ಗೋವು

(ಹೈಕು)


ಅವಿನಾಭಾವ
ಗೋವುಗಳ ಸಂಬಂಧ
ಭಾರತ ಕಥೆ


ರಸ್ತೆ ನಡುವೆ
ಅಳವಡಿಸಿದ್ದೇನು?
ಸ್ಪೀಡ್ಬ್ರೇಕು ‘ಧೇನು!’


ಗೋವಿನ ಬಳಿ
ಮನೋದ್ವೇಗ ಶಮನ
ಸ್ಪರ್ಷ ಮಾತ್ರೇಣ


ಗೋವುಗಳಲ್ಲಿ
ನಲಿದು ಹೊಮ್ಮಿಸಿದ
ಗೋವಿಂದ ನಾದ


ಮಾತೆ ಅವಳು
ಕ್ಷೀರ ಧಾರೆಯಾದಳು
ಬೆಳೆದ ನಾವು


ಕುಹಕ ಬಿಡಿ
ಗೋವಿನ ಕಳಕಳಿ
ನಮ್ಮ ಸಂಸ್ಕೃತಿ


ಆಕಳ ಹಾಲು
ಸೇವಿಸದೆ ಹಸುಳೆ
ಬೆಳೆದೀತೇನು?


ತಟ್ಟಿ ಬೆರಣಿ
ಒಲೆ ಉರಿಸಿದೆವು
ಸಿರಿ ಮರೆವು


ಎಡ-ತಾಕಿಯೂ
ಬಲ-ವಾದ ಮಾಡುವೆ
ನಮಗೆ ಗೋವೇ!

೧೦
ತಪ್ಪು ಸಹಜ
ಕ್ಷಮಿಸು ಪುಣ್ಯಕೋಟಿ
ವ್ಯಾಘ್ರ ತಳಿಯ

(Pic courtesy:Google)

ಈ ನೆಲದ ಹಸಿರು

ಬುದ್ಧಿ ಜೀವಿಗಳು
ಬೊಬ್ಬೆ ಹೊಡೆದರೂ
ಹಬ್ಬಗಳಾಚರಣೆ ನಿಲ್ಲದು
“ಮರಳುಗಾಡಲ್ಲಿ ಹುಟ್ಟಿದ
ಒಣಹುಲ್ಲ ಬೋಧ (!?)”
ಸಮೃದ್ಧ ಹಸಿರಿಗೆ ಪಾಠ
ಹೇಳುವ ಪರಿಪಾಠ
ನಡೆದೇ ಇದೆ ತ್ರಿಶಂಕುಗಳದು!!

(Pic:Google)

ನಗುವರಳಲಿ

ಆತ್ಮವಿಶ್ವಾಸದ ಯೋಧನಲ್ಲಿ
ಉಳುಮೆ ನಿಷ್ಠೆಯ ರೈತನಲ್ಲಿ
ಬೆವರ ದುಡಿತದ ಕಾರ್ಮಿಕನಲ್ಲಿ
ಮುಕ್ತ ನಗುವರಳಿತೆ?
ಅದೋ ಹಾರಿತು ಬಾವುಟ
ರಿಂಗಣಿಸಿತು ಜನಗಣ ಗೀತ
ವಿಶಾಲ ಸ್ವಾತಂತ್ರ್ಯದ ಪಥ 

ವಿರಾಜಮಾನ ನೀರಜ

ಎಂಭತ್ತೇಳು ಬಿಂದು ಐವತ್ತೆಂಟು
ಮೀಟರು ದೂರಕ್ಕೂ ಹಾರಿತು
ಚಿನ್ನಕ್ಕೇ ಮುತ್ತಿಟ್ಟಿತು
ನೀರಜನ ಜಾವೆಲಿನ್ನು!
ವಿರಾಜಿಸಿತು ಭಾರತ
ಹಾರಿಸಿತು ತ್ರಿವರ್ಣ ಧ್ವಜವನ್ನು!!

ಮಳೆ ಹಾಯ್ಕು

ಮಳೆ

ಆರಂಬ ವೇಳೆ

ಏಕಿಂಥ ರಂಪ ಮಳೆ!

ಕನಸೇ ಬೆಳೆ?

ರಟ್ಟೆಗೆ ಬಲ

ಕೂಡೆ ಉಳುವೆ ನೆಲ

ಮಳೆ ದೈವೇಚ್ಛೆ

ರಾಗಿ ಬೆಳೆಗೆ

ಹದ ಮಳೆಯ ಆಸೆ

ಭವಿಷ್ಯ ಬೇರೆ

ಬೀಜ ಬಿತ್ತಾಯ್ತು

ಪ್ರವಾಹಮುಖೀ ಮಳೆ

ಆಸೆ ಬತ್ತಾಯ್ತು

ಇತ್ತ ರಾಗಿಗೂ

ಅತ್ತ ಭತ್ತಕೂ ಇಲ್ಲ

ಚಾಲಾಕಿ ಮಳೆ!

ಆದ ವಿರಾಗಿ

ನಮ್ಮ ನೇಗಿಲ ಯೋಗಿ

ನಿಂತೀತೆ ಧಾರೆ?

{Pic:Google}

ಪಾರಿಜಾತ

ಪಾರಿಜಾತ

ಶಿಲೆ ದೇವರ
ತಲೆಯ ಮೇಲೆ
ಪುಟ್ಟ ಪಾರಿಜಾತ
ಮಾಡುತ್ತಿದೆ ತಪ!

ಅಭಿಷೇಕಗೊಂಡ
ವಿಗ್ರಹ ತಂಪಾಗಿದೆ
ಶಿರವೇರಿದ ಪಾರಿಜಾತ
ಬಾಡದು ಬೇಗದೆ

ವಿಗ್ರಹ ಕಲ್ಲಿನದು
ಎಂದು ಹೇಳುವಾಗ ಅರ್ಚಕ,
ತನ್ನ ಎಸಳ ಮೃದುವಿಗೆ
ಬೇಸರಿಸಿತಾ ಪಾರಿಜಾತ!

ಭಕ್ತನುಡಿದ
“ಸಾವಿರ ವರ್ಷದ ವಿಗ್ರಹ
ಇಂದಿಗೂ ಹೊಳೆಯುತ್ತಿದೆ, ಆಹಾ!”
ಪಾರಿಜಾತ ನಿರ್ಮಾಲ್ಯವಾಗುವ
ಸಮಯವಾಗಿತ್ತು ಆಗ

ಭಕ್ತನ ಕೈಗೆ
ಜಾರುವಾಗ ಪಾರಿಜಾತ
ನೆಲದ ಮೇಲೆ
ಒಣಗುವ ಸುಖಕ್ಕೇ ಆಸೆಪಟ್ಟಿತ!?

ಹಕ್ಕಿ ಕೊರಳು
ಪಾರಿಜಾತದ ಅರಳು
ಸುಸ್ವರಕ್ಕೆ ಪರಿಮಳ
ದ ಮೆರುಗು
ಶುಭ್ರ ಬೆಳಗು

ಮುಂಜಾನೆ ಫಳಫಳಿಸಿದ
ಮಂಜು ಹನಿಗೆ ಅವಸರ,
ಪಾರಿಜಾತಕ್ಕೆ
ನಶ್ವರದ ಪಾಠ
ಹೇಳುವ ತವಕ

ತೂಗು ಮನೆ

ಶಾಲೆ ಮೆಟ್ಟಿಲು ಹತ್ತದೆ
ಟೀಚರ್‌ ಪಾಠ ಕೇಳದೆ
ಇಂಜಿನೀರಿಂಗ್ ಕಲಿಯದೆ
ಪುಟ್ಟ ಹಕ್ಕಿ ಕಟ್ಟಿತಲ್ಲ
ಅಡಿಪಾಯದ ಗೊಡವೆ ತೊರೆದು
ಮರಗಳ ಕೊಂಬೆಯ ಹಿಡಿದು
ಅಪೂರ್ವ ವಿನ್ಯಾಸ ಹೆಣೆದು
ಬೆಚ್ಚನೆ ಬೆರಗಿನ ಮನೆ!
ಖರ್ಚೇ ಇಲ್ಲದ ನೆಲೆ
ಮರಿಗಳು ನಿದ್ರಿಸಿ ಹಾಯೆನೆ
ತೂಗಿತು ತೊಟ್ಟಿಲ ಬಾನಲೆ!

(Pic courtesy:Google)