ಎರಡು ಘಟನೆ-ಒಂದೇ ಕಥೆ

mob

ಕಳ್ಳ

ಬೆಂಗಳೂರಿನ ಪೀಕ್ ಅವರ್( peak hour). ಜನರಿಂದ ತುಂಬಿ ತುಳುಕುತ್ತಿರುವ ಬಿಎಂಟಿಸಿ ಬಸ್ಸು. ಜನಜಂಗುಳಿಯ ಮೈಸೂರು ರಸ್ತೆಯಲ್ಲಿ ಹೋಗುತ್ತಿದೆ. ನಾನು ಹಿಂದಿನ ಕೊನೆಯ ಸೀಟಿನಲ್ಲಿ ಕುಳಿತಿದ್ದೇನೆ. ಆ ತುಳುಕುವ ಬಸ್ಸಿನಲ್ಲೂ ನನಗೆ ಸ್ವಲ್ಪ ನಿದ್ರೆ ಹತ್ತಿದೆ. ತಿಂಗಳ ಬಸ್ ಪಾಸ್ ಇರುವುದರಿಂದ, ಟಿಕೆಟ್ ತೆಗೆದುಕೊಳ್ಳುವ ರಗಳೆ ಇಲ್ಲ. ಬಸ್ ಹತ್ತುವಾಗಲೆ ’ಪಾಸ್’ ಅಂತ ಹೇಳಿದ್ದರಿಂದ ಕಂಡಕ್ಟರ್ ನನ್ನ ಈ ಕೋಳಿ ನಿದ್ರೆಗೆ ಭಂಗ ತರುವುದಿಲ್ಲ ಅಂದುಕೊಂಡಿದ್ದೇನೆ.

ಅಂಥ ಚಿಕ್ಕ ನಿದ್ರೆ ಒಂದು ರೀತಿಯಲ್ಲಿ ನನಗೆ ರಿಲಾಕ್ಸ್ ಆಗಲು ಸಹಕಾರಿ. ಮತ್ತೆ ಕಣ್ಣು ಮುಚ್ಚುವುದರಿಂದ ಚಿತ್ರಾವಿಚಿತ್ರದ ಮಂದಿಯನ್ನು ನೋಡಿ ತಲೆಬಿಸಿ ಮಾಡಿಕೊಳ್ಳದ ಸಮಾಧಾನ. ಡ್ರೈವರನಿಗೆ ಒಳ್ಳೆ ಸರ್ವೀಸ್ ಆಗಿರಬೇಕು, ಹಂಪ್ ಬರುವಲ್ಲೆಲ್ಲ ಮೆಲ್ಲಗೆ ಹೋಗುತ್ತಾನೆ. ಆಗಾಗ ವೇಗ ಹೆಚ್ಚುಮಾಡಿ ಹೋಗುತ್ತಿದ್ದಾನೆ. ಆದರೆ ಕುಳಿತವರಿಗೆ, ನಿಂತವರಿಗೆ ಹೆಚ್ಚು ಓಲಾಡದಂತೆ ಓಡಿಸುತ್ತಿದ್ದಾನೆ. ಅದಕ್ಕೇ ಇರಬೇಕು ನನಗೆ ಸ್ವಲ್ಪ ಜೋರಾದ ಜೋಂಪು ಹತ್ತಿಬಿಟ್ಟಿದೆ.

ಆ ಜೋಂಪಿನ ಸುಖ ಪೂರ್ತಿ ಅನುಭವಿಸುವುದರಲ್ಲೆ ಗಲಾಟೆಯಾಗುತ್ತಿರುವ ಶಬ್ಧ ಇದ್ದಕ್ಕಿದ್ದಂತೆ ಬಸ್ಸಿನ ಮಧ್ಯಭಾಗದಿಂದ ಕೇಳತೊಡಗಿತು. ಏನೂ ಕಾಣಿಸುತ್ತಿಲ್ಲ. ಆದರೆ ಜನರಾಡುತ್ತಿರುವ ’ಸುಂದರವೂ ಇಂಪಾಗಿರುವುದೂ’ ಆದ ಮಾತುಗಳು ಕಿವಿಗೆ ಬೀಳತೊಡಗಿದೆ!

“ಹೊಡೀರಿ ಆ ಮುಠ್ಠಾಳಂಗೆ, ಹಾಕ್ರಿ ಇನ್ನೂ ನಾಲ್ಕು.. ಮಗಂಗೆ” ಅಂತ ಒಬ್ಬರು, “ಬಿಡ್ಬ್ಯಾಡ್ರಿ. ತದುಕ್ರಿ ಅವ್ನ” ಅಂತ ಇನ್ನೊಬ್ಬರು. ಮತ್ತಷ್ಟು “@#‍‍‍****..&*$#*!” ಹೀಗೆ ವಿವಿಧ ರೂಪಗಳ ಕೋಪದ ಕೂಗುಗಳು, ಬೈಗುಳಗಳು.   ಹಿಗ್ಗಾಮುಗ್ಗಾ ಜಗ್ಗಾಟ ನಡೆಯುತ್ತಿದೆ. ಬಯ್ಗುಳಗಳು ಜೊತೆಗೆ ಯಾರಿಗೊ ಕೆಲವರು ಹೊಡೆಯುತ್ತಿರುವ ಸದ್ದು. ಹೀಗೆಲ್ಲ ಆಗುತ್ತಿರುವುದರಿಂದ, ಒಂದು ರೀತಿಯಲ್ಲಿ ಬಸ್ ಪೂರ್ಣ ಚಾರ್ಜ್ ಆಗಿಬಿಟ್ಟಿದೆ! ಎಲ್ಲರಲ್ಲೂ ಏನೋ ಉದ್ವೇಗ. ಏನಿರಬಹುದು ಅನ್ನುವ ಕುತೂಹಲ ಬಸ್ಸಿನ ಎರಡೂ ತುದಿಯ ಜನರಲ್ಲಿ ತುಂಬಿಹೋಗಿದೆ.

ಸ್ವಲ್ಪ ದೂರದಲ್ಲಿ ಬಸ್ ಸ್ಟಾಪಲ್ಲಿ ಬಸ್ ನಿಂತಿತು. ಹಾಗೆ ಹೊಡಿಯೊ ಶಬ್ಢ ಕೂಡ.  ಎಲ್ಲರೂ ನೋಡುತ್ತಿರುವಂತೆಯೆ ಒಬ್ಬ ಯುವಕ ಬಸ್ಸಿನ ಜನರನ್ನು ಭೇದಿಸಿ ಸರಕ್ಕನೆ ಹಿಂಬಾಗಿಲಿಂದ ಇಳಿದು ಓಡಿದ.  ಅವಮಾನದಲ್ಲಿ ಕುದ್ದುಹೋಗಿರುವ ಮುಖ. ತಲೆ ತಗ್ಗಿಸಿ ಅವನು ಓಡಿಬಿಟ್ಟ. ಅವನ ಅಂಗಿ ಹರಿದಿತ್ತು, ಕೂದಲು ಕೆದರಿ ಹೋಗಿದ್ದುವು. ಕಣ್ಣು, ಕೆನ್ನೆ ಊದಿಕೊಂಡಿದ್ದುವು.  ಅವನ ಚಪ್ಪಲಿ ರಸ್ತೆಯಲ್ಲಿ ಅನಾಥವಾದುವು. ತಿರುಗಿ ನೋಡದೆ ಓಡಿದ. ಅವನು ತಪ್ಪಿಸಿಕೊಂಡಿದ್ದ.

ಬಸ್ಸಿನೊಳಗೆ ಕೂಗುತ್ತಿದ್ದರು. “ಅಯ್ಯೊ ಓಡೋಗ್ತಾ ಇದಾನೆ. ಬಿಡಬ್ಯಾಡ್ರಿ.. ಹಿಡೀರಿ.. ಹಿಡೀರಿ.. ಕಳ್ ನನ್ ಮಕ್ಳನ್ನು ಕೊಂದ್ರೂ ಪಾಪ ಬರಲ್ಲ”. ಕೆಲವರು ಸ್ವಲ್ಪ ದೂರ ಅವನ ಹಿಂದೆ ಓಡಿದರು. ಆದರೆ ಹಿಡಿಯಲಾಗದೆ ಹಿಂತಿರುಗಿದರು, ಡ್ರೈವರನಿಗೆ ಕೈ ಸನ್ನೆ ಮಾಡಿ, ಬಸ್ಸು ನಿಲ್ಲಿಸಿ ಮತ್ತೆ ಹತ್ತಿಕೊಂಡರು. ಕೆಲವರು ತಮ್ಮ ಪ್ಯಾಂಟ್ ಜೇಬುಗಳನ್ನು ಭದ್ರವಾಗಿ ಹಿಡಿದು, ಕಿಟಕಿ ಮೂಲಕ ಇನ್ನೇನಾದರೂ ನಾಟಕ ಕಣ್ಣಿಗೆ ಬೀಳಬಹುದೇನೊ ಎಂದು ಗೋಣನ್ನು ಆಚೆ ಈಚೆಗೆ, ಹಿಂದಕ್ಕೆ ಮುಂದಕ್ಕೆ ಆಡಿಸತೊಡಗಿದರು. ಏನೂ ಕಾಣದಿದ್ದರಿಂದ ಕೆಲವರು ಬೇಸರಿಸಿಕೊಂಡರು!

ಆದರೆ ನನಗೆ ಆಶ್ಚರ್ಯ ವಾದದ್ದು ಆ ಬಸ್ಸಿನಲ್ಲಿದ್ದ ಒಬ್ಬ ಕೂಡ ಆ ಕಳ್ಳನ ಹಿಡಿದು ಪೊಲೀಸರಿಗೆ ಕೊಡಬೇಕೆನ್ನುವ ಆಲೋಚನೆ ಮಾಡದೆ ಇದ್ದುದಕ್ಕೆ. ಆ ಕಳ್ಳನನ್ನು ನೋಡದವರು ಅಥವಾ ಕಳ್ಳತನ ಮಾಡುವುದನ್ನು ಕಾಣದವರು ಕೂಡ ಕಳ್ಳ ಸಿಕ್ಕರೆ ನಾಲ್ಕು ತದುಕಿ ತಮ್ಮ ಜೀವನದ ಬಹು ದೊಡ್ಡ ಆಸೆಯನ್ನು ತೀರಿಸಿಕೊಳ್ಳಲು ಕಾತರರಾಗಿದ್ದಾರೆನ್ನಿಸಿತು.

ಬಸ್ಸು ಚಲಿಸತೊಡಗಿತು. ಯಾರದೋ ಧ್ವನಿ ಖುಷಿಯಲ್ಲಿ ಉರುಲುತ್ತಿತ್ತು. ’ನಾ ಬಿಡ್ಲಿಲ್ಲ ಅವ್ನನ್ನ… ಇಲ್ನೋಡಿ ಅವನ ಕಾಲರ್ ಹಿಡಿದು ಎಳೆದು ಮುಖಕ್ಕೆ ಸರಿಯಾಗಿ ಇಕ್ಕಿದ್ದಕ್ಕೆ, ಅವನ ಅಂಗಿಯ ಎರಡು ಬಟನ್ ನನ್ನ ಕೈಯಲ್ಲೇ ಇದೆ!’

ಸುತ್ತಲಿದ್ದವರು ಅವನನ್ನು ಹೀರೋ ಥರ ನೋಡುತ್ತಿರಬೇಕೆಂದು ಊಹೆ ಮಾಡಿಕೊಂಡೆ.
ಮೆಲ್ಲಗೆ ಪಕ್ಕದವರನ್ನ ಕೇಳಿದೆ. “ಆ ಕಳ್ಳನ್ನ ಹೊಡಿಯೋ ಬದ್ಲು, ಪೊಲೀಸ್ಗೆ ಹಿಡ್ಕೊಟ್ಟು ಬಿಡಬಹುದಾಗಿತ್ತು”.

ಪಕ್ಕದವರು ನನ್ನ ಪಾಪದ ಮನುಷ್ಯನ ನೋಡುವಂತೆ ನೋಟ ಬೀರಿದರು. ಕರುಣೆಯಿಂದ ಶ್ರೀಕೃಷ್ಣ ಪರಮಾತ್ಮನು ಶಿಷ್ಯ ಅರ್ಜುನನಿಗೆ ತಿಳಿಹೇಳುವಂತೆ, “ಯಾರ್ಗೆ ಹಿಡ್ಕೊಡ್ತೀರ. ಅವ್ರೆಲ್ಲ ಶಾಮೀಲು ರಾಯರೆ. ನೀವು ಸ್ಟೇಷನ್ ನೋಡಿಲ್ವ? ಕಳ್ಳ ಪೊಲೀಸ್ ಎಲ್ಲ ಒಳಗೊಳಗೆ ಫ಼್ರೆಂಡ್ಸ್. ಇವೆಲ್ಲ ಪ್ರಪಂಚಕ್ಕೇ ಗೊತ್ತಿರೊ ವಿಷಯ. ಏನೂ ಪ್ರಯೋಜ್ನ ಇಲ್ಲ! ನಾವು ಸಿಕ್ಕ ಅವಕಾಶ ಬಿಡಬಾರದು. ಈ ಕಳ್ಳನನ್ ಮಕ್ಕಳಿಗೆ ಬುದ್ಧಿ ಇಲ್ಲೆ ಕಲಿಸಿಬಿಡಬೇಕು….ಮತ್ತ್ಯಾವತ್ತು ಇಂಥ ಕೆಲ್ಸಕ್ಕೆ ಕೈ ಹಾಕ್ಬಾರ್ದು. ಏನಂತೀರಾ?”
ನಾನು ನೋವಾಗುವಷ್ಟು ಗೋಣು ಅಲ್ಲಾಡಿಸಿದೆ!

ಈ ಘಟನೆಯಾಯಿತಲ್ಲ ಅದರ ಮರುದಿನ ದಿನ ಪತ್ರಿಕೆ ಓದುತ್ತಿದ್ದೆ. ಪತ್ರಿಕೆಯ ಎರಡನೇ ಪುಟದಲ್ಲಿ ಅಪರಾಧ ಕಾಲಂಗಳು ತುಂಬಿಹೋಗಿದ್ದವು. ಕೊಲೆ, ಸುಲಿಗೆ, ಮಾರಾಮಾರಿ, ಅತ್ತೆಸೊಸೆ ಜಗಳಗಳ ಕೊಲೆಗಳು, ಅನುಮಾನಾಸ್ಪದ ವ್ಯಕ್ತಿಗಳ ಬಂಧನ ಇತ್ಯಾದಿಯತ್ತ ಕಣ್ಣಾಡಿಸುತ್ತಿರುವಾಗ ಪತ್ರಿಕೆಯ ಮೂಲೆಯಲ್ಲಿ ಒಂದು ಸುದ್ದಿ ಗಮನ ಸೆಳೆಯಿತು. ’ಬಸ್ಸಿನಲ್ಲಿ ಅಮಾಯಕನ ಮೇಲೆ ಹಲ್ಲೆ” ಎಂದು.

ಶ್ರಿಯುತ ರಾಮು ಎಂಬುವರನ್ನು ಬಸ್ಸೊಂದರಲ್ಲಿ ಐದಾರು ಜನರ ಕಳ್ಳರ ತಂಡ ಸುತ್ತುವರಿದು ಪಿಕ್ ಪಾಕೆಟ್ ಮಾಡಿದ್ದಾರೆ. ಬಸ್ಸಿನೊಳಗೆ ಸುಳ್ಳು ಗಲಾಟೆ ಎಬ್ಬಿಸಿ ರಾಮು ಅವರಲ್ಲಿದ್ದ ಹಣದ ಪರ್ಸು, ವಾಚು, ಚಿನ್ನದ ಉಂಗುರ ಲಪಟಾಯಿಸಿರುತ್ತಾರೆ. ಮತ್ತೆ ರಾಮು ಅವರ ಬಾಯಿ ಮುಚ್ಚಿ ಕಳ್ಳ ಕಳ್ಳ ಎಂದು ಕೂಗಿ ಅವರನ್ನು ಬಿಂಬಿಸಿರುತ್ತಾರೆ. ಹಣ, ಮೊಬೈಲು, ವಾಚು, ಬಂಗಾರದ ಚೈನು ಕಳಕೊಂಡಿರುವ ಶ್ರೀರಾಮು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಾರೆ. ದೂರು ದಾಖಲಾಗಿದೆ.

ಘಟನೆಯ ದಿನಾಂಕ ನೋಡಿದ ಮೇಲೆ ಮನವರಿಕೆಯಾಯಿತು ಆ ದಿನ ಯುವಕನೊಬ್ಬ ಓಡಿ ಹೋದದ್ದು ಕಳ್ಳರಿಂದ ತಪ್ಪಿಸಿಕೊಳ್ಳಲು. ಕಳ್ಳರ ಗುಂಪು ಬಸ್ಸಿನ ಇತರ ಪ್ರಯಾಣಿಕರನ್ನು ಏಮಾರಿಸಿ ಅಮಾಯಕನನ್ನು ತದುಕಿಸಿಬಿಟ್ಟಿದ್ದರು. ಗುಂಪಿನಲ್ಲಿ ಬರುವ ಟಿಪ್ ಟಾಪ್ ಕಳ್ಳರು ಇತ್ತೀಚೆಗೆ ಹೆಚ್ಚಿದ್ದಾರೆಂದು ಅನುಭವದಿಂದಷ್ಟೆ ಗೊತ್ತಾಗಬೇಕಾಗಿದೆ. ಕಳ್ಳತನ ಮತ್ತು ದರೋಡೆಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತಿವೆ. ಅಪರಾಧ ಪತ್ತೆಯಲ್ಲಿ ಹಳೆಯ ದಾರಿ ಬಿಟ್ಟು ಹೊಸ ಆವಿಷ್ಕಾರಗಳ ಕಡೆ ಗಮನವಿರಿಸಲೇಬೇಕಾಗಿದೆ.

ಸ್ತ್ರೀ ಶಕ್ತಿ

ಟವಿಯಲ್ಲಿ ಸುದ್ದಿವಾಹಿನಿಯೊಂದನ್ನು ನೋಡುತ್ತಿದ್ದೆ. ಚಾನಲ್ ಏನನ್ನೋ ಒದರುತ್ತಿತ್ತು. ’ಬ್ರೇಕಿಂಗ್ ನ್ಯೂಸ್’ ಅಂತ ಮತ್ತೆ ಮತ್ತೆ ಢಂಗುರ ಶಬ್ಧ ಕೇಳಿಸಿತು. ಗಮನ ಅತ್ತ ಹರಿಸಿದೆ. ’ಕಾಮುಕ ಯುವಕನಿಗೆ ಹೆಂಗಸರಿಂದ ಥಳಿತ’ ಅನ್ನುವ ಸುದ್ದಿ. ಸ್ವಲ್ಪ ಸಮಯ ಸುದ್ದಿ ಪುನರಿಪಿಸಿದ ಮೇಲೆ, ಆ ಥಳಿತದ ವಿಡಿಯೊ ತೋರಿಸತೊಡಗಿದರು.

ಹಳ್ಳಿಯೊಂದರ ರಸ್ತೆಯ ಬದಿಯಲ್ಲಿ ಒಬ್ಬ ಯುವಕನನ್ನು ಮರವೊಂದಕ್ಕೆ ಕಟ್ಟಿಹಾಕಿದ್ದಾರೆ. ಸುತ್ತಲೂ ಜನ ಮುತ್ತಿಗೆ ಹಾಕಿದ್ದಾರೆ. ಆ ಯುವಕನ ಮುಖ ಊದಿಕೊಂಡಿದೆ. ತುಟಿ, ಕಿವಿಗಳ ಬಳಿ ರಕ್ತ ಒಸರುತ್ತಿದೆ. ಒಂದಷ್ಟು ಹೆಂಗಸರು ಕೈಯಲ್ಲಿ ಪೊರಕೆ, ಚಪ್ಪಲಿ, ಕೋಲುಗಳನ್ನು ಹಿಡಿದು ಹಿಂದುಮುಂದು ಅವನಿಗೆ ಹೊಡೆಯುತ್ತಿದ್ದಾರೆ. ಸರದಿಯಲ್ಲಿ ಬಂದು ಅವನಿಗೆ ಮನಸಾ ಇಚ್ಛೆ ಬಾರಿಸುತ್ತಿದ್ದಾರೆ!

ಬಹುಶ: ಯಾರೊ ಅಲ್ಲಿಯ ದೃಶ್ಯ ವಿಡಿಯೊ ಮಾಡುತ್ತಿರುವುದನ್ನು ಆ ವೀರ ಮಹಿಳಾಮಣಿಗಳು ಗಮನಿಸಿರಬೇಕು. ಹಾಗಾಗಿ, ತಮ್ಮ ವೇಷಭೂಷಣ ಆದಷ್ಟೂ ಸರಿಮಾಡಿಕೊಂಡು, ಚಲನ ಚಿತ್ರದ ಖಡಕ್ ಸಂಭಾಷಣಾ ಚತುರೆ ಮತ್ತು ಫೈಟಿಂಗ್ ಕ್ವೀನ್ ಅಂತ ಹೆಸರು ಮಾಡಿದ ನಾಯಕಿಯೊಬ್ಬಳ ಭಂಗಿಯನ್ನು ಆದಷ್ಟು ನಕಲು ಮಾಡುತ್ತ ಆ ’ಮಾನಗೆಟ್ಟ’ (!?) ಯುವಕನಿಗೆ ಥಳಿಸತೊಡಗಿದ್ದಾರೆ.

ಸುಮಾರು ಐವತ್ತು ಅರವತ್ತು ಜನ ಕೈಕಟ್ಟಿ ನಗುತ್ತ ಅಥವಾ ಶಿಳ್ಳೆ ಹೊಡೆಯುತ್ತ ಈ ’ದೃಶ್ಯ ಕಾವ್ಯ ’ ಸವಿಯುತ್ತಿದ್ದಾರೆ! ನನ್ನ ಮನಸ್ಸಿನಲ್ಲಿ ಆ ಕ್ಷಣ ನಿಜಕ್ಕೂ ಮೂಡಿದ್ದು ಈ ಜನ ಯಾವ ರೌಡಿಗಳಿಗೂ ಕಡಿಮೆ ತೂಕದವರಲ್ಲವೆಂದೇ!

ಥಳಿಸಿಕೊಳ್ಳುತ್ತಿರುವ ವ್ಯಕ್ತಿ ಪ್ರಜ್ಞೆತಪ್ಪಿದ. ಅವನ ತಲೆ ಜೋತಾಡತೊಡಗಿತು. ಅದ್ಯಾವುದರ ಬಗೆಗೂ ಆ ಜನಕ್ಕೆ ಗಮನವಿದ್ದಂತಿಲ್ಲ. ಮತ್ತಷ್ಟು ಬೈಗುಳ “##***@!&*” ಜೋರಾಗತೊಡಗಿತು. ಆ ಅಸಹ್ಯ ಮತ್ತು ಬರ್ಬರ ಬೈಗುಳಗಳನ್ನು ’ಠಣ್’ ಎನ್ನುವ ಮತ್ತುಷ್ಟು ಭಯಂಕರ ಶಬ್ಧದಿಂದ ಮರೆಸತೊಡಗುವ ಕಾರ್ಯ ಸುದ್ದಿವಾಹಿನಿ ಮಾಡುತ್ತಿದೆ! ಮತ್ತೆ ದೃಶ್ಯಗಳು ಪುನರಾವರ್ತನೆಯಾಗತೊಡಗಿದವು. ಅಂದರೆ, ವಾಹಿನಿಯ ಆಶಯ ಮತ್ತೇನೊ ಇರಬೇಕೆಂದು ಕಾಣುತ್ತಿದೆ. ನಾನು ಟಿವಿ ಶಬ್ಧ ಕಡಿಮೆ ಮಾಡಿದೆ.

ನಿಜಕ್ಕೂ ದಿಗ್ಭ್ರಮೆಯಾದದ್ದು, ವಾಹಿನಿಯಲ್ಲಿ ಸುದ್ದಿ ಓದುವವನ ಅವ್ಯಕ್ತ ತೃಪ್ತ ಮುಖ ನೋಡಿದಾಗ. ಎಲ್ಲ ಸುದ್ದಿಗಳನ್ನೂ ತನ್ನ ನಗುಮುಖದಿಂದಲೇ ಬಿತ್ತರಿಸುವ ಅವನು ಈ ಸುದ್ದಿಗೆ ಮತ್ತಷ್ಟು ಖುಷಿಯ ಮುಖ ಹೊತ್ತು ಬಡಬಡಿಸುತ್ತಿರುವುದು ಕಾಣುತ್ತಿದೆ.

ಯುವಕನನ್ನು ಹೊಡೆಯುವ ಸ್ತ್ರೀ ಶಕ್ತಿಗೆ ಪ್ರಾಣ ತೆಗೆಯುವಂಥ ತಾಕತ್ತು! ಹೊಡೆತಗಳನ್ನು ಕಣ್ಣು ತುಂಬಿಕೊಳ್ಳುತ್ತಿರುವ ಸುತ್ತಲೂ ಸೇರಿದ್ದ ಗಂಡು ಜನಾಂಗದ ನಗೆ. ಕಳಶವಿಟ್ಟಂತೆ, ಸುದ್ದಿಗಾರನಿಂದ ಟಿವಿ ವೀಕ್ಷಕರಿಗೆ ಎಚ್ಚರಿಕೆಯ ಧ್ವನಿ! ’ಜನರೇ.. ಎಚ್ಚರ.. ದಾರಿ ತಪ್ಪಿದರೆ ಜನ ಎಂಥ ಶಿಕ್ಷೆಗೂ ಸಿದ್ಧ ಎಂದು ಈ ಹಳ್ಳಿಯ ಮುಗ್ಧ ಜನ ತೋರಿಸುತ್ತಿದ್ದಾರೆ!’

ಆಶ್ಚರ್ಯವಾಯ್ತು. ಪೊಲೀಸ್ ಇಲಾಖೆ ಅಂತ ಒಂದಿದೆ ಅನ್ನುವುದು ಯಾರಿಗೂ ನೆನಪಾಗದಿರುವುದಕ್ಕೆ. ವಾಹಿನಿಯ ಸುದ್ದಿಗಾರನಂತೂ ನ್ಯಾಯ ಒದಗಿಸುವ ಕುರ್ಚಿಯಲ್ಲಿ ಕುಳಿತು ಮಾತಾಡುತ್ತಿದ್ದಾನೆ. ಬಹುಶ: ಅವನಿಗೆ ಈ ದೇಶದಲ್ಲಿ ನ್ಯಾಯಾಲಯಗಳು ಕೆಲಸ ಮಾಡುತ್ತಿಲ್ಲ ಅಂತ ಖಾತ್ರಿಮಾಡಿಕೊಂಡಿರಬೇಕು!

ಸಾಮಾನ್ಯ ಜನರಿಗೆ ಕಾನೂನಿನ ಕೆಲವು ಆಯಾಮಗಳು ತಿಳಿಯದಿರುವ ಸಾಧ್ಯತೆ ಇದೆ. ನಿಜ. ಹೆಚ್ಚು ಜನ ಸೇರಿದಲ್ಲಿ ಗುಂಪು ಸಂಮೋಹಕ್ಕೆ ಒಳಗಾಗಿಬಿಡುತ್ತಾರೆ. ವಿವೇಚನೆ ಕಳೆದುಕೊಳ್ಳುತ್ತಾರೆ. ಆದರೆ ಆ ಸಣ್ಣ ಹಳ್ಳಿಯ ಅಷ್ಟೂ ಜನ ಅದ್ಯಾವವ ಸಂಮೋಹಕ್ಕೆ ಒಳಗಾಗುತ್ತಾರೆ ಅನ್ನುವುದೇ ಅಚ್ಚರಿ. ಊರಿನ ಒಂದಿಬ್ಬರಾದರೂ ವಿವೇಚನೆಯಿಂದ ಆ ವಿವೇಕರಹಿತ ಹೊಡೆತಗಳನ್ನು ತಡೆಯುವ ಪ್ರಯತ್ನ ಏಕೆ ಮಾಡುವುದಿಲ್ಲ!? ಸರಿಯಾದ ರೀತಿಯಲ್ಲಿ ವಿಚಾರಿಸುವುದಿಲ್ಲವೇಕೆ!?

ಎಲ್ಲವೂ ವ್ಯವಸ್ಥಿತ ರೀತಿಯಲ್ಲಿ ಇರಬೇಕೆಂದು ಬಯಸುವ ನಾವು ವ್ಯವಸ್ಥೆಯೊಂದು ನಮ್ಮ ಸಮಾಜದ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದೆ ಅನ್ನುವುದನ್ನು ಪೂರ್ಣ ಮರೆತಿರುವುದು. ಕ್ರೌರ್ಯದ ವಿರುದ್ಧ ಮಾತನಾಡುವ ನಾವು, ಅರಿವಿಲ್ಲದೇ ಕ್ರೂರಿಗಳಾಗಿ ಬದಲಾಗಿಬಿಟ್ಟಿರುವುದು. ಹಿಂಸೆಯನ್ನು ವಿರೋಧಿಸುತ್ತಲೆ ಹಿಂಸೆಯ ವಿವಿಧ ಪ್ರಕಾರಗಳ ಅಧ್ಯಯನ ಮನಸ್ಸಿನಲ್ಲಿ ಮಾಡತೊಡಗಿರುವುದು. ವಿಕೃತರನ್ನು ದ್ವೇಷಿಸುತ್ತಲೆ ವಿಕೃತವನ್ನು ದೃಶ್ಯದಲ್ಲಿ ನೋಡುವ ಮನಸ್ಸಿನವರಾಗುತ್ತಿರುವುದು.

ಎಲ್ಲಿ ಎಡವುತ್ತಿದ್ದೇವೆ. ಯಾರು ನಮ್ಮನ್ನು ಹಿಂದಿನಿಂದ ದೂಡಿ ಎಡವುವ ತಂತ್ರ ಹೂಡುತ್ತಿದ್ದಾರೆ? ಸ್ವಲ್ಪ ಯೋಚಿಸೋಣ. ಯೋಚಿಸುವ ಕೆಲಸ ನಮ್ಮಿಂದಾಗದು ಅನ್ನಿಸುತ್ತೆ! ಹೋಗಲಿ ಬಿಡಿ, ಮುಂದಿನ ಜನಾಂಗವಾದರೂ ನಮ್ಮಂತಾಗದಿರಲಿ ಅನ್ನುವ ಪ್ರಾರ್ಥನೆ ಮಾಡೋಣ.

“ಆ ದಿನ ನಿಜವಾಗಿ ನಡೆದದ್ದೇನು?” ಅನ್ನುವ ಶೀರ್ಷಿಕೆಯಲ್ಲಿ ಅದೊಂದು ದಿನ ಮತ್ತೊಂದು ಸುದ್ದಿ ವಾಹಿನಿ ಒದರುತ್ತಿತ್ತು.

ಅಂದರೆ ಕಾಮುಕ ಯುವಕನಿಗೆ ಥಳಿತವಾದ ಒಂದು ವಾರದ ನಂತರ ಮತ್ತೊಂದು ಸುದ್ದಿ ವಾಹಿನಿ ರಹಸ್ಯವೊಂದನ್ನು ಭೇದಿಸುವ ಬಗೆಗೆ ತಿಳಿಸತೊಡದೆ!

ಮತ್ತೊಂದು ಊರಿನ ಯುವಕನೊಬ್ಬ ಈ ಘಟನೆಯಾದ ಹಳ್ಳಿಯ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ. ಅವಳೂ ಅವನನ್ನು ಪ್ರೇಮಿಸಿದ್ದಾಳೆ. ಆಗಾಗ ಅವರಿಬ್ಬರೂ ಹಳ್ಳಿಯಲ್ಲಿ ಭೇಟಿ ಮಾಡಿದ್ದಾರೆ. ಆದರೆ ಆ ಹಳ್ಳಿಯಲ್ಲಿ ಹುಡುಗಿಗೇ ಗೊತ್ತಿಲ್ಲದೆ ಮತ್ತೊಬ್ಬ ಗುಪ್ತ ಪ್ರೇಮಿ ಉದ್ಭವಿಸಿದ್ದಾನೆ. ಅವನಿಗೆ ತನ್ನ ಪ್ರೇಯಸಿಗೆ (!) ಮತ್ತೊಬ್ಬ ನಿಜ ಪ್ರೇಮಿ ಇರುವ ವಿಷಯ ಗೊತ್ತಾಗಿಬಿಟ್ಟಿದೆ. ಈ ಹಳ್ಳಿಯ ಪ್ರೇಮಿ ಚಡಪಡಿಸಿದ್ದಾನೆ, ಅಸೂಯೆಯಲ್ಲಿ ಬೇಯುತ್ತಿದ್ದಾನೆ ಮತ್ತು ಕೋಪಗೊಂಡಿದ್ದಾನೆ. ತಾನೂ ಅವಳನ್ನು ಪ್ರೇಮಿಸುತ್ತಿದ್ದು, ತನಗೆ ಅನ್ಯಾಯ ಮಾಡಬಾರದೆಂದು ಅವಳ ಬಳಿ ಬಡಬಡಿಸಿದ್ದಾನೆ. ಹುಡುಗಿ ಅವನ ಹೊಸ ಪ್ರೇಮ ನಿವೇದನೆ ತಳ್ಳಿ ಹಾಕಿದ್ದಾಳೆ.

ಆಕಾಶ ಬಿದ್ದಂತಾದ ಹುಡುಗ ಭಗ್ನ ಹೃದಯದ ’ದೇವದಾಸ’ನಂತೆ ಆಗದೆ ಖಳನಟನಾಗಿಬಿಟ್ಟಿದ್ದಾನೆ! ಅವಳಿಗೆ ಎಚ್ಚರಿಕೆ, ಧಮಕಿ ಹಾಕಿ ಕೆಲ ಸಮಯದ ಅವಧಿ ಕೊಟ್ಟು ಗಮನಿಸಿದ್ದಾನೆ. ಆದರೂ ಹುಡುಗಿ ಇವನಿಗೆ ಸೊಪ್ಪು ಹಾಕಿಲ್ಲ.

ವೈಷಮ್ಯ ಬೆಳೆಸಿಕೊಂಡ ಅವನು ತನ್ನ ಕೆಲವು ಗೆಳೆಯರನ್ನು ಗುಂಪು ಕೂಡಿಸಿ, ಆ ಪರ ಊರಿನ ಯುವಕ ’ಅತ್ಯಾಚಾರಿ’ ಎಂದು ಬಿಂಬಿಸಿದ್ದಾನೆ. ಹಳ್ಳಿಯ ಕೆಲವು ಹೆಂಗಸರನ್ನು ನಂಬಿಸಿಯೂಬಿಟ್ಟಿದ್ದಾನೆ. ಸಮಯಕ್ಕೆ ಹೊಂಚು ಹಾಕಿ, ಆ ನಿಜ ಪ್ರೇಮಿಯನ್ನು ಕಟ್ಟಿಹಾಕಿಸಿ ಹೆಣ್ಣುಮಕ್ಕಳಿಂದಲೇ ಹೊಡೆಸಿರುವ ಅತಿ ಚಾಣಾಕ್ಷ. ಇಷ್ಟೆಲ್ಲ ನಡೆಯುವಾಗ ಆ ಹುಡುಗಿಗೆ ಯಾವ ಸುದ್ದಿಯೂ ತಿಳಿಯದಂತೆ ನೋಡಿಕೊಂಡಿದ್ದಾನೆ!

ಧರ್ಮದೇಟು ತಿಂದು, ಪ್ರಜ್ನೆ ತಪ್ಪಿ ಬಿದ್ದಿದ್ದ ಆ ’ಅತ್ಯಾಚಾರಿ’ ಯುವಕನನ್ನು ಪೊಲೀಸರು ಬಂದು ಎಳೆದುಕೊಂಡು ಹೋಗಿದ್ದಾರೆ. ಅವನ ಚಿಂತಾಜನಕ ಸ್ಥಿತಿ ನೋಡಿ, ಠಾಣೆಯಲ್ಲಿ ಪ್ರಾಣ ಹೋದರೆ ತಮ್ಮ ತಲೆಗೆ ಬರಬಹುದೆನ್ನುವ ಭಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿದ್ದಾರೆ. ಚೇತರಿಸಿಕೊಂಡ ಹುಡುಗ ತನ್ನ ತಾಯಿತಂದೆಯರನ್ನು ಸೇರಿದ್ದು, ಇದೀಗ ಯಾರ ಮೇಲೆ ದೂರು ಸಲ್ಲಿಸುವುದೆಂಬ ಚಿಂತೆ ಕಾಡಿದೆ.

ಹಳ್ಳಿಯ ಗುಪ್ತ ಪ್ರೇಮಿ ಸದ್ಯಕ್ಕೆ ತಲೆಮರೆಸಿಕೊಂಡಿರುವುದು,  ಪೊಲೀಸರು ಅವನ  ಬೇಟೆಯಾಡುತ್ತಿರುವುದು ಸುದ್ದಿ ವಾಹಿನಿ ಬಿತ್ತರಿಸುತ್ತಿದೆ!  ಹಳ್ಳಿಯ ಸ್ತ್ರೀಶಕ್ತಿಯ ಕೊಡುಗೆಯನ್ನು ಎಲ್ಲರೂ ಮರೆತ ನಾಟಕವಾಡಿದ್ದಾರೆ. ಹಳ್ಳಿಯಲ್ಲಿ ಇತ್ತೀಚೆಗೆ ಕುತೂಹಲದ ವಿಷಯಗಳು ಕಡಿಮೆಯಾಗಿದ್ದರಿಂದ ಜನ ಬೇಸರ ಮತ್ತು ಉತ್ಸಾಹ ಹೀನತೆಯಲ್ಲಿದ್ದಾರೆ!

***

 

Advertisements