ತಿಳಿ

bird

ಓದು
ಬಿಡದೆ ಓದು
ಅರಿ
ಬೆರೆತು ಅರಿ
ತಿಳಿ
ಹೆಚ್ಚು ತಿಳಿ
ತಿಳಿಯುತ್ತಾ
ಒಳ ಕೊಳೆ ಕೊಚ್ಚೆ ಕೆಸರು
ದು:ಖ ದುಮ್ಮಾನ ವ್ಯಸನ


ಮುಟ್ಟಿ ಉಳಿವ ತಿಳಿ
ಸ್ವಚ್ಛ
ಜಲದಂತೆ
ಜ್ಞಾನ
ತಿಳಿ

(ಚಿತ್ರ:ಅಂತರ್ಜಾಲ ಕೃಪೆ)

Advertisements

ರಾಜ”ಕೀ”ಯದುಪದ್ವ್ಯಾಪ

politicians

ಎಚ್ಚರ

“ಪ್ರಜೆಗಳು ಸದಾ ಎಚ್ಚರವಿರಬೇಕು”
ಮುಖ್ಯಮಂತ್ರಿಗಳು ಕರೆಕೊಟ್ಟರು

 

ದಕ್ಷತೆ

ಸಂಪುಟದ ಎಲ್ಲ ಮಂತ್ರಿಗಳು
ದಕ್ಷರು ಎಂದು ಪಕ್ಷಾಧ್ಯಕ್ಷರು
ಹೇಳಿಕೆ ಬಿಡುಗಡೆ ಮಾಡಿದರು

 

ಗುರಿ

“ಜಾತಿ ನಿರ್ಮೂಲನೆ ನಮ್ಮ ಗುರಿ”
ಮಂತ್ರಿಗಳು ತಮ್ಮ ಜನಾಂಗದ
ಸಭೆಯಲ್ಲಿ ಒರಲಿದರು

 

ಯೋಗ ಅನಾರೋಗ್ಯ

ಯೋಗ ಮತ್ತು ಸೋಮಾರಿತನಗಳ
ನಿಕಟ ಸಂಬಂಧವನ್ನು ಆರೋಗ್ಯ
ಮಂತ್ರಿಗಳು ಹೊರಗೆಡವಿದರು

 

ಮತ್ತಧಿಕಾರ

ಆಗ
ಅಧಿಕಾರವಿದ್ದೂ ತಾವು ಮಾಡಲಾಗದ್ದು
ಆಡಳಿತ ಪಕ್ಷ ಮಾಡಿರುವ ಬಗೆಗೆ
ಈಗ
ವಿರೋಧ ಪಕ್ಷದವರು
ಕಲೆಹಾಕುತ್ತಿದ್ದಾರೆ…
ಏನೆಲ್ಲ ಹಗರಣ
ಮತ್ತು ಮಾಡಿ ತಪ್ಪಿಸಿಕೊಳ್ಳು
ಜಾಣತನ!

(Pic courtesy: Internet)

ಕಣ್ತೆರೆ

radhe

ಅವಳ ಕೈ ಹಿಡಿದು

ಕೃಷ್ಣ ಕೇಳುತ್ತಿದ್ದಾನೆ

’ನಿನ್ನ ಕನಸು ನನಗೇಕೆ ಬೀಳದು ಚೆನ್ನೆ?’

ಗಾಳಿ ತೀಡಿ ನಿದ್ರೆ ಹರಿದು

ಕೃಷ್ಣ ತೆರೆದ ಕಣ್ಣು

ರಾಧೆ ನೇವರಿಸುತ್ತಿದ್ದಾಳೆ ಅವನವೇ ಕೆನ್ನೆ !

(ಚಿತ್ರ ಕೃಪೆ: ಅಂತರ್ಜಾಲ)

 

ನರಕ ಮತ್ತು ಕರ್ನಾಟಕ ಸ್ಪರ್ಧೆ

narak

 

 

 

 

 

 

ಚಿತ್ರಗುಪ್ತ:
“ಯಮಧರ್ಮ,
ಈ ವರ್ಷದ ಸ್ಪರ್ಧೆಯಲ್ಲಿ
ನರಕ ನಿಲ್ಲಲಿದೆ ಮೊದಲ ಸ್ಥಾನದಲ್ಲಿ
ಕಠಿಣ ಶಿಕ್ಷೆ ಕೊಡುವ ನಿನ್ನ ಕಿಂಕರರನ್ನು
ಯಾತನೆ ಪಡುತ್ತಿರುವ ಈ ಮಾನವರನ್ನು
ಭೂಮಿಯಲ್ಲಿ ಯಾರೂ ಸರಿಗಟ್ಟರಿನ್ನು!”

ಯಮ:
“ಸಾವಧಾನ ಚಿತ್ರಗುಪ್ತ ಸಾವಧಾನ,
ಈ ವರ್ಷ ಮಳೆಯಿಲ್ಲ
ಅಣೆಕಟ್ಟೆಗಳಲ್ಲಿ ನೀರಿಲ್ಲ
ನ್ಯಾಯಾಲಯದ ಅಪ್ಪಣೆ
ಉಳಿಕೆ ನೀರು ಸರ್ವಾರ್ಪಣೆ
ಜೊತೆಗೆ ಮಹದಾಯಿ ಘರ್ಷಣೆ
ಹೆಚ್ಚುವರಿ ಪೊಲೀಸರು
ಜನರಿಗೆ ದಕ್ಕಿದೆ ಕ್ರೂರ ಯಾತನೆ
ನೇಣು ತಡೆಯುವ ನಿಟ್ಟಿನಲ್ಲಿ
ಮರಗಳೆಲ್ಲ ಆಪೋಶನೆ…..”

ಚಿತ್ರಗುಪ್ತ:
“ತಿಳಿಯಿತು ಯಮಧರ್ಮ ತಿಳಿಯಿತು
ನನ್ನ ಲೆಕ್ಕ ತಪ್ಪಿತು
ಕರ್ನಾಟಕ ಪ್ರಥಮಸ್ಥಾನಕ್ಕೇರಿತು
ನರಕ ಮೂಲೆಗುಂಪಾಯಿತು!”

 

ಹನಿಗಳಲ್ಲಿ ಗಾಂಧಿ – 2

mkg

1

ಉದ್ದ ಕೈಗಳಿಂದ
ಅಹಿಂಸೆಯನ್ನು
ಚೆನ್ನಾಗಿ ನಾದಿ
ರುಚಿಗೊದಗಿಸಿದ …
……………………….
ಚಪ್ಪರಿಸಿದ ಮಂದಿ
ಘರ್ಜಿಸಿದರು ಕೊಬ್ಬಿ!

fast

2

ರಾಮರಹೀಮರ ಭಜಿಸಿ
ದೇಶ ಕಟ್ಟುವಾಗ
ಹಿಂಸೆಯ ಗೋಡೆ
ಉಚಾಯಿಸಿತ್ತು….
ನೊಂದ ಗಾಂಧಿ
ಉಪವಾಸ ಕೂತರೂ
ಸೇವಿಸಿದರು….
ಅಖಂಡ ನೋವು
3

’ರಾಮ’ ನಾಮಧೇಯ
ಬಂಡೆದ್ದು ಗುಂಡಿಟ್ಟ
ಕೊನೆಯುಸಿರಲ್ಲು
’ರಾಮ’ ಮಂತ್ರವೆ
ಅವನ ಬಾಯಲ್ಲಿ ದಟ್ಟ

 4

ಅಹಿಂಸೆಯ ಪ್ರತಿಪಾದಕನ
ಹತ್ಯೆ ಮಾಡಿದವನ ಕೊನೆ
ನೇಣು ಬಿಗಿಸಿದ ಮೋಹನ
ದಾಸನ ’ಶಿಷ್ಯಗಣ’ ಸಾಧನೆ!

mk5

5

ಕಟು ’ಸತ್ಯ’ಗಳನ್ನು
ಅವನು ಹುಟ್ಟಿದ ದಿನ
ಮುಚ್ಚಿಡಬೇಕು
…………………
ಮಾಂಸ ಮದಿರೆ ಒಂದಕ್ಕೆರಡು
ಮುನ್ನಾ ದಿನವೆ ಖರ್ಚಾಗಿವೆ
ಚಪ್ಪರಿಸಿದ ನಾಲಿಗೆಗಳು
ಭಾಷಣಗಳಿಗೆ ಸಜ್ಜಾಗಿವೆ!

(ಚಿತ್ರ ಕೃಪೆ: ಅಂತರ್ಜಾಲ)

ಹನಿಗಳಲ್ಲಿ ಗಾಂಧಿ -1

mk2

1

ಮುತ್ಸದ್ದಿ ಗಾಂಧಿಗೆ
ಅವನ ಕನ್ನಡಕವೆ
ದುರ್ಬೀನಾಗಿತ್ತು
ಅದು ದೇಶದ ಭವಿಷ್ಯ ಕಾಣುವ
ಸಾಧನವೂ ಆಗಿತ್ತು

 2

ತನ್ನ ಊರುಗೋಲನ್ನು
ಕೊಳಲ ಧ್ವನಿಯಾಗಿಸಿ
ಮೋಹನನಾಗಿದ್ದ
ಆಸೆಗೊಂಚಲ ಜನರು
ಸುತ್ತಲೂ ನೆರೆದರು

ಕೊಳಲ ಧ್ವನಿಯಲ್ಲು
ಕಹಳೆ ಮೊಳಗು
ಕೇಳಿಸಿಕೊಂಡರು
ಮೇಧಾವಿ ಮ್ಲೇಚ್ಛರು !

mk6

3

ಉದ್ಧ ಮೂಗು
ಅಗಲ ಕಿವಿಗಳು
ಗ್ರಹಿಕೆಯಲ್ಲಿ ಸ್ಪರ್ಧಿಗಳು
ಆದರೂ ತಮ್ಮ ಗುಟ್ಟು
ಬಿಟ್ಟುಕೊಡದವರು
ಅವನದೇ ನಿಕಟವರ್ತಿಗಳು !

 4

ದೊಡ್ಡ ಗಡಿಯಾರ
ಕಟ್ಟಿಕೊಂಡು
ದೇಶದ ಸಮಯಕ್ಕೊದಗಿದನಲ್ಲ?
ಸರಿ ಸಮಯಕ್ಕೆ ಕಾದ
’ಸಾಧಕ ’ರೂ ಇದ್ದರಲ್ಲ!?

(ಚಿತ್ರ ಕೃಪೆ: ಅಂತರ್ಜಾಲ)

ಗಂಟಲೊಣಗಿಸಿ

protestors-in-mandya

ಒಂದು ಕಡೆ:
ಒಳ ಹರಿವು
ಹೊರ ಹರಿವು
ಅರಿವಿರದ
‘ಅರಿ’ ತಂಡ

ಇನ್ನೊಂದು ಕಡೆ:
ಉಳಕೊಂಡ
ಬೊಗಸೆ ನೀರ
ಕಬಳಿಸುವ ವಾದ
ವಿತ್ತಂಡ

ನೀರಡಿಕೆಗಿಷ್ಟು
ಉಳಿಸಿರೆಂದು
ಹಕ್ಕೊತ್ತಾಯಿಸುವ
ಸುತ್ತಮುತ್ತಲ
ಕೂಗು ಕಂಠ

ಆಳುವವರದು ಜನರ
ಮೌನಗೊಳಿಸುವ ಮಂತ್ರ
ಪಕ್ಷಗಳು ಅರಸುತ್ತಿವೆ
ಮೇಕೆಬಾಯಿ ಒರೆಸುವ ತಂತ್ರ

ಅವೆಲ್ಲ ಬಿಡಿ
ಇದಕ್ಕೊಂದೆ ಪರಿಹಾರ:
ಎಲ್ಲರೂ ಸೇರಿ
ಹೊರ ಹರಿಸಿಬಿಡಿ
ಉಳಿದಿಷ್ಟು ಹನಿ ನೀರ
ಗಂಟಲೊಣಗಲಿ
ಉಸಿರುಗಟ್ಟಲಿ
ಧ್ವನಿ ಉಡುಗಲಿ
ಕನ್ನಡಿಗ ಮುಂದೆಂದೂ
ಕೂಗುವ ಕರ್ಮ ಮಾಡಲಾರ!