ಬೆಳಕೆಂದರೇನು

light

ಪುಟ್ಟ ಮಗು ತೊಟ್ಟಿಲಲ್ಲಿ

ಬೊಚ್ಚುಬಾಯಿ ಬಿಚ್ಚಿ

ಎಳೆಯ ಕೈ ತಟ್ಟಿ ನಕ್ಕಿತು

ಬೆಳಕು ಬೆಳೆದು ಹರಡಿತು

 

ಚಿಕ್ಕ ಇರುವೆ ಸಾಲಿನಲ್ಲಿ

ಸಣ್ಣ ಅಚ್ಚು ಸಿಹಿಯ ಕಚ್ಚಿ

ಗೂಡಿನೆಡೆಗೆ ನಡೆಯಿತು

ಬೆಳಕು ಶಿಸ್ತು ಎನಿಸಿತು

 

ಕಾಗೆ ಮರದ ಅಂಚಿನಿಂದ

ಕಾಳ ಕಂಡು ಕೂಗಿತು

ಬಳಗ ಸೇರೆ ಹಂಚಿತು

ಬೆಳಕು ಒಲವು ಆಯಿತು

 

ಗೋವು ತನ್ನ ಮಂದೆಯಲ್ಲಿ

ಕರುಳ ಬಳ್ಳಿಗೆಳಸಿ ಸಾಗಿ

ಹಾಲ ಕುಡಿಸಿ ಕುಣಿಯಿತು

ಬೆಳಕು ಹಸಿವ ನುಂಗಿತು

 

ಬೆವರ ಹನಿಸಿ ರೈತ ದುಡಿದು

ಹಸಿರ ಟಿಸಿಲೊಡೆಸಿ ದಣಿದು

ಮುಗುಳಾಗಿ ಮಲಗಿದಲ್ಲಿ

ಬೆಳಕು ನೆರಳು ಕಲೆಯಿತು

 

ಓದು ಕಲಿವ ಚಿಣ್ಣರೆಲ್ಲ

ಗಮನವಿರಿಸಿ ಕವಿತೆ ಕೇಳಿ

ಮಧುರ ದನಿಯಲ್ಲಿ ಹಾಡೆ

ಬೆಳಕು ರಾಗ ಕೂಡಿತು

 

(ಚಿತ್ರ ಕೃಪೆ: ಅಂತರ್ಜಾಲ)
ಕನ್ನಡ ಪ್ರತಿಲಿಪಿಯಲ್ಲಿ ಪ್ರಕಟಿತ: https://kannada.pratilipi.com/pratilipi/4934053412208640

ಅಮೃತದೊಳಗಣ ಕೆನೆ

elephant

ಕನಕ ಛಾಯೆಯ ಕೆನೆ ಕಾಣುವಂತೆ 

ತರುತ್ತಿದ್ದಳು ಕಾಫ಼ಿ ತುರುವಾಗಿ ತಾಯಿ

ಬೆಳ್ಳಂಬೆಳಗ್ಗೆ ’ಕಂದ, ಏಳು ಎದ್ದೇಳು’

ಸುಪ್ರಭಾತದ ಮುಗುಳೆ ಮುತ್ತುಗಳು

 

ಮೂಗನರಳಿಸುತ್ತಿದ್ದ ಕಾಫ಼ಿಯ ಘಮ

ಕಣ್ತೆರೆಯದೆಯೆ ಅಮ್ಮನ ಕೆನೆ ಪ್ರೇಮ

ಕಾಣುತ್ತಿತ್ತು  ಕಾಫ಼ಿಯಲ್ಲದರ ಛಾಯೆ

ಪ್ರತಿ ಬೆಳಗಿನಲ್ಲದೇ ಮಮತೆ ಮಾಯೆ

 

ನೋಟದೊಳಗೆ ಕೆನೆಗಟ್ಟಿದ ಅಕ್ಕರೆ

ಹದವಾಗಿ ಹಾಲಿಗೆ ಬೆರೆತಂತೆ ಸಕ್ಕರೆ

ಹೀರಿ ಆಸ್ವಾದಿಸುತ್ತಾ ನಾ ನಕ್ಕರೆ

ಅದೆ ಅವಳಂದಿನ ಶುಭಾರಂಭ ಪೀಠಿಕೆ

 

ಅಷ್ಟಲಕ್ಷ್ಮಿಯರ ಇಷ್ಟದ ರಾಗಗಳಲ್ಲಿ

ಹಾಡುತ್ತಿದ್ದ ಅಮ್ಮ ಭಕ್ತಿಯ ಸಾಕಾರ  

ಒಲಿಯದ ಲಕ್ಷ್ಮಿಗೆ ಅರ್ಚನೆಯೆ ಮೊರೆ

ಅವಳ ಮುಗ್ಧತೆ ನನ್ನ ಮನದೊಳಗೆ ಸೆರೆ!

 

ಅವಳದೆಲ್ಲವು ಸೋತ ಲೆಕ್ಕಗಳ ಸಾಲೆ

ನಾ ಹರಿಸಿದ ಉಡಾಫ಼ೆ ತಂಟೆ ತರಲೆ

ಸೈರಿಸಿದಳೆಲ್ಲ ಹುಸಿ ಮುನಿಸಿನಿಂದ

ಘಾಸಿಗಳ ಮರೆತಳು ನಗೆಯ ಮುಖದಿಂದ

 

ಕ್ಷೀಣ ದೇಹ ಹೊತ್ತೂ, ಹೊತ್ತು ಹೊತ್ತಿಗೆ

ಪರಮಾನ್ನ  ಉಸಿರಿರುವವರೆಗೆ ಉಣಿಸಿ

ತನ್ನ ಕಾಪಿಡದೆ ಕೂಸೆಂದು ಕಾಯ್ದವಳು

ಬೇಗೆಯಲ್ಲೂ ನನಗೆ ತಂಪನೆರೆದವಳು

 

ನೀಲ ವಿಶಾಲಾಕಾಶ ಶುಭ್ರ ಮನದವಳು

ನೀಲಾಂಜಲದ ಶಾಂತ ಬೆಳಕಿನಂಥವಳು

ದಿವ್ಯ ಪ್ರೇಮ ತಿಳಿಯಲ್ಲಿ ತೇಲಿದ ಮಮತೆ

ಅಮೃತದೊಳಗಣ ಕೆನೆ ಅಂತೆ ಫ಼ಲಿತ ತೆನೆ 

 

ಲಕ್ಷ ಯಕ್ಷ ಪ್ರಶ್ನೆಗಳಿವೆ  ಅಮ್ಮಾ….

 

ಕಾಫ಼ಿ ಪರಿಮಳದೊಂದಿಗೆ ಪ್ರತ್ಯಕ್ಷಳಾಗೆಯೇನು?

ಉತ್ತರೋತ್ತರದಲ್ಲೂ ನಿನಗೆ ಕಾಯಲೇನು ?

ನೀ ಕೊಟ್ಟ ಹುಟ್ಟು ದ್ವೀಪ ದ್ವೀಪಾಂತರ

ಆಗುವುದ ತಡೆಯಲೊಮ್ಮೆ ಬಾರೆಯೇನು ?

mother cat

(ಚಿತ್ರ:ಅಂತರ್ಜಾಲ)
ಕನ್ನಡ ಪ್ರತಿಲಿಪಿಯಲ್ಲಿ ಪ್ರಕಟ: https://kannada.pratilipi.com/read?id=6121629317857280

ಸಾಗರನ ಸಂಜೆ ಗಾನ

sea

ನಸುಕಿನಲ್ಲಿ ಕರು ಕೊರಳಾಡಿಸಿ

ಗಂಟೆ ಘಲರವಿಸುವ ತನನ

ನವಜಾತ ಮಗು ಮುದ್ದು ನಗೆ ಹರಿಸಿ

ತಾಯಿ ಎದೆಯೊಳಗರಳಿಸಿದ ಚೇತನ

ನನಗಿಲ್ಲೇ ತಾವು ಬಾ ಸಖಾ ಬಾ

ಎಂದು ಎದೆಗೊರಗಿ ನಲ್ಲೆ ಪಿಸುಗುಡುವ

ಪಲ್ಲವದಂತೆ ಸಾಗರನ ಸಂಜೆ ಗಾನ

ಕೆಂಪಡರಿದ ರವಿ ಸ್ನಾನಿಸಿ

ವಿರಮಿಸುವ ಸಮಯ ಸಂಕ್ರಮಣ

 

ಕನ್ನೆಯ ಕನಸು ಕೊನರಿಸುವಂಥ ಭಾವ

ಏರಿಳಿಸುವ ಅಲೆಗಳ ಸ್ಪಂದ

ನಾಭೀ ಮೂಲದೋಂಕಾರದ ಉದಕ

ದಣಿವಿಲ್ಲದ್ದರ ಅಪರಾವತಾರಕ

ಶಬ್ಧದೊಡೆಯನ ಮೌನದತ್ತಲ ರಾಗ

ಪಸರಿಸುವ ಕತ್ತಲೆಯಲ್ಲಿ

’ಅಂಬುಧಿಗೆ ಚಂದ್ರೋದಯದ ಪುಳಕ!’

 

ಅನಾದಿಯಿಂದದೇ ಅನವರತದ

ಗಾರುಡೀ ಗಾನ

ಒಡಲೊಳಗೆ ಪೊರೆಯುತ್ತಲೆ ಇದೆ

ಶತಕೋಟಿ ಪ್ರಾಣ

ಸಂಚಯಿಸುತ್ತಿದೆ ತೆನೆ ತೆನೆಯ

ಮೋಡಕ್ಕೆ ಅಮೃತದ ಪಾನ

 

ಅಪ್ಪಳಿಸಿ ಬೊಬ್ಬಿಟ್ಟರೂ ಅದಕ್ಕದೇ ಪರಿಧಿ

ಇರುವಲ್ಲೇ ಯಾನ ಹೊರಳುತ್ತಲೇ ಧ್ಯಾನ

ಮತ್ತೆ ಮರುಕಳಿಸುತ್ತಲಿದೆ ಅರಸುವ

ತೆರೆ………

………….. ತೆರೆ

ಒಳಗದೇ ಮೊರೆತದೊರತೆ

ನೀರ..ವತೆ ಮತ್ತದೇ ಮಥನ

 

(Pubilished in ‘Kannada.pratilipi : https://kannada.pratilipi.com/read?id=4541115310014464)

(ಚಿತ್ರ: ಅಂತರ್ಜಾಲ ಕೃಪೆ)

ತಿಳಿ

bird

ಓದು
ಬಿಡದೆ ಓದು
ಅರಿ
ಬೆರೆತು ಅರಿ
ತಿಳಿ
ಹೆಚ್ಚು ತಿಳಿ
ತಿಳಿಯುತ್ತಾ
ಒಳ ಕೊಳೆ ಕೊಚ್ಚೆ ಕೆಸರು
ದು:ಖ ದುಮ್ಮಾನ ವ್ಯಸನ


ಮುಟ್ಟಿ ಉಳಿವ ತಿಳಿ
ಸ್ವಚ್ಛ
ಜಲದಂತೆ
ಜ್ಞಾನ
ತಿಳಿ

(ಚಿತ್ರ:ಅಂತರ್ಜಾಲ ಕೃಪೆ)

ಪ್ರಿಯ ದುಗ್ಗಪ್ಪನಿಗೆ

bbmp

ಕನ್ನಡ ಪ್ರತಿಲಿಪಿ ಇ-ಪತ್ರಿಕೆಯಲ್ಲಿ ಒಂದು ಪತ್ರ ಲೇಖನ

(ಸಂಕ್ಷಿಪ್ತದಲ್ಲಿ: ದುಗ್ಗಪ್ಪ ಈ ಹಿಂದೆ ಬಡಾವಣೆಗಳಲ್ಲಿ ಕಸ ಸಂಗ್ರಹ ಮಾಡುವ ಕಾಯಕ ಮಾಡುತ್ತಿದ್ದವನು. ಅವನ ಕೆಲಸದ ಬಗೆಗೆ, ಅವನ ಈಗಿನ ಸ್ಥಿತಿಗತಿಗಳ ಬಗೆಗೆ ಮತ್ತು ಬಡಾವಣೆಗೆ ಆಹ್ವಾನಿಸುತ್ತಿರುವ ಉದ್ದೇಶಗಳು ಪತ್ರ ಸಾದರಿಸುತ್ತದೆ.)

 

ಪ್ರಿಯ ದುಗ್ಗಪ್ಪ,

ನಮಸ್ಕಾರಗಳು.

ನಾನು  ಸೂರ್ಯ ಬಡಾವಣೆಯ  ಹತ್ತನೇ ಮುಖ್ಯ ರಸ್ತೆಯ,   ಆರನೆ ಮನೆಯ ನಿವಾಸಿ.        ಕಳೆದ ವರ್ಷದವರೆಗೂ ನನ್ನೊಂದಿಗೆ ಸ್ನೇಹವಿಟ್ಟುಕೊಂಡು, ಅಭಿಮಾನದಿಂದ ಮಾತಾಡುತ್ತಿದ್ದೆ. ನನ್ನ ಕಷ್ಟ ಸುಖಗಳ ಬಗೆಗೆ ವಿಚಾರಿಸುತ್ತಿದ್ದೆ. ನಾನು ಮನೆಯಲ್ಲಿ ಒಂಟಿಯಾಗಿ ಬಾಳು ನಡೆಸುವುದು ತಿಳಿದು ವ್ಯಥೆ ಪಡುತ್ತಿದ್ದೆ. ನೆನಪಾಯಿತೆ?

ನೀನು ಅಭಿಮಾನದಿಂದ ಕರೆಯುತ್ತಿದ್ದ ’ಆರ್ನೆ ಮನೆ ರಾಯ್ರು’ ನಾನು! ಈಗ ತಿಳಿಯಿತೆ ?

ತ್ಯಾಜ್ಯವಸ್ತು ಸಂಗ್ರಹಿಸಲು ವ್ಯಾನುಗಳು ಬರತೊಡಗಿದ ಮೇಲೆ ನೀನು ನಮ್ಮಿಂದ ದೂರವಾದೆ. ಸುಮಾರು ಒಂದು ವರ್ಷದಿಂದ ನಿನ್ನನ್ನು ನೋಡಲಾಗಿಲ್ಲ. ಪಾಲಿಕೆಯವರು ಬೇರೊಂದು ಕಾರ್ಯ ನಿರ್ವಹಿಸಲು ನಿನ್ನನ್ನು ದೂರಕ್ಕೆ ವರ್ಗಾಯಿಸಿದ್ದು ತಿಳಿಯಿತು.    ನೀನು ಅಲ್ಲಿ ಕೂಡ ಬಹಳ ಮುತುವರ್ಜಿಯಿಂದ ಕಾರ್ಯ ನಿರ್ವಹಿಸುತ್ತಿದ್ದೀಯ ಎಂದು ಸುದ್ದಿ.

ಕೆಲವು ವರ್ಷಗಳು ನೀನು ನಮ್ಮ ಬಡಾವಣೆಯ ನೈರ್ಮಲ್ಯದ ಕಿಂಕರನೇ ಆಗಿದ್ದೆ.     ಕಸ ವಿಲೇವಾರಿಗೆ ತಳ್ಳುಗಾಡಿಯಲ್ಲಿ ನೀನು ಬರುತ್ತಿದ್ದೆ. ಬೆಳಿಗ್ಗೆ ೭ರ ನಂತರ ಪ್ರತಿ ಮನೆಯ ಮುಂದೆ ನಿಂತು, ತ್ಯಾಜ್ಯಗಳನ್ನು ಸಂಗ್ರಿಹಿಸುತ್ತಿದ್ದ ಕಾರ್ಯ ನಿರ್ವಹಣೆ ನಮ್ಮೆಲ್ಲರ ಮೆಚ್ಚುಗೆ ಪಡೆದಿತ್ತು.

ನಾನು ಮೊದಲು ನಿನ್ನ ಕಾರ್ಯ ವೈಖರಿಯನ್ನು ಗಮನಿಸಿರಲಿಲ್ಲ. ಕಸ ಸಂಗ್ರಹ ಮಾಡುವ ಕೆಲಸದಲ್ಲಿ ಅಂಥ ವಿಶೇಷತೆ ಏನಿದೆ ಎನ್ನುವ   ಅಸಡ್ಡೆ ನನ್ನ ಮನಸ್ಸಿನಲ್ಲಿದ್ದದ್ದು ಸುಳ್ಳಲ್ಲ.   ಅತಿ ಸಾಮಾನ್ಯ ಕೆಲಸಗಳಲ್ಲಿ ಕಸ ಸಂಗ್ರಹವೂ ಒಂದು ಅನ್ನುವ ಧೋರಣೆ ನನ್ನಲ್ಲಿದ್ದದ್ದು ನಿಜ. ಹೆಚ್ಚು ಓದದ ನೀನು ಈ ಕೆಲಸದಲ್ಲಿ ಇದ್ದೀಯ ಅನ್ನುವ ಉಡಾಫ಼ೆಯ ಯೋಚನೆಯೂ ನನ್ನಲ್ಲಿ ಇತ್ತು.

ಇಂಥ ಎಳಸು ಯೋಚನೆಗಳಿಂದ ನಾನು ಹೊರಬಂದದ್ದು ಆ ದಿನ ನಿನ್ನನ್ನು ಬಹಳ ಕುತೂಹಲದಿಂದ ನಾನು ಗಮನಿಸಿದ್ದರಿಂದ. ಒಮ್ಮೆ ನಮ್ಮ ರಸ್ತೆಯಲ್ಲಿ ಬರುವಾಗ ನೀನು ಮನೆಯೊಂದರ ಮುಂದೆ ಕಸ ತೆಗೆದುಕೊಳ್ಳುತ್ತ, ಆ ಮನೆಯವರಿಗೆ ಕಸದ ವಿಂಗಡಣೆಯ ವಿಷಯ ವಿವರಿಸುತ್ತಿದ್ದ ದೃಶ್ಯ ಕಣ್ಣಿಗೆ ಬಿತ್ತು. ಸಮಾಧಾನ ಚಿತ್ತದಿಂದ,  ನಗುಮೊಗದಿಂದ ಕಸ ವಿಂಗಡಣೆಯ ರೀತಿ,   ಅದರಿಂದ ಆಗುವ ಉಪಯೋಗಗಳನ್ನು ತಿಳಿಸುತ್ತಿದ್ದೆ. ಹೀಗೆ ನೀನು ಎಲ್ಲ ಮನೆಯವರಿಗೆ ಮನದಟ್ಟಾಗುವಂತೆ, ಬೇಸರವಿಲ್ಲದೆ ವಿವರಿಸುತ್ತಿದ್ದೀಯ ಅನ್ನುವುದ ನನಗೆ ಆ ನಂತರದಲ್ಲಿ ತಿಳಿಯಿತು.

ನನಗೆ ಇವತ್ತಿಗೂ ಆಶ್ಚರ್ಯ. ನಿನ್ನ ಕಾರ್ಯ ತತ್ಪರತೆ, ಉತ್ಸಾಹ ಮತ್ತು ನಿಷ್ಠೆ ಕಂಡು. ಅಸಡ್ಡೆ, ಕೋಪ ತಾಪಗಳು, ಅವಸರ ಇತ್ಯಾದಿ ನಾನೆಂದಿಗೂ ನಿನ್ನ ಕೆಲಸದಲ್ಲಿ ನೋಡಲೇ ಇಲ್ಲ.   ನಿಧಾನವಾಗಿ ನಮ್ಮ ಬಡಾವಣೆಯ ಎಲ್ಲರ ಸ್ನೇಹ ಸಂಪಾದಿಸಿ, ದುಗ್ಗಪ್ಪ ಅಂದರೆ ಸ್ನೇಹ ಜೀವಿ ಅನ್ನಿಸಿಕೊಂಡೆ.

ತ್ಯಾಜ್ಯವಸ್ತುಗಳನ್ನು ಪ್ರತಿ ಮನೆಯವರು ಶಿಸ್ತಿನಲ್ಲಿ ವಿಲೇವಾರಿ ಮಾಡುತ್ತಿರುವುದಕ್ಕೆ ಮುಖ್ಯ ಕಾರಣ ನೀನು ನಮ್ಮ ಬಡಾವಣೆಯವರಲ್ಲಿ ನಿಧಾನಕ್ಕೆ ಮಾಡಿದ ಮನ ಪರಿವರ್ತನೆ.

ಯಾವ ಕೆಲಸವೂ ನಿಕೃಷ್ಟವಲ್ಲ ಅನ್ನುವುದನ್ನು ನಿನ್ನ ಕೆಲಸದ ರೀತಿಯಿಂದ ನಮಗೆ ತೋರಿಸಿದೆ. ಪ್ರತಿ ಮನೆಯವರಲ್ಲೂ ತಿಳಿವಳಿಕೆಯನ್ನು ತಂದೆ. ಛಲ ಬಿಡದೆ, ಕಾರ್ಯ ನಿರ್ವಹಿಸಿ, ಒಬ್ಬ ಸಾಮಾನ್ಯನೂ ತನ್ನ ಕೆಲಸದಲ್ಲಿ ನಿಷ್ಠೆ ತೋರಿದರೆ ಎಲ್ಲರ ಮನಸ್ಸು ಗೆಲ್ಲಬಹುದು ಅನ್ನುವುದಕ್ಕೆ ನೀನೊಬ್ಬ ಸಾಕ್ಷಿ.

ಪಾಲಿಕೆಯವರು ಕೊಟ್ಟಿದ್ದ ದಿರಿಸು, ಕೈಗವಸು, ಮುಖಕ್ಕೆ ಮಾಸ್ಕ್ ಮತ್ತು ಮೇಲೊಂದು ಟೋಪ್ಪಿಗೆಯನ್ನು ಧರಿಸುತ್ತಿದ್ದೆ.  ಸ್ವಚ್ಚತೆಗೆ, ಆರೋಗ್ಯಕ್ಕೆ ಕೊಡುತ್ತಿದ್ದ ಪ್ರಾಮುಖ್ಯತೆ ಇದರಿಂದ ಗೊತ್ತಾಗುತ್ತಿತ್ತು.   ಸಮಯ ಪರಿಪಾಲನೆಯನ್ನು ನಿನ್ನಿಂದ ಕಲಿಯಬೇಕು. ಮಾಡುವ ಕೆಲಸದಲ್ಲಿ ಕೀಳರಿಮೆಗೆ ಅವಕಾಶವಿಲ್ಲ ಅನ್ನುವ ಮನಸ್ಸು ನಿನ್ನಲ್ಲಿದೆ.

ನಮ್ಮ ಬಡಾವಣೆಯಲ್ಲಿ ಮೂರು ರೀತಿಯ ಕಸ ವಿಂಗಡಣೆ ಸರಿಯಾಗಿ ನಡೆಯುತ್ತಿದ್ದರೆ, ಅದರ ಯಶಸ್ಸು ನಿನಗೆ.    ದೇಶದ ಪ್ರಧಾನಿ ಕೈಗೊಂಡಿರುವ ಸ್ವಚ್ಛತಾ ಆಂದೋಳನವನ್ನು  ಬಹಳ  ವರ್ಷಗಳ  ಮೊದಲೆ ಪ್ರಾರಂಭ ದುಗ್ಗಪ್ಪನಿಂದ ನಡೆಯುತ್ತಿತ್ತು ಅಂದರೆ ನೀನು ನಂಬಲೇ ಬೇಕು.

ನಮ್ಮ ಬಡಾವಣೆಯ ಮಕ್ಕಳು ಸ್ವಚ್ಛತೆಯ ಬಗೆಗೆ ಗಮನ ಕೊಡದಿದ್ದರೆ,   ದುಗ್ಗಪ್ಪ ನಿನ್ನ ನೋಡಿದರೆ ಬೆಜಾರು ಮಾಡಿಕೊಳ್ಳುತ್ತಾನೆ ಎನ್ನುತ್ತೇವೆ. ಆಗೆಲ್ಲ ಆ ಮಕ್ಕಳು ಹೇಳಿದಂತೆ ಕೇಳುತ್ತಾರೆ. ಸ್ವಚ್ಚತೆ ಬಗೆಗೆ ಸ್ವಲ್ಪವಾದರೂ ಗಮನ ಹರಿಸುತ್ತಾರೆ. ಅಷ್ಟು ದೊಡ್ಡ ಸಾಧನೆ ನಿನ್ನದು.

ನಾನು ಬಹಳ ಸಲ ನಿನ್ನೊಂದಿಗೆ ಸುಖ ದು:ಖ ಮಾತಾಡುತ್ತಿದ್ದೆ. ನಿನ್ನ ವಯಸ್ಸು ಐವತ್ತು ದಾಟಿದೆ. ಮನೆಯಲ್ಲಿ ಮಡದಿ, ಇಬ್ಬರು ಮಕ್ಕಳು. ದೊಡ್ಡವನು ಮಗ ಅನ್ನುವ ನೆನಪಿದೆ. ಅವನೀಗ ಕಾಲೇಜು ಮುಗಿಸಿರಬಹುದು. ಅವನ ಓದಿಗೆ ನೀನು ದೊಡ್ಡ ಆಸರೆಯಾಗಿದ್ದೆ. ಅವನು ಒಳ್ಳೆಯ ಕೆಲಸವೊಂದನ್ನು ಖಂಡಿತ ಪಡೆಯಲಿ ಎಂದು ಹಾರೈಸುತ್ತೇನೆ.

ಎರಡನೆಯವಳು ಮಗಳು.   ಡಿಗ್ರಿಯಾದ ಮೇಲೆ ಕೆಲಸಕ್ಕೆ ಕಳುಹಿಸಿ ಅವಳು ಸ್ವಾವಲಂಬಿಯಾಗಿ  ಜೀವನ ನಡೆಸಬೇಕೆಂದು ನಿನ್ನ ದೊಡ್ಡ ಬಯಕೆ. ಹಾಗೆಯೆ ಅವಳ ಮದುವೆ ಒಳ್ಳೆಯ ರೀತಿ ಮಾಡುವ ಆಸೆ. ಮಗಳ ಜೀವನ ಭವ್ಯವಾಗಿರಬೇಕೆಂದು ಕನಸು ಕಾಣುತ್ತಿದ್ದ ಮನಸ್ಸು ನನ್ನ ಅರಿವಿಗೆ ಬರುತ್ತಿತ್ತು. ಶುಭವಾಗಲಿ.

ನನಗೀಗಲೂ ಆಶ್ಚರ್ಯದ ವಿಷಯವೊಂದಿದೆ.     ಪಾಲಿಕೆಯವರು  ನಿಮಗೆಲ್ಲ  ಒಮ್ಮೆ  ಮೂರು ತಿಂಗಳ ಸಂಬಳ ಕೊಟ್ಟಿರಲಿಲ್ಲ. ಆ ಸುದ್ದಿ ನಮಗೆಲ್ಲ ತಿಳಿದಿತ್ತು. ನಾವೆಲ್ಲ ಅಂದುಕೊಂಡಿದ್ದೆವು, ಆ ಸಮಯದಲ್ಲಿ, ಖಂಡಿತಕ್ಕೂ ನಮ್ಮ ಬಡಾವಣೆಯ ಜನರಲ್ಲಿ, ಸಾಲ ತೆಗೆದುಕೊಳ್ಳುತ್ತೀಯ ಎಂದು! ಆದರೆ, ಹಾಗಾಗಲಿಲ್ಲ. ನಮ್ಮ ನಿರೀಕ್ಷೆ ಹುಸಿಯಾಗಿತ್ತು. ಯಾರೊಂದಿಗೂ ಸಾಲ ಮಾಡದೆ ಆ ಮೂರು ತಿಂಗಳು ಕಳೆದ ಬಗೆ. ಒಮ್ಮೆ ಕೇಳಿದ್ದೆ, “ದುಗ್ಗಪ್ಪ… ಹಣದು ಮುಗ್ಗಟ್ಟು.. ಹೇಗೆ ಸುಧಾರಿಸಿದೆ?”

ಅದಕ್ಕೆ ನಿನ್ನ ಉತ್ತರ, “ನನ್ನ ಮಗ ಸಂಜೆ ಮಂಡಿಗೆ ಹೋಗಿ, ಅಂಗಡಿ ಕೆಲಸ ಮಾಡಿ ದಿನಾ ನೂರು ರೂಪಾಯಿ, ಹೆಂಡತಿ ಬೇರೆ ಮನೆಗಳಲ್ಲಿ ಸ್ವಲ್ಪ ಕೆಲಸ ಮಾಡಿ ಅಲ್ಪ ಸ್ವಲ್ಪ ಸಂಪಾದ್ನೆ ಮಾಡ್ತಾ ಇದಾಳೆ. ಮನೆ ಖರ್ಚು ದಿನಕ್ಕೆ ನೂರು ರೂಪಾಯಿ ಮೀರದ ಹಾಗೆ ಮಾಡ್ತಾ ಇದೀವಿ. ಹಾಗಾಗಿ ಏನೋ ದಿನ ಸುಧಾರಿಸ್ತಾ ಇದೀವಿ. ”

ಎಂಥ ಆದರ್ಶದ ಬಾಳುವೆ!

ನೀನು ನಿನ್ನ ಕೆಲಸದ ಬಗೆಗೆ ಹೇಳುತ್ತಿದ್ದೆ. “ನಾನು ಮಾಡೊ ಕೆಲ್ಸಕ್ಕೆ ಮೊದಲು ನಾನೆ ಬೆಲೆ ಕೊಡಬೇಕು. ಇದೆಂಥ ಕೆಲ್ಸ. ಬೆಲೆ ಇಲ್ಲದ್ದು ಅಂದುಕೊ ಬಾರದು. ಕೆಲ್ಸದ ಮೇಲೆ ಅಭಿಮಾನಾನು ಇರಬೇಕು.

ಕೆಲ್ಸ ಮಾಡೋವಾಗ ಇದು ಕಷ್ಟದ್ದು, ಇದು ಸುಲಭದ್ದು ಅಂತ ವಿಂಗಡಣೆ ಮಾಡಬಾರದು. ವಿಂಗಡಣೆ ಮಾಡೋದಿದ್ದರೆ ಕಸದಲ್ಲಿ ಮಾಡಬೇಕು. ಹಸಿ ಕಸ, ಒಣ ಕಸ ಅಂತ!”

ಹೀಗೆ ಹೇಳಿ ನಗುತ್ತಿದ್ದೆ. ನನ್ನನ್ನೂ ನಗಿಸುತ್ತಿದ್ದೆ. ಈ ಒಂದು ವರ್ಷದಿಂದ ಇವೆಲ್ಲ ನೀನು ದೂರವಾಗಿರುವ ಕಾರಣ ಇಲ್ಲವಾಗಿದೆ.

ಸಾಧ್ಯವಾದರೆ, ಆಗಾಗ ನಮ್ಮ ಬಡಾವಣೆಗೆ, ನಮ್ಮ ಮನೆಗೆ ದಯವಿಟ್ಟು ಬಾ. ನಾನು ತಿಳಿದುಕೊಳ್ಳುವ ವಿಷಯ ನಿನ್ನ ಅನುಭವದಲ್ಲಿ ಬಹಳಷ್ಟಿದೆ.

ನಿನಗೊಂದು ವಿಷಯ ತಿಳಿಸಬೇಕಿದೆ. ಈ ವರ್ಷ ನಮ್ಮ ಬಡಾವಣೆಗೆ ನಗರದ ಅತ್ಯಂತ ಸ್ವಚ್ಚ ಬಡಾವಣೆ ಅನ್ನುವ ಪ್ರಶಸ್ತಿ ಬಂದಿದೆ.   ಮುಂದಿನ ಭಾನುವಾರ ನಾವು ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು, ನಗರದ ಮೇಯರ್ ನಮ್ಮ ಬಡಾವಣೆಗೆ ಬಂದು ಆ ಪ್ರಶಸ್ತಿ ಕೊಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ನೀನು ಖಂಡಿತಾ ಬರಬೇಕೆಂದು ಆಹ್ವಾನಿಸುತ್ತಿದ್ದೇನೆ. ನನ್ನ ಆಹ್ವಾನ ಬಡಾವಣೆಯ ಸಂಘದ ಪರವಾಗಿ.

ಬಡಾವಣೆಯ ಅಭಿವೃದ್ಧಿಗಾಗಿ ಅತಿ ಉಪಯುಕ್ತ ಕಾರ್ಯ ನಿರ್ವಹಿಸಿದವರ ಕೆಲವು ವ್ಯಕ್ತಿಗಳಲ್ಲಿ ನೀನೂ ಒಬ್ಬನಾಗಿದ್ದು, ನಿನ್ನನ್ನು ಸನ್ಮಾನಿಸಲು ಸಂಘ ತೀರ್ಮಾನಿಸಿದೆ .

ನೈರ್ಮಲ್ಯದ ಮತ್ತು ಸ್ವಚ್ಚ ಅಭಿಯಾನದ ಈ  ದಿನಗಳಲ್ಲಿ ನೀನು ಒಂದು ಆದರ್ಶವಾಗಿದ್ದು,   ನಮ್ಮ ಆಹ್ವಾನಕ್ಕೆ ಓ ಗೊಟ್ಟು ಬರಬೇಕೆಂದು ಆಗ್ರಹಿಸುತ್ತೇವೆ. ಕುಟುಂಬ ಸಮೇತ ಬರಬೇಕೆಂದು ನಮ್ಮೆಲ್ಲರ ಕೋರಿಕೆ.

ನನ್ನಿಂದ ಅಥವಾ ನಮ್ಮ ಬಡಾವಣೆಯ ವಾಸಿಗಳಿಂದ ನಿನ್ನ ಮನಸ್ಸಿಗೆ ಬಹಳಷ್ಟು ನೋವಾಗಿರಬಹುದು. ತೊಂದರೆ ಕೊಟ್ಟಿರಬಹುದು. ಅವನ್ನೆಲ್ಲ ಕ್ಷಮಿಸಿ ನಮ್ಮೊಡನೆ ನೀನು ಮತ್ತು ನಿನ್ನ ಕುಟುಂಬ ಒಂದು ದಿನ ಕಳೆಯಬೇಕೆಂದು ಬಿನ್ನಹ.

ಆದರಗಳೊಂದಿಗೆ,

ಆರನೆ ಮನೆ ರಾಯ!
ಸೂರ್ಯ ಬಡಾವಣೆ

ಓದಲು ಲಿಂಕ್: http://kannada.pratilipi.com/anantha-ramesh/priya-duggappanige

 

(ಚಿತ್ರ:ಅಂತರ್ಜಾಲದಿಂದ)

ಎರಡನೆ ಪ್ರೇಮ ಪತ್ರ

ltr wrtng1

ತಾರ ನಲವತ್ತು ವರ್ಷ ದಾಟಿದ ಮಧ್ಯವಯಸ್ಸಿಗೆ ಹತ್ತಿರವಿರುವ ಮದುವೆಯಾಗದ ಹೆಣ್ಣು. ಬೆಂಗಳೂರಿನ ಕಾಲೇಜೊಂದರಲ್ಲಿ  ಲೆಕ್ಚರರ್  ಹುದ್ದೆಯಲ್ಲಿದ್ದರೂ,   ಮದುವೆಯ  ಬಗೆಗೆ  ಸ್ವಲ್ಪವೂ ಆಸ್ಥೆಯಿಲ್ಲ. ಮನೆಯಲ್ಲಿ ತಾಯಿಯೊಬ್ಬಳೆ. ಅವಳಿಗೆ ಒಂದೇ ಚಿಂತೆ, ಮಗಳ ಮದುವೆ.

ತಾರಳದು ಒಂದು ವಿಚಿತ್ರ ಭಾವುಕತನದ ಕತೆ. ಅವಳ ಬಳಿ ಒಂದು ಪ್ರೇಮ ಪತ್ರವಿದೆ. ಕಾಲೇಜಿನ ದಿನಗಳಲ್ಲಿ ಅವಳಿಗೊಂದು ಪ್ರೇಮ ಪತ್ರ ಅವಳದೇ ತರಗತಿಯ ಹುಡುಗ, ನಡುಗುವ ಕೈಗಳಿಂದ, ತಡಬಡಿಸಿ ಕೊಟ್ಟು ಓಡಿ ಹೋಗಿದ್ದ. ಆ ಘಟನೆ ಇಂದಿಗೂ ಹಸಿರು ಅವಳ ಮನಸ್ಸಿನಲ್ಲಿ!

ಕಾಲೇಜು ಮುಗಿದ ನಂತರ ತಾರ ಕುಟುಂಬದ ತಾಪತ್ರಯಗಳಿಂದ ಆ ಊರು ಬಿಡಬೇಕಾಯಿತು.    ಆ ಹುಡುಗ ಮತ್ತು ತಾರ ಒಬ್ಬರಿಗೊಬ್ಬರು ಸಿಕ್ಕದೆ ದೂರವಾದವರು. ಆ ಪ್ರೇಮ ಪತ್ರ ಪ್ರಕರಣ ವಯಸ್ಸಿನ ಹುಮ್ಮಸ್ಸಿನ ಅನೇಕ ಎಳಸು ಪ್ರಕರಣಗಳಂತೆ ಕಾಲದ ದಾರಿಯಲ್ಲಿ ಕಳೆದುಹೋಗಿತ್ತು.

ಆಶ್ಚರ್ಯವೆಂದರೆ ತಾರ ಆ ಪತ್ರವನ್ನು ಹಚ್ಚಿಕೊಂಡುಬಿಟ್ಟಿದ್ದಳು! ಅದನ್ನು ಜತನ ಮಾಡಿ, ಯಾರಿಗೂ ಸಿಕ್ಕದಂತೆ, ಇಟ್ಟುಕೊಂಡಳು. ಬೇಸರವಾದಾಗಲೆಲ್ಲ ಆ ಪತ್ರ ತೆರೆದು ಓದುತ್ತಾಳೆ. ಆ ಹುಡುಗನ ಅಂದಿನ ಎಳಸು ಮನಸ್ಸು ಮತ್ತು ಚಂಗನೆ ಓಡಿದ್ದು ನೆನೆದು ನಗುತ್ತಾಳೆ, ಗೆಲುವಾಗುತ್ತಾಳೆ!

ಆ ಪ್ರೇಮ ಪತ್ರ ಮತ್ತೆ ಈ ದಿನ ಓದತೊಡಗಿದಳು.

” ಓ ತಾರೆ,

ನೀನು  ಕಾಲೇಜಿನ  ಕಾರಿಡಾರಿನಲ್ಲಿ  ಕಣ್ಣ  ರೆಪ್ಪೆಗಳ  ನೆಲಕ್ಕೆ ನೆಟ್ಟು,   ನೋಡಿ ನೋಡಿಲ್ಲದ ಹಾಗೆ ಹೆಜ್ಜೆಗಳನ್ನಿಟ್ಟು ಗಂಭೀರ ಬರುವ ಚಿತ್ರ ನನ್ನ ಎದೆಯೊಳಗೆ ಇದೆ.     ಸ್ವಲ್ಪ ಹುಸಿ ನಗೆ ಮುಖದಲ್ಲಿ ಮಾಸದಂತಿಟ್ಟು , ಬಿಗುಮಾನದ ಪಟ್ಟು ಬಿಡದ ಹುಡುಗಿಯಂತೆ , ಪುಸ್ತಕಗಳ ಎದೆಗವುಚಿ ಬರುವ ಆ ಸಂಭ್ರಮ ನನ್ನ ಭ್ರಮೆಗೆ ತಳ್ಳುತ್ತಿದೆ. ನಿನ್ನ ನೋಡುತ್ತಲೆ ಹತ್ತಿಕೊಳ್ಳುತ್ತೆ ಆಸೆ ನನ್ನೊಳಗೆ. ನೀನು ಬರುವ ಸಮಯ ಕಾದು ಎದುರು ಸಿಕ್ಕುತ್ತೇನೆ. ಎಲ್ಲ ಮರೆತವನಂತೆ, ನನ್ನೊಳಗೆ ನಾನೆ ಕಳೆದುಹೋದಂತೆ, ಆಪಾದ ನಿನ್ನ ನೋಡುತ್ತಲೂ ಇರುತ್ತೇನೆ. ಅದು ಹೇಗೆ ಬಂತೊ ಆ ಧೈರ್ಯ. ನೀನು ಕೂಡ ಒಮ್ಮೆ ನನ್ನ ಥಟ್ಟನೆ ನೋಡಿ ಮುಂದೆ ಹೋಗುತ್ತೀಯ!    ಆಗೆಲ್ಲ  ನನಗೆ  ಅನ್ನಿಸುತ್ತದೆ,    ಮೂಡಿರಬಹುದೆ  ನಾನು  ನಿನ್ನ ಮನದಂಗಳದಲ್ಲಿ? ಇರಬಹುದೆ ನಿನ್ನಲ್ಲಿ ನಾಚಿಕೆಯ ಹದವರಿತ ನಟನೆ? ನೋಡಲೋ ಬೇಡವೋ ಚಂಚಲತೆಯಲ್ಲಿ ನೀನು ಹೆಜ್ಜೆ ಹಾಕುತ್ತಿರಬಹುದೆ?

ಇಬ್ಬಂದಿಯಲ್ಲಿ ಸರಿದು ಆಡುವ ನಯನದೊಡನೆ ಸಾಗುವ ನಿನ್ನ ಲಾಸ್ಯ ನಡಿಗೆ ನನ್ನ ಮನಸ್ಸಿನಲ್ಲಿ ಬೆಚ್ಚನೆಯ ನೆನಪ ಹೊತ್ತಿಸಿ ಉರಿಸುತ್ತಿದೆ. ಯಾವುದೋ ಆಲಸ್ಯಗಳ ನಿನ್ನ ಕಣ್ಣುಗಳು ತೆಳು ಸವರಿದ ಕಣ್ಕಪ್ಪಿನಿಂದಾಗಿ ಹುಸಿ ವರಸೆಯಲ್ಲಿ ಏನೋ ಗುಟ್ಟು ಬಚ್ಚಿಟ್ಟುಕೊಂಡಂತೆ ಭಾಸವಾಗುತ್ತೆ. ಆದರೆ ನೀನು ನಿನ್ನ ಗೆಳತಿಯರಲ್ಲಿ ಪಕ್ಕಾ ತರಲೆ ಅನ್ನುವುದು ಹೇಗೋ ನನ್ನ ಕಿವಿಗೆ ಬಿದ್ದಿದೆ!

ನನ್ನ ಕನಸುಗಳಿಗಿರಲಿಲ್ಲ ಕೊರತೆ. ಸಸಿ ಚಿಗುರಿ, ಮರ ಕೊಬ್ಬಿ ಹೂ ಮಳೆಯಲ್ಲಿ ಸುಗಂಧ ಭಿಮ್ಮನೆ ಮನದೊಳಗೆ ಹಬ್ಬಿ, ಅಡರುವ ಮರಕ್ಕೆ ನೀನು ಬಳ್ಳಿಯಾಗಿ ನನ್ನ ತಬ್ಬಬಹುದೇ? ಆ ಬಯಕೆ ಬಳ್ಳಿ ನೆಲದಿಂದ ಮುಗಿಲಿಗೆ ಚಾಚಬಹುದೆ? ನಿನ್ನ ಹೃದಯದಿಂದ ನನ್ನ ಕಾದ ಹೃದಯಕ್ಕದು ಮುಟ್ಟಬಹುದೇ ಅನ್ನುವ ಅದಮ್ಯ ಆಸೆ!

ನಿನ್ನ ಬಳುಕು ದೇಹ ಬಳ್ಳಿಯಲ್ಲಿ ತಿಳಿ ನೇಸರ ಹೂ ಬಣ್ಣ ಕೆನ್ನೆಗಳಲ್ಲಿ ಮೂಡಿಸಿದರೆ ಝಿಲ್ಲನೆ ಒಸರುತ್ತದೆ ನಾಳೆಯ ಶೂನ್ಯದಲ್ಲಿ ಭವಿಷ್ಯದ ಒರತೆ. ಮೂಡುತ್ತದೆ ಕವಿತೆ. ಮೀಟುತ್ತದೆ ರಾಗ. ಕೇಳುತ್ತದೆ ಯುಗಳ ಗೀತೆ. ಓ ನಲ್ಲೆ, ಹೊಮ್ಮೀತೆ ಮಧುರ ಗಾಯನ ಇಬ್ಬರದೆ? ನಮ್ಮಿಬ್ಬರದೆ!

ಉತ್ತರಕ್ಕೆ ಕಾಯಲೆ?

ಶಶಿ”

ಮತ್ತೆ ತಾರ ಮಂದಸ್ಮಿತೆಯಾದಳು. ಅವಳ ಈ ಗೆಲುವಿಗೆ ಕಾರಣ, ಇಪ್ಪತ್ತು ವರ್ಷಗಳ ನಂತರ ಇದ್ದಕ್ಕಿದ್ದಂತೆ ಸಿಕ್ಕಿದ ಅವಳ ಕ್ಲಾಸ್ಮೇಟ್ ಶಶಿಧರ! ಅವಳಿಗೆ ಪ್ರೇಮ ಪತ್ರ ಬರೆದವನು!

ಎರಡು ವಾರಗಳ ಹಿಂದೆ ಲಾಲ್ಬಾಗಿನಲ್ಲಿ ಅವನು ಅಚಾನಕ ಸಿಕ್ಕಿದ್ದು, ಅವಳೇ ಆ ಜನಜಂಗುಳಿಯಲ್ಲಿ ಅವನ ಗುರುತು ಹಿಡಿದು ಮಾತಾಡಿದ್ದು, ಅವನೋ ಅವಳೊಡನೆ ಈ ಇಪ್ಪತ್ತು ವರ್ಷಗಳಲ್ಲಿ ಇದ್ದ ಶೂನ್ಯ ಮುರಿದು ಭೋರ್ಗರೆದದ್ದು.

ಹಾಗೆ ಮಾತಾಡುವಾಗ ಶಶಿ ಕೇಳಿದ್ದ. “ತಾರ ಅವರೆ, ಇಷ್ಟು ವರ್ಷಗಳಾದರೂ, ನೀವು ನನ್ನ ಮರೆಯದೆ, ಗುರುತು ಹಿಡಿದಿರಲ್ಲ! ನಿಜಕ್ಕೂ ಅದ್ಭುತ!”

ಸರಕ್ಕನೆ ತಾರ ಹೇಳಿಬಿಟ್ಟಳು, “ನನಗೆ ಪ್ರೇಮ ಪತ್ರ ಬರೆದ ಮೊದಲ ಹುಡುಗ ನೀನೆ ಅಲ್ಲವ?” ಹಾಗೆ ಹೇಳಿ ನಾಲಿಗೆ ಕಚ್ಚಿಕೊಂಡಳು ಕೂಡ. ಒಂದೆರಡು ಕ್ಷಣವಷ್ಟೇ, ಇಬ್ಬರೂ ಮನಸ್ಸು ಬಿಚ್ಚಿ ನಗತೊಡಗಿದರು.

ಶಶಿಧರ ಕಾಲೇಜು ಮುಗಿಸಿದ ನಂತರ ಸೇನೆಯನ್ನು ಸೇರಿದ್ದ. ಅಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿ, ಕಾರ್ಗಿಲ್ ಯುದ್ಧದಲ್ಲಿ  ಒಂದು  ಕಾಲು  ಕಳೆದುಕೊಂಡು,     ಈಗ  ಸ್ವಯಂ  ಉದ್ಯೋಗವೊಂದರಲ್ಲಿ ತೊಡಗಿಕೊಂಡಿದ್ದಾನೆ.  ಅವನಿಗೆ ತನ್ನ ದೇಶದ ಸೇವೆ ಮಾಡಿದ ತೃಪ್ತಿ ಇದೆ. ಕಾಲು ಕಳೆದುಕೊಂಡ ದು:ಖ ಎಂದಿಗೂ ಅವನ ಬಾಧಿಸಲೇ ಇಲ್ಲ. ಕೃತಕ ಕಾಲಿನ ನೆರವಿನಿಂದ ಅವನ ಚಲನವಲನ ಸಾಗುತ್ತಿದೆ. ಆದರೆ, ಅವನು ಕೃತಕ ಕಾಲಿನಲ್ಲಿದ್ದಾನೆ ಎಂದು ಯಾರಿಗೂ ತಿಳಿಯದಷ್ಟು ಲವಲವಿಕೆಯವನು.

ಎಲ್ಲ ನೆನಪುಗಳ ಕಡತ ಮುಗಿಸಿದ ಮೇಲೆ ಶಶಿ, ತಾರಳ ಬಗೆಗೆ ಕೇಳಿದ. “ಎಲ್ಲಿ ನಿಮ್ಮವರು, ನಿಮ್ಮ ಮಕ್ಕಳು ಯಾರೂ ಕಾಣಿಸುತ್ತಿಲ್ಲ?” ಎಂದು.

ಅವಳಿಗೆ ತರಲೆ ಮಾಡಬೇಕಿನ್ನಿಸಿತು. ಗಂಭೀರವಾಗಿ ಹೇಳಿಬಿಟ್ಟಳು. “ಮದುವೆಯಾದ ಮರುವರ್ಷವೆ ನನ್ನವರು ಹೋಗಿಬಿಟ್ಟರು!”

ಶಶಿ ಆಘಾತಗೊಂಡ. ನಂತರ ಅವನ ಮಾತು ಪೂರ್ಣ ನಿಂತು ಹೋಯಿತು.

ಇಬ್ಬರೂ ಹೊರಡುವಾಗ ತಮ್ಮ ತಮ್ಮ ಮೊಬೈಲ್ ನಂಬರುಗಳನ್ನು ತೆಗೆದುಕೊಂಡರು. ಮತ್ತೆ ಇಬ್ಬರ ಮನೆಯ ವಿಳಾಸವನ್ನೂ ಮೊಬೈಲಿನಲ್ಲಿ ಬರೆದುಕೊಂಡರು.

ಹೊರಡುವಾಗ, ತಾರ ಕೇಳಿದಳು, “ಶಶಿ, ನೀನೇಕೆ ಹೆಂಡತಿ ಮಕ್ಕಳೊಂದಿಗೆ ಇಲ್ಲಿ ಬಂದಿಲ್ಲ?”

“ನನ್ನ ಹೆಂಡತಿ ತವರಿಗೆ ಹೋಗಿದ್ದಾಳೆ. ನನ್ನ ಮಗಳು ಕೂಡ ಅಮ್ಮನೊಂದಿಗೆ ಹೋಗಿದ್ದಾಳೆ”. ಶಶಿ ಸಲೀಸಾಗಿ ಸುಳ್ಳು ಹೇಳಿದ!

ಮೊಬೈಲ್ ನಂಬರಿದ್ದರೂ, ಈ ಹದಿನೈದು ದಿನಗಳಲ್ಲಿ ಅವರಿಬ್ಬರೂ ಮಾತಾಡಲೇ ಇಲ್ಲ. ತಾರಳಿಗೆ ಹಳೆಯ ಸ್ನೇಹವನ್ನು ಮುಂದುವರೆಸುವ ಆಸೆ. ಆದರೆ ಸ್ನೇಹ ಅರ್ಥ ಮಾಡಿಕೊಳ್ಳದೆ ಎಲ್ಲಿ ಶಶಿಯ ಸಂಸಾರದಲ್ಲಿ ತಾನು ಮುಜುಗರವಾಗಿಬಿಡುತ್ತೇನೊ ಅನ್ನುವ ಭಯದಲ್ಲಿ ಸುಮ್ಮನಾದಳು.

ಈ ದಿನ ತಾರಳ ವಿಳಾಸಕ್ಕೊಂದು ಪತ್ರ ಬಂದಿದೆ. ತೆರೆದು ನೋಡಿದರೆ ಅದು ಶಶಿಯದು! ಅದೇನೋ ಸಂಭ್ರಮದಲ್ಲಿ ತಾರ ಪತ್ರ ಓದತೊಡಗಿದಳು.

“ತಾರೆಗೆ ನಮಸ್ಕಾರ.

ನೀನು  ಆ ದಿನ  ಸಿಕ್ಕಿದ್ದು ಬಹಳ ಖುಷಿ.    ನಮ್ಮ ಗೆಳೆತನವನ್ನು   ಗಟ್ಟಿ ಮಾಡುವ ಆಸೆಯಾಯಿತು. ಧೈರ್ಯವಾಗಿ, ಈ (ಪ್ರೇಮ!) ಪತ್ರ ಬರೆಯುತ್ತಿದ್ದೇನೆ! ನಿನ್ನನ್ನು ಕಳೆದುಕೊಂಡ ಈ ಇಪ್ಪತ್ತು ವರ್ಷಗಳಲ್ಲಿ, ನನ್ನದಿದು ಎರಡನೆ ಪ್ರೇಮ ಪತ್ರ!!

ನಮ್ಮಿಬ್ಬರ ಕಾಲೇಜು ದಿನಗಳು ಕಾಲದೊಂದಿಗೆ ಮರೆಯಾಗಿಹೋಗಿವೆ. ಅಂದೆಂದೊ ಮರೆಯಾದವಳು ಮೊನ್ನೆ ಲಾಲ್ಬಾಗಿನ ಫಲಪುಷ್ಪ ಪ್ರದರ್ಶನದಲ್ಲಿ ಅಚಾನಕ ಸಿಕ್ಕಿಬಿಟ್ಟೆ!    ನಾನು  ನಿನ್ನ  ಗುರುತು ಹಿಡಿಯುವುದರೊಳಗೆ ನಿನ್ನ ಮಾಧುರ್ಯದ ಕಂಠ ನನ್ನ ಹೆಸರು ಉಲಿದುಬಿಟ್ಟಿತ್ತು. ನಾನು ತಿರುಗಿ ನೋಡಿದಾಗ ನೀನು ಶುಭ್ರ ನಗುವಿನಿಂದ ನನ್ನ ನೋಡುತ್ತಿದ್ದೆ. ಥಟ್ಟನೆ ಹೇಳಿದೆ, “ನಾನು ಕಣೊ, ನಿನ್ನ ಕ್ಲಾಸ್ಮೇಟ್ ತರಲೆ ತಾರಾ!”

ಅಂದು ಸಿಕ್ಕ ನಂತರದಲ್ಲೆ ಒಂದೊಂದಾಗಿ ಎಲ್ಲ ನೆನಪಾಗತೊಡಗಿವೆ.

ಕಾಲೇಜಿನ ದಿನಗಳಲ್ಲಿ ನಿನಗಾಗಿ ಕನಸು ಕಂಡಿದ್ದೆ.   ಆ ಕನಸಿನಿಂದಾಗಿಯೆ  ನಿನಗೊಂದು ಪ್ರೇಮ ಪತ್ರ ಬರೆದು ಕ್ಲಾಸಿನಲ್ಲಿ ಯಾರಿಗೂ ತಿಳಿಯದಂತೆ ನಿನ್ನ ಕೈಗೆ ಕೊಟ್ಟು ಓಡಿಹೋಗಿದ್ದೆ! ಮರುದಿನದಿಂದ ನೀನು ಮತ್ತಷ್ಟು ಗಂಭೀರಳಾಗಿಬಿಟ್ಟೆ. ನಿನ್ನ ಉತ್ತರಕ್ಕಾಗಿ ಕಾದೆ. ಆದರೆ ಉತ್ತರವಿಲ್ಲ. ಭಾಗ್ಯವೆಂದರೆ ಒಂದೆರಡು ಬಾರಿಯಾದರೂ ನನ್ನ ನೀನು ನೋಡಿತ್ತಿದ್ದೆ. ಆ ಪುಳಕ ಇಂದಿಗೂ ನನ್ನ ಆವರಿಸಿದೆ. ಹೆಚ್ಚು ಮುಂದುವರೆಯಲು ನನ್ನ ಹೇಡಿತನ ಕಾರಣ ಅನ್ನುವುದು ನಿನಗೆ ವಿವರಿಸಬೇಕಿಲ್ಲ!

ಅದೇನಾಯಿತೋ, ಕಾಲೇಜು ಮುಗಿದ ನಂತರ, ನೀನು ಬೇರೊಂದು ಊರಿಗೆ ಹೊರಟು ಹೋಗಿದ್ದೆ. ನಾನು ಸೇನೆ ಸೇರಿ ಕರ್ತವ್ಯದಲ್ಲಿ ಮುಳುಗಿಹೋದೆ.    ಯುದ್ಧಗಳಲ್ಲಿ ಭಾಗಿಯಾದೆ.    ಒಂದು ಕಾಲನ್ನೂ ಕಳೆದುಕೊಂಡೆ.   ಕ್ಷಮಿಸು, ಆ ದಿನ ಅದನ್ನು ನಿನಗೆ ಹೇಳಲಾಗಲಿಲ್ಲ.

ಹಾಗೆಯೆ ಮತ್ತೊಂದು ಸುಳ್ಳು ಹೇಳಿದೆ. ನನ್ನ ಹೆಂಡತಿ, ಮಗಳ ಬಗೆಗೆ. ತಾರ, ಕ್ಷಮಿಸು. ನಾನು ಕಾಲು ಕಳೆದುಕೊಂಡ ಕಾರಣ, ಮದುವೆಯ ಮನಸ್ಸು ಮಾಡಲೆ ಇಲ್ಲ.

ನಿನ್ನ ವಿಷಯ ನಿನ್ನ ಬಾಯಿಂದಲೇ ಕೇಳಿ ನನಗೆ ಆಘಾತವಾಯಿತು. ಹಾಗೆಯೆ ಯೋಚಿಸಿದೆ. ನೀನು ನನ್ನ ಬಾಳಿನಲ್ಲಿ ಒಬ್ಬ ಗೆಳತಿಯಂತೆ  ಮತ್ತೆ  ಸಿಕ್ಕಿದ್ದು ಹೇಳಲಾಗದ ಮಧುರ ಯೋಚನೆಗಳನ್ನು ಹುಟ್ಟು ಹಾಕಿತು. ಹಾಗಾಗಿ, ಬಹಳ ಧೈರ್ಯಮಾಡಿ, ಈ ಎರಡನೇ ಪ್ರೇಮ ಪತ್ರ ಬರೆಯುತ್ತಿದ್ದೇನೆ.    ಆದರೆ, ಕಾಲೇಜಿನಲ್ಲಿ ಓಡಿಹೋದಂತೆ ಓಡುವುದಿಲ್ಲ. ಏಕೆಂದರೆ, ಒಂದು ಕಾಲಿಲ್ಲದವನು ನಾನು!

ಆಗಾಗ ಸಿಕ್ಕೋಣ. ನಮ್ಮ ಶೂನ್ಯ ಬದುಕನ್ನು ಮಾತುಗಳಿಂದ ತುಂಬಿಸಿಕೊಳ್ಳೋಣ. ನನಗೆ ಅಂದಿನ ತರಲೆ ತಾರ ಬೇಕಿದೆ. ನೀನು ಒಂಟಿಯಾಗಿ ಬದುಕು ಸಾಗಿಸುತ್ತಿದ್ದೀನಿ ಅಂದಮೇಲೆ ಇಷ್ಟು ಬರೆಯುವ ಸಾಹಸ ಮಾಡಿದ್ದೇನೆ.

ಬೇಸರವಾದರೆ, ಮುಜುಗರವೆನ್ನಿಸಿದರೆ, ಕೋಪ ಬಂದರೆ ಅಥವಾ ಅಸಹ್ಯವೆನ್ನಿಸಿದರೆ ದಯವಿಟ್ಟು ಕ್ಷಮಿಸು.

ಓಡಲಾಗದ ನಿನ್ನ ಗೆಳೆಯ,

ಶಶಿಧರ”

ತಿಳಿ ನೇಸರ ಬಣ್ಣ ತಾರಳ ಕೆನ್ನೆಗಳಲ್ಲಿ ಮೂಡಿತು. ಝಿಲ್ಲನೆ ಒಸರುವ ಆರ್ದ್ರ ಭಾವಗಳು ಸಣ್ಣ ರಾಗದ ಗುನುಗಾಯಿತು. ಅವನೊಂದಿಗೆ ಯುಗಳ ಗಾಯನಕ್ಕೆ ಅವಳು ಸಿದ್ದಳಾಗತೊಡಗಿದಳು. ಅವನು ಓಡಲಾಗದವನು ಅನ್ನುವುದು ಅವಳ ಮನಸ್ಸಿನಲ್ಲಿ ಸ್ವಲ್ಪವೂ ಸುಳಿಯದಿದ್ದದ್ದು ಒಂದು ಆಶ್ಚರ್ಯವಾಗಿ ಉಳಿಯಿತು! ತಾನು ವಿಧವೆ ಅನ್ನುವ ತರಲೆ ಮಾತು ಅವನ ಈ ಧೈರ್ಯಕ್ಕೆ ಪ್ರೇರೇಪಿಸಿದ್ದು ಒಂದು ರೀತಿಯಲ್ಲಿ ಖುಷಿಕೊಟ್ಟಿತು .

ಅಮ್ಮನ ಬಳಿ ತಾರಳಿಗೆ ಕೇಳಬೇಕೆನ್ನಿಸಿತು, ’ದೇಶಕ್ಕಾಗಿ ಯುದ್ಧಗಳಲ್ಲಿ ಹೋರಾಡಿದ ವ್ಯಕ್ತಿಯೊಬ್ಬನನ್ನು ಮೆಚ್ಚಿ ಮದುವೆಯಾಗುವ ಮನಸ್ಸು ತಾನು ಈ ವಯಸ್ಸಿನಲ್ಲಿ ಮಾಡಬಹುದೆ’ ಎಂದು!

******

(ಕನ್ನಡ ಪ್ರತಿಲಿಪಿಯಲ್ಲಿ ಪ್ರಕಟ: http://kannada.pratilipi.com/anantha-ramesh/eradane-prema-patra)

ಸುದಾಮನ ಗೆಳೆಯ

krsn n sdam

ವಿಚಲಿತ ಕುಚೇಲನ
ಕುತೂಹಲಿ ಕೃಷ್ಣ ಕೇಳುತ್ತಿದ್ದಾನೆ
“ಏನ ತಂದೆಯೊ ಗೆಳೆಯ
ನನಗಾಗಿ ನಿನ್ನ ಉತ್ತರೀಯದ
ತುದಿಯ ಈ ಪುಟ್ಟ ಗಂಟಿನಲ್ಲಿ?”

ನಾಲ್ಕು ಹಿಡಿ ಅವಲಕ್ಕಿ ತಂದ
ಹಿಂಡಿದ ಹೃದಯದ
ಸುದಾಮ ಹಿಡಿಕಾಯ
ಕೃಷ್ಣನೋ ಹಿಗ್ಗಿ ಎಳೆವ ಸದಯ!

ಧ್ವನಿ ಉಡುಗಿದ ಸುದಾಮ ಸ್ವಗತ,
’ಈ ಮುಷ್ಟಿಯಲ್ಲಿ ನನ್ನೆಲ್ಲ
ದಾರಿದ್ರ್ಯ, ದಾಸ್ಯ, ದುಮ್ಮಾನ
ಅಸಹಾಯಕತೆ, ಅಪಮಾನ,
ಭರ್ತ್ಸನೆ, ಭಯ
ಅವನತಿಯತ್ತಲ ಭ್ರಾಂತಿಯ ಚಿತ್ತ…..’

ಕಣ್ಣಂಚಲಿ ತುಳುಕಿತೇ ಹನಿ?
“……………………………..
………………………………”
ಹತ ಭಾಗ್ಯ ಸುದಾಮ, ಮೌನಿ

ಗಂಟು ಕಳಚಿ ಕೃಷ್ಣ
ಕಂಡು ಅವಲಕ್ಕಿ
ಆಸೆಯಲ್ಲಿ ಹಿಡಿತುಂಬಿ
ಬಾಯಿಗಿಟ್ಟು ಮೆಲ್ಲುತ್ತ
ಮೌನ ಮುರಿಯುತ್ತಾ ನಗುತ್ತಾ,
“ಸಾಕು.. ಸಾಕು ಗೆಳೆಯಾ… ಸಾಕಿಷ್ಟು
ಅಬ್ಬಾ.. ಅದ್ಭುತ ರುಚಿಯೆಷ್ಟು!
ಇದೊ ಮುಷ್ಟಿಯಷ್ಟೂ ರುಚಿಯ ತಿಂದೆ
ನನ್ನಪಾರ ಹಸಿವ ನೀನಿಂಗಿಸಿ ತೇಗಿಸಿಬಿಟ್ಟೆ !
ಈ ಗೊಲ್ಲನಲ್ಲಿ ಇಷ್ಟು ಪ್ರೀತಿ ಏತಕಿಟ್ಟೆ!”

ಕೃಷ್ಣನ ಬೆರಳುಗಳಲ್ಲಿ
ಹಗುರಾದವು ಸುದಾಮನ ಹಸ್ತಗಳು
ವಿಶ್ವಾಸದ ಹೆಮ್ಮರದಲ್ಲಿ
ಹರಡಿತು ಗೆಳೆತನದ ತಂಪು ನೆರಳು
ಅರಮನೆಯ ಅಂಗಳದಲ್ಲೀಗ
ಪಟಪಟಿಸಲಿವೆ ಹಾರುವ ನೆನಪ ಹಕ್ಕಿಗಳು

(ಚಿತ್ರ ಕೃಪೆ: ಅಂತರ್ಜಾಲ)