಪಡಿಸ್ತ ಇದ್ದಾಗ ಯಾರೊ ಕರೆದರು ಅಂತ ಅಜ್ಜಿ ಅಡಿಗೆ ಮನೆ ಬಿಟ್ಟು ಹೊರಗೆ ಹೋಗಿ ಬಿಟ್ಟಳು!

ಕಿಲಾಡಿ ಕರಡಿ ಭರ ಭರ ಅಡುಗೆ ಮನೆಗೆ ಓಡಿ ಕೈತುಂಬಾ ದೋಸೆ ಎತ್ತಿಕೊಂಡು ತಮ್ಮ ಕರಡಿ ಜೊತೆ ಕಾಡೊಳಗೆ ಓಡಿತು. ಪಾಪ, ಹಾಗೆ ಕೇಳದೆ ತೆಗೆದುಕೊಳ್ಳಬಾರದು ಅಂತ ಹೇಳಲು ಆ ಮರಿ ಕರಡಿಗಳಿಗೆ ಅಮ್ಮ ಇರಲಿಲ್ಲವಲ್ಲ.

ಖುಶಿಯಾಗಿ ಎರಡೂ ಕರಡಿ ದೋಸೆ ಸಮನಾಗಿ ಹಂಚಿಕೊಂಡವು. ಗಬಗಬ ತಿಂದವು. ರುಚಿ ರುಚಿ ದೋಸೆ. ಅಬ್ಬಬ್ಬ, ಅಜ್ಜಿ ಮಾಡಿದ ದೋಸೆ ಮಜವಾಗಿದೆ ಅಂದುಕೊಂಡು ಒಂದರ ಮುಖ ಒಂದು ನೋಡಿ ಕೀಚ್ ಕೀಚ್ ಅಂತ ನಕ್ಕವು.

ಹೊಟ್ಟೆ ತುಂಬಿದಮೇಲೆ ಕರಡಿಗಳಿಗೆ ಅಜ್ಜಿ ನೆನಪಾಯ್ತು. ’ಪಾಪ ಅಜ್ಜಿ’ ಅಂತ ಕನಿಕರ ಆಯ್ತು. ಕಷ್ಟಪಟ್ಟು ಮಾಡಿದ ದೋಸೆ ನಾವು ಲಪಟಾಯಿಸಿದೆವಲ್ಲ ಅಂತ ಪಶ್ಚಾತ್ತಾಪವಾಯ್ತು. ದೋಸೆಗೆ ಬದಲಾಗಿ ನಾವೂ ಏನಾದರು ಕೊಡಬೇಕಲ್ಲ ಅಂತ ಒಂದು ಒಳ್ಳೆ ಆಲೋಚನೆ ಕೂಡಾ ಬಂತು.

ಪುಟ್ಟ ಕರಡಿ ಓಡಿ ಒಂದು ದೊಡ್ಡ ಹಲಸಿನ ಹಣ್ಣು ಎತ್ತಿಕೊಂಡು ಬಂತು. ಅಣ್ಣ ಕರಡಿ ’ಭಲೆ! ಭಲೆ! ಭೇಷ್ ಭೇಷ್’ ಅಂತ ತಮ್ಮನ ಬೆನ್ನು ತಟ್ಟಿ, ’ಬಾ ಇಬ್ಬರೂ ಹೋಗಿ ಅಜ್ಜಿಗೆ ಈ ಹಣ್ಣು ಕೊಟ್ಟು ಬರೋಣ’ ಅಂತ ಹೋದವು. ಹಿತ್ತಲ ಬಾಗಿಲು ಮೆಲ್ಲನೆ ನೂಕಿ, ಹಲಸನ್ನು ಅಲ್ಲೆ ಇಟ್ಟು ಕಾಡಿಗೆ ಹಿಂತಿರುಗಿದವು. ಅಬ್ಬ ಈಗ ನೆಮ್ಮದಿ ಆಯ್ತು ಅಂತ ನಕ್ಕು ಆಟ ಆಡಲು ಓಡಿದವು.

ಅಜ್ಜಿ ಪಾಪ.. ಅಷ್ಟೊಂದು ದೋಸೆ ಹೇಗೆ ಕಡಿಮೆ ಆಯ್ತು ಅಂತ ಹಿತ್ತಲ ಬಾಗಿಲ ಹತ್ತಿರ ಬಂದರೆ ಅಲ್ಲೊಂದು ದೊಡ್ಡ ಹಲಸಿನ ಹಣ್ಣು! ದೊಡ್ಡ ದೊಡ್ಡ ಕಣ್ಣು ಬಿಟ್ಟು ನೋಡಿದಳು. ಘಮ ಘಮ ಹಣ್ಣು. ’ಒಹ್! ಯಾರೊ ದೋಸೆ ತೆಗೆದುಕೊಂಡು ಬದಲಿಗೆ ಹಣ್ಣು ಕೊಟ್ಟಿದ್ದಾರೆ’ ಅಂತ ಅಜ್ಜಿಗೆ ಅನ್ನಿಸಿತು. ಖುಶಿಯಾಗಿ ಅದನ್ನು ಒಳಗೆ ತೆಗೆದುಕೊಂಡು ಹೋದಳು. ’ನಾಳೆ ದೋಸೆ ಜೊತೆಗೆ ಹಲಸಿನ ಹಣ್ಣಿನ ರಸಾಯನ ಮಾಡ್ತೀನಿ’ ಅಂತ ಅಂದುಕೊಂಡಳು.

ಹಲಸಿನ ಹಣ್ಣಿನ ರಸಾಯನ ಅಂದರೆ ಕರಡಿಗಳಿಗೆ ಪ್ರಾಣ. ಅಜ್ಜಿ ನಾಳೆ ರಸಾಯನ ಮಾಡಿದರೆ ಅದರ ಪರಿಮಳ ನಮ್ಮ ಕರಡಿಮರಿಗಳ ಮೂಗಿಗೆ ಬಂದರೆ, ಪಾಪ ಅವುಗಳ ಪಾಡೇನು ಅಲ್ವ?!

ಅಜ್ಜಿ ರಸಾಯನ ಮಾಡಲು ಪ್ರಾರಂಭಿಸುತ್ತಿದ್ದಂತೆ ಅದರ ಪರಿಮಳ ಕರಡಿಗಳಿಗೆ ಮುಟ್ಟಿತು. ಅವುಗಳ ಸಂತೋಷ ಹೇಳತೀರದು. ಸಂತಸದಿಂದ ಕುಣಿದಾಡಿದವು. ಹೋದ ಸಲದಂತೆ ಈ ಬಾರಿಯೂ ಅಜ್ಜಿಗೆ ಗಾಬರಿ ಹುಟ್ಟಿಸದಂತೆ ರಸಾಯನವನ್ನು ಹೊತ್ತು ತರುವುದು ಅಂತ ಮಾತಾಡಿಕೊಂಡವು. ಆದರೆ ಈ ಬಾರಿ ರಸಾಯನಕ್ಕೆ ಬದಲಾಗಿ ಏನನ್ನು ನೀಡುವುದು ಎಂಬುದು ಸಮಸ್ಯೆಯಾಯಿತು. ಜೇನನ್ನು ನೀಡೋಣವೆಂದು ಪರಿಹಾರ ಸೂಚಿಸಿತು ತಮ್ಮ ಕರಡಿ. ಅದಕ್ಕೆ ಅಣ್ಣ ಕರಡಿ ತಮ್ಮನ ಬೆನ್ನು ತಟ್ಟಿತು.

ಎರಡೂ ಕರಡಿಗಳು ಅಜ್ಜಿಯ ರಸಾಯನ ಪೂರ್ತಿಗೊಳ್ಳಲು ಮರದ ಮೇಲೆ ಕಾಯುತ್ತಾ ಕೇಕೆ ಹಾಕುತ್ತಾ ನಕ್ಕವು.

******

(ವಿಶ್ವವಾಣಿ ೦೧.೦೫.೨೦೧೬ ’ಲಾಲಿ ಪಾಪು’ವಿನಲ್ಲಿ ಪ್ರಕಟಿತ https://goo.gl/wblhxB)